ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ "ಆಸ್ಕ್ ಮಿ ಬಜಾರ್''

ಟೀಮ್​ ವೈ.ಎಸ್​. ಕನ್ನಡ

ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ "ಆಸ್ಕ್ ಮಿ ಬಜಾರ್''

Monday April 11, 2016,

4 min Read

ಮೊದಲಿಗೆ ರಣಬೀರ್ ಕಪೂರ್ ಹುಡುಗಿಗೆ ಹೊಡೆಯಲು ಯತ್ನಿಸ್ತಾನೆ, ಆದ್ರೆ ಸಾಧ್ಯವಾಗುವುದಿಲ್ಲ. ನಂತರ ಆಕೆ ಶಾಪಿಂಗ್ ಮಾಡೋಕೆ ಸುಲಭ ದಾರಿ ಇಲ್ವೇ ಅನ್ನೋ ಗೊಂದಲ ಮತ್ತು ಅಚ್ಚರಿಯಲ್ಲಿ ಮುಳುಗುತ್ತಾಳೆ. ಆಗ ಆತ ಈ ಸಮಸ್ಯೆಗೆ `ಆಸ್ಕ್ ಮಿ ಬಜಾರ್' ಅಪ್ಲಿಕೇಷನ್ ಪರಿಹಾರ ಎನ್ನುತ್ತ ಜಿಗಿಯುತ್ತಾನೆ-ಇದು ಆಸ್ಕ್ ಮಿ ಬಜಾರ್ ಜಾಹೀರಾತಿನ ದೃಶ್ಯ. ಬೇರೆ ಬೇರೆ ಜಾಹೀರಾತುಗಳಲ್ಲಿ ಕಂಗನಾ ರನಾವತ್ ಹಾಗೂ ಫರ್ಹಾ ಖಾನ್ ಕೂಡ ಇದನ್ನೇ ಹೇಳುತ್ತ ನೃತ್ಯ ಮಾಡುವ ದೃಶ್ಯವಿದೆ.

image


ಸಣ್ಣ ಮತ್ತು ದೊಡ್ಡ ನಗರಗಳಲ್ಲಿ ಪ್ರತಿ ಶಾಪಿಂಗ್ ಅಗತ್ಯಕ್ಕೂ ಪ್ರಧಾನ ಶೋಧ ವಾಹಿನಿಯಾಗಿ ಗುರುತಿಸಿಕೊಳ್ಳುವುದೇ ಆಸ್ಕ್‍ಮಿ ಗ್ರೂಪ್‍ನ ಉದ್ದೇಶ. 2012ರಲ್ಲಿ ಆಸ್ಕ್‍ಮಿ ಬಜಾರ್ ಬಿಡುಗಡೆಯಾದಾಗ ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಮತಲ ಮಾರುಕಟ್ಟೆಯಾಗಿತ್ತು. ಅದಾಗ್ಲೇ ಫ್ಲಿಪ್‍ಕಾರ್ಟ್ ಹಾಗೂ ಸ್ನಾಪ್‍ಡೀಲ್ ಭಾರತ ಇ-ಕಾಮರ್ಸ್ ವಲಯದಲ್ಲಿ ಹೆಜ್ಜೆಗುರುತು ಮೂಡಿಸಿದ್ದವು. ಆದ್ರೆ ಆಸ್ಕ್‍ಮಿ ಬಜಾರ್ ವಿಭಿನ್ನ ಹಾದಿಯಲ್ಲಿ ಸಾಗಿದೆ. ಇ-ಕಾಮರ್ಸ್ ದಿಗ್ಗಜರಂತೆ ಲಾಜಿಸ್ಟಿಕ್ಸ್ ಆಯ್ಕೆಯನ್ನಿಡದೆ ಸಣ್ಣ ಪಟ್ಟಣಗಳ ಸಣ್ಣ ಮಾರಾಟಗಾರರಿಗೆ ಇ-ಕಾಮರ್ಸ್ ಸೌಲಭ್ಯ ಒದಗಿಸಿದೆ. ಕೇವಲ 5 ವರ್ಷಗಳೊಳಗೆ ಅಚ್ಚರಿ ಎನಿಸುವಂತಹ ಯಶಸ್ಸು ಗಳಿಸಿದೆ.

ಆರಂಭ

ಆಸ್ಕ್ ಮಿ ಬಜಾರ್‍ನ ಮೂಲ ಕಂಪನಿ `ಗೆಟಿಟ್ ಇನ್ಫೋಸರ್ವೀಸಸ್' ದಶಕಗಳಿಂದ ದೇಶದಾದ್ಯಂತ ವ್ಯಾಪಾರಿಗಳ ಮಾಹಿತಿ ಸಂಗ್ರಹಿಸಿ ಯಲ್ಲೋ ಪೇಜ್‍ಗಳನ್ನು ಪ್ರಕಟಿಸುತ್ತಿದೆ. 2006ರಿಂದೀಚೆಗೆ ಭಾರತದ ರಿಟೇಲ್ ಪರಿಸರ ಮುದ್ರಣದಿಂದ ಡಿಜಿಟಲ್ ಡೇಟಾ ಸಮೀಕರಣದತ್ತ ಸಾಗಿದೆ. 2010ರಲ್ಲಿ ಆಸ್ಕ್ ಮಿ ಡಾಟ್ ಕಾಮ್ ಜಾಹೀರಾತು ಪೋರ್ಟಲ್ ಆಗಿತ್ತು. ಪೋಷಕ ಕಂಪನಿಯ ಮಾರುಕಟ್ಟೆ ಉಪಸ್ಥಿತಿಯ ಹತೋಟಿ ಮತ್ತು ಗ್ರಾಹಕರ ಜೊತೆಗಿನ ಸಂಬಂಧವನ್ನು ಸರಿದೂಗಿಸಕೊಂಡು ಹೋಗುವಂತಹ ವಹಿವಾಟು ಆದಾಯವನ್ನು ಹೊಂದಬೇಕಾದ ಅನಿವಾರ್ಯತೆಯಿತ್ತು. ಹಾಗಾಗಿ 2012ರಲ್ಲಿ ಆಸ್ಕ್ ಮಿ ಗ್ರೂಪ್‍ನ ಮಾರುಕಟ್ಟೆ ಮಾದರಿಯನ್ನು ಆಸ್ಕ್ ಮಿ ಬಜಾರ್ ಎಂದು ಬದಲಾಯಿಸಲಾಯ್ತು. ಅವರು ತಮ್ಮ ವಹಿವಾಟನ್ನು ಇನ್ನಷ್ಟು ವಿಸ್ತರಿಸಿದ್ರು, ಈಬೇ ಅಥವಾ ಫ್ಲಿಪ್‍ಕಾರ್ಟ್‍ನ ವಿಶಿಷ್ಟ ಮಾರಾಟಗಾರರಲ್ಲದ ಅತಿ ಚಿಕ್ಕ ಎಸ್‍ಎಂಇಗಳತ್ತ ಹೆಚ್ಚು ಗಮನಹರಿಸಿದ್ರು.

2013ರಲ್ಲಿ ಮಲೇಶಿಯಾದ ಬಿಲಿಯನೇರ್ ಟಿ.ಆನಂದ ಕೃಷ್ಣನ್ ಅವರ ಆಸ್ಟ್ರೋ ಹೋಲ್ಡಿಂಗ್ಸ್ ಸಂಸ್ಥೆ ಗೆಟಿಟ್ ಇನ್ಫೋಸರ್ವೀಸಸ್ ಅನ್ನು ಕೊಂಡುಕೊಂಡಿತ್ತು. ಆ ಸಮಯದಲ್ಲಿ ನೆಟ್ವರ್ಕ್ 18 ಗ್ರೂಪ್‍ನ `ಇನ್ಫೋಮೀಡಿಯಾ ಯಲ್ಲೋ ಪೇಜಸ್' ಹಾಗೂ `ಆಸ್ಕ್ ಮಿ'ಗೂ ಅದು ಮಾಲೀಕನಾಗಿತ್ತು.

ಕಡಿಮೆ ಪ್ರಯಾಣದ ಮಾರ್ಗ

ಆನ್‍ಲೈನ್ ವಹಿವಾಟು ಆರಂಭಿಸುವ ಉತ್ಸಾಹದಲ್ಲಿರುವ ಪುಟ್ಟ ಪಟ್ಟಣಗಳ ಮಾರಾಟಗಾರೊಂದಿಗೆ ಆಸ್ಕ್ ಮಿ ಬಜಾರ್ ಬ್ಯುಸಿನೆಸ್ ಆರಂಭಿಸಿತ್ತು. ಆದ್ರೆ ಅವರಲ್ಲಿ ತಂತ್ರಜ್ಞಾನ ನಿರ್ವಹಣೆ ಬಗ್ಗೆ ಅರಿವು ಮೂಡಿಸಲು ನಿಜಕ್ಕೂ ಹೋರಾಟ ನಡೆಸಬೇಕಾಯ್ತು, ಹೈಪರ್ ಲೋಕಲ್ ಬ್ಯುಸಿನೆಸ್‍ಗೆ ಇ-ಕಾಮರ್ಸ್ ಸೌಲಭ್ಯ ಒದಗಿಸುವುದು ಲಾಭದಾಯಕ, ಯಾಕಂದ್ರೆ ವಸ್ತುಗಳನ್ನು ಸಂಗ್ರಹಿಸಿ ಸ್ಥಳೀಯವಾಗಿಯೇ ಡೆಲಿವರಿ ಕೂಡ ಮಾಡಬಹುದು. ಉತ್ಪನ್ನದ ಆವಿಷ್ಕಾರಕ್ಕೆ ಉನ್ನತ ಮಟ್ಟದ ವಿವರಣೆಯ ಅಗತ್ಯವಿಲ್ಲ. ಆಸ್ಕ್ ಮಿ ಬಜಾರ್ ಕೂಡ ಇದೇ ರೀತಿ ಕಾರ್ಯನಿರ್ವಹಿಸುತ್ತದೆ. ``ಡೆಲಿವರಿ ಹಾಗೂ ಹಣ ಸಂಗ್ರಹದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕೆಂಬುದೇ ನಮ್ಮ ಉದ್ದೇಶ. ಸ್ಥಳೀಯ ಮಳಿಗೆಯಿಂದ ಆನ್‍ಲೈನ್‍ನಲ್ಲಿ ಕೊಂಡುಕೊಳ್ಳುವಾಗ ಕೂಡ ಆಫ್‍ಲೈನ್‍ನಲ್ಲಿ ಖರೀದಿಸಿದಾಗ ಸಿಗುವ ಗ್ಯಾರಂಟಿಯನ್ನೇ ಗ್ರಾಹಕರು ಬಯಸುತ್ತಾರೆ'' ಅನ್ನೋದು ಸಿಇಓ ಕಿರಣ್ ಮೂರ್ತಿ ಅವರ ಅಭಿಪ್ರಾಯ.

image


ಆರ್ಡರ್ ಮಾಡಿದ ಮರುದಿನವೇ ಡೆಲಿವರಿ ಆಯ್ಕೆಯಿರುವುದು ಆಸ್ಕ್ ಮಿ ಬಜಾರ್‍ನ ವೈಶಿಷ್ಟ್ಯ. ಈ ಮಾದರಿಯನ್ನು ತಯಾರಿಸಲು 18 ತಿಂಗಳು ಬೇಕಾಯಿತಂತೆ, ಈಗ ಗ್ರಾಹಕರಿಂದ ಸಖತ್ ರೆಸ್ಪಾನ್ಸ್ ಸಿಗುತ್ತಿದೆ ಎನ್ನುತ್ತಾರೆ ಕಿರಣ್ ಮೂರ್ತಿ.

ಪೂರೈಕೆ ಸರಪಳಿಯ ಏಕೀಕರಣದಲ್ಲಿ ಉತ್ತಮ ಸಾಮಥ್ರ್ಯವಿದ್ದರೆ ಮಾತ್ರ ಹೈಪರ್ ಲೋಕಲ್ ಬ್ಯುಸಿನೆಸ್‍ಗಳು ಯಶಸ್ವಿಯಾಗಲು ಸಾಧ್ಯ. ಅಂತಹ ಸೇವೆಗಳಿಗೆ ನಿಜವಾದ ಬೇಡಿಕೆ ಇರಬೇಕು. ``ಹೈಪರ್ ಲೋಕಲ್ ಮಾದರಿ, ಸೇವೆಯಲ್ಲಿರುವ ಕೊರತೆ ನೀಗಿಸುವ ಮಾರ್ಗವಲ್ಲ. ಬಹಳಷ್ಟು ಹೈಪರ್ ಲೋಕಲ್ ಬ್ಯುಸಿನೆಸ್‍ಗಳು ಅತ್ಯಂತ ಶೀಘ್ರವಾಗಿ ಯಶಸ್ಸು ಸಾಧಿಸಿವೆ ಆದ್ರೆ ಬಳಿಕ ಬೇಡಿಕೆಯ ಕೊರತೆಯಿಂದ ಸೊರಗಿವೆ. ಅದರರ್ಥ ಗ್ರಾಹಕರಿಗೆ ಅಗತ್ಯವಿಲ್ಲ ಎಂದಲ್ಲ, ಹೈಪರ್ ಲೋಕಲ್ ಅನ್ನು ಅವರು ವಿಭಿನ್ನ ಬಗೆಯಲ್ಲಿ ಬಳಸುತ್ತಾರೆ'' ಅನ್ನೋದು `ಟೆಕ್ನೋಪಾಕ್ ಮ್ಯಾನೇಜ್‍ಮೆಂಟ್ ಕನ್ಸಲ್ಟೆನ್ಸಿ' ಸೀನಿಯರ್ ವೈಸ್ ಪ್ರೆಸಿಡೆಂಟ್ ಅಂಕುರ್ ಬಿಸೆನ್.

ಸ್ಥಳೀಯ ಮಾರುಕಟ್ಟೆ ಮೇಲೆ ಗಮನ

ಲಾಭಕ್ಕಾಗಿ ಹೆಚ್ಚಿನ ಮೌಲ್ಯದ ವಸ್ತುಗಳ ಮೇಲೆ ಗಮನಹರಿಸುವುದು ಆಸ್ಕ್ ಮಿ ಬಜಾರ್ ತಂತ್ರ. ಸ್ಥಳೀಯ ಮಾರಾಟಗಾರರು ಮತ್ತು ಸ್ಥಳೀಯ ಗ್ರಾಹಕರ ನಡುವೆ ವಿತರಣೆ ಹಾಗೂ ನಗದು ಸಂಗ್ರಹ ಏಜೆಂಟ್‍ನಂತೆ ಅದು ಕಾರ್ಯನಿರ್ವಹಿಸುತ್ತಿದೆ. ಪಾಲುದಾರರ ಜೊತೆಗೂಡಿ ಕೆಲಸ ಮಾಡುವ ಪ್ರಯತ್ನ ಕೂಡ ನಡೆದಿದೆ, ಆದ್ರೆ ಸ್ಥಳೀಯ ಪಿಕ್ ಅಪ್ ಹಾಗೂ ಡೆಲಿವರಿಗೆ ಬೇಕಾದ ಸೌಲಭ್ಯಗಳು ಅವರ ಬಳಿ ಇಲ್ಲ. ಹಾಗಾಗಿ ಸ್ಥಳೀಯ ಮಟ್ಟದಲ್ಲಿ ಡೆಲಿವರಿ ಹಾಗೂ ಹಣ ಸಂಗ್ರಹ ಸಾಮಥ್ರ್ಯ ಹೊಂದಿರುವ ಏರ್ಟೆಲ್‍ನಂತಹ ಏಜೆಂಟ್‍ಗಳೊಂದಿಗೆ ಆಸ್ಕ್ ಮಿ ಬಜಾರ್ ಪಾಲುದಾರಿಕೆ ಮಾಡಿಕೊಂಡಿದೆ. ಸದ್ಯ 50ಕ್ಕೂ ಹೆಚ್ಚು ನಗರಗಳಲ್ಲಿ ಆಸ್ಕ್ ಮಿ ಬಜಾರ್ ಕಾರ್ಯನಿರ್ವಹಿಸುತ್ತಿದೆ. ಮೆಟ್ರೋ ಸಿಟಿಗಳಾದ ದೆಹಲಿ, ಮುಂಬೈ, ಬೆಂಗಳೂರು, ಟೈರ್ 2 ಸಿಟಿಗಳಾದ ಬನಾರಸ್, ಕೋಟಾ, ಕಾನ್ಪುರ್‍ನಂತಹ ನಗರಗಳಿಂದ ಅತಿ ಹೆಚ್ಚು ಆದಾಯ ಬರುತ್ತಿದೆ. ಆನ್‍ಲೈನ್ ದಿನಸಿ ವ್ಯಾಪಾರ ಕೂಡ ಇದ್ದು ಆಸ್ಕ್ ಮಿ ಗ್ರೊಸರಿ ಟೈರ್ 2 ಸಿಟಿಗಳಲ್ಲಿ ಜನಪ್ರಿಯತೆ ಗಳಿಸಿದೆ.

ಉಜ್ವಲ ಭವಿಷ್ಯಕ್ಕಾಗಿ

ಆಸ್ಕ್ ಮಿ ಬಜಾರ್ ಮಧ್ಯವರ್ಗದವರ ಮೇಲೆ ಗಮನಹರಿಸಿದ್ದರೂ ಇದೀಗ ಟಿಕೆಟ್ ಗಾತ್ರವನ್ನು ಹೆಚ್ಚಿಸಿಕೊಂಡಿದೆ. ಸ್ಥಳೀಯ ವಿನ್ಯಾಸಗಾರರು, ಗ್ರಾಹಕರು ಮತ್ತು ಉತ್ಪಾದಕರನ್ನು ಒಂದೆಡೆ ತರುವ ಮೂಲಕ ಪೀಠೋಪಕರಣ ಮಾರಾಟವನ್ನೂ ಆರಂಭಿಸಿದೆ. ಸಮಗ್ರ ವ್ಯಾಪಾರಿ ಪರಿಹಾರ ವೇದಿಕೆ ಆಸ್ಕ್ ಮಿ ಪೇ ಕೂಡ ಕಾರ್ಯಾಚರಿಸುತ್ತಿದೆ. ಅನನ್ಯ ಮಾದರಿಯಾಗಿದ್ದರೂ ಆಸ್ಕ್ ಮಿ ಬಜಾರ್‍ಗೆ ಪೈಪೋಟಿ ಹೆಚ್ಚಾಗಿದೆ. ಫ್ಲಿಪ್‍ಕಾರ್ಟ್, ಸ್ನಾಪ್‍ಡೀಲ್, ಪೆಪ್ಪರ್‍ಟ್ಯಾಪ್ ಸೇರಿದಂತೆ ಹಲವು ಪೋರ್ಟಲ್‍ಗಳಿಂದ ಆಸ್ಕ್ ಮಿ ಬಜಾರ್ ಸ್ಪರ್ಧೆ ಎದುರಿಸುತ್ತಿದೆ. ಆದ್ರೆ ಗ್ರಾಹಕರಿಗೆ ವಿಷಯಗಳ ವಿಭಾಗ ಮತ್ತು ಲಭ್ಯತೆ ಅತಿ ಮುಖ್ಯ ಎನ್ನುತ್ತಾರೆ ಅಂಕುರ್.

ಮಾರಾಟಗಾರರು ಆಸ್ಕ್ ಮಿ ಬಜಾರ್ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಚೆನ್ನೈನ ರೆಡಿಮೇಡ್ ಗಾರ್ಮೆಂಟ್ ಅಂಗಡಿಯ ಮಾಲೀಕರೊಬ್ಬರು ಹೋಲ್ ಸೇಲ್ ಮಾರುಕಟ್ಟೆಯ ಪ್ರಯೋಜನ ಒದಗಿಸುವಂತೆ ಕಿರಣ್ ಅವರನ್ನು ಕೇಳಿಕೊಂಡಿದ್ದರು. ತಮಗಾಗಿ ಬಟ್ಟೆಗಳನ್ನು ಖರೀದಿಸಿ, ಹಣಕಾಸು ಮತ್ತು ಗ್ರಾಹಕರ ನಿರ್ವಹಣೆಗೆ ನೆರವಾಗುವಂತೆ ಕೋರಿದ್ದರು. ಆದ್ರೆ ಎಸ್‍ಎಂಇ ವ್ಯಾಪಾರಕ್ಕೆ ಸಹಾಯ ಮಾಡುವುದು ಅಂದ್ರೆ ಅವರಿಗೆ ಹೆಚ್ಚು ಗ್ರಾಹಕರನ್ನು ಗಳಿಸಿಕೊಟ್ಟಂತೆ, ಇನ್ನಷ್ಟು ಗ್ರಾಹಕರು ಅವರ ಮಳಿಗೆಗೆ ಬರುವಂತೆ ಮಾಡಿದಂತೆ ಎನ್ನುತ್ತಾರೆ ಕಿರಣ್. ಆನ್‍ಲೈನ್ ಮತ್ತು ಆಫ್‍ಲೈನ್ ಎರಡೂ ಮಾದರಿಯ ಮಿಲನ ಸಾಧ್ಯ ಎಂಬುದನ್ನು ಸ್ನಾಪ್‍ಡೀಲ್ ಸಾಬೀತುಪಡಿಸಿದೆ. ಆದ್ರೆ ಅದರ ಯಶಸ್ಸನ್ನು ಕಾದು ನೋಡಬೇಕಷ್ಟೆ.

ನಿಗೂಢವಾದ ಉದ್ಯಮ

ಆನ್‍ಲೈನ್ ರಿಟೇಲ್ ಮಾರುಕಟ್ಟೆಯ ಮೌಲ್ಯ 2016-17ರಲ್ಲಿ 23 ಬಿಲಿಯನ್ ಡಾಲರ್‍ನಷ್ಟಿರಲಿದೆ ಅಂತಾ ಗೋಲ್ಡ್‍ಮನ್ ಸ್ಯಾಚ್ಸ್ ಬ್ಯಾಂಕ್ ವರದಿ ಮಾಡಿದೆ.

2014-15ರಲ್ಲಿ ಇದು 11 ಬಿಲಿಯನ್ ಡಾಲರ್‍ನಷ್ಟಿತ್ತು. 2010ರ ವೇಳೆಗೆ 69 ಬಿಲಿಯನ್ ಡಾಲರ್‍ಗೆ ತಲುಪುವ ನಿರೀಕ್ಷೆ ಇದೆ. ಇನ್ನಷ್ಟು ಸಂಸ್ಥೆಗಳು ಆನ್‍ಲೈನ್‍ನತ್ತ ಮುಖಮಾಡಲಿದ್ದು ಹೊಸ ಬಗೆಯ ಉದ್ಯಮ ಮಾದರಿಗಳು ಕೂಡ ಹುಟ್ಟಿಕೊಳ್ಳಲಿವೆ.

ಟೆಕ್ನೋಪಾಕ್‍ನ ಅಂಕುರ್, ಭವಿಷ್ಯದಲ್ಲಿ ಮಾರುಕಟ್ಟೆಗಳಲ್ಲಿ ಉತ್ಪನ್ನಗಳು ಮತ್ತು ಸೇವೆಗಳ ಅಡ್ಡ ಹೊರೆ ಏರ್ಪಡಲಿದೆ ಎಂಬ ಮುನ್ಸೂಚನೆ ನೀಡಿದ್ದಾರೆ. ``ವಿವಿಧ ಮಾದರಿಗಳ ಮೂಲಕ ಎಲ್ಲರೂ ಪ್ರಯೋಗಕ್ಕೆ ಕೈಹಾಕಿದ್ದಾರೆ. ಅದರಲ್ಲಿ ಯಾವುದು ಬದುಕುಳಿಯುತ್ತದೆ ಅನ್ನೋದನ್ನು ಕಾದು ನೋಡಬೇಕು. ಸರ್ಕಾರದ ನೀತಿ ನಿಯಮಗಳು ಕೂಡ ಇವುಗಳ ಮೇಲೆ ಪ್ರಭಾವ ಬೀರಲಿವೆ'' ಎನ್ನುತ್ತಾರೆ ಅವರು.

ಜನವರಿ 2016ರ ಪ್ರಕಾರ ಆಸ್ಕ್ ಮಿ ಬಜಾರ್ 800 ಮಿಲಿಯನ್ ಡಾಲರ್ ವಾರ್ಷಿಕ ಜಿಎಂವಿ ಹೊಂದಿದೆ. ಅಲಿಬಾಬಾ ಕಂಪನಿ ಆಸ್ಕ್ ಮಿ ಬಜಾರ್‍ನಲ್ಲಿ 150-200 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ತಂತ್ರಜ್ಞಾನ ಮತ್ತು ಹಣಕಾಸಿನತ್ತ ಹೆಚ್ಚು ಗಮನಹರಿಸಿದ್ದೇವೆ ಎನ್ನುತ್ತಾರೆ ಕಿರಣ್. ಹಾಗಿದ್ದಲ್ಲಿ ಮತ್ತೊಂದು ಯುನಿಕಾರ್ನ್ ಹುಟ್ಟಿಕೊಳ್ಳುತ್ತಿದೆಯೇ ಎಂಬುದು ಎಲ್ಲರ ಪ್ರಶ್ನೆ.

ಲೇಖಕರು: ಅಥಿರಾ ಎ. ನಾಯರ್

ಅನುವಾದಕರು: ಭಾರತಿ ಭಟ್