ಪಿಯುಸಿ ವಿದ್ಯಾರ್ಥಿಯಿಂದ ಇತಿಹಾಸದ ಆ್ಯಪ್ ಅಬಿವೃದ್ಧಿ

ಉಷಾ ಹರೀಶ್​​

ಪಿಯುಸಿ ವಿದ್ಯಾರ್ಥಿಯಿಂದ ಇತಿಹಾಸದ ಆ್ಯಪ್ ಅಬಿವೃದ್ಧಿ

Monday November 16, 2015,

2 min Read

ಭಾರತದ ಇತಿಹಾಸವನ್ನೊಮ್ಮೆ ಕೆದಕಿದರೆ ಅಲ್ಲಿ ಆಳಿರುವ ರಾಜರ ಹೆಸರುಗಳು ಸಾಕಷ್ಟು ಸಿಗುತ್ತವೆ. ಒಂದನೇ ತರಗತಿಯಿಂದ ಹಿಡಿದು ಪದವಿ ಪಡೆಯುವವರೆಗೂ ವಿವಿಧ ರಾಜರ ಬಗ್ಗೆ ಇತಿಹಾಸದಲ್ಲಿ ತಿಳಿದುಕೊಂಡಿದ್ದೇವೆ. ಇಂದಿಗೂ ಕೆಲ ರಾಜ ವಂಶಸ್ಥರ ಬಗ್ಗೆ ಕೆಲವು ಪುಸ್ತಕಗಳನ್ನು ಓದಿ ತಿಳಿದುಕೊಂಡಿರುತ್ತೇವೆ. ಆದರೆ ಇನ್ನು ಮುಂದೆ ಪುಸ್ತಕಗಳನ್ನು ಕೆದಕಿ ಇತಿಹಾಸ ಓದುವುದನ್ನು ಕಡಿಮೆ ಮಾಡಿಕೊಳ್ಳಬಹುದು.

image


ಮೊದಲೆಲ್ಲಾ ಹೇಗೆ ಎಲ್ಲೆಲ್ಲಿ ನೋಡಿದರೂ ರಾಜರ ಆಡಳಿತವೇ ತುಂಬಿತ್ತೋ, ಈಗ ಎಲ್ಲೆಲ್ಲಿ ನೋಡಿದರೂ ತಂತ್ರಜ್ಞಾನವೇ ತುಂಬಿ ಹೋಗಿದೆ. ಆಶ್ಚರ್ಯ ಎಂದರೆ ವಿದ್ಯಾರ್ಥಿಯೊಬ್ಬ ಆ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಇತಿಹಾಸ, ರಾಜರ ಆಡಳಿತದ ಬಗ್ಗೆ ತಿಳಿಸುವ ಒಂದು ವಿನೂತನ ಆ್ಯಪ್ ಅಭಿವೃದ್ಧಿಪಡಿಸಿದ್ದಾನೆ.

ಆತ ಯಾವುದೇ ಇಂಜಿನಿಯರಿಂಗ್, ಡಿಪ್ಲೋಮೊ ಪದವಿ ಪಡೆದಿಲ್ಲ ಇನ್ನೂ ಪಿಯುಸಿ ಓದುತ್ತಿರುವ ವಿದ್ಯಾರ್ಥಿ ಉಮಂಗ್ ರಘುವಂಶಿಯೇ ಈ ಆ್ಯಪ್​​ನ ಸೃಷ್ಟಿಕರ್ತ. ಈ ಆ್ಯಪ್ ಅಭಿವೃದ್ಧಿಪಡಿಸಿ ವಿಶ್ವದ ಗಮನ ಸೆಳೆದಿರುವ ಉಮಂಗ್ ರಘುವಂಶಿಗೆ ಐಟಿ ಜಗತ್ತಿನ ದೈತ್ಯ ಮೈಕ್ರೋಸಾಫ್ಟ್ ತನ್ನ ಕಂಪನಿಯಲ್ಲಿ ಕೆಲಸ ಮಾಡುವಂತೆ ಆಫರ್ ನೀಡಿದೆ.

ಮುಂಬೈನ ಪೂರ್ವ ಕಂಡಿಲಿ ಪ್ರದೇಶದ ಠಾಕೂರ್ ವಿದ್ಯಾಮಂದಿರ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಉಮಂಗ್ ಮೂಲತಃ ರಾಜಾಸ್ತಾನ ಮೂಲದವರು. ಕಳೆದ ವರ್ಷವಷ್ಟೇ ಮುಂಬೈಗೆ ತಮ್ಮ ಕುಟುಂಬದ ಜತೆಗೆ ಬಂದಿದ್ದಾರೆ.

ಗೂಗಲ್ ಆ್ಯಪ್​​ನ ರಚನೆ ಬಗ್ಗೆ ಸ್ವಆಸಕ್ತಿ ಬೆಳೆಸಿಕೊಂಡು ಅವುಗಳನ್ನು ಅಭ್ಯಾಸ ನಡೆಸಿ ಈ ವಿನೂತನ ಆ್ಯಪ್​​ನ್ನು ಪ್ರಾಯೋಗಿಕವಾಗಿ ರಚಿಸಿದ್ದಾರೆ.

ಇಂಟರ್ನೆಟ್​ ಅವಶ್ಯಕತೆ ಇಲ್ಲ

ಉಮಂಗ್ ಅಭಿವೃದ್ಧಿಪಡಿಸಿರುವ ಈ ಆ್ಯಪ್ ಅಂತರ್ಜಾಲವಿಲ್ಲದೆಯೂ ಕಾರ್ಯನಿರ್ವಹಿಸುತ್ತದೆ. ಇದನ್ನು ಅಭಿವೃದ್ಧಿ ಪಡಿಸಿದ ಬಳಿಕ ಮೈಕ್ರೋಸಾಫ್ಟ್​​ನ ಅಂಗ ಸಂಸ್ಥೆಯಾಗಿರುವ ಮೈಕ್ರೋಸಾಫ್ಟ್ ಡೆವಲಪರ್ ನೆಟ್ವರ್ಕ್( ಎಂಎಸ್​​ಡಿಎನ್)ನಲ್ಲಿ ಇದನ್ನು ನೊಂದಣಿ ಮಾಡಿಸಿದ್ದಾರೆ.

ನೊಂದಣಿ ಮಾಡಿಸಿದ ನಂತರ ಅಲ್ಲಿನ ಐಟಿ ದಿಗ್ಗಜರು ಉಮಂಗ್ ಅವರ ಆ್ಯಪ್ ನೋಡಿ ಒಂದು ಕ್ಷಣ ಬೆರಗಾಗಿದ್ದಾರೆ. ರಘುವಂಶಿಯ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿರುವ ಇವರು ತಮ್ಮ ಆ್ಯಪ್ ಬಗ್ಗೆ ತಮ್ಮ ಆಡಳಿತ ಮಂಡಳಿಯ ಗಮನ ಸೆಳೆಯುವಂತೆ ಮಾಡಿರುವುದಲ್ಲದೆ, ಕಂಪನಿ ಕಡೆಯಿಂದ ಕೆಲಸಕ್ಕೆ ಬರುವಂತೆ ಆಹ್ವಾನವನ್ನು ಸಹ ನೀಡಿದ್ದಾರೆ.

ಆಹ್ವಾನ ತಿರಸ್ಕಾರ..!

ವಿದ್ಯೆಯಲ್ಲಿ ಸದಾ ಮುಂದಿರುವ ಉಮಂಗ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ 17 ವರ್ಷಕ್ಕೆ ಈ ಸಾಧನೆ ಮಾಡಿದ್ದಾರೆ. ಮೈಕ್ರೋಸಾಫ್ಟ್ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಐಐಟಿ ಪದವಿ ಪಡೆದು ಐಟಿ ಕ್ಷೇತ್ರದಲ್ಲಿ ವಿನೂತನವಾದ ಸಂಶೋಧನೆ ನಡೆಸುವ ಇರಾದೆ ಇಟ್ಟುಕೊಂಡಿದ್ದಾರೆ. ಉಮಂಗ್ ಅವರ ಸಂಶೋಧನೆ ಜನರಿಗೆ ಸುಲಭವಾಗಿ ದೊರೆಯುವಂತಾಗಬೇಕು, ಮತ್ತು ಅನುಕೂಲವಾಗಬೇಕು ಎಂಬುದೇ ಅವರ ಉದ್ದೇಶವಾಗಿದೆ.