30 ನಿಮಿಷಗಳಲ್ಲಿ ಬ್ಲಡ್ ರಿಪೋರ್ಟ್: ಅಮೆರಿಕಾದಲ್ಲಿ ಓದಿದ ವೈದ್ಯನ ಸಾಹಸ..!

ಟೀಮ್​ ವೈ.ಎಸ್​. ಕನ್ನಡ

30 ನಿಮಿಷಗಳಲ್ಲಿ ಬ್ಲಡ್ ರಿಪೋರ್ಟ್: ಅಮೆರಿಕಾದಲ್ಲಿ ಓದಿದ ವೈದ್ಯನ ಸಾಹಸ..!

Wednesday June 08, 2016,

3 min Read

ರೋಗ ಬಂತು ಅಂದ್ರೆ ಸಾಕು.. ಟೆನ್ಷನ್​ ಅದಾಗಲೇ ಶುರುವಾಗುತ್ತದೆ. ಇನ್ನು ಕಾಯಿಲೆ ಗುಣವಾಗುವಷ್ಟರಲ್ಲಿ ಸಾಕುಸಾಕಾಗಿರುತ್ತದೆ. ಅದ್ರಲ್ಲೂ ಆಸ್ಪತ್ರೆಯಲ್ಲಿ ಡಾಕ್ಟರ್​ಗಾಗಿ ಕಾಯೋದು, ಬ್ಲಡ್​ ರಿಪೋರ್ಟ್​ ತರೋದು ಅಂದ್ರೆ ರೋಗಿಗಿಂತ ಹೆಚ್ಚು ರೋಗಿಯನ್ನು ಆರೈಕೆ ಮಾಡುವವರು ಸುಸ್ತಾಗಿ ಹೋಗುತ್ತಾರೆ. ಸ್ಮಾರ್ಟ್​ ಜನರ ಬ್ಯುಸಿ ಲೈಫ್​ನಲ್ಲಂತೂ ಕಾಯಿಲೆಯನ್ನು ವಾಸಿ ಮಾಡಿಕೊಳ್ಳೋದು ಅಂದ್ರೆ ದೊಡ್ಡ ಬೆಟ್ಟವನ್ನು ಕಡಿದು ರಸ್ತೆ ಮಾಡಿದಷ್ಟು ಸಾಹಸ ಮಾಡಬೇಕು.

ಯಾವುದಾದರೂ ಕಾಯಿಲೆ ಬಂದು ನಾಲ್ಕೈದು ದಿನ ಕಳೆದರೂ ವಾಸಿಯಾಗದೆ ಇದ್ದರೆ, ಆಗ ವೈದ್ಯರು ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಹೇಳುತ್ತಾರೆ. ಆದರೆ ಈ ರಕ್ತ ಪರೀಕ್ಷೆಗೆಂದು ಇಂದು ನೀವು ನಿಮ್ಮ ಬ್ಲಡ್ ಸ್ಯಾಂಪಲಿಂಗ್ ಕೊಟ್ಟರೆ ಅವರು ಕೊಡುವುದು ನಾಳೆಯೇ. ಈ ಪ್ರಕ್ರಿಯೆಗೆ ಏನಿಲ್ಲವೆಂದರು 24 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ಬೆಂಗಳೂರಿನ ವೈದ್ಯರೊಬ್ಬರು ಕೇವಲ ಮೂವತ್ತು ನಿಮಿಷಗಳಲ್ಲಿ ಬ್ಲಡ್ ರಿಪೋರ್ಟ್ ನೀಡುವ ವ್ಯವಸ್ಥೆ ಮಾಡಿದ್ದಾರೆ.

ಇದನ್ನು ಓದಿ: ಇದು ಫೋಟೋಗಳು ಕಥೆ ಹೇಳೊ ಸಮಯ

ಅರೆ..! ಕೇವಲ ಮೂವತ್ತು ನಿಮಿಷಗಳಲ್ಲಿ ಬ್ಲಡ್ ರಿಪೋರ್ಟ್ ಪಡೆಯಬಹುದಾ ಎಂದು ನೀವು ಅಚ್ಚರಿ ವ್ಯಕ್ತಪಡಿಸಬಹುದು. ಆದರೆ ಅದನ್ನು ಸತ್ಯ ಮಾಡಿರುವವರು ಡಾಕ್ಟರ್​ ಧನಂಜಯ್.

ಒಂದು ಬ್ಲಡ್ ರಿಪೋರ್ಟ್ ಪಡೆದು ಅದನ್ನು ವೈದ್ಯರಿಗೆ ಆದಷ್ಟು ಬೇಗ ತೋರಿಸಿ ಅದರ ಆಧಾರದ ಮೇಲೆ ವೈದ್ಯರು ಚಿಕಿತ್ಸೆ ನೀಡಲು ಅನುಕೂಲವಾಗುತ್ತಿತ್ತು. ಆದರೆ ರಿಪೋರ್ಟ್ ಬರುವುದೇ ತಡವಾದರೆ ಇನ್ನು ಚಿಕಿತ್ಸೆ ನೀಡಲು ಸಹ ಸಮಯ ವ್ಯರ್ಥವಾಗುತ್ತದೆ. ಇದನ್ನೆಲ್ಲ ತಪ್ಪಿಸುವ ಸಲುವಾಗಿಯೇ ಆರಂಭವಾಗಿರುವುದು ಅಚಿರಾ ಲ್ಯಾಬ್ಸ್.

ಉತ್ತಮ ಸಂಬಳ ತೊರೆದು ಬಂದ ಧನಂಜಯ್

ಡಾ. ಧನಂಜಯ್ ಅವರು ಅಮೇರಿಕಾದ ಎಂಐಟಿ, ಮದ್ರಾಸಿನ ಐಐಟಿಗಳಂತಹ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದರು. ಅಷ್ಟೇ ಅಲ್ಲದೆ ಅಮೇರಿಕಾದಲ್ಲಿ ಪಿಎಚ್​ಡಿ ಪದವಿಯನ್ನು ಪಡೆದಿದ್ದರು. ಇಷ್ಟೆಲ್ಲಾ ಸಾಧನೆ ಮಾಡಿದ ಮೇಲೆ ಅಲ್ಲೇ ಉತ್ತಮ ಸಂಬಳದ ಕೆಲಸವು ಸಿಕ್ಕಿತ್ತು. ಆದರೆ ಅದನ್ನೆಲ್ಲವನ್ನು ತ್ಯಜಿಸಿದ ಧನಂಜಯ್ ಭಾರತದಲ್ಲೇ ಏನಾದರೂ ಮಾಡಬೇಕು ಎಂದು 2009 ರಲ್ಲಿ ಸ್ವದೇಶಕ್ಕೆ ವಾಪಾಸಾದರು.

ಭಾರತಕ್ಕೆ ಹಿಂತಿರುಗಿದ ಧನಂಜಯ್ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಜನರಿಗೆ ಅನುಕೂಲವಾಗುವಂತಹ ಯಾವುದಾದರೂ ಒಂದು ಯೋಜನೆ ಮಾಡಬೇಕು ಎಂಬ ಹಂಬಲ ಜೋರಾಗಿತ್ತು. ಆಗ ಇವರ ಯೋಜನೆಗೆ ಡಾ. ಸೂರಿವೆಂಕಟಾಚಲಂ ಜೊತೆಯಾದರು. ಇಬ್ಬರೂ ಸೇರಿ ಅಚಿರಾ ಲ್ಯಾಬ್ಸ್ ಸಂಸ್ಥೆಯನ್ನು ಆರಂಭಿಸಿ ಬಿಟ್ಟರು. ಪಾಯಿಂಟ್ ಆಫ್​ ಕೇರ್ ವೈದ್ಯಕೀಯ ಪರೀಕ್ಷೆ ಜನರಿಗೆ ಲಭ್ಯವಾಗುವಂತೆ ಡಯೋಗ್ನಸ್ಟಿಕ್ ಯಂತ್ರೋಪಕರಣಗಳನ್ನು ತಯಾರಿಸುವುದು ಅಚಿರಾ ಲ್ಯಾಬ್ಸ್​​ ಉದ್ದೇಶ.

ಥೈರಾಯ್ಡ್, ಗರ್ಭಧಾರಣೆ ಮತ್ತು ರಕ್ತ ಸಂಬಂಧಿತ ಕಾಯಿಲೆಗಳ ಪರೀಕ್ಷೆಗಾಗಿ ರಕ್ತವನ್ನು ಪರಿಶೀಲಿಸುವಂತಹ ಯಂತ್ರೋಪಕರಣವೇ ಎ.ಸಿ.ಐ.ಎಕ್ಸ್. ಇತ್ತೀಚೆಗೆ ನಡೆದ ಲ್ಯಾಬೋರೆಟರಿ ಆ್ಯಂಡ್ ಟೆಕ್ನಲಾಜಿಕಲ್ ಕಾನ್ಫರೆನ್ಸ್​​ನಲ್ಲಿ ಈ ಯಂತ್ರವನ್ನು ಪ್ರದರ್ಶಿಸಲಾಯಿತು. ಈ ಯಂತ್ರಕ್ಕೆ ಈ ಕಾನ್ಪೆರೆನ್ಸ್​​ನಲ್ಲಿ ಭಾರೀ ಪ್ರಶಂಸೆ ದೊರೆಯಿತು. ಈ ಯಂತ್ರವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತುಂಬಾ ಸುಲಭವಾಗಿ ವರ್ಗಾಯಿಸಬಹುದು. ಇದರ ಗಾತ್ರವೂ ಸಾಕಷ್ಟು ಚಿಕ್ಕದು. ಕೇವಲ 30 ನಿಮಿಷಗಳಲ್ಲಿ ರಕ್ತ ಪರೀಕ್ಷೆ ಮಾಡಿ ಅದರ ರಿಪೋರ್ಟ್ ನೀಡುವ ಸ್ವಯಂಚಾಲಿತ ಯಂತ್ರವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಒಬ್ಬ ಕೂಲಿ ಕಾರ್ಮಿಕ ವೈದ್ಯರ ಬಳಿ ಒಮ್ಮೆ ರಕ್ತ ಪರೀಕ್ಷೆಗೆ ಬಂದರೆ ರಿಪೋರ್ಟ್​ಗೆ ಮತ್ತಿತರ ಕೆಲಸಗಳಿಗೆ ಅಲೆಯುತ್ತಿರಬೇಕು. ಈ ಅಲೆದಾಟವನ್ನು ತಪ್ಪಿಸಲು ಈ ಯಂತ್ರ ಸಾಕಷ್ಟು ಸಹಾಯಕಾರಿಯಾಗಿದೆ. 30 ನಿಮಿಷಗಳಲ್ಲಿ ಬ್ಲಡ್ ರಿಪೋರ್ಟ್ ನೀಡಿ ವೈದ್ಯರು ಸೂಕ್ತ ಚಿಕಿತ್ಸೆ ನೀಡಬಹುದ್ದಾರಿಂದ ಅನಗತ್ಯ ಓಡಾಟ-ಖರ್ಚನ್ನು ತಪ್ಪಿಸಬಹುದು.

ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಲ್ಯಾಬ್​ಗಳು ದೊರೆಯುದು ಬಹಳ ಕಷ್ಟ.ಅಂತಹ ಸಂದರ್ಭಗಳಲ್ಲಿ ಈ ಯಂತ್ರ ಸಹಾಯವಾಗುತ್ತದೆ. ಇನ್ನು ನಗರ ಪ್ರದೇಶದಲ್ಲಿ ಈ ಯಂತ್ರ ದೊಡ್ಡ ಕ್ರಾಂತಿ ಮಾಡುವುದರಲ್ಲಿ ಯಾವುದೆ ಅನುಮಾನವಿಲ್ಲ.

ಯಾವ ಯಾವ ಆಸ್ಪತ್ರೆಯಲ್ಲಿ ಈ ಯಂತ್ರ ಬಳಕೆ..?

ಈ ಎ.ಸಿ.ಐ.ಎಕ್ಸ್. ಯಂತ್ರದ ಉಪಯೋಗವನ್ನು ಅರಿತ ಬೆಂಗಳೂರಿನ ಸಾಕಷ್ಟು ಆಸ್ಪತ್ರೆಗಳು ಅಳವಡಿಸಿಕೊಂಡಿವೆ. ಅವುಗಳಲ್ಲಿ ಪ್ರಮುಖವೆಂದರೆ ಅರಕೆರೆಯ ರಾಜಶ್ರೀ ಗ್ರಂಧೀಮ್ ಲ್ಯಾಬ್ಸ್ ಮತ್ತು ಬೆಂಗಳೂರಿನ ಸಾಕಷ್ಟು ಲ್ಯಾಬ್​ಗಳಲ್ಲಿ ಈ ಯಂತ್ರದ ಬಳಕೆ ನಡೆಯುತ್ತಿದೆ. ಗುವಾಹಟಿಯ ಐಐಟಿ, ಮದ್ರಾಸ್ ಐಐಟಿಗಳು ಸಂಶೋಧನೆಗಾಗಿ ಈ ಅಚಿರಾ ಲ್ಯಾಬ್ಸ್​ಗೆ ಚಂದದಾರರಾಗಿದ್ದಾರೆ.

42 ಜನರು ಈ ಲ್ಯಾಬ್​​ನಲ್ಲಿ ಕೆಲಸ ಮಾಡುತ್ತಿದ್ದು, ಉತ್ಪಾದನೆ ಮತ್ತು ಮಾರಾಟ ವಿಭಾಗಳನ್ನು ವಿಂಗಡಿಸಲಾಗಿದೆ. ಡಿಪ್ಲೊಮದಿಂದ ಹಿಡಿದು ಪಿಎಚ್​ಡಿ ಓದಿರುವವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಯಂತ್ರವು ಮೈಕ್ರ್ಲೊುಯಿಡಿಕ್ಸ್ ಆಧಾರದ ಮೇಲೆ ಲ್ಯಾಬ್ ಆನ್ ಚಿಪ್ ಎಂಬ ಕಲ್ಪನೆಯಲ್ಲಿ ಜಾರಿಗೆ ತಂದಿದ್ದಾರೆ ಡಾ. ಧನಂಜಯ್​. ಒಟ್ಟಿನಲ್ಲಿ ಈ ಯಂತ್ರದಿಂದ ವೇಗವಾಗಿ ನಮ್ಮ ಬ್ಲಡ್ ರಿಪೋರ್ಟ್ ಪಡೆಬಹುದು. ರಿಪೋರ್ಟ್​ಗಾಗಿ ಗಂಟೆಗಟ್ಟಲೆ ಕಾಯುವುದನ್ನು ಧನಂಜಯ್ ತಪ್ಪಿಸಿದ್ದಾರೆ ಎಂದರೆ ತಪ್ಪಿಲ್ಲ.

ಇದನ್ನು ಓದಿ:

1. ಕಾಲೇಜು ಕಟ್ಟಡದಲ್ಲೊಂದು ವಿಭಿನ್ನ ಹಸಿರು ಉದ್ಯಾನವನ..!

2. ಟ್ರೇಲರ್​ನಲ್ಲೇ ಅಡಗಿದೆ ಎಲ್ಲಾ ರಹಸ್ಯಗಳು..

3. "ಬೇಬಿ ಸೆನ್ಸರಿ"ಯಲ್ಲಿದೆ ನಿಮ್ಮ ಮಗುವಿನ ಬೆಳವಣಿಗೆಯ ಸೀಕ್ರೆಟ್​​..!