ಆಲ್ ಇನ್ ಒನ್ ರೀಚಾರ್ಜ್‍ಗಾಗಿ ‘ಪ್ಲಾನ್‍ಹೌಂಡ್’

ಟೀಮ್​​ ವೈ.ಎಸ್​​.

ಆಲ್ ಇನ್ ಒನ್ ರೀಚಾರ್ಜ್‍ಗಾಗಿ ‘ಪ್ಲಾನ್‍ಹೌಂಡ್’

Saturday November 07, 2015,

3 min Read

ಪೋಸ್ಟ್​​​ಪೇಯ್ಡ್ ಪ್ಲಾನ್​​​​​ ಖರೀದಿಸುವುದಾ ಅಥವಾ ಪ್ರೀಪೇಯ್ಡ್ ಸಂಪರ್ಕ ಪಡೆಯುವುದಾ ಅನ್ನೋ ಗೊಂದಲದಲ್ಲಿರುವ ಮೊಬೈಲ್ ಬಳಕೆದಾರರ ಉಪಯೋಗಕ್ಕಾಗಿ, 4 ವರ್ಷಗಳ ಹಿಂದೆ ಚೆನ್ನೈ ಮೂಲದ ತಾಂತ್ರಿಕೋದ್ಯಮಿಗಳಾದ ಜಿಗರ್ ದೋಶಿ ಹಾಗೂ ಅಂಕಿತ್ ಛಜ್ಜರ್ ಕಂಪ್ಯಾರಿಫೈ (Komparify) ಎಂಬ ಆನ್‍ಲೈನ್ ಕಂಪನಿ ಪ್ರಾರಂಭಿಸಿದ್ದರು. ಇಲ್ಲಿ ಮೊಬೈಲ್ ಬಳಕೆದಾರರು ತಮ್ಮ ಮೊಬೈಲ್ ಬಳಕೆಗೆ ಅನುಗುಣವಾಗಿ ಅತ್ಯುತ್ತಮ ರೀಚಾರ್ಜ್ ಪ್ಲಾನ್ ಅಥವಾ ಪೋಸ್ಟ್​​​ಪೇಯ್ಡ್ ಮೊಬೈಲ್ ಸಂಪರ್ಕ ಪಡೆಯಲು ಅವರಿಗೆ ನೆರವು ನೀಡಲಾಗುತ್ತಿತ್ತು. ಪ್ರತಿ ಮೊಬೈಲ್ ಕಂಪನಿಗಳ ವೆಬ್‍ಸೈಟ್‍ನಲ್ಲಿನ ಮಾಹಿತಿ ಕಲೆಹಾಕಿ, ಅದನ್ನು ವ್ಯವಸ್ಥಿತವಾಗಿ ಇವರ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುತ್ತಿತ್ತು. ಆದ್ರೆ ಮೊಬೈಲ್ ಪ್ಲಾನ್‍ಗಳ ಕುರಿತ ಮಾಹಿತಿಯನ್ನು ಅಂಗಡಿಯವರ ಬಳಿಯೇ ಪಡೆಯುತ್ತಿದ್ದ ಕಾರಣ ಹೆಚ್ಚು ಮಂದಿ ಈ ವೆಬ್‍ಸೈಟ್‍ನಿಂದ ದೂರ ಉಳಿದರು. ಹೀಗಾಗಿಯೇ ಕೆಲವೇ ತಿಂಗಳಲ್ಲಿ ಕಂಪ್ಯಾರಿಫೈ ಸ್ಥಗಿತಗೊಳ್ಳಬೇಕಾಯ್ತು.

‘ನಮ್ಮ ವೆಬ್‍ಸೈಟ್‍ಗೆ ಬಂದು ವಿವಿಧ ಪ್ಲಾನ್‍ಗಳನ್ನು ಹುಡುಕುವುದಿರಲಿ, ಹೆಚ್ಚು ಜನ ತಮ್ಮ ಮೊಬೈಲ್ ಬಿಲ್‍ಗಳನ್ನೂ ಸರಿಯಾಗಿ ಪರಿಶೀಲಿಸುತ್ತಿರಲಿಲ್ಲ. ಹೀಗಾಗಿಯೇ ನಾವು ಮೊಬೈಲ್ ಬಳಕೆ ಕುರಿತು ನಿಗಾ ವಹಿಸುವ ಹಾಗೂ ಮಾಹಿತಿ ಕಲೆಹಾಕುವ ಒಂದು ಅಪ್ಲಿಕೇಶನ್ ಅಭಿವೃದ್ಧಿಪಡಿಸಲು ನಿರ್ಧರಿಸಿದೆವು’ ಅಂತಾರೆ ಕಂಪ್ಯಾರಿಫೈ ನಿರ್ಮಾತೃ ಹಾಗೂ ಚೀನಿ ಲ್ಯಾಬ್ಸ್​​​ನ ಸಹ-ಸಂಸ್ಥಾಪಕ ಜಿಗರ್.

image


ಚೆನ್ನೈನ ದಿ ಸ್ಟಾರ್ಟಪ್ ಕೇಂದ್ರ ಆಯೋಜಿಸಿದ್ದ ಇನ್ 50 ಅವರ್ಸ್ ಎಂಬ ಸ್ಟಾರ್ಟಪ್ ಹ್ಯಾಕಥಾನ್‍ನಲ್ಲಿ ಜಿಗರ್ ಮತ್ತು ಅಂಕಿತ್ ಪ್ಲಾನ್‍ಹೌಂಡ್ ಆಂಡ್ರಾಯ್ಡ್ ಅಪ್ಲಿಕೇಶನ್‍ನ ಮೊದಲ ಮಾದರಿಯನ್ನು ಅಭಿವೃದ್ಧಿಪಡಿಸಿದ್ದರು. ಸ್ವೀಕರಿಸಿದ ಕರೆಗಳು, ಮಾಡಿದ ಕರೆಗಳು, ಅಂತರ್ಜಾಲ ಕರೆಗಳು, ಎಸ್‍ಎಮ್‍ಎಸ್ ಸಂದೇಶಗಳು, ಇಂಟರ್‍ನೆಟ್ ಬಳಕೆಯ ಪ್ರಮಾಣ ಸೇರಿದಂತೆ ಮೊಬೈಲ್ ಕುರಿತ ಸಂಕ್ಷಿಪ್ತ ಅಂಕಿ-ಅಂಶ ಸಮೇತ ವಿವರಗಳನ್ನು ಮೊಬೈಲ್ ಬಳಕೆದಾರರಿಗೆ ನೀಡುವುದೇ ಈ ಪ್ಲಾನ್‍ಹೌಂಡ್ ಕೆಲಸ.

ಜೊತೆಗೆ ಈ ಪ್ಲಾನ್‍ಹೌಂಡ್ ಅತ್ಯುತ್ತಮ ಮೊಬೈಲ್ ಪ್ಲಾನ್‍ಗಳ ಕುರಿತೂ ಬಳಕೆದಾರರಿಗೆ ಸಂಪೂರ್ಣ ಮಾಹಿತಿ ನೀಡುತ್ತದೆ. ‘ಎಲ್ಲಾ 15 ಕಂಪನಿಗಳ ಮೊಬೈಲ್ ಪ್ಲಾನ್ ಬಗ್ಗೆ ನಿಗಾವಹಿಸುವ ವ್ಯವಸ್ಥೆ ನಮ್ಮಲ್ಲಿದೆ. ಆ ಮೂಲಕ ಅಲ್ಲಿನ ಮಾಹಿತಿಗಳನ್ನು ಕಲೆಹಾಕಿ ವ್ಯವಸ್ಥಿತವಾಗಿ ಗ್ರಾಹಕರಿಗೆ ನೀಡ್ತೇವೆ. ಜೊತೆಗೆ ಮೊಬೈಲ್ ಬಳಕೆದಾರರ ಇಷ್ಟ-ಕಷ್ಟಗಳನ್ನು ಕೇಳಿ, ನಾವೇ ಅವರಿಗೆ ಉತ್ತಮವೆನಿಸುವ ಒಂದು ಪ್ಲಾನ್‍ಅನ್ನು ಸೂಚಿಸುತ್ತೇವೆ’ ಅಂತ ಪ್ಲಾನ್‍ಹೌಂಡ್ ಉಪಯೋಗಗಳ ಕುರಿತು ಮಾಹಿತಿ ನೀಡ್ತಾರೆ ಜಿಗರ್. ಅಲ್ಲದೇ ಪ್ಲಾನ್‍ಹೌಂಡ್ ಮೊಬೈಲ್, ಡೇಟಾ ಕಾರ್ಡ್, ಟ್ಯಾಬ್ಲೆಟ್ ಫ್ಲಾನ್‍ಗಳ ಕುರಿತೂ ಮಾಹಿತಿ ನೀಡುತ್ತದೆ. ಇತ್ತೀಚೆಗಷ್ಟೇ ಡಿಟಿಎಚ್‍ಗಳ ಕುರಿತ ಪ್ಲಾನ್ ಮತ್ತು ರೀಚಾರ್ಜ್ ಸೇವೆಗಳನ್ನೂ ಪ್ರಾರಂಭಿಸಲಾಗಿದೆ.

ಈ ಅಪ್ಲಿಕೇಶನ್‍ನ ಸದ್ಯದ ಆವೃತ್ತಿಯಲ್ಲಿ ಮೊಬೈಲ್ ಬಳಕೆದಾರರು, ಎಲ್ಲಾ ಸಂಪರ್ಕಗಳ ಡೇಟಾ ಬ್ಯಾಲನ್ಸ್ ಮತ್ತು ರೀಚಾರ್ಜ್‍ಗಳನ್ನು ನಿರ್ವಹಿಸಬಹುದು. ಹಾಗೇ ಇದು ಬಿಲ್ ಪಾವತಿ ಹಾಗೂ ರೀಚಾರ್ಜ್ ಕೊನೆಯಾಗುತ್ತಿರುವ ಕುರಿತೂ ಮೊಬೈಲ್ ಬಳಕೆದಾರರನ್ನು ಎಚ್ಚರಿಸುತ್ತದೆ. ಜೊತೆಗೆ ಓಲಾ ಮನಿ (Ola Money) ಮೂಲಕ ರೀಚಾರ್ಜ್‍ಗಳನ್ನು ಪೂರ್ಣಗೊಳಿಸಲೂ ಈ ಅಪ್ಲಿಕೇಶನ್ ಅವಕಾಶ ಕಲ್ಪಿಸುತ್ತದೆ.

ಈ ಅಪ್ಲಿಕೇಶನ್ ಬಳಕೆದಾರನ ಎಲ್ಲಾ ಸಂಪರ್ಕಗಳನ್ನೂ ಸ್ವಯಂಚಾಲಿತವಾಗಿ ಕಂಡುಹಿಡಿಯುತ್ತದೆ. ಹಾಗೇ ಕುಟುಂಬವೊಂದರ ಎಲ್ಲಾ ಸದಸ್ಯರ ಸಂಪರ್ಕಗಳನ್ನೂ, ಮೊಬೈಲ್‍ನಲ್ಲಿ ಪ್ಲಾನ್‍ಹೌಂಡ್ ಅಳವಡಿಸಿಕೊಳ್ಳುವ ಮೂಲಕ ಒಗ್ಗೂಡಿಸಬಹುದಾಗಿದೆ. ‘ನಾವು ಪ್ಲಾನ್‍ಹೌಂಡ್‍ಅನ್ನು ಕೇವಲ ರೀಚಾರ್ಜ್ ಉದ್ದೇಶಕ್ಕಾಗಿ ಅಭಿವೃದ್ದಿಪಡಿಸಿಲ್ಲ. ಬದಲಿಗೆ ಇದೊಂದು ಮೊಬೈಲ್ ಬಳಕೆದಾರರಿಗೆ ತಮ್ಮ ಮೊಬೈಲ್‍ನಲ್ಲಿ ಏನಾಗ್ತಿದೆ ಹಾಗೂ ಮುಂದಿನ ಕ್ರಮ ಹೇಗೆ ಕೈಗೊಳ್ಳಬೇಕು ಅನ್ನೋದನ್ನ ತಿಳಿಸಲು ನೆರವು ಕೂಡ ನೀಡುತ್ತೆ’ ಅಂತಾರೆ ಜಿಗರ್.

ಪೇಟಿಎಮ್(Paytm) ಅಥವಾ ಫ್ರೀಚಾರ್ಜ್‍ನಂತೆ ಇಲ್ಲಿ ಗ್ರಾಹಕರು ನೇರವಾಗಿ ಪ್ಲಾನ್ ಖರೀದಿ ಮಾಡಲು ಅಥವಾ ಬಿಲ್ ಪಾವತಿಸಲು ಅವಕಾಶವಿಲ್ಲ, ಆದ್ರೂ ಪ್ಲಾನ್‍ಹೌಂಡ್ ಟೆಲಿಕಾಮ್ ಕಂಪನಿಗಳೊಂದಿಗೆ ಆ ಸೇವೆಯನ್ನು ತನ್ನ ಮೂಲಕ ನೀಡುವಂತೆ ಒಪ್ಪಂದ ಮಾಡಿಕೊಂಡಿದೆ. ಅಕಸ್ಮಾತ್ ಮೊಬೈಲ್ ಬಳಕೆದಾರರಿಗೆ ಬೇರೆ ಕಂಪನಿಯ ಪ್ಲಾನ್ ಇಷ್ಟವಾದ್ರೆ, ಕಟ್ಟುನಿಟ್ಟಿನ ಕಾನೂನಿಂದಾಗಿ ಪ್ಲಾನ್‍ಹೌಂಡ್ ಮೂಲಕ ಬದಲಿಸೋದು ಕಷ್ಟ. ಆದ್ರೆ ಸ್ಥಳೀಯ ಅಧಿಕಾರಿಗಳ ಸಹಾಯದಿಂದ ಪ್ಲಾನ್‍ಹೌಂಡ್ ಡಿಟಿಎಚ್ ಸಂಪರ್ಕಗಳನ್ನು ಗ್ರಾಹಕರಿಗೆ ನೀಡುವಲ್ಲಿ ಯಶಸ್ವಿಯಾಗಿದೆ. ಇದುವರೆಗೂ ದೇಶದಾದ್ಯಂತ ಸುಮಾರು 20 ಸಾವಿರ ಸಂಪರ್ಕಗಳನ್ನು ನೀಡಲಾಗಿದೆ.

‘ಭವಿಷ್ಯದಲ್ಲಿ ಗ್ರಾಹಕರು ಹೊಸ ಸಂಪರ್ಕ ಪಡೆಯುವ ಸೇವೆ ಒದಗಿಸುವ ನಿಟ್ಟಿನಲ್ಲಿ ನಾವೂ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದೇವೆ. ಇನ್ನೊಂದೆರಡು ತಿಂಗಳಲ್ಲಿ ಗ್ರಾಹಕರ ಬಳಕೆಗೆ ಅನುಗುಣವಾಗಿ ಆ ಸೇವೆಯನ್ನೂ ಪ್ಲಾನ್‍ಹೌಂಡ್‍ನಲ್ಲಿ ನೀಡುವ ಭರವಸೆಯಿದೆ. ಸದ್ಯ ಭಾರತದಲ್ಲಿ 4ಜಿ ಯುಗ ಆರಂಭವಾಗಿದ್ದು, ಮೊಬೈಲ್ ಬಳಕೆದಾರರು ಅದಕ್ಕೆ ಮೊರೆ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿಯೇ ಬೇರೆ ಬೇರೆ ಟೆಲಿಕಾಂ ಕಂಪನಿಗಳ 4ಜಿ ಪ್ಲಾನ್‍ಗಳು ಹೇಗಿವೆ ಅಂತ ಹೋಲಿಕೆ ಮಾಡಿ ಗ್ರಾಹಕರಿಗೆ ಮಾಹಿತಿ ನೀಡುವ ಮೂಲಕ ಅವರ ಗೊಂದಲ ನಿವಾರಿಸುವ ಇರಾದೆ ನಮ್ಮದು’ ಅಂತ ಹೇಳ್ತಾರೆ ಜಿಗರ್.

ಇದುವರೆಗೆ ಸುಮಾರು 2 ಲಕ್ಷ ಮಂದಿ ಪ್ಲಾನ್‍ಹೌಂಡ್‍ಅನ್ನು ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಹಾಗೇ 10 ಲಕ್ಷಕ್ಕೂ ಹೆಚ್ಚು ಮಂದಿ ಇದರ ಸೇವೆ ಪಡೆದಿರುವ ಸಂತೃಪ್ತ ಗ್ರಾಹಕರಿದ್ದಾರೆ. ಸದ್ಯ ಆಸ್ಟ್ರೇಲಿಯಾ ಮೂಲದ ವಿಜಲ್‍ಔಟ್ ಹಾಗೂ ಬ್ರಿಟನ್‍ನ ಯೂಸ್ವಿಚ್ ಕಂಪನಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಲಾನ್‍ಹೌಂಡ್‍ಗೆ ಕಠಿಣ ಸ್ಪರ್ಧೆಯೊಡ್ಡುತ್ತಿವೆ. ಜೊತೆಗೆ ಆನ್‍ಲೈನ್ ರೀಚಾರ್ಜ್ ಮತ್ತು ಬಿಲ್ ಪಾವತಿ ಮಾಡಲು ಸಹಾಯ ಮಾಡುವ ಪೇಟಿಎಮ್, ಫ್ರೀಚಾರ್ಜ್ ಹಾಗೂ ಈಸಿ ಮೊಬೈಲ್ ರೀಚಾರ್ಜ್ ಕಂಪನಿಗಳೂ ಸ್ವಲ್ಪ ಮಟ್ಟಿಗೆ ಪರೋಕ್ಷವಾಗಿ ಸ್ಪರ್ಧೆ ನೀಡುತ್ತಿವೆ.

ಯುವರ್ ಸ್ಟೋರಿ ಅಭಿಪ್ರಾಯ

ಇತ್ತೀಚೆಗಷ್ಟೇ ಟ್ರಾಯ್ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, 2015ರ ಏಪ್ರಿಲ್ ತಿಂಗಳವರೆಗೂ ಭಾರತದಲ್ಲಿ ಒಟ್ಟು 97 ಕೋಟಿ 33 ಲಕ್ಷ ಮಂದಿ ಮೊಬೈಲ್ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಅದರಲ್ಲಂತೂ ಕಳೆದ ಕೆಲ ವರ್ಷಗಳಿಂದ ಹೊಸ ಮೊಬೈಲ್ ಸಂಪರ್ಕ ಪಡೆಯುವವರ ಸಂಖ್ಯೆ ದಿನೇ ದಿನೇ ಕ್ಷಿಪ್ರಗತಿಯಲ್ಲಿ ಹೆಚ್ಚುತ್ತಲೇಯಿದೆ. ಸ್ವೀಡನ್ ಮೂಲದ ಎರಿಕ್ಸನ್ ಕಂಪನಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, 2014ರ ಕೊನೆಯ ಮೂರು ತಿಂಗಳಲ್ಲೇ ಬರೊಬ್ಬರಿ 1.80 ಕೋಟಿ ಮಂದಿ ಭಾರತೀಯರು ಹೊಸ ಸಂಪರ್ಕಗಳನ್ನು ಪಡೆದಿದ್ದಾರೆ. ಮತ್ತೊಂದೆಡೆ ಪಕ್ಕದ ಅತ್ಯಂತ ಹೆಚ್ಚು ಜನಸಂಖ್ಯೆಯಿರುವ ಚೀನಾದಲ್ಲಿ ಇದೇ ಸಮಯದಲ್ಲಿ 1.20 ಕೋಟಿ ಹೊಸ ಸಂಪರ್ಕಗಳನ್ನು ಕೊಡಲಾಗಿದೆಯಷ್ಟೇ. ಐಡಿಸಿ ಸಂಸ್ಥೆ ಸಲ್ಲಿಸಿರುವ ಸಮೀಕ್ಷೆ- ಸಂಶೋಧನಾ ವರದಿ ಪ್ರಕಾರ, 2017ರಲ್ಲಿ ಭಾರತದ ಮೊಬೈಲ್ ಸೇವೆಯ ಮಾರುಕಟ್ಟೆ ಬರೊಬ್ಬರಿ 37 ಬಿಲಿಯನ್ ಡಾಲರ್ ದಾಟುವ ನಿರೀಕ್ಷೆಯಿದೆ.

ಪ್ಲಾನ್‍ಹೌಂಡ್‍ನಂತಹ ಅಪ್ಲಿಕೇಶನ್‍ಗಳು ಮೊಬೈಲ್ ಗ್ರಾಹಕರು, ತಮ್ಮ ಬಳಕೆಗೆ ಅನುಗುಣವಾದ ಹಾಗೂ ಒಳ್ಳೆಯ ಮೊಬೈಲ್ ಸಂಪರ್ಕ ಪಡೆಯಲು ಸಹಕಾರಿಯಾಗಿವೆ. ಎಲ್ಲಾ ಟೆಲಿಕಾಂ ಕಂಪನಿಗಳ ಮಾಹಿತಿಯನ್ನೂ ಒಗ್ಗೂಡಿಸಿ, ಹೋಲಿಕೆ ಮಾಡಿ, ವಿಶ್ಲೇಷಣಾತ್ಮಕವಾಗಿ ಗ್ರಾಹಕರಿಗೆ ಅರ್ಥವಾಗುವಂತೆ ಒಂದೇ ವೇದಿಕೆಯಲ್ಲಿ ನೀಡುವುದೇ ಈ ಅಪ್ಲಿಕೇಶನ್‍ನ ವಿಶೇಷ ಗುಣ. ಹಾಗೇ ಕೇವಲ ಒಂದು ಕ್ಲಿಕ್ ಮೂಲಕ ಮೊಬೈಲ್ ಬಿಲ್ ಪಾವತಿ ಮಾಡುವ ಅವಕಾಶವನ್ನೂ ಈ ಪ್ಲಾನ್‍ಹೌಂಡ್ ನೀಡುತ್ತದೆ.