ಅದಿತಿ ಚೌರಾಸಿಯಾಳ ಕನಸಿನ ರೆಕ್ಕೆ ಕತ್ತರಿಸಲು ಅಲ್ಯಾರೂ ಇರಲಿಲ್ಲ...

ಆರ್​​.ಪಿ.

ಅದಿತಿ ಚೌರಾಸಿಯಾಳ ಕನಸಿನ ರೆಕ್ಕೆ ಕತ್ತರಿಸಲು ಅಲ್ಯಾರೂ ಇರಲಿಲ್ಲ...

Friday October 23, 2015,

5 min Read

“ನೀನು ಹುಡುಗಿಯಾದ ಕಾರಣ ಈ ಕೆಲಸವನ್ನು ಮಾಡಲಾರೆ ಎಂದು ಯಾರಾದ್ರೂ ಹೇಳಿದ್ರೆ, ಅದನ್ನು ಮಾಡೋವರೆಗೂ ನಾನು ವಿಶ್ರಾಂತಿ ತೆಗೆದುಕೊಳ್ಳುತ್ತಿರಲಿಲ್ಲ”, ಹೀಗೆಂದು ಹೇಳಿದ್ದು ಎಂಜಿನಿಯರ್ ಬಾಬು ಸಂಸ್ಥೆಯ ಸಹ ಸಂಸ್ಥಾಪಕಿ ಅದಿತಿ ಚೌರಾಸಿಯಾ. ವಿನ್ಯಾಸದಿಂದ ನಿರ್ವಹಣೆ ಮಾಡೋವರೆಗೂ ಎಲ್ಲ ಹಂತದಲ್ಲೂ ಐಟಿ ಸೇವೆ ಕೊಡೋ ಕಂಪನಿ ಎಂಜಿನಿಯರ್ ಬಾಬು. ಆಂಡ್ರಾಯ್ಡ್ ಮತ್ತು ಐಓಎಸ್ ಆ್ಯಪ್​​ಗಳ ಅಭಿವೃದ್ಧಿ, ಬ್ರೌಸಿಂಗ್ ತಾಣಗಳ ವಿನ್ಯಾನ ಮತ್ತು ಅಭಿವೃದ್ಧಿ ಇವರ ಕೆಲಸ.

image


ಮಹಿಳೆಯರಿಗೆ ಸಮಾಜದಲ್ಲಿ ಸ್ಥಾನವೇ ಇಲ್ಲದೇ ವರ್ಷಗಳಿಂದ ಯಾತನೆ ಅನುಭವಿಸಿದ ಖಜುರಾಹೋ ಹತ್ತಿರದ ಗಾರ್ಹಿ ಮಲೇಹರ ಎಂಬ ಸಣ್ಣ ಹಳ್ಳಿಯಲ್ಲಿ ಜನ್ಮ ತಾಳಿದ ಅದಿತಿ, ಅಲ್ಲೇ ತನ್ನ ಕನಸಿಗೆ ರೆಕ್ಕೆಪುಕ್ಕ ಕಟ್ಟಿಕೊಂಡಳು. ಅದಿತಿಯ ಅಜ್ಜಿ ಆಕೆಗೆ ಎಲ್ಲ ರೀತಿಯ ಪ್ರೋತ್ಸಾಹ ಕೊಟ್ಟಿದ್ದರು. ತನ್ನ ಊರಿನಿಂದ 18 ಕಿಲೋ ಮೀಟರ್ ದೂರದಲ್ಲಿರೋ ಆಂಗ್ಲ ಮಾಧ್ಯಮ ಶಾಲೆಗೆ ಓದಲು ಹೋದ ಹುಡುಗಿಯರಲ್ಲಿ ಈಕೆಯೇ ಮೊದಲು. ಆಗ ಇವಳು ಕೇವಲ 3 ವರ್ಷದ ಬಾಲಕಿ. ತನ್ನನ್ನು ವ್ಯಂಗ್ಯವಾಗಿ ನೋಡುವ ಹುಡುಗರ ಮಧ್ಯೆ ನಿತ್ಯವೂ ಆಕೆ ಲೋಕಲ್ ಬಸ್ ಹಿಡಿದು ಶಾಲೆಗೆ ಹೋಗಿ ಬರ್ತಿದ್ದಳು.

ಎಲ್ಲವೂ ಸಾಧ್ಯ

ಅದಿತಿಯ 5ನೇ ತರಗತಿಯ ಫಲಿತಾಂಶ ಆಕೆಯ ಜೀವನ ಗತಿಯನ್ನು ಬದಲಿಸಿತ್ತು. “ನನ್ನ ಸೀನಿಯರ್ ಪ್ರಥಮ ಶ್ರೇಯಾಂಕ ಪಡೆದಿದ್ದಳು. ನಾನು ಪ್ರಥಮ ವರ್ಗದಲ್ಲಿ ತೇರ್ಗಡೆಯಾಗಿದ್ದೆ. ಆ ಎರಡರ ವ್ಯತ್ಯಾಸ ನನಗೆ ತಿಳಿಯದಿದ್ದರಿಂದ ನಾನು ಆಕೆಗೆ ಅಭಿನಂದಿಸಿ, ನಾನೂ ಪ್ರಥಮ ವರ್ಗದಲ್ಲಿ ತೇರ್ಗಡೆಯಾಗಿದ್ದೇನೆ” ಎಂದೆ. ಅದಕ್ಕವಳು “ ನಾನು ಪ್ರಥಮ ಶ್ರೇಯಾಂಕ, ನೀನು ಕೇವಲ ಪ್ರಥಮ ವರ್ಗ, ಅದು ಏನೇನೂ ಅಲ್ಲ” ಎಂದಳು. ಇದೇ ನನ್ನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು.

ಅಂದಿನಿಂದ ಬೇರೆಯದ್ದೇ ಕಥೆ. ಉತ್ಸಾಹ ನಿಜವಾಗಿದ್ದರೆ ಯಾರು ಏನು ಬೇಕಾದ್ರೂ ಸಾಧಿಸಬಲ್ಲರು ಎಂದು ಅದಿತಿ ನಂಬಿದ್ದಳು. ಎಲ್ಲರಲ್ಲೂ ಒಂದೇ ರೀತಿಯ ತಾಕತ್ತು ಇರುತ್ತದೆ. ಆದರೆ ಅದನ್ನು ಹುಡುಕಿ ಹೋಗಬೇಕಷ್ಟೇ ಅಂತಾಳೆ ಅದಿತಿ. ಅಂದಿನಿಂದ ಆಕೆ ಆಟ ಪಾಠಗಳಲ್ಲಿ ಅಭಿವೃದ್ಧಿಗೊಳ್ಳಲು ಹೆಚ್ಚಿನ ಶ್ರಮ ಹಾಕುತ್ತಿದ್ದಳು. “ನಾನೇನಾಗಬೇಕೆಂದು ಬಯಸಿದ್ದೆನೋ ಅದನ್ನಾಗಲು, ಬೇರೆಯವರಿಗಿಂತ ವಿಭಿನ್ನವಾಗಿ ಯಾರೂ ಮಾಡದ ಕೆಲಸ ಮಾಡಲು ನನ್ನನ್ನು ನಾನು ಬದಲಾಯಿಸಿಕೊಂಡೆ. ಕವನಗಳನ್ನು ಬರೆಯಲು ಶುರುಮಾಡಿದೆ. ನಾನು ಗಣಿತ ಮತ್ತು ಭೌತ ವಿಜ್ಞಾನದಲ್ಲಿ ವೀಕ್ ಇದ್ದುದರಿಂದ ನನ್ನ ಸುತ್ತಮುತ್ತಲಿನವರು ನಾನು ಪಿಎಂಟಿ ಪಾಸ್ ಮಾಡಲ್ಲ ಎಂದೇ ಮಾತನಾಡಿಕೊಂಡಿದ್ದರು. ಆಗಲೇ ಫಿಸಿಕ್ಸ್ ಅನ್ನು ಪ್ರೀತಿಯಿಂದ ಅಭ್ಯಾಸ ಮಾಡಿ ಅದರಲ್ಲಿ ಅತಿ ಹೆಚ್ಚು ಅಂಕ ಗಳಿಸಿದೆ”.

ಆಕಾಶಕ್ಕೆ ಏಣಿ ಹಾಕಿದೆ

ಪೈಲಟ್ ಆಗಿ ಆಕಾಶವನ್ನು ಮುಟ್ಟಬೇಕೆಂಬ ಕನಸು ಕಂಡಿದ್ದ ಅದಿತಿಯನ್ನು ಆಕೆಯ ಪೋಷಕರ ಆರ್ಥಿಕ ಸ್ಥಿತಿ ತಡೆದಿತ್ತು. ಆದ್ರೆ ಅದಿತಿ ತನ್ನ ಕನಸಿಗೆ ಬೇರೊಂದು ಆಕಾರ ಕೊಟ್ಟಳು. ಅದಿತಿ ಆರನೇ ತರಗತಿಯಲ್ಲಿದ್ದಾಗ ಆಕೆ ಕಿರಿಯ ಸಹೋದರನನ್ನು ಪಡೆದಳು. ಆತ ಬುದ್ಧಿಮಾಂದ್ಯನಾಗಿದ್ದ, ಅಲ್ಲದೇ ಆತನನ್ನು ಗುಣಪಡಿಸಲು ವೈದ್ಯರಿಗೆ ಯಾವುದೇ ಸರಿಯಾದ ಔಷಧ ಸಿಗದಿದ್ದರಿಂದ ಅದಿತಿ ಹತ್ತನೇ ತರಗತಿಗೆ ಬಂದಾಗ ಆತ ಸಾವನ್ನಪ್ಪಿದ. ಇದರಿಂದ ತೀವ್ರ ನೋವನ್ನು ಅನುಭವಿಸಿದ ಅದಿತಿ ಇತರೆ ಬುದ್ಧಿಮಾಂದ್ಯ ಮಕ್ಕಳನ್ನು ರಕ್ಷಿಸಲು ತಾನು ನರ ರೋಗ ತಜ್ಞೆಯಾಗಬೇಕೆಂದು ಒಂದೇ ಗುರಿಯನ್ನು ಇಟ್ಟುಕೊಂಡಳು. ತನ್ನ ಶಾಲೆಯನ್ನು ಮುಗಿಸಿದ ಮೇಲೆ ಆಕೆ ಸತತ ಮೂರು ವರ್ಷ ಮೆಡಿಸನ್ ಗೆ ಸೇರಲು ಪ್ರಯತ್ನಪಟ್ಟಳು. ಆದ್ರೆ ಆಕೆ ಕಡಿಮೆ ಅಂತರದಲ್ಲಿ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಳು. ಇದೇ ಬೇಸರಕ್ಕೆ ಬಿಡುವು ಪಡೆದುಕೊಳ್ಳಲು ಆಕೆ ಕವನ ಬರೆಯುವುದರತ್ತ ತನ್ನ ಗಮನ ಹರಿಸಿದಳು.

ಮತ್ತೊಂದು ಪ್ರಾರಂಭ

2009ರಲ್ಲಿ ಅದಿತಿ ಕ್ಯಾಟ್ ಎಕ್ಸಾಂ ಬರೆಯಲು ಇಂದೋರ್ ಗೆ ಬಂದಾಗ ಆಕೆಗೆ ಗೆಳೆಯ ಮಾಯಾಂಕ್ ಸಿಗುತ್ತಾನೆ. ಈಕೆಯ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡ ಮಾಯಾಂಕ್, ಹೃದಯ ನಡೆಸಿದ ದಾರಿಯಲ್ಲಿ ಮುಂದುವರಿ ಎಂದು ಸಲಹೆ ಕೊಟ್ಟ. ಆಗಲೇ ಅದಿತಿಗೆ ಹೊಸ ಕನಸುಗಳ ಆಸೆ ಹುಟ್ಟಿಕೊಂಡಿದ್ದು ಮತ್ತು ಅದನ್ನ ನನಸು ಮಾಡಿಕೊಳ್ಳುವತ್ತ ಹೆಜ್ಜೆ ಹಾಕಿದ್ದು, ಆಕೆಯ ಜೀವನದಲ್ಲಿ ಬದಲಾವಣೆಗೆ ಸಾಕ್ಷಿಯಾಯಿತು.

2010ರಲ್ಲಿ ಅದಿತಿ ವೆಂದಾಸ್ ಸರ್ವಿಸ್ ಅನ್ನೋ ಸಂಸ್ಥೆಯನ್ನು ಮತ್ತು 2013ರಲ್ಲಿ ಎಂಬಿಎ ಓದುತ್ತಿದ್ದಾಗ ತಿತ್ಲಿಯಾನ್ ಕ್ರಿಯೇಷನ್ಸ್ ಅನ್ನೋ ಸಂಸ್ಥೆಯನ್ನು ಶುರುಮಾಡಿದ್ದಳು. ಕೈಯಿಂದ ಮಾಡಿದ ವಿಶೇಷ ಕಾರ್ಡ್​ಗಳ ಮಾರಾಟ ಮೊದಮೊದಲು ಲಾಭವನ್ನೇ ತಂದುಕೊಟ್ಟಿತು. ಎಂಬಿಎ ಪದವಿ ನಂತ್ರ ತನ್ನ ಕಂಪನಿಯನ್ನು ವಿಸ್ತರಿಸೋ ಕನಸಿಗೆ ಆಕೆ ತಿಲಾಂಜಲಿ ಇಡಬೇಕಾಯಿತು. “ನಾನು ಭಾರತೀಯರ ವಿಶಿಷ್ಟ ಮನಸ್ಥಿತಿಗೆ ಬಲಿಯಾಗಬೇಕಾಯಿತು. ನಾನು ಕೆಲಸ ಮಾಡದೇ ಅಥವಾ ಮದುವೆಯಾಗದೇ ಇದ್ದರೇ ನನ್ನ ಜೀವನ ಸರಿಯಾದ ಮಾರ್ಗದಲ್ಲಿ ಇಲ್ಲವೆಂದು ಮಾತನಾಡಿಕೊಳ್ತಾರೆ. ಇದೇ ಮನಸ್ಥಿತಿಯ ನನ್ನ ಪೋಷಕರು ಕೆಲಸ ಹುಡುಕಿಕೋ ಅಥವಾ ಊರಿಗೆ ಬಂದು ನಮ್ಮ ಜೊತೆ ಇರು ಎಂದು ಒತ್ತಾಯ ಮಾಡಿದರು.” ವಿಧಿಯಿಲ್ಲದೇ ಅದಿತಿ ತಿತ್ಲಿಯಾನ್ ಕ್ರಿಯೇಷನ್ಸ್ ಅನ್ನು ಮುಚ್ಚಿ ಕೆಲಸ ಹುಡುಕಾಟ ಶುರುಮಾಡಿಕೊಂಡಳು.

ಎಂಜಿನಿಯರ್ ಬಾಬು

ಕಳೆದ ವರ್ಷದ ಆರಂಭದಲ್ಲಿ ಕೇವಲ ಇಬ್ಬರೇ ಶುರುಮಾಡಿದ ಕಂಪನಿ ಎಂಜಿನಿಯರ್ ಬಾಬು. ಅದೇ ಸಮಯಕ್ಕೆ ಅದಿತಿ ಇಂದೋರ್‍ನ ಮ್ಯಾನೇಜ್‍ಮೆಂಟ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಳು. ಆದ್ರೆ ಮದುವೆ ಮತ್ತು ಕೆಲಸದ ಬಗ್ಗೆ ಒತ್ತಾಯಕ್ಕಾಗಿ ಅದಿತಿ ತನ್ನ ಹೊಸ ಕಂಪನಿ ಬಗ್ಗೆ ಪೋಷಕರಲ್ಲಿ ಹೇಳಿಕೊಂಡಿಲ್ಲ. “ನಾನು ಸೈಲೆಂಟ್ ಆಗಿಯೇ ಈ ಬಗ್ಗೆ ಕೆಲಸ ಮಾಡ್ತಿದ್ದೆ. ಕೇವಲ ಒಂದು ವರ್ಷದಲ್ಲಿ ಇಬ್ಬರಿಂದ ಶುರುವಾದ ಕಂಪನಿ 50 ಜನ ಕೆಲಸ ಮಾಡೋ ಒಂದು ಕಂಪನಿಯಾಗಿ ಬೆಳೆದಿದೆ, ಇದನ್ನು ಶುರುಮಾಡಿದ್ದು ಒಬ್ಬಳು ಮಹಿಳೆ ಎಂದು ಹೇಳೋಕೆ ಸರಿಯಾದ ಸಮಯಕ್ಕೆ ಕಾದಿದ್ದೆ”.

ಆರಂಭದಲ್ಲಿ ಅದಿತಿ ಉಪನ್ಯಾಸಕಿಯಾಗಿ ಮುಂದುವರೆದಿದ್ದರೂ ನಂತರದ ದಿನಗಳಲ್ಲಿ ವೃತ್ತಿಯನ್ನು ತೊರೆದಳು. “ನಾವು ಜಾಗತಿಕವಾಗಿ 500ಕ್ಕೂ ಹೆಚ್ಚು ಕ್ಲೈಂಟ್‍ಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದೇವೆ. ಉದ್ಯಮಿಗಳಾಗೋ ಕನಸು ಇಟ್ಟುಕೊಂಡಿರೋರಿಗೂ ನಾವು ಸಹಾಯ ಮಾಡ್ತಿದ್ದೇವೆ. ನಾನು ಹಾಗೂ ಸಹ ಸಂಸ್ಥಾಪಕ ಮಾಯಂಕ್ ನೌಕರರ ಸಂತೋಷ ಮತ್ತು ಗ್ರಾಹಕರ ಸಂತೋಷದಲ್ಲಿ ನಂಬಿಕೆ ಇಟ್ಟುಕೊಂಡು ಕೆಲಸ ಮಾಡ್ತಿದ್ದೇವೆ”

ಜೀವಶಾಸ್ತ್ರದ ಪದವೀಧರೆಯಿಂದ ಮೆಡಿಕಲ್ ಡ್ರಾಪ್ ಔಟ್ ಆದ ಅದಿತಿ ಇತರರಿಗೆ ಕೆಲಸ ಕೊಟ್ಟು ತಾನೂ ಸಹ ಸಂತೋಷದಿಂದ ಇದ್ದಾಳೆ. ಅದಿತಿ ಪೋಷಕರಿಗೆ ಆಕೆ ಎಂಜಿನಿಯರ್ ಬಾಬು ಸಂಸ್ಥೆಯ ಸಹ ಸಂಸ್ಥಾಪಕಿ ಎಂದು ಗೊತ್ತಿಲ್ಲ. ಆದ್ರೆ ಇವತ್ತು ಈ ಕತೆಯ ಮೂಲಕ ತಮ್ಮ ಮಗಳ ಸಾಧನೆ ಬಗ್ಗೆ ಅವರು ಹೆಮ್ಮೆ ಪಡೋದ್ರಲ್ಲಿ ಸಂದೇಹವಿಲ್ಲ.

image


“ಪ್ರಾರಂಭದಲ್ಲಿ ಪ್ರತಿರಾತ್ರಿಯೂ ಕಣ್ಣೀರಿಲ್ಲದೇ ಮಲಗಿದ್ದೇ ಇಲ್ಲ. ಅದ್ರೆ ನನ್ನಲ್ಲಿದ್ದ ಭರವಸೆ ಅದನ್ನು ನಿಧಾನವಾಗಿ ಮರೆಮಾಚಿತು. ಅದಿತಿ ಇದುವರೆಗೂ ಜೀವನದಲ್ಲಿ ಕಲಿತಿದ್ದನ್ನು ತನ್ನ ಸಂಸ್ಥೆಗೆ ಧಾರೆ ಎರೆದಿದ್ದಾಳೆ. ಆರ್ಥಿಕ ಮತ್ತು ಸಂಪನ್ಮೂಲ ಸಮಸ್ಯೆ ಹಾಗೂ ಅನನುಭವವನ್ನು ಎದುರಿಸಬೇಕಾಗಿ ಬಂದ್ರೂ ಸಾಧನೆಗೆ ಇವೆಲ್ಲವೂ ಮೈಲಿಗಲ್ಲೇ ಸರಿ”.

ಸ್ಫೂರ್ತಿ

ಅದಿತಿಯ ಪಾಲಿಗೆ ಸದಾ ಸ್ಫೂರ್ತಿಯ ಚಿಲುಮೆಯಾಗಿದ್ದ ಅಜ್ಜಿಯನ್ನು ಬಿಟ್ಟರೆ, ಆಕೆಗೆ ಸ್ಫೂರ್ತಿ ನೀಡಿದ್ದು ಕ್ರಿಸ್ಟೋಫರ್ ಕೊಲಂಬಸ್ ನ ಕತೆ ಮತ್ತು ಅಬ್ದುಲ್ ಕಲಾಂ ಅವರ ವಿಂಗ್ಸ್ ಆಫ್ ಫೈರ್ ಪುಸ್ತಕ. ಪ್ರತಿಬಾರಿಯೂ ಬಿದ್ದಾಗ ಎದ್ದೇಳಲು ಮತ್ತು ಸಮಸ್ಯೆಗಳನ್ನು ಎದುರಿಸಿದಾಗ ಅದರಿಂದ ಹೊರಬರಲು ಇವು ನನಗೆ ಬಹಳ ಸಹಾಯ ಮಾಡಿದ್ದಾರೆ ಅಂತಾಳೆ ಅದಿತಿ.

ಭಾತರದಲ್ಲಿ ಮಹಿಳೆಯಾಗಿರುವುದು

ಭಾರತದಲ್ಲಿ ಹೆಚ್ಚಿನ ಮಹಿಳೆಯರು ಯೋಚಿಸೋ ಲಹರಿಗೆ ಅದಿತಿ ಪ್ರತಿಧ್ವನಿಯಾಗಿದ್ದಾಳೆ. “ಮಹಿಳೆಯೊಬ್ಬಳು ಏನಾದ್ರೂ ವಿಶೇಷವಾಗಿ ಸಾಧನೆ ಮಾಡಬೇಕೆಂದುಕೊಂಡರೆ ಆಕೆಗೆ ಹುಚ್ಚು ಹಿಡಿದಿದೆ ಅಂತಾರೆ ಅಥವಾ ಇದು ನಮಗೆ ತಕ್ಕದ್ದಲ್ಲ ಎಂದು ಮೂದಲಿಸುತ್ತಾರೆ. ಈಗ ಮದುವೆ ಮಾಡಿಕೊಂಡು ಮಕ್ಕಳನ್ನು ಹೆರುವ ಸಮಯ, ಎಲ್ಲದಕ್ಕಿಂತ ಹೆಚ್ಚಾಗಿ ಅಡುಗೆ ಮಾಡೋದನ್ನು ಕಲಿತುಕೋ. ಇಲ್ಲವೆಂದ್ರೆ ಅತ್ತೆ ಮನೆಯಲ್ಲಿ ಏನು ಮಾಡುತ್ತೀಯಾ, ಹೇಗೆ ಅಡುಗೆ ಮಾಡ್ತೀಯಾ ಅಂತಾರೆ. ಪ್ರತಿ ಹಂತದಲ್ಲೂ ಆಕೆಯ ರೆಕ್ಕೆಯನ್ನ ಕತ್ತರಿಸೋರು ಇರುತ್ತಾರೆ. ಪ್ರತಿ ಸಮಯದಲ್ಲೂ ಆಕೆ ತಾನು ಅತ್ಯುತ್ತಮವಾದುದನ್ನು ಮಾಡುತ್ತಿದ್ದೇನೆ ಎಂದು ಸಮಾಜಕ್ಕೆ ತೋರಿಸಬೇಕಿದೆ. ಇತ್ತೀಚೆಗೆ ಮಹಿಳೆಯರು ತಮ್ಮ ಹೃದಯದ ಮಾತು ಕೇಳಿ ಮುನ್ನಡೆದು ಜೀವನದಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಆದ್ರೂ ಮಹಿಳೆಯರು ಇರೋದು ಮದುವೆ ಮಾಡಿಕೊಂಡು ಮಕ್ಕಳು ಹೆರೋದಕ್ಕೆ ಅಲ್ಲ ಎಂದು ತಿಳಿದುಕೊಳ್ಳುವಷ್ಟು ನಮ್ಮ ಸಮಾಜ ಬೆಳೆದಿಲ್ಲ. ಮಹಿಳೆ ತಾನು ಮಾಡಬೇಕೆಂದು ನಿರ್ಧರಿಸೋ ಎಲ್ಲ ಕೆಲಸದಲ್ಲೂ ಯಶಸ್ಸು ಕಾಣಬಹುದು. ಪ್ರಪಂಚ ಮಹಿಳೆಯನ್ನು ನೋಡೋ ವಿಧಾನ ಬದಲಾದಲ್ಲಿ ಅಂದೇ ನನ್ನ ಜೀವನದ ಉತ್ತಮ ದಿನ”.

ಭವಿಷ್ಯದ ಬಗ್ಗೆ

ಅದಿತಿಗೆ ಪಾಶ್ಚಿಮಾತ್ಯ ಹಿಪ್ ಹಾಪ್ ಡಾನ್ಸ್ ಮತ್ತು ಹೊಸ ಜನರೊಂದಿಗೆ ಬೆರೆಯೋದು ಇಷ್ಟ. ಉದ್ಯಮಿಯಾಗಿ ತನ್ನ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಹುಡುಕೋದ್ರಲ್ಲಿ ಆಕೆ ಖುಷಿ ಕಾಣ್ತಾಳೆ. ವ್ಯಕ್ತಿಯೊಬ್ಬರು ತನ್ನ ಗ್ರಾಹಕರಾಗ್ತಾರೋ ಇಲ್ಲವೋ ಆದ್ರೆ ನನ್ನ ನಗುವಿನಿಂದ ಅವರಲ್ಲಿ ಶಾಶ್ವತ ಅನಿಸಿಕೆಯನ್ನು ಮೂಡಿಸುತ್ತೇನೆ ಅಂತಾಳೆ ಅದಿತಿ.

ಅದಿತಿ ಕಟ್ಟಿದ ಸಂಸ್ಥೆ, ಆಕೆಯ ಸುತ್ತಲೂ ಇರೋರ ಮುಖದಲ್ಲಿ ಮಂದಹಾಸ ತರಿಸುವಲ್ಲಿ ಯಶಸ್ವಿಯಾಗಿದೆ. ವಿಶ್ವಪರ್ಯಟನೆ ಮಾಡೋದು, ತನ್ನೂರಿನಲ್ಲಿ ಬಂಡವಾಳ ಹೂಡಿ ಅಜ್ಜಿಯ ಹೆಸರಲ್ಲಿ ಕಂಪನಿಯೊಂದನ್ನು ಶುರುಮಾಡೋದು, ಉತ್ತಮ ವಿದ್ಯೆ ಮತ್ತು ಉದ್ಯೋಗ ಸಂಬಂಧ ಎಲ್ಲ ಮಹಿಳೆಯರಿಗೆ ಸಹಾಯ ಮಾಡೋ ಕನಸು ಹೊತ್ತುಕೊಂಡಿದ್ದಾಳೆ ಅದಿತಿ.

ಆಕೆಯ ಕವನ ಸಂಗ್ರಹದಿಂದ ತೆಗೆದ ಈ ಸಾಲುಗಳಿಗಿಂತ ಹೆಚ್ಚಿನದ್ದೇನು ಹೇಳಲು ಸಾಧ್ಯ-

ತಾರೆಗಳ ಮಿಂಚು ಕ್ಷೀಣಿಸಿದರೂ, ಅಲ್ಲಿ ಸೊಬಗಿನ ಹುಡುಕಾಟವಿದೆ,

ಸಮಯವೂ ನನ್ನ ಹಿಂದೆ ಬಂದರ್ರೂ, ಅಲ್ಲಿ ಶಕ್ತಿಯ ಹುಡುಕಾಟವಿದೆ,

ಆಸೆಗಳ ಹೊಂಬೆಳಕು ಪ್ರಕಾಶಮಾನವಾಗಿದೆ,

ಆ ದಾರಿಗಾಗಿ ನನ್ನ ಕಣ್ಣು ಎದುರು ನೋಡುತ್ತಿದೆ,

ಅಲ್ಲಿ ಕೇವಲ ಒಂದು ದಿನದ ಹುಡುಕಾಟವಿದೆ...