ಲಾಂಡ್ರಿಗೂ ಬಂತು ಲೇಟೆಸ್ಟ್ ಆ್ಯಪ್..!ಇಲ್ಲಿ ಬಟ್ಟೆ ಒಗೆದು, ಐರನ್ ಮಾಡಿ ಕೊಡ್ತಾರೆ...!

ವಿಶಾಂತ್​​

ಲಾಂಡ್ರಿಗೂ ಬಂತು ಲೇಟೆಸ್ಟ್ ಆ್ಯಪ್..!ಇಲ್ಲಿ ಬಟ್ಟೆ ಒಗೆದು, ಐರನ್ ಮಾಡಿ ಕೊಡ್ತಾರೆ...!

Friday January 01, 2016,

3 min Read

image


ಪ್ರತಿ ದಿನ ಬೆಳ್ಳಂಬೆಳಗ್ಗೆ ಎದ್ದು ದೈನಂದಿನ ಕಾರ್ಯಗಳನ್ನು ಮುಗಿಸಿ, ದಿನಪತ್ರಿಕೆ ಮೇಲೆ ಕಣ್ಣಾಡಿಸಿ, ಕಾಫಿ ಹೀರಿ, ಸ್ನಾನ ಮಾಡಿ ಬಟ್ಟೆ ಧರಿಸಿ ಕ್ಲೀನಾಗಿ ರೆಡಿಯಾಗಿ, ಟ್ರಾಫಿಕ್‍ನಲ್ಲಿ ತಲೆಬಿಸಿ ಮಾಡಿಕೊಂಡು ಆಫೀಸ್ ಸೇರೋದೇ ದೊಡ್ಡ ಕಥೆ. ಇನ್ನು ವಾರ ಪೂರ್ತಿ ಹೀಗೆ ಮನೆ ಆಫೀಸು, ಆಫೀಸು ಮನೆ ಅನ್ನೋದೇ ಆಗಿಹೋಗುತ್ತೆ. ಸಿಗುವ ಒಂದು ವೀಕೆಂಡ್‍ಅನ್ನು ಯಾವುದೇ ಟೆನ್ಶನ್ ಇಲ್ಲದೇ ಮನೆಯಲ್ಲಿ ಆರಾಮಾಗಿ ಕಳೀಬೇಕು. ಅಥವಾ ಶಾಪಿಂಗ್ ಹೋಗಬೇಕು, ಶುಕ್ರವಾರ ರಿಲೀಸ್ ಆದ ಹೊಸ ಸಿನಿಮಾ ನೋಡಬೇಕು, ಪಾರ್ಟಿ ಮಾಡಬೇಕು, ಹೊರಗಡೆ ತಿರುಗಾಡಬೇಕು ಅಂತೆಲ್ಲಾ ಪ್ಲಾನ್​ ಮಾಡಿಕೊಂಡರೆ ಅದೆಲ್ಲವೂ ದೂರದ ಬೆಟ್ಟ ನುಣ್ಣಗೆ ಅನ್ನುವಂತೆ ಕಾಣುತ್ತವೆ. ಅದಕ್ಕೆ ಕಾರಣ ವಾರ ಪೂರ್ತಿ ಧರಿಸಿದ ಬಟ್ಟೆಯ ರಾಶಿ. ಈ ಬಟ್ಟೆ ಒಗೆದು ಹೊರಗೆ ಹೋಗೋಣ ಅಂದುಕೊಂಡ್ರೆ, ಅಷ್ಟರಲ್ಲಾಗಲೇ ಸಂಜೆಯಾಗಿಬಿಟ್ಟಿರುತ್ತೆ, ಹೀಗೆ ಪ್ರತಿ ವೀಕೆಂಡ್‍ಅನ್ನೂ ರಜೆಯ ಮಜಾ ಅನುಭವಿಸಲಾಗದೇ ಬಚ್ಚಲು ಮನೆಯಲ್ಲಿ ಬಟ್ಟೆ ಒಗೆಯುತ್ತಾ ಹಣೆ ಚಚ್ಚಿಕೊಳ್ಳುವ ಹಲವರನ್ನು ನಾವು ನೋಡಿದ್ದೇವೆ. ಅಷ್ಟೇ ಯಾಕೆ ನಾವೇ ಆ ಯಾತನೆಯನ್ನು ಅನುಭವಿಸಿದ್ದೇವೆ ಕೂಡ. ಒಬ್ಬರೇ ರೂಮ್ ಮಾಡಿಕೊಂಡು ವಾಸಿಸುವ ಮಂದಿಗೆ ಇದು ಸರ್ವೇ ಸಾಮಾನ್ಯ.

image


ಇಲ್ಲಿದೆ ನೋಡಿ ‘ಫ್ಲ್ಯಾಶ್‍ಡೋರ್’

ಆದ್ರೆ ಇನ್ಮುಂದೆ ಆ ಟೆನ್ಶನ್ ಇರೋದಿಲ್ಲ. ಯಾಕಂದ್ರೆ ಅದಕ್ಕೆ ನಿಮ್ಮ ಬೆರಳ ತುದಿಯಲ್ಲೇ ಪರಿಹಾರವಿದೆ. ಹೌದು, ಬಟ್ಟೆ ಒಗೆದು, ಐರನ್ ಮಾಡಿಕೊಡುವ ಸೇವೆ ಒದಗಿಸುವ ಒಂದು ಆ್ಯಪ್ ಬೆಂಗಳೂರಿನಲ್ಲಿ ಸದ್ದಿಲ್ಲದೇ ಕೆಲಸ ಮಾಡುತ್ತಿದೆ. ಅಂದ್ಹಾಗೆ ಈ ಆ್ಯಪ್ ಹೆಸರು ಫ್ಲ್ಯಾಶ್‍ಡೋರ್.

image


ಬೆಂಗಳೂರಿನಲ್ಲಿ ಒಂದೇ ಫ್ಲಾಟ್‍ನಲ್ಲಿ ವಾಸಿಸುತ್ತಿದ್ದ ಗೆಳೆಯರಾದ ಅಂಕಿತ್ ಅಗರ್ವಾಲ್ ಮತ್ತು ಹಿಮಾಂಶು ಗುಪ್ತಾ ಈ ಫ್ಲ್ಯಾಶ್‍ಡೋರ್ ಸಂಸ್ಥಾಪಕರು. ಪ್ರತಿ ವಾರ ತಾವೇ ತಮ್ಮ ಬಟ್ಟೆ ಒಗೆದುಕೊಂಡು ಐರನ್ ಮಾಡಿಕೊಳ್ಳಲು ಸಾಕಷ್ಟು ಶ್ರಮ ಪಡಬೇಕಿತ್ತು. ಇದರಿಂದಾಗಿ ವೀಕೆಂಡ್‍ನಲ್ಲೂ ರೆಸ್ಟ್ ಸಿಗುತ್ತಿರಲಿಲ್ಲ. ಇನ್ನು ಮನರಂಜನೆಯಂತೂ ದೂರದ ಮಾತೇ ಆಗಿತ್ತು. ಮನೆಗೆ ಕೆಲಸದವರು ಬರುತ್ತಿದ್ದರೂ ಬಟ್ಟೆ ಒಗೆಯುತ್ತಾರೆಯೇ ವಿನಃ ಐರನ್ ಮಾಡಿಕೊಡುತ್ತಿರಲಿಲ್ಲ. ಅಲ್ಲದೇ ಅವರು ಹೇಳಿದ ಸಮಯಕ್ಕೆ ಬರುತ್ತಿರಲಿಲ್ಲ. ಅವರು ಬಂದ್ರೂ ಮನೆಯಲ್ಲೇ ಇರಬೇಕಿತ್ತು. ಕೆಲ ಲಾಂಡ್ರಿಯವರನ್ನು ಅವಲಂಬಿಸಿದ್ದ ಈ ಜೋಡಿಗೆ ಅವರೂ ಸಮಯಕ್ಕೆ ಸರಿಯಾಗಿ ಬಟ್ಟೆ ಪಡೆಯಲು ಬರುತ್ತಿರಲಿಲ್ಲ ಹಾಗೂ ಹೇಳಿದ ದಿನ ಬಟ್ಟೆ ತಂದುಕೊಡುತ್ತಿರಲಿಲ್ಲ. ಇದು ಅಂಕಿತ್ ಮತ್ತು ಹಿಮಾಂಶುಗೆ ಎಲ್ಲಿಲ್ಲದ ತಲೆಬಿಸಿಯಾಗಿತ್ತು.

ಇದರ ನಡುವೆ ಈ ಸಮಸ್ಯೆಗೆ ಹೇಗಾದ್ರೂ ಪರಿಹಾರ ಕಂಡುಕೊಳ್ಳಬೇಕಲ್ಲಾ ಅಂತ ಇಬ್ಬರೂ ಯೋಚನೆ ಮಾಡತೊಡಗಿದರು. ಜೊತೆಗೆ ತಾವೇ ಖುದ್ದಾಗಿ ಏನಾದ್ರೂ ಮಾಡಬೇಕು ಎಂಬ ತುಡಿತವೂ ಇಬ್ಬರಲ್ಲೂ ಇತ್ತು. ಹೀಗೇ ಒಮ್ಮೆ ಅಂಕಿತ್ ಮತ್ತು ಹಿಮಾಂಶು ಇಬ್ಬರೂ ಚರ್ಚಿಸುತ್ತಿರುವಾಗ ತಾವೇ ಯಾಕೆ ಆ್ಯಪ್ ಒಂದರ ಮೂಲಕ ಲಾಂಡ್ರಿ ಸೇವೆ ಆರಂಭಿಸಬಾರದು ಅನ್ನೋ ಐಡಿಯಾ ಬಂತು. ತಕ್ಷಣ ಕಾರ್ಯಪ್ರವೃತ್ತರಾದ ಅಂಕಿತ್ ಮತ್ತು ಹಿಮಾಂಶು ಕೆಲವೇ ದಿನಗಳಲ್ಲಿ ಫ್ಲ್ಯಾಶ್‍ಡೋರ್ ಆ್ಯಪ್‍ನೊಂದಿಗೆ ಹೊಸ ಉದ್ಯಮಕ್ಕೆ ಕಾಲಿಟ್ಟರು.

image


ಮೊಬೈಲ್ ಗೇಮ್ ಡೆವೆಲಪರ್‍ಆಗಿ ಕಿವಿ ಎಂಬ ಕಂಪನಿಯಲ್ಲಿ ಕೆಲಸ ಮಾಡಿದ್ದ ಹಿಮಾಂಶು ಮೊಬೈಲ್ ತಂತ್ರಜ್ಞಾನಗಳ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದರು. ಇನ್ನು ಅಂಕಿತ್ ಅಂತೂ ಫ್ಲಿಪ್‍ಕಾರ್ಟ್‍ನ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದ ಅನುಭವ ಪಡೆದಿದ್ದರು. ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ತಿಳಿದುಕೊಂಡಿದ್ದ ಈ ಯುವಜೋಡಿ ಫ್ಲ್ಯಾಶ್‍ಡೋರ್ ಆ್ಯಪ್ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಮುಂದಾಯ್ತು. ಹೀಗೆ ಇದೇ ಸೆಪ್ಟೆಂಬರ್‍ನಲ್ಲಿ ಫ್ಲ್ಯಾಶ್‍ಡೋರ್ ಆ್ಯಪ್‍ಅನ್ನು ಲಾಂಚ್ ಮಾಡಲಾಯ್ತು.

ಗೂಗಲ್ ಪ್ಲೇಸ್ಟೋರ್‍ನಲ್ಲಿ ಫ್ಲ್ಯಾಶ್‍ಡೋರ್ ಮೊಬೈಲ್ ಆ್ಯಪ್ ಲಭ್ಯವಿದೆ. ಇದು ಬಟ್ಟೆ ಒಗೆಯುವುದರ ಜೊತೆಗೆ ಐರನ್ ಸೇವೆಯನ್ನೂ ಒದಗಿಸುತ್ತದೆ. ಸದ್ಯ ಈ ವಿನೂತನ ಐಡಿಯಾಕ್ಕೆ ನಗರದ ಯುವ ವೃತ್ತಿಪರರಿಂದ ಅದ್ಭುತ ಪ್ರತಿಕ್ರಿಯೆ ದೊರೆತಿದೆ. ಕೇವಲ ಮೂರೇ ತಿಂಗಳಲ್ಲಿ ಜನರಿಂದ ಸಿಕ್ಕ ರೆಸ್ಪಾನ್ಸ್ ಅಂಕಿತ್ ಅಗರ್ವಾಲ್ ಮತ್ತು ಹಿಮಾಂಶು ಗುಪ್ತಾರನ್ನು ಈ ಮೊಬೈಲ್ ಆ್ಯಪ್‍ನಲ್ಲಿ ಡ್ರೈ ಕ್ಲೀನಿಂಗ್ ಮತ್ತು ಐರನ್ ಜೊತೆಗೆ ಮತ್ತಷ್ಟು ಸೇವೆಗಳನ್ನು ಒದಗಿಸಲು ಪ್ರೇರೇಪಣೆ ನೀಡಿದೆ.

ಒಂದೇ ತಾಸಿನಲ್ಲಿ ಪಿಕಪ್!

ಈ ಫ್ಲ್ಯಾಶ್‍ಡೋರ್ ಮೊಬೈಲ್ ಆ್ಯಪ್ ಎರಡು ಬಗೆಯ ಸೇವೆಗಳನ್ನು ಒದಗಿಸುತ್ತದೆ. ಮೊದಲನೆಯದು ‘Pickup Now’. ಫಟಾಫಟ್ ಬಟ್ಟೆ ರೆಡಿಯಾಗಬೇಕು ಅನ್ನೋರು ಈ ಆಯ್ಕೆ ಮಾಡಿಕೊಳ್ಳಬಹುದು. ಬಟನ್ ಒತ್ತಿದ ಒಂದೇ ತಾಸಿನಲ್ಲಿ ಫ್ಲ್ಯಾಶ್‍ಡೋರ್ ಟೀಮ್ ನಿಮ್ಮ ಮನೆ ಬಾಗಿಲಲ್ಲಿ ಹಾಜರು. ಮತ್ತೊಂದು ಆಯ್ಕೆ ‘Pick Later’. ಸಮಯ ಇರುವವರು ಇದನ್ನು ಆಯ್ಕೆ ಮಾಡಿಕೊಳ್ಳಬಹುದು.

image


ನಿಮ್ಮಿಂದ ಪಡೆದ ಕೊಳೆ ಬಟ್ಟೆಗಳು ಕೇವಲ 72 ತಾಸುಗಳಲ್ಲಿ ಅರ್ಥಾತ್ 3 ದಿನಗಳಲ್ಲಿ ಫಳಫಳ ಹೊಳೆಯುವ ಸ್ಥಿತಿಯಲ್ಲಿ ನಿಮ್ಮ ಕೈಸೇರುತ್ತವೆ. ಪ್ರತಿ ಬಟ್ಟೆಗೆ ಇಷ್ಟು ಅಂತ ಜನರನ್ನು ಸುಲಿಯದೇ ಕೆಜಿ ಲೆಕ್ಕದಲ್ಲಿ ಸೇವೆ ಒದಗಿಸುವುದು ಫ್ಲ್ಯಾಶ್‍ಡೋರ್ ವಿಶೇಷತೆ. ಒಂದು ಕೆಜಿ ಬಟ್ಟೆ ಒಗೆದು, ಐರನ್ ಮಾಡಿಕೊಡಲು ಕೇವಲ 79 ರೂಪಾಯಿಯಷ್ಟೇ. ಜೊತೆಗೆ ಬಟ್ಟೆಗಳನ್ನು ಉಚಿತ ಪಿಕಪ್ ಮತ್ತು ಡ್ರಾಪ್ ಮಾಡ್ತಿರೋದು ಮತ್ತೊಂದು ವಿಶೇಷತೆ. ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಮಂದಿ ಈ ಫ್ಲ್ಯಾಶ್‍ಡೋರ್ ಮೊಬೈಲ್ ಆ್ಯಪ್‍ಅನ್ನು ಡೌನ್‍ಲೋಡ್ ಮಾಡಿಕೊಂಡು ಸೇವೆ ಪಡೆಯುತ್ತಿದ್ದಾರೆ. ನಗರದ ಸುಮಾರು 60ಕ್ಕೂ ಹೆಚ್ಚು ಪ್ರದೇಶಗಳಿಂದ ಸಾವಿರಾರು ಗ್ರಾಹಕರು ಫ್ಲ್ಯಾಶ್‍ಡೋರ್‍ಅನ್ನು ಅವಲಂಬಿಸಿದ್ದಾರೆ.

ಮುಂದಿನ ದಿನಗಳಲ್ಲಿ ಫ್ಲ್ಯಾಶ್‍ಡೋರ್ ಮೂಲಕ ಸೌಂದರ್ಯ, ವಿದ್ಯುತ್ ಉಪಕರಣಗಳ ರಿಪೇರಿ, ಮನೆ ಸ್ವಚ್ಛಗೊಳಿಸುವ ಹಾಗೂ ನಿರ್ವಹಿಸುವ ಸೇವೆಗಳನ್ನೂ ನೀಡುವ ಯೋಜನೆ ಅಂಕಿತ್ ಅಗರ್ವಾಲ್ ಮತ್ತು ಹಿಮಾಂಶು ಗುಪ್ತಾ ಅವರದು. ಒಟ್ಟಾರೆ ಈ ನವ ಉದ್ಯಮಿಗಳಿಗೆ ಯಶಸ್ಸು ಸಿಗಲಿ ಅಂತ ನಾವೂ ಹಾರೈಸೋಣ.