"ಚಿಲ್ಲರೆ" ವಿಷ್ಯಕ್ಕೆ ಇನ್ನುಮುಂದೆ ಜಗಳ ಆಡ್ಬೇಡಿ..ಸ್ಮಾರ್ಟ್​ಕಾರ್ಡ್​ ಇಟ್ಕೊಂಡು ಓಡಾಡಿ..!

ಟೀಮ್​ ವೈ.ಎಸ್​.ಕನ್ನಡ

"ಚಿಲ್ಲರೆ" ವಿಷ್ಯಕ್ಕೆ ಇನ್ನುಮುಂದೆ ಜಗಳ ಆಡ್ಬೇಡಿ..ಸ್ಮಾರ್ಟ್​ಕಾರ್ಡ್​ ಇಟ್ಕೊಂಡು ಓಡಾಡಿ..!

Friday June 17, 2016,

2 min Read

ಬಿಎಂಟಿಸಿ ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆ ಸ್ವಲ್ಪ ಹೆಚ್ಚಾಗಿಯೇ ಇದೆ. ಕೆಲವೊಂದು ಬಾರಿ ನಾವು 100 ರೂಪಾಯಿ ಅಥವಾ 500 ರೂಪಾಯಿ ನೀಡಿದರೆ ಅದಕ್ಕೆ ಚಿಲ್ಲರೆ ನೀಡದೆ, ಬಿಎಂಟಿಸಿ ಕಂಡಕ್ಟರ್‌ಗಳು ಯಾಮಾರಿಸುತ್ತಾರೆ, ಇಲ್ಲವೇ ಮರೆತು ಹೋಗುತ್ತಾರೆ. ಆಗ ನಮ್ಮ ಜೇಬಿಗೆ ಕತ್ತರಿ ಬೀಳುತ್ತದೆ. ಆದರೆ ಈಗ ಇದಕ್ಕೆಲ್ಲ ಗುಡ್‌ಬೈ ಹೇಳುವ ಕಾಲ ಬಂದಿದೆ. ಬೆಂಗಳೂರು ನಗರ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಬಳಸಿ ಇನ್ನು ಮುಂದೆ ಟಿಕೆಟ್ ಪಡೆದು ಚಿಲ್ಲರೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಮೆಟ್ರೋ ಮತ್ತು ಬಿಎಂಟಿಸಿ ಎರಡಕ್ಕೂ ಸ್ಮಾರ್ಟ್ ಕಾಡ್

ಬೆಂಗಳೂರಿನಲ್ಲಿ ಸದ್ಯಕ್ಕೆ ಸದ್ದು ಮಾಡುತ್ತಿರುವ ಸಾರಿಗೆ ವ್ಯವಸ್ಥೆ ಎಂದರೆ ಮೆಟ್ರೋ. ಈ ಮೆಟ್ರೋದೊಂದಿಗೆ ಒಂದುಗೂಡಿ ಬಿಎಂಟಿಸಿ ನಗದುರಹಿತ ಸೇವೆಗೆ ಸಿದ್ದತೆ ನಡೆಸಿದೆ. ಎರಡೂ ಸಾರಿಗೆಗೆ ಅನುಕೂಲವಾಗುವಂತೆ ಒಂದು ಸ್ಮಾರ್ಟ್ ಕಾಡ್ ಸಿದ್ದಪಡಿಸಲಾಗುತ್ತಿದೆ. ಇದನ್ನು ಕೊಂಡವರು ವಾಹನ ಪಾರ್ಕಿಂಗ್ ಶುಲ್ಕ ಪಾವತಿ, ಹಾಗೂ ವ್ಯಾಪಾರಿ ಮಳಿಗೆಗಳಲ್ಲೂ ಈ ಕಾರ್ಡ್ ಬಳಸುವಂತೆ ಯೋಜನೆ ರೂಪಿಸಲು ತಯಾರಿ ನಡೆಸಿದ್ದಾರೆ.

ಈಗಾಗಲೇ ಕೆಲವೊಂದು ಸೇವಾ ಸಂಸ್ಥೆಗಳು ಆ ಸಂಸ್ಥೆಯ ಬಳಕೆಗೆ ಸೀಮಿತವಾಗುವಂತೆ ಒಂದು ಸ್ಮಾರ್ಟ್ ಕಾರ್ಡ್‌ ಆ್ಯಪ್​ನ್ನು ಅಭಿವೃದ್ಧಿಪಡಿಸಿದ್ದಾರೆ. ಅದನ್ನು ಗ್ರಾಹಕರ ಅನುಕೂಲ್ಕಕಾಗಿ ಬಹು ಉಪಯೋಗಿ ’ಓಪನ್ ಲೂಪ್‌ಸ್ಮಾರ್ಟ್ ಕಾರ್ಡ್’ ಆಗಿ ಅಭಿವೃದ್ಧಿಪಡಿಸಿ ಗ್ರಾಹಕರಿಗೆ ಅನುಕೂಲ ಮಾಡಲು ಚಿಂತಿಸಲಾಗುತ್ತಿದೆ.

ಇದನ್ನು ಓದಿ: "ವಿರಾಟ್"​ ರೂಪಕ್ಕೆ ಬೆಚ್ಚಿಬಿದ್ದ ಕ್ರಿಕೆಟ್​ಲೋಕ

ಈ ಕಾರ್ಡ್‌ಗೆ ನಿಗದಿತ ಮೊತ್ತಕ್ಕೆ ರಿಚಾರ್ಜ್ ಮಾಡಿ ಇದನ್ನು ಎಲ್ಲಿ ಬೇಕಾದರೂ ಬಳಸುವಂತೆ ಮಾಡಲಾಗುತ್ತಿದೆ ಎಂದು ಬಿಎಂಟಿಸಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಅಕಾರಿಗಳು ತಿಳಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ನೀಡಲಾಗುವ ಸ್ಮಾರ್ಟ್​ ಕಾರ್ಡ್‌ನ್ನು ಸದ್ಯ ಮೆಟ್ರೋಗೆ ಮಾತ್ರ ಬಳಸಬಹುದು. ಆದರೆ ಬಿಎಂಟಿಸಿಯಲ್ಲಿ ಆರಂಭಿಸಿಲು ಚಿಂತಿಸಿರುವ ಸ್ಮಾರ್ಟ್ ಕಾರ್ಡ್ ಇತರೆ ಪಾವತಿಗೂ ಅನುಕೂಲವಾಗುತ್ತದೆ.

ಪ್ರತಿ ನಿತ್ಯ ಚಿಲ್ಲರ ವಿಷಯಕ್ಕೆ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ನಡೆಯುವ ಜಗಳಕ್ಕೆ ಕಡಿವಾಣ ಹಾಕಲು ಬಿಎಂಟಿಸಿ ಚಿಲ್ಲರೆ ಕೌಂಟರ್ ತೆರೆಯಲು ಚಿಂತನೆ ನಡೆಸಿತ್ತು. ಆದರೆ ಇದೀಗ ಸ್ಮಾರ್ಟ್‌ಕಾರ್ಡ್ ಸೇವೆ ಆರಂಭವಾಗುವುದರಿಂದ ಈ ಚಿಲ್ಲರೆ ಕೌಂಟರ್‌ನ ಅವಶ್ಯಕತೆ ಇರುವುದಿಲ್ಲ. ಸ್ಮಾರ್ಟ್ ಕಾರ್ಡ್ ಆಗಸ್ಟ್‌ನಿಂದ ಪ್ರಾಯೋಗಿಕವಾಗಿ ಚಾಲನೆಗೆ ಬರಲಿದೆ . ರೂಪೆ, ವಿಸಾ, ಮಾಸ್ಟರ್‌ಕಾರ್ಡ್ ಬಳಕೆಗೆ ಅವಕಾಶ ಇರುವಲ್ಲಿ ಈ ಸ್ಮಾರ್ಟ್ ಕಾರ್ಡ್ ಬಳಸಬಹುದು. ಈ ವ್ಯವಸ್ಥೆಗಾಗಿ ಆಕ್ಸಿಸ್ ಬ್ಯಾಂಕ್ ಜತೆ ಬಿಎಂಟಿಸಿ ಒಪ್ಪಂದ ಮಾಡಿಕೊಂಡಿದೆ. ಸ್ಮಾರ್ಟ್ ಕಾರ್ಡ್ ಬಳಕೆ ಉತ್ತೇಜಿಸಿ ರಿಯಾಯಿತಿ ನೀಡುವ ಕುರಿತು ಆಲೋಚನೆ ನಡೆದಿದೆ. ಸ್ಮಾರ್ಟ್ ಕಾರ್ಡ್‌ನ್ನು ವಿದ್ಯುನ್ಮಾನ ಟಿಕೆಟ್ ಯಂತ್ರ ಸ್ಪರ್ಶಿಸಿದಾಗ ನಿಗದಿತ ಮೊತ್ತ ಕಡಿತವಾಗುತ್ತದೆ. ಇದರಿಂದ ನಿರ್ವಾಹಕರ ಮೇಲಿನ ಒತ್ತಡ ಕಡಿಮೆಯಾಗಲಿದೆ. ಕಾರ್ಡ್ ಎಟಿಎಂ ಕಾರ್ಡ್​ ಗಾತ್ರದಲ್ಲಿರುವುದರಿಂದ ಕ್ಯಾರಿ ಮಾಡಲು ಗ್ರಾಹಕರಿಗೆ, ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಬಿಎಂಟಿಸಿ ಆದಾಯ ಸೋರಿಕೆಗೆ ಇದರಿಂದ ಕಡಿವಾಣ ಬೀಳಲಿದೆ. ಅಲ್ಲದೆ ಇದು ವಿವಿಧ ಉದ್ದೇಶಗಳಿಗೆ ಬಳಕೆಯಾಗುವುದರಿಂದ ಗ್ರಾಹಕ ಸ್ನೇಹಿಯೂ ಆಗಲಿದೆ. ಒಟ್ಟಿನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗುವ ಈ ಸ್ಮಾರ್ಟ್ ಕಾರ್ಡ್ ಯೋಜನೆಯಿಂದಾಗಿ ಬಿಎಂಟಿಸಿಯಲ್ಲಿನ ಚಿಲ್ಲರೆಗಾಗಿ ಕಂಡಕ್ಟರ್‌ನೊಂದಿಗೆ ಜಗಳವಾಡುವುದು ತಪ್ಪುತ್ತದೆ.

ಇದನ್ನು ಓದಿ:

1. ಕ್ರೀಡಾಪಟುಗಳ ಫಿಟ್ನೆಸ್ ಗುರು ರಾಜಮಣಿ

2. ಒಂದೇ ಕ್ಲಿಕ್​ನಲ್ಲಿ ದೊಡ್ಡ ಮನೆಯ ದೊಡ್ಡ ಮಾಹಿತಿ..!

3. ಓದಿದ್ದು ಒಂಭತ್ತನೇ ಕ್ಲಾಸ್..ಆಗಿದ್ದು ಎಂಜಿನಿಯರ್​​ಗಳಿಗೇ ಟೀಚರ್....