ಮಹಿಳಾ ಕ್ರಿಕೆಟ್ ನ ಮಿರಾಕಲ್ ಮಿಥಾಲಿ ರಾಜ್

ಟೀಮ್ ವೈ.ಎಸ್. ಕನ್ನಡ

ಮಹಿಳಾ ಕ್ರಿಕೆಟ್ ನ ಮಿರಾಕಲ್ ಮಿಥಾಲಿ ರಾಜ್

Tuesday May 10, 2016,

6 min Read

ವಾಯುಪಡೆಯಲ್ಲಿ ಈ ಹುಡುಗಿಯ ತಂದೆ ಕೆಲಸ ಮಾಡಿದ್ದರು. ಶಿಸ್ತು ಈ ಕುಟುಂಬದ ಒಂದು ಅಂಗವಾಗಿತ್ತು. ಹುಡುಗಿಯ ತಾಯಿ ಹಾಗೂ ಸಹೋದರ ಕೂಡ ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸ್ತಾ ಇದ್ದರು. ಆದ್ರೆ ಈ ಹುಡುಗಿ ಮಾತ್ರ ಕುಟುಂಬದವರಿಗಿಂತ ಭಿನ್ನವಾಗಿದ್ದಳು. ಆಲಸಿಯಾಗಿದ್ದಳು. ಶಾಲೆ ಗಂಟೆ ಎಂಟು ಮೂವತ್ತಕ್ಕೆ ಬಾರಿಸಿದ್ರೆ ಈಕೆ 8 ಗಂಟೆಗೆ ಏಳ್ತಾ ಇದ್ದಳು. ಮಗಳ ಈ ಆಲಸಿತನವನ್ನು ನೋಡಿದ ತಂದೆ ಬೇಸರಗೊಂಡಿದ್ದರು. ಮಗಳನ್ನು ಕ್ರಿಕೆಟ್ ಆಟಗಾರ್ತಿಯನ್ನಾಗಿ ಮಾಡುವ ಪಣ ತೊಟ್ಟರು. ಕ್ರಿಕೆಟ್ ಅಕಾಡೆಮಿಯಲ್ಲಿ ಮಗಳ ಹೆಸರು ಸೇರಿಸಿದ್ರು. ಹುಡುಗಿಯ ಸಹೋದರ ಕೂಡ ಕ್ರಿಕೆಡ್ ಅಕಾಡೆಮಿಯಲ್ಲಿ ಕ್ರಿಕೆಟ್ ಕಲಿಯುತ್ತಿದ್ದ. ಶಾಲಾ ಮಟ್ಟದ ಟೂರ್ನಮೆಂಟ್ ನಲ್ಲಿ ಆತ ಪಾಲ್ಗೊಳ್ತಾ ಇದ್ದ. ಮೊದ ಮೊದಲು ಹುಡುಗಿ ಅಲ್ಲಿಗೆ ಹೋಗಿ ಶಾಲೆಯ ಹೋಂ ವರ್ಕ್ ಮಾಡ್ತಾ ಇದ್ದಳು. ದಿನ ಕಳೆದಂತೆ ಅಣ್ಣನ ಆಟ ನೋಡ್ತಾ ಈಕೆ ಕೂಡ ಬ್ಯಾಟ್ ಹಿಡಿದಳು. ನೆಟ್ ಪ್ರ್ಯಾಕ್ಟೀಸ್ ಶುರುಮಾಡಿದಳು. ತಂದೆ ಪ್ರತಿ ದಿನ ಸ್ಕೂಟರ್ ನಲ್ಲಿ ಮಗ ಹಾಗೂ ಮಗಳನ್ನು ಕ್ರಿಕೆಟ್ ಅಕಾಡೆಮಿಗೆ ಕರೆದುಕೊಂಡು ಹೋಗ್ತಾ ಇದ್ದರು. ದಿನ ಕಳೆದಂತೆ ಹುಡುಗಿಗೆ ಕ್ರಿಕೆಟ್ ನಲ್ಲಿ ಆಸಕ್ತಿ ಜಾಸ್ತಿಯಾಯ್ತು. ಕ್ರಿಕೆಟನ್ನು ಪ್ರೀತಿಸಲು ಶುರುಮಾಡಿದಳು. ಕ್ರಿಕೆಟ್ ಜೀವನವಾಯ್ತು. ಪ್ರತಿಭೆ ಜೊತೆ ಅಭ್ಯಾಸ, ಉತ್ಸಾಹ, ಸಾಧಿಸಬೇಕೆಂಬ ಛಲ ಮೈದಾನದಲ್ಲಿ ಆಕೆ ಸಾಕಷ್ಟು ದಾಖಲೆ ಮಾಡಲು ನೆರವಾಯ್ತು. ಭಾರತ ತಂಡಕ್ಕೆ ಅನೇಕ ಐತಿಹಾಸಿಕ ಗೆಲುವು ತಂದುಕೊಟ್ಟಳು ಈಕೆ. ಭಾರತದಲ್ಲಿ ಮಹಿಳಾ ಕ್ರಿಕೆಟ್ ಪ್ರಸಿದ್ಧಿಗೆ ಈಕೆ ಕಾರಣಳಾದ್ಲು. `ಮಹಿಳಾ ಕ್ರಿಕೆಟ್ ನ ತೆಂಡೂಲ್ಕರ್’ ಎಂಬ ಬಿರುದು ಈಕೆ ಮುಡಿಗೇರಿತು. ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿರುವ ಈಕೆ ಬೇರಾರೂ ಅಲ್ಲ, ಸೂಪರ್ ಸ್ಟಾರ್ ಆಟಗಾರ್ತಿ ಮಿಥಾಲಿ ರಾಜ್.

image


ಭರತನಾಟ್ಯದಿಂದ ಕ್ರಿಕೆಟ್ ಆಟಗಾರ್ತಿವರೆಗೆ..

ಮಿಥಾಲಿ ರಾಜ್ ಕೇವಲ ಭಾರತದ ಕ್ರಿಕೆಟ್ ಆಟಗಾರ್ತಿಯಲ್ಲ. ಅವರು ವಿಶ್ವದ ಅತ್ಯುತ್ತಮ ಮಹಿಳಾ ಕ್ರಿಕೆಟ್ ಬ್ಯಾಟ್ಸ್ಮನ್. ಕ್ರಿಕೆಟ್ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಮುನ್ನ ಮಿಥಾಲಿ ಭರತನಾಟ್ಯ ಕಲಿಯುತ್ತಿದ್ದರು. ಭರತನಾಟ್ಯದಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಮಿಥಾಲಿ,ನಾಟ್ಯಗಾರ್ತಿಯಾಗುವ ಕನಸು ಹೊತ್ತಿದ್ದರು. ದೇಶ,ವಿದೇಶಗಳಲ್ಲಿ ಡಾನ್ಸ್ ಕಾರ್ಯಕ್ರಮ ನೀಡುವ ಬಯಕೆ ಅವರಲ್ಲಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಕಾರ್ಯಕ್ರಮಗಳನ್ನು ಮಿಥಾಲಿ ನೀಡಿದ್ದರು. ವೇದಿಕೆಯಲ್ಲಿ ಅವರ ನೃತ್ಯ ಪ್ರೇಕ್ಷಕರನ್ನು ಆಕರ್ಷಿಸ್ತಾ ಇತ್ತು. ಆದ್ರೆ ಕ್ರಿಕೆಟ್ ಅಕಾಡೆಮಿಗೆ ಕಾಲಿಟ್ಟ ನಂತ್ರ ಭರತನಾಟ್ಯ ಅಭ್ಯಾಸ ಮಾಡುವುದು ಕಡಿಮೆಯಾಗ್ತಾ ಬಂತು.ಸಮಯ ಸಿಕ್ಕಾಗ ಮಿಥಾಲಿ ಭರತನಾಟ್ಯವನ್ನು ಅಭ್ಯಾಸ ಮಾಡ್ತಾ ಇದ್ದರು. ಕ್ರಿಕೆಟ್ ಟೂರ್ನಮೆಂಟ್ ಗಳಲ್ಲಿ ಅವರು ಭಾಗಿಯಾಗ್ತಾ ಇದ್ದಂತೆ,ಬೇರೆ ಬೇರೆ ಊರು,ದೇಶಗಳಿಗೆ ಹೋಗುವ ಸಂದರ್ಭ ಬಂದಿದ್ದರಿಂದ ನೃತ್ಯದ ಅಭ್ಯಾಸ ಸಂಪೂರ್ಣ ನಿಂತು ಹೋಯ್ತು. ಆಗ ಮಿಥಾಲಿ ನೃತ್ಯ ಶಿಕ್ಷಕರು ಡಾನ್ಸ್ ಅಥವಾ ಕ್ರಿಕೆಟ್ ಈವೆರಡರಲ್ಲಿ ಒಂದನ್ನು ಆಯ್ದುಕೊಳ್ಳುವಂತೆ ಹೇಳಿದರು. ತುಂಬಾ ಯೋಚನೆ ಮಾಡಿದ ನಂತ್ರ ಮಿಥಾಲಿ ನೃತ್ಯ ಹಾಗೂ ವೇದಿಕೆ ಬಿಟ್ಟು ಕ್ರಿಕೆಟ್ ಮತ್ತು ಮೈದಾನವನ್ನು ತಮ್ಮ ವೃತ್ತಿಯನ್ನಾಗಿ ಆಯ್ದುಕೊಂಡರು.

ಈ ಮಹತ್ವದ ನಿರ್ಧಾರ ತೆಗೆದುಕೊಂಡ ಸಮಯದ ಬಗ್ಗೆ ಮಿಥಾಲಿ ಹೀಗೆ ಹೇಳ್ತಾರೆ. 

``ನಿರ್ಧಾರ ತೆಗೆದುಕೊಳ್ಳುವುದು ತುಂಬ ಕಠಿಣವಾಯ್ತು. ಆದ್ರೆ ಕ್ರಿಕೆಟ್ ನನ್ನನ್ನು ಸಂಪೂರ್ಣ ಆಕ್ರಮಿಸಿತ್ತು.ಅದನ್ನು ಹೊರತು ಬೇರೆ ವೃತ್ತಿಯನ್ನು ಆಯ್ದುಕೊಳ್ಳುವುದು ನನ್ನಿಂದ ಸಾಧ್ಯವಿರಲಿಲ್ಲ.’’

ಬ್ಯಾಟ್ ಹಿಡಿಯದಿದ್ದರೆ ನೀವು ನೃತ್ಯಗಾರ್ತಿಯಾಗುತ್ತಿದ್ದೀರಾ ಎಂಬ ಪ್ರಶ್ನೆಗೆ ಮಿಥಾಲಿ ಹೀಗೆ ಹೇಳ್ತಾರೆ. `` ಖಂಡಿತಾ ನಾನು ನೃತ್ಯಗಾರ್ತಿಯಾಗ್ತಾ ಇದ್ದೆ. ವೇದಿಕೆ ಮೇಲೆ ನೃತ್ಯ ಮಾಡ್ತಾ ಇದ್ದೆ. ಕ್ರಿಕೆಟ್ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಸಮಯದಲ್ಲಿ ನಾನು ರಂಗಪ್ರವೇಶ ಮಾಡಲು ಇನ್ನು ಎರಡು ಹಂತ ಮಾತ್ರ ಕಲಿಯಬೇಕಿತ್ತು.’’

ಕ್ರಿಕೆಟ್ ಸಾಧನೆ ಹಿಂದೆ ತಂದೆ

ಮೈದಾನದಲ್ಲಿ ಮಿಥಾಲಿ ರಾಜ್ ಸಾಕಷ್ಟು ದಾಖಲೆಗಳನ್ನು ಮಾಡಿದ್ದಾರೆ. ಮಿಥಾಲಿ ತಮ್ಮ ಯಶಸ್ಸನನ್ನು ತಮ್ಮ ತಂದೆ ದೊರೈ ರಾಜ್ ಗೆ ನೀಡ್ತಾರೆ. ಮಗಳು ಚಿಕ್ಕ ವಯಸ್ಸಿನಲ್ಲಿಯೇ ಭಾರತ ಕ್ರಿಕೆಟ್ ತಂಡದಲ್ಲಿ ಆಡಲಿ ಎಂಬುದು ಮಿಥಾಲಿ ತಂದೆಯ ಆಸೆಯಾಗಿತ್ತಂತೆ. ತಂದೆ ಹಾಗೂ ಮಗಳ ಪರಿಶ್ರಮದಿಂದಾಗಿ 14ನೇ ವಯಸ್ಸಿನಲ್ಲಿಯೇ ಮಿಥಾಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟ್ಯಾಂಡ್ ಬಾಯ್ ಆಗಿ ಆಯ್ಕೆಯಾಗಿದ್ದರು. 16ನೇ ವಯಸ್ಸಿನಲ್ಲಿ ಮಿಥಾಲಿ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯವಾಡಿದ್ರು. ಜೂನ್ 26,1999ರಲ್ಲಿ ಮಿಲ್ಟಂ ಕಿನೇಸ್ ನ ಕ್ಯಾಂಪ್ಬೆಲ್ ಪಾರ್ಕ್ ನಲ್ಲಿ ರೇಶ್ಮಾ ಗಾಂಧಿ ಜೊತೆ ಐರ್ಲ್ಯಾಂಡ್ ವಿರುದ್ಧ ತಮ್ಮ ಅಂತರಾಷ್ಟ್ರೀಯ ಪಂದ್ಯವಾಡಿದ್ದರು ಮಿಥಾಲಿ. ಈ ಪಂದ್ಯದಲ್ಲಿ 114 ರನ್ ಗಳಿಸಿದ್ದರು. ರೇಶ್ಮಾ 104 ರನ್ ಗಳಿಸಿದ್ದರು. ಭಾರತ ತಂಡ 161 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು. ಈ ಪಂದ್ಯ ಮೂಲಕ ಭಾರತಕ್ಕೊಂದು ಭರವಸೆಯ ಆಟಗಾರ್ತಿ ಸಿಕ್ಕಿದ್ದರು.ನಂತ್ರ ಏಕದಿನ ಪಂದ್ಯದಲ್ಲಿ 5 ಸಾವಿರ ರನ್ ಗಳಿಸಿದ ಭಾರತದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಗೆ ಗಳಿಸಿದ್ರು ಮಿಥಾಲಿ. ಈವರೆಗೆ ಕೇವಲ ಇಬ್ಬರು ಮಹಿಳಾ ಆಟಗಾರ್ತಿಯರು ಮಾತ್ರ ಏಕದಿನ ಪಂದ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಮಿಥಾಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು 2002ರಲ್ಲಿ ಆಡಿದ್ರು. ಜನವರಿ 14-17ರವರೆಗೆ ಲಕ್ನೋದಲ್ಲಿ ನಡೆದ ಈ ಪಂದ್ಯದಲ್ಲಿ ಮಿಥಾಲಿ ಶೂನ್ಯಕ್ಕೆ ಔಟ್ ಆಗಿದ್ದರು. ನಂತ್ರ ಟೆಸ್ಟ್ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಬಿರುದು ಪಡೆದ್ರು.

image


ಮಹಿಳಾ ಕ್ರಿಕೆಟ್ ಮತ್ತು ಸತ್ಯ

ಮಿಥಾಲಿ ರಾಜ್ ಪಯಣ ಸುಲಭವಾಗಿರಲಿಲ್ಲ. ಚಿಂತೆ,ಒತ್ತಡವಿಲ್ಲದೆ ಇಲ್ಲಿಯವರೆಗೆ ಅವರು ಬಂತು ನಿಂತಿಲ್ಲ. ಮಹಿಳೆಯರೂ ಕ್ರಿಕೆಟ್ ಆಡ್ತಾರೆ ಎಂಬುದು ಗೊತ್ತಿಲ್ಲದ ಕಾಲದಲ್ಲಿ ಮಿಥಾಲಿ ಕ್ರಿಕೆಟ್ ಆಡಲು ಶುರುಮಾಡಿದ್ದರು. ಅನೇಕರಿಗೆ ಮಹಿಳೆಯರು ಕ್ರಿಕೆಟ್ ಆಡ್ತಾರೆ ಎಂಬುದು ಗೊತ್ತೇ ಇರಲಿಲ್ಲ. ಮಹಿಳಾ ಕ್ರಿಕೆಟ್ ತಂಡ ಕೂಡ ಇದೆ. ಅವರೂ ಪುರುಷರು ಆಡುವ ಮೈದಾನದಲ್ಲಿಯೇ ಆಡ್ತಾರೆ, ಎರಡೂ ಕ್ರಿಕೆಟ್ ನಿಯಮಗಳು ಒಂದೇ ಎಂಬುದು ಅನೇಕರಿಗೆ ತಿಳಿದಿರಲಿಲ್ಲ. ಮಿಥಾಲಿ ಭಾರತೀಯ ಕ್ರಿಕೆಟ್ ತಂಡ ಸೇರಿದಾಗ, ಭಾರತ ಮಹಿಳಾ ಕ್ರಿಕೆಟ್ ತಂಡದ ಉತ್ತಮ ಆಟಗಾರ್ತಿ ಯಾರು? ನೋಡಲು ಅವರು ಹೇಗಿದ್ದಾರೆ? ಅವರ ದಾಖಲೆಗಳು ಏನು? ಎಂಬುದರ ಬಗ್ಗೆ ತಿಳಿದಿರಲಿಲ್ಲವಂತೆ. ಹಿರಿಯ ತಂಡದಲ್ಲಿ ಸ್ಥಾನ ಪಡೆದ ನಂತ್ರ ಮಿಥಾಲಿಗೆ ಶಾಂತಾ ರಂಗಸ್ವಾಮಿ, ಡಯಾನಾ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ತಂತೆ. ಆ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಪುರುಷ ಕ್ರಿಕೆಟ್ ತಂಡದ ಬಗ್ಗೆ,ಪಂದ್ಯದ ಬಗ್ಗೆ ಚರ್ಚೆಯಾಗ್ತಾ ಇತ್ತು. ಆದ್ರೆ ಮಹಿಳಾ ತಂಡದ ಬಗ್ಗೆ ಜನರಿಗೆ ತಿಳಿದಿರಲಿಲ್ಲ. ರೈಲಿನಲ್ಲಿ ಮಹಿಳಾ ಕ್ರಿಕೆಟ್ ತಂಡ ಪ್ರಯಾಣ ಮಾಡ್ತಾ ಇದ್ದರೆ ಹಾಕಿ ತಂಡವಾ ಎಂದು ಪ್ರಶ್ನೆ ಮಾಡ್ತಾ ಇದ್ದರಂತೆ. ಇಲ್ಲ ಕ್ರಿಕೆಟ್ ಟೀಂ ಎಂದ್ರೆ ಜನ ಆಶ್ಚರ್ಯಗೊಳ್ಳುತ್ತಿದ್ದರಂತೆ. ಜೊತೆಗೆ ಅನೇಕ ಪ್ರಶ್ನೆಗಳನ್ನು ಕೇಳ್ತಾ ಇದ್ದರಂತೆ.

ಪುರುಷ ಆಟಗಾರರ ಜೊತೆ ಅಭ್ಯಾಸ ಮಾಡಲು ಹೋಗ್ತಾ ಇದ್ದ ದಿನ ಮಿಥಾಲಿಗೆ ಇನ್ನೂ ನೆನಪಿದೆ. ಆಗ ಆಟಗಾರರು ಕೆಟ್ಟದಾಗಿ ಕಮೆಂಟ್ ಮಾಡ್ತಾ ಇದ್ದರಂತೆ. ಆಟವಾಡ್ತಾ ಇರುವವಳು ಹುಡುಗಿ. ಚೆಂಡನ್ನು ನಿಧಾನವಾಗಿ ಹಾಕು,ಗಾಯವಾದ್ರೆ ಕಷ್ಟ ಎನ್ನುತ್ತಿದ್ದರಂತೆ. ಆದ್ರೆ ಎಲ್ಲಿಯೂ ಮಿಥಾಲಿ ತಾಳ್ಮೆ ಕಳೆದುಕೊಳ್ಳಲಿಲ್ಲ. ಭರವಸೆ ಕಳೆದುಕೊಳ್ಳಲಿಲ್ಲ. ಸವಾಲನ್ನು ಎದುರಿಸಿ ನಿಂತರು. ತಮ್ಮ ಸಾಮರ್ಥ್ಯ ಹಾಗೂ ಪ್ರತಿಭೆಯಿಂದಾಗಿ ಭಾರತದಲ್ಲಿ ಮಹಿಳಾ ಕ್ರಿಕೆಟ್ ಗೆ ಒಂದು ಗೌರವಾನ್ವಿತ ಸ್ಥಾನ ನೀಡಲುವಲ್ಲಿ ಮಹತ್ವದ ಪಾತ್ರವಹಿಸಿದ್ರು.

image


ಚೆನ್ನಾಗಿ ಆಡುವುದೇ ಗುರಿ

ಕ್ರಿಕೆಟ್ ಆಡಲು ಶುರುಮಾಡಿದ್ದ ಮಿಥಾಲಿ ಯಾವುದೇ ದೊಡ್ಡ ಗುರಿ ಇಟ್ಟುಕೊಂಡಿರಲಿಲ್ಲ. ಕ್ರಿಕೆಟ್ ಟೀಂಗೆ ಆಯ್ಕೆಯಾಗುವುದು ಅವರ ಮೊದಲ ಗುರಿಯಾಗಿತ್ತು. ಆಯ್ಕೆಯಾದ ನಂತ್ರ ತಮ್ಮ ಸ್ಥಾನವನ್ನು ಖಾಯಂಗೊಳಿಸುವುದು ಅವರ ಟಾರ್ಗೆಟ್ ಆಯ್ತು. ನಂತ್ರ ತಂಡದಲ್ಲಿ ಮುಖ್ಯ ಆಟಗಾರ್ತಿಯಾಗುವುದು ಅವರ ಗುರಿಯಾಗಿತ್ತು.ಅದಕ್ಕಾಗಿ ಅವರು ಪರಿಶ್ರಮ ಪಟ್ಟರು. ಪ್ರತಿಯೊಂದು ಪಂದ್ಯದಲ್ಲಿಯೂ ಪಣತೊಟ್ಟು ಆಟವಾಡಿದರು. ಪಂದ್ಯಾವಳಿಯಲ್ಲಿ ಭಾರತ ತಂಡ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದರು. ಉತ್ತಮ ಆಟದಿಂದಾಗಿ ಅವರು ಟೀಂ ಇಂಡಿಯಾದ ನಾಯಕಿ ಪಟ್ಟಕ್ಕೇರಿದರು. ನಾಯಕಿ ಪಟ್ಟ ಎಲ್ಲರಿಗೂ ಸಿಗುವಂತಹದ್ದಲ್ಲ. ಅದೃಷ್ಟ ಯಾರಿಗಿದೆಯೋ ಅವರು ಮಾತ್ರ ಈ ಸ್ಥಾನಕ್ಕೇರುತ್ತಾರೆ ಎನ್ನುತ್ತಾರೆ ಮಿಥಾಲಿ.

ಯುವರ್ ಸ್ಟೋರಿ ಜೊತೆ ಮಿಥಾಲಿ ಅನೇಕ ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಪ್ರೇರಣೆ : ಈಗಲೂ ಮಿಥಾಲಿಯವರಿಗೆ ಅವರ ತಂದೆ ದೊರೈ ರಾಜ್ ಪ್ರೇರಣೆಯಂತೆ. 

``ಡ್ಯಾಡಿಯಿಂದಾಗಿಯೇ ನಾನು ಕ್ರಿಕೆಟ್ ವೃತ್ತಿಯನ್ನು ಆರಂಭಿಸಿದೆ. ನಾನು ಚಿಕ್ಕ ವಯಸ್ಸಿನಲ್ಲಿಯೇ ಭಾರತ ಪರ ಆಡಲಿ ಎಂದು ಅವರು ಬಯಸಿದ್ದರು. ನಾನು ಹೆಚ್ಚಿನ ಸ್ಕೋರ್ ಮಾಡಿದಾಗ ಡ್ಯಾಡಿಗೆ ಪೋನ್ ಮಾಡಿ ತಿಳಿಸುತ್ತೇನೆ. ಅವರು ಖುಷಿಯಾಗುತ್ತಾರೆ. ಅವರ ಈ ಖುಷಿಯೇ ನನಗೆ ಪ್ರೇರಣೆ ನೀಡುತ್ತದೆ.’’

ಮಗಳಿಗಾಗಿ ತಾಯಿಯ ತ್ಯಾಗ : ಕ್ರಿಕೆಟ್ ಬಗ್ಗೆ ಅಪ್ಪನಿಗೆ ತಿಳಿದಷ್ಟು ಮಿಥಾಲಿ ಅಮ್ಮನಿಗೆ ತಿಳಿದಿಲ್ಲ. ಆದ್ರೂ ಮಗಳ ಭವಿಷ್ಯದಲ್ಲಿ ತಾಯಿಯ ಪಾತ್ರ ಮಹತ್ವದ್ದು. ಮಗಳಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ ಅಮ್ಮ. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮಿಥಾಲಿ ಅಮ್ಮನ ಸಲಹೆ ಪಡೆಯುತ್ತಾರಂತೆ. ಮಾನಸಿಕ ಚಿಂತೆಗೆ ಒಳಗಾದಾಗ ಮಿಥಾಲಿ ಅಮ್ಮನಿಗೆ ಫೋನ್ ಮಾಡ್ತಾರಂತೆ. ಅವರು ಹೇಳಿದಂತೆ ನಡೆಯುವುದರಿಂದ ಮಿಥಾಲಿಗೆ ನೆಮ್ಮದಿ ಸಿಗುತ್ತದೆಯಂತೆ.

ಟೀಕಾಕಾರರು : 2013ರಲ್ಲಿ ಮಿಥಾಲಿ ನೇತೃತ್ವದ ತಂಡ ಸೂಪರ್ ಸಿಕ್ಸ್ ನಲ್ಲಿ ಕೂಡ ಸ್ಥಾನ ಪಡೆಯಲಿಲ್ಲ. ಆಗ ಅವರ ತಂದೆಯಿಂದ ಹಿಡಿದು ಅನೇಕರು ಟೀಕೆ ಮಾಡಿದ್ದರು. ತಂದೆ ನಾಯಕತ್ವ ಬಿಡುವಂತೆ ಸಲಹೆ ನೀಡಿದ್ದರು. ಕ್ರಿಕೆಟ್ ನಿಂದ ಸನ್ಯಾಸತ್ವ ಸ್ವೀಕರಿಸುವಂತೆ ಕೆಲವರು ಸಲಹೆ ನೀಡಿದ್ದರಂತೆ. ಆದ್ರೆ ಉತ್ತಮ ಟೀಕಾಕಾರರಾಗಿರುವ ಮಿಥಾಲಿ ತಂದೆ ಎಲ್ಲರೂ ನಮ್ಮನ್ನು ಇಷ್ಟಪಡಬೇಕೆಂದೇನೂ ಇಲ್ಲ ಎಂದಿದ್ದರಂತೆ. ತಂದೆಯ ಟೀಕೆಯನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿ, ಮುಂದೆ ನಡೆದರಂತೆ ಮಿಥಾಲಿ. ಟೀಕಾಕಾರರು ನಮ್ಮ ಜೊತೆಗಿರಬೇಕು. ತಮ್ಮಲ್ಲಿನ ತಪ್ಪುಗಳನ್ನು ಎತ್ತಿ ಹೇಳಿದಾಗ ಮಾತ್ರ ತಿದ್ದಿ ನಡೆಯಲು ಸಾಧ್ಯ. ನಮ್ಮನ್ನು ಮೆಚ್ಚಿಕೊಳ್ಳಿ,ನಮ್ಮ ಆಟವನ್ನು ಇಷ್ಟಪಡಿ ಎಂದು ಎಲ್ಲರಿಗೂ ಒತ್ತಡ ಹೇರಲು ಸಾಧ್ಯವಿಲ್ಲ. ಎಲ್ಲರನ್ನೂ ಎಲ್ಲ ಸಮಯದಲ್ಲೂ ಖುಷಿಪಡಿಸಲು ಆಗುವುದಿಲ್ಲ ಎನ್ನುತ್ತಾರೆ ಮಿಥಾಲಿ.

ಮಹಿಳಾ ಕ್ರಿಕೆಟ್ ನಲ್ಲಿ ರಾಜಕೀಯ : ಮಹಿಳಾ ಕ್ರಿಕೆಟ್ ಕ್ಷೇತ್ರದಲ್ಲಿಯೂ ರಾಜಕೀಯವಿದೆ ಎನ್ನುತ್ತಾರೆ ಮಿಥಾಲಿ.ಮಾಧ್ಯಮಗಳಿಂದ ಮಹಿಳಾ ಕ್ರಿಕೆಟ್ ಕ್ಷೇತ್ರ ದೂರವಿರುವುದರಿಂದ ಅಲ್ಲಿನ ರಾಜಕೀಯ ಹೊರಗೆ ಬರುವುದಿಲ್ಲ. ಕೊಳಕು ರಾಜಕೀಯದಿಂದಾಗಿ ಪ್ರತಿಭೆಯುಳ್ಳ ಅನೇಕ ಆಟಗಾರರಿಗೆ ಇಲ್ಲಿ ಸ್ಥಾನ ಸಿಗ್ತಾ ಇಲ್ಲ. ಮಾನಸಿಕವಾಗಿ ಸದೃಢವಾಗಿರುವವರು ಮಾತ್ರ ರಾಜಕೀಯವನ್ನು ಜಯಿಸಿ ಮುನ್ನೆಡೆಯುತ್ತಾರೆ. ದುರ್ಬಲರು ಇದಕ್ಕೆ ಬಲಿಯಾಗುತ್ತಾರೆ ಎನ್ನುತ್ತಾರೆ ಮಿಥಾಲಿ.

ಸಚಿನ್ ತಂಡೂಲ್ಕರ್ ಜೊತೆ ತುಲನೆ : ಸಚಿನ್ ತೆಂಡೂಲ್ಕರ್ ಗೆ ನನ್ನನ್ನು ಹೋಲಿಸಿದ್ರೆ ನನಗೆ ಬಹಳ ಖುಷಿಯಾಗುತ್ತದೆ. ಅವರ ಸಾಧನೆ ಮತ್ತು ಕೊಡುಗೆ ತುಂಬಾ ದೊಡ್ಡದು. ಅಷ್ಟು ದೊಡ್ಡ ಆಟಗಾರನ ಜೊತೆ ನನ್ನನ್ನು ತುಲನೆ ಮಾಡುವುದು ಖುಷಿ ವಿಚಾರ. ಆದ್ರೆ ಜನರು ನನ್ನನ್ನು ನನ್ನ ಹೆಸರಿನಿಂದ ಗುರುತಿಸಲಿ, ನನ್ನ ಸಾಧನೆ ಹಾಗೂ ಕೊಡುಗೆಗಳ ಮೂಲಕ ಗುರುತಿಸಲಿ ಎಂಬುದು ನನ್ನ ಆಸೆ.

ಯಶಸ್ಸಿನ ಮಂತ್ರ: ಪರಿಶ್ರಮವಿಲ್ಲದೆ ಹೋದಲ್ಲಿ ಯಶಸ್ಸು ಸಿಗುವುದಿಲ್ಲ. ಭಾರತೀಯ ಕ್ರಿಕೆಟ್ ಟೀಂನಲ್ಲಿ ಸ್ಥಾನ ಪಡೆಯಲು ಹುಡುಗಿಯರಿಗೆ ವರ್ಷಾನುಗಟ್ಟಲೆ ಪರಿಶ್ರಮಪಡಬೇಕಾಗುತ್ತದೆ.ಮಹಿಳೆಯರು ಮೊದಲು ತಮ್ಮ ಕ್ಷೇತ್ರವನ್ನು ಆಯ್ದುಕೊಳ್ಳಬೇಕು. ನಂತರ ಅದನ್ನು ಗಮನದಲ್ಲಿಟ್ಟುಕೊಂಡು ಗುರಿಯೆಡೆಗೆ ಸಾಗಬೇಕೆಂದು ಮಿಥಾಲಿ ಸಲಹೆ ನೀಡಿದ್ದಾರೆ.

ನೆಚ್ಚಿನ ಪುರುಷ ಕ್ರಿಕೆಟಿಗ : ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ರ ಮಾನಸಿಕ ಶಕ್ತಿ ಪಂದ್ಯದ ತಯಾರಿಗೆ ಸ್ಪೂರ್ತಿ ನೀಡುತ್ತದೆಯಂತೆ.

ನೆಚ್ಚಿನ ಮಹಿಳಾ ಕ್ರಿಕೆಟರ್ : ನೀತು ಡೇವಿಡ್ ರಿಗೆ ಪ್ರಭಾವಿತರಾಗಿದ್ದಾರಂತೆ ಮಿಥಾಲಿ. ನೀತು ಡೇವಿಡ್ ಮಿಥಾಲಿಯವರ ಸಾರ್ವಕಾಲಿಕ ನೆಚ್ಚಿನ ಆಟಗಾರ್ತಿಯಂತೆ.

image


ಯಾವ ಆಟಗಾರ್ತಿಯನ್ನು ಎದುರಿಸಲು ಭಯವಾಗುತ್ತದೆ?: ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದ ಆರಂಭದಲ್ಲಿ ಇಂಗ್ಲೆಂಡ್ ವೇಗದ ಬೌಲರ್ ಲೂಸಿ ಪಿಯರ್ಸನ್ ಎದುರಿಸಲು ಮಿಥಾಲಿಗೆ ಭಯವಾಗ್ತಾ ಇತ್ತಂತೆ. ಆದ್ರೆ ಲೂಸಿ ಜೊತೆ ತುಂಬಾ ಪಂದ್ಯ ಆಡುವ ಅವಕಾಶ ಸಿಗಲಿಲ್ಲ. ಅವರು ಬೇಗ ನಿವೃತ್ತಿ ಪಡೆದ್ರು ಎಂದು ನಗುತ್ತ ಹೇಳ್ತಾರೆ ಮಿಥಾಲಿ.

ಜೀವನದ ಬಹುಮುಖ್ಯ ಕನಸು : ಆಟಗಾರ್ತಿಯಾಗಿ ಅಥವಾ ನಾಯಕಿಯಾಗಿ ವಿಶ್ವಕಪ್ ಎತ್ತಿ ಹಿಡಿಯುವುದು.

ಜೀವನದಲ್ಲಿ ಅತ್ಯಂತ ಖುಷಿ ನೀಡಿದ ಘಳಿಗೆ : ಇಂಗ್ಲೆಂಡ್ ವಿರುದ್ಧ ಟೆಸ್ಟ್ ಮ್ಯಾಚ್ ಗೆದ್ದ ಕ್ಷಣ. ಭಾರತ ಟೆಸ್ಟ್ ತಂಡದ ನಾಯಕಿ ನಾನಾಗಿದ್ದೆ. ತಂಡದ 11 ಮಂದಿ ಆಟಗಾರರಲ್ಲಿ 8 ಮಂದಿ ಮೊದಲ ಬಾರಿ ಟೆಸ್ಟ್ ಪಂದ್ಯ ಆಡುತ್ತಿದ್ದರು. ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು ಸೋಲಿಸಿ ಆಶಸ್ ಸರಣಿಯ ಬಲಿಷ್ಠ ತಂಡವಾಗಿತ್ತು. ಈ ವೇಳೆ ಇಂಗ್ಲೆಂಡ್ ಮಣಿಸಿದ್ದು,ಅತ್ಯಂತ ಸಂತೋಷಗೊಂಡ ಕ್ಷಣ ಎನ್ನುತ್ತಾರೆ ಮಿಥಾಲಿ.

ಹತಾಶೆಗೊಂಡ ಕ್ಷಣ : ಏಕದಿನ ಹಾಗೂ ಟಿ-20ಯಲ್ಲಿ ಅತ್ಯಂತ ಉತ್ತಮ ತಂಡವಾಗಿದ್ದರೂ ವಿಶ್ವಕಪ್ ನಿಂದ ಹೊರಬಿದ್ದಿದ್ದು.

ಮಿಥಾಲಿ ರಾಜ್ ಬಗ್ಗೆ ಇನ್ನೂ ಕೆಲವು ಮಾಹಿತಿ :

ರಾಜಸ್ಥಾನದ ಜೋದಪುರದಲ್ಲಿ ಡಿಸೆಂಬರ್ 3, 1982 ರಲ್ಲಿ ಮಿಥಾಲಿ ರಾಜ್ ಜನಿಸಿದರು.

ಕುಟುಂಬ ಹೈದ್ರಾಬಾದ್ ಗೆ ಶಿಫ್ಟ್ ಆಗಿದ್ದರಿಂದ ಮಿಥಾಲಿ ಕೂಡ ಹೈದ್ರಾಬಾದ್ ಗೆ ಬಂದ್ರು,

ವಾಯು ಸೇನೆಯಲ್ಲಿ ಕೆಲಸ ಮಾಡಿದ್ದ ತಂದೆ ನಂತ್ರ ಬ್ಯಾಂಕ್ ಅಧಿಕಾರಿಯಾದ್ರು.

ಮಿಥಾಲಿಗಾಗಿ ಅವರ ತಾಯಿ ಕೆಲಸ ಬಿಟ್ಟರು. ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡರು.

2010,20111,2012ರಲ್ಲಿ ಮಿಥಾಲಿ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಸತತ ಮೂರು ವರ್ಷ ಮೊದಲ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆ ಮಿಥಾಲಿ.

ಅರ್ಜುನ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ ಮಿಥಾಲಿ.

ಮಿಥಾಲಿ ಇಲ್ಲಿಯವರೆಗೆ 164 ಏಕದಿನ ಪಂದ್ಯವಾಡಿದ್ದಾರೆ. 42 ಬಾರಿ ಅಜೇಯರಾಗುಳಿದಿದ್ದಾರೆ. ಏಕದಿನ ಪಂದ್ಯದಲ್ಲಿ 5 ಶತಕ ಬಾರಿಸಿ ವಿಶ್ವ ದಾಖಲೆ ಮಾಡಿದ್ದಾರೆ ಮಿಥಾಲಿ.

ಮಿಥಾಲಿ 59 ಟಿ-20 ಪಂದ್ಯವನ್ನಾಡಿದ್ದಾರೆ. 34.6 ಸರಾಸರಿಯಲ್ಲಿ 1488 ರನ್ ಗಳಿಸಿದ್ದಾರೆ.

ಮಿಥಾಲಿ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 51 ಸರಾಸರಿಯಲ್ಲಿ 16 ಇನ್ನಿಂಗ್ಸ್ ನಲ್ಲಿ 663 ರನ್ ಗಳಿಸಿದ್ದಾರೆ. 214 ಅವರ ಅತಿ ಹೆಚ್ಚಿನ ರನ್ ಆಗಿದೆ.