ಬದುಕನ್ನೇ ಸಿಹಿ ಮಾಡಿದ ಕೇಕ್ ಬ್ಯುಸಿನೆಸ್...

ನಿನಾದ

ಬದುಕನ್ನೇ ಸಿಹಿ ಮಾಡಿದ ಕೇಕ್ ಬ್ಯುಸಿನೆಸ್...

Monday February 29, 2016,

2 min Read

ಸುಪ್ರೀತಾ ಆಗಿನ್ನು ಅಂತಿಮ ವರ್ಷ ಅರ್ಕಿಟೆಕ್ ಪದವಿ ಓದುತ್ತಿದ್ದರು. ಒಂದು ದಿನ ಗೆಳತಿಯೊಬ್ಬರು ಸುಪ್ರೀತಾಗೆ ತಾವೇ ಮಾಡಿದ ಕೇಕ್ ರುಚಿ ತೋರಿಸಿದ್ರು. ಕೇಕ್ ರುಚಿ ಸುಪ್ರೀತಾ ತುಂಬಾ ಇಷ್ಟವಾಯ್ತು. ನಾನು ಒಂದು ಬಾರಿ ಯಾಕೆ ಟ್ರೈ ಮಾಡ್ಬಾರದು ಅಂತಾ ಸುಪ್ರೀತಾ ಕೇಕ್ ಮಾಡೋ ಸಾಹಸಕ್ಕೆ ಕೈ ಹಾಕಿಬಿಟ್ರು. ಮೊದಲ ಪ್ರಯತ್ನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತು. ಮನೆಯವರಿಂದ ಮೆಚ್ಚುಗೆ ವ್ಯಕ್ತವಾಯ್ತು. ಅಲ್ಲದೇ ಸ್ನೀಹಿತರು ಸಂಬಂಧಿಗಳು ತಮಗೂ ಮಾಡಿ ಕೊಡು ಅನ್ನೋಕೆ ಶುರು ಮಾಡಿದ್ರು. ಇಲ್ಲಿಂದ ಕೇಕ್ ಮಾಡೋ ಹವ್ಯಾಸಕ್ಕೆ ಹೊಸ ತಿರುವು ಸಿಕ್ತು.

image


ಸುಪ್ರೀತಾ ಗೆಳತಿ ಹೇಳಿದ ಕೇಕ್ ತಯಾರಿಕೆಯಲ್ಲೇ ಅನೇಕ ಪ್ರಯೋಗಗಳನ್ನು ಮಾಡಲು ಆರಂಭಿಸಿದ್ರು. ಉತ್ತಮ ಫಲಿತಾಂಶನೂ ಸಿಕ್ಕಿತು. ಅಲ್ಲದೇ ತಾನೇ ಯಾಕೆ ಒಂದು ಕೇಕ್ ಶಾಪ್ ಆರಂಭಿಸಬಾರದು ಅಂದುಕೊಂಡು ಮನೆಯಲ್ಲೇ 2014ರಲ್ಲಿ ಶುಗರ್ ಶ್ಯಾಕ್ ಎಂಬ ಕೇಕ್ ಶಾಪ್ ಆರಂಭಿಸಿಯೇ ಬಿಟ್ರು. ಸುಪ್ರೀತಾ ಹೊಸ ಸಾಹಸಕ್ಕೆ ಅಮ್ಮ ಬೆಂಬಲವಾಗಿ ನಿಂತ್ರು. ಅಣ್ಣ ಹಾಗೂ ಅಪ್ಪ ನಾನಾ ರೀತಿಯಲ್ಲಿ ಸಹಕಾರ ನೀಡಿದ್ರು. ಅಷ್ಟರಲ್ಲೇ ಸುಪ್ರೀತಾ ಸಂಬಂಧಿಗಳಾದ ರಾಕೇಶ್ , ನಿತೇಶ್ ಹಾಗೂ ವಚನ್ ಸಾಥ್ ನೀಡಿದರು. ಅದಕ್ಕಾಗಿಯೇ ಸುಪ್ರೀತಾ ತಮ್ಮ ಉದ್ಯೋಗವನ್ನು ತ್ಯಜಿಸಿದ್ರು. ಪೂರ್ಣ ಪ್ರಮಾಣದಲ್ಲಿ ಕೇಕ್ ತಯಾರಿಕೆಯಲ್ಲೇ ತೊಡಗಿಸಿಕೊಂಡರು. ಶುಗರ್ ಶ್ಯಾಕ್ ನಲ್ಲಿ ಸುಪ್ರೀತಾ ಅವರದ್ದು ಕೇಕ್ ತಯಾರಿಕಾ ಕೆಲಸವಾದ್ರೆ, ಉಳಿದ ಮೂವರು ಮಾರ್ಕೇಟಿಂಗ್ , ಇನ್ನಿತರೆ ಕೆಲಸಗಳನ್ನು ನಿರ್ವಹಿಸುತ್ತಾರೆ.

ಬಸವನಗುಡಿಯ ಮರಾಠಾ ಮೈದಾನ ಬಳಿಯ ಮೋರ್ ಸ್ಟೋರ್ ಪಕ್ಕದಲ್ಲಿರುವ ಸುಪ್ರೀತಾ ಮನೆಯಲ್ಲಿ ಇವತ್ತು ವೆರೈಟಿ ವೆರೈಟಿ ಕೇಕ್ ಗಳು ರೆಡಿಯಾಗ್ತವೆ. ಕಪ್ ಕೇಕ್ಸ್, ಕೇಕ್ ಪಾಪ್ಸ್, ಚಾಕಲೇಟ್ಸ್ , ಚಾಕಲೇಟ್ ಬೊಕೆಟ್, ಪೇಸ್ಟ್ರೀಸ್ ಹೀಗೆ ಎಲ್ಲಾ ವೆರೈಟಿಯ ಕೇಕ್ ಗಳು ತಯಾರಾಗ್ತವೆ. ನಮ್ಮಲ್ಲಿ ತಯಾರಾಗುವ ಕೇಕ್ ಗಳು ಹೆಚ್ಚು ರುಚಿಯಾಗಿರುತ್ತವೆ ಹಾಗೇ ನಾವು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಹಾಗಾಗಿ ಜನ ನಾವು ತಯಾರಿಸದ ಕೇಕ್ ಗಳನ್ನೇ ಹೆಚ್ಚು ಇಷ್ಟಪಡ್ತಾರೆ ಅಂತಾರೆ ಶುಗರ್ ಶ್ಯಾಕ್ ಟೀಮ್ ಓರ್ವ ಸದಸ್ಯರಾಗಿರುವ ರಾಕೇಶ್.

image


ಶುಗರ್ ಶ್ಯಾಕ್ ನಲ್ಲಿ ತಯಾರಾದ ಕೇಕ್ ಗಳು ಅನೇಕ ಸೆಲೆಬ್ರಿಟಿಗಳ ದಿಲ್ ಕದ್ದಿವೆ. ಕೆಲ ತಾರೆಯರ ಬರ್ತಡೇಗೆ ಇಲ್ಲೇ ಅವರ ಅಭಿಮಾನಿಗಳು ಕೇಕ್ ಆರ್ಡರ್ ಮಾಡಿ ಕೊಂಡೊಯ್ಯುತ್ತಾರಂತೆ. ಈಗಾಗಲೇ ಉಪೇಂದ್ರ, ಪುನೀತ್ ರಾಜ್ ಕುಮಾರ್ ಅವರ ಬರ್ತಡೇಗೆ ಸುಪ್ರೀತಾ ಕೇಕ್ ರೆಡಿ ಮಾಡಿಕೊಟ್ಟಿದ್ದಾರೆ. ಇನ್ನು ಬರ್ತಡೇ, ವಿವಾಹ ವಾರ್ಷಿಕೋತ್ಸವ ಇನ್ನಿತರ ಕಾರ್ಯಕ್ರಮಗಳಿಗೆ ಕೊಳ್ಳುವವರ ಇಷ್ಟದ ಡಿಸೈನ್ ನ ಕೇಕ್ ಗಳನ್ನು ತಯಾರಿಸಿಕೊಡುತ್ತಾರೆ ಸುಪ್ರೀತಾ.

ಸುಪ್ರೀತಾ ತಮ್ಮ ಉದ್ಯಮದಲ್ಲಿ ಇವತ್ತು ಇಷ್ಟರ ಮಟ್ಟಿಗೆ ಯಶಸ್ವಿಯಾಗೋಕೆ ಅವರು ಕುಟುಂಬದವರ ಬೆಂಬಲ ಪ್ರಮುಖವಾದದ್ದು.ಆರಂಭದಲ್ಲಿ ಶುಗರ್ ಶ್ಯಾಕ್ ಆರಂಭಿಸುವಾಗ ಸುಪ್ರೀತಾ ಅವರಲ್ಲಿ ತುಂಬಾನೇ ಭಯವಿತ್ತಂತೆ. ಗುರಿ ತಲುಪುತ್ತೇನೆ ಇಲ್ವೋ ಅನ್ನೋ ಆತಂಕವಿತ್ತಂತೆ. ಆದ್ರೀಗ ಸುಪ್ರೀತಾಗೆ ತಮ್ಮ ಉದ್ಯಮದಲ್ಲಿ ಯಶಸ್ಸು ಗಳಿಸಿರೋ ಖುಷಿಯಿದೆ. ಅಲ್ಲದೇ ತಮ್ಮದೇ ಒಂದು ಕೇಕ್ ಸೆಂಟರ್ ಆರಂಭಿಸಬೇಕು ಅನ್ನೋದು ಅವರ ಮುಂದಿನ ಪ್ಲಾನ್.

ಶುಗರ್ ಶ್ಯಾಕ್ ನಲ್ಲಿ ಆಯಾಯ ಟ್ರೆಂಡಿನ ಕೇಕ್ ಗಳನ್ನು ತಯಾರಿಸೋದರಿಂದ ಜನ ಇಲ್ಲಿನ ಕೇಕ್ ಗಳನ್ನು ಇಷ್ಟಪಡ್ತಾರೆ. ಇಲ್ಲಿ ನೂರು ರೂಪಾಯಿಯಿಂದ ಹಿಡಿದು ಸಾವಿರಾರು ರೂಪಾಯಿಗಳವರೆಗಿನ ಕೇಕ್ ಲಭ್ಯವಿದೆ. ಅದರಲ್ಲೂ ಡಿಸೈನರ್ ಕೇಕ್ ಗಳು ಕೆಜಿಗೆ 950 ರೂಪಾಯಿಯಂತೆ ಮಾರಾಟವಾಗುತ್ತೆ. ಜನ ಕೂಡ ಇಂತಹ ಕೇಕ್ ಗಳನ್ನೇ ಹೆಚ್ಚು ಇಷ್ಟಪಡ್ತಾರೆ ಅಂತಾರೆ ಸುಪ್ರೀತಾ.