ಅಮೂಲ್ಯ ಜೀವ ಉಳಿಸಲು ‘ವಿಷ ಮಾಹಿತಿ ಕೇಂದ್ರ’

ವಿಸ್ಮಯ

ಅಮೂಲ್ಯ ಜೀವ ಉಳಿಸಲು ‘ವಿಷ ಮಾಹಿತಿ ಕೇಂದ್ರ’

Sunday April 17, 2016,

2 min Read

ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಮೊದಲ ಸ್ಕಿನ್ ಬ್ಯಾಂಕ್ ತೆರೆದು ಹೆಸರು ಮಾಡಿದ್ದ ವಿಕ್ಟೋರಿಯಾ ಆಸ್ಪತ್ರೆ, ಈಗ ಮತ್ತೊಂದು ಸೇವೆಯನ್ನು ನೀಡುವ ಮೂಲಕ ಸುದ್ದಿಯಲ್ಲಿದೆ. ವಿಷ ಸೇವನೆಯ ತುರ್ತು ಸಂದರ್ಭದಲ್ಲಿ ಜೀವ ರಕ್ಷಣೆಗೆ ಸಹಾಯ ಮಾಡಲು ಶೀಘ್ರದಲ್ಲೇ “ಪಾಯಿಸನ್ ಇನ್​ಫಾರ್ಮೆಷನ್ ಸೆಂಟರ್”( ವಿಷ ಮಾಹಿತಿ ಕೇಂದ್ರ) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಲಿದೆ. ಮನೆಯಲ್ಲಿ ಯಾರಾದ್ರೂ ದುಡುಕಿ ವಿಷ ಸೇವಿಸಿದಾಗ ಕಂಗಾಲಾದ ಕುಟುಂಬಸ್ಥರಿಗೆ ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ರಾಜ್ಯದಲ್ಲಿ ಇದುವರೆಗೂ ಸಂಗ್ರಹಿತ ರಕ್ತದ ಮಾದರಿ ಪರಿಶೀಲಿಸುವ ವಿಜ್ಞಾನ ಪ್ರಯೋಗಾಲಯ ಬೆಂಗಳೂರಿನ ಮಡಿವಾಳದಲ್ಲಿದೆ. ಆದ್ರೆ ಒಂದೇ ಸೂರಿನಡಿ ವಿಷ ಕುರಿತು ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ ಸ್ಥಾಪನೆಯಾಗುತ್ತಿರುವುದು ಇದೇ ಮೊದಲು.

image


ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಹೊಸದಾಗಿ ಕಾರ್ಯ ನಿರ್ವಹಿಸುತ್ತಿರುವ ತುರ್ತು ಅಪಘಾತ ಕೇಂದ್ರದಲ್ಲಿ ವಿಷ್ಲೇಷಣಾತ್ಮಕ ವಿಷ ವೈದ್ಯ ಪ್ರಯೋಗಾಲಯ ಮತ್ತು ವಿಷ ಮಾಹಿತಿ ಕೇಂದ್ರ ಆರಂಭಿಸಲು ಸರಕಾರ ಚಿಂತನೆ ನಡೆಸಿದೆ. ವಿಷ ವೈದ್ಯ ಪ್ರಯೋಗಾಲಯದಲ್ಲಿ ವಿಷದ ನಾನಾ ವಿಧಗಳನ್ನು ಹಾಗೂ ಅದರಿಂದಾಗುವ ಅಪಾಯದ ಪ್ರಮಾಣವನ್ನು ಅರಿಯಲು ಸಹಾಯವಾಗುತ್ತೆ.. ಇನ್ನು ವಿಷ ಮಾಹಿತಿ ಕೇಂದ್ರದಲ್ಲಿ, ವಿಷ ಸೇವಿಸಿದವರಿಗೆ ತುರ್ತು ಸಂದರ್ಭದಲ್ಲಿ ನೀಡಬೇಕಾದ ಪ್ರಾಥಮಿಕ ಚಿಕಿತ್ಸೆ, ಯಾವ ಆಸ್ಪತ್ರೆಗೆ ಕರೆದೊಯ್ಯಬೇಕು ಎಂಬುದು ಸೇರಿದಂತೆ ಇತರೆ ಮಾಹಿತಿ ದೊರೆಯಲಿದೆ.

ಇದನ್ನು ಓದಿ: ಸಿನಿಮಾ ನಿರ್ಮಾಣ ಮಾಡೋದಷ್ಟೆ ನಮ್ಮ ಕೆಲಸ ಅಲ್ಲ...

‘ವಿಷ ಮಾಹಿತಿಯ ಸಾಫ್ಟ್​ವೇರ್ ಅಳವಡಿಕೆ’

ಆಧುನಿಕತೆ ಮತ್ತು ಬದಲಾದ ಜೀವನ ವ್ಯವಸ್ಥೆಯಲ್ಲಿ ಬೆಳೆಯುವ ಆಹಾರ ಪದಾರ್ಥಗಳಿಗೆ ರಸಾಯನಿಕ ಅಂಶಗಳನ್ನು ಬಳಸಲಾಗುತ್ತಿದೆ. ಹೀಗಾಗಿ ಸೇವಿಸುವ ಆಹಾರ, ಕುಡಿಯುವ ಪಾನೀಯ ಒಳಗೊಂಡಂತೆ, ನಿತ್ಯ ಬಳಸುವ ಸೌಂದರ್ಯ ವರ್ಧಕ ಹೀಗೆ ಪ್ರತಿಯೊಂದರಲ್ಲೂ ರಾಸಾಯನಿಕ ಅಂಶಗಳು ಸೇರಿದ್ದು, ಯಾವ ಸಂದರ್ಭದಲ್ಲಿ ಬೇಕಾದ್ರೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹದು. ಹೀಗಿರುವಾಗ ದುಡುಕಿ ವಿಷ ಸೇವಿಸುವುದು, ಹೆಚ್ಚಿನ ನಿದ್ರೆ ಮಾತ್ರೆ ಅಥವಾ ಇತರೆ ಔಷಧ ಸೇವನೆ , ಇಲ್ಲವೆ ಆಕಸ್ಮಿಕವಾಗಿ ಹಾವು ಇನ್ಯಾವುದೇ ವಿಷಕಾರಿ ಹುಳುವಿನ ಕಡಿತ, ಮಕ್ಕಳಲ್ಲಿ ತಿಳಿಯದೆ ಸೇವಿಸುವ ವಿಷ( ಉಗುರುಬಣ್ಣ, ಲಿಪ್‍ಸ್ಟಿಕ್, ಫಿನಾಯಿಲ್ ಇತ್ಯಾದಿ)ದಿಂದ ಪ್ರಾಣಕ್ಕೆ ಸಂಚಾರ ಕಟ್ಟಿಟ್ಟಬುತ್ತಿ. ಇಂತಹ ಸಂದರ್ಭದಲ್ಲಿ ಯಾವ ವಿಷಕ್ಕೆ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂಬುದು ವೈದ್ಯರಿಗೂ ಸವಾಲಾಗಿರುತ್ತದೆ. ಹೀಗಾಗಿ ಈ ಕುರಿತು ಮಾಹಿತಿ ನೀಡಲು ವಿಷ ಮಾಹಿತಿ ಕೇಂದ್ರದಲ್ಲಿ ಬಹುವಿಧ ವಿಷ ಹಾಗೂ ಅವುಗಳಿಂದಾಗುವ ದುಷ್ಪರಿಣಾಮ ಮತ್ತು ಚಿಕಿತ್ಸೆ ಕುರಿತು ಸಮಗ್ರ ಮಾಹಿತಿ ಹೊಂದಿರುವ ವಿಶೇಷ ಸಾಫ್ಟ್​ವೇರ್ ಅಳವಡಿಸಿಕೊಳ್ಳಲಾಗುತ್ತಿದೆ.

image


‘ವೈದ್ಯರಿಗೂ ಮಾಹಿತಿ ಲಭ್ಯ’

ವಿಷ ಸೇವನೆ ಪ್ರಕರಣಗಳಲ್ಲಿ ಜೀವ ಉಳಿಸಲು ಸಮಯದೊಂದಿಗೆ ತುರ್ತು ಚಿಕಿತ್ಸೆಯೂ ಅಷ್ಟೇ ಮುಖ್ಯವಾಗಿದ್ದು. ಯಾವ ರೀತಿಯ ವಿಷ? ಎಷ್ಟು ಪ್ರಮಾಣದಲ್ಲಿ ಸೇವನೆ? ಎಂಬಿತ್ಯಾದಿ ಮಾಹಿತಿಯೂ ಅಷ್ಟೇ ಅಗತ್ಯ. ಇಂತಹ ಸಂದರ್ಭದಲ್ಲಿ ವಿಷ ಮಾಹಿತಿ ಕೇಂದ್ರಕ್ಕೆ ಕರೆ ಮಾಡಿ ವಿಷ ಸೇವನೆ ಕುರಿತು ತಿಳಿಸಿದರೆ, ಅದಕ್ಕೆ ಕೈಗೊಳ್ಳಬೇಕಾದ ತುರ್ತು ಕ್ರಮ ಹಾಗೂ ಯಾವ ಆಸ್ಪತ್ರೆಗೆ ಕೊಂಡೊಯ್ಯಬೇಕು ಎಂಬ ಮಾಹಿತಿ ನೀಡಲಾಗುತ್ತದೆ.ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವೈದ್ಯರು ಸಹ ಕೇಂದ್ರ ಸಲಹೆ ಪಡೆಯಬಹುದಾಗಿದೆ. ಚಿಕಿತ್ಸೆ ಪ್ರತಿ ಹಂತದ ಕುರಿತು ದೂರವಾಣಿ ಮೂಲಕವೇ ಮಾರ್ಗದರ್ಶನ ನೀಡಲಾಗುವುದು. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆ ಸೇರಿದಂತೆ ರಾಜ್ಯಾದ್ಯಂತ ಯಾರು ಬೇಕಾದ್ರೂ ಈ ಸೇವೆ ಪಡೆಯಬಹುದಾಗಿದೆ. ಈ ಸೇವೆಯಿಂದಾಗಿ ಜೀವ ಉಳಿಸಲು ಸಹಾಯವಾಗಿದೆ.

ಇದನ್ನು ಓದಿ:

1. ಎಸ್ಕೇಪ್ ಹಂಟ್- ಡಿಟೆಕ್ಟಿವ್ ರಹಸ್ಯ ಭೇದಿಸುತ್ತಾ...

2. ಕ್ಯಾಮರಾ ಕಣ್ಣಲ್ಲಿ ಮಹಿಳೆಯ ಬವಣೆಗಳ ಮಿಡಿತ : ಇದು ಸೊನಾಲಿ ಗುಲಾಟಿ ಕೈಚಳಕ

3. ಶುದ್ಧ ನೀರು ನೀಡುವ `ಅಮೃತ್' ಎಂಬ ಸಂಜೀವಿನಿ