ಸುವ್ಯವಸ್ಥಿತ ಕಚೇರಿ ಪರಿಕರಗಳನ್ನು ಒದಗಿಸಲು ಸಿದ್ಧವಿದೆ ಝೋಫಿಯೋ ಇ-ಕಾಮರ್ಸ್ ಸಂಸ್ಥೆ

ಟೀಮ್​​ ವೈ.ಎಸ್​​.

ಸುವ್ಯವಸ್ಥಿತ ಕಚೇರಿ ಪರಿಕರಗಳನ್ನು ಒದಗಿಸಲು ಸಿದ್ಧವಿದೆ ಝೋಫಿಯೋ ಇ-ಕಾಮರ್ಸ್ ಸಂಸ್ಥೆ

Sunday October 18, 2015,

5 min Read

ಕಳೆದ ಕೆಲವು ತಲೆಮಾರುಗಳಿಂದ ಉದ್ಯಮ ನಡೆಸುತ್ತಾ ಬಂದಿರುವ ಕುಟುಂಬದ ಮೂಲದವರು ಅಭಿಷೇಕ್ ಕಮಾನಿ. ಪ್ರಸಿದ್ಧ ಜ್ಯೂರಿ ಹೋಟೆಲ್ ನ ಸಹಸಂಸ್ಥೆಯಾದ ಜ್ಯೂರಿ ಗ್ಲೋಬಲ್ ಗ್ರೂಪ್‌ನ ಭಾರತೀಯ ವ್ಯವಹಾರಗಳನ್ನು ಅಭಿಷೇಕ್ ನೋಡಿಕೊಳ್ಳುತ್ತಿದ್ದರು. ಈ ವರ್ಷ ಅಭಿಷೇಕ್ ಕಾಲಿಟ್ಟ ಹೊಸ ಉದ್ಯಮ ಆನ್‌ಲೈನ್ ವ್ಯವಹಾರ. ಇ- ಕಾಮರ್ಸ್ ಪೋರ್ಟ್ ಫೋಲಿಯೋ ಮೂಲಕ ಕಳೆದ ಜನವರಿಯಲ್ಲಿ ಹೊಸ ಆಯಾಮ ಸೃಷ್ಟಿಸಿಕೊಂಡರು. ಕಚೇರಿಯ ಅಗತ್ಯತೆಗಳಾದ ಸ್ಟೇಷನರಿ, ಮೆಷಿನ್, ಪೀಠೋಪಕರಣಗಳು, ಕಚೇರಿ ಕ್ಯಾಂಟೀನ್ ಉತ್ಪನ್ನಗಳು ಇತ್ಯಾದಿ ವಸ್ತುಗಳನ್ನು ಇ-ಕಾಮರ್ಸ್ ಮೂಲಕ ಒದಗಿಸುವ ಸೇವೆ ಆರಂಭಿಸಿದ್ದಾರೆ. ಆನ್‌ಲೈನ್ ಮೂಲಕ ಅಥವಾ ಫೋನ್, ಈ-ಮೇಲ್ ಮೂಲಕವೂ ಆರ್ಡರ್ ಮಾಡಬಹುದು. ಆರ್ಡರ್ ತಲುಪಿದ ಕೂಡಲೇ ಅಭಿಷೇಕ್‌ರ ಸಂಸ್ಥೆ ಆ ಸೇವೆಗಳನ್ನು ಒದಗಿಸಲು ಕಾರ್ಯನಿರತವಾಗುತ್ತದೆ. ಬೃಹತ್ ಕಾರ್ಪೋರೇಟ್ ಕಂಪನಿಗಳ ಹೊಸ ಶಾಖೆ ಆರಂಭಿಸಲು ಅಥವಾ ಸಣ್ಣ ಹಾಗೂ ಮಧ್ಯಮ ಹಂತದ ಉದ್ದಿಮೆಗಳಿಗೂ ಅಭಿಷೇಕ್‌ರ ಇ-ಕಾಮರ್ಸ್ ಸಂಸ್ಥೆ ಸೇವೆ ಒದಗಿಸಲು ಸಿದ್ಧವಾಗಿದೆ.

image


ಯುವರ್ ಸ್ಟೋರಿ ಅಭಿಷೇಕ್ ಜೊತೆಗೆ ನಡೆಸಿದ ಸಂದರ್ಶನದಲ್ಲಿ ಉದ್ಯಮ ಕ್ಷೇತ್ರದ ಸವಾಲುಗಳು ಹಾಗೂ ಅಂತರ್ಜಾಲ ವ್ಯವಹಾರದ ವ್ಯಾಪ್ತಿಯ ಬಗ್ಗೆ ಅಭಿಷೇಕ್ ಮಾಹಿತಿ ಹಂಚಿಕೊಂಡಿದ್ದಾರೆ.

ಯುವರ್ ಸ್ಟೋರಿ: ವ್ಯಾವಹಾರಿಕ ಕುಟುಂಬದಿಂದ ಬಂದ ನಿಮಗೆ ಉದ್ಯಮಿಯಾಗುವುದೇ ಮೊದಲ ಆಯ್ಕೆಯಾಗಿತ್ತಾ?

ಅಭಿಷೇಕ್: ನನ್ನ ಆರಂಭದ ದಿನಗಳಿಂದಲೂ ಒಬ್ಬ ಉದ್ಯಮಿಯಾಗುವುದು ಎಂದು ಬಯಸಿದ್ದೆ. ಗುಜರಾತಿ ಸಾಂಪ್ರದಾಯಿಕ ಹಾಗೂ ಉದ್ದಿಮೆದಾರರ ಕುಟುಂಬದಲ್ಲಿ ಜನಿಸಿದ ಯಾರಾದರೂ ವೃತ್ತಿಪರತೆಯನ್ನು ಬಯಸುವುದಿಲ್ಲ. ಸಣ್ಣ ವ್ಯವಹಾರವನ್ನು ಹೊಂದಿದ್ದರೂ ಅಥವಾ ಸಣ್ಣ ಉದ್ಯಮ ಆರಂಭಿಸಬೇಕೆಂಬ ಯೋಜನೆ ಇದ್ದರೂ ನಿಮ್ಮ ಮನಸು ಔದ್ಯಮಿಕ ಕ್ಷೇತ್ರವನ್ನೇ ಆಯ್ದುಕೊಳ್ಳುತ್ತದೆ. ಕೇವಲ ಆದಾಯದ ಮಾನದಂಡ ಮಾತ್ರ ಮುಖ್ಯವಲ್ಲ. ಉದ್ಯಮಿಯಾಗುವುದು ಮುಖ್ಯ. ನೀವು ಉದ್ಯಮಿಯಾಗ ಬಯಸಿದರೆ ನಿಮ್ಮ ಸುತ್ತ ಸಾಕಷ್ಟು ವ್ಯಾವಹಾರಿಕ ಅವಕಾಶಗಳು ಲಭ್ಯವಾಗುತ್ತದೆ. ನೀವು ಗುಜರಾತಿ ವ್ಯವಹಾರಸ್ಥರನ್ನು ನೋಡಿದರೆ ನಮಗೆ ಈ ಸಂಗತಿಗಳು ಅಂದಾಜಾಗುತ್ತವೆ. ಅವರು ಈಗಾಗಲೇ ಮಾರುಕಟ್ಟೆಯಲ್ಲಿರುವ ಉದ್ಯಮಗಳ ಹೊರತಾಗಿ ಹೊಸ ಉದ್ಯಮವನ್ನು ಆರಂಭಿಸುವ ನಿಟ್ಟಿನಲ್ಲಿ ಯೋಚಿಸುತ್ತಾರೆ. ನಾನು ನನ್ನ ತಾರುಣ್ಯದಲ್ಲಿ ಒಬ್ಬ ವಕೀಲನಾಗಬೇಕು ಅಥವಾ ಒಬ್ಬ ವೃತ್ತಪರ ಗಾಲ್ಫ್ ಆಟಗಾರ ಅಥವಾ ಇನ್ನೇನೋ ಆಗಬೇಕೆಂದು ಬಯಸಿದ್ದೆ. ಆದರೆ ನನ್ನ ಕುಟುಂಬದ ವ್ಯವಹಾರಗಳ ಬಗ್ಗೆ ನನಗೂ ಸಾಕಷ್ಟು ಆಸಕ್ತಿಯಿತ್ತು. ನನ್ನ ಅಣ್ಣ ಆತನ 14ನೇ ವರ್ಷದಿಂದಲೇ ಕುಟುಂಬದ ವ್ಯವಹಾರದೊಂದಿಗೆ ತೊಡಗಿಕೊಂಡಿದ್ದ. ಹಾಗಾಗಿ ನನ್ನ ಪದವಿ ಮುಗಿಯುತ್ತಿದ್ದಂತೆ ಅಧಿಕೃತವಾಗಿ ವ್ಯಾವಹಾರಿಕ ಕ್ಷೇತ್ರಕ್ಕೆ ಕಾಲಿಟ್ಟೆ.

ಯುವರ್ ಸ್ಟೋರಿ: ಈಗಾಗಲೇ ಅಸ್ತಿತ್ವದಲ್ಲಿರುವ ಹಾಗೂ ಹೊಸದಾಗಿ ಸೃಷ್ಟಿಸುವ ವಿಚಾರಗಳಲ್ಲಿ ಸದಾ ಒಂದು ಚರ್ಚೆಯಿದೆ. ನೀವು ಉತ್ತಮವಾಗಿ ಅಸ್ತಿತ್ವ ಹೊಂದಿದ್ದ ಕುಟುಂಬದ ಹಿನ್ನೆಲೆಯವರು. ಹಾಗಾಗಿ ಈ ವಿಷಯದಲ್ಲಿ ನಿಮ್ಮ ಅನುಭವ ಸರಳವಾಗಿತ್ತಾ ಅಥವಾ ಕಷ್ಟಕರವಾಗಿತ್ತಾ?

ಅಭಿಷೇಕ್: ಹುಲ್ಲು ಸದಾ ದೂರದಿಂದಲೇ ಹಸಿರಾಗಿ ಕಾಣುತ್ತದೆ. ನಿಮ್ಮ ಔದ್ಯಮಿಕ ಪ್ರಗತಿಯ ಮೊದಲ ದಿನಗಳಲ್ಲಿ ನಿಮ್ಮ ಕುಟುಂಬವನ್ನಾಗಲಿ ಅಥವಾ ಇನ್ನಿತರೆ ಸಾಮಾಜಿಕ ಅಂತಸ್ತನ್ನಾಗಲಿ ಯಾರೂ ಗಮನಿಸುವುದಿಲ್ಲ. ಕೆಲವು ಬಾರಿ ವೈಫಲ್ಯಗಳನ್ನೂ ಅನುಭವಿಸಲು ಸಿದ್ಧರಾಗಿರಬೇಕಾಗುತ್ತದೆ. ಆದರೆ ನೀವು ಈಗಾಗಲೇ ಉತ್ತಮ ಅಸ್ತಿತ್ವ ಸಾಧಿಸಿರುವ ನಿಮ್ಮ ಕುಟುಂಬದ ವ್ಯವಹಾರದಲ್ಲಿ ತೊಡಗಿದ್ದರೆ, ಇದರ ಯಶ ಸಾಧಿಸಿರುವ ನಿಮ್ಮ ಕುಟುಂಬದವರನ್ನೇ ಗಮನಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.

ಈ ಅನುಭವಗಳನ್ನು ನನ್ನ ಉದ್ಯಮ ಕ್ಷೇತ್ರದ ಮೊದಲ ದಿನಗಳಲ್ಲಿ ಪಡೆಯಲಾಗಲಿಲ್ಲ. ಏಕೆಂದರೆ ಜ್ಯೂರಿ ಸಂಸ್ಥೆ ನನ್ನನ್ನು ನೇಮಿಸಿಕೊಂಡಿತ್ತು. ಝೋಫಿಯೋ ಸ್ಥಾಪನೆ ನನ್ನ ಉದ್ದೇಶವಾಗಿರಲಿಲ್ಲ. ಆದರೆ ಒಂದರ್ಥದಲ್ಲಿ ಝೋಫಿಯೋ ಸ್ಥಾಪಿಸಲು ಜ್ಯೂರಿಯ ಅನುಭವಗಳೇ ಕಾರಣ. ಜ್ಯೂರಿಯಲ್ಲಿ ನನ್ನ ಅನುಭವಗಳು ಹಾಗೂ ಕಲಿಕೆ ನನಗೆ ಸಾಕಷ್ಟು ಆತ್ಮವಿಶ್ವಾಸ ತಂದುಕೊಟ್ಟಿತು. ನನ್ನ ಕುಟುಂಬ ಆರಂಭಿಕ ಹಂತದಲ್ಲಿ ನನ್ನ ವ್ಯವಹಾರದ ತಪ್ಪುಗಳನ್ನು ಮಾಡಲು ಸ್ವಾತಂತ್ರ್ಯ ನೀಡಿತ್ತು. ಇವೇ ತಪ್ಪುಗಳು ನನಗೆ ಪಾಠವಾದವು.

ಹುಟ್ಟಾ ವ್ಯವಹಾರಸ್ಥರದ ನನ್ನ ಅಜ್ಜ ಹಾಗೂ ಅಪ್ಪ ನನ್ನ ಸಂಸ್ಥೆ ಝೋಫಿಯೋ ಹೇಗೆ ಕೆಲಸ ಮಾಡುತ್ತಿದೆ ಎಂದು ನಿರಂತರವಾಗಿ ಪರಿಶೀಲಿಸುತ್ತಿರಲಿಲ್ಲ. ಆದರೆ ಅವರು ಈ ನಿಟ್ಟಿನಲ್ಲಿ ಮೊದಲ ವ್ಯವಹಾರದ ಸವಾಲುಗಳ ಬಗ್ಗೆ ಆಗಾಗ ಎಚ್ಚರಿಕೆ ನೀಡುತ್ತಿದ್ದರು. ಅವರು ಈ ವ್ಯವಹಾರಗಳನ್ನು ಭಾವನಾತ್ಮಕವಾಗಿ ಪರಿಗಣಿಸದಿರುವಂತೆ ಸೂಚಿಸುತ್ತಿದ್ದರು. ಏಕೆಂದರೆ ಹೃದಯದಿಂದ ಮಾಡುವ ಕೆಲಸಗಳಲ್ಲಿ ಸಾಕಷ್ಟು ಏರಿಳಿತಗಳಿರುತ್ತವೆ. ಹಾಗಾಗಿ ಅವರ ಈ ಸೂಚನೆಗಳ ಲಾಭ ಪಡೆದ ನಾನು ವ್ಯಾವಹಾರಿಕ ಕಲಿಕೆ ಹಾಗೂ ತಪ್ಪುಗಳಿಂದಾದ ಕಲಿಕೆ ಎರಡನ್ನೂ ಎದುರಿಸಿದೆ. ನನ್ನಣ್ಣ ಯಾವಾಗಲೂ ನನಗೆ ಹೇಳುತ್ತಿದ್ದ ನೀನು ವೈಫಲ್ಯ ಹೊಂದುವುದು ತಪ್ಪೇನಲ್ಲ. ಏಕೆಂದರೆ ಯಾವುದೂ ಪರಿಪೂರ್ಣವಲ್ಲ. ತಪ್ಪು ಮಾಡಲು ಅವಕಾಶ ಕೊಡಬೇಕು. ಇಲ್ಲದಿದ್ದರೆ ಪ್ರಯತ್ನವೇ ಜಾರಿಯಾಗುವುದಿಲ್ಲ.

ಯುವರ್ ಸ್ಟೋರಿ: ನಿಮ್ಮ ಕುಟುಂಬ ಹಿಂದಿನಿಂದಲೂ ಇಟ್ಟಿಗೆ ಮತ್ತು ಗಾರೆ ಮಾದರಿಯಲ್ಲಿ ಉದ್ಯಮ ನಡೆಸುತ್ತಾ ಬಂದಿದೆ. ಯಾವಾಗ ಮತ್ತು ಏಕೆ ನೀವು ಆನ್‌ಲೈನ್ ವ್ಯವಹಾರ ಆರಂಭಿಸುವ ತೀರ್ಮಾನ ಮಾಡಿದಿರಿ?

ಅಭಿಷೇಕ್: ಇದೊಂದು ಅನಿರೀಕ್ಷಿತ ಬೆಳವಣಿಗೆ. ನಾನು ಹಾಗೂ ನನ್ನಣ್ಣ 4 ವರ್ಷಗಳ ಹಿಂದೆ ಈ ಕುರಿತಾಗಿ ಆಲೋಚನೆ ನಡೆಸಿ ಒಂದಲ್ಲ ಒಂದು ದಿನ ಈ ಮಾದರಿಯ ವ್ಯವಹಾರ ನಡೆಸಲೇಬೇಕು ಎಂದು ನಿರ್ಧರಿಸಿದ್ದೆವು. ನಾವಾಗ ಬೆಂಗಳೂರಿನಲ್ಲಿದ್ದೆವು. ಆ ಸಂದರ್ಭದಲ್ಲಿ ಪ್ರತಿದಿನ ಪತ್ರಿಕೆಯಲ್ಲಿ ಹೊಸತಾಗಿ ಆರಂಭವಾಗುವ ಸಂಸ್ಥೆಗಳ ಬಗ್ಗೆ ಓದುತ್ತಿದ್ದೆವು. ಹೊಸ ಹೊಸ ಆನ್‌ಲೈನ್ ವ್ಯವಹಾರ ಇಂದಿನ ಡಿಜಿಟಲ್ ಮಾಧ್ಯಮವನ್ನು ಆವರಿಸುತ್ತಿರುವುದು ಗಮನಿಸುತ್ತಲೇ ಇದ್ದೆವು. ಈ ಬಗ್ಗೆ ನಮ್ಮ ಆಲೋಚನೆ ಹಾಗೂ ಯೋಜನೆಯನ್ನು ನಿಖರಗೊಳಿಸಲು ಕೆಲವು ಕಾಲ ತೆಗೆದುಕೊಂಡೆವು. ಮುಂದಿನ 10 ಅಥವಾ 20 ವರ್ಷಗಳ ನಂತರದ ಮಾರುಕಟ್ಟೆ ಕುರಿತಾಗಿ ಯೋಜನೆ ಹೆಣೆದರೆ ಚೆನ್ನ ಎಂದುಕೊಂಡು ಪ್ರಯತ್ನ ಆರಂಭಿಸಿದೆವು.

ನಾವು ನಮ್ಮ ತಂಡವನ್ನು ಒಗ್ಗೂಡಿಸಿ ಇ-ಕಾಮರ್ಸ್ ಮಾತ್ರವಲ್ಲದೇ ಬೇರೆ ಬೇರೆ ವಿವಿಧ ಆನ್‌ಲೈನ್ ಮಾಧ್ಯಮದ 20 ಮುಖ್ಯ ಅಂಶಗಳ ಬಗ್ಗೆ ಯೋಜನೆ ಹೆಣೆದೆವು. ಜ್ಯೂರಿಯಲ್ಲಿ ನನಗಾದ ಅನುಭವದ ಕಾರಣ ಕಚೇರಿ ಅಗತ್ಯತೆಗಳನ್ನು ಪೂರೈಸುವ ಉದ್ಯಮ ಆರಂಭಿಸಲು ಯೋಚಿಸಿದೆವು. ನಮ್ಮ ಜ್ಯೂರಿ ಸಂಸ್ಥೆಯ ಹೋಟೆಲ್‌ನಲ್ಲಿ ಉತ್ಪನ್ನಗಳನ್ನು ಒದಗಿಸುವ ಸಂಸ್ಥೆಗಳ ಸೇವೆ ನಮ್ಮ ನಿರ್ಧಾರ ದೃಢಪಡಿಸಿತು. ಏಕೆಂದರೆ ನಮಗೆ ಬೇಕಿದ್ದ ಪೇಪರ್ ಹಾಗೂ ಪೆನ್‌ಗಳನ್ನು ಒಂದು ಸ್ಥಳದಿಂದ, ಕಾರ್ಟ್ರೆಡ್ಜ್ ಹಾಗೂ ಪ್ರಿಂಟರ್‌ಗಳನ್ನು ಇನ್ನೊಂದು ಸ್ಥಳದಿಂದ, ಆಫೀಸಿನ ಬೇರೆ ಪರಿಕರಗಳನ್ನು ಬೇರೆ ಮೂಲಗಳಿಂದ ಪಡೆದುಕೊಳ್ಳಬೇಕಿತ್ತು. ನಮಗಿದ್ದ ಮೂರು ಮೂಲಗಳು ತಮ್ಮ ದರನಿಗದಿಯಲ್ಲಾಗಲಿ ಅಥವಾ ಸೇವೆ ಒದಗಿಸುವಲ್ಲಾಗಲಿ ಸಮರ್ಪಕವಾಗಿರಲಿಲ್ಲ. ಹಾಗಾಗಿ ಈ ಎಲ್ಲಾ ಕಚೇರಿ ಪರಿಕರಗಳನ್ನು ಒಂದೇ ಮೂಲದಲ್ಲಿ ಒದಗಿಸುವತ್ತ ಗಂಭೀರವಾಗಿ ಚಿಂತನೆ ನಡೆಸಲಾಯಿತು. ಆ ಸಂದರ್ಭದಲ್ಲಿ ಕೇವಲ ಆಫೀಸ್ ಎಸ್ ನಂತಹ ಕೆಲವೇ ಸಣ್ಣ ಸಂಸ್ಥೆಗಳು ಕಚೇರಿಯ ಕೆಲವು ಅಗತ್ಯತೆಗಳನ್ನು ಪೂರೈಸುತ್ತಿದ್ದವು. ಹಾಗಾಗಿ ಒಂದು ಕಚೇರಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಪೂರೈಸುವುದು ನಮ್ಮ ಪ್ರಯತ್ನವಾಯಿತು.

ಯುವರ್ ಸ್ಟೋರಿ: ಇಟ್ಟಿಗೆ ಮತ್ತು ಗಾರೆ ಮಾದರಿಗೂ, ಆನ್‌ಲೈನ್ ವ್ಯವಹಾರಕ್ಕೂ ಇರುವ ವ್ಯತ್ಯಾಸಗಳೇನು?

ಅಭಿಷೇಕ್: ತಾರ್ಕಿಕವಾಗಿ ಹೇಳುವುದಾದರೆ ತುಂಬಾ ಸಣ್ಣ ಮಟ್ಟದಲ್ಲಿ ವ್ಯತ್ಯಾಸವಿದೆ. ಪ್ರತಿಯೊಂದು ವ್ಯವಹಾರಗಳಿಗೂ ಸಮಾನ ಸವಾಲುಗಳಿರುತ್ತವೆ. ನೀವು ವ್ಯಾವಹಾರಿಕ ತಾಂತ್ರಿಕತೆಯ ಆಧಾರದಲ್ಲಿ ತರ್ಕಿಸಿದರೆ ಪ್ರತಿಯೊಂದು ಉದ್ಯಮದ ಉನ್ನತ ಹಂತದಲ್ಲೂ ಅಲ್ಪಸ್ವಲ್ಪ ವ್ಯತ್ಯಾಸಗಳ ಮಧ್ಯೆ ಮಹತ್ತರ ಸವಾಲು ಇದ್ದೇ ಇರುತ್ತದೆ. ಪ್ರತಿಯೊಬ್ಬ ಉದ್ಯಮಿ ಯೋಚಿಸುವುದು, ಹೇಗೆ ಮಾರುವುದು?, ಯಾವ ವ್ಯಾವಹಾರಿಕ ಸಂಸ್ಕೃತಿ ಆಧಾರದಲ್ಲಿ ಉದ್ಯಮ ಆರಂಭವಾಗುತ್ತದೆ?, ಮುಂದೇನು? ಎಂದು. ಆ ಎಲ್ಲಾ ವಿಷಯಗಳು ಪ್ರಸ್ತುತ ಪ್ರತಿಯೊಂದು ವ್ಯವಹಾರದಲ್ಲೂ ಸಮಾನವಾಗಿದೆ. ಝೋಫಿಯೋ ಸಂಸ್ಥೆ ಜ್ಯೂರಿ ಹೋಟೆಲ್‌ ಕಾರ್ಯಾಚರಣೆಗಿಂತ ಸುಲಭವಾದ ದಾರಿ ಹಿಡಿಯಿತು. ಜ್ಯೂರಿಯಲ್ಲಿ ನಾವು ನಶಿಸಬಲ್ಲ ಉತ್ಪನ್ನಗಳನ್ನು ಮಾರುತ್ತಿದ್ದೆವು. ಇಂದು ನಾವು ನಮ್ಮ ಅವಕಾಶಗಳನ್ನು ಮಾರಲು ಸಾಧ್ಯವಾಗದಿದ್ದರೆ ನಾಳೆಯೂ ಸಾಧ್ಯವಾಗುವುದಿಲ್ಲ. ಹಾಗೆಯೇ ಇಂದು ನಾವು ಮಾರಿದರೆ ನಾಳೆಯೂ ಮಾರಾಟ ಮಾಡುವುದು ಸಾಧ್ಯ.

image


ಯುವರ್ ಸ್ಟೋರಿ: ಝೋಫಿಯೋ ಕಂಡುಹಿಡಿದ ಸಮಸ್ಯೆಗಳಾವುವು?

ಅಭಿಷೇಕ್: ನಾವು ವ್ಯವಹಾರ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಅಲ್ಲಿರುವ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸುತ್ತೇವೆ ಎಂದುಕೊಳ್ಳುತ್ತೇವೆ. ಆದರೆ ಅದರಲ್ಲಿ ಬಹುತೇಕ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ. ನಮಗೆ ಗೊತ್ತೇ ಇರುವುದಿಲ್ಲ ಮಾರುಕಟ್ಟೆಯಲ್ಲಿ ನಕಲಿ ಉತ್ಪನ್ನಗಳು ಸಿಗುತ್ತಿವೆ ಅಥವಾ ದರ ಮಾನದಂಡದಲ್ಲಿ ಪಾರದರ್ಶಕತೆ ಇಲ್ಲ ಅಥವಾ ಇನ್ಯಾವುದೋ ತೆರಿಗೆಗಳನ್ನು ಸರಿಯಾಗಿ ಲೆಕ್ಕಾಚಾರ ಮಾಡಿರುವುದಿಲ್ಲ. ನಿರಂತರವಾಗಿ ಉತ್ತಮ ಉತ್ಪನ್ನಗಳನ್ನು ಪಡೆಯುವುದು, ಸಾಧ್ಯವಾದರೆ ವ್ಯವಹಾರದಲ್ಲಿ ಹಣ ಉಳಿಸುವುದು ಜನರ ಅತೀಮುಖ್ಯ ಆಸಕ್ತಿಯಾಗಿರುತ್ತದೆ. ನೀವೇನಾದರೂ ಬಯಸಿದರೆ ಮುಂದಿನ 30 ನಿಮಿಷಗಳಲ್ಲಿ ಅದನ್ನು ಪಡೆದುಕೊಳ್ಳುವ ಹಾದಿಯಲ್ಲಿರುತ್ತೀರಿ. ನಾವು ಕಳೆದುಹೋದ ಕ್ಷಣಗಳನ್ನು ಮಾರುಕಟ್ಟೆಯಲ್ಲಿ ಹುಡುಕಲು ಸಾಧ್ಯವಿಲ್ಲ. ಸಣ್ಣ ಹಾಗೂ ಮಧ್ಯಮ ಹಂತದ ಉದ್ದಿಮೆಗಳಿಗೆ ಅನುಕೂಲವಾಗುವಂತೆ ಸೇವೆಗಳನ್ನು ಒದಗಿಸುವುದಷ್ಟೇ ಮುಖ್ಯ.

ಯುವರ್ ಸ್ಟೋರಿ: ಇಲ್ಲಿಯವರೆಗೆ ಮಾರುಕಟ್ಟೆ ಪ್ರತಿಕ್ರಿಯೆ ಹೇಗಿದೆ? ಝೋಫಿಯೋದೊಂದಿಗೆ ನಿಮ್ಮ ಮಹತ್ತರವಾದ ಸಾಧನೆಯ ಕನಸೇನು?

ಅಭಿಷೇಕ್: ಭಾರತದಲ್ಲಿ ಕಚೇರಿ ಪರಿಕರಗಳನ್ನು ಒದಗಿಸುವ ಮಾರುಕಟ್ಟೆ ಸುಮಾರು 20 ಬಿಲಿಯನ್ ಅಮೆರಿಕನ್ ಡಾಲರ್ ವಹಿವಾಟಿನ ನಿರೀಕ್ಷೆಯಲ್ಲಿದೆ. ಆದರೆ ಈ ಸಂಬಂಧ ಆನ್‌ಲೈನ್ ಸಂಸ್ಥೆಗಳ ಪೈಪೋಟಿ ಅತ್ಯಂತ ಕಡಿಮೆ. ಆಫೀಸ್ ಎಸ್ ನಂತಹ ಮಾರುಕಟ್ಟೆಯಲ್ಲಿರುವ ಸಂಸ್ಥೆಗಳು ಈವರೆಗಿನ ಒಂದು ಸಾವಿರದ ಒಂದರಷ್ಟು ಮಾರುಕಟ್ಟೆ ಅವಕಾಶವನ್ನೂ ಆಕ್ರಮಿಸಿಕೊಂಡಿಲ್ಲ. ಭಾರತದ ಈ 20 ಬಿಲಿಯನ್ ಡಾಲರ್ ಸಾಮರ್ಥ್ಯದಲ್ಲಿ ನಾನು ಕೇವಲ ಶೇ.5ರಷ್ಟು ಮಾರುಕಟ್ಟೆಯನ್ನು ಟಾರ್ಗೆಟ್ ಮಾಡಿದರೂ ಅದು ಅತ್ಯುತ್ತಮ ಪ್ರಯತ್ನ. ಮಾರುಕಟ್ಟೆಗೆ ಇದೇ ಕ್ಷೇತ್ರದಲ್ಲಿ 5-6 ಹೊಸ ಸಂಸ್ಥೆಗಳು ಕಾಲಿಟ್ಟರೂ ನಮಗಿರುವ ಅವಕಾಶಗಳಿಗೇನು ಕೊರತೆ ಇರುವುದಿಲ್ಲ.

ನಾವು ಇಂದಿನವರೆಗೆ ಸಣ್ಣ ವಹಿವಾಟು ನಡೆಸಿ 5000ದಷ್ಟು ಬೇಡಿಕೆ ಪಡೆದಿದ್ದೇವೆ. ಮುಂದಿನ ದಿನಗಳಲ್ಲಿ ದೆಹಲಿ ಹಾಗೂ ಬೆಂಗಳೂರಿನಲ್ಲಿ ಪ್ರತಿನಿತ್ಯ 100 ಆರ್ಡರ್ ಪಡೆದುಕೊಳ್ಳುವತ್ತ ಯೋಚಿಸುತ್ತಿದ್ದೇವೆ. ಈ ಎರಡೂ ಸ್ಥಳಗಳಲ್ಲಿ ನಮ್ಮ ಶೇಖರಣಾ ಘಟಕಗಳಿವೆ. ಮುಂದಿನ 5 ವರ್ಷಗಳಲ್ಲಿ 12-15 ಮುಖ್ಯಪಟ್ಟಣಗಳಲ್ಲಿ ನಮ್ಮ ಸೇವೆಯನ್ನು ವಿಸ್ತರಿಸುವ ಯೋಜನೆ ಹೊಂದಿದ್ದೇವೆ. ಮೊದಲ ಹಂತದ ನಮ್ಮ ಯೋಜನೆ ಕೇವಲ 8.5 ತಿಂಗಳಿನಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ಹಾಗಾಗಿ ಇಲ್ಲಿ ಮುಂಬರುವ ದಿನಗಳಲ್ಲಿ ಹೂಡಿಕೆಗೆ ಪ್ರೋತ್ಸಾಹ ದೊರೆತರೆ ಮಾತ್ರ ಇದನ್ನು ಮುಂದುವರೆಸಲು ಯೋಚಿಸುತ್ತಿದ್ದೇವೆ. ಒಂದು ವರ್ಷದಲ್ಲಿ ನಮ್ಮ ಆದಾಯ ದುಪ್ಪಟ್ಟಾಗುವ ನಿರೀಕ್ಷೆಯಂತೂ ಇದೆ.

ನಾವು ಸಾಂಪ್ರದಾಯಿಕವಾಗಿ ಇ-ಕಾಮರ್ಸ್ ಉದ್ದಿಮೆ ಮಾಡಿದವರಲ್ಲ. ಆದರೂ 5 ವರ್ಷಗಳಲ್ಲಿ ಇದು ಲಾಭದಾಯಕವಾದರೆ ಮುಂದುವರೆಸುವ ಇಲ್ಲವಾದರೆ ನಿಲ್ಲಿಸುವ ನಿರ್ಧಾರ ಮಾಡಿದ್ದೇವೆ. ಯಾವುದೇ ಒತ್ತಡಗಳ ಕೆಳಗೆ ಫಲಿತಾಂಶರಹಿತವಾಗಿ ಅಥವಾ ಬೆಳವಣಿಗೆ ಕುಂಠಿತಗೊಳಿಸಿ ಉದ್ಯಮದಲ್ಲಿರಬೇಕಾದ ಅನಿವಾರ್ಯತೆ ನಮಗಿಲ್ಲ. ಆನ್‌ಲೈನ್ ಮಾರ್ಕೆಟಿಂಗ್‌ ಮೇಲೆ ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಹರಿಬಿಡುತ್ತೇವೆ. ಆದರೆ ಆ ದುಡ್ಡು ವಾಪಸು ಬರುವ ನಿರೀಕ್ಷೆ ಇಲ್ಲ ಎಂದರೆ ಅಂತಹ ಉದ್ಯಮ ನಮಗೆ ಬೇಡ. ಕ್ಷಿಪ್ರಗತಿಯ ಬೆಳವಣಿಗೆಗಿಂತ ನಮಗೆ ನಿಧಾನಗತಿಯ ಪ್ರಗತಿ ಸಾಕು. ಈಗಿರುವ ಪ್ರಗತಿ ಸಾಕಷ್ಟು ತೃಪ್ತಿದಾಯಕವಾಗಿದೆ. ಮುಂದಿನ 10ರಿಂದ 15ವರ್ಷ ಈ ಕ್ಷೇತ್ರದಲ್ಲಿ ಮುಂದುವರೆಯಲು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಹಾಗಾಗಿ ಮುಂಬರುವ 2-5ವರ್ಷ ನಮ್ಮ ಪಾಲಿನ ನಿರ್ಣಾಯಕ ಕಾಲಘಟ್ಟವಾಗಿದೆ.