ಗ್ರಾಮೀಣ ಭಾರತದ ರೂಪಾಂತರಕ್ಕೆ ಪಣ - ಬಡತನ ನಿರ್ಮೂಲನೆಗೆ ಶ್ರಮಿಸುತ್ತಿರುವ ಜರೀನಾ ಸ್ಕ್ರೆವಾಲಾ

ಟೀಮ್​ ವೈ.ಎಸ್​. ಕನ್ನಡ

ಗ್ರಾಮೀಣ ಭಾರತದ ರೂಪಾಂತರಕ್ಕೆ ಪಣ - ಬಡತನ ನಿರ್ಮೂಲನೆಗೆ ಶ್ರಮಿಸುತ್ತಿರುವ ಜರೀನಾ ಸ್ಕ್ರೆವಾಲಾ

Friday February 12, 2016,

4 min Read

ಜನರ ಸಬಲೀಕರಣ, ಅವರ ಬದುಕಿನ ರೂಪಾಂತರ ಮತ್ತು ಕನಸುಗಳನ್ನು ಸಾಕಾರಗೊಳಿಸಲು ಪಣ ತೊಟ್ಟವರು ಮತ್ಯಾರೂ ಅಲ್ಲ, ಸ್ವದೇಸ್ ಫೌಂಡೇಶನ್‍ನ ಸಂಸ್ಥಾಪಕ ಟ್ರಸ್ಟೀ ಜರೀನಾ ಸ್ಕ್ರೆವಾಲಾ. ಆಧುನಿಕ ತಂತ್ರಜ್ಞಾನ ಮತ್ತು ಮೌಲ್ಯಗಳ ಮೂಲಕ ಗ್ರಾಮೀಣ ಭಾರತದ ಅಭ್ಯುದಯಕ್ಕಾಗಿ ಸ್ವದೇಸ್ ಫೌಂಡೇಶನ್ ಶ್ರಮಿಸುತ್ತಿದೆ. ಜರೀನಾ ಮತ್ತವರ ಪತಿ ರೂನಿ ಸ್ಕ್ರೆವಾಲಾ ಜೊತೆಯಾಗಿ ಸ್ವದೇಸ್ ಫೌಂಡೇಶನ್ ಅನ್ನು ಸ್ಥಾಪಿಸಿದ್ರು. ಮೊದಲು ಈ ಸಂಸ್ಥೆಗೆ ಶೇರ್ ಎಂದು ಹೆಸರಿಡಲಾಗಿತ್ತು. ಈ ಸಂಸ್ಥೆಗೆ ಶೇ.90ರಷ್ಟು ನಿಧಿ ರೂನಿ ಮತ್ತು ಉಳಿದ ದಾನಿಗಳಿಂದ ದೊರೆಯುತ್ತಿದೆ. ಟಾಟಾ ಟ್ರಸ್ಟ್ಸ್​​ , ಎಚ್‍ಎಸ್‍ಬಿಸಿ ಮತ್ತು ಐಡಿಬಿಐ ಬ್ಯಾಂಕ್ ಕೂಡ ಸ್ವದೇಸ್ ಫೌಂಡೇಶನ್‍ಗೆ ನೆರವು ನೀಡುತ್ತಿವೆ. ಸ್ವದೇಸ್ ಸುಮಾರು 2000 ಹಳ್ಳಿಗಳನ್ನು ಅಭಿವೃದ್ಧಿಪಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತಿರುವ ಜರೀನಾ, ಅಲ್ಲಿನ ನಿವಾಸಿಗಳಿಗಿರುವ ಸಮಸ್ಯೆ ಮತ್ತು ಅಗತ್ಯಗಳನ್ನು ಆಲಿಸುತ್ತಿದ್ದಾರೆ.

2013ರಲ್ಲಿ ಹರ್‍ಸ್ಟೋರಿ ಜರೀನಾ ಅವರನ್ನು ಸಂದರ್ಶಿಸಿತ್ತು. ಅವರ ಬದುಕು, ಸವಾಲುಗಳು, ಸ್ವದೇಸ್ ಫೌಂಡೇಶನ್‍ನ ಭವಿಷ್ಯದ ಯೋಜನೆಗಳ ಬಗ್ಗೆ ಜರೀನಾ ಮನಬಿಚ್ಚಿ ಮಾತನಾಡಿದ್ರು. ಈ ಬಾರಿ ಅವರ ಸಾಮಾಜಿಕ ಕಾರ್ಯಗಳ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ಸಿಕ್ಕಿದೆ.

ಇದನ್ನು ಓದಿ

ಒಂದು ಕಾಲದಲ್ಲಿ ಮನೆ ಮನೆಗೆ ಹೋಗಿ ಹಾಡ್ತಿದ್ದರು ರಂಜಿತ್- ಈಗ ಹಾಡು ಕೇಳಲು ದೂರ ದೂರದಿಂದ ಬರ್ತಾರೆ ಫ್ಯಾನ್ಸ್..!

`ಸ್ವ' ಸೆ ಬನೇ ದೇಶ್...

``ಪ್ರತಿ ಐದು ವರ್ಷಗಳಲ್ಲಿ ಒಂದು ಮಿಲಿಯನ್ ಜನರ ಬಡತನ ನಿವಾರಣೆ ಮಾಡುವುದು ನಮ್ಮ ಉದ್ದೇಶ. ಈ ಗುರಿ ತಲುಪಲು ಒಂದು ವರ್ಷಪೂರ್ತಿ ಹಳ್ಳಿಹಳ್ಳಿಗೂ ಸಂಚರಿಸಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಿದ್ದೇವೆ. ಅಲ್ಲೇನಾಗ್ತಿದೆ ಅನ್ನೋದನ್ನು ಅರಿತುಕೊಂಡು ಏನು ಮಾಡಬಹುದು ಅನ್ನೋ ಯೋಜನೆ ಹಾಕಿಕೊಳ್ಳಲು ನಾವು ನೂರಾರು ಎನ್‍ಜಿಓಗಳು, ದಾನಿಗಳು ಹಾಗೂ ತಜ್ಞರ ಜೊತೆ ಮಾತುಕತೆ ನಡೆಸಿದ್ದೇವೆ. ದಾನ ದತ್ತಿಗಳನ್ನು ಅವಲಂಬಿಸುವ ಸಮುದಾಯ ನಿರ್ಮಾಣದ ಬದಲು, ಜನರನ್ನು ಶಾಶ್ವತವಾಗಿ ಬಡತನದಿಂದ ಹೊರತರುವುದು ಅವರ ಮಹದಾಸೆ. ಸ್ವದೇಸ್ ಕೂಡ ಸಾರ್ವಜನಿಕರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ, ಸ್ವಾವಲಂಬಿಗಳಾಗಲು ಜನರಿಗೆ ಸಹಾಯ ಮಾಡುತ್ತಿದೆ. ಬಡತನವನ್ನು ಹೊಡೆದೋಡಿಸುವ ಪ್ರಮುಖ ಮಾರ್ಗವೆಂದರೆ ಜನರ ಕನಸು ಮತ್ತು ಆಸಕ್ತಿಗಳಿಗೆ ಉತ್ತೇಜನ ನೀಡುವುದು. ಜನರು ಕನಸು ಕಾಣಬೇಕು, ಅದನ್ನು ನನಸಾಗಿಸಲು ನಾವು ಸಹಾಯ ಮಾಡುತ್ತೇವೆ. ಅವರಿಷ್ಟದಂತೆ ಬದುಕು ಮುನ್ನಡೆಸಲು, ಅವರ ಕುಟುಂಬಕ್ಕಾಗಿ ಬದುಕಲು ಆಸ್ಪದ ಮಾಡಿಕೊಡುತ್ತೇವೆ. ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜೊತೆಗೆ ಉದ್ಯೋಗ ಕೂಡ ಲಭಿಸುವಂತಾಗಬೇಕು ಅನ್ನೋದು ನಮ್ಮ ಉದ್ದೇಶ. ಇಂತಹ ಮೂಲಭೂತ ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯವಾಗದಿರುವುದೇ ಬಡತನ. ಈ ವಾಸ್ತವವನ್ನು ಬದಲಾಯಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಾರೆ'' ಜರೀನಾ.

360 ಡಿಗ್ರಿ ಪ್ರಯತ್ನ...

ಗ್ರಾಮೀಣ ಪ್ರದೇಶಗಳ ಸಬಲೀಕರಣಕ್ಕಾಗಿ ಸಮಗ್ರ ಮತ್ತು ವಿಶಾಲ ವಿಧಾನಗಳ ಅಡಿಪಾಯನ್ನು ಸ್ವದೇಸ್ ಫೌಂಡೇಶನ್ ಹಾಕಿಕೊಂಡಿದೆ. ಸಮುದಾಯ ಕ್ರೋಢೀಕರಣ, ನೀರು ಮತ್ತು ನೈರ್ಮಲ್ಯ, ಕೃಷಿ ಮತ್ತು ಜೀವನಾಧಾರ, ಶಿಕ್ಷಣ, ಆರೋಗ್ಯ ಮತ್ತು ಪೋಷಣೆ - ಈ ಐದು ಅಂಶಗಳ ವ್ಯಕ್ತಿ ಮತ್ತು ಸಮುದಾಯದ ಅಭಿವೃದ್ಧಿಗೆ 360 ಡಿಗ್ರಿ ಪ್ರಯತ್ನ ನಡೆಯುತ್ತಿದೆ. ಬಡತನದಲ್ಲಿ ಎರಡು ವಿಧಗಳಿವೆ ಎನ್ನುತ್ತಾರೆ ಜರೀನಾ, ಒಂದು ಮಾನಸಿಕವಾದದ್ದು, ಇನ್ನೊಂದು ಭೌತಿಕವಾದದ್ದು. ಜನರನ್ನು ಸಬಲೀಕರಗೊಳಿಸಿದ್ರೆ, ಅವರ ಮನಸ್ಥಿತಿ ಬದಲಾದ್ರೆ ಮೊದಲನೆಯದನ್ನು ನಿವಾರಿಸಬಹುದು. ಜನರಲ್ಲಿ ಕನಸು ಕಾಣುವ ಮನಸ್ಥಿತಿ ಬೆಳೆಸಿದ್ರೆ ಇದು ಸಾಧ್ಯ. ಜನರ ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಹಂತಗಳಲ್ಲಿ ನೆರವಾದಲ್ಲಿ ಮಾತ್ರ 360 ಡಿಗ್ರಿ ಪ್ರಯತ್ನ ಸಾಧ್ಯ ಅನ್ನೋದು ಅವರ ಅಭಿಪ್ರಾಯ.

ಯಾವುದಾದರೂ ಒಂದು ವಿಚಾರದ ಬಗ್ಗೆ ಗಮನಹರಿಸುವಂತೆ ಹಲವರು ಸೂಚಿಸಿದ್ರು, ಆದ್ರೆ ಹಲವು ವರ್ಷಗಳ ಅಧ್ಯಯನ ಮತ್ತು ಜನರ ಸಮಸ್ಯೆಯ ಸಂಪೂರ್ಣ ವಿವರವನ್ನು ಅರಿತ ಬಳಿಕ ಇದಕ್ಕೆ ಸಮಗ್ರ ವಿಧಾನದ ಅಗತ್ಯವಿದೆ ಎಂಬುದು ಅರಿವಾಯ್ತು ಎನ್ನುತ್ತಾರೆ ಜರೀನಾ. ಸ್ವದೇಸ್ ಫೌಂಡೇಶನ್ ತಂಡ 1600 ಸದಸ್ಯರನ್ನು ಹೊಂದಿದೆ, 1300ಕ್ಕೂ ಹೆಚ್ಚು ಸ್ವಯಂ ಸೇವಕರು ಸಾಥ್ ಕೊಡ್ತಿದ್ದಾರೆ. 300ಕ್ಕೂ ಹೆಚ್ಚು ಫುಲ್‍ಟೈಮ್ ಸ್ಪೆಷಲಿಸ್ಟ್‍ಗಳು ಕೂಡ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ರಾಯಘಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹೊಣೆಗಾರಿಕೆ ಸ್ವದೇಸ್‍ನ ಅವಿಭಾಜ್ಯ ಅಂಗ. ಸ್ವದೇಸ್ ನಡೆಸುವ ಎಲ್ಲ ಕಾರ್ಯಗಳಲ್ಲಿ ಜನರು ಕೂಡ ಪಾಲ್ಗೊಳ್ಳುತ್ತಾರೆ. ಉದಾಹರಣೆಗೆ ಟಾಯ್ಲೆಟ್‍ಗಳ ನಿರ್ಮಾಣ ಮಾಡಲಾಗ್ತಿದೆ ಎಂದಾದಲ್ಲಿ ಸಾರ್ವಜನಿಕರು ಕೂಡ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುತ್ತಾರೆ. ಅಲ್ಪ ಕೊಡುಗೆ ಕೂಡ ಮಹತ್ವ ಪಡೆದುಕೊಳ್ಳುತ್ತದೆ, ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತದೆ.

image


ಪರಿಣಾಮದ ಅಳತೆ...

ಜರೀನಾ ಅವರ ಪ್ರಕಾರ ಪರಿಣಾಮವನ್ನು ಅಳೆಯುವುದೇ ಬಹುದೊಡ್ಡ ಸವಾಲು. ಪ್ರಿನ್ಸಿಪಾಲ್ ಮತ್ತು ಶಿಕ್ಷಕರ ತರಬೇತಿ ಕಾರ್ಯಕ್ರಮದ ಮೂಲಕ 6,175 ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಟ್ರೇನಿಂಗ್ ನೀಡಲಾಗಿದೆ. ಇದರ ಪರಿಣಾಮ 85,324 ಮಕ್ಕಳ ಮೇಲಾಗಿದೆ. ಮುಂದಿನ 3 ವರ್ಷಗಳಲ್ಲಿ 200000 ಮಕ್ಕಳಿಗೆ ಪ್ರಯೋಜನವಾಗುವಂತೆ 12,500 ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ತರಬೇತಿ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ. ಅದೇನೇ ಆದ್ರೂ ಎಲ್ಲವನ್ನೂ ತಕ್ಷಣಕ್ಕೆ ಅಳೆಯಲು ಸಾಧ್ಯವಿಲ್ಲ, ಕೆಲವು ಯೋಜನೆಗಳು ಫಲ ಕೊಡಲು ಸಮಯ ತೆಗೆದುಕೊಳ್ಳುತ್ತವೆ. ``ನಾವೊಂದು ವ್ಯತ್ಯಾಸ ಮತ್ತು ಮೂಲಭೂತ ಬದಲಾವಣೆಗಳನ್ನು ಮಾಡಲು ಇಲ್ಲಿದ್ದೇವೆ. ಅದ್ಭುತ ತಂಡ ಇದಕ್ಕಾಗಿ ನಮ್ಮೊಂದಿಗೆ ಶ್ರಮಿಸುತ್ತಿದೆ. ನಮ್ಮ ಮೇಲೆ ನಮಗೆ ನಂಬಿಕೆಯಿದೆ, ನಾವು ಮಾಡುವ ಕಾರ್ಯ ಪರಿಣಾಮ ಉಂಟು ಮಾಡಲಿದೆ ಅನ್ನೋ ವಿಶ್ವಾಸವಿದೆ'' ಅಂತಾ ಜರೀನಾ ಹೇಳ್ತಾರೆ.

ಮಹತ್ವದ ಕಲಿಕೆ...

ಜರೀನಾ, ರೋನಿ ಅವರ ಜೊತೆಗೂಡಿ 1990ರಲ್ಲಿ ಯುಟಿವಿ ಆರಂಭಿಸಿದ್ರು. ಕಂಪನಿ ಚೆನ್ನಾಗಿ ಕಾರ್ಯನಿರ್ವಹಿಸುತ್ತಿತ್ತು, ಬಳಿಕ ಅದನ್ನು `ದಿ ವಾಲ್ಟ್ ಡಿಸ್ನಿ ಕಂಪನಿ' ಸ್ವಾಧೀನಪಡಿಸಿಕೊಂಡಿದೆ. ಒಂದು ದಶಕದ ಕಾಲ ಯುಟಿವಿ ಮೂಲಕ ಅಪಾರ ಅನುಭವ ಗಳಿಸಿದ ಜರೀನಾ 2011ರಲ್ಲಿ ಸಂಸ್ಥೆಯನ್ನು ತ್ಯಜಿಸಿದ್ರು. ಅಲ್ಲಿ ಕಲಿತಿದ್ದು ಸ್ವದೇಸ್ ಫೌಂಡೇಶನ್ ಸ್ಥಾಪನೆಗೆ ನೆರವಾಯ್ತು ಎನ್ನುತ್ತಾರೆ ಅವರು.

ಸಮುದಾಯವನ್ನು ಪ್ರೀತಿಸಿ, ಗೌರವಿಸಿ: ನಿಮ್ಮ ಸಮುದಾಯವನ್ನು ನೀವು ಪ್ರೀತಿಸಬೇಕು, ಪ್ರತಿನಿಧಿಸಬೇಕು. ಅದರ ಬಗ್ಗೆ ಚೆನ್ನಾಗಿ ತಿಳಿದಿರಬೇಕು. ಸಮುದಾಯದವರೊಂದಿಗೆ ಹೆಚ್ಚಿನ ಸಮಯ ವ್ಯಯಿಸಬೇಕು.

ಗುಣಮಟ್ಟವನ್ನು ಕಾಯ್ದುಕೊಳ್ಳಿ: ನೀವು ನೀವಾಗಿಯೇ ಇರಿ. ನಿಮ್ಮ ಸಂಗಾತಿ, ಸಿಬ್ಬಂದಿ, ಸಮುದಾಯ ಎಲ್ಲರ ನಡುವೆ ಸ್ಟ್ಯಾಂಡರ್ಡ್ ಕಾಪಾಡಿಕೊಳ್ಳಿ. ಎಲ್ಲರನ್ನೂ ಜವಾಬ್ಧಾರಿಯುತರನ್ನಾಗಿ ಮಾಡಿ, ಎಲ್ಲರೂ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ ಮತ್ತು ಸಮಯಕ್ಕೆ ಸರಿಯಾಗಿ ಫಲಿತಾಂಶ ಸಿಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸಹಯೋಗ: ಸಹಯೋಗಕ್ಕೆ ಮತ್ತೊಂದು ಹೆಸರೇ ಮಾಧ್ಯಮ. ಸೇಲ್ಸ್, ಕ್ಯಾಮರಾ, ಎಡಿಟ್ ಹೀಗೆ ಎಲ್ಲಾ ತಂಡಗಳು ಅಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಾರೆ. ಅದೇ ರೀತಿ ಸಮುದಾಯದಲ್ಲಿ ಕೂಡ ಸಿಬ್ಬಂದಿ ಮತ್ತು ಪಾಲುದಾರರು ಪರಿಣಾಮ ಸೃಷ್ಟಿಸಲು ಒಟ್ಟಾಗಿ ಕಾರ್ಯನಿರ್ವಹಿಸಬೇಕು.

ಸ್ಟಾರ್ಟ್‍ಅಪ್‍ಗಳು...

ಸ್ಟಾರ್ಟ್‍ಅಪ್ ಅನ್ನೋ ಶಬ್ಧವೇ ಜನರಿಗೆ ಗೊತ್ತಿಲ್ಲದಂತಹ ಸಮಯದಲ್ಲಿ ನಾವು ಕಾರ್ಯಾರಂಭ ಮಾಡಿದ್ದೆವು. ಈಗ ಇಡೀ ವಿಶ್ವ ಸ್ಟಾರ್ಟ್‍ಅಪ್‍ಗಳ ಕಡೆಗೆ ಆಕರ್ಷಿತವಾಗುತ್ತಿದೆ. ಸ್ಟಾರ್ಟ್‍ಅಪ್‍ಗಳು ಸಮಸ್ಯೆ ಪರಿಹರಿಸುತ್ತಿವೆ, ಪರಿಹಾರ ಒದಗಿಸುತ್ತಿವೆ, ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. ಈ ಮೂಲಕ ದೇಶದ ಬಡತನ ನಿರ್ಮೂಲನೆಗೆ ಶ್ರಮಿಸುತ್ತಿವೆ.

ಮಹಿಳೆ...

ಜರೀನಾ ಎಚ್ಚರಿಕೆ ಮತ್ತು ಆಶಾವಾದ ಹೊಂದಿರುವ ಮಹಿಳೆ, ಸಿನಿಕತೆಯಲ್ಲಿ ಅವರು ಪಾಲ್ಗೊಳ್ಳುವುದಿಲ್ಲ. ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆ ಮತ್ತು ಸುರಕ್ಷತೆ ಬಗ್ಗೆ ಮಾತನಾಡಿದ ಅವರು, ಈಗ ಸಮಯ ಬದಲಾಗಿದೆ, ಮಹಿಳೆ ಧೈರ್ಯವಾಗಿ ದೂರು ದಾಖಲಿಸಬಹುದು. ಆಕೆಗೆ ಕುಟುಂಬದವರ ಬೆಂಬಲ ಕೂಡ ಸಿಗುತ್ತಿದೆ ಎನ್ನುತ್ತಾರೆ. ನಾವು ಮುಂದಡಿ ಇಡಬೇಕು, ನಮ್ಮ ಸುತ್ತ ಆಗುತ್ತಿರುವ ನಿರಂತರ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು ಎನ್ನುತ್ತಾರೆ. ಪುರುಷರ ಹಕ್ಕುಗಳ ಬಗ್ಗೆ ಕೂಡ ಗಮನಹರಿಸಬೇಕು, ಕಾನೂನು ವ್ಯವಸ್ಥೆ ಪುರುಷರ ಪಾಲಿಗೆ ಅತ್ಯಂತ ಕಠಿಣವಾಗಿದೆ.

ವಿನೋದ ಅತ್ಯಂತ ಅಗತ್ಯ...

50ರ ಹರೆಯದಲ್ಲೂ ಅವರು ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ. ಕಳೆದ 9 ವರ್ಷಗಳಿಂದ ಅವರು ವಿಪಾಸನಾ ಎಂಬ ಧ್ಯಾನ ಮಾದರಿಯನ್ನು ಅಭ್ಯಾಸ ಮಾಡಿದ್ದರು. ಇದು ಅತ್ಯಂತ ಪರಿವರ್ತಕ. ``ಎಷ್ಟಾಗುತ್ತೋ ಅಷ್ಟು ಎಂಜಾಯ್ ಮಾಡಿ, ಸದಾ ನಗುತ್ತಲೇ ಇರಿ. ಇಲ್ಲವಾದಲ್ಲಿ ನೀವು ಮಾಡುತ್ತಿರುವ ಕಾರ್ಯಕ್ಕೆ ಬೆಲೆಯೇ ಇಲ್ಲದಂತಾಗುತ್ತೆ'' ಎನ್ನುತ್ತಾರೆ ಜರೀನಾ.

ಲೇಖಕರು: ತನ್ವಿ ದುಬೆ

ಅನುವಾದಕರು: ಭಾರತಿ ಭಟ್

ಇದನ್ನು ಓದಿ:

1. ಸಂಗೀತ ನನಗೆ ದೇವರು ಕೊಟ್ಟ ವರ..!

2. ಹಣವಿಲ್ಲದೆ ಬೈಕ್ ಮಾರಿದ್ದ ಭಾರದ್ವಾಜ್..! ಈಗ ಎರಡು ಕಂಪನಿಗಳಿಗೆ ಒಡೆಯ..!

3. ಸಾಫ್ಟ್​​ವೇರ್ ಎಂಜಿನಿಯರ್ ಕೈಯಲ್ಲರುಳುತ್ತಿವೆ ಸುಂದರ ಆಭರಣಗಳು