ಹೊಂಡಾ ಸಿಟಿ ಕಾರು ಮಾರಿ ಬೈಸಿಕಲ್ ಖರೀದಿಸಿದ ಸಾಹಸಿ ಮಹಿಳೆ...!

ಟೀಮ್​​ ವೈ.ಎಸ್​. ಕನ್ನಡ

ಹೊಂಡಾ ಸಿಟಿ ಕಾರು ಮಾರಿ ಬೈಸಿಕಲ್  ಖರೀದಿಸಿದ ಸಾಹಸಿ ಮಹಿಳೆ...!

Tuesday December 08, 2015,

3 min Read

ಆಕೆಯದ್ದು ಸದಾ ಹೊಸತನವನ್ನ ಹುಡುಕಾಡುವ ಪ್ರವೃತ್ತಿ. ಸಾಹಸಮಯ ಪ್ರಯಾಣವನ್ನೇ ಪ್ರವೃತ್ತಿಯನ್ನಾಗಿಸಿಕೊಂಡಿರುವ ಈಕೆ ಅಪಾಯಗಳನ್ನೂ ಲೆಕ್ಕಿಸದೇ ಅದರ ಆನಂದವನ್ನ ಸವಿಯಲು ಬಯಸುವವಳು.. ಚಲಿಸುವ ಒಂದು ಬೋಟ್ ನಿಂದ ಮತ್ತೊಂದು ಬೋಟ್ ಗೆ ಸ್ವಲ್ಪವೂ ಅಂಜಿಕೆಯಿಲ್ಲದೆ ಜಿಗಿಯುವ ಗಟ್ಟಿಗಿತ್ತಿ.. ಇದು ಅಪ್ಪಟ ಸಾಹಸಿ ಗೌರಿ ಜಯರಾಮ್ ರ ಕಿರುಪರಿಚಯ.. ಆಕ್ಟೀವ್ ಹಾಲಿಡೇ ಕಂಪನಿಯ ಸಂಸ್ಥಾಪಕಿಯಾಗಿರುವ ಗೌರಿ ಜಯರಾಮ್ ಅಂತರಾಷ್ಟ್ರೀಯ ಮಟ್ಟದಲ್ಲಿ ಅಡ್ವೆಂಚರ್ ಟೂರ್ ಗಳನ್ನ ಆಯೋಜಿಸುವುದರಲ್ಲಿ ಪರಿಣತಿ ಪಡೆದಿರುವಾಕೆ. ಅಲ್ಲದೆ ಅತ್ಯುತ್ತಮ ಗೈಡ್ ಆಗಿಯೂ ಗೌರಿ ಜಯರಾಮ್ ಗುರುತಿಸಿಕೊಂಡಿದ್ದಾರೆ. ವಿಶ್ವದ ಹಲವು ಪ್ರದೇಶಗಳಿಗೆ ಭೇಟಿ ನೀಡಿರುವ ಈಕೆಗೆ ಭಾರತೀಯ ಟ್ರಾವೆಲರ್ ಗಳಿಗೂ ಆ ರೋಚಕ ಅನುಭವ ಸಿಗಬೇಕು ಅನ್ನುವ ಬಯಕೆ. ಇದಕ್ಕಾಗೇ ಟ್ರೆಕ್ಕಿಂಗ್, ಸೈಕ್ಲಿಂಗ್, ಅಂತರಾಷ್ಟ್ರೀಯ ಮ್ಯಾರಾಥಾನ್ ಗಳಲ್ಲಿ ಭಾಗವಹಿಸಲು ಇಚ್ಛಿಸುವವರಿಗಾಗಿ ಮಾರ್ಗದರ್ಶನ ನೀಡುತ್ತಾರೆ..

ಉದ್ಯಮಿಯಾಗಿ ಗೌರಿ ಜಯರಾಮ್

ಸ್ವತಂತ್ರವಾಗಿ ಒಂದು ಅಡ್ವೆಂಚರ್ ಉದ್ದಿಮೆಯನ್ನು ಶುರುಮಾಡಿ ಅದನ್ನ ಮುನ್ನಡೆಸುವುದು ರೋಲರ್ ಕಾಸ್ಟರನ್ನು ಡ್ರೈವಿಂಗ್ ಮಾಡಿದಷ್ಟೇ ಕಠಿಣ ಅಂತಾರೆ ಗೌರಿ ಜಯರಾಮ್. ಒಮ್ಮೆ ಶುರುಮಾಡಿದ ನಂತ್ರ ಇದಕ್ಕಾಗಿ ತಮ್ಮ 24 ಗಂಟೆಯನ್ನೂ ಮೀಸಲಾಗಿಡಬೇಕು ಅನ್ನೋದು ಇವರ ಅನುಭವದ ಮಾತು.

“ ಭಾರತದಲ್ಲಿ ಅಡ್ವೆಂಚರ್ ನಂತಹ ಉದ್ದಿಮೆಯನ್ನ ಬೆಳೆಸುವುದು ಸುಲಭವಲ್ಲ. ಆದರಲ್ಲೂ ಆರಂಭಿಕ ಹಂತದಲ್ಲಿ ಸುಸಜ್ಜಿತ ತಂಡವನ್ನ ಬೆಳೆಸಲು ಅರ್ಹತೆಯುಳ್ಳ ವ್ಯಕ್ತಿಗಳನ್ನ ಹುಡುಕಾಡುವುದೇ ಒಂದು ಕಷ್ಟದ ಕೆಲಸ. ಸಾಕಷ್ಟು ಜನ ಇಂತಹ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಉತ್ಸಾಹ ತೋರಿ ಮುಂದೆ ಬಂದರೂ ಅವರಲ್ಲಿ ಅಗತ್ಯವಾಗಿರುವ ಗುಣಗಳಿರುವುದಿಲ್ಲ ” ಅಂತಾರೆ ಆಕ್ಟೀವ್ ಹಾಲಿಡೇ ಕಂಪನಿಯ ಸಂಸ್ಥಾಪಕಿ ಗೌರಿ ಜಯರಾಮ್.

ಆದ್ರೆ ಭಾರತದಲ್ಲಿ ನಿಜವಾದ ಅಡ್ವೆಂಚರ್ ಟ್ರಾವೆಲರ್ ಗಳನ್ನ ಹುಡುಕಾಡುವುದು ಮತ್ತು ಅವರಿಗೆ ಅರ್ಥಮಾಡಿಸಿಕೊಡುವುದು ಕಷ್ಟವಂತೆ. “ ಕೆಲವರು ನಮ್ಮನ್ನ ಸಂಪರ್ಕಿಸಿ, ಡಿಸ್ನಿಲ್ಯಾಂಡ್ ಗೆ ಅಡ್ವೆಂಚರ್ ಟೂರ್ ಪ್ಯಾಕೆಜ್ ಸೌಲಭ್ಯ ಇದೆಯಾ ಅಂತ ಕೇಳಿದ್ದುಂಟು.. ಅವರ ಮಾತುಗಳನ್ನ ಕೇಳಿದಾಗ ಹಣೆಯನ್ನ ಚಚ್ಚಿಕೊಳ್ಳಬೇಕು ಅಂತ ಅನಿಸಿದ್ದೂ ಇದೆ ” ಅಂತ ಗೌರಿ ಜಯರಾಮ್ ಕೆಲವು ಹಾಸ್ಯ ಸನ್ನಿವೇಶಗಳನ್ನ ನೆನಪಿಸಿಕೊಳ್ಳುತ್ತಾರೆ..

image


ಬದುಕಿನ ಪಯಣ..

ಗೌರಿ ಜಯರಾಮ್ ಭಾರತೀಯ ವಾಯುಪಡೆಯ ಪೈಲಟ್ ಒಬ್ಬರ ಸುಪುತ್ರಿ.. ಚಿಕ್ಕವಯಸ್ಸಿನಲ್ಲೇ ಇವರಿಗೆ ಟ್ರಕ್ಕಿಂಗ್ ಬಗ್ಗೆ ಇನ್ನಿಲ್ಲದ ಆಸಕ್ತಿ ಮೂಡಿತ್ತು. ತನ್ನ ಐದನೇ ವರ್ಷದಲ್ಲಿ ಮೊದಲ ಪ್ರವಾಸ ಕೈಗೊಂಡ್ರು. ಬಳಿಕ ಮುಂಬೈಗೆ ತೆರಳಿ ಅಲ್ಲಿ 11 ವರ್ಷಗಳ ಕಾಲ ನೆಲೆಸಿ ತನ್ನ 20ನೇ ವಯಸ್ಸಿನಲ್ಲಿ ಮೊದಲ ಉದ್ಯೋಗ ಸಂಪಾದಿಸಿದ್ರು. 2001ರಲ್ಲಿ ಏರ್ ಮಾರಿಷಸ್ ನಲ್ಲಿ ರೀಜಿನಲ್ ಮ್ಯಾನೇಜರ್ ಆಗಿದ್ದಾಗ ದಾಂಪತ್ಯ ಬದುಕಿಗೆ ಎಂಟ್ರಿಕೊಟ್ಟು ಚೆನ್ನೈಗೆ ವಲಸೆಹೋದ್ರು. ನಂತರದ ಒಂದು ವರ್ಷದಲ್ಲೇ ಮುದ್ದಾದ ಮಗುವಿನ ತಾಯಿಯಾಗಿದ್ರಿಂದ ತನ್ನ ಕೆಲಸಕ್ಕೂ ರಾಜಿನಾಮೆ ನೀಡಿದ್ರು. ಆದ್ರೆ ಗೌರಿ ಜಯರಾಮ್ ಗೆ ಹೊಸ ಉದ್ಯಮವೊಂದನ್ನ ಶುರುಮಾಡಬೇಕು ಅನ್ನೋ ಇರಾದೆ ಇತ್ತು. ಹೀಗಾಗಿ ಅಡ್ವೆಂಚರ್ ಗ್ರೂಪ್ ಶುರುಮಾಡಿದ್ರೂ ಅದು ಅಂದುಕೊಂಡ ಮಟ್ಟದಲ್ಲಿ ಹೆಸರು ಮಾಡಲಿಲ್ಲ. ಇದೇ ವೇಳೆ ದಕ್ಷಿಣ ಏಷ್ಯಾದ ಖ್ಯಾತ ಅಡ್ವೆಂಚರ್ ಟೂರಿಂಗ್ ಕೋಚ್ ಕಂಪನಿಯೊಂದು ಗೌರಿ ಜಯರಾಮ್ ಗೆ ರೆಡ್ ಕಾರ್ಪೆಟ್ ಹಾಸಿತು. ಈ ಅವಕಾಶವನ್ನ ಬಳಸಿಕೊಂಡ ಗೌರಿ, ಅಲ್ಲಿ 2 ವರ್ಷ ಕಳೆದು ಚೆನ್ನೈಗೆ ವಾಪಸ್ಸಾದ್ರು. ಬದುಕಿನಲ್ಲಿ ಯಶಸ್ಸು ಸಾಧಿಸಬೇಕಾದ್ರೆ ರಿಸ್ಕ್ ತೆಗೆದುಕೊಳ್ಳಲೇ ಬೇಕು ಅಂತ ತೀರ್ಮಾನಿಸಿದ್ದ ಗೌರಿ 2005ರಲ್ಲಿ ತಮ್ಮ ಅಡ್ವೆಂಚರ್ ಕಂಪೆನಿಯನ್ನ ರೀ ಲಾಂಚ್ ಮಾಡಿದ್ರು.

ಸ್ವಯಂ ಅನ್ವೇಷಣೆಯಲ್ಲಿ ಗೌರಿ ಜಯರಾಮ್

“ ನನ್ನ 40ನೇ ಹುಟ್ಟುಹಬ್ಬದ ಬಳಿಕ ನಾನು ಆಧ್ಯಾತ್ಮದತ್ತ ಹೆಚ್ಚು ಸೆಳೆಯಲ್ಪಟ್ಟೆ. ಬದುಕಿನಲ್ಲಿ ನಾನು ಅನುಭವಕ್ಕಿಂತ ಬಾಹ್ಯ ವಸ್ತುಗಳನ್ನೇ ಹೆಚ್ಚು ಗಳಿಸಿದ್ದೇನೆ ಅಂತ ಅನಿಸಿತು. ಹೀಗಾಗಿ ನಾನು ನನ್ನ ಹೋಂಡಾ ಸಿಟಿ ಕಾರನ್ನ ಮಾರಿ ಬೈಸಿಕಲ್ ಖರೀಸಿದೆ ” ಅಂತ ಗೌರಿ ಜಯರಾಮ್ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಅಡ್ವೆಂಚರ್ ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ರೂ ಗೌರಿಗೆ ಕೆಲವೊಮ್ಮೆ ಶೂನ್ಯ ಭಾವ ಕಾಡುತ್ತಿತ್ತು. ಹೀಗಾಗಿ ಕ್ರೀಡೆ, ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಅಲ್ಲದೆ ಕೆಲವೊಂದು ಪುಸ್ತಕಗಳನ್ನೂ ಹೊರತಂದರು. ಬಿಡುವಿದ್ದಾಗ ಮ್ಯಾರಥಾನ್ ಓಟಗಳನ್ನೂ ಆಯೋಜಿಸಿ ಗಮನ ಸೆಳೆದರು. ಜೋರ್ಡಾನ್ ನ ಡೆಡ್ ಸೀ ನಲ್ಲಿ ನಡೆದ ಮ್ಯಾರಥಾನ್ ನಲ್ಲಿ ಭಾಗವಹಿಸಿ, ಅದೇ ವರ್ಷ ನೇಪಾಳದಲ್ಲಿ ನಡೆದ ಮೌಂಟ್ ಎವರೆಸ್ಟ್ ಟ್ರೆಕ್ಕಿಂಗ್ ಬೇಸ್ ಕ್ಯಾಂಪ್ ನಲ್ಲೂ ಪಾಲ್ಗೊಂಡಿದ್ದು ವಿಶೇಷ. ಕೇವಲ ಒಂದೇ ಒಂದು ಬ್ಯಾಗ್ ನಲ್ಲಿ ಬೇಸ್ ಕ್ಯಾಂಪ್ ಮುಗಿಸಿದ ಗಟ್ಟಿಗಿತ್ತಿ ಈಕೆ. ಇಲ್ಲಿ ಹಲವು ಬದುಕಿನ ಪಾಠಗಳನ್ನ ಕಲಿತ ಗೌರಿ ಜಯರಾಮ್, ಬದುಕಿನಲ್ಲಿ ಮತ್ತಷ್ಟು ಸರಳವಾದ್ರು.. ಇಷ್ಟೆಲ್ಲಾ ಅಡ್ವೆಂಚರ್ ಗಳಲ್ಲಿ ಭಾಗವಿಸಿದ ಗೌರಿ ಜಯರಾಮ್ ಅವರ ಸಾಹಸದ ಪ್ರಯಾಣ ಅಷ್ಟೊಂದು ಸುಲಭವಾಗಿರಲ್ಲಿ. ಹಲವು ಬಾರಿ ಅಪಾಯಕಾರಿ ಸನ್ನಿವೇಶಗಳನ್ನ ಎದುರಿಸಿದ್ದಾರೆ. 1999ರಲ್ಲಿ ನೇಪಾಳದಲ್ಲಿ ನಡೆದ ರಾಫ್ಟಿಂಗ್ ನಲ್ಲಿ ಗೌರಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದ ಸನ್ನಿವೇಶಗಳನ್ನ ಅವರು ಸ್ಮರಿಸಿಕೊಳ್ಳುತ್ತಾರೆ.

ಬದುಕಿನಲ್ಲಿ ಏನನ್ನಾದ್ರೂ ಸಾಧಿಸಬೇಕು ಅಂದುಕೊಂಡಿದ್ದವರಿಗೆ ಸೂಕ್ತ ಸಂಗಾತಿಯನ್ನ ಆಯ್ಕೆ ಮಾಡಿಕೊಳ್ಳುವುದೂ ಮುಖ್ಯ ಅಂತಾರೆ ಗೌರಿ ಜಯರಾಮ್.. “ ನನ್ನ ಪತಿ ನನಗೆ ಅದೃಷ್ಠವಿದ್ದಂತೆ.. ನನ್ನ ಮಗಳನ್ನು ಅಮ್ಮನಾಗಿಯೂ ಅವರು ನೋಡಿಕೊಳ್ಳುತ್ತಾರೆ. ಅವರು ಇತರೆ ಜವಾಬ್ದಾರಿಗಳನ್ನ ಸಮರ್ಥವಾಗಿ ನಿಭಾಯಿಸುತ್ತಿರುವುದರಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯ್ತು ” ಅಂತ ಗೌರಿ ಜಯರಾಮ್ ತಮ್ಮ ಪತಿಯನ್ನ ನೆನೆಯುತ್ತಾರೆ. ಹೀಗೆ ಅಡ್ವೆಂಚರ್ ನಲ್ಲಿ ಹೊಸ ಬದುಕು ಕಟ್ಟಿಕೊಂಡಿರುವ ಗೌರಿ ಜಯರಾಮ್ ಸಾಹಸದ ಪಯಣದೊಂದಿಗೆ ಇತರರಿಗೂ ಸ್ಫರ್ತಿಯಾಗಿದ್ದಾರೆ.

ಲೇಖಕರು: ತಾನ್ವಿ ದುಬೇ

ಅನುವಾದಕರು: ಬಿಆರ್​​ಪಿ