ಮಾನವೀಯತೆ, ಸಮಯಪ್ರಜ್ಞೆಗೆ ಮತ್ತೊಂದು ಹೆಸರು ಬೆಂಗಳೂರು ಪೊಲೀಸರು

ಕೃತಿಕಾ

ಮಾನವೀಯತೆ, ಸಮಯಪ್ರಜ್ಞೆಗೆ ಮತ್ತೊಂದು ಹೆಸರು ಬೆಂಗಳೂರು ಪೊಲೀಸರು

Sunday January 17, 2016,

3 min Read

ಪೊಲೀಸರು ಅಂದ್ರೆ ಅಧಿಕಾರದ ದರ್ಪ ತೋರಿಸೋರು ಅನ್ನೋದು ಸಾಮಾನ್ಯ ಜನರಲ್ಲಿ ಇರುವ ನಂಬಿಕೆ. ಇವತ್ತಿಗೂ ಪೊಲೀಸರನ್ನ ಮಾತನಾಡಿಸಲೂ ಕೂಡ ಹಿಂಜರಿಯುವ ಜನ ನಮ್ಮಲ್ಲಿದ್ದಾರೆ. ಪೊಲೀಸರು ಅಂದ್ರೆ ನಮ್ಮ ಜನರಿಗೆ ಅದೇನೋ ಭಯ, ಹೆದರಿಕೆ. ಆದ್ರೆ ಈ ಮಾತಿಗೆ ಅಪವಾದ ಎಂಬಂತೆ ಬೆಂಗಳೂರಿನ ಕೆಲವು ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಹೌದು ಬೆಂಗಳೂರು ಪೊಲೀಸರ ಮಾನವೀಯತೆ, ಸಮಯಪ್ರಜ್ಞೆ ಸಾರುವ ಮೂರು ಸ್ಟೋರಿಗಳು ಇಲ್ಲಿವೆ. ಬದಲಾಗಬೇಕು ಭಾರತ ಅನ್ನೋ ಪರಿಕಲ್ಪನೆಗೆ ಈ ಮೂರು ಘಟನೆಗಳು ಸ್ಫೂರ್ತಿಯಾಗಲಿವೆ..

ನಡುರಸ್ತೆಯಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಎಸ್.ಐ..!

ಬೆಂಗಳೂರು ಪೊಲೀಸರಿಂದ ಮಾನವೀಯತೆ ಸಾರುವಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ನವೆಂಬರ 20ರ ಬೆಳಗ್ಗೆ ಒಂಬತ್ತು ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಬ್ಯಾಟರಾಯನಪುರ ಸಂಚಾರ ಠಾಣಾ ವ್ಯಾಪ್ತಿಯ ಎಸ್ ಐ ಗೋಪಾಲಕೃಷ್ಣ ಅವರು ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಗೆ ರಸ್ತೆ ಪಕ್ಕದಲ್ಲೇ ಹೆರಿಗೆಗೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಈಗ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಬಾಪೂಜಿನಗರದ ಗಾಳಿ ಆಂಜನೇಯ ದೇವಸ್ಥಾನದ ಬಳಿಯ ಮೇಲ್ಸೇತುವೆ ಮೇಲೆ ನಡೆದು ಹೋಗುತ್ತಿದ್ದ ಸೆಲ್ವಿ ಎಂಬ ಗರ್ಬಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನೋವು ಹೆಚ್ಚಾಗುತ್ತಿದ್ದಂತೆ ಸೆಲ್ವಿ ಕುಸಿದು ಕುಳಿತಿದ್ದಾರೆ. ಆಕೆಯನ್ನು ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಬ್ಯಾಟರಾಯಬಪುರ ಸಂಚಾರ ಠಾಣೆಯ ಸಬ್ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ನೋಡಿದ್ದಾರೆ. ತಕ್ಷಣ ಆಕೆಗೆ ನೀರು ಕೊಟ್ಟು ಆರೈಕೆ ಮಾಡಿದ್ದಾರೆ. ಗರ್ಬಿಣಿ ಅನ್ನೋದು ಗೊತ್ತಾಗ್ತಿದ್ದಂತೆ ಕೂಡಲೇ ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದ್ರೆ ಆಂಬ್ಯುಲೆನ್ಸ್ ಬರುವುದಕ್ಕೆ ಮೊದಲೇ ಮಹಿಳೆಗೆ ಹೊಟ್ಟೆ ನೋವು ಹೆಚ್ಚಾಗಿದೆ. ಕೂಡಲೇ ಅಲ್ಲೇ ಇದ್ದ ಕೆಲವು ಮಹಿಳೆಯರನ್ನು ಸ್ಥಳಕ್ಕೆ ಕರೆಸಿದ ಎಸ್. ಐ. ರಸ್ತೆ ಬದಿಯಲ್ಲೇ ಹೆರಿಗೆಗೆ ವ್ಯವಸ್ಥೆ ಮಾಡಿದ್ದರು. ರಸ್ತೆ ಬದಿಯಲ್ಲೇ ಸುತ್ತಲೂ ಸೀರೆ ಹಿಡಿದ ಮಹಿಳೆಯರು ಸೆಲ್ವಿಗೆ ಹೆರಿಗೆ ಮಾಡಿಸಿದ್ದರು. ನಡು ರಸ್ತೆಯಲ್ಲೇ ಸೆಲ್ವಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು..! ಆಕೆಗೆ ಹೆರಿಗೆ ಆದ ನಂತರ ಆಂಬ್ಯುಲೆನ್ಸ್ ಸ್ಥಳಕ್ಕೆ ಬಂದಿದೆ. ಕೂಡಲೇ ಗೋಪಾಲಕೃಷ್ಣ ಮತ್ತು ಅಲ್ಲಿದ್ದ ಮಹಿಳೆಯರು ಸೆಲ್ವಿಯನ್ನು ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿದ್ದರು.ಬೆಂಗಳೂರು ಪೊಲೀಸರ ಮಾನವೀಯತೆ, ಸಮಯಪ್ರಜ್ಞೆಗೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಸಬ್ ಇನ್ಸ್​​ಪೆಕ್ಟರ್ ಗೋಪಾಲಕೃಷ್ಣ ಅವರಿಗೆ ನಮ್ಮ ಕಡೆಯಿಂದ ಹ್ಯಾಟ್ಸ್ ಆಫ್...

image


ಟ್ರಾಫಿಕ್ ಪೊಲೀಸರ ಸಮಯಪ್ರಜ್ಞೆಗೆ ಉಳಿದ ವೃದ್ಧರ ಪ್ರಾಣ...!

ಬೆಂಗಳೂರು ಸಂಚಾರ ಪೋಲೀಸರ ಸಮಯ ಪ್ರಜ್ಞೆ ಮತ್ತು ಮಾನವೀಯತೆ ವೃದ್ಧರೊಬ್ವರ ಜೀವ ಉಳಿಸಿದೆ. ಹೌದು ಕಾರ್ ಚಲಾಯಿಸುವಾಗ ಹೃದಯಾಘಾತವಾಗಿ ಅಸ್ವಸ್ಥರಾದ ವೃದ್ಧರೊಬ್ಬರನ್ನ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿ ಬೆಂಗಳೂರಿನ ಚಿಕ್ಕಪೇಟೆ ಸಂಚಾರಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಚಿಕ್ಕಪೇಟೆ ಸಂಚಾರ ಠಾಣಾ ವ್ಯಾಪ್ತಿಯ ಸುಲ್ತಾನ್ ಪೇಟೆಯಲ್ಲಿ 2015ರ ಜುಲೈ 14 ರಂದು ಈ ಘಟನೆ ನಡೆದಿತ್ತು. ರಾಜಾಜಿನಗರದ ರಾಮಣ್ಣ ಎಂಬುವವರು ಕೆಲಸದ ನಿಮಿತ್ತ ಚಿಕ್ಕಪೇಟೆಗೆ ಬಂದಿದ್ದರು. ಕಾರ್ ನಲ್ಲಿ ಅವರ ಜೊತೆ ಮೊಮ್ಮೊಕ್ಕಳೂ ಕೂಡ ಇದ್ದರು. ಕಾರ್ ಚಕಾಯಿಸುತ್ತಿದ್ದ ರಾಮಣ್ಣ ಅವರಿಗೆ ಇದ್ದಕ್ಕಿದ್ದಂತೆ ಎದೆ ನೋವು ಶುರುವಾಗಿತ್ತು. ಕಾರ್ ಚಲಾಯಿಸಲು ಸಾಧ್ಯವಾಗದ ರಾಮಣ್ಣ ಸುಲ್ತಾನ್ ಪೇಟೆ ರಸ್ತೆಯ ಮಧ್ಯದಲ್ಲೇ ಕಾರ್ ನಿಲ್ಲಿಸಿದ್ದರು. ಈ ವೇಳೆ ಇಡೀ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಅಲ್ಲೇ ಕಾರ್ಯನಿರ್ವಹಿಸುತ್ತಿದ್ದ ಚಿಕ್ಕಪೇಟೆ ಸಬ್ ಇನ್ಸ್ ಪೆಕ್ಟರ್ ರಾಮಚಂದ್ರಯ್ಯ ಕಾರ್ ಬಳಿ ಬಂದು ನೋಡಿದಾಗ 75 ವರ್ಷದ ರಾಮಣ್ಣ ಅಸ್ವಸ್ಥರಾಗಿರುವುದು ಗೊತ್ತಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ರಾಮಚಂದ್ರಯ್ಯ ಕಾನ್ಸ್ ಟೇಬಲ್ ಗಳಾದ ಲಿಂಗರಾಜು ಮತ್ತು ವೆಂಕಟೇಶ್ ರನ್ನ ಸ್ಥಳಕ್ಕೆ ಕರೆಸಿದ್ದಾರೆ. ಕೂಡಲೇ ಆಟೋವೊಂದನ್ನ ಕರೆಸಿ ರಾಮಣ್ಣ ಅವರನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಆ ನಂತರ ರಾಮಣ್ಣ ಅವರನ್ನ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೂಕ್ತ ಸಮಯಕ್ಕೆ ಸಂಚಾರಿ ಪೊಲೀಸರು ತೋರಿದ ಸಮಯ ಪ್ರಜ್ಞೆ ಮತ್ತು ಮಾನವೀಯತೆಯಿಂದ ವೃದ್ಧ ರಾಮಣ್ಣ ಅವರ ಪ್ರಾಣ ಉಳಿದಿದೆ. ಪೊಲೀಸರ ಮಾನವೀಯತೆ ರಾಮಣ್ಣ ಅವರ ಪ್ರಾಣವನ್ನ ಉಳಿಯುವಂತೆ ಮಾಡಿದೆ.

image


ಸ್ವಯಂಸೇವಕರಾದ ಟ್ರಾಫಿಕ್ ಪೊಲೀಸರು..!

ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರಿಗೆ ಈ ಹೆವೀ ಟ್ರಾಫಿಕ್ ನಿಯಂತ್ರಿಸೋದು ದೊಡ್ಡ ತಲೆ ನೋವು. ಇನ್ನು ಮಳೆ ಬಂತು ಅಂದರೆ ಅನೇಕ ಕಡೆ ಸಿಗ್ನಲ್ ಲೈಟ್ ಗಳೂ ಕೆಲಸ ಮಾಡಲ್ಲ. ಆ ಸಂದರ್ಭದಲ್ಲಿ ಪೊಲೀಸರೇ ನಿಂತು ವಾಹನ ದಟ್ಟಣೆಯನ್ನ ನಿಯಂತ್ರಿಸಬೇಕು. ವಾಹನಗಳನ್ನ ಕಂಟ್ರೋಲ್ ಮಾಡೋದು ಒಂದೆಡೆಯಾದ್ರೆ ಗುಂಡಿ ತುಂಬಿದ ರಸ್ತೆಗಳಲ್ಲಿ ಎದ್ದು ಬಿದ್ದು ಬರೋ ವಾಹನ ಸವಾರರ ತಲೆ ನೋವು ಇನ್ನೊಂದೆಡೆ.

image


ನಗರದ ಕೇಂದ್ರ ಭಾಗವಾಗಿರೋ ಹಡ್ಸನ್ ವೃತ್ತದಲ್ಲಿ ಪೀಕ್ ಅವರ್ ಅಂತೇನಿಲ್ಲ ದಿನದ 24 ಗಂಟೆಯೂ ಬ್ಯುಸೀ ಟ್ರಾಫಿಕ್. ಆದ್ರೆ ಇಲ್ಲಿನ ರಸ್ತೆ ನೋಡಿದ್ರೆ ಇದು ಹಳ್ಳಗಳ ಗುಂಡಿಯಲ್ಲಿ ಅನ್ನೋ ಸಂಶಯ ಬರತ್ತೆ. ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದಲ್ಲಿದ್ರೂ ದೀಪದ ಕೆಳಗೆ ಕತ್ತಲೆಂಬಂತೆ ಬಿಬಿಎಂಪಿಯವರಿಗೆ ಇದ್ಯಾವತ್ತೂ ಕಾಣ್ಸಿಲ್ಲ. ಹಾಗಾಗಿ ಟ್ರಾಫಿಕ್ ಪೊಲೀಸರೇ ಸ್ವಯಂ ಸೇವಕರಾಗಿದ್ರು. ಹಲಸೂರಿಗೇಟ್ ಟ್ರಾಫಿಕ್ ಇನ್ಸ್​ಪೆಕ್ಟರ್ ಮೊಹಮ್ಮದ್ ಅಲಿ ನೇತೃತ್ವದಲ್ಲಿ ಗುಂಡಿ ಮುಚ್ಚೋ ಕಾರ್ಯ ನಡೆಸಿದ್ರು. ಗುಂಡಿಗಳಿಗೆ ಜಲ್ಲಿ ಹಾಕಿ ಮುಚ್ಚಿ ವಾಹನ ಸವಾರರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ರು. ನಿಜಕ್ಕೂ ಟ್ರಾಫಿಕ್ ಪೊಲೀಸರ ಕೆಲಸ ಶ್ಲಾಘನೀಯ. ಈ ಮೂರೂ ಘಟನೆಗಳೂ ಕೂಡ ಬೆಂಗಳೂರು ಪೊಲೀಸರ ಮಾನವೀಯತೆ, ಕರ್ತವ್ಯ ನಿಷ್ಠೆ ಮತ್ತು ಸಮಯಪ್ರಜ್ಞೆಯನ್ನು ಸಾರುತ್ತವೆ. ಪೊಲೀಸರ ಈ ಕೆಲಸಗಳು ಅವರ ಮೇಲಿರುವ ಗೌರವವವನ್ನೇ ಹೆಚ್ಚಿಸಿದೆ.