ಮೂರು ಬಾರಿ ಸಾಕ್ಷಾತ್ಕಾರವಾದ್ರೆ ಏನು ಮಾಡಬೇಕು? ಹ್ಯಾಟ್ರಿಕ್ ಉದ್ಯಮಿ ಪೂರ್ಣಿಮಾ ಶೆಣೈ ಅವರ ಅನುಭವದ ಕಹಾನಿ

ಟೀಮ್​ ವೈ.ಎಸ್​.ಕನ್ನಡ 

ಮೂರು ಬಾರಿ ಸಾಕ್ಷಾತ್ಕಾರವಾದ್ರೆ ಏನು ಮಾಡಬೇಕು? 
			ಹ್ಯಾಟ್ರಿಕ್ ಉದ್ಯಮಿ ಪೂರ್ಣಿಮಾ ಶೆಣೈ ಅವರ ಅನುಭವದ ಕಹಾನಿ

Thursday March 24, 2016,

4 min Read

ಸಂದರ್ಭಕ್ಕೆ ತಕ್ಕಂತಹ ನುಡಿಗಟ್ಟುಗಳು ಕೆಲವೊಮ್ಮೆ ಮನರಂಜನೆಗೂ ಕಾರಣವಾಗುತ್ತವೆ. ಕೆಲವರು ಅನುಕರಣೀಯ ನಾಯಕತ್ವ ಮತ್ತು ಆಪ್ತಸಲಹೆಗೆ ಸಾಕ್ಷಿಯಾಗುತ್ತಾರೆ ಮತ್ತು ಕನಸು ಕಾಣಲಾರಂಭಿಸುತ್ತಾರೆ. ಇನ್ನು ಕೆಲವರು ತಮ್ಮ ಪುಟ್ಟ ಕಚೇರಿಗಳಲ್ಲಿ ಉಸಿರುಗಟ್ಟಿ ಕುಳಿತು, ತಮಗೆ ತಾವೇ ಮಾಲೀಕರಾಗಿ ಸ್ವಾತಂತ್ರ್ಯ ಸವಿಯುವ ಆಸೆಯಲ್ಲಿರ್ತಾರೆ. ಇನ್ನು ಕೆಲವರಿಗೆ ಭಯಾನಕ ಮೇಲಧಿಕಾರಿಗಳಿರ್ತಾರೆ, ನಿತ್ಯದ ಕೆಲಸ ಇನ್ನೂ ಕೆಟ್ಟದಾಗಿರುತ್ತೆ, ಹಾಗಾಗಿ ಅದರಿಂದ ಅವರು ವಿರಾಮ ಬಯಸ್ತಾರೆ. ಕೆಲವರಿಗೆ ತಮ್ಮ ಹೆಸರು ಜನಪ್ರಿಯತೆಯತ್ತ ದಾಪುಗಾಲಿಡಬೇಕೆಂಬ ಬಯಕೆ ಮತ್ತು ತಮ್ಮ ಮಹಾನ್ ಕಾರ್ಯಗಳಿಂದ ಎಲ್ಲರೂ ತಮ್ಮನ್ನು ನೆನಪಿಟ್ಟುಕೊಳ್ಳಬೇಕೆಂದು ಆಶಿಸುತ್ತಾರೆ. ಪೂರ್ಣಿಮಾ ಶೆಣೈ ಕೂಡ ಈ ಎಲ್ಲ ಹಂತಗಳನ್ನು ದಾಟಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇವನ್ನೆಲ್ಲ ಅವಕಾಶವನ್ನಾಗಿ ಅವರು ಹೇಗೆ ಪರಿವರ್ತಿಸಿದರು ಅನ್ನೋದು ನಿಜಕ್ಕೂ ಅದ್ಭುತ.

image


ಸರಣಿ ವಾಣಿಜ್ಯೋದ್ಯಮಿ ಪೂರ್ಣಿಮಾ ಅವರಿಗೆ ಎಲ್ಲ ಅನುಮಾನ ಮತ್ತು ಸಿನಿಕತನದಿಂದ ಹೊರಬರುವಂತಹ ಸಾಕ್ಷಾತ್ಕಾರದ ಅನುಭವವಾಗಿದೆ. ಅವರ ಬದುಕನ್ನೇ ಬದಲಾಯಿಸಿದ ಕ್ಷಣಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಮೂರನೇ ಬಾರಿಗೆ ಉದ್ಯಮ ಲೋಕದಲ್ಲಿ ತಮ್ಮ ಪಾಲಿಗೆ ಏನಿದೆ ಅನ್ನೋದನ್ನು ನೋಡಲು ಅವರು ಕೌತುಕದಿಂದಿದ್ದಾರೆ.

ಪದಾರ್ಪಣೆ...

ಪೂರ್ಣಿಮಾ ಅವರು ಜನಿಸಿದ್ದು ಮುಂಬೈನಲ್ಲಿ, ಆದ್ರೆ ಬೆಳೆದಿದ್ದೆಲ್ಲ ಗೋವಾದಲ್ಲಿ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪದವಿ ಪಡೆದಿದ್ದಾರೆ. ಮಣಿಪಾಲದಲ್ಲಿ ಎಂಬಿಎ ಮುಗಿಸಿದ್ದಾರೆ. ''ಎಂಜಿನಿಯರ್ ಹಾಗೂ ಗಣಿತಜ್ಞರ ಕುಟುಂಬದಲ್ಲಿ ಸಮಾಜ ವಿಜ್ಞಾನ ವಿಷಯವನ್ನು ಆಯ್ದುಕೊಂಡವಳು ನಾನೊಬ್ಬಳೇ'' ಎನ್ನುತ್ತಾರೆ ಪೂರ್ಣಿಮಾ. ಅವರು 'ಸಾಚಿ ಆ್ಯಂಡ್ ಸಾಚಿ'ಯಲ್ಲಿ ಮಾರುಕಟ್ಟೆ ಸಂಶೋಧನೆ ಮತ್ತು ಗ್ರಾಹಕ ಸೇವೆ ಆರಂಭಿಸಿದ್ರು. ಸಂಸ್ಥೆಯಲ್ಲಿ ಬಾಸ್ ದರ್ಬಾರ್​ನಿಂದ ಅವರು ಕಂಗೆಟ್ಟಿದ್ದು ಸುಳ್ಳಲ್ಲ. ಎರಡನೇ ಉದ್ಯೋಗದಲ್ಲಿ ಕೂಡ ಅಂಥದ್ದೇ ಕಹಿ ಅನುಭವ ಅವರಿಗಾಗಿತ್ತು. ''ಅದೊಂದು ದುಸ್ವಪ್ನ, ಆ ಕ್ಷಣವೇ ಉದ್ಯಮ ಕ್ಷೇತ್ರಕ್ಕೆ ಎಂಟ್ರಿ ಕೊಡಬೇಕೆಂದು ನಾನು ನಿರ್ಧರಿಸಿದ್ದೆ'' ಎನ್ನುತ್ತಾರೆ ಪೂರ್ಣಿಮಾ.

ಇದೆಲ್ಲ ನಡೆದಿದ್ದು 90ರ ದಶಕದಲ್ಲಿ, ಅದು ಕೂಡ ಬೆಂಗಳೂರಲ್ಲಿ. ಸೂಕ್ತವೆನಿಸದ ಉದ್ಯೋಗಕ್ಕೆ ಸೇರಿ ತೊಳಲಾಡುತ್ತಿದ್ದ ಪೂರ್ಣಿಮಾ, ಕೆಲಸ ಬಿಡಲು ಬಯಸಿದ್ರು. ಆದ್ರೆ ಉದ್ಯೋಗ ತ್ಯಜಿಸಲು ಸಾಧ್ಯವಾಗದಂತಹ ಅಸಹಾಯಕ ಪರಿಸ್ಥಿತಿ ಇತ್ತು. ''ಕೆಲಸ ಬದಲಾಯಿಸಲು ಬಯಸುವ ನೀವು ಇಂಟರ್ನೆಟ್ ಕೂಡ ಇಲ್ಲದೆ ಅವಕಾಶವನ್ನು ಅರಸಿ ಹೋಗುವುದು ಕಷ್ಟದ ಕೆಲಸ'' ಅನ್ನೋದು ಪೂರ್ಣಿಮಾ ಅವರ ಅನುಭವದ ಮಾತು. ಅಂತಹ ಕಹಿ ಅನುಭವ ಆಗಿದ್ದರಿಂದಲೇ ಇದಕ್ಕೊಂದು ಪರಿಹಾರ ಹುಡುಕಬೇಕೆಂದು ಅವರು ನಿರ್ಧರಿಸಿದ್ದರು. ಅದೃಷ್ಟವಶಾತ್ ಇದು ಅವರ ಸಮಸ್ಯೆಗೂ ಪರಿಹಾರವಾಗಿತ್ತು, ಅವರ ವೃತ್ತಿಯ ಮುಂದಿನ ನಡೆಯನ್ನು ನಿರ್ಧರಿಸಿತ್ತು. ಅವರ ಮುಂದಿನ ಹೆಜ್ಜೆ ನೆಕ್ಸಸ್ ಕನ್ಸಲ್ಟಿಂಗ್, ಇತರರಿಗೂ ತಮ್ಮ ವೃತ್ತಿ ಜೀವನದಲ್ಲಿ ಮುಂದಡಿ ಇಡಲು ಪೂರ್ಣಿಮಾ ನೆರವಾದ್ರು. ಇದರ ನಡುವೆಯೇ ಸ್ವಂತ ಉದ್ಯಮ ಆರಂಭಿಸುವ ಆಲೋಚನೆ ಅವರಿಗಿತ್ತು. ಆದ್ರೆ ಸ್ಥಿರ ಉದ್ಯೋಗ ಬಿಟ್ಟು ಉದ್ಯಮ ಲೋಕಕ್ಕೆ ಪ್ರವೇಶಿಸುವ ಅಪಾಯಕಾರಿ ನಿರ್ಧಾರ ಸರಿಯಲ್ಲ ಎಂದವರೇ ಅಧಿಕ. ''ಇಂತಹ ದಿಟ್ಟ ನಿರ್ಧಾರಕ್ಕೆ ಮನೆಯವರ ಬೆಂಬಲ ಬೇಕೇ ಬೇಕು. ನನ್ನ ಪತಿ ಕೂಡ ನನಗೆ ಸದಾ ಸಾಥ್ ಕೊಟ್ಟಿದ್ದಾರೆ. ಪ್ರತಿಯೊಬ್ಬರೂ ಇಂತಹ ಒಳ್ಳೆಯ ದಿನಗಳ ಬಗ್ಗೆ ಹೇಳಿಕೊಳ್ಳಲೇಬೇಕು, ಕಹಿ ನೆನಪುಗಳನ್ನು ಮರೆಯಬೇಕು. ನಿರಂತರ ಪರಿಹಾರಗಳನ್ನು ಎದುರು ನೋಡುವುದರಿಂದ ಎಲ್ಲವನ್ನೂ ಬಿಟ್ಟು ಬರುವುದು ಅಸಾಧ್ಯ'' ಎನ್ನುತ್ತಾರೆ ಪೂರ್ಣಿಮಾ.

ಇದನ್ನೂ ಓದಿ...

ಆನ್​ಲೈನ್​ನಲ್ಲಿ ಬುಕ್​​ ಮಾಡಿ- ಕುಳಿತಲ್ಲಿಗೆ ಬರುತ್ತೆ ಸೀ ಫುಡ್​..!

ಮಾಹಿತಿ ತಂತ್ರಜ್ಞಾನ ವಲಯದ ಸಿಬ್ಬಂದಿ ನೇಮಕಾತಿಯಲ್ಲಿ ಪೂರ್ಣಿಮಾ ನಂ.1 ಎನಿಸಿಕೊಂಡಿದ್ರು. ವಿಪ್ರೋ, ಇನ್ಫೋಸಿಸ್, ನೋಕಿಯಾದಂತಹ ಕಂಪನಿಗಳಿಗೆ ಪ್ರತಿಭಾವಂತ ಉದ್ಯೋಗಿಗಳನ್ನು ಹುಡುಕಲು ನೆರವಾಗಿದ್ದಾರೆ. 1999ರ ವೇಳೆಗೆ ಅವರಿಗೆ ತಾವೊಂದು ಬ್ರಾಂಡ್ ಸೃಷ್ಟಿಸಿದ್ದೇನೆಂಬ ಅರಿವಾಗಿತ್ತು. ಪೂರ್ಣಿಮಾ ಮತ್ತವರ ಜೊತೆಗಿನ ಸಹ ಸಂಸ್ಥಾಪಕರು ಸ್ವಾಧೀನ ಪ್ರಕ್ರಿಯೆಯಲ್ಲಿ ಭಾಗಿಯಾದ್ರು. 2000ನೇ ಇಸ್ವಿಯಲ್ಲಿ e4e Labsಗೆ ಮಾರಾಟ ಮಾಡಿದ್ರು.

ಒಮ್ಮೆ ಸೋಲು...ಎರಡು ಬಾರಿ ಪ್ರಯತ್ನ

ಮತ್ತೊಂದು ಪ್ರಯತ್ನಕ್ಕೆ ಕೈಹಾಕಿದ ಪೂರ್ಣಿಮಾ ದಕ್ಷಿಣ ಭಾರತದಲ್ಲಿ NASSCOM ಕಚೇರಿ ಆರಂಭಿಸಿದ್ರು. ಬಳಿಕ ಬ್ರಿಟಿಷ್ ಫಾರಿನ್ & ಕಾಮನ್ವೆಲ್ತ್ ಆಫೀಸ್ನಿಂದ ಸ್ಕಾಲರ್ಶಿಪ್ ಪಡೆದುಕೊಂಡ ಪೂರ್ಣಿಮಾ, ಅಮೆರಿಕದ ಯೂನಿವರ್ಸಿಟಿ ಆಫ್ ಮಿಚಿಗನ್ ಹಾಗೂ ಬ್ರಿಟನ್​ನ ಬ್ರಾಡ್​ಫೋರ್ಡ್​ ಯೂನಿವರ್ಸಿಟಿಯಲ್ಲಿ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಪ್ರೋಗ್ರಾಮ್ ಅಧ್ಯಯನ ಮಾಡಲು 3 ತಿಂಗಳು ಬ್ರೇಕ್ ತೆಗೆದುಕೊಂಡ್ರು. ''ಅಲ್ಲಿ ಕೆಲವು ಅದ್ಭುತ ಮಹಿಳೆಯರನ್ನು ನಾನು ಭೇಟಿಯಾದೆ, ಅವರು ನಿಧಾನಗತಿಯ ಮನಸ್ಥಿತಿಯಿಂದ ನನ್ನನ್ನು ಹೊರತಂದ್ರು. ನಾನೇನು ಮಾಡಬೇಕು ಅಂದುಕೊಂಡಿದ್ದೆನೋ ಅದರ ಮರು ಮೌಲ್ಯಮಾಪನಕ್ಕೆ ಹೊಸ ಉತ್ಸಾಹ ಮೂಡಿತ್ತು'' ಎನ್ನುವ ಪೂರ್ಣಿಮಾ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿಂದ ಮರಳಿದ ಮೇಲೆ ಕೆಲ ಸಮಯ ಮಣಿಪಾಲ್ ಗ್ರೂಪ್ನಲ್ಲಿ ಕೆಲಸ ಮಾಡಿದ ಪೂರ್ಣಿಮಾ ನಂತರ 2005ರಲ್ಲಿ ಇಂಡಿಯನ್ ಸೆಮಿಕಂಡಕ್ಟರ್ ಅಸೋಸಿಯೇಶನ್ ಸ್ಥಾಪನೆಗೆ ಸಹಾಯ ಮಾಡಿದ್ರು. ಸಂಸ್ಥೆಯ ಅಧ್ಯಕ್ಷರಾಗಿ ನೇಮಕವಾದ ಪೂರ್ಣಿಮಾ ಶೆಣೈ ದೇಶದ ಉದ್ಯಮವೊಂದರ ಆಡಳಿತ ಮಂಡಳಿಗೆ ನೇಮಕವಾದ ಮೊದಲ ಮಹಿಳೆ ಎನಿಸಿಕೊಂಡ್ರು.

ಇಂಡಸ್ಟ್ರಿಯಲ್ಲಿರುವ ಒಂದು ಸಮಸ್ಯೆ ಅಂದ್ರೆ ಸಾಫ್ಟ್​ವೇರ್​ ವರ್ಗೀಕರಿಸುವ ಬದಲು ಅರೆವಾಹಕಗಳು ಪ್ರತ್ಯೇಕ ಗುರುತನ್ನು ಹೊಂದಿರಬೇಕು. ಪೂರ್ಣಿಮಾ ಅವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಸದಸ್ಯರ ಸಂಖ್ಯೆ 157ಕ್ಕೆ ಏರಿಕೆಯಾಯ್ತು. ಸೆಮಿಕಂಡಕ್ಟರ್ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳಲು ನೆರವಾದರು. ವಾಣಿಜ್ಯೋದ್ಯಮಿಯಾಗಿ, ನಾಯಕಿಯಾಗಿ ಅವರು ದೇಶಕ್ಕೆ ಕೊಡುಗೆ ನೀಡಿದ್ದಾರೆ. ''ಬ್ಯಾಂಕ್ ಖಾತೆಯಲ್ಲಿ ಹಣವೇ ಇಲ್ಲದೆ ನಾನು ಉದ್ಯಮ ಲೋಕ ಪ್ರವೇಶಿಸಿದ್ದೆ. ಉದ್ಯಮ ಲೋಕದ ದಿಗ್ಗಜರ ಅಭಿಮಾನ ಮಾತ್ರ ನನ್ನ ಜೊತೆಗಿತ್ತು. ಒಂದು ರಾಷ್ಟ್ರೀಯ ಮತ್ತು 6 ರಾಷ್ಟ್ರೀಯ ಮಟ್ಟದ ನೀತಿ ಜಾರಿಗೆ ನಾವು ಕಾರಣರಾಗಿದ್ದೇವೆ. ಸೆಮಿಕಂಡಕ್ಟರ್ ಸುದ್ದಿಗಳು, ಪ್ರಮುಖ ದಿನಪತ್ರಿಕೆಗಳ ತಂತ್ರಜ್ಞಾನ ವಿಭಾಗದದಿಂದ ಮುಖಪುಟಕ್ಕೆ ಸ್ಥಳಾಂತರವಾದಾಗಲೇ ನಾವೇನನ್ನೋ ಸಾಧಿಸಿದ್ದೇವೆ ಅನ್ನೋದು ಅರ್ಥವಾಗಿತ್ತು'' ಎನ್ನುತ್ತಾರೆ ಪೂರ್ಣಿಮಾ.

3ನೇ ಬಾರಿ ಒಲಿದ ಅದೃಷ್ಟ...

''ನೀವೊಂದು ದೊಡ್ಡ ಸಾಧನೆ ಮಾಡಿದ್ದೀರಾ, ಜನರು ನಿಮ್ಮನ್ನು ಗೌರವಿಸುತ್ತಿದ್ದಾರೆ ಎಂದಾದಾಗ ಅದು ನಿಮ್ಮ ಪಾಲಿಗೆ ಆರಾಮದಾಯಕ ಸಮಯ. ಆದ್ರೆ ನನಗೆ ಆ ಸಂತೃಪ್ತಿ ಇಷ್ಟವಿರಲಿಲ್ಲ'' ಅನ್ನೋದು ಪೂರ್ಣಿಮಾರ ಮನದ ಮಾತು. 2011ರಲ್ಲಿ ಪೂರ್ಣಿಮಾ ಐಎಸ್ಎ ಅಧ್ಯಕ್ಷ ಸ್ಥಾನ ತ್ಯಜಿಸಿದ್ರು. ಅವರ ಸಂಸ್ಥೆ Latitude Edutech ಕೂಡ ಕಾರ್ಪೊರೇಟ್ ತರಬೇತಿಗಾಗಿ ಇ-ಲರ್ನಿಂಗ್ ಆರಂಭಿಸಿತ್ತು. ''ಭಾರತ ಇಡೀ ವಿಶ್ವದಲ್ಲೇ ಆನ್ಲೈನ್ ಕಲಿಕೆಯ ಅತಿದೊಡ್ಡ ಮಾರುಕಟ್ಟೆ. ನೀವು ಭಾರತದಲ್ಲಿ ಯಶಸ್ಸಿಯಾದ್ರೆ ವಿಶ್ವದ ಯಾವ ಮೂಲೆಯಲ್ಲಾದ್ರೂ ಯಶಸ್ವಿಯಾಗಬಹುದು ಅನ್ನೋ ಮಾತಿದೆ. ಬೆಲೆಯ ಒತ್ತಡ ಹಾಗೂ ನಿರ್ಧಾರ ತೆಗೆದುಕೊಳ್ಳುವಿಕೆಯ ಸುದೀರ್ಘ ಪ್ರಕ್ರಿಯೆ ಅದನ್ನು ಇನ್ನಷ್ಟು ಜಟಿಲವಾಗಿಸಿದೆ'' ಅನ್ನೋದು ಪೂರ್ಣಿಮಾರ ಅಭಿಪ್ರಾಯ.

ಕಾರ್ಪೊರೇಟ್ ಕ್ಷೇತ್ರದ ಬಗ್ಗೆ ಹೆಚ್ಚು ಒತ್ತು ನೀಡಿದ ಅವರು ಬಿ2ಬಿಗಾಗಿ ಕಂಟೆಂಟ್ ಮತ್ತು ಮೊಡ್ಯೂಲ್ಗಳನ್ನು ಸೃಷ್ಟಿಸಿದ್ರು. ಮೊದಲೆರಡು ವರ್ಷ Latitude Edutech ತರಬೇತಿ ನೀಡುತ್ತಿತ್ತು, ಬಳಿಕ ಇ-ಲರ್ನಿಂಗ್ಗೆ ಶಿಫ್ಟ್ ಆಯ್ತು. ಸದ್ಯದಲ್ಲೇ ಉತ್ಪನ್ನ ಮಾದರಿಯನ್ನೂ ಅಳವಡಿಸಿಕೊಳ್ಳುವುದಾಗಿ ಪೂರ್ಣಿಮಾ ತಿಳಿಸಿದ್ದಾರೆ. ಈ ಕಂಪನಿ ಮೊದಲ ವರ್ಷವೇ ಶೇ.100ರಷ್ಟು ಇ-ಲರ್ನಿಂಗ್ ಕೆಪಿಓ ಆಗಿ ಪರಿವರ್ತನೆಯಾಗಿತ್ತು. ಅರೈನ್ ಕ್ಯಾಪಿಟಲ್​ನ ಮೋಹನ್​ ದಾಸ್​ ಪೈ, ನೇಚರ್ ಇಕೊ-ವೆಂಚರ್ಸ್​ನ ಅಲೋಕ್ ಶರ್ಮಾ ಅವರಿಂದ ಸೀಡ್ ಫಂಡಿಂಗ್ ಹೆಚ್ಚಿಸಿಕೊಂಡಿದೆ. '2015ರ ಸಿಲಿಕಾನ್ ವ್ಯಾಲಿ ಸ್ಟಾರ್ಟಪ್' ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಎಲ್ಲವನ್ನೂ ಸರಳಗೊಳಿಸಿದ ಪೂರ್ಣಿಮಾ ಶೆಣೈ...

ತಮ್ಮ ಪ್ರಯಾಣದುದ್ದಕ್ಕೂ ಪೂರ್ಣಿಮಾ ಕಾನೂನಾತ್ಮಕ ಹಾಗೂ ಸೈದ್ಧಾಂತಿಕ ರಸ್ತೆ ತಡೆಗಳ ರೂಪದಲ್ಲಿ ಅಡ್ಡಿ ಆತಂಕಗಳನ್ನು ಎದುರಿಸಿದ್ದಾರೆ. ''ನಾನೊಬ್ಬ ಮಹಿಳೆ ಎಂಬ ಕಾರಣಕ್ಕೆ ಕಳೆದ ವರ್ಷ ಬ್ಯಾಂಕ್ನವರು ನನ್ನ ಪತಿಯನ್ನು ಕೋರ್ ಸಿಗ್ನಿಟರಿಯಾಗಿ ಕರೆತರುವಂತೆ ಕೇಳಿದ್ದರು. 90 ದಶಕದಲ್ಲಾಗಿರಲಿ ಅಥವಾ ಪ್ರಸ್ತುತದಲ್ಲೇ ಆಗಿರಲಿ ನಮ್ಮ ದೇಶದಲ್ಲಿರುವ ವಾಸ್ತವ ಸ್ಥಿತಿ ಇದು. ಪುರುಷನ ಬೆಂಬಲವಿಲ್ಲದೆ ಮಹಿಳೆ ಅಸ್ತಿತ್ವ ಕಂಡುಕೊಳ್ಳಬಲ್ಲಳು ಎಂಬುದನ್ನು ಯಾರೂ ಅರ್ಥಮಾಡಿಕೊಂಡಿಲ್ಲ'' ಎನ್ನುತ್ತಾರೆ ಪೂರ್ಣಿಮಾ.

'ಜನರು, ಪರಿಶ್ರಮ ಮತ್ತು ಲಾಭ' ಇವು ಪೂರ್ಣಿಮಾ ಅವರ ಪ್ರತಿಜ್ಞೆ. ''ಮಹಿಳೆಗೆ ಹಣ ಗಳಿಸುವ ಬುದ್ಧಿ ಇರಬಾರದು ಎನ್ನುತ್ತಾರೆ. ಯಾಕಾಗಬಾರದು? ನೀವು ಪರಿಶ್ರಮಪಡುತ್ತಿದ್ದೀರಾ ಎಂದಾದಾಗ ಲಾಭದ ಉದ್ದೇಶ ಹೊಂದುವುದು ತಪ್ಪಲ್ಲ. ಲಾಭ ಅನ್ನೋದು ಮಹಿಳೆಯರ ಪಾಲಿಗೆ ಕೆಟ್ಟ ಪದ ಅನ್ನೋ ವಿಚಾರವನ್ನು ತೆಗೆದುಹಾಕಬೇಕು'' ಅನ್ನೋದು ಪೂರ್ಣಿಮಾ ಶೆಣೈ ಅವರ ಸಲಹೆ.

ಲೇಖಕರು: ಬಿಂಜಲ್ ಶಾ

ಅನುವಾದಕರು: ಭಾರತಿ ಭಟ್

ಇದನ್ನೂ ಓದಿ...

ರೀಡ್ ಮೋರ್.. ಪುಸ್ತಕ ಓದುವ ಹವ್ಯಾಸ ಬೆಳೆಸಲು ಹೊಸ ಅಭಿಯಾನ..!

ಸೌಂದರ್ಯ-ಆರೋಗ್ಯ ಕಾಪಾಡಿಕೊಳ್ಳಬೇಕೆ? ನಿಮಗಾಗಿಯೇ ಇದೆ ಫಿಟ್ನೆಸ್ ಗುರು `ಬುಕ್ ಯುವರ್ ಗೇಮ್' ಆ್ಯಪ್