ಸಿನಿಮಾ ಮೂಲಕ ಮಹಿಳೆಯರ ಸಮಸ್ಯೆಗೆ ಧ್ವನಿಯಾದ, ಸಾಮಾಜಿಕ ಕಳಕಳಿ ಮೆರೆದ 10 ದಿಗ್ಗಜರು..!

ಟೀಮ್​ ವೈ.ಎಸ್.ಕನ್ನಡ 

ಸಿನಿಮಾ ಮೂಲಕ ಮಹಿಳೆಯರ ಸಮಸ್ಯೆಗೆ ಧ್ವನಿಯಾದ, ಸಾಮಾಜಿಕ ಕಳಕಳಿ ಮೆರೆದ 10 ದಿಗ್ಗಜರು..!

Thursday March 24, 2016,

4 min Read

ಸಿನಿಮಾ ಜನರ ಪಾಲಿಗೆ ಮನರಂಜನೆ. ಆದ್ರೆ ಭಾರತದಲ್ಲಿ ಅದೆಷ್ಟೋ ಶ್ರೇಷ್ಠ ನಿರ್ದೇಶಕರು ದೃಶ್ಯ ಮಾಧ್ಯಮವನ್ನು ಕಲೆಯಾಗಿ ಮಾರ್ಪಡಿಸಿದ್ದಾರೆ. ಮನುಷ್ಯನ ಸ್ವಭಾವನ್ನು ಆಳವಾಗಿ ಅರಿಯಲು, ಅಂತರ್ವ್ಯಕ್ತೀಯ ಸಂಬಂಧಗಳ ಸೂಕ್ಷ್ಮ ವ್ಯತ್ಯಾಸಗಳನ್ನು ತುಂಡರಿಸಲು ತಮ್ಮ ಸಿನಿಮಾವನ್ನು ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಿನಿಮಾಗಳ ಮೂಲಕವೇ ಸಾಮಾಜಿಕ ಮತ್ತು ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗಿರುವುದು ವಿಶೇಷ. ಬುದ್ಧಿಜೀವಿಗಳಿಂದ ಹಿಡಿದು ಶ್ರೀಸಾಮಾನ್ಯರ ವರೆಗೆ ಪ್ರತಿಯೊಬ್ಬರನ್ನೂ ಚಿಂತನೆಗೆ ಹಚ್ಚುವಂತಹ ಕಥೆ ಮತ್ತು ಕಣ್ಸೆಳೆಯುವ ಛಾಯಾಗ್ರಹಣವನ್ನು ಎಲ್ಲರೂ ಕುಳಿತು ನೋಡುತ್ತಾರೆ. ತಮ್ಮ ಅದ್ಭುತ ಚಿತ್ರಗಳ ಮೂಲಕ ದೇಶಕ್ಕೆ ಹೆಮ್ಮೆ ತಂದ 10 ನಿರ್ದೇಶಕರ ಬಗ್ಗೆ ತಿಳಿದುಕೊಳ್ಳೋಣ.

image


ಸತ್ಯಜಿತ್ ರೇ

ಭಾರತೀಯ ಚಿತ್ರರಂಗವನ್ನು ಉತ್ತುಂಗಕ್ಕೆ ಕೊಂಡೊಯ್ದವರು ಸತ್ಯಜಿತ್ ರೇ. ಅವರ ಜೀವಮಾನ ಶ್ರೇಷ್ಠ ಸಾಧನೆಗಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಕೂಡ ಒಲಿದಿದೆ. 1992ರಲ್ಲಿ ಸತ್ಯಜಿತ್ ರೇ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು, ಆ ಸಂದರ್ಭದಲ್ಲಿ ಅವರಿಗೆ ಆಸ್ಕರ್ ಪ್ರದಾನ ಮಾಡಲಾಗಿದೆ. ಅವರೊಬ್ಬ ಬರಹಗಾರ ಹಾಗೂ ಸರ್ವಶ್ರೇಷ್ಠ ಚಿತ್ರಕಾರ. ಅವರಲ್ಲಿದ್ದ ಚಲನಚಿತ್ರ ಕೌಶಲ್ಯಕ್ಕೆ ಒರೆ ಹಿಡಿದಿದ್ದು ಬಂಗಾಳಿ ಸಿನಿಮಾ `ಪಥೇರ್ ಪಾಂಚಾಲಿ'. ಬಂಗಾಳದ ಗ್ರಾಮೀಣ ಪರಿಸರದ ಸೌಂದರ್ಯವನ್ನು ಸತ್ಯಜಿತ್ ರೇ ಅದ್ಭುತವಾಗಿ ಕಟ್ಟಿಕೊಟ್ಟಿದ್ರು. ಬಡತನದ ದುರಂತ ಸತ್ಯವನ್ನು ಬಿಂಬಿಸುವ, ಬಾಲ್ಯದ ಬದುಕನ್ನು ತೆರೆದಿಡುವ ದುರ್ಗಾ ಮತ್ತು ಅಪು ಪಾತ್ರಗಳು ಎಲ್ಲರ ಮನಸ್ಸಿನಲ್ಲೂ ಅಚ್ಚಳಿಯದೆ ಉಳಿದಿವೆ. ದೇವಿ, ಮಹಾನಗರ್, ಚಾರುಲತಾ ಸೇರಿದಂತೆ ಹಲವು ಚಿತ್ರಗಳು ಸತ್ಯಜಿತ್ ರೇ ಅವರ ಕಲಾ ಕೌಶಲ್ಯಕ್ಕೆ ಹಿಡಿದ ಕನ್ನಡಿಯಂತಿವೆ.

ಬಿಮಲ್ ರಾಯ್

ಬಿಮಲ್ ರಾಯ್, ಸಾಮಾಜಿಕ ಸಮಸ್ಯೆಗಳನ್ನು ತೆರೆದಿಡುವ ವಾಸ್ತವಿಕ ಚಿತ್ರಗಳ ಪ್ರವರ್ತಕರು. `ದೋ ಭೀಗಾ ಝಮೀನ್' ಸಿನಿಮಾದಲ್ಲಿ ಬಡ ರೈತರ ಹೋರಾಟ, ಭೀಕರ ಕ್ಷಾಮದಲ್ಲಿ ತಮ್ಮ ಬೂಮಿಯನ್ನು ಉಳಿಸಿಕೊಳ್ಳಲು ಆ ಕುಟುಂಬ ಹೋರಾಡುವ ಪರಿಯನ್ನು ನೈಜವಾಗಿ ಕಟ್ಟಿಕೊಟ್ಟಿದ್ದಾರೆ. 60 ವರ್ಷಗಳ ಹಿಂದೆಯೇ ನಿರ್ಮಾಣವಾದ ಈ ಚಿತ್ರ, ರೈತರ ಇವತ್ತಿನ ಸ್ಥಿತಿಯನ್ನೂ ಪ್ರತಿಬಿಂಬಿಸುತ್ತದೆ.

ಕೇತನ್ ಮೆಹ್ತಾ

ಆಸಕ್ತಿದಾಯಕ ಸಿನಿಮಾ ಭಂಡಾರವನ್ನು ಹೊಂದಿದ್ದರೂ ಕೇತನ್ ಮೆಹ್ತಾರ `ಮಿರ್ಚ್ ಮಸಲಾ' ಚಿತ್ರ ದಬ್ಬಾಳಿಕೆ ಮತ್ತು ಶೋಷಣೆಯ ವಿರುದ್ಧ ಧ್ವನಿ ಎತ್ತಿದೆ. ತುಳಿತಕ್ಕೊಳಗಾದವರು ತಿರುಗಿಬಿದ್ರೆ ಹೇಗೆ ಅಭಿವೃದ್ಧಿ ಹೊಂದಬಹುದು ಅನ್ನೋದನ್ನು ಬಿಚ್ಚಿಟ್ಟಿದೆ. ಸ್ಮಿತಾ ಪಾಟೀಲ್ ಮತ್ತು ನಾಸಿರುದ್ದೀನ್ ಶಾ ಅವರ ಅಮೋಘ ಅಭಿನಯವನ್ನು ಮೆಚ್ಚದವರೇ ಇಲ್ಲ. ಸಾಮಾಜಿಕ ಅಸಮಾನತೆ, ಸ್ತ್ರೀವಾದ ಮತ್ತು ಸ್ತ್ರೀಶಕ್ತಿಯನ್ನು ಬಿಂಬಿಸುವ ಈ ಸಿನಿಮಾಕ್ಕೆ ಸಾಂಪ್ರದಾಯಿಕ ಅಂತ್ಯವನ್ನೂ ಕೊಡಲಾಗಿದೆ.

ಶ್ಯಾಮ್ ಬೆನಗಲ್

ಭಾರತೀಯ ಸಿನಿಮಾ ರಂಗಕ್ಕೆ ಶ್ಯಾಮ್ ಬೆನಗಲ್ ಅವರ ಕೊಡುಗೆ ಅಪಾರ. 2005ರಲ್ಲಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸತ್ಯಜಿತ್ ರೇ ಅವರಂತೆ ಶ್ಯಾಮ್ ಬೆನಗಲ್ ಕೂಡ ಜಾಹೀರಾತಿನ ಮೂಲಕ ವೃತ್ತಿ ಬದುಕು ಆರಂಭಿಸಿದವರು. ಅವರ ಮೊದಲ ಚಿತ್ರ ಆಂಧ್ರಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಊಳಿಗಮಾನ್ಯ ಪದ್ಧತಿ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆಯ ಕುರಿತಾಗಿತ್ತು. ಮಂಥನ್ ಸಿನಿಮಾ ಗುಜರಾತ್ನ ಡೈರಿ ಉದ್ಯಮದ ವಿರುದ್ಧ ಸಂದೇಶ ಸಾರುವುದರ ಜೊತೆಗೆ ಗ್ರಾಮೀಣ ಸಬಲೀಕರಣಕ್ಕೂ ಒತ್ತು ನೀಡಿದೆ. ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ ಅಥವಾ ಅಮೂಲ್ ಹುಟ್ಟಿಗೆ ಕಾರಣವಾದ ಚಿತ್ರ ಇದು. ಗುಜರಾತ್ನ ಪ್ರತಿ ರೈತರು ತಲಾ 2 ರೂಪಾಯಿ ನೀಡುವ ಮೂಲಕ ಮಂಥನ್ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರೀ ಯಶಸ್ಸು ಗಳಿಸಿತ್ತು.

ಗೋವಿಂದ್ ನಿಹ್ಲಾನಿ

ಗೋವಿಂದ್ ನಿಹ್ಲಾನಿ ಅವರು ಜನಿಸಿದ್ದು ಪಾಕಿಸ್ತಾನದ ಕರಾಚಿಯಲ್ಲಿ. ಭಾರತ-ಪಾಕ್ ಇಬ್ಭಾಗವಾದ ಸಂದರ್ಭದಲ್ಲಿ ಅವರ ಕುಟುಂಬ ಭಾರತಕ್ಕೆ ವಲಸೆ ಬಂದಿತ್ತು. ಗೋವಿಂದ್ ನಿಹ್ಲಾನಿ ನಿರ್ದೇಶನದ ಮೊದಲ ಚಿತ್ರ `ಆಕ್ರೋಶ್'. ಇದರ ಬೆನ್ನಲ್ಲೇ `ಅರ್ಧ್ ಸತ್ಯ', `ತಮಸ್' ಕೂಡ ಅದ್ಭುತವಾಗಿ ಮೂಡಿಬಂದ್ವು. ಇವುಗಳಲ್ಲಿ ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ಹಿಂಸಾತ್ಮಕ ಹೋರಾಟವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಈ ಕಥೆಯ ನಾಯಕ ಹಿರಿಯ ನಟ ಓಂಪುರಿ. ಸಿನಿಮಾಗಳ ಮೂಲಕವೇ ಮಾತನಾಡುವುದು ಅವರ ವೈಶಿಷ್ಟ್ಯ. ನಾಯಕ ಕೊನೆಯಲ್ಲಿ ಕಾಮುಕರಿಂದ ಕಾಪಾಡಲು ತನ್ನ ತಂಗಿಯನ್ನೇ ಕೊಲ್ಲುತ್ತಾನೆ. ಹತಾಶೆ, ಕ್ರೋಧ ಮತ್ತು ದುಃಖದಿಂದ ಆಗಸೆದೆಡೆಗೆ ಮುಖಮಾಡುತ್ತಾನೆ. ಈ ದೃಶ್ಯದೊಂದಿಗೆ ಸಿನಿಮಾ ಅಂತ್ಯಗೊಳ್ಳುತ್ತದೆ.

ಬುದ್ಧದೇವ್ ದಾಸ್​ಗುಪ್ತಾ

ಬುದ್ಧದೇವ್ ದಾಸ್​ಗುಪ್ತಾ ಅವರೊಬ್ಬ ಕವಿ. ಅವರ ಸಿನಿಮಾದಲ್ಲಿ ಸಾಹಿತ್ಯಕ್ಕೆ ವಿಶೇಷ ಮಹತ್ವವಿದೆ. `ಭಾಗ್ ಬಹಾದುರ್' ಚಿತ್ರದಲ್ಲಿ ವ್ಯಕ್ತಿಯೊಬ್ಬ ತನ್ನನ್ನು ತಾನು ಹುಲಿಯಂತೆ ಚಿತ್ರಿಸಿಕೊಳ್ಳುತ್ತಾನೆ. ಬಂಗಾಳದ ಹಳ್ಳಿಯೊಂದರಲ್ಲಿ ನರ್ತಿಸುತ್ತಾನೆ. ಇನ್ನು `ತಹದೇರ್ ಕಥಾ' ಸ್ವಾತಂತ್ರ್ಯ ಹೋರಾಟಗಾರನ ಕುರಿತಾದದ್ದು. ವರ್ಷಗಳ ನಂತರ ಆದರ್ಶಾತ್ಮಕ ಕನಸುಗಳೆಲ್ಲ ಸುದೀರ್ಘ ಜೈಲುವಾಸದಲ್ಲಿ ನುಚ್ಚುನೂರಾಗುವು ಕಠು ಸತ್ಯವನ್ನು ಅರ್ಥಮಾಡಿಕೊಳ್ಳುವುದು ಆತನಿಗೆ ಅಸಾಧ್ಯವೆನಿಸುತ್ತದೆ.

ಇದನ್ನೂ ಓದಿ...

ಆದಾಯದಲ್ಲೂ ಬಿಎಂಟಿಸಿಗೆ ಅಗ್ರಸ್ಥಾನ

ರಿತ್ವಿಕ್ ಘಾತಕ್

ಇವರು ಬಂಗಾಳಿ ಸಿನಿಮಾದ ಮತ್ತೊಬ್ಬ ಶ್ರೇಷ್ಠ ನಿರ್ದೇಶಕರು. ನಿರಾಶ್ರಿತರ ಸಂಕಷ್ಟ ಮತ್ತು ಇಬ್ಭಾಗದ ಬಗ್ಗೆ ತಮ್ಮ ಚಿತ್ರಗಳ ಮೂಲಕ ಗಮನಸೆಳೆದಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬಂಗಾಳ ಇಬ್ಭಾಗವಾದಾಗ ಅವರು ಅನುಭವಿಸಿದ ಮಾನಸಿಕ ತೊಳಲಾಟ, ಮನೆಯನ್ನೇ ಬುಡಮೇಲು ಮಾಡಿದಾಗ ಆಗುವ ನೋವನ್ನು ತೆರೆದಿಟ್ಟಿದ್ದಾರೆ. ಸಾಯುವ ಮೊದಲು ನೋಡಲೇಬೇಕಾದ 1001 ಚಿತ್ರಗಳ ಪಟ್ಟಿಯಲ್ಲಿ ರಿತ್ವಿಕ್ ಘಾತಕ್ ಅವರ `ಮೆಘೆ ಢಾಕಾ ತಾರಾ' ಕೂಡ ಸ್ಥಾನ ಪಡೆದಿದೆ.

ದೀಪಾ ಮೆಹ್ತಾ

ಪ್ರಬಲ ಮಹಿಳೆಯರ ಕುರಿತಾದ ಸಿನಿಮಾಗಳಿಂದ್ಲೇ ಹೆಸರು ಮಾಡಿದವರು ದೀಪಾ ಮೆಹ್ತಾ. ಅದರಲ್ಲೂ `ಬೆಂಕಿ, ಭೂಮಿ ಮತ್ತು ನೀರು' ಟ್ರಯಾಲಜಿ ಮೆಚ್ಚುಗೆ ಗಳಿಸಿದೆ. ಅಸಂತೋಷದ ಮದುವೆಗಳು, ಪಿತೃಪ್ರಭುತ್ವದ ಸಮಾಜದಲ್ಲಿ ಸಲಿಂಗಕಾಮ ಮುಂತಾದ ವಿಷಗಳನ್ನು ಬೆಂಕಿ ಪ್ರತಿಬಿಂಬಿಸಿದೆ. ಭೂಮಿ, ಭಾರತ ವಿಭಜನೆ ಹಿನ್ನೆಲೆಯಲ್ಲಿ ನಡೆದ ಕೋಮು ಕಲಹ ಮತ್ತು ಪಾಕಿಸ್ತಾನ ರಚನೆಯ ಘಟನಾವಳಿಗಳನ್ನು ಚಿತ್ರಿಸಿದೆ. ಆತ್ಮಹತ್ಯೆ, ಸ್ತ್ರೀದ್ವೇಷ, ಗ್ರಾಮೀಣ ಭಾರತದಲ್ಲಿ ವಿಧವೆಯರನ್ನು ಕೆಟ್ಟದಾಗಿ ಉಪಚರಿಸುತ್ತಿರುವ ಬಗ್ಗೆ ನೀರು ವಿವರಿಸುತ್ತದೆ.

ಅಪರ್ಣಾ ಸೇನ್

ಅಪರ್ಣಾ ಸೇನ್ ಅವರ ಸಿನಿಮಾದ ಜೀವಾಳ ಸ್ತ್ರೀ ಪಾತ್ರಗಳು. ಅವರ `36 ಚೌರಂಗಿ ಲಾನೆ' ಸಿನಿಮಾದಲ್ಲಿ ವಯಸ್ಸಾದ ಮಹಿಳೆಯ ಒಂಟಿತನವನ್ನು ಯಥಾವತ್ತಾಗಿ ಚಿತ್ರಿಸಲಾಗಿದೆ. ಸತಿ ಸಿನಿಮಾ ಮೂಢನಂಬಿಕೆ ಮತ್ತು ಲಿಂಗ ಸಮಸ್ಯೆಗಳನ್ನು ಸಮಾಜದ ಮುಂದಿಟ್ಟಿದೆ. Paromitar Ek Din ಸಿನಿಮಾದಲ್ಲಿ ಮದುವೆ ಮುರಿದುಬಿದ್ದ ಬಳಿಕವೂ ಅತ್ತೆಯೊಂದಿಕೆ ಸೊಸೆಯ ಅನುಬಂಧವನ್ನು ಮನಸ್ಸಿಗೆ ನಾಟುವಂತೆ ತೋರಿಸಲಾಗಿದೆ. `ಮಿಸ್ಟರ್ & ಮಿಸೆಸ್ ಅಯ್ಯರ್' ಇದೊಂದು ಲವ್ ಸ್ಟೋರಿ. ಮಾನಸಿಕ ಅಸ್ವಸ್ಥತೆ ಮತ್ತು ಕೌಟುಂಬಿಕ ಬಂಧಗಳೇ `15 ಪಾರ್ಕ್ ಅವೆನ್ಯೂ' ಚಿತ್ರದ ಸಾರಾಂಶ.

ಅಡೂರ್ ಗೋಪಾಲಕೃಷ್ಣನ್

ಮಲಯಾಳಂನ ಖ್ಯಾತ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ 16 ರಾಷ್ಟ್ರೀಯ ಪ್ರಶಸ್ತಿ ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. 'Elipathayam' ಚಿತ್ರ ಊಳಿಗಮಾನ್ಯ ಪದ್ಧತಿ ದುರುಪಯೋಗಪಡಿಸಿಕೊಳ್ಳುವವರು ಮತ್ತು ಬಲಿಪಶುಗಳಾಗುವವರ ಬಗೆಗಿದೆ. 'Nizhalkuthu' ತಿರುವಾಂಕೂರು ರಾಜವಂಶದ ಕುರಿತಾದ ಚಿತ್ರ. ಅಲ್ಲಿ ಗಲ್ಲಿಗೇರಿಸಿದ ಕೊನೆಯ ವ್ಯಕ್ತಿ ಮುಗ್ಧನಾಗಿದ್ದ ಅನ್ನೋದನ್ನು ಸಿನಿಮಾದಲ್ಲಿ ಹೇಳಲಾಗಿದೆ. ಶಿಕ್ಷೆ ಮತ್ತು ನ್ಯಾಯ ನೈತಿಕ ತೊಡಕುಳ್ಳದ್ದಾಗಿರುತ್ತದೆ, ವಾಸ್ತವಿಕತೆ, ಛಾಯಾಗ್ರಹಣ ಇವು ಗೋಪಾಲಕೃಷ್ಣನ್ ಅವರ ಶೈಲಿ. ಸಿನಿಮಾ ಹಿಟ್ ಆಗಿ ಹಣ ಗಳಿಸಬೇಕು ಅನ್ನೋ ಕಾರಣಕ್ಕೆ ಅವರು ಕಥೆಯೊಂದಿಗೆ ರಾಜಿ ಮಾಡಿಕೊಂಡವರಲ್ಲ. ಜೊತೆಗೆ ಸಂಗೀತವೇ ಇಲ್ಲದೆ ಚಿತ್ರವೊಂದನ್ನು ಮಾಡಿರುವುದು ವಿಶೇಷ.

ಲೇಖಕರು: ಶಾರಿಕಾ ನಾಯರ್

ಅನುವಾದಕರು: ಭಾರತಿ ಭಟ್

ಇದನ್ನೂ ಓದಿ...

ಮೂರು ಬಾರಿ ಸಾಕ್ಷಾತ್ಕಾರವಾದ್ರೆ ಏನು ಮಾಡಬೇಕು? ಹ್ಯಾಟ್ರಿಕ್ ಉದ್ಯಮಿ ಪೂರ್ಣಿಮಾ ಶೆಣೈ ಅವರ ಅನುಭವದ ಕಹಾನಿ 

ಜನರಲ್ Knowledge ಅಲ್ಲ, ಜನರ Knoledge ಇಂಪಾರ್ಟೆಂಟ್.! - ಆದರ್ಶ್ ಬಸವರಾಜ್