ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿದೆ ಮಣ್ಣಿನ ಹೂಜಿಗೆ ಡಿಮ್ಯಾಂಡ್

ನಿನಾದ

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿದೆ ಮಣ್ಣಿನ ಹೂಜಿಗೆ ಡಿಮ್ಯಾಂಡ್

Wednesday March 30, 2016,

2 min Read

ಬೆಂಗಳೂರಿನಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಎ.ಸಿ. ಫ್ಯಾನ್ ಇಲ್ಲದೇ ಮನೆಯೊಳಗೆ ಕೂರೋದೇ ಕಷ್ಟವಾಗಿದೆ. ಇನ್ನೂ ಹೊರಗಡೆ ಓಡಾಡುವವರ ಕಥೆಯಂತೂ ದೇವರಿಗೇ ಪ್ರೀತಿ. ಇನ್ನು ಬಿಸಿಲಿನ ಝಲಕ್ಕೆ ಬಾಯಾರಿಕೆಯೂ ಜಾಸ್ತಿಯಾಗಿದೆ. ಹಾಗಾಗಿ ಜನ ಹೆಚ್ಚಾಗಿ ಕೋಲ್ಡ್ ಮಾಟರ್ ಮೊರೆ ಹೋಗುತ್ತಿದ್ದಾರೆ.ಆದ್ರೆ ಕೈ ಕೊಡುವ ವಿದ್ಯುತ್ ನಿಂದಾಗಿ ತಂಪಾದ ಪಾನೀಯಗಳು ಹಾಗೇ ಕುಡಿಯುವ ನೀರು ಸಿಗೋದು ಕಷ್ಟವಾಗಿದೆ. ಹಾಗಾಗಿ ಜನ ಸಾಂಪ್ರದಾಯಿಕ ಮಣ್ಣಿನ ಹೂಜಿಗಳ ಮೊರೆ ಹೋಗುತ್ತಿದ್ದಾರೆ.

image


ಮಣ್ಣಿನ ಹೂಜಿಗಳಲ್ಲಿ ನೀರು ತುಂಬಿ ಇಟ್ಟರೆ ಅವು ದಿನ ಪೂರ್ತಿ ತಂಪಾಗಿರುತ್ತೆ. ಇದಕ್ಕೆ ಯಾವುದೇ ವಿದ್ಯುತ್ ನ ಅವಶ್ಯಕತೆನೂ ಇರಲ್ಲ ಹಾಗೇ ಇದರಲ್ಲಿ ಸಂಗ್ರಹಿಸಿರುವ ನೀರನ್ನು ಕುಡಿಯೋದರಿಂದ ಆರೋಗ್ಯಕ್ಕೂ ಉತ್ತಮವಾಗಿರೋದರಿಂದ ಜನ ಹೆಚ್ಚಾಗಿ ಮಣ್ಣಿನ ಹೂಜಿಗಳನ್ನು ಖರೀದಿಸುತ್ತಿದ್ದಾರೆ. ಹಿಂದೆಲ್ಲಾ ಬರೀ ಮೇಲ್ಭಾಗದಲ್ಲಿ ತೆರೆದಿರುವಂತಹ ಹೂಜಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತಿದ್ದವು.ಆದ್ರೆ ಈಗ ನಳಗಳಿರುವಂತಹ ಮಣ್ಣಿನ ಹೂಡಿಗಳು ಲಭ್ಯವಾಗುತ್ತಿರೋದರಿಂದ ಬಳಕೆ ಸುಲಭವಾಗುತ್ತದೆ ಅನ್ನೋ ಕಾರಣಕ್ಕೆ ಜನ ಇದನ್ನೇ ಬಳಸುತ್ತಿದ್ದಾರೆ.

ನಗರದ ಪ್ರಮುಖ ರಸ್ತೆಗಳಲ್ಲಿ ಬೇರೆ ಬೇರೆ ಭಾಗಗಳಿಂದ ಬಂದಿರುವ ವ್ಯಾಪಾರಿಗಳು ಮಣ್ಣಿನ ಮಡಿಕೆಗಳು, ಹೂಜಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಅದರಲ್ಲೂ ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಹೂಜಿಗಳ ವ್ಯಾಪಾರ ಸ್ವಲ್ಪ ಜಾಸ್ತಿಯಾಗಿದೆ. ಈ ವರ್ಷ ಬಿಸಿಲು ಹಾಗೇ ಸೆಕೆ ಕೂಡ ಜಾಸ್ತಿಯಾಗಿರೋದರಿಂದ ಜನ ಹೆಚ್ಚಾಗಿ ಹೂಜಿಗಳನ್ನು ಖರೀದಿ ಮಾಡುತ್ತಾರೆ ಅಂತಾರೆ ಹೂಜಿ ವ್ಯಾಪಾರಿ ರಮೇಶ್.

ಇನ್ನು ಗ್ರಾಹಕರು ಕೂಡ ದಿನ ಪೂರ್ತಿ ತಂಪಾದ ಹಾಗೇ ಆರೋಗ್ಯಯುತವಾದ ನೀರನ್ನು ಕುಡಿಯೋದಕ್ಕೆ ಹೂಜಿ ಉತ್ತಮ ಅನ್ನೋ ಕಾರಣಕ್ಕೆ ಇದನ್ನೇ ಖರೀದಿ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಇದಕ್ಕೆ ಡಿಮ್ಯಾಂಡ್ ಹೆಚ್ಚಾಗಿರೋದರಿಂದ ಬೆಲೆ ಸ್ವಲ್ಪ ಜಾಸ್ತಿಯಾಗಿದೆ.ಆದ್ರೂ ಹೂಜಿ ನೀರು ಕುಡಿಯೋದೇ ಒಂದು ಖುಷಿ. ಹಾಗಾಗಿ ನಾವು ಇದ್ನನು ಖರೀದಿ ಮಾಡುತ್ತೇವೆ ಅಂತಾರೆ ಗ್ರಾಹಕಿ ಗೀತಾ.

image


ವಿವಿಧ ವಿನ್ಯಾಸದ ಹೂಜಿಗಳು ಮಾರುಕಟ್ಟೆಗೆ ಬಂದಿದ್ದು ಅವುಗಳ ವಿನ್ಯಾಸದ ಮೇಲೆ ಅವುಗಳ ದರ ನಿಗದಿಯಾಗುತ್ತಿದೆ. 150 ರೂಪಾಯಿಯಿಂದ ಹಿಡಿದು 500 ರೂಪಾಯಿವರೆಗೆ ಅದರ ಗಾತ್ರ, ಆಕಾರ ವಿನ್ಯಾಸ, ಹಾಗೇ ಕ್ವಾಲಿಟಿ ಆಧಾರದ ಮೇಲೆ ಹೂಜಿಗಳ ಮಾರಾಟವಾಗುತ್ತಿದೆ. ಇನ್ನೆರಡು ತಿಂಗಳುಗಳು ಕಾಲ ಇವುಗಳಿಗೆ ಇದೇ ರೀತಿ ನಗರದಲ್ಲಿ ಬೇಡಿಕೆ ಇರುತ್ತೆ.

ರಾಜ್ಯದ ಬೇರೆ ಬೇರೆ ಭಾಗಗಳಿಂದ ಈ ಹೂಜಿಗಳನ್ನು ತರಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಕುಂಬಾರರ ಶ್ರಮಕ್ಕೂ ಬೇಸಿಗೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ.ಆದ್ರೆ ಜನರ ಚೌಕಾಶಿಯಿಂದಾಗಿ ನಮ್ಮ ದುಡಿಮೆಗೆ ತಕ್ಕ ಬೆಲೆ ಸಿಗುತ್ತಿಲ್ಲ ಅನ್ನೋ ನೋವು ಅವರದ್ದು. ಏನೇ ಆದ್ರೂ ಸಿಲಿಕಾನ್ ಸಿಟಿ ಜನ ಮಾತ್ರ ಸದ್ಯಕ್ಕೆ ಹೂಜಿ ನೀನೇ ನನ್ನ ರೆಫ್ರಿಜರೇಟರ್ ಅಂತಿದ್ದಾರೆ.