ಶೋಷಿತ ಮಹಿಳೆಯರಿಗೆ ಆಸರೆ ಜೊತೆ ಆತ್ಮವಿಶ್ವಾಸ ತುಂಬುತ್ತಿರುವ ಮಹಿಳೆ ಸುನಿತಾ ಕೃಷ್ಣನ್

ಅರವಿಂದ ಯಾದವ್​​

ಶೋಷಿತ ಮಹಿಳೆಯರಿಗೆ ಆಸರೆ ಜೊತೆ ಆತ್ಮವಿಶ್ವಾಸ ತುಂಬುತ್ತಿರುವ  ಮಹಿಳೆ ಸುನಿತಾ ಕೃಷ್ಣನ್

Tuesday May 24, 2016,

6 min Read

ಹದಿನಾರು ವರ್ಷದ ಹುಡುಗಿ ಎಲ್ಲರಿಗಿಂತ ಭಿನ್ನವಾಗಿದ್ದಳು. ಆಕೆಯ ಆಲೋಚನೆ ಬೇರೆಯಾಗಿತ್ತು. ಕನಸು ಬೇರೆಯಾಗಿತ್ತು. ಗುರಿ ಬೇರೆಯಾಗಿತ್ತು. ಬೆಳಿಗ್ಗೆ ಕಾಲೇಜಿಗೆ ಹೋಗ್ತಾ ಇದ್ದ ಹುಡುಗಿ ಸಂಜೆಯಾಗ್ತಾ ಇದ್ದಂತೆ ವೇಶ್ಯೆಯರ ಬಳಿ ಹೋಗ್ತಾ ಇದ್ದಳು. ವೇಶ್ಯೆಯರ ನೋವನ್ನು ಅರ್ಥಮಾಡಿಕೊಳ್ಳಲು ಹುಡುಗಿ ಬಯಸಿದ್ದಳು. ಅವಕಾಶ ಸಿಕ್ಕರೆ ಅವರ ಜೊತೆ ಮಾತನಾಡ್ತಾ ಇದ್ದಳು. ಇಲ್ಲವಾದ್ರೆ ದೂರದಿಂದಲೇ ವೇಶ್ಯೆಯರ ಚಟುವಟಿಕೆಗಳನ್ನು ಗಮನಿಸುತ್ತಿದ್ದಳು. ಪ್ರತಿ ದಿನ ಹುಡುಗಿಯರ ಮೇಲಾಗುತ್ತಿರುವ ಶೋಷಣೆ,ಹುಡುಗಿಯರು ಹಾಗೂ ಮಹಿಳೆಯರ ಮೇಲಾಗುತ್ತಿರುವ ಬಲತ್ಕಾರ ಆಕೆಯ ಮನ ಕರಗಿಸಿತ್ತು.

image


ಶೋಷಣೆಗೆ ಒಳಗಾಗಿದ್ದ ಮಹಿಳೆಯರಿಗೆ ಮುಕ್ತಿ ನೀಡಲು ಆಕೆ ಬಯಸಿದ್ದಳು. ಈ ನರಕದಿಂದ ಅವರನ್ನು ಸ್ವಂತ್ರಗೊಳಿಸುವ ಮಹಾನ್ ಗುರಿ ಹೊಂದಿದ್ದಳು.ಈ ಬಗ್ಗೆ ಕೇಳಿದ ವೇಶ್ಯಾಗೃಹದ ಕೀಪರ್ ಆಕೆಯನ್ನು ಬೈದು,ಹೊರಗೆ ಕಳುಹಿಸುತ್ತಿದ್ದರು. ಆದ್ರೆ ಈ ಹುಡುಗಿ ಮಾತ್ರ ತನ್ನ ಪ್ರಯತ್ನ ಮುಂದುವರೆಸಿದ್ದಳು.

ಒಂದು ದಿನ ಹುಡುಗಿ ಬೆಂಗಳೂರಿನ ವೇಶ್ಯಾಗೃಹವೊಂದಕ್ಕೆ ಬರುತ್ತಾಳೆ. ಅಲ್ಲಿಯೂ ತನ್ನನ್ನು ಹೊರದಬ್ಬುತ್ತಾರೆಂದುಕೊಂಡೆ ಕಾಲಿಡುತ್ತಾಳೆ. ಆದ್ರೆ ಅಲ್ಲಿನ ನಡೆದ ಘಟನೆ ಆಕೆಗೆ ಆಶ್ಚರ್ಯ ಹುಟ್ಟಿಸುತ್ತದೆ. ವೇಶ್ಯಾಗೃಹದ ಕೀಪರ್ ಆಕೆಗೆ ಒಂದು ಹುಡುಗಿಯನ್ನು ತೋರಿಸುತ್ತಾರೆ. ಆ ಹುಡುಗಿ ವಯಸ್ಸು ಸುಮಾರು 12-13 ವರ್ಷವಿರಬಹುದು. ಆಕೆಯನ್ನು ತೋರಿಸಿದ ವೇಶ್ಯಾಗೃಹದ ಕೀಪರ್, ಮುಕ್ತಿ ನೀಡುವುದಾದರೆ ಮೊದಲು ಈಕೆಗೆ ನೀಡು ಎನ್ನುತ್ತಾರೆ. 12-13 ವರ್ಷದ ಆ ಹುಡುಗಿಯನ್ನು ಸ್ವತಂತ್ರಗೊಳಿಸುವ ನಿರ್ಧಾರಕ್ಕೆ ಬಂದಿದ್ದಾಳೆ 16 ವರ್ಷದ ಈ ಹುಡುಗಿ. 12-13 ವರ್ಷದ ಆ ಹುಡುಗಿಯ ವರ್ತನೆ,ಹಾವ-ಭಾವ ಅರ್ಥಮಾಡಿಕೊಳ್ಳಲು ಪ್ರಯತ್ನಿಸ್ತಾಳೆ. ಆರಂಭದಲ್ಲಿಯೇ ಆ 12-13 ವರ್ಷದ ಹುಡುಗಿ ಮಾನಸಿಕ ಅಸ್ವಸ್ಥೆ ಎಂಬುದು ಈ ಹುಡುಗಿಗೆ ಅರ್ಥವಾಗಿದೆ. ಹಾಗಾಗಿಯೇ ಉಳಿದ ವೇಶ್ಯೆಯರು ಆಕೆಯನ್ನು ಈ ನರಕದಿಂದ ಬಿಡಿಸುವಂತೆ ಕೇಳಿದ್ದಾರೆ.

ಇದನ್ನು ಓದಿ: ನಿಮ್ಮ ಮುದ್ದು ಮುದ್ದಾದ ಸಾಕು ಪ್ರಾಣಿಗೆ ಇಲ್ಲಿ ಸಿಗುತ್ತೆ ನ್ಯೂ ಗೆಟಪ್

ಆಕೆಯನ್ನು ಹತ್ತಿರದಿಂದ ನೋಡಿದ ಈ ಹುಡುಗಿ ಕಂಗಾಲಾಗಿದ್ದಳು. ಆಕೆಯ ಸ್ಥಿತಿ ಈಕೆಯ ಕಣ್ಣಲ್ಲಿ ನೀರು ತರಿಸಿತ್ತು. 12-13 ವರ್ಷದ ಹುಡುಗಿ ಜೊತೆ ಹಿರಿ-ಕಿರಿ ವಯಸ್ಸಿನ ಎಲ್ಲ ಪುರುಷರು ಮಲಗ್ತಾ ಇದ್ದರು. ತಮ್ಮ ಕೆಲಸ ಮುಗಿದ ಮೇಲೆ ಆಕೆಯ ಬ್ಲೌಸ್ ನಲ್ಲಿ ಐದೋ ಹತ್ತೋ ರೂಪಾಯಿ ಇಟ್ಟು ಹೋಗ್ತಾ ಇದ್ದರು. ಆ ನೋಟನ್ನು ದಿಟ್ಟಿಸಿ ನೋಡ್ತಿದ್ದ ಹುಡುಗಿಗೆ ಏನು ಅರ್ಥವಾಗ್ತಿರಲಿಲ್ಲ. ನನ್ನ ಜೊತೆ ಏನಾಗ್ತಿದೆ?ಯಾಕಾಗ್ತಿದೆ ಎಂಬುದು ಆಕೆಗೆ ಅರ್ಥವಾಗ್ತಿರಲಿಲ್ಲ. ಈ ನೋಟೆಂದ್ರೆ ಏನು ಎಂಬುದೂ ಆಕೆಗೆ ಗೊತ್ತಿರಲಿಲ್ಲ.

image


ಆ ಮಾನಸಿಕ ಅಸ್ವಸ್ಥೆಗೆ ನರಕದಿಂದ ಮುಕ್ತಿ ನೀಡುವ ಗಟ್ಟಿ ನಿರ್ಧಾರ ಕೈಗೊಂಡಳು ಈ ಹುಡುಗಿ. ಆದ್ರೆ ಆಕೆಗೆ ಸರಿಯಾಗಿ ಮಾತನಾಡಲು ಸಾಧ್ಯವಾಗ್ತಿರಲಿಲ್ಲ. ತನ್ನ ಮನೆ ಊರಿನ ಬಗ್ಗೆ ಸರಿಯಾಗಿ ಹೇಳಲು ಬರ್ತಾ ಇರಲಿಲ್ಲ. ಸಾಮಾನ್ಯರಿಗೆ ಆಕೆಯ ಮಾತನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಆದ್ರೆ ಕಾಲೇಜಿಗೆ ಹೋಗ್ತಾ ಇದ್ದ 16 ವರ್ಷದ ಈ ಹುಡುಗಿ, ಮಾನಸಿಕ ಅಸ್ವಸ್ಥರ ಜೊತೆ ಬೆರೆತಿದ್ದಳು. ಹಾಗಾಗಿ ಆಕೆಯ ತೊದಲು ಮಾತುಗಳನ್ನು ಅರ್ಥ ಮಾಡಿಕೊಂಡ ಹುಡುಗಿಗೆ ಆಕೆಯ ಊರಿನ ಹೆಸರು ಗೊತ್ತಾಯ್ತು. ಮಾನಸಿಕ ಅಸ್ವಸ್ಥ ಬಾಲಕಿಯನ್ನು ಆಕೆಯ ಮನೆಗೆ ತಲುಪಿಸುವ ನಿರ್ಧಾರಕ್ಕೆ ಬಂದಳು ಈ 16 ವರ್ಷದ ಹುಡುಗಿ. ತಂದೆಯ ಮೂಲಕ ಹಿರಿಯ ಅಧಿಕಾರಿಗಳಿಂದ ವಾಹನವೊಂದನ್ನು ಪಡೆದು ವೇಶ್ಯಾಗೃಹಕ್ಕೆ ತಂದು ನಿಲ್ಲಿಸಿದಳು. ಆಕೆಯ ವಾಹನ ಮೇಲೆ ನಾಲ್ವರು ವೇಶ್ಯೆಯರು ಬಂದು ಕುಳಿತರು. ಮಾನಸಿಕ ಅಸ್ವಸ್ಥ ಹುಡುಗಿಯನ್ನು ಮನೆ ತಲುಪಿಸಲು ಮಹಾನ್ ಕಾರ್ಯದಲ್ಲಿ ಪುಟ್ಟದೊಂದು ಸಹಾಯ ಮಾಡಲು ಅವರು ನಿರ್ಧರಿಸಿದ್ದರು. ಹಿರಿಯ ವೇಶ್ಯೆಯರ ಈ ನಿರ್ಧಾರ,ಬದಲಾವಣೆ ಹುಡುಗಿಯ ಆಶ್ಚರ್ಯಕ್ಕೆ ಕಾರಣವಾಗಿತ್ತು.

ಹುಡುಗಿಯ ಹಳ್ಳಿಗೆ ಹೋದಾಗ ದಂಗಾಗುವಂತಹ ವಿಚಾರ ತಿಳಿಯಿತು. ಮಾನಸಿಕ ಅಸ್ವಸ್ಥೆಯಾಗಿದ್ದ ಬಾಲಕಿ ತಂದೆ ದೊಡ್ಡ ಶ್ರೀಮಂತರಂತೆ. ಆದ್ರೆ ಒಂದು ಅಪಘಾತದಲ್ಲಿ ತಂದೆ-ತಾಯಿ ಇಬ್ಬರೂ ಮೃತಪಟ್ಟಿದ್ದರಂತೆ. ಆಕೆಯ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಸಂಬಂಧಿಯೊಬ್ಬ ಆಕೆಯನ್ನು ಹೈವೆಯಲ್ಲಿ ಬಿಟ್ಟು ಹೋಗಿದ್ದನಂತೆ. ದಾರಿಯಲ್ಲಿ ಹೋಗ್ತಿದ್ದ ವ್ಯಕ್ತಿಯೊಬ್ಬ ಮಾನಸಿಕ ಅಸ್ವಸ್ಥ ಈ ಬಾಲಕಿಯನ್ನು ಬೆಂಗಳೂರಿನ ವೇಶ್ಯಾಗೃಹವೊಂದಕ್ಕೆ ತಂದು ಬಿಟ್ಟಿದ್ದಾನೆ.

ಗ್ರಾಮಕ್ಕೆ ಹೋದ 16 ವರ್ಷದ ಹುಡುಗಿ ಹಾಗೂ ಆಕೆಯ ಜೊತೆ ಬಂದಿದ್ದ ನಾಲ್ವರು ವೇಶ್ಯೆಯರು ಈ ಮಾನಸಿಕ ಅಸ್ವಸ್ಥೆ ಬಾಲಕಿಗೆ ನ್ಯಾಯ ನೀಡಲು ಮುಂದಾಗುತ್ತಾರೆ. ಹಾಗಾಗಿ ಗ್ರಾಮದ ಪಂಚಾಯತಿಗೆ ಹೋಗ್ತಾರೆ. ಅಲ್ಲಿ ಬಾಲಕಿಯ ಕೆಲ ವಿಚಾರಗಳನ್ನು ಮುಚ್ಚಿಡುತ್ತಾರೆ. ಆಕೆ ವೇಶ್ಯಾಗೃಹದಲ್ಲಿದ್ದಳು ಎಂಬ ವಿಷಯವನ್ನು ಹೇಳುವುದಿಲ್ಲ. ಬದಲಾಗಿ ತನ್ನ ಮನೆಯಲ್ಲಿದ್ದಳು ಎಂದು ಸುಳ್ಳು ಹೇಳುತ್ತಾಳೆ ಹುಡುಗಿ. ಆಕೆಯ ಉತ್ತಮ ಹಾಗೂ ಪವಿತ್ರ ನಾಟಕಕ್ಕೆ ವೇಶ್ಯೆಯರು ಕೂಡ ಬೆಂಬಲ ನೀಡುತ್ತಾರೆ. ಅಸ್ವಸ್ಥ ಬಾಲಕಿಗೆ ನ್ಯಾಯ ಸಿಗುತ್ತದೆ. ಹುಡುಗಿಗೆ ವಿಮೋಚನೆ ಸಿಕ್ಕ ನಂತ್ರ 16 ವರ್ಷದ ಹುಡುಗಿ ವೇಶ್ಯಾಗೃಹದಲ್ಲಿರುವ ಹುಡುಗಿಯರು ಹಾಗೂ ಮಹಿಳೆಯರಿಗೆ ವಿಮೋಚನೆ ನೀಡಲು ಆಂಧೋಲನ ಶುರುಮಾಡ್ತಾಳೆ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದ ಹುಡುಗಿ ಈಗ ದೊಡ್ಡವಳಾಗಿದ್ದಾಳೆ. ಆಕೆಯ ಹೆಸರು ಭಾರತದಾದ್ಯಂತ ಪ್ರಖ್ಯಾತಿ ಪಡೆದಿದೆ.

ನಾವು ಯಾವ ವ್ಯಕ್ತಿ ಬಗ್ಗೆ ಹೇಳ್ತಾ ಇದ್ದೀವೋ ಆ ವ್ಯಕ್ತಿಯನ್ನು ಜಗತ್ತು ಡಾ. ಸುನಿತಾ ಕೃಷ್ಣನ್ ಎಂದು ಕರೆಯುತ್ತದೆ. ಈ ಸುನಿತಾ ಕೃಷ್ಣನ್ ಧೈರ್ಯವಂತ ಮಹಿಳೆ. ಮಾನವ ಕಳ್ಳಸಾಗಣೆಯಂತಹ ದೊಡ್ಡ ಅಪರಾಧವನ್ನು ತಡೆಗಟ್ಟುವಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡ್ತಿದ್ದಾರೆ ಸುನಿತಾ.

ಸುನಿತಾ,ತಮ್ಮ 16ನೇ ವಯಸ್ಸಿನಲ್ಲಿಯೇ ವೇಶ್ಯಾಗೃಹಕ್ಕೆ ಹೋಗಲು ಒಂದು ಬಲವಾದ ಕಾರಣವಿದೆ. ಸುನಿತಾ 15ನೇ ವಯಸ್ಸಿನಲ್ಲಿರುವಾಗ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಒಂದು ಹಳ್ಳಿಯಲ್ಲಿ ದಲಿತರ ಉದ್ಧಾರಕ್ಕೆ ಮುಂದಾಗಿದ್ದರು ಸುನಿತಾ. ಅವರಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದ್ದರು. ಇದು ಮೇಲ್ಜಾತಿಯವರ ಕಣ್ಣು ಕೆಂಪು ಮಾಡಿತ್ತು. ದಲಿತರ ಉದ್ಧಾರ ಕಾರ್ಯವನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು. ಇದಕ್ಕೆ ಸುನಿತಾ ಹೆದರಿರಲಿಲ್ಲ. ಒಂದು ರಾತ್ರಿ ಸುನಿತಾ ಮೇಲೆ ದಾಳಿ ನಡೆಸಿದ್ದಲ್ಲದೆ 8 ಮಂದಿ ಸಾಮೂಹಿಕ ಬಲತ್ಕಾರ ನಡೆಸಿದ್ರು.

ಈ ಘಟನೆ ಬಗ್ಗೆ ನೆನಪು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಸುನಿತಾ. ಈ ಘಟನೆ ನಡೆಯುವ ಮೊದಲು ಸುನಿತಾ ಅತ್ಯುತ್ತಮರಾಗಿದ್ದರಂತೆ. ಘಟನೆ ನಂತ್ರ ಕೆಟ್ಟವರಾಗಿಬಿಟ್ಟರಂತೆ. ಎವರೆಸ್ಟ್ ಏರಿದ್ದ ಸುನಿತಾರನ್ನು ಮೇಲಿನಿಂದ ಯಾರೋ ತಳ್ಳಿದ ಅನುಭವವಾಗಿತ್ತಂತೆ. ಇಷ್ಟೆ ಅಲ್ಲ ಪಂಚಾಯತಿ, ಆರೋಪಿಗಳಿಗೆ ಶಿಕ್ಷೆ ನೀಡದೆ ಸುನಿತಾ ಮೇಲೆಯೇ ತಪ್ಪು ಹೊರಿಸಿತ್ತಂತೆ.

ಈ ಘಟನೆಯ ನಂತ್ರ ಸುನಿತಾ ಬದುಕು ಸಂಪೂರ್ಣ ಬದಲಾಯಿತು. ತಂದೆ ತಾಯಿಯ ಮೆಚ್ಚಿನ ಮಗಳಾಗಿದ್ದರು ಸುನಿತಾ. ಈ ಘಟನೆ ನಂತ್ರ ಮೊದಲು ಸುನಿತಾ ಮಾಡ್ತಿದ್ದ ಕೆಲಸವನ್ನು ತಂದೆ ತಾಯಿ ತಮ್ಮ ಸಂಬಂಧಿಕರಿಂದ ಮಾಡಿಸಲು ಶುರುಮಾಡಿದ್ರು. ಸಂಬಂಧಿಕರು ಸುನಿತಾರನ್ನು ತಪ್ಪಾಗಿ ತಿಳಿದುಕೊಂಡ್ರು. ಸಾಕಷ್ಟು ನಿಂದನೆ,ನೋವುಣ್ಣಬೇಕಾಯ್ತು. ಆದ್ರೆ ಎಂದೂ ಸುನಿತಾ ಜೀವನದಲ್ಲಿ ನಿರಾಶೆಗೊಳ್ಳಲಿಲ್ಲ. ಧೈರ್ಯಗೆಡಲಿಲ್ಲ. ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ.

image


ಘಟನೆ ನಡೆದ ಕೆಲವೇ ದಿನಗಳಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಹುಡುಗಿಯರು ಹಾಗೂ ಮಹಿಳೆಯರನ್ನು ಭೇಟಿಯಾಗಲು ಸುನಿತಾ ನಿರ್ಧರಿಸಿದ್ರು. ಹಾಗಾಗಿ ವೇಶ್ಯಾಗೃಹಗಳಿಗೆ ಹೋಗ್ತಾ ಇದ್ದರು. ಅಲ್ಲಿನ ಮಹಿಳೆಯರ ಸಮಸ್ಯೆಯನ್ನು ಅರಿತರು. ಅವರನ್ನು ಈ ನರಕದಿಂದ ಹೊರತರುವ ನಿರ್ಧಾರ ಮಾಡಿದ್ರು. ಅವರನ್ನು ವೇಶ್ಯಾಗೃಹದಿಂದ ಹೊರತಂದು ಅವರಿಗೆ ಪುನರ್ವಸತಿ ನೀಡುವುದು ಸುನಿತಾ ಬದುಕಿನ ಮುಖ್ಯ ಗುರಿಯಾಯ್ತು.

ಎಂಟನೆ ವರ್ಷದಲ್ಲಿರುವಾಗಲೇ ಮೊದಲ ಬಾರಿ ಸುನಿತಾ ಸಮಾಜ ಸೇವೆಯ ಹೊಣೆಯನ್ನು ಹೆಗಲೆ ಮೇಲೆ ಹೊತ್ತರು. ಮಾನಸಿಕ ಅಸ್ವಸ್ಥ ಮಕ್ಕಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರಿಗೆ ಡಾನ್ಸ್ ಹೇಳಿಕೊಡಲು ಶುರುಮಾಡಿದರು. ತಮ್ಮ 8ನೇ ವಯಸ್ಸಿನಲ್ಲಿ ಸಮಾಜ ಸೇವೆ ಶುರುಮಾಡುವ ಹಿಂದೂ ಒಂದು ಕಾರಣವಿದೆ.

ಕೆಳ ಮಧ್ಯಮ ವರ್ಗದಲ್ಲಿ ಜನಿಸಿದವರು ಸುನಿತಾ. ತಂದೆ ಸರ್ವೆ ಆಫ್ ಇಂಡಿಯಾದಲ್ಲಿ ಕೆಲಸ ಮಾಡ್ತಾ ಇದ್ದರು. ಅವರದ್ದೊಂದೆ ದುಡಿಮೆಯಲ್ಲಿ ಜೀವನ ಸಾಗಬೇಕಿತ್ತು. ಬೆಂಗಳೂರಿನಲ್ಲಿ ಜನಿಸಿದ ಸುನಿತಾ ಕೃಷ್ಣನ್, ರಾಜು ಹಾಗೂ ನಳಿನಿ ಕೃಷ್ಣನ್ ಎರಡನೇ ಮಗಳು.ಸುನಿತಾರಿಗೆ ಒಬ್ಬ ಸಹೋದರ ಹಾಗೂ ಇಬ್ಬರು ಸಹೋದರಿಯರಿದ್ದಾರೆ.

ಸುನಿತಾ ಚಿಕ್ಕವರಿರುವಾಗಲೇ ಅನೇಕ ಸವಾಲುಗಳನ್ನು ಎದುರಿಸಬೇಕಾಯ್ತು. ಸುನಿತಾ ಅಂಗ ವೈಕಲ್ಯದಿಂದ ಬಳಲುತ್ತಿದ್ದರು. ಒಂದು ಕಾಲಿನಲ್ಲಿ ಸಮಸ್ಯೆ ಇತ್ತು. ಇದನ್ನು ಅಜ್ಜಿ ಆರಂಭದಲ್ಲಿಯೇ ಪತ್ತೆ ಹಚ್ಚಿದ್ದರು. ಹಾಗಾಗಿ ಚಿಕಿತ್ಸೆ ನಡೆಯುತ್ತಿತ್ತು. ಕಾಲಿಗೆ ಸದಾ ಬೆಲ್ಟ್ ಹಾಕಿಕೊಂಡಿರಬೇಕಾಗಿತ್ತು.ಎಲ್ಲ ಮಕ್ಕಳಂತೆ ಓಡಾಡಲು,ಆಟವಾಡಲು ಸಾಧ್ಯವಾಗ್ತಾ ಇರಲಿಲ್ಲ.

ಸುನಿತಾರಲ್ಲಿ ಒಂದು ವಿಶೇಷ ಗುಣವಿತ್ತು. ಸುನಿತಾ ಯಾವುದೇ ವಿಚಾರಕ್ಕೂ ಅಳ್ತಾ ಇರಲಿಲ್ಲ. ಅದು ಬೇಕು,ಇದು ಬೇಕು ಎನ್ನುತ್ತಿರಲಿಲ್ಲ. ಸರಿ-ತಪ್ಪುಗಳು,ಒಳ್ಳೆಯದು-ಕೆಟ್ಟದರ ಬಗ್ಗೆ ಅವರಿಗೆ ಆಗಲೇ ತಿಳಿಯುತ್ತಿತ್ತು. ಒಳ್ಳೆಯ ಕೆಲಸಕ್ಕೆ ಮನೆಯವರನ್ನು ಅಭಿನಂದಿಸುತ್ತಿದ್ದ ಅವರು ಕೆಟ್ಟದನ್ನು ಎತ್ತಿ ಹೇಳುತ್ತಿದ್ದರು. ಅನೇಕ ವಿಚಾರಗಳಲ್ಲಿ ಮನೆಯವರಿಗೆ ಸಲಹೆ ನೀಡ್ತಾ ಇದ್ದರು.ಹಾಗಾಗಿ ಅವರನ್ನು ದಾದಿ ಅಮ್ಮಾ ಎಂದೇ ಎಲ್ಲರು ಕರೆಯುತ್ತಿದ್ದರು. ಸಹೋದರಿಯ ಶಿಕ್ಷಣದ ಹೊಣೆ ಹೊತ್ತಿದ್ದ ಸುನಿತಾ, ಅಕ್ಕ ಪಕ್ಕದವರಿಗೂ ಪಾಠ ಹೇಳ್ತಾ ಇದ್ದರು.

ಒಮ್ಮೆ ಮಾನಸಿಕ ಅಸ್ವಸ್ಥ ಮಕ್ಕಳನ್ನು ನೋಡಿದ ಸುನಿತಾ ಮನಸ್ಸು ಕರಗಿತ್ತು. ಅವರ ನೋವಿನ ಮುಂದೆ ತನ್ನ ನೋವು ಏನೂ ಅಲ್ಲ ಎಂಬುದನ್ನು ಮನಗಂಡ ಸುನಿತಾ ಅವರ ನೋವಿಗೆ ಸ್ಪಂದಿಸಲು ಮುಂದಾದ್ರು. ಅವರಿಗೆ ಡಾನ್ಸ್ ಕಲಿಸಲು ಶುರುಮಾಡಿದ್ರು. ಅವರ ಒಂದು ಕಾಲು ಸರಿಯಿಲ್ಲದ ಕಾರಣ ಕೆಲವೊಂದು ನೃತ್ಯಗಳನ್ನು ಮಾಡಲು ಬರುತ್ತಿರಲಿಲ್ಲ.

ತಮ್ಮ 12ನೇ ವಯಸ್ಸಿನಲ್ಲಿ ಸುನಿತಾ ಸ್ಕೂಲೊಂದನ್ನು ಆರಂಭಿಸಿದ್ರು.ಕೊಳಚೆ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಶುರುಮಾಡಿದ್ರು. ಈ ಸಮಯದಲ್ಲಿ ಸುನಿತಾ ತಂದೆಗೆ ವಿಶಾಖಪಟ್ಟಣಂಗೆ ವರ್ಗವಾಗಿತ್ತು. ಅಲ್ಲಿ ಶಾಲೆಗೆ ಹೋಗಿ ಬರುವ ವೇಳೆ ಸುನಿತಾ ಕೊಳಚೆ ಪ್ರದೇಶದ ಮಕ್ಕಳನ್ನು ನೋಡಿದ್ದಾರೆ. ಸದಾ ಆಟವಾಡಿ ಕಾಲ ಕಳೆಯುವ ಈ ಮಕ್ಕಳ ಮುಂದಿನ ಭವಿಷ್ಯ ನರಕವಾಗುವುದನ್ನು ತಪ್ಪಿಸಲು ನಿರ್ಧರಿಸಿದ ಸುನಿತಾ, ಶಾಲೆ ಆರಂಭಿಸಿದ್ರು. ಬೆಳಿಗ್ಗೆ ವಿದ್ಯಾರ್ಥಿನಿಯಾಗುವ ಸುನಿತಾ ಸಂಜೆ ತಮ್ಮ ಸ್ಕೂಲಿನಲ್ಲಿ ಶಿಕ್ಷಕಿಯಾಗಿ ಪಾಠ ಹೇಳುತ್ತಿದ್ದರು. ಇದನ್ನು ತಿಳಿದ ಫ್ರಿನ್ಸಿಪಾಲ್ ಸುನಿತಾ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುವುದಲ್ಲದೆ ಪ್ರಶಸ್ತಿ ನೀಡಿ ಗೌರವಿಸಿದ್ರು.

ತಮ್ಮ ದಾರಿಯಲ್ಲಿ ಸಾಕಷ್ಟು ನೋವುಗಳನ್ನು ಸುನಿತಾ ನೋಡಿದ್ದಾರೆ. ಅಪರಾಧ ತಡೆಯುವ ವೇಳೆ ಅನೇಕರು ಸುನಿತಾರಿಗೆ ಶತ್ರುಗಳಾಗಿದ್ದಾರೆ. 17 ಬಾರಿ ಸುನಿತಾ ಮೇಲೆ ದಾಳಿಗಳಾಗಿವೆ.ಆದ್ರೆ ಇದ್ಯಾವುದೂ ಅವರ ಮೇಲೆ ಪರಿಣಾಮ ಬೀರಿಲ್ಲ. ಸುನಿತಾ ಧೈರ್ಯದಿಂದ ಮುನ್ನುಗ್ಗುತ್ತಿದ್ದಾರೆ.

1996ರಲ್ಲಿ ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದಕ್ಕೆ ಸುನಿತಾ ವಿರೋಧ ವ್ಯಕ್ತಪಡಿಸಿದ್ದರು. ಸೌಂದರ್ಯ ಸ್ಪರ್ಧೆಗಳಿಂದ ಮಹಿಳೆಯರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂಬುದು ಅವರ ವಾದ. ಹಾಗಾಗಿ ಅವರು ವಿಶ್ವ ಸುಂದರಿ ಸ್ಪರ್ಧೆ ವಿರುದ್ಧ ಹೋರಾಟಕ್ಕಿಳಿದರು. ಆದ್ರೆ ಅವರನ್ನು ಪೊಲೀಸರು ಬಂಧಿಸಿದ್ರು. ಡ್ರಗ್ಸ್ ಆರೋಪಿ ಎಂದು ಸುಳ್ಳು ಆಪಾದನೆ ಹೊರಿಸಿ ಜೈಲಿಗೆ ತಳ್ಳಿದ್ರು. 60 ದಿನಗಳ ಕಾಲ ಸುನಿತಾರಿಗೆ ಬೇರೆ ಬಟ್ಟೆ ಕೂಡ ನೀಡಲಿಲ್ಲ. ಒಂದೇ ಬಟ್ಟೆಯಲ್ಲಿ ಸುನಿತಾ 60 ದಿನ ಕಳೆಯಬೇಕಾಯ್ತು. ಅಲ್ಲಿ ಕೂಡ ಅವರು ಸಾಕಷ್ಟು ಕಲಿತರು. ವಾಪಸ್ ಬಂದಾಗ ಸಂಬಂಧಿಕರು ಮತ್ತಷ್ಟು ದೂರವಾಗಿದ್ದರು. ಪರಿಸ್ಥಿತಿ ಅವರು ಬೆಂಗಳೂರು ಬಿಟ್ಟು ಹೋಗುವಂತೆ ಮಾಡ್ತು. ಜನ್ಮ ಭೂಮಿ ಬೆಂಗಳೂರನ್ನು ಬಿಟ್ಟ ಸುನಿತಾ ಕರ್ಮಭೂಮಿಯಾಗಿ ಹೈದ್ರಾಬಾದನ್ನು ಆಯ್ದುಕೊಂಡರು.

image


ಹೈದ್ರಾಬಾದ್ ಗೆ ಬರ್ತಾ ಇದ್ದಂತೆ ಅವರಿಗೆ ಬರ್ದರ್ ವರ್ಗೀಸ್ ಭೇಟಿಯಾಯ್ತು. ವರ್ಗೀಸ್ ಕೂಡ ಕೊಳಗೇರಿ ಜನರ ಅಭಿವೃದ್ಧಿಗೆ ದುಡಿಯುತ್ತಿದ್ದರು. ಇಬ್ಬರು ಸೇರಿ ಸಮಾಜ ಸೇವೆ ಮುಂದುವರೆಸಿದರು. ದಿನ ಕಳೆದಂತೆ ಜನರಿಗೆ ಸುನಿತಾ ಪರಿಚಯವಾಯ್ತು. ಆದ್ರೆ ಒಂದು ಘಟನೆ `ಪ್ರಜ್ವಲಾ’ ಸಂಸ್ಥೆ ಕಟ್ಟಲು ಕಾರಣವಾಯ್ತು. 1996 ರಲ್ಲಿ ಹೈದರಾಬಾದ್ ಹಳೆ ನಗರದ ಕುಖ್ಯಾತ "ಮೆಹಬೂಬ್ ಕಿ ಮೆಹಂದಿ’ಯನ್ನು ಸರ್ಕಾರ ರದ್ದು ಮಾಡ್ತು. ಅಲ್ಲಿದ್ದ ವ್ಯಾಪಾರವನ್ನು ರದ್ದುಗೊಳಿಸ್ತು. ಕೆಲ ವೇಶ್ಯೆಯರನ್ನು ಬಂಧಿಸಿದ್ರೆ ಮತ್ತೆ ಕೆಲವರು ಬೀದಿ ಪಾಲಾದ್ರು. ಹೊಟ್ಟೆಗಿಲ್ಲದೆ ಕಂಗಾದ ಕೆಲವರು ಆತ್ಮಹತ್ಯೆ ಮಾಡಿಕೊಂಡರು. ಆದ್ರೂ ಸರ್ಕಾರ ಪುನರ್ವಸತಿ ಬಗ್ಗೆ ಯೋಚನೆ ಮಾಡಲಿಲ್ಲ. ಈ ವೇಳೆ ಸುನಿತಾ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡರು. ಸಾಮಾಜಿಕ ಕಾರ್ಯಕರ್ತ ಬರ್ದರ್ ಜೋಸ್ Vettykttil ಜೊತೆ ಸೇರಿ `ಪ್ರಜ್ವಲಾ’ ಸಂಸ್ಥೆ ಶುರುಮಾಡಿದರು. ಮೆಹಬೂಬ್ ಕಿ ಮೆಹಂದಿಯಿಂದ ಹೊರಬಿದ್ದ ಮಹಿಳೆಯರ ಸಹಾಯಕ್ಕೆ ತೆರೆದ ಈ ಸಂಸ್ಥೆ ಈಗಲೂ ಕೆಲಸ ಮುಂದುವರೆಸಿದೆ. ಕತ್ತಲ ಜೀವನದಲ್ಲಿರುವ ಮಹಿಳೆಯರಿಗೆ ಬೆಳಕು ನೀಡುವ ಕಾರ್ಯ ಮಾಡುತ್ತಿರುವ ಸುನಿತಾರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಸಮಾಜದಲ್ಲಿ ಯಾರೂ ಶೋಷಣೆಗೆ ಒಳಗಾಗಬಾರದು. ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕು. ಎಲ್ಲರೂ ಸುರಕ್ಷಿತವಾಗಿಬೇಕು. ಹುಡುಗಿ ಇರಲಿ ಮಹಿಳೆ ಇರಲಿ ಯಾರಿಗೂ ಪ್ರಜ್ವಲಾದಂತ ಸಂಸ್ಥೆಯ ಸಹಾಯ ಇರಬಾರದು. ಅಂತ ಸಮಾಜ ನಿರ್ಮಾಣ ಮಾಡಬೇಕೆಂಬ ಗುರಿಯೊಂದಿಗೆ ಸುನಿತಾ ಮುನ್ನೆಡೆಯುತ್ತಿದ್ದಾರೆ.

ಲೇಖಕ :ಅರವಿಂದ್ ಯಾದವ್

ಇದನ್ನು ಓದಿ:

1. ಹೋಟೆಲ್ ಚಿಕ್ಕದಾದ್ರೂ.. ಹೆಸರು ದೊಡ್ಡದು...!

2. ಸ್ಟಾರ್ಟ್ ಅಪ್ ಗಳ ಗುರಿ ಸಾಧನೆಗೆ ಸೂಕ್ತ ತಂತ್ರಜ್ಞರ ಪೂರೈಕೆ : ಕ್ಲೈಂಟ್ ಗಳ ನೆರವಿಗೆ ಸ್ಟಾಕ್ ರೂಂ..

3. ಉತ್ತಮ ಸೇವೆಗೆ ಮುಂದಾದ ಭಾರತೀಯ ರೈಲ್ವೇ