ಅಂದು ಬಾಲಕಾರ್ಮಿಕ ಪದ್ಧತಿ, ಹಿಂಸಾಚಾರಕ್ಕೆ ಬಲಿಯಾದ ಮಹಿಳೆ - ಇಂದು ಸಾಮಾಜಿಕ ಕ್ರಾಂತಿಯ ನಾಯಕಿ

ಟೀಮ್​ ವೈ.ಎಸ್​. ಕನ್ನಡ

ಅಂದು ಬಾಲಕಾರ್ಮಿಕ ಪದ್ಧತಿ, ಹಿಂಸಾಚಾರಕ್ಕೆ ಬಲಿಯಾದ ಮಹಿಳೆ - ಇಂದು ಸಾಮಾಜಿಕ ಕ್ರಾಂತಿಯ ನಾಯಕಿ

Wednesday March 09, 2016,

4 min Read

ಹೋರಾಟಕ್ಕೆ ಪ್ರೇರಣೆಯಾದ ಅನುರಾಧಾ ಭೋಸ್ಲೆ...ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಸಮರ...ಮಕ್ಕಳು ಮಹಿಳೆಯರ ಸಬಲೀಕರಣಕ್ಕಾಗಿ ಬದುಕು ಅರ್ಪಣೆ...ಅನುರಾಧಾ ಭೋಸ್ಲೆ ಕೇವಲ ತಮಗಾಗಿ ಮಾತ್ರವಲ್ಲ, ಇಡೀ ಮಹಿಳಾ ಸಮಾಜದ ಏಳ್ಗೆಗಾಗಿ ಶ್ರಮಿಸಿದಾಕೆ. 6 ವರ್ಷ ವಯಸ್ಸಿನಲ್ಲೇ ಕೂಲಿ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ ಅವರು ಮುಂದೊಂದು ದಿನ ಬಾಲ ಕಾರ್ಮಿಕ ಪದ್ಧತಿಯನ್ನು ಹೊಡೆದೋಡಿಸಲು ಪಣ ತೊಟ್ಟರು. ಶೋಷಣೆಗೆ ಬಲಿಯಾಗುತ್ತಿರುವ ನಿಸ್ಸಹಾಯಕ ಮಕ್ಕಳ ಮತ್ತು ಮಹಿಳೆಯರಿಗೆ ಅದರಿಂದ ಮುಕ್ತಿ ಕೊಡಿಸಲು, ಅವರ ಬದುಕನ್ನು ಹಸನಾಗಿಸಲು ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿದ್ರು. ಬದುಕಿನಲ್ಲಿ ಎದುರಾದ ಎಲ್ಲ ಸವಾಲುಗಳನ್ನು ಎದುರಿಸಿದ ಅನುರಾಧಾ ಭೋಸ್ಲೆ, ಎಂತಹ ಸ್ಥಿತಿಯಲ್ಲೂ ನಿರಾಶರಾಗಲಿಲ್ಲ. ಕಠಿಣ ಪರಿಸ್ಥಿತಿಗಳಲ್ಲಿ ಸಮಸ್ಯೆಗೆ ಪರಿಹಾರ ಹುಡುಕುತ್ತ ತಮ್ಮಲ್ಲಿ ಬಲ ತುಂಬಿಕೊಂಡ್ರು. ಸ್ತ್ರೀ ಶಕ್ತಿ ಅನಾವರಣಕ್ಕೆ ಮಾರ್ಗದರ್ಶಕರಾದ ಅನುರಾಧ, ಎಷ್ಟೋ ಮಹಿಳೆಯರ ಪಾಲಿಗೆ ಆದರ್ಶ ಹಾಗೂ ಪ್ರೇರಣೆಯಾಗಿದ್ದಾರೆ.

ಅನುರಾಧಾ ಅವರು ಜನಿಸಿದ್ದು ಕ್ಯಾಥೋಲಿಕ್ ಪಂಗಡದಲ್ಲಿ. ಮೊದಲು ಹಿಂದುಗಳಾಗಿದ್ದ ಅವರ ಕುಟುಂಬದವರು ಬಳಿಕ ಕ್ಯಾಥೋಲಿಕ್‍ಗೆ ಸೇರ್ಪಡೆಯಾಗಿದ್ದರು. ಅವರ ಅಜ್ಜ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದರು. ಆಗ ಮೇಲು-ಕೀಳೆಂಬ ಬೇಧಭಾವವಿತ್ತು. ಅನುರಾಧಾ ಅವರ ಅಜ್ಜ ಕೂಡ ಅಸ್ಪ್ರಶ್ಯತೆಯ ಪಿಡುಗಿಗೆ ಬಲಿಯಾಗಿದ್ದರು. ಆಗ ಹಿಂದುಳಿದ ವರ್ಗದವರಿಗೆ ದೇವಾಲಯ ಮತ್ತು ಶಾಲೆಗಳಲ್ಲಿ ಪ್ರವೇಶವಿರಲಿಲ್ಲ. ಊರ ಹೊರಗೆ ಗುಡಿಸಲುಗಳಲ್ಲಿ ವಾಸ ಮಾಡಬೇಕಿತ್ತು. ಅವರನ್ನು ಅಸ್ಪ್ರಶ್ಯರೆಂದು ಪರಿಗಣಿಸಲಾಗುತ್ತಿತ್ತು, ಅಸಹಕಾರ ಮತ್ತು ದುರ್ನಡತೆ ತೋರಲಾಗುತ್ತಿತ್ತು. ಇದರಿಂದ ಬೇಸತ್ತು ಅನುರಾಧಾ ಅವರ ಅಜ್ಜ ಕ್ಯಾಥೋಲಿಕ್‍ಗೆ ಸೇರ್ಪಡೆಗೊಂಡ್ರು. ಆ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಪ್ರಭಾವ ಕೂಡ ಹೆಚ್ಚಾಗಿತ್ತು. ಮಿಷನರಿಗಳ ನೆರವಿಂದ ಅನುರಾಧಾ ಅವರ ತಂದೆಗೆ ಶಿಕ್ಷಣ ದೊರೆಯುವಂತಾಯ್ತು, ಶಿಕ್ಷಕರಾಗಿ ಅವರು ಉದ್ಯೋಗವನ್ನು ಕೂಡ ಗಿಟ್ಟಿಸಿಕೊಂಡ್ರು. ಆದ್ರೆ ಮನೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದಿದ್ರಿಂದ ಜೀವನ ನಿರ್ವಹಣೆ ಕಷ್ಟದಾಯಕವಾಗಿತ್ತು.

image


ಕೇವಲ 6 ವರ್ಷದವರಿದ್ದಾಗ್ಲೇ ಅನುರಾಧಾರನ್ನು ಕೂಲಿ ಕೆಲಸಕ್ಕೆ ಕಳಿಸಲಾರಂಭಿಸಿದ್ರು. ಪುಟ್ಟ ಬಾಲೆಯ ಹೆಗಲ ಮೇಲೆ ಮನೆಗೆಲಸದ ಹೊರೆಯಿತ್ತು. ಬಟ್ಟೆ, ಪಾತ್ರೆ ತೊಳೆಯುವುದು, ಸ್ವಚ್ಛತೆ ಇಂತಹ ಎಲ್ಲ ಕೆಲಸಗಳನ್ನು ಅವರು ಮಾಡುತ್ತಿದ್ರು. ಓದಿನಲ್ಲಿ ಅತ್ಯಂತ ಆಸಕ್ತಿ ಇದ್ದಿದ್ರಿಂದ ಅನುರಾಧಾ ಕೂಲಿ ಮಾಡುತ್ತಲೇ, ಶಾಲೆಗೂ ಹೋಗುತ್ತಿದ್ರು. ಬೆಳಗ್ಗೆ 6-11 ಗಂಟೆವರೆಗೆ ಮನೆಗೆಲಸ ಮಾಡಿ ಬಳಿಕ ಅವರು ಶಾಲೆಗೆ ಹೋಗುತ್ತಿದ್ರು. ಮಹತ್ವದ ವಿಷಯ ಅಂದ್ರೆ ಮನೆ ಮಾಲೀಕರು ಅನುರಾಧ ಅವರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿರಲಿಲ್ಲ. ಮನೆಯ ಕೆಲಸಗಳನ್ನೆಲ್ಲ ಮಾಡಿಸಿಕೊಂಡು ವೇತನ ನೀಡುತ್ತಿದ್ರು. ಅನುರಾಧಾ ಶಾಲೆಗೆ ಹೋಗುವುದಕ್ಕೂ ಅಡ್ಡಿಪಡಿಸಲಿಲ್ಲ. ಶಾಲೆಗೆ ತಡವಾಗಿ ಹೋಗಬಾರದು ಎಂಬ ಕಾರಣಕ್ಕೆ ಅನುರಾಧಾ ಅದೆಷ್ಟೋ ಬಾರಿ ಹಸಿದುಕೊಂಡೇ ಇರುತ್ತಿದ್ರು.

11ನೇ ವಯಸ್ಸಿಗೆಲ್ಲ ಅನುರಾಧಾ ಎಷ್ಟು ದುಡಿಮೆ ಮಾಡುತ್ತಿದ್ದರೆಂದ್ರೆ, ತಮ್ಮ ಅಗತ್ಯಗಳಿಗಾಗಿ ತಂದೆ-ತಾಯಿಯಿಂದ ನಯಾಪೈಸೆ ಪಡೆಯುತ್ತಿರಲಿಲ್ಲ. ಶಿಕ್ಷಣಕ್ಕೆ ಬೇಕಾದಷ್ಟು ಹಣವನ್ನು ಕೂಡ ಅವರೇ ಸಂಪಾದಿಸುತ್ತಿದ್ರು. ಇದರ ಜೊತೆ ಜೊತೆಗೆ ಚರ್ಚ್‍ಗಳ ನೆರವಿನಿಂದ ಅನುರಾಧಾ ಉನ್ನತ ಶಿಕ್ಷಣ ಪಡೆದ್ರು. ಬಾಲ್ಯದಲ್ಲೇ ಅನುರಾಧಾ ಬಡತನವನ್ನು ಹತ್ತಿರದಿಂದ ಕಂಡಿದ್ದರು. ಬಡ ಕುಟುಂಬದ ಮಕ್ಕಳು ಮತ್ತು ಮಹಿಳೆಯರ ದುಸ್ಥಿತಿಯ ಅರಿವು ಅವರಿಗಿತ್ತು. ಮಕ್ಕಳು ಯಾವ ಪರಿಸ್ಥಿತಿಗಳಲ್ಲಿ ಕಾರ್ಮಿಕರಾಗ್ತಾರೆ? ಬಳಿಕ ಅವರ ಬಾಲ್ಯವನ್ನು ಹೇಗೆ ಕಸಿದುಕೊಳ್ಳಲಾಗುತ್ತದೆ ಎಂಬುದರ ಅನುಭವ ಅವರಿಗಾಗಿತ್ತು. ಬಾಲ್ಯದಲ್ಲಿ ನೂರಾರು ಸಮಸ್ಯೆಗಳನ್ನು ಎದುರಿಸಿದ್ದ ಅನುರಾಧಾ, ಮದುವೆ ನಂತರ ತಮ್ಮ ಬದುಕು ಹಸನಾಗಲಿದೆ ಎಂದು ವಿಶ್ವಾಸವಿಟ್ಟುಕೊಂಡಿದ್ರು. ಹತ್ತಾರು ಕನಸುಗಳನ್ನು ಕಂಡಿದ್ರು. ಮನೆಯವರೇ ನೋಡಿದ ವರನನ್ನು ಅನುರಾಧಾ ವರಿಸಿದ್ರು. ಕೆಲ ಸಮಯದ ವರೆಗೆ ದಾಂಪತ್ಯ ಜೀವನ ಸರಿಯಾಗಿಯೇ ಇತ್ತು. ದಿನ ಕಳೆದಂತೆ ಅತ್ತೆ ಮನೆಯವರು ಅನುರಾಧಾಗೆ ಕಾಟ ಕೊಡಲಾರಂಭಿಸಿದ್ರು. ಅತ್ತೆ-ನಾದಿನಿ ಜೊತೆಯಾಗಿ ಅನುರಾಧಾ ಅವರ ಮೇಲೆ ಹಲ್ಲೆ ಮಾಡುತ್ತಿದ್ರು. ಮನೆಯ ಎಲ್ಲ ಕೆಲಸಗಳನ್ನು ಅವರಿಂದ್ಲೇ ಮಾಡಿಸುತ್ತಿದ್ರು. ಬೆಳಗ್ಗೆ 4 ಗಂಟೆಯಿಂದ ಅವರ ದಿನಚರಿ ಆರಂಭ. ಯಾವ ಕೆಲಸದಲ್ಲೂ ಯಾರೊಬ್ಬರೂ ನೆರವಾಗುತ್ತಿರಲಿಲ್ಲ. ಬದಲಾಗಿ ಅವರನ್ನೇ ಹೀಯಾಳಿಸುತ್ತ, ಹಂಗಿಸುತ್ತ ಕಾಲ ಕಳೆಯುತ್ತಿದ್ರು. ಪತಿ ಕೂಡ ಇದರಿಂದ ಹೊರತಾಗಿರಲಿಲ್ಲ. ಆದ್ರೂ ಅನುರಾಧಾ ಇದನ್ನೆಲ್ಲ ಸಹಿಸಿಕೊಂಡ್ರು. ಆದ್ರೆ ತಮ್ಮ ಪತಿಗೆ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದೆ ಅನ್ನೋದು ಗೊತ್ತಾಗುತ್ತಿದ್ದಂತೆ ಅನುರಾಧಾ ಆಘಾತಗೊಂಡಿದ್ರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಪತಿಯ ಮನೆಯವರು ಇಬ್ಬರು ಮಕ್ಕಳೊಂದಿಗೆ ಅನುರಾಧಾರನ್ನು ಮನೆಯಿಂದ ಹೊರಹಾಕಿದ್ರು. ಮೂರು ವಾರಗಳ ಕಾಲ ತಮ್ಮ ಪುಟ್ಟ ಮಕ್ಕಳ ಜೊತೆ, ಒಬ್ಬ ಅಸಹಾಯಕ ಮಹಿಳೆಯ ಗುಡಿಸಲಲ್ಲಿ ಅನುರಾಧಾ ಆಶ್ರಯ ಪಡೆದ್ರು.

image


ಬದುಕಿನ ಅತ್ಯಂತ ಕಠಿಣ ದಿನಗಳಲ್ಲೂ ಅನುರಾಧಾ ಸೋಲೊಪ್ಪಿಕೊಳ್ಳಲಿಲ್ಲ. ನಿರಾಶರಾಗಲಿಲ್ಲ, ಈ ಘಟನೆಗಳು ಅವರಲ್ಲಿ ಆತ್ಮಸ್ಥೈರ್ಯ ತುಂಬಿದ್ದವು. ಒಬ್ಬ ಸುಶಿಕ್ಷಿತ ಮಹಿಳೆಗೆ ಇಂತಹ ಸ್ಥಿತಿ ಎದುರಾದ್ರೆ, ಅನಕ್ಷರಸ್ಥರು ಹಾಗೂ ಗೃಹಿಣಿಯರು ಎಷ್ಟು ಶೋಷಣೆಗೊಳಗಾಗುತ್ತಿರಬಹುದು ಎಂಬ ಆಲೋಚನೆ ಅವರಿಗೆ ಬಂದಿತ್ತು. ಈ ವಿಚಾರವೇ ಅವರ ಬದುಕನ್ನು ಬದಲಾಯಿಸಿದ್ದು. ಇನ್ನು ಮುಂದೆ ಮಹಿಳೆಯರ ಅಧಿಕಾರಕ್ಕಾಗಿ ಹೋರಾಡುವುದಾಗಿ ಅವರು ತೀರ್ಮಾನಿಸಿದ್ರು. ಅನ್ಯಾಯ ಹಾಗೂ ಶೋಷಣೆಗೊಳಗಾದ ಮಹಿಳೆಯರಿಗೆ ನೆರವಾಗಲು ಮುಂದಾದ್ರು. ಬಡತನ ಹಾಗೂ ಬಾಲಕಾರ್ಮಿಕ ಪದ್ಧತಿ ಮಧ್ಯೆ ಸಂಬಂಧವಿದೆ ಅನ್ನೋದು ಅನುರಾಧಾಗೆ ಗೊತ್ತಿತ್ತು. ಶೋಚನೀಯ ಪರಿಸ್ಥಿತಿಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಾರೆ. ಮಹಿಳಾ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಅಭಿಯಾನ ಹೆಸರಿನ ಸಂಸ್ಥೆಯನ್ನೇ ಅನುರಾಧಾ ಆರಂಭಿಸಿದ್ರು. ಈ ಸಂಸ್ಥೆಯ ಮೂಲಕ ಬಡವರು, ವಿಧವೆಯರು, ಪರಿತ್ಯಕ್ತ ಮಹಿಳೆಯರಿಗೆ ಶಿಕ್ಷಣ ಕೊಡುವ ಕೆಲಸವನ್ನು ಅನುರಾಧಾ ಶುರು ಮಾಡಿದ್ರು. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬಿಟ್ಟು ಕೆಲಸಕ್ಕೆ ಕಳುಹಿಸಲು ಮುಂದಾಗಿದ್ದ ಮಹಿಳೆಯರಿಗೆ ಆದ್ಯತೆ ನೀಡಿದ್ರು. ಅವರ ಹಕ್ಕುಗಳ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಲಾರಂಭಿಸಿದ್ರು. ಅನುರಾಧಾ ಅವರ ನೆರವಿನಿಂದ ಮಹಿಳೆಯರು ಸ್ವಾಭಿಮಾನದ ಜೊತೆ ಹಣ ಸಂಪಾದನೆ ಆರಂಭಿಸಿದ್ದು ವಿಶೇಷ. ಅದೆಷ್ಟೋ ಮಹಿಳೆಯರಿಗೆ ಉದ್ಯೋಗದ ಮಾರ್ಗ ಅರಸಿಕೊಟ್ಟ ಅನುರಾಧಾ, ಸರ್ಕಾರಿ ಯೋಜನೆಗಳ ಲಾಭ ಕೂಡ ದೊರೆಯುವಂತೆ ಮಾಡಿದರು.

ಕೆಲವೇ ತಿಂಗಳುಗಳಲ್ಲಿ ಕೊಲ್ಹಾಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಒಬ್ಬ ಜನಪ್ರಿಯ ಮಹಿಳಾ ಕಾರ್ಯಕರ್ತೆಯಾಗಿ ಅನುರಾಧಾ ಗುರುತಿಸಿಕೊಂಡ್ರು. ಅವರ ಸಲಹೆ ಹಾಗೂ ಸಹಾಯ ಅರಸಿ ದೂರದೂರದಿಂದ ಮಹಿಳೆಯರು ಆಗಮಿಸಲಾರಂಭಿಸಿದ್ರು. ಉಳಿದ ಸಾಮಾಜಿಕ ಕಾರ್ಯಕರ್ತರ ಜೊತೆಗೂಡಿ ಅನುರಾಧಾ ``ಶಿಕ್ಷಣದ ಹಕ್ಕು'' ಎಂಬ ಕಾನೂನಿನ ರೂಪುರೇಷೆ ತಯಾರಿಸಿದ್ದಾರೆ. ಈ ಕಾನೂನನ್ನು ಜಾರಿಗೆ ತರಲು ಹೋರಾಟ ಮಾಡಿದ್ದಾರೆ. ಬಡ, ಏಕಾಂಗಿ ಹಾಗೂ ನಿರ್ಗತಿಕ ಮಹಿಳೆಯರಿಗೆ ಆಹಾರ, ಬಟ್ಟೆ, ವಸತಿ, ಶಿಕ್ಷಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು `ಅವನಿ' ಎಂಬ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಅವನಿ ಸಂಸ್ಥೆಯ ಮೂಲಕ ಕೊಲ್ಹಾಪುರ ಹಾಗೂ ಸುತ್ತಮುತ್ತಲ ಮಹಿಳೆಯರ ಕಲ್ಯಾಣಕ್ಕಾಗಿ ಅನುರಾಧಾ ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲ ಮಾಲೀಕರ ಕೈಗೆ ಸಿಕ್ಕು ನರಕಯಾತನೆ ಅನುಭವಿಸಿದ್ದ ಹಲವಾರು ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಆ ಮಕ್ಕಳಿಗೆ ತಮ್ಮ ಸಂಸ್ಥೆಯಲ್ಲಿ ಊಟ, ವಸತಿ ಹಾಗೂ ಶಿಕ್ಷಣ ಸೌಲಭ್ಯವನ್ನು ಒದಗಿಸುತ್ತಿದ್ದಾರೆ. ಬಾಲ ಕಾರ್ಮಿಕ ಪದ್ಧತಿಯಿಂದ ಮುಕ್ತಿ ಪಡೆದ ಮಕ್ಕಳಿಗಾಗಿ ಪರಿಹಾರ ಶಿಬಿರಗಳು ಮತ್ತು ಶಾಲೆಗಳನ್ನು ಆರಂಭಿಸಿದ್ದಾರೆ.

ಈ ಸಾಮಾಜಿಕ ಕಾರ್ಯಗಳಿಂದ ಪ್ರಭಾವಿತರಾದ ಮಹಾತ್ಮಾ ಗಾಂಧಿ ಅವರ ಮೊಮ್ಮಗ ಅರುಣ್, ವಿಶಾಲವಾದ ಶಾಲೆಯೊಂದನ್ನು ತೆರೆಯಲು ಅನುರಾಧಾ ಅವರಿಗೆ ನೆರವಾಗಿದ್ದಾರೆ. ಮಕ್ಕಳ ಜೊತೆಗೂಡಿ ತುಷಾರ್ ಗಾಂಧಿ ಹಾಗೂ ಅರುಣ್ ಗಾಂಧಿ ಶಾಲೆಯ ಶಿಲಾನ್ಯಾಸ ನೆರವೇರಿಸಿದ್ದಾರೆ. ಸಹಜವಾಗಿಯೇ ಅನುರಾಧಾ ಅವರ ಸಾಮಾಜಿಕ ಕಾರ್ಯಗಳಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಪ್ರಶಂಸೆ ವ್ಯಕ್ತವಾಗಿದೆ. ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವವರಿಗೆಲ್ಲ ಅನುರಾಧಾ ಮಾದರಿಯಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅನುರಾಧಾ ಭ್ರೂಣ ಹತ್ಯೆ ಹಾಗೂ ಯುವತಿಯರು, ಮಕ್ಕಳ ಸಾಗಣಿಕೆ ವಿರುದ್ಧವೂ ಸಮರ ಆರಂಭಿಸಿದ್ದಾರೆ. ನೂರಾರು ಮಕ್ಕಳಿಗೆ ಅವರ ಬಾಲ್ಯವನ್ನು ಮರಳಿಸಿದ ಅನುರಾಧಾ ಅವರ ಹೃದಯವಂತಿಕೆಯನ್ನು, ಸಾಮಾಜಿಕ ಕಳಕಳಿಯನ್ನು ಮೆಚ್ಚಲೇಬೇಕು.

ಲೇಖಕರು: ಮಂಜು ಯಾದವ್

ಅನುವಾದಕರು: ಭಾರತಿ ಭಟ್