ಪ್ರವಾಸಪ್ರಿಯರಿಗೆ ಪ್ರಿಯವಾದ ವೆಬ್‍ಸೈಟ್ ಇಕ್ಸಿಗೊ (ixigo)

ಟೀಮ್​​ ವೈ.ಎಸ್​. ಕನ್ನಡ

ಪ್ರವಾಸಪ್ರಿಯರಿಗೆ ಪ್ರಿಯವಾದ ವೆಬ್‍ಸೈಟ್ ಇಕ್ಸಿಗೊ (ixigo)

Thursday December 10, 2015,

3 min Read

ಮೈಕ್ರೋಮ್ಯಾಕ್ಸ್ ಕಂಪನಿಯ ಆರ್ಥಿಕ ನೆರವಿನೊಂದಿಗೆ ಉದ್ಯಮ ವಲಯದಲ್ಲಿ ಮುನ್ನುಗ್ಗುತ್ತಿರುವ ಪ್ರವಾಸ ತಾಣಗಳ ಕುರಿತ ವೆಬ್‍ಸೈಟ್ ಇಕ್ಸಿಗೊ (ixigo). ಇತ್ತೀಚೆಗೆ ಇಕ್ಸಿಗೊ, ಪ್ರವಾಸಿಗರಿಗೆ ಕೈಗೆಟುಕುವ ಬೆಲೆಯ ಬಜೆಟ್ ಹೋಟೆಲ್‍ಗಳ ಕುರಿತೂ ತನ್ನ ವೆಬ್‍ಸೈಟ್‍ನಲ್ಲಿ ಮೆಟಾಸರ್ಚ್ ಸಹಾಯದಿಂದ ಮಾಹಿತಿ ನೀಡಲು ಪ್ರಾರಂಭಿಸಿದೆ. ಭಾರತದಾದ್ಯಂತ ಸುಮಾರು 80 ನಗರಗಳಲ್ಲಿರುವ 2500 ಹೋಟೆಲ್‍ಗಳ ಕುರಿತ ಮಾಹಿತಿ ಇಲ್ಲಿ ಲಭ್ಯ. ಪ್ರತಿ ರೂಮ್‍ಗೆ 599 ರೂಪಾಯಿಯಿಂದ 2499 ರೂಪಾಯಿವರೆಗಿನ ದಿನದ ಬಾಡಿಗೆ ಇರುವ, ಕೈಗೆಟುಕುವ ಬೆಲೆಯಲ್ಲೇ ಲಭ್ಯವಾಗುವ ಹೋಟೆಲ್‍ಗಳ ಮಾಹಿತಿ ಈ ವೆಬ್‍ಸೈಟ್‍ನಲ್ಲಿ ದೊರೆಯುತ್ತದೆ.

ಈ ಹೊಸ ಸೌಲಭ್ಯ ಪ್ರಯಾಣಿಕರಿಗೆ ಬೇರೆ ಬೇರೆ ಹೋಟೆಲ್‍ಗಳ ನಡುವಿನ ವಿಭಿನ್ನತೆಗಳನ್ನು ಗುರುತಿಸಲು ಸಹಕರಿಸುತ್ತೆ. ಹಾಗೇ ಬೇರೆ ಬೇರೆ ಹೋಟೆಲ್‍ಗಳ ನಡುವೆ ಹೋಲಿಕೆ ಮಾಡಿ ನೋಡಿ, ನಂತರ ತಮಗಿಷ್ಟವಾದ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಬಹುದು. ಓಯೋ ರೂಮ್ಸ್, ವುಡ್‍ಸ್ಟೇ, ಜೋ ರೂಮ್ಸ್, ವಿಸ್ಟಾ ರೂಮ್ಸ್ ಸೇರಿದಂತೆ ದೇಶದ ವಿವಿಧ ಭಾಗಗಳ ಪ್ರಮುಖ ಪ್ರವಾಸೀ ತಾಣಗಳಲ್ಲಿರುವ ಖಾಸಗೀ ಹೋಟೆಲ್‍ಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ದೊರೆಯುತ್ತದೆ. ಹಾಗೇ ಭಾರತದಲ್ಲಿ ಹೆಚ್ಚು ಬಳಕೆಯಾಗುವ ಬುಕಿಂಗ್.ಕಾಮ್, ಮೇಕ್‍ಮೈಟ್ರಿಪ್.ಕಾಮ್, ಹೋಟೆಲ್ಸ್.ಕಾಮ್, ಗೋಐಬಿಬೋ.ಕಾಮ್ ಮತ್ತು ಅಗೋಡಾ.ಕಾಮ್ ಸೇರಿದಂತೆ 20ಕ್ಕೂ ಹೆಚ್ಚು ವೆಬ್‍ಸ್ಶೆಟ್‍ಗಳನ್ನು ಶೋಧಿಸಿ, ಅವುಗಳಲ್ಲಿ ಅತ್ಯಂತ ಕಡಿಮೆ ಬೆಲೆಯ ರೂಮ್‍ಗಳಿರುವ ಹೋಟೆಲ್‍ಗಳ ಕುರಿತ ಮಾಹಿತಿಯನ್ನೂ ಇಕ್ಸಿಗೊ ತನ್ನ ವೆಬ್‍ಸೈಟ್‍ನಲ್ಲಿ ಕಲೆ ಹಾಕಿದೆ. ಹೋಟೆಲ್‍ಗಳ ನಡುವಿನ ಬೆಲೆಯ ಅಂತರ, ಅವುಗಳ ವಿಮರ್ಶೆ, ಇರುವ ಸೌಲಭ್ಯ ಹಾಗೂ ಅವುಗಳಿಗೆ ರೇಟಿಂಗ್‍ಗಳನ್ನೂ ಈ ವೆಬ್‍ಸೈಟ್‍ನಲ್ಲಿ ಹೋಲಿಸಬಹುದು. ಆ ಮೂಲಕ ಯಾವುದೇ ತಲೆಬಿಸಿಯಿಲ್ಲದೇ ಪ್ರವಾಸಿಗರು ತಮಗೆ ಬೆಸ್ಟ್ ಅನ್ನಿಸಿದ ಹೋಟೆಲ್‍ಅನ್ನು ಆರಿಸಿಕೊಳ್ಳಬಹುದು.

image


‘ನಮ್ಮ ಡಾಟಾಬೇಸ್‍ನಲ್ಲಿರುವ ಬರೊಬ್ಬರಿ 12 ಸಾವಿರಕ್ಕೂ ಹೆಚ್ಚು ಹೋಟೆಲ್‍ಗಳಲ್ಲಿ ಅತ್ಯುತ್ತಮ ಬಜೆಟ್‍ನ ಹೋಟೆಲ್‍ಗಳ ಕುರಿತು ಸಂಪೂರ್ಣ ಮಾಹಿತಿ ನೀಡುವ ಮೂಲಕ ನಾವು ಪ್ರವಾಸಿಗರ ಜೀವನವನ್ನು ಸರಳಗೊಳಿಸುತ್ತಿದ್ದೇವೆ. ಅಲ್ಲದೇ ಈ 2,500 ಹೋಟೆಲ್‍ಗಳ ಪೈಕಿ ನಮ್ಮ ತಂಡವೇ ಹಲವು ಹೋಟೆಲ್‍ಗಳಿಗೆ ಭೇಟಿ ನೀಡಿ, ಅತ್ಯುತ್ತಮವಾದುದನ್ನು ಗುರುತಿಸಿ ಅವುಗಳನ್ನು ಸೂಪರ್ ವ್ಯಾಲ್ಯೂ ಪಟ್ಟಿಗೆ ಸೇರಿಸಿದ್ದೇವೆ. ಖರ್ಚು ವೆಚ್ಚಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಪ್ರಯಾಣಿಕರಿಗೆ ಇಂತಹ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆ ಒದಗಿಸುವ ಈ ಹೋಟೆಲ್‍ಗಳನ್ನು ನಾವು ಶಿಫಾರಸ್ಸು ಮಾಡ್ತೀವಿ. ಇನ್ನು ಕೆಲವೇ ದಿನಗಳಲ್ಲಿ ನಾವು ಸೂಪರ್ ವ್ಯಾಲ್ಯೂ ಹೋಟೆಲ್‍ಗಳ ಕುರಿತು ನಮ್ಮ ಮೊಬೈಲ್ ಅಪ್ಲಿಕೇಶನ್‍ನಲ್ಲೂ ಮಾಹಿತಿ ನೀಡಲಿದ್ದೇವೆ. ಅಲ್ಲದೇ ಇನ್ನೂ ಹೆಚ್ಚು ನಗರಗಳಲ್ಲಿನ ಹೋಟೆಲ್‍ಗಳೊಂದಿಗೆ ಒಪ್ಪಂದ ಮಾಡಿಕೊಂಡು, ನಮ್ಮ ಉದ್ಯಮವನ್ನು ವಿಸ್ತಾರಗೊಳಿಸುವ ಹಾಗೂ ಇದೇ ಡಿಸೆಂಬರ್ ತಿಂಗಳೊಳಗೆ ನಮ್ಮ ಉದ್ಯಮವನ್ನು ದ್ವಿಗುಣಗೊಳಿಸುವ ಆಲೋಚನೆಯಿದೆ’ ಅಂತಾರೆ ಇಕ್ಸಿಗೋ ಸಹಸಂಸ್ಥಾಪಕ ಮತ್ತು ಸಿಇಒ ಅಲೋಕ್ ಬಾಜ್‍ಪೈ.

2006ರಲ್ಲಿ ಗುರ್‍ಗಾವ್‍ನಲ್ಲಿ ಅಲೋಕ್ ಬಾಜ್‍ಪೈ ಮತ್ತು ರಜ್‍ನೀಶ್ ಕುಮಾರ್ ಅವರಿಂದ ಪ್ರಾರಂಭಿಸಲ್ಪಟ್ಟ ಇಕ್ಸಿಗೋ ಇತ್ತೀಚಿನ ವರ್ಷಗಳಲ್ಲಿ ಹಲವು ಬದಲಾವಣೆ ಹಾಗೂ ಅಭಿವೃದ್ಧಿಗಳನ್ನು ಕಂಡಿದೆ. ಹೊಸ ಹೊಸ ವೈಶಿಷ್ಟ್ಯತೆಗಳನ್ನು ಮೈಗೂಡಿಸಿಕೊಂಡು, ಜನರಿಗೆ ಅತ್ಯುತ್ತಮ ರೀತಿಯಲ್ಲಿ ಸೇವೆ ನೀಡುವ ಮೂಲಕ ಹಾಗೂ ನೂತನ ತಂತ್ರಜ್ಞಾನಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಜನರಿಗೆ ಅದರಲ್ಲೂ ಹೆಚ್ಚಾಗಿ ಪ್ರವಾಸಪ್ರಿಯರಿಗೆ ಹತ್ತಿರವಾಗಿದೆ.

ಇನ್ನು ಇದೇ 2015ರ ಜೂನ್‍ನಲ್ಲಿ ಮೈಕ್ರೋಮ್ಯಾಕ್ಸ್, ಇಕ್ಸಿಗೋನಲ್ಲಿ ಆಯಕಟ್ಟಿನ ಹೂಡಿಕೆ ಮಾಡುವುದಾಗಿ ಘೋಷಿಸಿತ್ತು. ಅಷ್ಟು ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಖುದ್ದು ಇಕ್ಸಿಗೋ ಕೂಡ ಬೇರೆ ಕಂಪನಿಗಳನ್ನು ತನ್ನ ಸ್ವಾಧೀನಪಡಿಸಿಕೊಂಡಿದೆ. ಇದೇ ಆಗಸ್ಟ್ ತಿಂಗಳಲ್ಲಿ ಬಜೆಟ್ ಪ್ರಯಾಣಿಕರು ಹಾಗೂ ಹಠಾತ್‍ಆಗಿ ಪ್ಲ್ಯಾನ್ ಇಲ್ಲದೇ ಹೊರಡುವ ಪ್ರವಾಸಿಗರಿಗೆ ಸಹಾಯ ಮಾಡುವ ದಿ ಇಂಡಿಯನ್ ಬ್ಯಾಕ್‍ಪ್ಯಾಕರ್‍ನ ಎಲ್ಲಾ ಬೌದ್ಧಿಕ ಆಸ್ತಿಯನ್ನ ಬಹಿರಂಗಪಡಿಸದ ಮೊತ್ತಕ್ಕೆ ಇಕ್ಸಿಗೋ ವಶಪಡಿಸಿಕೊಂಡಿದೆ. ಅದೇ ತಿಂಗಳಲ್ಲಿ ನಗರಗಳ ನಡುವೆ ಕ್ಯಾಬ್ ವ್ಯವಸ್ಥೆ ಕಲ್ಪಿಸಿಕೊಡುವ ರುಟೊಗೊ ಕಂಪನಿಯ ಮಾತೃಸಂಸ್ಥೆ ಗುರ್‍ಗಾವ್ ಮೂಲದ ಸ್ಕ್ವೇರ್ ಹೂಟ್ ಹೈಕ್ಸ್​​​ ಅನ್ನು ಇಕ್ಸಿಗೊ ಬಾಡಿಗೆ ರೂಪದಲ್ಲಿ ವಶಪಡಿಸಿಕೊಂಡಿದೆ. ಅದೂ ಕೂಡ ಬಹಿರಂಗಗೊಳಿಸದ ಮೊತ್ತಕ್ಕೆ.

ಈ ವೇದಿಕೆ 6 ಕೋಟಿಗೂ ಹೆಚ್ಚು ಮಂದಿ ಪ್ರಯಾಣಿಕರಿಗೆ 25 ಸಾವಿರಕ್ಕೂ ಹೆಚ್ಚು ಆನ್‍ಲೈನ್ ಮತ್ತು ಆಫ್‍ಲೈನ್ ಪ್ರವಾಸೀ ಮತ್ತು ಹಾಸ್ಪಿಟಾಲಿಟಿ ಉದ್ಯಮಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ ಎನ್ನಲಾಗಿದೆ. ಅಲ್ಲದೇ ಇಕ್ಸಿಗೋ, ಪ್ರವಾಸಗಳ ಕುರಿತ ನೈಜ ಸಮಯದ ಮಾಹಿತಿ, ಖರ್ಚು- ವೆಚ್ಚ, ವಿಮಾನ, ರೈಲು, ಬಸ್, ಕ್ಯಾಬ್ ಮತ್ತು ಹೋಟೆಲ್‍ಗಳ ಲಭ್ಯತೆ, ಪ್ಯಾಕೇಜ್ ಟೂರ್ ಮತ್ತು ಪ್ರವಾಸೀತಾಣಗಳ ಕುರಿತು ಜನರಿಗೆ ಮಾಹಿತಿ ನೀಡುತ್ತದೆ.

ಯುವರ್‍ಸ್ಟೋರಿ ಅಭಿಪ್ರಾಯ

ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರು ತಾವೆಲ್ಲಿಗೇ ಟ್ರಿಪ್ ಹೋದ್ರೂ, ಅಲ್ಲಿ ತಮ್ಮ ಬಜೆಟ್‍ಗೆ ಹೊಂದುವಂತಹ ಸೌಕರ್ಯಗಳನ್ನು ಬಯಸುತ್ತಿದ್ದಾರೆ. ಗೂಗಲ್ ಅಂದಾಜಿನ ಪ್ರಕಾರ 2014ರಲ್ಲಿ 0.8 ಬಿಲಿಯನ್ ಡಾಲರ್‍ನಷ್ಟಿದ್ದ ಭಾರತದ ಆನ್‍ಲೈನ್ ಹೋಟೆಲ್ ಬುಕಿಂಗ್ ಮಾರುಕಟ್ಟೆ, 2016ರ ಹೊತ್ತಿಗೆ ಸುಮಾರು 1.8 ಬಿಲಿಯನ್ ಡಾಲರ್‍ಗೆ ಏರಿಕೆಯಾಗಲಿದೆ ಎನ್ನಲಾಗಿದೆ. ಸಂಪೂರ್ಣ ಬಜೆಟ್ ಹೋಟೆಲ್ ಬಗ್ಗೆ ಗಮನ ಹರಿಸಿರುವ ಸ್ಟಾರ್ಟಪ್‍ಗಳು ಹಾಗೂ ಒಟಿಎಗಳಿಗೂ ಇದು ಒಳ್ಳೆ ಅವಕಾಶ ಎನ್ನಬಹುದು. ಅದರೊಂದಿಗೇ ಕಳೆದ ಆರು ವಾರಗಳಲ್ಲಿ ಒಟಿಎಗಳು ಓಯೋ ರೂಮ್ಸ್, ಜೋ ರೂಮ್ಸ್, ವುಡ್‍ಸ್ಟೇ ಮತ್ತು ಇತರೆ ಹೋಟೆಲ್‍ಗಳನ್ನು ಅವಲಂಬಿಸದೇ ತಮ್ಮದೇ ಸ್ವಂತ ಬ್ರಾಂಡ್​​​ನಲ್ಲಿ ಬಜೆಟ್ ಹೋಟೆಲ್ ರೂಮ್‍ಗಳನ್ನು ಲಾಂಚ್ ಮಾಡಿವೆ.

ಹೀಗೆ ಒಟಿಎಗಳು ಕೈಕೊಟ್ಟ ಕಾರಣ ಓಯೋ ರೂಮ್ಸ್, ಜೋ ರೂಮ್ಸ್ ಸೇರಿದಂತೆ ಇತರೆ ಹೋಟೆಲ್‍ಗಳಿಗೆ ಇಕ್ಸಿಗೋ ಸಹಾಯ ಬೇಕೇಬೇಕು. ಯಾಕಂದ್ರೆ ಇಕ್ಸಿಗೋ, ಜಸ್ಟ್ ಡಯಲ್‍ನಂತೆಯೇ ಕೆಲಸ ಮಾಡುತ್ತದೆ. ಮೆಟಾಸರ್ಚ್ ಮೂಲಕ ಇಕ್ಸಿಗೋ ಜನರಿಗೆ ಮತ್ತಷ್ಟು ಹೊಸ ಸೌಲಭ್ಯಗಳನ್ನು ನೀಡುತ್ತಾ, ಮಾಹಿತಿ ಕೊಡುತ್ತಾ ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ ಹಾಗೂ ತಾನೂ ಉದ್ಯಮವಲಯದಲ್ಲಿ ಅಭಿವೃದ್ಧಿ ಹೊಂದಲಿದೆ.

ಲೇಖಕರು: ತೌಸಿಫ್​ ಆಲಮ್​​

ಅನುವಾದಕರು: ವಿಶಾಂತ್​​​