ಮತಾಮಯಿ ಶ್ವಾನ ತಾಯಿ ಬಿಸ್ಮಿ-ಉದ್ಯಾನನಗರಿಯ ಬೀದಿ ನಾಯಿಗಳ ನಿತ್ಯ ಅನ್ನಧಾತೆ

ವಿಶ್ವಾಸ್​

ಮತಾಮಯಿ ಶ್ವಾನ ತಾಯಿ ಬಿಸ್ಮಿ-ಉದ್ಯಾನನಗರಿಯ ಬೀದಿ ನಾಯಿಗಳ ನಿತ್ಯ ಅನ್ನಧಾತೆ

Sunday March 20, 2016,

3 min Read

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮನುಷ್ಯ ಮನುಷ್ಯನಿಗೆ ಸಹಾಯ ಮಾಡಲು ಯೋಚಿಸುತ್ತಿದ್ದಾನೆ. ಸ್ವಾರ್ಥವೇ ತುಂಬಿರುವ ಮಾನವ ಸಮುದಾಯದಲ್ಲಿಯೂ ಅಲ್ಲಲ್ಲಿ ಕೆಲವು ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಗಳಿದ್ದಾರೆ. ಅಂತಹ ಅಪರೂಪದವರಲ್ಲಿ ಸಿಲಿಕಾನ್ ಸಿಟಿಯ ಬೀದಿನಾಯಿಗಳಿಗೆ ಅನ್ನದಾತೆಯಾಗಿರುವ ಬಿಸ್ಮಿಯವರೂ ಒಬ್ಬರು.

ಬೀದಿ ನಾಯಿಗಳ ಕಂಡರೆ ಮಾರುದ್ದ ದೂರ ಓಡೋರ ಮಧ್ಯೆ ಈ ಬೀದಿನಾಯಿಗಳ ಒಳಿತಿಗಾಗಿ ಹಗಲಿರುಳು ಶ್ರಮಿಸುವ ಮಮತಾಮಯಿ ಬಿಸ್ಮಿಯವರ ಮನ ತಟ್ಟುವ ಕಥೆಯಿದು. ನಮ್ಮ ರಾಜ್ಯ ರಾಜಧಾನಿ ಬೆಂಗ್ಳೂರು ಸಿಲಿಕಾನ್ ಸಿಟಿ, ಐಟಿ ಸಿಟಿ, ಉದ್ಯಾನ ನಗರಿ ಅನ್ನುವ ವಿಶೇಷತೆಗಳ ಜೊತೆ ಬೀದಿ ನಾಯಿಗಳ ನಿರ್ಭೀಡೆಯ ತಾಣ. ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗ್ತಿದೆ ಅನ್ನೋ ದೂರು ಸರ್ವೇ ಸಾಮಾನ್ಯ. ಇನ್ನೊಂದ್ ಕಡೆ ಈ ಬೀದಿ ನಾಯಿಗಳನ್ನು ಹಚಾ ಎಂದು ದೂರ ಅಟ್ಟುವವರೇ ಹೆಚ್ಚು.. ಇಂತಹವರ ಮಧ್ಯೆ ನಾಯಿಗಳಿಗೆ ಒಂದು ಹೊತ್ತು ಒಂದು ತುತ್ತು ಅನ್ನ ಉಣಿಸುವ ಮಹಾತಾಯಿ ತಮಿಳು ಮೂಲದ ಈ ಬಿಸ್ಮಿ. ಬಿಸ್ಮಿಯವರನ್ನು ಕಂಡರೆ ಬೀದಿ ಶ್ವಾನಗಳಿಗೆ ಎಲ್ಲಿಲ್ಲದ ಪ್ರೀತಿ. ಅವರು ಬಂದೆ ಕೂಡಲೇ ಶ್ವಾನಪಡೆ ಅವರ ಮುಂದೆ ಪ್ರತ್ಯಕ್ಷವಾಗುತ್ತವೆ.

image


ಬೀದಿ ನಾಯಿ ಕಂಡರೇ ಮಾರು ದೂರ ಓಡುವ ಸಿಲಿಕಾನ್ ಸಿಟಿಯ ಮಂದಿಯ ಮಧ್ಯೆ ಬೆಂಗಳೂರಿನ ವೈಟ್‍ಫೀಲ್ಡ್ ನಿವಾಸಿ ಐಟಿ ಉದ್ಯೋಗಿ ಬಿಸ್ಮಿಯ ನಾಯಿ ಪ್ರೀತಿ ನಿಜಕ್ಕೂ ಮಾದರಿ. ಪ್ರತಿನಿತ್ಯ ಬೀದಿ ನಾಯಿಗಳಿಗೆ ಆಹಾರ ತಿನ್ನಿಸುವ ಮೂಲಕ ಮೂಕ ಪ್ರಾಣಿಗಳ ಹಸಿವು ನೀಗಿಸುತ್ತಿದ್ದಾರೆ. ಶ್ವಾನಗಳ ಹಿಂಡು ಇವ್ರನ್ನ ಕಂಡ ಕೂಡಲೇ ವಾತ್ಸಲ್ಯದ ಭಾವ ಹೊತ್ತು ಓಡಿ ಬರುತ್ತವೆ. ಬಿಸ್ಮಿ ಕೊಟ್ಟ ಆಹಾರ ತಿಂದು ಅವರು ಅಲ್ಲಿಂದ ತೆರಳುವವರೆಗೂ ಕಾಯುತ್ತವೆ. ಬಳಿಕ ಅವರ ಗಾಡಿಯನ್ನೆ ಹಿಂಬಾಲಿಸೋ ಮೂಲಕ ತಮ್ಮ ಪ್ರೀತಿ ತೋರ್ಪಡಿಸುತ್ತವೆ.

ಇದನ್ನು ಓದಿ: ಗಾರ್ಡನ್​ ಸಿಟಿಯಲ್ಲಿ ಇ-ಟಾಯ್ಲೆಟ್​​ ಮ್ಯಾಜಿಕ್​​

ಈ ಬೀದಿ ನಾಯಿಗಳ ಹಸಿವು ನೀಗಿಸಲು ಬಿಸ್ಮಿ ಪ್ರತಿನಿತ್ಯ ದೊಡ್ಡ ಪಾತ್ರೆಯಲ್ಲಿ ಅಡುಗೆ ತಯಾರಿಸುತ್ತಾರೆ. ಯಾವುದೋ ಕಾರ್ಯಕ್ರಮ ಅಥವಾ ಸಮಾರಂಭಕ್ಕೆ ಸಿದ್ಧಪಡಿಸುವಂತೆ ಬಿಸ್ಮಿ ದೊಡ್ಡ ಪ್ರಮಾಣದಲ್ಲಿ ಆಹಾರ ತಯಾರಿಸುತ್ತಾರೆ. ಅನಾಥಾಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಆಹಾರ ಪದಾರ್ಥ ದಾನ ಮಾಡುವರು ಬೇಯಿಸುವಂತೆ, ಕೇವಲ ನಾಯಿಗಳಿಗಾಗಿ ಬಿಸ್ಮಿ ಮನೆಯಲ್ಲಿ ಆಹಾರ ಸಿದ್ದಪಡಿಸುತ್ತಾರೆ. ಬೆಂಗಳೂರಿನ ಬೀದಿ ನಾಯಿಗಳಿಗೆ ನಿತ್ಯ ಆಹಾರ ತಯಾರಿಸಿ ತಾವೇ ಸ್ವತ: ಕೊಂಡೊಯ್ದು ತಿನ್ನಿಸಿ ಬರುತ್ತಾರೆ. ಪ್ರತಿದಿನ 200ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ರುಚಿ ರುಚಿಯಾದ ಮಾಂಸದೂಟ ಹಾಕುತ್ತಾರೆ. ಪ್ರತಿ ತಿಂಗಳು ಸಾವಿರಾರು ರೂಪಾಯಿ ಹಣವನ್ನ ಈ ಶ್ವಾನಗಳ ಹೊಟ್ಟೆ ತುಂಬಿಸಲು ಮೀಸಲಿಡುತ್ತಾರೆ. ಈ ನಾಯಿಗಳಿಗಾಗಿ ದೊಡ್ಡ ಪಾತ್ರೆಗಳು, ತಟ್ಟೆ ಮತ್ತು ಆಹಾರವನ್ನ ಕೊಂಡೊಯ್ಯಲು ವಾಹನವನ್ನ ಕೂಡ ಬಿಸ್ಮಿ ಇಟ್ಟುಕೊಂಡಿದ್ದಾರೆ. ವೈಟ್‍ಫೀಲ್ಡ್‍ನಲ್ಲಿ ಐಟಿ ಉದ್ಯೋಗಿಯಾದ ಇವರಿಗೆ ಸಮಯ ಸಿಗುವುದೇ ವಿರಳ. ಆದರೂ ಮುಂಜಾನೆ ನಾಲ್ಕು ಗಂಟೆಗೆ ಎದ್ದು ನಾಯಿಗಳಿಗಾಗಿ ಆಹಾರ ತಯಾರು ಮಾಡುತ್ತಾರೆ. ಬೆಳಿಗ್ಗೆ ಹನ್ನೊಂದರ ತನಕ ಆಹಾರವನ್ನು ಶ್ವಾನಗಳಿಗೆ ಹಾಕಿ ಬರುತ್ತಾರೆ.

ಬಿಸ್ಮಿಯವರ ನಾಯಿ ಸೇವೆಯ ಕೆಲಸಕ್ಕೆ ಕುಟುಂಬದವರ ಬೆಂಬಲವೂ ಇದೆ. ಶ್ವಾನಗಳನ್ನು ಕಂಡರೆ ಮಿಡಿಯುವ ಇವರು ಯಾವುದೇ ಬೀದಿನಾಯಿಯ ಆರೋಗ್ಯ ಕೆಟ್ಟರೂ ಸ್ಥಳಕ್ಕೆ ಧಾವಿಸಿ ಔಷದೋಪಚಾರ ಮಾಡುತ್ತಾರೆ. ಬಿಸ್ಮಿಯವರಿಗೆ ಯಾವುದೇ ನಾಯಿಗಳನ್ನು ಕಟ್ಟಿಹಾಕಿ ಸಾಕುವ ಪದ್ಧತಿ ಬಗ್ಗೆ ವಿರೋಧವಿದೆ. ಅವರ ಸ್ನೇಹಿತರು, ಸಂಬಂಧಿಕರು, ಯಾರದ್ದೇ ಮನೆಯ ಶ್ವಾನಗಳಿಗೆ ಆರೋಗ್ಯ ಸರಿ ಇಲ್ಲವೆಂದು ತಿಳಿದರೆ ಕೂಡಲೆ ಅಲ್ಲಿ ಬಿಸ್ಮಿ ಹಾಜರಿರುತ್ತಾರೆ. ನಾಯಿಗಳಿಗಾಗೋ ಸಮಸ್ಯೆಗಳನ್ನ ಕ್ಷಣ ಮಾತ್ರದಲ್ಲಿ ಅರ್ಥೈಸಿಕೊಳ್ಳೋ ಇವ್ರು ಯಾವ ರೀತಿ ಟ್ರೀಟ್‍ಮೆಂಟ್ ಕೊಡ್ಬೇಕು ಅನ್ನೋದನ್ನ ಸಹ ಅರಿತುಕೊಂಡಿದ್ದಾರೆ. ಅಮಾಯಕ ಪ್ರಾಣಿಗಳ ರಕ್ಷಣೆಗೆಂದೆ ಇವರು ಎನಿಮಲ್ ವೆಲ್‍ಫೇರ್ ಕ್ಲಬ್ ಸ್ಥಾಪಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಒಂದು ದಿನ ಬಿಸ್ಮಿಯವ್ರ ಮನೆಯ ಬಳಿ ಬೀದಿನಾಯಿಯೊಂದು ಸೊಂಟ ಮುರಿದುಕೊಂಡು ನರಳುತ್ತಿತ್ತು. ಅದಾದ ನಂತರ ಮಾರನೇ ದಿನವೂ ಅವ್ರ ಮನೆಯ ಬಳಿಯಲ್ಲೇ ಬಿದ್ದು ಒದ್ದಾಡುತ್ತಿದ್ದ ಅದ್ರ ನರಕಯಾತನೆಗೆ ಯಾರೂ ಸ್ಪಂದಿಸಿರಲಿಲ್ಲ. ಅಂದೇ ತೀರ್ಮಾನಿಸಿದ ಬಿಸ್ಮಿ ಆ ನಾಯಿ ಊಟ ಹಾಕಿದ್ರು ಜೊತೆಗೆ ವೈದ್ಯರನ್ನ ಕರೆಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದರಂತೆ. ಮೂರ್ನಾಲ್ಕು ದಿನಗಳ ನಂತರ ಚೇತರಿಸಿಕೊಂಡ ಶ್ವಾನ ಇವ್ರನ್ನ ಪತ್ತೆಹಚ್ಚಲು ಮುಂದಾಯಿತಂತೆ. ಪ್ರತಿದಿನ ಇವ್ರ ಮನೆಯ ಬಳಿಗೆ ಬರಲು ಶುರುಮಾಡಿದ ಅದರ ಸ್ವಾಮಿ ನಿಷ್ಟೆ ಬಿಸ್ಮಿಯವರ ಮನಸಿಗೆ ನಾಟಿತ್ತು. ಅದೇ ಕ್ಷಣ ತೀರ್ಮಾನಿಸಿದ ಬಿಸ್ಮಿ ಬೀದಿನಾಯಿಗಳಿಗೆಲ್ಲಾ ಇದೇ ಪರಿಸ್ಥಿತಿ ಇರುತ್ತೆ ಅನ್ನೋದನ್ನ ಭಾವಿಸಿ ಬೀದಿಬೀದಿಗೆ ತೆರಳಿ ನಾಯಿಗಳಿಗೆ ಮಾಂಸವನ್ನೇ ತಯಾರಿಸಿ ಹಾಕುವ ಮೂಲಕ ಹೊಟ್ಟೆ ತುಂಬಿಸೋ ಕೆಲಸ ಮಾಡುತ್ತಿದ್ದಾರೆ.

image


ಗಾರ್ಡನ್ ಸಿಟಿಯಲ್ಲಿ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಬೀದಿನಾಯಿಗಳ ರಕ್ಷಣೆಗೆಂದೇ ಹಲವಾರು ಯೋಜನೆಗಳನ್ನ ಹಾಕಿಕೊಂಡು ಕಾರ್ಯನಿರ್ವಹಿಸುತ್ತಿರೋ ಇವ್ರ ಸಹೃದಯಕ್ಕೆ ವಿಶೇಷ ಅಭಿನಂದನೆ ಸಲ್ಲಿಸಲೇಬೇಕು. ಎಲೆಮರೆಯ ಕಾಯಿಯಂತೆ ಯಾವ ಪ್ರತಿಫಲದ ಆಕಾಂಕ್ಷೆಯೂ ಇಲ್ಲದೆ ಬಿಸ್ಮಿ ಬೀದಿನಾಯಿಗಳ ಸೇವೆ ಮಾಡ್ತಿದ್ದಾರೆ. ಈ ನಾಯಿಗಳು ಆರೋಗ್ಯಕರವಾಗಿರಲಿ ಎಂದು ದುಬಾರಿಯಾದರೂ ಕೋಳಿ ಮತ್ತು ಕುರಿಯ ಮಾಂಸವನ್ನೆ ಮಾರುಕಟ್ಟೆಯಿಂದ ತಂದು ತಿನಿಸುವಂತಹ ವಿಶಾಲ ಮನಸ್ಸು ಬಿಸ್ಮಿಯವರದ್ದು. ಇಂದಿನ ವ್ಯವಸ್ಥೆಯಲ್ಲಿ ಮನುಷ್ಯನ ಆಹಾರವನ್ನೇ ಮನುಷ್ಯ ಕಿತ್ತುಕೊಳ್ಳುವ ಸ್ಥಿತಿಯಿದೆ. ಇದೇ ವ್ಯವಸ್ಥೆಯಲ್ಲಿ ಬಿಸ್ಮಿಯಂತಹ ನಿರ್ಮಲ ನಿಷ್ಕಳಂಕ ಹಾಗೂ ನಿಸ್ವಾರ್ಥ ಮನಸ್ಥಿತಿಯವರು ಲಕ್ಷಕ್ಕೊಬ್ಬರು. ದಣಿವರೆಯದ ಮಮತಾಮಯಿ ಶ್ವಾನತಾಯಿ ಬಿಸ್ಮಿಯವರಿಗೆ ಯುವರ್ ಸ್ಟೋರಿ ವತಿಯಿಂದ ಹ್ಯಾಟ್ಸ್ ಆಫ್.

ಇದನ್ನು ಓದಿ:

1. ಹಳೆ ವಾಹನಗಳಿಗೆ ಹೊಸ ಲುಕ್ ನೀಡುತ್ತೆ ಈ ಸಂಸ್ಥೆ..!

2. "ಪೂನಂ ಫ್ಲೂಟ್ಸ್" - ಅದ್ಭುತ ಕಲಾವಿದ ಕುಶಲಕರ್ಮಿಯಾದ ಕಥೆ..

3. ಬೇಟಿ-ಬಚಾವೊ-ಬೇಟಿ ಪಡಾವೋ: ಪ್ರಧಾನಿ ಮೋದಿ ಕನಸಿಗೆ ಬಣ್ಣ ತುಂಬುತ್ತಿರುವ ಬನಾರಸ್ ವೈದ್ಯೆ