2ನೇ ಅಂತರಾಷ್ಟ್ರೀಯ ಯೋಗ ದಿನಕ್ಕೆ ಸಿದ್ಧತೆ...

ಟೀಮ್ ವೈ.ಎಸ್.ಕನ್ನಡ 

2ನೇ ಅಂತರಾಷ್ಟ್ರೀಯ ಯೋಗ ದಿನಕ್ಕೆ ಸಿದ್ಧತೆ...

Tuesday June 07, 2016,

2 min Read

2015ರಲ್ಲಿ ವಿಶ್ವದಾದ್ಯಂತ ಮೊದಲ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿತ್ತು. ಆ ಯಶಸ್ಸಿನ ಬಳಿಕ ನಾವೀಗ ಎರಡನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸನಿಹದಲ್ಲಿದ್ದೇವೆ. ಆ ಅದ್ಭುತ ಕ್ಷಣಗಳಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಗಾದ್ರೆ ಎರಡನೇ ಅಂತರಾಷ್ಟ್ರೀಯ ಯೋಗ ದಿನಕ್ಕೆ ಸಿದ್ಧತೆಗಳು ಹೇಗೆ ನಡೀತಿವೆ? ಮೊದಲ ಬಾರಿಯ ಆಚರಣೆ ಹೇಗಿತ್ತು ಅನ್ನೋದನ್ನೆಲ್ಲ ಒಮ್ಮೆ ಮೆಲುಕು ಹಾಕೋಣ.

2014ರ ಸಪ್ಟೆಂಬರ್ 27ರಂದು ವಿಶ್ವಸಂಸ್ಥೆಯಲ್ಲಿ ನಡೆದ ಸಾರ್ವತ್ರಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅಂತರಾಷ್ಟ್ರೀಯ ಯೋಗದಿನವನ್ನು ಅಳವಡಿಸಿಕೊಳ್ಳುವಂತೆ ವಿಶ್ವ ಸಮುದಾಯಕ್ಕೆ ಕರೆ ನೀಡಿದ್ರು. 2014ರ ಡಿಸೆಂಬರ್ 11ರಂದು ನರೇಂದ್ರ ಮೋದಿ ಅವರ ಮಾತಿಗೆ ಮನ್ನಣೆ ಸಿಕ್ಕಿತ್ತು. ಭಾರತದ ಪ್ರಾಚೀನ ಕಲೆ ಯೋಗಕ್ಕೆ ಅಂತರಾಷ್ಟ್ರೀಯ ಮಾನ್ಯತೆ ದೊರೆತಿತ್ತು. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಪೈಕಿ 177 ರಾಷ್ಟ್ರಗಳು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಸ್ತಾವನೆಯನ್ನು ಬೆಂಬಲಿಸಿದ್ದವು. ಭಾರತದ ಪಾರಂಪರಿಕ ಕಲೆ ಯೋಗ ಕೇವಲ ದೈಹಿಕ ಅಷ್ಟೇ ಅಲ್ಲ ಮಾನಸಿಕ ಆರೋಗ್ಯದಲ್ಲೂ ಪ್ರಾಮುಖ್ಯತೆ ಪಡೆದಿದೆ ಎಂಬುದನ್ನು ಮನಗಂಡ ವಿಶ್ವಸಂಸ್ಥೆ ಜೂನ್ 21ನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಣೆ ಮಾಡಿತ್ತು. ಯೋಗ ಜೀವನದ ಎಲ್ಲ ಹಂತಗಳಲ್ಲೂ ಸಾಮರಸ್ಯವನ್ನು ತೆರೆದಿಡುತ್ತದೆ. ಅನೇಕ ಜೀವನಶೈಲಿ ಸಂಬಂಧಿತ ಅಸ್ವಸ್ಥತೆಗಳ ನಿವಾರಣೆ, ರೋಗ ನಿವಾರಣೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯಂತ ಸಹಕಾರಿಯಾಗಿದೆ.

ಆಯುಷ್ ಸಚಿವಾಲಯ 2015ರ ಜೂನ್ 21ರಂದು ಮೊದಲ ಅಂತರಾಷ್ಟ್ರೀಯ ಯೋಗ ದಿನವನ್ನು ನವದೆಹಲಿಯ ರಾಜಪಥದಲ್ಲಿ ಯಶಸ್ವಿಯಾಗಿ ಆಯೋಜನೆ ಮಾಡಿತ್ತು. ಆ ಸಮಾರಂಭ ಎರಡು ವಿಶ್ವ ಗಿನ್ನಿಸ್ ದಾಖಲೆಗಳಿಗೂ ಸಾಕ್ಷಿಯಾಗಿತ್ತು. ಒಂದೇ ವೇದಿಕೆಯಲ್ಲಿ ಅತಿ ಹೆಚ್ಚು ಅಂದ್ರೆ 35,985 ಮಂದಿ ಯೋಗಾಸನ ಮಾಡುವ ಮೂಲಕ ದಾಖಲೆ ಸೃಷ್ಟಿಸಿದ್ರು. ಜೊತೆಗೆ ಏಕೈಕ ಯೋಗ ಕಾರ್ಯಕ್ರಮದಲ್ಲಿ 84 ರಾಷ್ಟ್ರಗಳ ಯೋಗಪಟುಗಳು ಪಾಲ್ಗೊಂಡಿದ್ದು ಕೂಡ ವಿಶೇಷ. ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಯೋಗದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯ್ತು. ವಿವಿಧ ಆಸನಗಳನ್ನು ಪ್ರದರ್ಶಿಸಿದ ಕೋಟ್ಯಾಂತರ ಮಂದಿ ಯೋಗದ ಮಹತ್ವವನ್ನು ಸಾರಿದ್ದರು.

ಭಾರತದ ಅತ್ಯಂತ ಪುರಾತನ ಕಲೆ ಯೋಗ ಈಗ ಆರೋಗ್ಯ ಹಾಗೂ ಉತ್ತಮ ಬದುಕಿನ ಮೂಲಮಂತ್ರವಾಗಿದೆ. ಮನೋದೈಹಿಕ ಕಾಯಿಲೆಗಳನ್ನು ನಿಯಂತ್ರಿಸಲು ಯೋಗ ಸಹಕಾರಿ ಎಂಬುದನ್ನು ಈಗಾಗ್ಲೇ ಸಾಬೀತಾಗಿದೆ. ಜಗತ್ತಿನ ವಿವಿಧ ರಾಷ್ಟ್ರಗಳ ವಿಜ್ಞಾನಿಗಳು ಹಾಗೂ ಸಂಶೋಧಕರು ಇದಕ್ಕೆ ಪುರಾವೆ ಒದಗಿಸಿರುವುದರಿಂದ ಯೋಗ ಇಡೀ ವಿಶ್ವದ ಗಮನ ಸೆಳೆದಿದೆ. ಜನಪ್ರಿಯತೆಯ ಜೊತೆಜೊತೆಗೆ ಯೋಗ ಜನರ ಆರೋಗ್ಯಕ್ಕೆ ಪೂರಕವಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇದೀಗ ಎರಡನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹತ್ತಿರವಾಗ್ತಿದೆ. 2016ರ ಜೂನ್ 21 ರಂದು ಜಗತ್ತಿನಾದ್ಯಂತ ಎರಡನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಇದಕ್ಕೆ ಸಿದ್ಧತೆಗಳು ಕೂಡ ಭರದಿಂದ ಸಾಗಿವೆ.

ಇದನ್ನೋ ಓದಿ...

1.ರೈತರಿಗೆ ನೆರವಾಗಲಿದೆ ವಿದ್ಯಾರ್ಥಿಗಳ ಆವಿಷ್ಕಾರ

2.ಆಹಾರೋದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಯನಕ್ಕೆ ನಾಂದಿ ಹಾಡಿದ ರಾಜು ಭೂಪತಿ

3.ಹೈ-ಫೈ ಸ್ಪಾದಲ್ಲಿ ಮೆರುಗಲಿದೆ ಕೈ ಕಾಲುಗಳು