ಮೈಸೂರು ಸ್ಯಾಂಡಲ್ ಸೋಪ್​​ನ ಪರಿಮಳಕ್ಕೆಶತಮಾನದ ಇತಿಹಾಸ

ಎನ್​.ಎಸ್​. ರವಿ

ಮೈಸೂರು ಸ್ಯಾಂಡಲ್ ಸೋಪ್​​ನ ಪರಿಮಳಕ್ಕೆಶತಮಾನದ ಇತಿಹಾಸ

Thursday January 07, 2016,

4 min Read

ಭಾರತದಲ್ಲಿ ಐಎಸ್ಐ ಪ್ರಮಾಣಿತ ಮೊದಲ ಸಾಬೂನು ಎಂಬ ಹೆಗ್ಗಳಿಕೆ ಮೈಸೂರು ಸ್ಯಾಂಡಲ್ ಸೋಪ್​​ಗೆ ಸಲ್ಲುತ್ತದೆ. ದೇಶ, ವಿದೇಶಗಳಲ್ಲಿ ಕಂಪು ಸೂಸಿದ, ಕರ್ನಾಟಕದ ಹೆಮ್ಮೆಯೆನಿಸಿಕೊಂಡ ನಮ್ಮದೇ ಸಾಬೂನು ಇದು. ಮೈಸೂರು ಸ್ಯಾಂಡಲ್, ಸಾಬೂನಿನ ಈ ಸುಗಂಧಕ್ಕೆ 100 ವರ್ಷದ ಸಂಭ್ರಮ ಹತ್ತಿರದಲ್ಲೇ ಇದೆ. 99 ವರುಷಗಳಿಂದ ಮನೆ ಮನೆಗಳಲ್ಲಿ ಕಂಪು ತುಂಬಿರುವ ಮೈಸೂರು ಸ್ಯಾಂಡಲ್ ಎಂಬ ಈ 'ನಮ್ಮ ಸೋಪ್‌'ನ ಪರಿಮಳದ ಕತೆ ನಿಜಕ್ಕೂ ಅದ್ಭುತ.

image


ಭಾರತ ಪ್ರವಾಸಕ್ಕೆ ಬರುವ ಅನೇಕ ವಿದೇಶಿಗರು ಕರ್ನಾಟಕಕ್ಕೆ ಬರಲು ಕಾರಣ ಮೈಸೂರು. ಎಷ್ಟೋ ವಿದೇಶಿಗರು ಮೈಸೂರು ಸ್ಯಾಂಡಲ್ ಸಾಬೂನು ಖರೀದಿಸಲೆಂದೇ ಇಲ್ಲಿಗೆ ಬಂದ ಉದಾಹರಣೆಗಳಿವೆ. ವಿದೇಶಗಳಲ್ಲೂ ಈ ಸೋಪ್​ನ ಪರಿಮಳ ಅವರನ್ನು ಭಾರತಕ್ಕೆ ಕೈ ಬೀಸಿ ಕರೆಯುತ್ತಿದೆ. ಯಾಕಂದ್ರೆ, ಈ ಸಾಬೂನು ಭಾರತದಲ್ಲಿ ಮಾತ್ರ ಮಾರಟಕ್ಕೆ ಸಿಗುವುದೇ ಇದಕ್ಕೆ ಕಾರಣ.

ಮೈಸೂರ್​ ಸ್ಯಾಂಡಲ್​​ ಇತಿಹಾಸ

1916ರಲ್ಲಿ ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿನ ಅರಣ್ಯ ಇಲಾಖೆಗೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಅವರು ಭೇಟಿ ನೀಡಿದರು. ಅಲ್ಲಿ ಸಂಗ್ರಹಿಸಿಟ್ಟಿದ್ದ ಶ್ರೀಗಂಧ ಮರದ ತುಂಡುಗಳ ರಾಶಿಯನ್ನು ಕಂಡರು. ಅವರಿಗೆ, ಆ ಮರಗಳಿಂದ ಗಂಧದ ಎಣ್ಣೆ ತೆಗೆಯಬಾರದೇಕೆ ಎಂಬ ಆಲೋಚನೆ ಬಂದಿತು. ಆಗ ದಿವಾನರಾಗಿದ್ದ ಸರ್‌.ಎಂ.ವಿಶ್ವೇಶ್ವರಯ್ಯ ಹಾಗೂ ಸರ್‌ ಆಲ್‌ಫ್ರೆಡ್‌ ಚಾಟರ್‌ಟನ್‌ ಜತೆಗೆ ಚರ್ಚಿಸಿದ ಮಹಾರಾಜರು, ಶ್ರೀಗಂಧದ ಎಣ್ಣೆ ತೆಗೆಯುವುದಕ್ಕೆ ಸಂಬಂಧಿಸಿದಂತೆ ಯೋಜನೆ ಸಿದ್ಧಪಡಿಸಲು ಸೂಚಿಸಿದರು. ಅದು ಶ್ರೀಗಂಧದ ಎಣ್ಣೆ ತಯಾರಿಕೆಗೆ, ನಂತರ ಮೈಸೂರು ಸ್ಯಾಂಡಲ್‌ ಸೋಪ್ ಜನ್ಮತಳೆಯಲು ಕಾರಣವಾಯ್ತು. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌’ನ (ಐಐಎಸ್‌ಸಿ) ವಿಜ್ಞಾನಿಗಳು ಗಂಧದ ಎಣ್ಣೆ ಜೊತೆಗೆ ಸಾಬೂನು ತಯಾರಿಸಿದ್ದರು.

image


1917ರಲ್ಲಿ ಮೈಸೂರಿನ ಆಗಿನ ಅರದನಹಳ್ಳಿ, ಈಗಿನ ಅಶೋಕಪುರಂ ಶ್ರೀಗಂಧದ ಎಣ್ಣೆ ಕಾರ್ಖಾನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್‌ ಆರಂಭಿಸಿದರು. 36 ಎಕರೆಗಳ ವಿಶಾಲವಾದ ಪ್ರದೇಶದಲ್ಲಿ ಇರುವ ಶ್ರೀಗಂಧದ ಎಣ್ಣೆ ಕಾರ್ಖಾನೆಯಲ್ಲಿ ಈಗಲೂ ಶ್ರೀಗಂಧದ ಎಣ್ಣೆ, ಅಗರಬತ್ತಿ ಹಾಗೂ ಧೂಪವನ್ನು ತಯಾರಿಸಲಾಗುತ್ತದೆ.

ಕಾರ್ಖಾನೆ ಆರಂಭಿಸಲು ಪ್ರೇರಣೆ

1918ರಲ್ಲಿ ಫ್ರಾನ್ಸ್‌ನಿಂದ ಬಂದ ಅತಿಥಿಗಳು, ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಅಪರೂಪದ ಕಾಣಿಕೆ ನೀಡಿದರು. ಯಾವುದು ಆ ಅಪರೂಪದ ಕಾಣಿಕೆ ಎಂದರೆ, ಅವು ಅಮೋಘವಾದ ಸುವಾಸನೆಯ ಸಾಬೂನು ಬಿಲ್ಲೆಗಳಾಗಿದ್ದವು. ಅಚ್ಚರಿಯ ಸಂಗತಿ ಏನೆಂದರೆ, ಭಾರತದಲ್ಲಿ ಸಿದ್ಧಪಡಿಸಿದ ಶ್ರೀಗಂಧ ಎಣ್ಣೆಯನ್ನು ಬಳಸಿಯೇ ಪರಿಮಳದ ಆ ಸಾಬೂನು ಬಿಲ್ಲೆಗಳನ್ನು ಫ್ರಾನ್ಸ್‌ನಲ್ಲಿ ತಯಾರಿಸಲಾಗಿತ್ತು..! ಆಗ ಮಹಾರಾಜರು, ‘ನಾವೂ ಏಕೆ ಸಾಬೂನು ತಯಾರಿಸಬಾರದು?’ ಎಂದು ಆಲೋಚಿಸಿದರು. ಅದರ ಫಲವೇ ಮೈಸೂರು ಸ್ಯಾಂಡಲ್‌ ಸಾಬೂನು ಜನ್ಮತಳೆಯಿತು.

image


ಮೈಸೂರ್​ ಸ್ಯಾಂಡಲ್​​ ಉಳಿದ ಸಾಬೂನುಗಳಂತೆ ಸಾಧಾರಣವಾದ ಆಕಾರದಲ್ಲಿ ಇರಬಾರದು ಎಂಬ ಆಲೋಚನೆಯಲ್ಲಿ ತುಸು ಭಿನ್ನವಾದ ಅಚ್ಚು ತಯಾರಿಸಿದರು. ಹೊರಗಿನ ಗಾಳಿ, ಬಿಸಿಲು, ತೇವಾಂಶ, ತಾಪಕ್ಕೆ ಬಣ್ಣಗೆಡದಂತೆ, ಸಾಬೂನು ದೀರ್ಘ ಕಾಲ ಶ್ರೀಗಂಧದ ಪರಿಮಳವನ್ನು ಕಳೆದುಕೊಳ್ಳದಂತೆ ಭದ್ರವಾಗಿರಿಸಲು ವಿಶಿಷ್ಟವಾದ ಹೊರಕವಚವನ್ನೂ ತಯಾರಿಸಲಾಯಿತು. ಹೀಗೆ ಬಹಳ ಮುತುವರ್ಜಿಯಿಂದ ತಯಾರಾದ ‘ಮೈಸೂರು ಸ್ಯಾಂಡಲ್‌ ಸಾಬೂನು’ 1918ರಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿತು.

ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಮೈಸೂರು ಸ್ಯಾಂಡಲ್ ಸೋಪ್ ಭಾರತದಲ್ಲಿರುವ ಅತೀ ದೊಡ್ಡ ಸೋಪ್ ನಿರ್ಮಾಣ ಕಂಪನಿಗಳಲ್ಲೊಂದಾಗಿದೆ. ಮೈಸೂರ್ ಸ್ಯಾಂಡಲ್ ಸೋಪ್ ನಿರ್ಮಿಸುತ್ತಿರುವ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಕಂಪನಿ, ಕರ್ನಾಟಕ ರಾಜ್ಯ ಸರ್ಕಾರದ ಸಂಸ್ಥೆ.

ಸೋಪ್ ಮಾತ್ರವಲ್ಲದೆ ಇಲ್ಲಿ ಡಿಟರ್ಜೆಂಟ್ ಪೌಡರ್, ಕ್ಲೀನಿಂಗ್ ಆಯಿಲ್, ಶ್ರೀಗಂಧದ ಕಡ್ಡಿ, ಟಾಲ್ಕಂ ಪೌಡರ್, ಬೇಬಿ ಆಯಿಲ್ ಮೊದಲಾದವುಗಳನ್ನು ಕಂಪನಿ ನಿರ್ಮಿಸುತ್ತಿದೆ. ಮೈಸೂರ್ ಸ್ಯಾಂಡಲ್ಸ್ ಎಂಬುದು ಇವೆಲ್ಲದರ ಬ್ರಾಂಡ್ ನೇಮ್. ಹಲವಾರು ಉತ್ಪನ್ನಗಳನ್ನು ಕಂಪನಿ ನಿರ್ಮಿಸುತ್ತಿದ್ದರೂ ಹೆಚ್ಚಾಗಿ ಖರ್ಚಾಗುತ್ತಿರುವ ಮೈಸೂರ್ ಸ್ಯಾಂಡಲ್ ಸೋಪ್ ಆಗಿದೆ. ಒಟ್ಟು ಮಾರಾಟದ ಶೇ. 40 ರಷ್ಟು ಲಾಭ ಮೈಸೂರು ಸ್ಯಾಂಡಲ್ ಸೋಪ್‌ನಿಂದಲೇ ಬರುತ್ತಿದೆ.

ಸಾಬೂನು ಒಂದರ ಬೆಲೆ 15 ರೂಪಾಯಿಯಿಂದ ಆರಂಭವಾಗುತ್ತಿದೆ. 125 ಗ್ರಾಂ ಪ್ಯಾಕೆಟ್‌ನ ಬೆಲೆ ರೂಪಾಯಿ 15. ಮೈಸೂರು ಸ್ಯಾಂಡಲ್, ಸ್ಯಾಂಡಲ್ ಗೋಲ್ಡ್ ಮೊದಲಾದವುಗಳೊಂದಿಗೆ ರೂಪಾಯಿ 750 ಬೆಲೆಯ ಪ್ರೀಮಿಯಂ ಮಿಲೇನಿಯಂ ಬ್ರಾಂಡ್ ಸೋಪ್‌ಗಳನ್ನೂ ಸಂಸ್ಥೆ ನಿರ್ಮಿಸುತ್ತಿದೆ. ಇಲ್ಲಿ ತಯಾರಾಗುವ ಸೋಪ್‌ಗಳು ಹೆಚ್ಚಾಗಿ ವಿದೇಶಗಳಿಗೆ ರಫ್ತಾಗುತ್ತವೆ. ಯುರೋಪ್, ಅಮೆರಿಕ, ಗಲ್ಫ್ ರಾಷ್ಟ್ರಗಳಿಗೆ ಹೆಚ್ಚು ಸಾಬೂನುಗಳು ರಫ್ತಾಗುತ್ತವೆ.

image


ಪ್ರತೀ ವರ್ಷ ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀಕರಿಸಿ ಸೋಪ್ ಮೇಳಗಳೂ ನಡೆಯುತ್ತಿರುತ್ತವೆ. ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಬೆಳೆದು ಬಂದ ಈ ಕಂಪನಿಗೆ ಸರ್ಕಾರದ ಸಹಾಯ ಹಸ್ತ ಸಿಕ್ಕಿದ್ದು ಬಹು ದೊಡ್ಡ ಉದ್ಯಮವಾಗಿ ಬೆಳೆಯಲು ಕಾರಣವಾಯಿತು..

ಜನರ ಪ್ರೀತಿ ವಿಶ್ವಾಸದಿಂದಲೇ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಆರಂಭಿಸಿದ ಸ್ಪೆಷಲ್ ಕಿಟ್ ಯೋಜನೆ ಯಶಸ್ವಿಯಾಗಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಸೋಪ್, ಶ್ರೀಗಂಧದ ತೈಲ, ಟಾಲ್ಕಂ ಪೌಡರ್ ಇರುವ ಸ್ಪೆಷಲ್ ಕಿಟ್ ಗಳನ್ನು ಪೂರೈಸುವ ಮೂಲಕ ಮೈಸೂರ್ ಸ್ಯಾಂಡಲ್ ಸೋಪ್ ಅಪಾರ ಜನಮನ್ನಣೆಯನ್ನೂ ಗಳಿಸಿತು. ಆದರೂ ಮಾರುಕಟ್ಟೆಯಲ್ಲಿನ ಪೈಪೋಟಿಯನ್ನು ಎದುರಿಸಲು ಪ್ರಸ್ತುತ ಸಂಸ್ಥೆಗೆ ಕಠಿಣ ಶ್ರಮ ಪಡಬೇಕಾಗಿ ಬಂತು. 2006ರ ನಂತರ ಬ್ರಾಂಡಿಂಗ್‌ನತ್ತ ಸಂಸ್ಥೆ ಹೆಚ್ಚು ಗಮನ ಹರಿಸಿತು. ಆ ವರ್ಷವೇ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯನ್ನು ಮೈಸೂರ್ ಸ್ಯಾಂಡಲ್ಸ್‌ನ ಬ್ರಾಂಡ್ ಅಂಬಾಸಿಡರ್‌ನ್ನಾಗಿ ಮಾಡಲಾಯಿತು. ಪ್ಯಾಕೆಟ್‌ನಲ್ಲಿ ನವ-ನವೀನತೆಯನ್ನು ಮಾಡುತ್ತಿದ್ದರೂ ಈಗಲೂ ಮೈಸೂರು ಸೋಪ್ ಪೊಟ್ಟಣದೊಳಗೆ ಮಾತ್ರ ಅದೇ ಸುಗಂಧ ಮತ್ತು ವಿಶ್ವಾಸ ಬೆರೆತಿರುತ್ತದೆ.

ನಿರೀಕ್ಷೆಯಂತೆ ನಡೆದರೆ ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ವಿದೇಶಗಳಲ್ಲೂ ತನ್ನ ಪರಿಮಳ ಬೀರಲಿದೆ. ಕರ್ನಾಟಕ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜಂಟ್ ಲಿಮಿಟೆಡ್​​ (ಕೆಎಸ್‌ಡಿಎಲ್) ತನ್ನ ವ್ಯವಹಾರವನ್ನು ವಿದೇಶಕ್ಕೂ ವಿಸ್ತರಿಸಲು ಅನುಮತಿ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಕೋರಿದೆ. ಆದರೆ, ಈ ಹಿಂದೆಯೂ ಹಲವು ಬಾರಿ ಅನುಮತಿ ಕೇಳಲಾಗಿತ್ತು. ಆದರೆ, ಸರ್ಕಾರ ನಿರಾಕರಿಸಿತ್ತು.

2015ರ ಬೆಳವಣಿಗೆ

ಶ್ರೀಗಂಧದ ಮರಗಳ ಸರಬರಾಜಿನ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಶ್ರೀಗಂಧ ಬೆಳೆಸಿ ಸಿರಿವಂತರಾಗಿ ಎನ್ನುವ ಕಾರ್ಯಕ್ರಮ ಜಾರಿಗೆ ಬಂತು. "ಈ ಮೂಲಕ ಶ್ರೀಗಂಧದ ನಾಡು–ಚಂದನದ ಬೀಡು ಎಂದು ಮತ್ತೆ ಸಾಬೀತಾಗಬೇಕು ಎನ್ನುವ ಗುರಿಯೂ ಇದೆ’ ಎನ್ನುತ್ತಾರೆ ಕೆಎಸ್‌ಡಿಎಲ್‌ ಅಧ್ಯಕ್ಷೆ ವೆರೊನಿಕಾ ಕರ್ನೇಲಿಯೊ.

ಹೀಗೆ 97 ವರ್ಷಗಳ ಹಿಂದೆ ಶುರುವಾದ ‘ಮೈಸೂರು ಸ್ಯಾಂಡಲ್‌ ಸಾಬೂನು’ ಯಾತ್ರೆ, ಈಗಲೂ ಮುಂದುವರಿದಿದೆ. ಮೊದಲಿನಷ್ಟು ಇಲ್ಲದೇ ಇದ್ದರೂ ಸಹ ಆ ಶ್ರೀಗಂಧ ಪರಿಮಳದ ಸಾಬೂನು, ಈಗಲೂ ಗರಿಮೆ, ಜನಪ್ರಿಯತೆ ಉಳಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಬಹಳ ವೈವಿಧ್ಯಮಯವಾದ ನೂರಾರು ಸಾಬೂನುಗಳಿದ್ದರೂ ಮೈಸೂರ್‌ ಸ್ಯಾಂಡಲ್‌ ಸೋಪ್‌ ಬಳಸುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿಯೇ ಇದೆ.

image


ಈಗಲೂ ಕೂಡಾ ಸಾಬೂನಿನ ಗುಣಮಟ್ಟ ಹೆಚ್ಚಿಸುವ, ಬೇರೆಯದೇ ಆಕಾರ, ಬಣ್ಣ, ಸುವಾಸನೆ ನೀಡುವ ವಿಚಾರದಲ್ಲಿ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ‘ಮೈಸೂರು ಮಿಲೆನಿಯಂ’ ಎಂಬ ವಿಶೇಷ ಗುಣಮಟ್ಟದ ಶ್ರೀಗಂಧ ಪರಿಮಳದ ಸಾಬೂನನ್ನು ತಿಂಗಳುಗಳ ಹಿಂದೆಯೇ ರೂಪಿಸಲಾಗಿದ್ದು, 720ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಶ್ರೀಗಂಧದ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ ತಯಾರಿಸಲಾಗುತ್ತಿದೆ ಎನ್ನುತ್ತಾರೆ ಸಾಬೂನು ತಯಾರಿಕೆ ವಿಭಾಗದ ಮುಖ್ಯಸ್ಥರು.

ವಹಿವಾಟು

  • 2012-13 ರಲ್ಲಿ 322ಕೋಟಿ ರೂಪಾಯಿ- ಲಾಭ 21.74ಕೋಟಿ ರೂಪಾಯಿ
  • 20113-14ರಲ್ಲಿ 353 ಕೋಟಿ ರೂಪಾಯಿ,=ಲಾಭ 32.83ಕೋಟಿ ರೂಪಾಯಿ
  • 2014-15, 360ಕೋಟಿಯ ವಹಿಸಿವಾಟ

ಉತ್ಪಾದನೆ

  1. ವಾರ್ಷಿಕ 12 ಮೆಟ್ರಿಕ್ ಟನ್ ಉತ್ಪಾದನೆ
  2. ವಿದೇಶಕ್ಕೆ ಸಾಬೂನು ರಫ್ತಿನಿಂದ ಆದಾಯ 10 ರಿಂದ 12ಕೋಟಿ ರೂಪಾಯಿ
  3. ಸೋಪ್​ ಮಾರಾಟ ವರಮಾನ ವಾರ್ಷಿಕ ಶೇಕಡಾ 14ರ ಪ್ರಗತಿ
  4. ಮೈಸೂರು ಸ್ಯಾಂಡಲ್ ಗೋಲ್ಡ್ ಸಾಬೂನು ವಾರ್ಷಿಕ ಆದಾಯ ವೃದ್ಧಿ ಶೇಕಡಾ22 ವೃದ್ಧಿ.

ಅಯ್ಯೋ ಇದೇನಪ್ಪ ಮೈಸೂರು ಸ್ಯಾಂಡಲ್ ಸೋಪ್ ಕಥೆಯಲ್ಲಿ ಅಂಥಹ ವಿಶೇಷತೆಯೆನ್ನಿದೆ. ಹೊಸ ಉದ್ಯಮ ಆರಂಭಿಸುವವರು ಸದಾ ತಮ್ಮ ಸುತ್ತಮುತ್ತಲಿರುವ ಜನಪ್ರಿಯ ವಸ್ತುಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವಂತೆ ಒಂದು ಆಕಾರ ಅಥವಾ ಮಾದ್ಯಮ ಆಯ್ದುಕೊಂಡಲ್ಲಿ ಅದು ಜನರ ಮೆಚ್ಚುಗೆ ಗಳಿಸಲಿದೆ. ಮೈಸೂರು ಸ್ಯಾಂಡಲ್ ಸೋಪ್​ನಂತೆ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕು. ಆಗ ಮಾತ್ರ ಶತಮಾನಗಳೇ ಕಳೆದ್ರು. ಅದರ ಬೇಡಿಕೆ ಮಾತ್ರ ಕುಗ್ಗುವುದಿಲ್ಲ ಎಂಬುದಕ್ಕೆ ಮೈಸೂರ್​ ಸ್ಯಾಂಡಲ್​​ ಸಾಕ್ಷಿ.