ಧಾರಾವಾಹಿ, ಚಲಚಿತ್ರಗಳ ನಟಿಯಾದ್ರೂ ಯಕ್ಷಗಾನದಲ್ಲಿ ಎತ್ತಿದ ಕೈ..!

ವಿಶ್ವಾಸ್​​ ಭಾರಾಧ್ವಜ್​​​

ಧಾರಾವಾಹಿ, ಚಲಚಿತ್ರಗಳ ನಟಿಯಾದ್ರೂ ಯಕ್ಷಗಾನದಲ್ಲಿ ಎತ್ತಿದ ಕೈ..!

Tuesday October 27, 2015,

3 min Read

ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಅನ್ನುವ ಪ್ರಸಿದ್ಧ ಗಾದೇ ಮಾತಿನಂತೆ ಹುಟ್ಟಿನಿಂದಲೇ ಅದ್ವಿತೀಯ ಕಲೆಯನ್ನು ಅರಗಿಸಿಕೊಂಡು ಬೆಳೆದ ಅಪ್ಪಟ ಮಲೆನಾಡಿನ ಕುವರಿ ನಾಗಶ್ರೀ ಗೀಜಗಾರು. ಯಕ್ಷಗಾನ, ನೃತ್ಯ, ಸಂಗೀತ, ಹರಿಕಥೆ, ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅಭಿನಯ, ನಿರೂಪಣೆ ಹೀಗೆ ಕಲೆಯ ವಿಶ್ವದಲ್ಲಿ ನಾಗಶ್ರೀ ಅಡಿಯಿಡದ ಕ್ಷೇತ್ರವೇ ವಿರಳ. ಶಿವಮೊಗ್ಗ ಜಿಲ್ಲೆಯ ಸಾಂಸ್ಕ್ರತಿಕ ನಗರ ಸಾಗರದ ಗೀಜಗಾರು ಮೂಲದ ಶ್ರೀ ಶಿವಾನಂದ- ಶ್ರೀಮತಿ ನಳಿನಿ ನಾವಡ ದಂಪತಿಗಳ ಪುತ್ರಿಯಾಗಿ ಜನಿಸಿದವರು ನಾಗಶ್ರೀ. ನಾಗಶ್ರೀಯವರ ತಾಯಿ ಯಕ್ಷಗಾನ ಭಾಗವತಿಕೆ ಕ್ಷೇತ್ರದ ಮರೆಯಲಾಗದ ಹೆಸರು ಕಾಳಿಂಗ ನಾವುಡರ ಹತ್ತಿರದ ಸಂಬಂಧಿ. ಯಕ್ಷಗಾನದ ಮೇರುತಾರೆ ದಿವಂಗತ ಕಾಳಿಂಗ ನಾವುಡರ ರಕ್ತ ಸಂಬಂಧ ಹಾಗೂ ತಂದೆ ಶಿವಾನಂದ ಹಲವು ಯಕ್ಷಗಾನಗಳಲ್ಲಿ ಖ್ಯಾತ ಸ್ತ್ರೀ ವೇಷಧಾರಿಯಾದ್ದರಿಂದ ನಾಗಶ್ರೀಯವರಿಗೆ ಜನ್ಮಜಾತವಾಗಿ ಕಲಾ ಪರಿಸರ ಹುಟ್ಟಿದಾಗಿನಿಂದಲೇ ಒದಗಿ ಬಂದಿತ್ತು.

image


ಕಲಾದೇವಿಯ ವರ ಸಿದ್ಧಿಸಿಕೊಂಡ ಹೆಣ್ಣುಮಗಳು:

ಕಲೆಯ ಅಂಶ ರಕ್ತಗತವಾಗಿ ಪಡೆದುಕೊಂಡ ನಾಗಶ್ರೀ, ತನ್ನ ಎಳೆಯ ವಯಸ್ಸು, ಅಂದರೆ ಕೇವಲ 3 ವರ್ಷವಿದ್ದಾಗ ಅಮ್ಮ ಬರೆದ ಮೊದಲ ಯಕ್ಷಗಾನ ಪದ್ಯ “ನೀಲ ಗಗನದೊಳು” ಪದ್ಯಕ್ಕೆ ಎಳೆಯ ಹೆಜ್ಜೆ ಹಾಕಿದ್ದರು. ಮಗಳಿಗೆ ತಾಯಿಯಿಂದ ಪೂರ್ವ ತಯಾರಿ, ಜೊತೆಗೆ ಯಕ್ಷ ಕಲಾವಿದ ಅಪ್ಪ ಶಿವಾನಂದ, ನಾಗಶ್ರೀಯಲ್ಲಿ ಕಲಾಭಿರುಚಿ ಮೂಡಲು ಕಾರಣ. ಬೆಳೆಯುವಾಗಲೇ ಸಾಕೇತ ಕಲಾವಿದರು ನಡೆಸಿದ ಬೇಸಿಗೆ ಶಿಬಿರದಲ್ಲಿ ಸಂಜೀವ ಸುವರ್ಣರಲ್ಲಿ ಹತ್ತು ದಿನಗಳ ಹೆಜ್ಜೆ ಅಭ್ಯಸಿಸುವ ಮೂಲಕ ಯಕ್ಷ ಕ್ಷೇತ್ರಕ್ಕೆಅಧಿಕೃತವಾಗಿ ಪ್ರವೇಶ ಪಡೆದುಕೊಂಡರು. ಸಂಜೀವ ಸುವರ್ಣರಲ್ಲಿ ತಾವು ಕಲಿತ ಪ್ರಾಥಮಿಕ ಕಲಿಕೆಯ ನಂತರ ಕೆಲವು ಪ್ರದರ್ಶನ ನೀಡಿ, 2ನೇ ವರ್ಷ ಶ್ರೀ ದಿ.ಹೆರೆಂಜಾಲು ವೆಂಕಟರಮಣ ಗಾಣಿಗರಲ್ಲಿ ಅಭ್ಯಾಸ ಮಾಡಿದರು. ಅಕ್ಕನ ಜೊತೆಯಲ್ಲಿ ತಮ್ಮ ನಾಗೇಶ್‍ ಸಹ ಅಲ್ಲಲ್ಲಿ ನೃತ್ಯರೂಪಕಗಳನ್ನು ನೀಡುತ್ತಾ ಕಲಾಲೋಕದ ಪಯಣದಲ್ಲಿ ಜೊತೆಯಾದ.

image


ನಾಗಶ್ರೀ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಾಗರ ತಾಲೂಕಿನ ಖಂಡಿಕಾ ಗ್ರಾಮದಲ್ಲಿ ಪೂರೈಸಿದರು. ಬಳಿಕ 1 ವರ್ಷ ಸಾಗರದ ಪ್ರಗತಿ ಶಾಲೆಯಲ್ಲಿ ಆನಂತರ ಉಳಿದ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಇಕ್ಕೇರಿ ಪ್ರೌಢಶಾಲೆಯಲ್ಲಿ ಮುಗಿಸಿದರು. ಸಾಗರದ ಸರ್ಕಾರ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬಳಿಕ ಬೆಂಗಳೂರಿನಲ್ಲಿ ಬಿಬಿಎಂ ಪದವಿ ಗಳಿಸಿದರು. ಶಾಲೆ ಹಾಗೂ ಕಾಲೇಜು ಕಲೆಯುತ್ತಿದ್ದ ವೇಳೆಯಲ್ಲಿ ಯಕ್ಷಗಾನ ಹಾಗೂ ಹರಿಕಥೆಗಳಂತಹ ಕಲಾಸೇವೆಯಲ್ಲಿ ಸಕ್ರಿಯರಾಗಿದ್ದ ಚತುರೆ ನಾಗಶ್ರೀ.

ಹರಿಕಥಾ ಪಾರಾಯಣದಲ್ಲೂ ಇವರದ್ದು ಎತ್ತಿದ ಕೈ:

7ನೇ ತರಗತಿ ಕಲಿಯುತ್ತಿದ್ದಾಗಲೇ, ಶಿಕ್ಷಕರಾದ ಸತ್ಯನಾರಾಯಣ ಅವರ ಸಲಹೆಯಂತೆ ಹರಿಕಥಾ ದಿಗ್ಗಜ ಗುರುರಾಜಲು ನಾಯ್ಡುರವರ ಗಜಗೌರಿ ವೃತ ಕೇಳಿ, ಅದನ್ನು ತನ್ನ ಎಳೆಯ ಕಂಠದಲ್ಲಿ ಚಾಚೂ ತಪ್ಪದಂತೆ ಹರಿಕಥಾ ಪಾರಾಯಣ ಮಾಡಿದ ಅದ್ವಿತೀಯ ಪ್ರತಿಭೆ ನಾಗಶ್ರೀ. ಆ ಬಳಿಕ ಶ್ರೀಕೃಷ್ಣ ಗಾರುಡಿ, ಶ್ರೀರಾಮ ಪಟ್ಟಾಭಿಷೇಕ, ಶ್ರೀರಾಮ ಜನನ, ಶ್ರೀ ಶನೈಶ್ವರ ಮಹಾತ್ಮೆ ಮುಂತಾದ ಹರಿಕಥೆಗಳ ಹೇಳುವ ಮೂಲಕ ಸಭಿಕರ ಮನಸೂರೆಗೊಂಡರು.

image


ಈವರೆಗೆ ನಾಗಶ್ರೀ ಸುಮಾರು 500ಕ್ಕಿಂತ ಹೆಚ್ಚು ಹರಿಕಥೆಗಳನ್ನು ಪಠಣ ಮಾಡಿದ್ದಾರೆ. ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ “ಹರಿಕಥೆ”ಯಲ್ಲಿ ಪ್ರಥಮಸ್ಥಾನ ಪಡೆದಿದ್ದಾರೆ. ಜೊತೆಗೆ ಅನೇಕ ನಾಟಕಗಳಲ್ಲಿ ಸೃಜನಾತ್ಮಕ ಪಾತ್ರಗಳನ್ನು ಅಭಿನಯಿಸಿದ್ದಾರೆ. ಇದರೊಂದಿಗೆ ಭರತನಾಟ್ಯ, ಸಂಗೀತ, ಅಭ್ಯಾಸ ಮಾಡಿದ್ದು ಅವರ ಬಹುಮುಖೀ ಪ್ರತಿಭೆಗೆ ನಿದರ್ಶನ.

ಉಸಿರುಸಿರಿನಲ್ಲೂ ಯಕ್ಷಗಾನದ ಕಲೆಯಿದೆ:

ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನದ ಮೇಲೆ ಆಸಕ್ತಿ ಹಾಗೂ ಆಸ್ಥೆ ಹೊಂದಿದ್ದ ನಾಗಶ್ರೀ ಈ ವರೆಗೆ ಸಾವಿರಾರು ಯಕ್ಷ ಪ್ರದರ್ಶನಗಳನ್ನು ನೀಡಿದ್ದಾರೆ. ತಮ್ಮ ಅಚ್ಚುಮೆಚ್ಚಿನ ಯಕ್ಷ ಕ್ಷೇತ್ರದಲ್ಲಿ ಬಣ್ಣ ಹಚ್ಚಿಕೊಂಡು ಮೋಹಿನಿ, ವಿಷ್ಣು, ಈಶ್ವರ, ಕೃಷ್ಣ, ಸುಭದ್ರೆ, ಅರ್ಜುನ, ಸಾಲ್ವ, ಅಂಬೆ, ದಾಕ್ಷಾಯಿಣಿ, ಚಿತ್ರಾಕ್ಷಿ, ಅಭಿಮನ್ಯು, ಬಬ್ರುವಾಹನ, ವೃಷಸೇನ, ಚಂದ್ರಾವಳಿ, ನಾಗಶ್ರೀ, ಲವ-ಕುಶ, ರಾಮ, ಸುಧನ್ವ, ಪ್ರಭಾವತಿ, ಮುಂತಾದ ನೂರಾರು ಪಾತ್ರಗಳಲ್ಲಿ ಕಾಣಿಸಿಕೊಂಡು ಕುಣಿದಿದ್ದಾರೆ. ಸರಿಸುಮಾರು 22 ವರ್ಷಗಳಿಂದ ಒಟ್ಟಾರೆ ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಶಿ, ಹೈದರಾಬಾದ್, ಮುಂಬೈ, ಕೇರಳ ಮುಂತಾದ ಹೊರ ರಾಜ್ಯಗಳಲ್ಲಿಯೂ ನಾಗಶ್ರೀ ಕಲಾ ಪ್ರದರ್ಶನ ನೀಡಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ ಶ್ರೀ ಕಾಳಿಂಗ ಯಕ್ಷ ಕಲಾವೈಭವ ಅನ್ನುವ ತಂಡ ಕಟ್ಟಿಕೊಂಡು ಯಕ್ಷಗಾನ, ನೃತ್ಯ ತರಬೇತಿ ಹಾಗೂ ಕಾರ್ಯಕ್ರಮಗಳನ್ನು ಕಳೆದ 6 ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ.

image


ಕಿರುತೆರೆ ಹಾಗೂ ಬೆಳ್ಳಿತೆರೆಗಳಲ್ಲಿ ದೃಢ ಹೆಜ್ಜೆ:

ನಾಗಶ್ರೀ ಗೀಜಗಾರುರವರ ಇನ್ನೊಂದು ಮೈಲಿಗಲ್ಲು ಧಾರಾವಾಹಿ ಹಾಗೂ ಸಿನಿಮಾ ರಂಗದಲ್ಲಿಕಾಣಿಸಿಕೊಂಡಿದ್ದು. ಇವರು ಈವರೆಗೆ 25ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಟಿಸಿದ್ದಾರೆ. 1 ಕನ್ನಡ ಮತ್ತು 1 ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ. ಸಧ್ಯ ತಮಿಳಿನಲ್ಲೂ ನಟಿಸುತ್ತಿದ್ದಾರೆ.

ಜೀ ಕನ್ನಡದಲ್ಲಿ ರಮೇಶ್ ಬೇಗಾರ್ ನಿರ್ದೇಶನದ ಏಕೆ ಹೀಗೆ ನಮ್ಮ ನಡುವೆ, ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ನಾಗಶ್ರಿ ಕಿರುತೆರೆಗೆ ಕಾಲಿಟ್ಟರು. ಅದಾದ ನಂತರ ಮಾನಸ ಪುತ್ರಿ, ಕಲ್ಲು ಸಕ್ಕರೆ, ಬಂದೇ ಬರುತಾವ ಕಾಲ, ಕಾಲ ಚಕ್ರ, ಅಡುಗೆಗೆ ಸಂಬಂಧಪಟ್ಟ ರುಚಿ-ಅಭಿರುಚಿ, ಜೊತೆ ಇರುವೆ ನಾನೆಂದೂ, ಹಾಸ್ಯ ಧಾರಾವಾಹಿ ಪಾರ್ವತಿ ಪರಮೇಶ್ವರ ಹಾಗೂ ಪಾಂಡುರಂಗ ವಿಠಲ, ಕಲ್ಯಾಣ ರೇಖೆ, ಅವಲಕ್ಕಿ ಪವಲಕ್ಕಿ, ಸಿಂಧೂರ, ಮುಂತಾದ ಧಾರಾವಾಹಿಗಳಲ್ಲಿ ಮನೋಜ್ಞ ಅಭಿನಯ ತೋರಿದ್ದಾರೆ. ಇದರ ಜೊತೆ ನಾಗಶ್ರಿಗೆ ಪ್ರತ್ಯೇಕ ಗುರುತು ನೀಡಿದ್ದು ಈಟಿವಿ ಕನ್ನಡದಲ್ಲಿ ಪ್ರಸಾರವಾದ ಮನೆಯೊಂದು ಮೂರು ಬಾಗಿಲು, ದೇವಿ, ರಾಧಾ ಕಲ್ಯಾಣ, ಅಮ್ಮ ನಿನಗಾಗಿ, ಲಕುಮಿ ಮುಂತಾದ ಧಾರಾವಾಹಿಗಳ ಅಭಿನಯ. ಚರಣದಾಸಿ ಧಾರವಾಹಿಯಲ್ಲಿ ಪದ್ಮಿನಿಯಾಗಿ ಮನೆಮಾತಾಗಿದ್ದ ನಾಗಶ್ರೀಯ ಅಭಿನಯ ಪ್ರತಿಭೆಗೆ ಹಿಡಿದ ಕೈಗನ್ನಡಿ. ಇದರ ಜೊತೆಯಲ್ಲಿ ತಮಿಳಿನ ‘ಚಂದ್ರಲೇಖ’ದಲ್ಲಿ ‘ಲೇಖಾ’ ಎಂಬ ಮುಖ್ಯ ಪಾತ್ರವನ್ನು ನಾಗಶ್ರೀ ನಿರ್ವಹಿಸುತ್ತಿದ್ದಾರೆ.

ಕಲಾಸೇವೆಗೆಂದೇ ಮುಡುಪಿದೆ ಜೀವಿತ:

ಸದ್ಯ ಬೆಂಗಳೂರು ಹಾಗೂ ಚೆನ್ನೈ ಎರಡೂ ಕಡೆ ನೆಲೆಸಿರುವ ನಾಗಶ್ರೀ ಕಿರುತೆರೆ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ನಿರ್ವಹಿಸುತ್ತಿದ್ದಾರೆ. ನಾಗಶ್ರೀಯವರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಲೇಬೇಕಾದ ಅತಿ ಮುಖ್ಯ ಕಾರಣ, ಅವರು ಕಲಾಕ್ಷೇತ್ರಕ್ಕೆ ನೀಡಿರುವ ಅಪ್ರತಿಮ ಕಾಣಿಕೆ ಮಾತ್ರವಲ್ಲ. ತಮ್ಮ ಬಿಸಿ ಶೆಡ್ಯೂಲ್​​ನಲ್ಲಿಯೂ ನಾಗಶ್ರೀ ದಣಿವರಿಯದೆ ಯಕ್ಷಗಾನ ಹಾಗೂ ಹರಿಕಥೆಯಂತಹ ಸಾಂಪ್ರದಾಯಿಕ ಕಲೆಗಳ ಮಹತ್ವ ಸಾರುತ್ತಿದ್ದಾರೆ. ಅವಕಾಶ ಸಿಕ್ಕಲ್ಲೆಲ್ಲಾ ಯಕ್ಷಗಾನದ ಬಣ್ಣ ಹಚ್ಚಿ ಹೆಜ್ಜೆ ಹಾಕಲು ಹಾಗೂ ಪೇಟ ಸುತ್ತಿ ಹರಿಕಥೆ ಪಾರಾಯಣ ಮಾಡಲೂ ನಾಗಶ್ರೀ ಎಂದಿಗೂ ಹಿಂದೆ ಮುಂದೆ ಯೋಚಿಸುವವರೇ ಅಲ್ಲ. ತಮ್ಮ ಕೈಲಾದಷ್ಟು ಕಲಾಸೇವೆಯನ್ನು ಮಾಡುವುದೇ ಜೀವನ ಧ್ಯೇಯ ಅಂತ ಆತ್ಮವಿಶ್ವಾಸ ಹಾಗೂ ಬದ್ಧತೆಯಿಂದ ಹೇಳುತ್ತಾರೆ ನಾಗಶ್ರೀ.