ಹ್ಯಾಪಿ ಬರ್ತ್‍ಡೇ ಬಿಡಿ, ಕನ್ನಡದಲ್ಲಿ ಹುಟ್ಟುಹಬ್ಬದ ವಿಶ್ ಮಾಡಿ..!

ವಿಶಾಂತ್​​

ಹ್ಯಾಪಿ ಬರ್ತ್‍ಡೇ ಬಿಡಿ, ಕನ್ನಡದಲ್ಲಿ ಹುಟ್ಟುಹಬ್ಬದ ವಿಶ್ ಮಾಡಿ..!

Sunday April 03, 2016,

2 min Read

ಜನುಮದಿನವನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸುತ್ತಾರೆ. ಹೊಸ ಬಟ್ಟೆ, ಹಲವು ಬಗೆಯ ಉಡುಗೊರೆಗಳು, ಕೇಕ್ ಕತ್ತರಿಸಿ, ಸಿಹಿ ಹಂಚಿ ಮಕ್ಕಳು ಆಚರಿಸಿದರೆ... ಹೊಸ ಜಾಗಗಳಿಗೆ ಟ್ರಿಪ್ ಹೋಗಿ ಪಾರ್ಟಿ ಮಾಡುವ ಮೂಲಕ ಯುವಕರು ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುತ್ತಾರೆ. ಹೀಗೆ ಯಾರೇ ಹುಟ್ಟುಹಬ್ಬ ಆಚರಿಸಿಕೊಂಡರೂ ಪ್ರತಿ ವರ್ಷ ಹೊಸತನದಿಂದ ಕೂಡಿರುತ್ತದೆ. ಹೊಸ ರೀತಿಯ ಆಚರಣೆಗಳು ನಡೆಯುತ್ತವೆ. ಸಪ್ರ್ರೈಸ್‍ಗಳು ಸಿಗುತ್ತವೆ. ವಯಸ್ಸೂ ಸೇರಿದಂತೆ ಪ್ರತಿ ವರ್ಷದ ಆಚರಣೆ ಕೂಡ ಬದಲಾಗುತ್ತಾ ಸಾಗುತ್ತದೆ. ಆದರೆ ಒಂದನ್ನು ಬಿಟ್ಟು!

image


ಹೌದು, ಅದೇ ಹುಟ್ಟುಹಬ್ಬದಂದು ಕೇಕ್ ಕತ್ತರಿಸುವಾಗ ಹಾಡುವ `ಹ್ಯಾಪಿ ಬರ್ತ್‍ಡೇ ಟೂ ಯೂ' ಗೀತೆ. ಕ್ಯಾಂಡಲ್ ಆರಿಸಿ, ಕೇಕ್ ಕತ್ತರಿಸಿ ಸುತ್ತಮುತ್ತ ನಿಂತ ಆಪ್ತರಿಗೆ ಸಿಹಿ ತಿನಿಸುವವರೆಗೂ ಈ ಗೀತೆ ಮತ್ತು ಚಪ್ಪಾಳೆಯ ಸದ್ದು ಸಾಗುತ್ತದೆ. ಅದಕ್ಕೆ ಇಂಗ್ಲೀಷ್ ಬರಲೇಬೇಕು ಅಂತೇನಿಲ್ಲ. ಸುಲಭದ `ಹ್ಯಾಪಿ ಬರ್ತ್‍ಡೇ ಟೂ ಯೂ' ಎಂಬ ನಾಲ್ಕು ಪದಗಳು ಬಂದರೆ ಸಾಕು. ಹೀಗಾಗಿಯೇ ನಗರಗಳಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ಹುಟ್ಟುಹಬ್ಬಗಳ ಆಚರಣೆಯಂದು ಇದೇ ಪದಗಳ ಬಳಕೆಯಾಗುತ್ತದೆ. ಇದಕ್ಕೆ ಪರ್ಯಾಯ ಏನೂ ಇಲ್ಲವಾ? ಕನ್ನಡಿಗರಾದ ನಾವು ಇಂಗ್ಲೀಷ್‍ನಲ್ಲಿ ಏಕೆ ಜನುಮಗೀತೆ ಹಾಡಬೇಕು? ಹೀಗೆ ಹಲವು ಪ್ರಶ್ನೆಗಳು ಹಲವು ದಶಕಗಳಿಂದ ಕಾಡುತ್ತಿದ್ದರೂ, ಅದಕ್ಕೆ ಉತ್ತರ ಸಿಕ್ಕಿರಲಿಲ್ಲ. ಆದರೆ ಇನ್ನುಮುಂದೆ ನೀವು ಆಂಗ್ಲಭಾಷೆ ಬಳಸದೆಯೂ ಹುಟ್ಟುಹಬ್ಬ ಆಚರಿಸಬಹುದು. ಯಾಕೆಂದರೆ, ಕನ್ನಡದಲ್ಲೂ ಒಂದು ಜನುಮಗೀತೆ ಜೀವ ಪಡೆದಿದೆ.

image


1950ರಿಂದ 1990ರ ದಶಕದವರೆಗೆ ಸುಮಾರು 40 ವರ್ಷಗಳ ಕಾಲ 200 ಕನ್ನಡ ಸೇರಿದಂತೆ 400ಕ್ಕೂ ಹೆಚ್ಚು ತಮಿಳು, ತೆಲುಗು, ಮಲಯಾಳಂ ಚಿತ್ರಗಳಿಗೆ ಸಂಗೀತ ನೀಡಿರುವ ರಾಜನ್- ನಾಗೇಂದ್ರ ಸಹೋದರರಲ್ಲೊಬ್ಬರಾದ ರಾಜನ್ ಅವರು ಈ ಕನ್ನಡ ಜನುಮಗೀತೆಗೆ ಸಂಗೀತ ನೀಡಿದ್ದಾರೆ. ಯುವ ಸಾಹಿತಿ ಶ್ರೀಧರ್ ಕೋಟೇಶ್ವರ್ ಈ ಜನುಮಗೀತೆಯನ್ನು ರಚಿಸಿದ್ದು, ರಾಜನ್ ಅವರ `ಸಪ್ತಸ್ವರಾಂಜಲಿ ಸಂಗೀತ ಶಾಲೆಯ' ಸುಮಾರು 25 ಮಂದಿ ವಿದ್ಯಾರ್ಥಿಗಳೇ ಈ ಗೀತೆಗೆ ಕಂಠದಾನ ಮಾಡಿದ್ದಾರೆ.

ಇದನ್ನು ಓದಿ: ‘ಸಂತೃಪ್ತಿ’ಯಲ್ಲಿ ತೃಪ್ತಿಯಿಂದ ಉತ್ತರ ಕರ್ನಾಟಕದ ತಿನಿಸುಗಳನ್ನು ಸವಿಯಿರಿ....

ಸಂತಸದ ಜನುಮದಿನ ಆನಂದ ತುಂಬಲಿ ಈ ಸುದಿನ

ಆಯುರಾರೋಗ್ಯ ಭಾಗ್ಯಗಳು ನಿನದಾಗಿರಲಿ ಅನುದಿನ

ನಲ್ಮೆಯ ಶುಭಾಷಯ, ಹಾರ್ದಿಕ ಶುಭಾಷಯ

ನಿನಗೆ ನಮ್ಮಯ ಶುಭಾಷಯ...

ಕನಸುಗಳು ನನಸಾಗಿ ಜೀವನ ಜೇನಾಗಲಿ

ಜ್ಞಾನ, ಅಭಿಮಾನ, ವಿದ್ಯ, ವಿನಯತನ ಆರತಿಯ ಬೆಳಗಲಿ

ಗುರುಗಳ ಶುಭಾಷಯ, ಹಿರಿಯರ ಶುಭಾಷಯ

ನಿನಗೆ ನಮ್ಮಯ ಶುಭಾಷಯ...

ಸುಗುಣಗಳು ಮಿನುಗುತಲಿ ಬಾಳು ಧೃವತಾರೆಯಾಗಲಿ

ಶಾಂತಿ ಸನ್ನಡತೆ ನೀತಿ ನಿಯಮಗಳು ನಿನ್ನಲ್ಲಿ ಆದರ್ಶವಾಗಲಿರಲಿ

ತಾಯಿಯ ಶುಭಾಷಯ, ತಂದೆಯ ಶುಭಾಷಯ

ನಿನಗೆ ನಮ್ಮಯ ಶುಭಾಷಯ...

ತನುಮಗಳು ಮುದ ನೀಡಿ, ನೆಮ್ಮದಿಯು ನೆಲೆಸಲಿ

ನಲಿವು ಮೊಗ್ಗಾಗಿ, ಒಲವು ಹೂವಾಗಿ ಬಾಳೆಲ್ಲ ಸೌಗಂಧ ತುಂಬಿರಲಿ

ಆಪ್ತರ ಶುಭಾಷಯ, ಮಿತ್ರರ ಶುಭಾಷಯ

ನಿನಗೆ ನಮ್ಮಯ ಶುಭಾಷಯ...

ಹೀಗೆ ಈ ಗೀತೆ ಒಟ್ಟು ನಾಲ್ಕು ವಾಕ್ಯವೃಂದಗಳನ್ನೊಳಗೊಂಡಿದೆ. ಈಗಾಗಲೇ `ಜನುಮದ ಗೀತೆ, ಹುಟ್ಟುಹಬ್ಬದ ಸಂಭ್ರಮ' ಹೆಸರಿನಡಿ ಈ ಗೀತೆಯ ಸೀಡಿ ಕೂಡ ಬಿಡುಗಡೆಗೊಂಡಿದೆ. `ಪ್ರತಿದಿನ ಒಂದಲ್ಲಾ ಒಂದು ಮನೆಯಲ್ಲಿ, ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುತ್ತಾರೆ. ಯಾರ ಹುಟ್ಟುಹಬ್ಬವಾದರೂ, ಹ್ಯಾಪಿ ಬರ್ತ್‍ಡೇ ಗೀತೆಯನ್ನೇ ಹಾಡುತ್ತೇವೆ. ಹೀಗಾಗಿಯೇ ಕನ್ನಡಿಗರಾದ ನಾವು ಈ ರೀತಿ ಕನ್ನಡದ ಜನುಮಗೀತೆ ಹಾಡುತ್ತಾ, ಅಚ್ಚ ಕನ್ನಡದಲ್ಲೇ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಕನ್ನಡತನವನ್ನು ಸಾರಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಹಾಗೆ, ಬಾಲ್ಯದಿಂದಲೇ ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಪ್ರೀತಿ, ಗೌರವ ಮೂಡಿಸಬಹುದು' ಎಂದು `ಜನುಮದ ಗೀತೆ' ಕುರಿತು ಮಾಹಿತಿ ನೀಡುತ್ತಾರೆ ಹಿರಿಯ ಸಂಗೀತ ನಿರ್ದೇಶಕ ರಾಜನ್.

ಈ ವರ್ಷ ಇನ್ನೂ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾದವರು, ಈ ಬಾರಿ ಕನ್ನಡದ ಜನುಮಗೀತೆಯನ್ನು ಬಳಸುವ ಮೂಲಕ ಹುಟ್ಟುಹಬ್ಬಕ್ಕೆ ಮತ್ತಷ್ಟು ಬಣ್ಣ ಮತ್ತು ವಿಶೇಷತೆ ತುಂಬಬಹುದು. ಈಗಾಗಲೇ ದಿನಾಂಕ ಮುಗಿದವರು ತಲೆಕೆಡಿಸಿಕೊಳ್ಳಬೇಡಿ, ಮುಂದಿನ ದಿನಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವವರಿಗೆ ಈ ಗೀತೆ ಹಾಡಿ.

ಇದನ್ನು ಓದಿ:

1. ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬಂದಿದೆ ಈಸಿ `ಡ್ರಿವನ್'

2. ಹೋಟೆಲ್ ಒಂದರ ಲೆಕ್ಕಾಚಾರ, ಇಲ್ಲಿ ಎಲ್ಲವೂ ಕೆಜಿ ಲೆಕ್ಕದಲ್ಲೇ..!

3. ಸ್ಟಾರ್ಟ್​ಅಪ್ ಉದ್ಯಮಿಗಳಿಗೆ ಸ್ಫೂರ್ತಿ ನೀಡಬಲ್ಲ ಸ್ಪೋರ್ಟ್ಸ್​​​ಮನ್ ಸ್ಪಿರಿಟ್.. !