ಸಂಪ್ರದಾಯ ಧಿಕ್ಕರಿಸಿ ಉದ್ಯಮಕ್ಕೆ ಧುಮುಕಿದ ಮಹಿಳೆ : ವಸ್ತ್ರ ವಿನ್ಯಾಸಕಿ ಅನಿತಾ ಡೋಂಗ್ರೆ ಯಶೋಗಾಥೆ

ಟೀಮ್​​ ವೈ.ಎಸ್​​.

ಸಂಪ್ರದಾಯ ಧಿಕ್ಕರಿಸಿ ಉದ್ಯಮಕ್ಕೆ ಧುಮುಕಿದ ಮಹಿಳೆ : ವಸ್ತ್ರ ವಿನ್ಯಾಸಕಿ ಅನಿತಾ ಡೋಂಗ್ರೆ ಯಶೋಗಾಥೆ

Tuesday November 10, 2015,

5 min Read

50 ವರ್ಷದ ಅನಿತಾ ಡೋಂಗ್ರೆಯವರ ಜೀವನಯಾನ ಬಹಳ ಆಸಕ್ತಿದಾಯಕವಾದುದು. ಸಮಾಜ ಮಹಿಳೆಯಿಂದ ಬಯಸುತ್ತಿದ್ದ ರೂಢಿಗತ ಸಾಂಪ್ರದಾಯಿಕತೆಯನ್ನು ಹೊಂದಿದ್ದ ಕುಟುಂಬದಲ್ಲಿ ಜನಿಸಿದವರು ಅನಿತಾ ಡೋಂಗ್ರೆ. ಅವರ ಸಂಬಂಧಿಕರು, ಚಿಕ್ಕಮ್ಮಂದಿರು, ಅತ್ತೆಯರು, ಸೋದರಿಯರು ಮತ್ತು ಇತರ ಮಹಿಳೆಯರು ಹೆಂಡತಿಯರು ಮತ್ತು ತಾಯಂದಿರಾಗಿರುವ ಬಗ್ಗೆ ತುಂಬಾ ಸಂತೋಷದಿಂದಿದ್ದರು. ಆದರೆ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದರೂ ಅವರು ಜೀವನದಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದರು.

ಅನಿತಾರವರ ಮಾತುಗಳಲ್ಲೇ ಹೇಳುವುದಾದರೆ “ನಾನು ಸಾಂಪ್ರದಾಯಿಕ ಸಿಂಧಿ ಕುಟುಂಬದಲ್ಲಿ ಜನಿಸಿದೆ. ನನ್ನ ಅಜ್ಜ ಅಜ್ಜಿ ಜೈಪುರ ಮೂಲದವರು. ಹಲವು ಬೇಸಿಗೆ ರಜೆಗಳನ್ನು ಜೈಪುರದಲ್ಲಿ ಕಳೆದೆ. ಅಲ್ಲಿನ ನನ್ನ ಚಿಕ್ಕಪ್ಪ ದೊಡ್ಡಪ್ಪರ ಮಕ್ಕಳೂ ಸಹ ಕಟ್ಟುನಿಟ್ಟಾದ ವಾತಾವರಣದಲ್ಲಿ ಬೆಳೆಯುತ್ತಿದ್ದುದನ್ನು ನಾನು ಗಮನಿಸಿದ್ದೆ. ನಾನು ಜನಿಸಿದ ಕೆಲ ತಿಂಗಳ ಬಳಿಕ ನನ್ನ ತಂದೆ ಮುಂಬೈಗೆ ಶಿಫ್ಟ್ ಆದರು. ಮುಂಬೈ ಒಂದು ವಿಭಿನ್ನ ಪ್ರದೇಶವಾಗಿತ್ತು. ಇಲ್ಲಿ ಮಹಿಳೆಯರು ವೃತ್ತಿಯಲ್ಲಿ ತೊಡಗಿದ್ದರು ಹಾಗೂ ಉದ್ಯಮಿಗಳೂ ಆಗಿದ್ದರು” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಅನಿತಾರ ಕುಟುಂಬದಲ್ಲಿ ಯಾವ ಮಹಿಳೆಯೂ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರಲಿಲ್ಲ. 50 ಮಂದಿಯಿದ್ದ ದೊಡ್ಡ ಕುಟುಂಬದಲ್ಲಿ ಯಾವ ಮಹಿಳೆಯೂ ಕೆಲಸಕ್ಕಾಗಿ ಹೊರಗೆ ತೆರಳುತ್ತಿರಲಿಲ್ಲ. ಹೀಗಾಗಿ ತಮ್ಮ ಇಂಟರ್ನ್‌ಶಿಪ್ ಮುಗಿದ ಬಳಿಕ ಕೆಲಸಕ್ಕೆ ಹೋಗಲು ಆರಂಭಿಸಿದ ಅನಿತಾರನ್ನು ಕಂಡು ಕುಟುಂಬಸ್ಥರಿಗೆ ಆಘಾತವಾಗಿತ್ತು. “ಎಲ್ಲರಿಗೂ ಆಘಾತವಾಗಿತ್ತು ಮತ್ತು ಕೆಲಸಕ್ಕೆ ಹೋಗದಿರುವಂತೆ ನನ್ನೊಂದಿಗೆ ಅನೇಕ ಬಾರಿ ಕುಟುಂಬಸ್ಥರು ಸಮಾಲೋಚನೆಯನ್ನೂ ಸಹ ಕುಟುಂಬಸ್ಥರು ನಡೆಸಿದರು. ಅವರ ಪ್ರಕಾರ ಅರ್ಥಿಕವಾಗಿ ಮಹಿಳೆಯೊಬ್ಬಳನ್ನು ನೋಡಿಕೊಳ್ಳಲಾಗದ ಕುಟುಂಬವಷ್ಟೇ ಮಹಿಳೆಯನ್ನು ಕೆಲಸಕ್ಕೆ ಕಳುಹಿಸುತ್ತದೆ. ಹೀಗಾಗಿ ನಾನು ಕೆಲಸಕ್ಕೆ ಸೇರುವುದನ್ನು ಮನೆಯವರೆಲ್ಲಾ ವಿರೋಧಿಸಿದರು” ಎನ್ನುತ್ತಾರೆ ಅನಿತಾ.

image


ಇದು ತುಂಬಾ ಹಳೆಯ ಕಥೆ. ಇಂದು ಅನಿತಾ ಡೋಂಗ್ರೆ ಭಾರತದ ಮುಂಚೂಣಿಯಲ್ಲಿರುವ, ಪ್ರಖ್ಯಾತ ಫ್ಯಾಶನ್ ಡಿಸೈನರ್‌ಗಳಲ್ಲಿ ಒಬ್ಬರು. ಬಹಳಷ್ಟು ಖ್ಯಾತ ಹಾಗೂ ಇನ್ನೂ ಖ್ಯಾತರಾಗದ ಅನೇಕ ಮಂದಿಯ ವಸ್ತ್ರವಿನ್ಯಾಸಕಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಹಾಗಾದರೆ ಅವರ ಉದ್ಯಮ ಯಾನ ಹೇಗಿತ್ತು? ತಿಳಿದುಕೊಳ್ಳೋಣ.

ಆರಂಭ

ಇಂದು ಪ್ರಮುಖ ವಾಣಿಜ್ಯೋದ್ಯಮಿಗಳಲ್ಲಿ ಒಬ್ಬರಾಗಿ ಬೆಳೆದಿರುವ ಅನಿತಾ ಡೋಂಗ್ರೆ, ಕುಟುಂಬದ ವಿರೋಧವನ್ನು ಸುಲಭವಾಗಿ ಎದುರಿಸಿ ಉದ್ಯಮಿಯಾಗಿ ಬೆಳೆದಿರುವವರು. ಕಿರಿಯ ವಯಸ್ಸಿನಲ್ಲೇ ಫ್ಯಾಶನ್ ಜಗತ್ತಿಗೆ ಧುಮುಕಿದವರು ಅನಿತಾ. ಬಾಲ್ಯದಿಂದಲೂ ಮನೆಯನ್ನು ವಿವಿಧ ಬಟ್ಟೆಗಳಿಂದ, ಕಸೂತಿ ಮಾಡಲ್ಪಟ್ಟ ವಸ್ತುಗಳಿಂದ ಅಲಂಕರಿಸಿ ಶೃಂಗರಿಸುವ ಮಹಿಳೆಯರ ಮಧ್ಯದಲ್ಲಿಯೇ ಬೆಳೆದಿದ್ದ ಅನಿತಾ ಫ್ಯಾಶನ್ ಜಗತ್ತಿಗೆ ಧುಮುಕಿದ್ದು ಅಷ್ಟೇನೂ ಅಚ್ಚರಿಯ ವಿಚಾರವಾಗಿರಲಿಲ್ಲ. ಅನಿತಾರ ತಾಯಿ ಪುಷ್ಪಾ ಸಾಲ್ವಾನಿ ಕೌಶಲ್ಯಹೊಂದಿದ ಕಲಾವಿದೆ. ಅನಿತಾ ಹಾಗೂ ಅವರ ಸೋದರ ಸೋದರಿಯರು ಚಿಕ್ಕವರಾಗಿದ್ದಾಗ ಅವರಿಗಾಗಿ ವಿವಿಧ ವಿನ್ಯಾಸದ ಬಟ್ಟೆಗಳನ್ನು ಅವರ ತಾಯಿ ಹೊಲಿಯುತ್ತಿದ್ದರು.

ಫ್ಯಾಶನ್ ಜಗತ್ತಿಗೆ ಕಾಲಿಡಲು ನಿರ್ಧರಿಸಿದಾಗ ಅನಿತಾ ಮುಂಬೈನ ಎಸ್ಎಸ್​​ಡಿಟಿ ವಿವಿಗೆ ಫ್ಯಾಶನ್ ವಿಚಾರವಾಗಿ ಪದವಿ ಪಡೆಯಲು ದಾಖಲಾದರು. ತಮ್ಮ 15ನೇ ವರ್ಷದಿಂದಲೇ ವಿನ್ಯಾಸಗಳು ಹಾಗೂ ಫ್ಯಾಶನ್ ಅನಿತಾರ ಆಸಕ್ತಿಯ ವಿಚಾರವಾಗಿತ್ತು. ಎನ್‌ಎಂ ಕಾಲೇಜಿನಲ್ಲಿ ಕಾಮರ್ಸ್ ಪದವಿ ಪಡೆದ ಅನಿತಾರ ಅನೇಕ ಸ್ನೇಹಿತರು ಇಂದು ಚಾರ್ಟೆಡ್ ಅಕೌಂಟೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅನಿತಾರಿಗೆ ಇದು ಪರಮ ಬೇಜಾರಿನ ಕೆಲಸ. ಫ್ಯಾಶನ್ ಮಾತ್ರ ಅವರನ್ನು ಆಕರ್ಷಿಸುತ್ತಿತ್ತು. ಹೀಗಾಗಿ ಅದೇ ಕ್ಷೇತ್ರದಲ್ಲಿ ಮುಂದುವರೆಯಲು ಅವರು ನಿರ್ಧರಿಸಿದರು.

300 ಚದರಡಿಯ ಸಣ್ಣ ಜಾಗದಲ್ಲಿ ತಮ್ಮ ಕಿರಿಯ ಸಹೋದರಿಯೊಂದಿಗೆ ಸೇರಿ ಉದ್ಯಮವನ್ನು ಆರಂಭಿಸಿದರು ಅನಿತಾ. ಕೆಲ ವರ್ಷಗಳ ಬಳಿಕ ಅವರ ಸಹೋದರ ಕೂಡ ಅವರೊಂದಿಗೆ ಸೇರಿ ಕಾರ್ಯನಿರ್ವಹಿಸಲಾರಂಭಿಸಿದರು. ಆರಂಭದ ವರ್ಷಗಳು ಬಹಳ ಕಠಿಣವಾಗಿದ್ದವು. ಕಾರ್ಯನಿರ್ವಹಿಸಲು ಸರಿಯಾದ ಸ್ಥಳಾವಕಾಶವಿಲ್ಲದ ಕಾರಣ ಅವರು ಆಗಾಗ ತಮ್ಮ ಕೆಲಸದ ಜಾಗಗಳನ್ನು ಬದಲಾಯಿಸಲೇಬೇಕಾಯಿತು. ಅನಿತಾರೇ ಹೇಳುವಂತೆ ಆರಂಭದ ವರ್ಷಗಳು ಕಷ್ಟಕರವಾಗಿದ್ದವು. ಅನೇಕ ಬಾರಿ ಉದ್ಯಮವ್ನನು ತೊರೆಯುವುದರ ಬಗ್ಗೆ ಅನೇಕ ಬಾರಿ ಚಿಂತಿಸಿದ್ದೆ. ಆದರೆ ಅವೆಲ್ಲಾ ಈಗಲೂ ನೆನಪಿನಲ್ಲುಳಿದಿದೆ. ಬೆಳಿಗ್ಗೆ ಎದ್ದ ಕೂಡಲೇ ನನ್ನ ಮೇಲೆ ನನಗೆ ಸಿಟ್ಟು ಬರುತ್ತಿತ್ತು. ಉದ್ಯಮವನ್ನು ಮುಂದುವರೆಸುವುದು ಹೇಗೆ ಎಂಬುದರ ಕುರಿತೇ ಚಿಂತಿಸುತ್ತಿದೆ.” ಎಂದು ನೆನಪಿಸಿಕೊಳ್ಳುತ್ತಾರೆ ಅನಿತಾ. ಸರಿಯಾಗಿ ಬಾಡಿಗೆಯನ್ನು ಪಾವತಿಸದ ಕಾರಣಕ್ಕೆ ಬಾಡಿಗೆ ನೀಡಿದ್ದವರು ಅವರನ್ನು ಕೆಲಸದ ಜಾಗದಿಂದ ಹೊರಹಾಕಿದ್ದನ್ನೂ ಸಹ ಅವರು ನೆನಪಿಸಿಕೊಳ್ಳುತ್ತಾರೆ.

ಮೊದಲ ಕೆಲ ವರ್ಷಗಳಲ್ಲಿ ಹಣವೇ ದೊಡ್ಡ ಸಮಸ್ಯೆಯಾಗಿತ್ತು. ಆಮೇಲೆ ಕ್ರಮೇಣ ಪರಿಸ್ಥಿತಿ ಸುಧಾರಿಸಿತು. ಉದ್ಯಮಿಯಾಗುವುದು ಎಂಥಾ ಸವಾಲಿನ ಕೆಲಸ ಎಂಬುದನ್ನು ಪ್ರತಿದಿನವೂ ಚಿಂತಿಸುತ್ತಿದ್ದರು. ಪ್ರತಿದಿನವೂ ಹೊಸ ಸವಾಲುಗಳನ್ನು ಎದುರಿಸಬೇಕಾಗಿತ್ತು. ಸಮಸ್ಯೆಗಳು ಇಂದಿಗೂ ಇವೆ. ಆದರೆ ಅವುಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬುದನ್ನು ಅನಿತಾ ಕಲಿತುಕೊಂಡಿದ್ದಾರೆ.

ಉದ್ಯಮದಲ್ಲಿಅನಿತಾರ ಚಾಕಚಕ್ಯತೆ

ಫ್ಯಾಶನ್ ಅವರ ಪ್ರೀತಿಯಾಗಿದ್ದ ವೇಳೆಯಲ್ಲಿಯೇ ಅನಿತಾ ಉದ್ಯಮದ ಕುರಿತು ಗಮನಹರಿಸಿದ್ದರು. ಅಂದ ಹಾಗೆ ಅನಿತಾರ ಸಂಸ್ಥೆಯ ಹೆಸರು ಎಎನ್‌ಡಿ ಡಿಸೈನ್ಸ್ ಇಂಡಿಯಾ ಲಿಮಿಟೆಡ್(ಎಡಿಐಎಲ್) ಮತ್ತು ಈ ಸಂಸ್ಥೆ ತನ್ನದೇ ಆದ 4 ಶಾಖೆಗಳನ್ನು ಹೊಂದಿದೆ. 1999ರಲ್ಲಿ ಪಾಶ್ಚಿಮಾತ್ಯ ಉಡುಗೆ ತೊಡುಗೆಗಳ ವಿನ್ಯಾಸದೊಂದಿಗೆ ಎಎನ್‌ಡಿ ಸಂಸ್ಥೆ ಆರಂಭವಾಯಿತು. 2007ರಲ್ಲಿ ಗ್ಲೋಬಲ್ ದೇಸಿ ಉಡುಗೆಗಳನ್ನು ಬಿಡುಗಡೆ ಮಾಡಿತು. ಈ ಸಂಸ್ಥೆ ಸಾಂಪ್ರದಾಯಿಕ ಉಡುಗೆಗಳು, ದೈನಂದಿನ ಉಡುಪುಗಳು, ಮಧುಮಗಳು ಧರಿಸುವ ವಿನ್ಯಾಸದ ವಸ್ತ್ರಗಳು ಮತ್ತು ಜೈವಿಕತೆಯ ಮೂಲಭೂತ ತತ್ವಗಳನ್ನು ಪ್ರತಿಪಾದಿಸುವ ವಸ್ತ್ರಗಳನ್ನು ಮಾರುತ್ತಿದೆ. ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವಾಗ ಅಂಕಿಅಂಶಗಳನ್ನು ಕಲೆಹಾಕುವ ಮತ್ತು ಉದ್ಯಮದ ಯೋಜನೆಗಳನ್ನು ರೂಪಿಸುತ್ತಾ ಕೂರುವಲ್ಲಿ ಅನಿತಾರಿಗೆ ನಂಬಿಕೆ ಇಲ್ಲ. ಅದಕ್ಕಾಗಿ ಅವರು ಜಾಸ್ತಿ ಸಮಯವನ್ನೂ ಮೀಸಲಾಗಿಡುವುದಿಲ್ಲ.

ತಮ್ಮ ಮನಸ್ಸಿನ ಮಾತನ್ನು ಕೇಳುತ್ತಲೇ ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳುವ ಸೂತ್ರವಾಗಿಸಿಕೊಂಡಿದ್ದಾರೆ ಅನಿತಾ. ತಾವು ಉಡುಪುಗಳನ್ನು ವಿತರಿಸುವ ಮಳಿಗೆಗಳು ತಮ್ಮ ಪಾಶ್ಚಿಮಾತ್ಯ ಮಾದರಿಯ ವಸ್ತ್ರ ವಿನ್ಯಾಸಗಳನ್ನು ಕೊಳ್ಳಲು ನಿರಾಕರಿಸಿದ್ದರಿಂದ ಅವರು ತಮ್ಮದೇ ಆದ ಬ್ರಾಂಡ್ ಒಂದನ್ನು ಸೃಷ್ಟಿಸಿದರು. 14-15 ವರ್ಷದ ಹಿಂದೆ ಅನಿತಾ ತಾವು ಬಹಳ ಇಷ್ಟಪಟ್ಟ ವಿನ್ಯಾಸಗಳ ವಸ್ತ್ರಗಳ ಸಂಗ್ರಹವೊಂದನ್ನು ನಿರ್ಮಿಸಿದರು. ವೃತ್ತಿನಿರತ ಮಹಿಳೆಯರಿಗಾಗಿ ತಯಾರಿಸಲ್ಪಟ್ಟ ವಸ್ತ್ರವಿನ್ಯಾಸ ಅದಾಗಿತ್ತು. ಆದರೆ ಅವರು ವಿತರಿಸಲು ಇಚ್ಛಿಸಿದ್ದ ಯಾವುದೇ ಮಳಿಗೆಯೂ ಅವರ ವಿನ್ಯಾಸಗಳನ್ನು ಕೊಳ್ಳಲು ಒಪ್ಪಿಕೊಳ್ಳಲಿಲ್ಲ. ಇದರಿಂದ ಅನಿತಾರಿಗೆ ಕೋಪ ಬಂದಿತ್ತು. ಅವರೇ ವಿನ್ಯಾಸಗಳನ್ನು ಮಾರಲು ತೀರ್ಮಾನಿಸಿದರು. ಹೀಗೆ ಅನಿತಾ ಡೋಂಗ್ರೆ ವಿನ್ಯಾಸಗಳು ಹುಟ್ಟಿಕೊಂಡವು.

ನನ್ನ ಉದ್ಯಮದ ಚಾಕಚಕ್ಯತೆಯ ಪ್ರಮುಖ ಅಂಶವೇ ನನಗನ್ನಿಸುವ, ಮನಸ್ಸು ಹೇಳುವ ಗಟ್ಟಿ ನಿರ್ಧಾರ ಎನ್ನುತ್ತಾರೆ ಅನಿತಾ. ಯಾವುದೇ ಮಾರುಕಟ್ಟೆ ಸಂಶೋಧನೆಗಳನ್ನು ಮಾಡಲು ನನಗಿಷ್ಟವಿಲ್ಲ. ನನಗನ್ನಿಸಿದ ಪ್ರಕಾರವೇ ನಾನು ನಡೆದುಕೊಳ್ಳುತ್ತೇನೆ. ಏಕೆಂದರೆ ನಾನು ವಿನ್ಯಾಸಗೊಳಿಸಿದ ಸುಂದರ ವಸ್ತ್ರಗಳನ್ನು ಮಾರಲು ಯಾವುದೇ ಮಳಿಗೆಯೂ ಒಪ್ಪಲಿಲ್ಲ. ಇದರಿಂದ ಸಹಜವಾಗಿಯೇ ನನಗೆ ಸಿಟ್ಟು ಬಂದಿತ್ತು. ಹೀಗಾಗಿ ನಾನು ನನ್ನದೇ ಸ್ವಂತ ಮಳಿಗೆಯನ್ನು ತೆರೆದೆ ಎಂದು ವಿವರಿಸುತ್ತಾರೆ ಅನಿತಾ.

ಪ್ರಸ್ತುತ ಎಎನ್‌ಡಿ ಮಾರಾಟದ 250 ಅಂಶಗಳನ್ನು ಗಳಿಸಿಕೊಂಡಿದೆ. ಇದರಲ್ಲಿ 41 ಎಕ್ಸ್ ಕ್ಲೂಸಿವ್ ಸ್ಟೋರ್‌ಗಳು ಮತ್ತು 200ಕ್ಕೂ ಹೆಚ್ಚು ಶಾಪರ್ಸ್ ಸ್ಟಾಪ್, ಸೆಂಟ್ರಲ್, ಕ್ಯಾಪ್‌ಸನ್ಸ್ ಮತ್ತು ಪ್ಯಾಂಟಲೂನ್ಸ್ ಸೇರಿದಂತೆ ಇತರ ವಿಸ್ತೃತ ಮಲ್ಟಿಬ್ರಾಂಡ್ ಲೈಫ್‌ಸ್ಟೈಲ್ ಮಳಿಗೆಗಳಲ್ಲೂ ತನ್ನ ಉತ್ಪನ್ನಗಳನ್ನು ಮಾರುತ್ತಿದೆ. ಗ್ಲೋಬಲ್ ದೇಸಿ ವಿನ್ಯಾಸಗಳಿಗಾಗಿ 54 ಎಕ್ಸ್ ಕ್ಲೂಸಿವ್ ಔಟ್‌ಲೆಟ್‌ಗಳಿವೆ ಮತ್ತು 130 ಎಂಬಿಓಗಳಲ್ಲಿ ಉತ್ಪನ್ನಗಳು ಲಭ್ಯವಿದೆ. ಗ್ಲೋಬಲ್ ದೇಸಿಯ ಮೊತ್ತ ಮೊದಲ ಶಾಖೆ ಮಾರಿಷಸ್‌ನಲ್ಲಿ ಈ ವರ್ಷ ಆರಂಭವಾಗಿದೆ. ಇನ್ನು ದಿನಬಳಕೆಯ ವಿನ್ಯಾಸದ ವಸ್ತ್ರಗಳು ಅನಿತಾ ಡೋಂಗ್ರೆಯವರ ಭಾರತದಾದ್ಯಂತ ಇರುವ 9 ಎಕ್ಸ್‌ ಕ್ಲೂಸಿವ್ ಮಳಿಗೆಗಳಲ್ಲಿ ಲಭ್ಯವಿದೆ. ಒಟ್ಟಾರೆಯಾಗಿ ಭಾರತದಾದ್ಯಂತ 104 ಮಳಿಗೆಗಳಲ್ಲಿ ಉತ್ಪನ್ನಗಳು ದೊರಕುತ್ತವೆ ಮತ್ತು 2010ರಿಂದ ಸಂಸ್ಥೆಯ ಸಿಎಜಿಆರ್ ಶೇ.57ರಷ್ಟು ಬೆಳವಣಿಗೆ ಹೊಂದುತ್ತಿದೆ. 2014ರ ಆರ್ಥಿಕವರ್ಷದೊಳಗೆ 350 ಕೋಟಿ ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ ಈ ಸಂಸ್ಥೆ.

ಮಹತ್ವಾಕಾಂಕ್ಷೆಯ ತಳಹದಿ

ಅನಿತಾರವರು ಮಾರಿಷಸ್‌ನಲ್ಲಿ ಇತ್ತೀಚೆಗಷ್ಟೇ ಗ್ಲೋಬಲ್ ದೇಸಿ ಮಳಿಗೆಯನ್ನು ಆರಂಭಿಸಿದ್ದಾರೆ. ಭಾರತದಲ್ಲಿ ದೊರಕುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಇರಾದೆಯೂ ಅವರಿಗಿದೆ. 20 ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು ನೀನು ಅಮೆರಿಕಾದಲ್ಲಿದಿದ್ದರೆ ಈಗ ಬೆಳೆದಿರುವ 100 ಪಾಲು ಹೆಚ್ಚು ಬೆಳೆದಿರುತ್ತಿದ್ದೆ ಎಂದಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ಆದರೆ ಈಗ ಬೆಳೆದಿರುವ ಮಟ್ಟದ ಕುರಿತು ಅವರಿಗೆ ಸಂತೋಷವಿದೆ. ಭಾರತೀಯ ಮೂಲದ ಉತ್ಪನ್ನಗಳನ್ನು ನಿರ್ಮಿಸುವುದು ಅವರಿಗಿಷ್ಟ. ಭಾರತದಲ್ಲೇ ಇರುವ ಹಲವು ಅವಕಾಶಗಳನ್ನು ಬಳಸಿಕೊಳ್ಳುವುದು ಅವರ ತೀರ್ಮಾನ. ಈ ವರ್ಷಾಂತ್ಯದೊಳಗೆ ವಿದೇಶಗಳಲ್ಲೂ ತನ್ನ ಶಾಖೆಯನ್ನು ತೆರೆಯುವ ಯೋಜನೆಯೂ ಅವರ ಮುಂದಿದೆ.

image


ಅನಿತಾರವರು ಅವರ ಕುಟುಂಬಕ್ಕೆ ಅತೀ ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ. ಕುಟುಂಬದ ಸದಸ್ಯರೇ ಅವರ ಆಧಾರ ಸ್ತಂಬ ಮತ್ತು ಶಕ್ತಿ. ಅವರ ತಂದೆ ಅವರು ಉದ್ಯಮ ಆರಂಭಿಸಲು ಪ್ರೋತ್ಸಾಹ ನೀಡಿದ ಮೊದಲ ವ್ಯಕ್ತಿ. ಅನಿತಾ ಉದ್ಯಮ ಆರಂಭಿಸಲು ಉದ್ಯಮ ಸಾಲ ದೊರಕಿಸಿಕೊಟ್ಟವರೂ ಸಹ ಅವರ ತಂದೆಯೇ. ನನ್ನ ತಂದೆ ಒಬ್ಬ ಕಠಿಣ ವ್ಯಕ್ತಿ. ಅನಿತಾರಿಗೆ ಹಣದ ಮೌಲ್ಯವನ್ನು ತಿಳಿಸಿದವರೂ ಅವರ ತಂದೆಯೇ. ಉದ್ಯಮದಲ್ಲಿ ಕಠಿಣ ಆರ್ಥಿಕ ಪರಿಸ್ಥಿತಿಗಳು ಎದುರಾದಾಗೆಲ್ಲಾ ಅನಿತಾ ಮತ್ತವರ ಸೋದರಿ ತಂದೆಯನ್ನು ನೆನೆಸಿಕೊಳ್ಳುತ್ತಾರೆ.

ಉದ್ಯಮ ಕಾರ್ಯಾಚರಣೆಯ ಒಂದು ಭಾಗವನ್ನು ಅವರ ಸೋದರ, ಸೋದರಿಯರು ನೋಡಿಕೊಳ್ಳುತ್ತಾರೆ. ಅನಿತಾರವರು ವಿನ್ಯಾಸದ ವಿಭಾಗವನ್ನು ಮಾತ್ರ ನೋಡಿಕೊಳ್ಳುತ್ತಾರೆ. ಜೀವನದಲ್ಲಿ ಇನ್ನೂ ಅನೇಕ ವಿಷಯಗಳನ್ನು ಸಾಧಿಸುವುದು ಬಾಕಿ ಇದೆ ಎನ್ನುತ್ತಾರೆ ಅನಿತಾ. ಅವುಗಳನ್ನೆಲ್ಲಾ ಸಾಧಿಸಲು ಇಡೀ ಜೀವಮಾನವೇ ಸಾಲದು ಎಂಬುದು ಅವರ ಅಭಿಪ್ರಾಯ.

ನವೀ ಮುಂಬೈನ ರಿಬಾಲಿಯಲ್ಲಿ ಅನಿತಾರ ಸಂಸ್ಥೆ 180,000 ಚದರಡಿಯ ಜಾಗ ಖರೀದಿಸಿದೆ. ಇಲ್ಲೇ ತನ್ನ ಎಲ್ಲಾ ಉತ್ಪಾದನಾ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಿದೆ. ಇದು ಗುಣಮಟ್ಟವನ್ನು ಕಾಯ್ದಿರಿಸಿಕೊಳ್ಳಲು ಅಗತ್ಯವಾದ ಅಂಶವಾಗಿದೆ. 2008ರಲ್ಲಿ ಫ್ಯೂಚರ್ ಗ್ರೂಪ್ ಶೇ.23ರಷ್ಟು ಅನಿತಾರ ಉದ್ಯಮದ ಷೇರುಗಳನ್ನು ಪಡೆದುಕೊಂಡಿದೆ. ವರದಿಗಳ ಪ್ರಕಾರ ಜನರಲ್ ಅಟ್ಲಾಂಟಿಕ್‌ನಲ್ಲಿ ಎಡಿಐಎಲ್ ಸಂಸ್ಥೆ ಸುಮಾರು 150 ಕೋಟಿಯಷ್ಟು ಷೇರುಗಳನ್ನು ತೊಡಗಿಸುವುದು ಉತ್ತಮ.

ಅನಿತಾ ಹೇಳುವಂತೆ ಅವರಿಗೆ ವಸ್ತ್ರಗಳನ್ನು ವಿನ್ಯಾಸಗೊಳಿಸುವುದು ಅತ್ಯಂತ ಇಷ್ಟದ ಕೆಲಸ. ಎಷ್ಟು ಸಾಧ್ಯವೋ ಅಷ್ಟು ಕಾಲ ಇದನ್ನು ಮುಂದುವರೆಸಿಕೊಂಡು ಹೋಗುವ ಇಚ್ಛೆ ಅವರದ್ದು. ವೈಫಲ್ಯಗಳು ಮತ್ತು ನಿರಾಸೆಗಳಾದರೂ ಕೆಲಸವನ್ನು ನಿಲ್ಲಿಸುವುದು ಮಾತ್ರ ಅವರಿಂದ ಅಸಾಧ್ಯ. ಜನರನ್ನು ವಸ್ತ್ರಗಳನ್ನು ಅಲಂಕರಿಸುವುದು ಸಾಧ್ಯವಾಗಿರುವುದೇ ತಮಗೆ ದೊರಕಿರುವ ವರ, ಅವರಿಗೆ ಹೊಸ ವಿನ್ಯಾಸವನ್ನು ಪರಿಚಯಿಸುವುದು, ಮಹಿಳೆಯರು ಧರಿಸುವ ಬಟ್ಟೆಗಳ ಮೂಲಕ ಅವರಿಗೆ ಹೆಮ್ಮೆಯಾಗುವಂತೆ ಮಾಡುವುದು ತಮ್ಮ ಮನಸ್ಸಿಗೆ ಒಪ್ಪುವ ಕೆಲಸ. ನನ್ನ ಜೀವತಾವಧಿಯ ಕೊನೆಯವರೆಗೂ ಕೆಲಸ ಮಾಡಲು ಸಾಧ್ಯವಾಗಬೇಕು ಎನ್ನುತ್ತಾರೆ ಅನಿತಾ.

ಸಂತೋಷದಿಂದಿರಿ, ಸಂತೋಷವನ್ನುಳಿಸಿಕೊಳ್ಳಿ ಮತ್ತು ನೀವೇನು ಮಾಡುತ್ತೀರೋ ಅದರ ಬಗ್ಗೆ ನಿಮಗೆ ಹೆಮ್ಮೆ ಇರಲಿ. ಉತ್ತಮ ಉದ್ದೇಶ ಹೊಂದಿರಿ ಮತ್ತು ನೀವು ಏನನ್ನು ಆರಂಭಿಸಬೇಕೆಂದಿದ್ದೀರೋ ಅದನ್ನು ಅತ್ಯುತ್ತಮವಾಗಿ ಮಾಡುವತ್ತ ಚಿಂತಿಸಿ. ಹಣ ಮಾಡುವ ಉದ್ದೇಶದಿಂದ ಏನನ್ನೂ ಆರಂಭಿಸಬೇಡಿ. ನಿಮ್ಮ ಕೆಲಸವನ್ನು ಉತ್ತಮವಾಗಿ ಮಾಡಿ ಉಳಿದದ್ದು ತಾವಾಗಿಯೇ ನಿಮ್ಮನ್ನು ಹಿಂಬಾಲಿಸುತ್ತದೆ. ಇದು ಅನಿತಾರವರು ಉದ್ಯಮ ಆರಂಭಿಸುವ ಮಹಿಳೆಯರಿಗೆ ನೀಡುವ ಸಲಹೆ.