ಬಿಲಿಯನ್ ಡಾಲರ್ ಲೇಡಿಸ್ ಕ್ಲಬ್

ಟೀಮ್​​ ವೈ.ಎಸ್​. ಕನ್ನಡ

ಬಿಲಿಯನ್ ಡಾಲರ್ ಲೇಡಿಸ್ ಕ್ಲಬ್

Tuesday February 09, 2016,

3 min Read

ಭಾರತದಲ್ಲಿ ಶ್ರೀಮಂತ ಹಾಗೂ ಅತ್ಯಂತ ಜನಪ್ರಿಯರಾಗಿರುವ ಅದೆಷ್ಟೋ ಬಿಲಿಯನೇರ್‍ಗಳಿದ್ದಾರೆ. ಆದ್ರೆ ಅವರಲ್ಲಿ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಕಳೆದ ವರ್ಷ ಫೋಬ್ರ್ಸ್ ಮ್ಯಾಗಝೀನ್‍ನಲ್ಲಿ ಪ್ರಕಟವಾದ ಭಾರತದ 100 ಮಂದಿ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಮಹಿಳೆಯರ ವಿವರವನ್ನು ನಾವು ನಿಮಗೆ ಕೊಡ್ತಿದ್ದೇವೆ. ಇವರೆಲ್ಲ ಒಬ್ಬರಿಗಿಂತ ಇನ್ನೊಬ್ಬರು ವಿಭಿನ್ನವಾಗಿರಬಹುದು ಆದ್ರೆ ಕೇವಲ ಹಣದ ಸಿರಿವಂತಿಕೆ ಮಾತ್ರವಲ್ಲ, ತಮ್ಮ ಅದ್ಭುತ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿದ್ದಾರೆ. ಹಾಗಂತ ಆಸ್ತಿ ವಿಚಾರ ಹಾಸ್ಯವೇನಲ್ಲ. ನಾಲ್ವರು ಮಹಿಳೆಯರ ಬಳಿ ಒಟ್ಟು 10 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯಿದೆ. ಮೊನಾಕೋದಂತಹ ಪುಟ್ಟ ರಾಷ್ಟ್ರಗಳ ಜಿಡಿಪಿ ದರ ಕೂಡ ಇದಕ್ಕಿಂತ ಕಡಿಮೆ ಇದೆ.

ಸಾವಿತ್ರಿ ಜಿಂದಾಲ್

ಸಾವಿತ್ರಿ ಜಿಂದಾಲ್ ಏಷ್ಯಾದ ಅತ್ಯಂತ ಶ್ರೀಮಂತ ಮಹಿಳೆ. ಅವರು ಹುಟ್ಟಿ ಬೆಳೆದಿದ್ದೆಲ್ಲ ಗುವಾಹಟಿ ಬಳ್ಳಿಯ ಸಣ್ಣ ಪಟ್ಟಣ ಟಿನ್ಸುಕಿಯಾದಲ್ಲಿ. ಜಿಂದಾಲ್ ಗ್ರೂಪ್‍ನ ಮುಖ್ಯಸ್ಥ ಹಾಘೂ ಸಂಸ್ಥಾಪಕರ ಓ.ಪಿ.ಜಿಂದಾಲ್ ಅವರನ್ನು ಸಾವಿತ್ರಿ ಮದುವೆಯಾದ್ರು. ಈ ದಂಪತಿಗೆ 9 ಮಕ್ಕಳಿದ್ದಾರೆ. ಮಕ್ಕಳ ಲಾಲಲೆ ಪಾಲನೆಯಲ್ಲಿ ಬ್ಯುಸಿಯಾಗಿರ್ತಿದ್ದ ಸಾವಿತ್ರಿ ಜಿಂದಾಲ್, 2005ರಲ್ಲಿ ತಮ್ಮ ಪತಿಯ ಮರಣದ ಬಳಿಕ ಜಿಂದಾಲ್ ಕಂಪನಿಯ ಮುಂದಾಳತ್ವ ವಹಿಸಿಕೊಂಡ್ರು. ಉಕ್ಕು ಮತ್ತು ಇಂಧನ ಸಂಘಟಿತ ಉದ್ಯಮದ ಹೊಣೆ ಹೊತ್ತುಕೊಂಡ್ರು. ಸಾವಿತ್ರಿ ಜಿಂದಾಲ್ ಅವರ ನಾಯಕತ್ವದಲ್ಲಿ ಜಿಂದಾಲ್ ಕಂಪನಿಯ ವಹಿವಾಟು ದಿನೇ ದಿನೇ ವಿಸ್ತರಿಸತೊಡಗಿತ್ತು. ಹರಿಯಾಣ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವೆಯಾಗಿ ಕೂಡ ಸಾವಿತ್ರಿ ಜಿಂದಾಲ್ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಸಾವಿತ್ರಿ ಜಿಂದಾಲ್ ಅವರ ಆಸ್ತಿ 3.9 ಬಿಲಿಯನ್ ಡಾಲರ್.

ಇದನ್ನು ಓದಿ: ಬೆಂಗಳೂರು ಬೀದಿಯಿಂದ ಫ್ರಾನ್ಸ್​​ವರೆಗೆ-ಇದು ಸಿಲಿಕಾನ್​ಸಿಟಿ ಮಕ್ಕಳ ಫುಟ್ಬಾಲ್​​ ಪ್ರೀತಿ

ಲೀನಾ ತಿವಾರಿ

ಲೀನಾ ಗಾಂಧಿ ತಿವಾರಿ, ಪಿಎಸ್‍ವಿ ಫಾರ್ಮಾ ಕಂಪನಿಯ ಮುಖ್ಯಸ್ಥೆ. ಪಿಎಸ್‍ವಿ ಫಾರ್ಮಾ ಚಿಕ್ಕ ಸಂಸ್ಥೆಯಾಗಿತ್ತು, ಇದನ್ನು ಲೀನಾ ಅವರ ತಾತ ವಿಠಲ ಬಾಲಕೃಷ್ಣ ಗಾಂಧಿ ಆರಂಭಿಸಿದ್ರು. ವಿಠಲ ಬಾಲಕೃಷ್ಣ ಗಾಂಧಿ ಒಬ್ರು ಸಮಾಜ ಸುಧಾರಕ ಹಾಗೂ ರಾಜಕಾರಣಿ. ಕಂಪನಿ ಆರಂಭದಲ್ಲಿ ಔಷಧಗಳನ್ನು ಆಮದು ಮಾಡಿಕೊಳ್ಳುತ್ತಿತ್ತು, ಬಳಿಕ 1960ರಲ್ಲಿ ಅಮೆರಿಕದ ಕಂಪನಿಯ ಜೊತೆಗೂಡಿ ಔಷಧಗಳ ತಯಾರಿಕೆ ಆರಂಭಿಸಿತ್ತು. ತಮ್ಮ ಇಬ್ಬರು ಮಕ್ಕಳು ಹಾಗೂ ಪತಿಯ ಜೊತೆಗೆ ಬಿಲಿಯನೇರ್ ಲೀನಾ ತಿವಾರಿ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಅವರು ಬೋಸ್ಟನ್ ಯೂನಿವರ್ಸಿಟಿಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಪ್ರಕೃತಿ ಪ್ರಿಯರಾಗಿರುವ ಲೀನಾ ದೇಶದ ಉದ್ದಗಲಕ್ಕೂ ಇರುವ ಅರಣ್ಯ ಸಂಪತ್ತನ್ನು ವೀಕ್ಷಿಸಲು ಇಷ್ಟಪಡ್ತಾರೆ. ವನ್ಯಜೀವಿಗಳ ಬಗ್ಗೆ ಅಧ್ಯಯನ ಕೂಡ ಮಾಡುತ್ತಿದ್ದಾರೆ. ಅದರಲ್ಲೂ ಸರೀಸೃಪಗಳ ಬಗ್ಗೆ ಅವರಿಗೆ ಅತ್ಯಂತ ಕುತೂಹಲವಿದೆ. ತಮ್ಮ ಕುಟುಂಬದ ಪೂರ್ವಜರ ಇತಿಹಾಸ ಅರಿಯಲು ಅವರು ಅತ್ಯಂತ ಆಸಕ್ತರಾಗಿದ್ದಾರೆ. `ಬಿಯೊಂಡ್ ಪೈಪ್ಸ್ & ಡ್ರೀಮ್ಸ್ - ದಿ ಲೈಫ್ ಆಪ್ ವಿಠಲ ಬಾಲಕೃಷ್ಣ ಗಾಂಧಿ' ಹೆಸರಿನ ಪುಸ್ತಕದಲ್ಲಿ ತಾತನ ಜೀವನ ಚರಿತ್ರೆಯನ್ನೂ ಬರೆದಿದ್ದಾರೆ.

image


ಇಂದು ಜೈನ್

ಬೆನೆಟ್ ಕೋಲ್ಮನ್ & ಕೋ ಸಂಸ್ಥೆಯ ಮುಖ್ಯಸ್ಥೆ ಇಂದು ಜೈನ್ ಅವರ ಒಟ್ಟು ಆಸ್ತಿಯ ಮೌಲ್ಯ 1.9 ಬಿಲಿಯನ್ ಡಾಲರ್. ಅವರು ಭಾರತದ ಪ್ರಮುಖ ಮಾಧ್ಯಮ ಸಂಸ್ಥೆ ದಿ ಟೈಮ್ಸ್ ಗ್ರೂಪ್‍ನ ಮುಖ್ಯಸ್ಥರೂ ಹೌದು. ಇಂದು ಜೈನ್ ಅವರು ಹುಟ್ಟುಹಾಕಿದ ಟೈಮ್ಸ್ ಫೌಂಡೇಶನ್, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ. ನೈಸರ್ಗಿಕ ವಿಕೋಪದ ಸಂದರ್ಭಗಳಲ್ಲಿ ನೆರವಾಗಲು, ತಮ್ಮ ಸಮರ್ಪಣಾ ಮನೋಭಾವದ ಮೂಲಕ ಇಂದು ಜೈನ್ ವಿಪತ್ತು ಪರಿಹಾರ ನಿಧಿ `ಟೈಮ್ಸ್ ರಿಲೀಫ್ ಫಂಡ್' ಅನ್ನು ಸ್ಥಾಪಿಸಿದ್ದಾರೆ. ಅವರು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪ್ರಬಲ ವಕೀಲೆಯೂ ಹೌದು. ಅಷ್ಟೇ ಅಲ್ಲ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಖ್ಯಾತ ಸಾಹಿತ್ಯಕ ಪುರಸ್ಕಾರ ಜ್ಞಾನಪೀಠವನ್ನು ಕೊಡಮಾಡುವ `ಭಾರತೀಯ ಜ್ಞಾನಪೀಠ ಟ್ರಸ್ಟ್'ನ ಮುಖ್ಯಸ್ಥರಾಗಿ ಇಂದು ಜೈನ್ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವಸಂಸ್ಥೆಯಲ್ಲಿ ನಡೆದ‘Millennium World Peace Summit of Religious and Spiritual Leaders in 2000’ ಸಮಾವೇಶದಲ್ಲಿ ಧರ್ಮಗಳ ನಡುವೆ ಒಗ್ಗಟ್ಟಿರಬೇಕು ಎಂಬ ವಿಚಾರದ ಬಗ್ಗೆ ಇಂದು ಜೈನ್ ಅವರು ಮಾಡಿದ ಭಾಷಣ ಅಪಾರ ಮೆಚ್ಚುಗೆ ಗಳಿಸಿತ್ತು.

ವಿನೋದ್ ಗುಪ್ತಾ

ವಿನೋದ್ ಗುಪ್ತಾ ಕೂಡ ಭಾರತ ಸಿರಿವಂತ ಮಹಿಳೆಯರಲ್ಲೊಬ್ಬರು. ದಿವಂಗತ ಕೀಮತ್ ರೈ ಗುಪ್ತಾ ಅವರ ಪತ್ನಿ. ವಿದ್ಯುತ್ ಫಿಟ್ಟಿಂಗ್ ತಯಾರಕ ಕಂಪನಿ `ಹ್ಯಾವೆಲ್ಸ್'ನಲ್ಲಿದ್ದ ಪತಿಯ ಷೇರುಗಳು ವಿನೋದ್ ಗುಪ್ತಾ ಅವರ ಪಾಲಾಗಿವೆ. ಆದ್ರೆ ಆಡಳಿತ ಮಂಡಳಿಯಲ್ಲಿ ವಿನೋದ್ ಅವರಿಗೆ ಸ್ಥಾನ ದೊರೆತಿಲ್ಲ. ಕೀಮತ್ ರೈ ಗುಪ್ತಾ 1971ರಲ್ಲಿ ಕಂಪನಿಯನ್ನು ಆರಂಭಿಸಿದ್ರು. ಈಗ ಅವರ ಪುತ್ರ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ವಿನೋದ್ ಗುಪ್ತಾ ಅವರ ಪುತ್ರ ಪುಸ್ತಕವೊಂದನ್ನು ಬರೆದಿದ್ದಾರೆ. `ಹ್ಯಾವೆಲ್ಸ್ : ದಿ ಅನ್‍ಟೋಲ್ಡ್ ಸ್ಟೋರಿ ಆಫ್ ಕೀಮತ್ ರೈ ಗುಪ್ತಾ' ಎಂಬ ಪುಸ್ತಕವನ್ನು ತಮ್ಮ ತಾಯಿ ವಿನೋದ್ ಅವರಿಗೆ ಅರ್ಪಿಸಿದ್ದಾರೆ. ನನ್ನ ತಂದೆಯ ಯಶಸ್ಸಿನ ಹಿಂದಿರುವ ನಿಜವಾದ ಶಕ್ತಿ ನನ್ನ ತಾಯಿ ವಿನೋದ್ ಅವರಿಗೆ ಪುಸ್ತಕವನ್ನು ಅರ್ಪಿಸುವುದಾಗಿ ಬರೆದುಕೊಂಡಿದ್ದಾರೆ.

ಶ್ರೀಮಂತರು ಕೂಡ ಬದುಕನ್ನು ಆನಂದಿಸುತ್ತಾರೆ, ಅವರು ನಿಷ್ಪ್ರಯೋಜಕ ಜೀವನವನ್ನು ನಡೆಸುವುದಿಲ್ಲ ಎಂಬುದಕ್ಕೆ ಈ ಮಹಿಳೆಯರೇ ಸಾಕ್ಷಿ. ಜೊತೆಗೆ ಜಗತ್ತಿನಲ್ಲಿ ತಮ್ಮ ಸುತ್ತ ನಿರ್ಮಾಣವಾಗಿರುವ ವ್ಯತ್ಯಾಸಗಳನ್ನು ಸರಿಪಡಿಸಲು ಇವರು ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ಹಣವನ್ನು ಕಳೆದುಕೊಂಡಾಗ ನಿಮ್ಮ ಮೌಲ್ಯ ಎಷ್ಟೋ ಅದೇ ನಿಜವಾದ ಸಂಪತ್ತಿನ ಅಳತೆ ಎನ್ನುತ್ತಾರೆ ಈ ಸಾಧಕಿಯರು.

ಲೇಖಕರು: ಶಾರಿಕಾ ನಾಯರ್​

ಅನುವಾದಕರು: ಭಾರತಿ ಭಟ್​​

ಇದನ್ನು ಓದಿ:

ಇಂಡಸ್ಟ್ರಿಬೈಯಿಂಗ್‍ಗೆ ಬಂಡವಾಳದ ಹರಿವು - ಟ್ರಿಫೆಕ್ಟಾ ಕ್ಯಾಪಿಟಲ್‍ನಿಂದ 12 ಕೋಟಿ ನೆರವು

ಮಕ್ಕಳ ನೃತ್ಯದಲ್ಲಿ ಕನಸು ನನಸಾಗಿಸಿಕೊಳ್ತಿರೋ ಮೀರಾ

ನೊಂದ ಮಹಿಳೆಯರಿಗೆ ಸಹಾಯ ಹಸ್ತ...!