ಆನ್‍ಲೈನ್ ಮಾರಾಟಕ್ಕೆ 10 ಸೂತ್ರ-2 ತಿಂಗಳಲ್ಲೇ ಲಕ್ಷಾಧಿಪತಿಯಾದ ಪ್ರತೀಕ್ ದೋಶಿ

ಟೀಮ್​​ ವೈ.ಎಸ್​​.ಕನ್ನಡ

ಆನ್‍ಲೈನ್ ಮಾರಾಟಕ್ಕೆ 10 ಸೂತ್ರ-2 ತಿಂಗಳಲ್ಲೇ ಲಕ್ಷಾಧಿಪತಿಯಾದ ಪ್ರತೀಕ್ ದೋಶಿ

Saturday November 28, 2015,

5 min Read

ಈ ಲೇಖನವನ್ನು ಓದಿದ್ರೆ ನೀವು ಕೂಡ ಸದ್ಯದಲ್ಲೇ ಆನ್‍ಲೈನ್ ಉದ್ಯಮ ಶುರು ಮಾಡಿದ್ರೂ ಆಶ್ಚರ್ಯವಿಲ್ಲ. ಭಾರತದಲ್ಲಿ ಫ್ಲಿಪ್‍ಕಾರ್ಟ್, ಅಮೇಝಾನ್, ಸ್ನಾಪ್‍ಡೀಲ್‍ನಂತಹ ಸಂಸ್ಥೆಗಳು ವಿದ್ಯಾರ್ಥಿಗಳು, ಗೃಹಿಣಿಯರು ಮತ್ತು ಸಣ್ಣಪುಟ್ಟ ಅಂಗಡಿ ಮಾಲೀಕರಿಗೆ ಹಣ ಗಳಿಸಲು ವಿಪುಲ ಅವಕಾಶ ಕಲ್ಪಿಸಿವೆ. ಆದ್ರೆ ಆನ್‍ಲೈನ್ ಬ್ಯುಸಿನೆಸ್ ಆರಂಭಕ್ಕೂ ಮುನ್ನ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು, ಇಲ್ಲವಾದಲ್ಲಿ ನಷ್ಟದ ಸುಳಿಗೆ ಸಿಲುಕುವ ಅಪಾಯವಿದೆ. ಈ ಲೇಖನ ಬರೆಯುವ ಮತ್ತು ಅನುಭವಗಳನ್ನು ಹಂಚಿಕೊಳ್ಳುವ ಉದ್ದೇಶ ಉದ್ಯಮಿಗಳಿಗೆ ಸ್ಪೂರ್ತಿಯಾಗುವುದು ಎನ್ನುತ್ತಾರೆ `ಚೀಕಿ ಚಂಕ್ ಅಂಬ್ರೆಲ್ಲಾಸ್' ಕಂಪನಿಯ ಸಂಸ್ಥಾಪಕ ಪ್ರತೀಕ್ ದೋಶಿ. ಕೆಳಗೆ ಕೊಟ್ಟಿರುವ 10 ತತ್ವಗಳನ್ನು ಅನುಸರಿಸಿದ್ರೆ ನೀವು ಹಣ ಕಳೆದುಕೊಳ್ಳುವ ಸಾಧ್ಯತೆಗಳೇ ಇಲ್ಲ ಅಂತಾ ಪ್ರತೀಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

image


1. ಅನನ್ಯವಾದುದನ್ನೇ ಮಾರಾಟ ಮಾಡಲು ಪ್ರಯತ್ನಿಸಿ

ಈಗಾಗ್ಲೇ 10,000 ಬಗೆಯ ಬ್ಯಾಗ್‍ಗಳು, 20,000 ಬಗೆಯ ಟಿ-ಶರ್ಟ್‍ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನೀವು ಅದೇ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾದ್ರೆ, ಅದೆಲ್ಲಕ್ಕಿಂತ ವಿಭಿನ್ನವಾದ ವಿನ್ಯಾಸವನ್ನು ಆವಿಷ್ಕರಿಸುವುದು ನಿಜಕ್ಕೂ ಸವಾಲು. ಹಾಗಾಗಿ ಅದರಲ್ಲೇ ಅನನ್ಯವಾದ ಉತ್ಪನ್ನವನ್ನು ಪರಿಚಯಿಸಿದ್ರೆ ಗ್ರಾಹಕರನ್ನು ಆಕರ್ಷಿಸಬಹುದು. ಪ್ರತೀಕ್ ಛತ್ರಿಗಳ ಉದ್ಯಮ ಆರಂಭಿಸಲು ಮುಂದಾದಾಗ, ಬರೀ ಕಪ್ಪು ಬಣ್ಣದ, ಹೂವಿನ ಚಿತ್ರಗಳ ಛತ್ರಿಗಳನ್ನು ನೋಡಿ ಅವರಿಗೆ ಬೋರಿಂಗ್ ಅನಿಸಿತ್ತು. ಮಳೆಯೊಂದಿಗೆ ಬೆಸೆಯುವಂತಹ, ತಂಪಾದ, ಸರಳ ವಿನ್ಯಾಸದ ಕೊಡೆಗಳನ್ನು ಪ್ರತೀಕ್ ತಯಾರಿಸಿದ್ರು. ಅದು ಗ್ರಾಹಕರನ್ನು ಸೆಳೆದಿತ್ತು. ಹಾಗಾಗಿ ಸಾಮಾನ್ಯ ಉತ್ಪನ್ನವನ್ನೇ ವಿಶಿಷ್ಟವಾಗಿ ಬದಲಾಯಿಸಿ, ಉಳಿದವರಿಗಿಂತ ಹೆಚ್ಚು ಮೌಲ್ಯವನ್ನುಳ್ಳ ವಸ್ತುವನ್ನಾಗಿ ನೀವು ಬದಲಾಯಿಸಬೇಕು. ಒಳ್ಳೆಯ ವಿನ್ಯಾಸದ ಮೇಲೆ ಹೂಡಿಕೆ ಮಾಡಿದರೆ ಅದರ ಫ್ರತಿಫಲ ನಿಮಗೆ ಸಿಕ್ಕೇ ಸಿಗುತ್ತದೆ.

2. ನಿಮ್ಮ ಅನುಕೂಲಕ್ಕಾಗಿ ಕೀವಡ್ರ್ಸ್ ಹುಡುಕಿ

ನೀವು ಆನ್‍ಲೈನ್ ಉದ್ಯಮದಲ್ಲಿದ್ದೀರಾ ಅನ್ನೋದು ಗ್ರಾಹಕರಿಗೆ ಗೊತ್ತೇ ಇರುವುದಿಲ್ಲ. ಅವರೇನಿದ್ರೂ ಅಮೇಝಾನ್, ಫ್ಲಿಪ್‍ಕಾರ್ಟ್‍ನಲ್ಲಿ ಸರ್ಚ್ ಮಾಡ್ತಿರ್ತಾರೆ. ಹಾಗಾಗಿ ಕೋಡ್‍ಗಳು, ಸರ್ಚ್ ಕೀವರ್ಡ್‍ಗಳು ಅತ್ಯಂತ ಮಹತ್ವ ಪಡೆಯುತ್ತವೆ. ಗ್ರಾಹಕರು ಸಾಮಾನ್ಯವಾಗಿ ಯಾವ ಹೆಸರುಗಳಲ್ಲಿ ಉತ್ಪನ್ನಗಳನ್ನು ಹುಡುಕುತ್ತಾರೆ ಅನ್ನೋ ಅಂದಾಜಿನ ಮೇಲೆ ನೀವು ಕೀವರ್ಡ್‍ಗಳನ್ನು ಅಳವಡಿಸಬೇಕು. ನಿಮ್ಮ ಉತ್ಪನ್ನಕ್ಕೆ ಪೂರಕವಾದ ಎಲ್ಲವನ್ನೂ ಬಳಸಿಕೊಳ್ಳಿ. ಪ್ರತೀಕ್ ತಮ್ಮ ಉತ್ಪನ್ನಗಳಿಗಾಗಿ ಅಂತಹ 100 ಕೀವರ್ಡ್‍ಗಳನ್ನು ಬಳಸಿದ್ರು. ಕೀವರ್ಡ್‍ಗಳ ಶಕ್ತಿಯನ್ನು ಅಂಡರ್ ಎಸ್ಟಿಮೇಟ್ ಮಾಡಬೇಡಿ ಅನ್ನೋದು ಅವರ ಸಲಹೆ.

3. ಮಾರುಕಟ್ಟೆಗಳಲ್ಲಿ ಮಾರ್ಕೆಟಿಂಗ್

ಬಹುತೇಕ ಆನ್‍ಲೈನ್ ಉದ್ಯಮಗಳಲ್ಲಿ ಪಟ್ಟಿಮಾಡುವ ಪ್ರಕ್ರಿಯೆಯ ಬೆನ್ನಲ್ಲೇ ನೂರಾರು ಆರ್ಡರ್‍ಗಳು ಸಿಗಬಹುದೆಂಬ ಕಲ್ಪನೆ ಇರುತ್ತೆ. ಆದ್ರೆ ಅಂತಹ ಚಮತ್ಕಾರವೇನೂ ನಡೆಯುವುದಿಲ್ಲ. ಆದ್ರೆ ಹಾಗಾಗುವಂತೆ ನೀವು ಮಾಡಬೇಕು. ಗ್ರಾಹಕರ ಜೊತೆ ಮಾತನಾಡದೇ ನಿಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು ನಿಜಕ್ಕೂ ಕಷ್ಟದ ಕೆಲಸ. ಅದಕ್ಕಾಗಿ ಚುರುಕಾಗಿ ಯೋಚಿಸಿ, ನಿಮ್ಮ ಉತ್ಪನ್ನ ಎಲ್ಲರ ಕಣ್ಸೆಳೆಯುವಂತೆ ಮಾಡಿ. ಎಕ್ಸೆಲ್ ಶೀಟ್‍ನಲ್ಲಿ ಪಟ್ಟಿ ಮಾಡುವ ಸಂದರ್ಭದಲ್ಲಿ ಪ್ರತಿಯೊಂದು ಅಂಶಗಳ ಬಗೆಗೂ ಗಮನವಿರಲಿ. ಪ್ರತಿ ಮಾರುಕಟ್ಟೆಯಲ್ಲೂ ಮಾರಾಟಗಾರರ ಸಹಾಯ ಮಾರ್ಗದರ್ಶಿಗಳ ನೆರವು ಪಡೆದುಕೊಳ್ಳಿ. ವಿಸ್ತಾರವಾದ ಯೋಜನೆ ರೂಪಿಸಿ. ಆನ್‍ಲೈನ್ ಸೈಟ್‍ನಲ್ಲಿ ಫೋಟೋಗಳು ಅತ್ಯಂತ ಪ್ರಮುಖವಾದದ್ದು, ಹಾಗಾಗಿ ಒಳ್ಳೆಯ ಛಾಯಾಗ್ರಾಹಕರನ್ನೇ ಸಂಪರ್ಕಿಸಿ. ಉತ್ಪನ್ನಗಳನ್ನು ವಿಭಿನ್ನವಾಗಿ ಪಟ್ಟಿ ಮಾಡಿದ್ರೆ ಶೇ. 90ರಷ್ಟು ಕೆಲಸ ಪೂರ್ಣವಾದಂತೆ.

image


4. ನಿಮಗಿರುವ ಸ್ಪರ್ಧಿಗಳಿಗಿಂತ ಒಂದು ಹೆಜ್ಜೆ ಮುಂದಕ್ಕೆ ಯೋಚಿಸಿ

ಸೂಕ್ತ ಸಂಪನ್ಮೂಲಗಳ ಮೇಲೆ ಹೂಡಿಕೆ ಮಾಡುವುದು ನಿಮ್ಮ ಎದುರಾಳಿಗಳನ್ನು ಮಣಿಸಲು ಇರುವ ಸೂಕ್ತ ಮಾರ್ಗ. ನಿಮ್ಮ ಸ್ಪರ್ಧಿಗಳು ಏನು ಯೋಚಿಸ್ತಾರೆ ಅನ್ನೋದನ್ನು ನೀವು ಯೋಚಿಸಿ. ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಅವರನ್ನು ಸೋಲಿಸಿ. ಸದ್ಯ ಇರುವ ಮಾರಾಟಗಾರರ ಜೊತೆಗೆ ನೀವು ಪೈಪೋಟಿಗಿಳಿಯಬೇಕಾಗಿದೆ. ಬಹುತೇಕ ಎಲ್ಲರೂ ಒಂದು ವಿಧಾನವನ್ನು ಅಳವಡಿಸಿಕೊಂಡಿರ್ತಾರೆ, ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರ್ತಾರೆ. ಸಾಂಪ್ರದಾಯಿಕ ಪ್ರಯತ್ನಗಳ ಮೂಲಕವೇ ಗ್ರಾಹಕರ ಮನಸ್ಸು ಗೆಲ್ಲಲು ಮುಂದಾಗ್ತಾರೆ. ಹಾಗಂತ ನೀವು ನವೀನ ಪರಿಕಲ್ಪನೆಗಳ ಮೂಲಕ ಸಾಂಪ್ರದಾಯಿಕ ಮಾರಾಟಗಾರರಿಗೆ ಅಡ್ಡಿಪಡಿಸಬೇಡಿ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಿ. ನಿಮಗಿರುವ ಡಿಜಿಟಲ್ ಜ್ಞಾನದ ಪ್ರಯೋಜನ ಪಡೆದುಕೊಳ್ಳಿ.

5. ಮಾರುಕಟ್ಟೆ ಸ್ಥಳದಲ್ಲಿರುವ ನೌಕರರೊಂದಿಗೆ ಸದಾ ಸಂಪರ್ಕದಲ್ಲಿರಿ

ಮಾರುಕಟ್ಟೆ ಸ್ಥಳದಲ್ಲಿರುವ ಉದ್ಯೋಗಿಗಳೊಂದಿಗೆ ಸಂಪರ್ಕದಲ್ಲಿರಲು ಫೇಸ್‍ಬುಕ್, ಲಿಂಕ್‍ಡೆನ್, ಟ್ವಿಟ್ಟರ್‍ನಂತಹ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಳ್ಳಿ. ಪ್ರಾಡಕ್ಟ್ ಮ್ಯಾನೇಜರ್, ಕೆಟಗರಿ ಮ್ಯಾನೇಜರ್‍ಗಳಿಗೆ ಕರೆ ಮಾಡಿ ಉತ್ಪನ್ನದ ಬಗ್ಗೆ ನಿಮಗಿರುವ ಉತ್ಸಾಹವನ್ನು ವ್ಯಕ್ತಪಡಿಸಿ. ಅವರ ಕಾರ್ಯವನ್ನು ಶ್ಲಾಘಿಸಿ, ನಿಮ್ಮ ಉತ್ಪನ್ನದ ಜನಪ್ರಿಯತೆಗೆ ಅವರು ಎಷ್ಟು ಅನಿವಾರ್ಯ ಅನ್ನೋದನ್ನು ಮನವರಿಕೆ ಮಾಡಿಕೊಡಿ. ಸಹನೆ ಮತ್ತು ವಿನಮ್ರ ಭಾವನೆ ನಿಮಗೆ ದೀರ್ಘಕಾಲದವರೆಗೂ ನೆರವಾಗಬಲ್ಲದು.

6. ಸೋಲಿನ ಬೆನ್ನಲ್ಲೇ ಗೆಲುವಿದೆ ಎನ್ನುವ ಭಾವನೆ ನಿಮ್ಮಲ್ಲಿರಲಿ

ವಾಸ್ತವವಾದಿಗಳಾಗಿರಿ, ನೀವು ಭೇಟಿಯಾದ ಯುವತಿಯರೆಲ್ಲ ನಿಮ್ಮನ್ನು ಇಷ್ಟಪಡೋದಿಲ್ಲ. ಅದರಂತೆ ಎಲ್ಲ ಬ್ಯುಸಿನೆಸ್ ಮೀಟಿಂಗ್‍ಗಳು ಯಶಸ್ವಿಯಾಗುತ್ತವೆ ಎಂದೇನಿಲ್ಲ. ಪ್ರೀತಿಯಲ್ಲಿ ಒಮ್ಮೆ ವಿಫಲರಾದಾಗ ನೀವೇನು ಮಾಡ್ತಿರೋ, ಉದ್ಯಮದಲ್ಲೂ ಅದನ್ನೇ ಮಾಡಿ. ವಿಫಲವಾದ ಮೊದಲ ಉತ್ಪನ್ನದ ಬಗ್ಗೆ ಯೋಚಿಸುವುದನ್ನು ಬಿಟ್ಟು, ಮುಂದೇನು ಎನ್ನುವುದರ ಬಗ್ಗೆ ಗಮನಹರಿಸಿ. ಅಡ್ಡಿ ಆತಂಕ ಸರ್ವೇಸಾಮಾನ್ಯ, ಅದನ್ನೆಲ್ಲ ದಾಟಿ ಮುಂದಕ್ಕೆ ಸಾಗುವ ಬಗ್ಗೆ ಯೋಚಿಸಬೇಕು.

7. ಮಾಧ್ಯಮಗಳ ಸುತ್ತ ಆಟವಾಡಿ, ಹಿಡಿದ ಕೆಲಸ ಬಿಡಬೇಡಿ, ನಿಮ್ಮ ಕಥೆಗಳನ್ನು ಮಾರಾಟ ಮಾಡಿ

ಬ್ಲಾಗರ್‍ಗಳಿಗೆ ಹೆಚ್ಚು ಹಣ ಕೊಡಬೇಡಿ, ಅವರು ಗ್ರಾಹಕರಿಗೆ ಅದನ್ನು ಮಾರುತ್ತಾರೆ ಎಂಬ ಕಲ್ಪನೆ ಬೇಡ. ಬದಲಾಗಿ ಶಿಫಾರಸು ಮಾಡುವುದೇ ನಿಮ್ಮ ಗುರಿಯಾಗಲಿ. ನಿಮ್ಮ ಉತ್ಪನ್ನಗಳ ಬಗ್ಗೆ ಜನರು ಉತ್ತೇಜನಕಾರಿಯಾಗಿ ಮಾತನಾಡುವಂತೆ ಮಾಡಿ. ನಿಮ್ಮ ಪರಿಕಲ್ಪನೆಗಳಲ್ಲಿ ಅವರು ನಂಬಿಕೆ ಇಡುವಂತೆ, ಅದನ್ನು ಇಷ್ಟಪಡುವಂತೆ ಮಾಡಿ. ಪ್ರತೀಕ್, ತಮ್ಮ ಉತ್ಪನ್ನಗಳನ್ನು ಡಿಎನ್‍ಎ, ಮಿಡ್ ಡೇ, ಎಚ್‍ಟಿ ಕೆಫೆ, ಫ್ರೀ ಪ್ರೆಸ್ ಜರ್ನಲ್‍ನಂತಹ ಪತ್ರಿಕೆಗಳ ಮೂಲಕ ಕೂಡ ಪರಿಚಯಿಸಿದ್ರು. ಆದ್ರೆ ಅದರಿಂದ ಅವರ ಉತ್ಪನ್ನಗಳು ಮಾರಾಟವಾಗಲಿಲ್ಲ. ಬಳಿಕ ಅವರು ತಮ್ಮ ಕಥೆಯನ್ನು ಅವರಿಗೆ ಮಾರಾಟ ಮಾಡಿದ್ರು. ಯಾಕಂದ್ರೆ ಮಾಧ್ಯಮಗಳು ಯಾವಾಗ್ಲೂ ಒಳ್ಳೆ ಕಥೆಗಾಗಿಯೇ ಹುಡುಕುತ್ತಿರುತ್ತವೆ, ಅದ್ರಲ್ಲೂ ಕೊಂಚ ಮಸಾಲಾ ಬೆರೆಸಿದ್ರೆ ಅವು ವರ್ಕೌಟ್ ಆಗೋದು ಗ್ಯಾರಂಟಿ ಎನ್ನುತ್ತಾರೆ ಪ್ರತೀಕ್. ನಿಮ್ಮ ಕಹಾನಿ ಜೊತೆಗೆ ಉತ್ಪನ್ನಗಳ ಫೋಟೋ ಕೂಡ ಇರಲಿ. ಅಕಸ್ಮಾತ್ ಪತ್ರಕರ್ತರಿಂದ ಪ್ರತಿಕ್ರಿಯೆ ಬರಲಿಲ್ಲ ಎಂದಾದ್ರೆ ನಿರಾಶರಾಗಬೇಡಿ, ಮರಳಿ ಯತ್ನ ಮಾಡಿ.

8. ಪೈಸೆ ಪೈಸೆಯ ಲೆಕ್ಕ ಇಡಿ

ಬ್ಯುಸಿನೆಸ್ ಅಂದ್ರೆ ಸಂಖ್ಯಾಶಾಸ್ತ್ರ. ಉತ್ಪನ್ನಗಳನ್ನು ಪ್ಯಾಕ್ ಮಾಡಲು ಬಳಸಿದ ಟೇಪ್‍ನಿಂದ ಹಿಡಿದು ಎಲ್ಲದರ ಲೆಕ್ಕವೂ ಪಕ್ಕಾ ಆಗಿರಲಿ. ನಿಮ್ಮ ಖರ್ಚುಗಳನ್ನೆಲ್ಲ ಮರಳಿ ಪಡೆಯುವುದು ಮೊದಲ ಆದ್ಯತೆ. ಹೆಚ್ಚು ಆರ್ಡರ್ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಬೇಡಿ. 20 ಆರ್ಡರ್‍ಗಳನ್ನು ಪಡೆದು ಪ್ರತಿಯೊಂದರಿಂದ 200 ರೂಪಾಯಿ ಗಳಿಸುವುದು, 50 ಆರ್ಡರ್ ಪಡೆದು ಪ್ರತಿಯೊಂದರಿಂದ 100 ರೂಪಾಯಿ ಗಳಿಸುವುದಕ್ಕಿಂತ ಉತ್ತಮ. ನೀವು ಖರ್ಚು ಮಾಡಿದ್ದಕ್ಕಿಂತ ಶೇ.10ರಷ್ಟು ಹೆಚ್ಚು ಹಣವನ್ನು ಉತ್ಪನ್ನಗಳಿಗೆ ನಿಗದಿಪಡಿಸಿ. ಜೊತೆಗೆ ಗ್ರಾಹಕರ ಹಣ ಪಾವತಿ ಬಗೆಗೂ ಗಮನವಿರಲಿ. ಸೇಲ್ಸ್ ಉತ್ತಮವಾಗಿದ್ರೂ ಪೇಮೆಂಟ್‍ಗಳ ಬಗ್ಗೆ ಗಮನವಿರದೇ ಇದ್ರೆ ಹಣ ಕಳೆದುಕೊಳ್ಳುವ ಸಾಧ್ಯತೆಯಿದೆ.

9. ವೈಫಲ್ಯಗಳನ್ನು ಜಾಸ್ತಿ ಎದುರಿಸಿದ್ರೆ ಪೈಪೋಟಿ ಕಡಿಮೆಯಾಗುತ್ತದೆ

ಅನನ್ಯವಾದುದನ್ನು ಸೃಷ್ಟಿಸಲು ಹೊರಟಾಗ ಪ್ರತಿ ಹೆಜ್ಜೆಗೂ ವಿಘ್ನಗಳು ಎದುರಾಗುತ್ತವೆ. ಅಸಹಾಯಕತೆಯಿಂದ ಕೈಚೆಲ್ಲದೆ ಅದನ್ನು ಎದುರಿಸಿ. ನಾವು ಸೋಮಾರಿ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಎಲ್ಲರೂ ಇಲ್ಲಿ ಯಶಸ್ಸು, ಹಣ , ಹೆಸರು, ಜನಪ್ರಿಯತೆಯನ್ನೇ ಬಯಸುತ್ತಾರೆ. ನೀವೂ ಅವರಲ್ಲೊಬ್ಬರಾಗಬೇಡಿ. ಕಠಿಣ ಪರಿಶ್ರಮದಿಂದ ನೀವು ಪೈಪೋಟಿಯನ್ನೇ ಕೊಂದು ಬಿಡಬಹುದು.

10. `ಅದೃಷ್ಟ ಪ್ರಣಯವಿದ್ದಂತೆ' - ನಿಮಗೆ ಆಕೆಯ ಅಗತ್ಯವಿದ್ದಾಗ್ಲೇ ಆಕೆ ನಿಮ್ಮಿಂದ ದೂರ ಓಡ್ತಾಳೆ, ನಿಮಗೆ ಅವಳಲ್ಲಿ ಆಸಕ್ತಿ ಇಲ್ಲದಿದ್ರೆ ಅವಳೇ ನಿಮ್ಮನ್ನರಸಿ ಬರ್ತಾಳೆ - ಸ್ವಾಮಿ ವಿವೇಕಾನಂದ

ಒಂದು ತಿಂಗಳಲ್ಲಿ ತಮ್ಮ ಉತ್ಪನ್ನಗಳು ಚೆನ್ನಾಗಿ ಸೇಲ್ ಆಗಿಲ್ಲ ಅಂದಾಕ್ಷಣ, ನಾವು ಸಮಯ ವ್ಯರ್ಥ ಮಾಡ್ತಿದ್ದೇವೆ ಎಂದುಕೊಳ್ಳುವವರೇ ಹೆಚ್ಚು. ಅವರು ಪ್ರಕ್ರಿಯೆ ಮೇಲೆ ಹೆಚ್ಚು ಗಮನಹರಿಸದೇ, ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇದಕ್ಕೆ ಕಾರಣ. ನೀವು ನಂಬಿಕೆ ಇಟ್ಟು ಮಾಡಿದ್ರೆ ನಿಮಗೆ ಅದರ ಪ್ರತಿಫಲ ಸಿಕ್ಕೇ ಸಿಗುತ್ತೆ. ಹಣವನ್ನು ಉಪಉತ್ಪನ್ನದಂತೆ ಪರಿಗಣಿಸಿ. ಹಣದ ಗೀಳು ಒಳ್ಳೆಯ ಲಕ್ಷಣವಲ್ಲ. ಪ್ರತಿದಿನ ಇಷ್ಟು ಆರ್ಡರ್ ಸಿಗಲೇಬೇಕೆಂಬ ಲೆಕ್ಕಾಚಾರ ಹಾಕಿಕೊಳ್ಳಬೇಡಿ. ಆ ಸಮಯವನ್ನು ಮಾರ್ಕೆಟಿಂಗ್ ಹಾಗೂ ನಿಮ್ಮ ಉತ್ಪನ್ನವನ್ನು ಪ್ರತ್ಯೇಕಗೊಳಿಸಲು ಬಳಸಿಕೊಳ್ಳಿ. ಉತ್ತಮ ಗುಣಮಟ್ಟದ ಹಾಗೂ ಉತ್ತಮ ವಿನ್ಯಾಸದ ಉತ್ಪನ್ನಗಳನ್ನು ತಯಾರಿಸಿ. ಫಲಿತಾಂಶದ ಬದಲು ನಿಮ್ಮ ಕಾರ್ಯದ ಮೇಲೆ ಹಿಡಿತವಿರಲಿ. ಅದೃಷ್ಟವನ್ನು ಅರಸಿಕೊಂಡು ಹೋಗಬೇಡಿ, ಅದೇ ನಿಮ್ಮನ್ನು ಹುಡುಕಿಕೊಂಡು ಬರುತ್ತೆ.

ಇಷ್ಟೇ ಅಲ್ಲ, ಯಾರು ನಿಮ್ಮನ್ನು ಜಡ್ಜ್ ಮಾಡ್ತಾರೋ ಅವರ ಮಾತಿನಿಂದ ಹೆಚ್ಚು ಪ್ರಭಾವಿತರಾಗಬೇಡಿ. ಮನಸ್ಸಿನಲ್ಲಿ ಮೂಡಿದ ರುಣಾತ್ಮಕ ಭಾವನೆಯನ್ನು ಹೊಡೆದೋಡಿಸಿ. ನಿಮ್ಮ ವೈಫಲ್ಯವನ್ನು ನೋಡಿ ಬೆನ್ನ ಹಿಂದೆ ನಗುವವರು, ಮುಂದೊಮ್ಮೆ ನಿಮ್ಮ ಯಶಸ್ಸನ್ನು ನೋಡಿ ಕರೆದು ಮಾತನಾಡಿಸ್ತಾರೆ.

ಪ್ರಾರ್ಥಿಸಿ, ಒಳ್ಳೆಯ ಕೆಲಸಗಳನ್ನು ಮಾಡಿ...

ನಿಮ್ಮ ಮುಂದಿನ ಗ್ರಾಹಕರು ಯಾರು ಅನ್ನೋದು ನಿಮಗೆ ಗೊತ್ತಿರೊಲ್ಲ. ಆದ್ರೆ ಅವರು ನಿಮ್ಮ ಉತ್ಪನ್ನವನ್ನು ಬುಕ್ ಮಾಡಿದ್ದಾರೆ ಅನ್ನೋದು ಗೊತ್ತಾದಾಗ ನಿಮಗಾಗುವ ಅನುಭವ ಅದ್ಭುತ. ಅದಕ್ಕಾಗಿ ನೀವು ಕಾಯಬೇಕು. ಜೊತೆಗೆ ಒಳ್ಳೆ ಕೆಲಸಗಳನ್ನು ಮಾಡಲು ಮರೆಯಬೇಡಿ. ಪ್ರತೀಕ್ ದೋಷಿ ಅವರ ಉದ್ಯಮ ಕೂಡ ಕೆಲ ತಿಂಗಳುಗಳ ಕಾಲ ಪಿಕ್‍ಅಪ್ ಆಗಿರಲಿಲ್ಲ. ಅದೇ ಸಂದರ್ಭದಲ್ಲಿ ಮಳೆಯಿಂದಾಗಿ ರಸ್ತೆ ಸಂಚಾರಕ್ಕೂ ಅಡ್ಡಿಯಾಗಿತ್ತು. ಪ್ರತೀಕ್ ಅವರಿಗೆ ಕಚೇರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ವಾರಗಟ್ಟಲೆ ನಿದ್ದೆ ಮಾಡಿರಲಿಲ್ಲ. ಬಿರುಸಾಗಿ ಬರುತ್ತಿದ್ದ ಮಳೆಯಲ್ಲಿ ಛತ್ರಿಯಿಲ್ಲದೆ ನೆನೆದುಕೊಂಡೇ ಅವರು ಸಾಗಿದ್ರು. ಮಕ್ಕಳಂತೆ ಮಳೆ ಹನಿಗಳ ಜೊತೆ ಆಟವಾಡಿದ್ರು. ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೊರಟಾಗ 20 ಆರ್ಡರ್ ಬಂದಿತ್ತು, 4 ಗಂಟೆಗೆ ವಾಪಸ್ ಬರುವಷ್ಟರಲ್ಲಿ 245 ಆರ್ಡರ್‍ಗಳು ಸಿಕ್ಕಿದ್ವು. ಇದೇ ಇ-ಕಾಮರ್ಸ್‍ನ ಚಮತ್ಕಾರ.

ಅನುವಾದಕರು: ವಿಶಾಂತ್​​​