ಮುಸ್ಲಿಂರು ನಿರ್ಮಿಸಿದ ರಾಮಮಂದಿರ!

ವಿಶಾಂತ್​​

ಮುಸ್ಲಿಂರು ನಿರ್ಮಿಸಿದ ರಾಮಮಂದಿರ!

Friday February 19, 2016,

2 min Read

ಭಾರತ ಅತ್ಯಂತ ಸಾಮರಸ್ಯ ರಾಷ್ಟ್ರ. ಹಿಂದುಗಳೇ ಹೆಚ್ಚಾಗಿದ್ದರೂ ಶತಮಾನಗಳಿಂದ ಮುಸ್ಲಿಂರು, ಕ್ರೈಸ್ತರು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಎಲ್ಲರೂ ಒಗ್ಗಟ್ಟಾಗಿ ಜೀವನ ಸಾಗಿಸುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ರಾಜಕೀಯ ಕಾರಣಗಳಿಂದ, ಕಾಣದ ಕೈಗಳ ಪಿತೂರಿ ಹಾಗೂ ಧರ್ಮಾಂದ ಮಂದಿಯಿಂದಾಗಿ ಕೋಮುಗಲಭೆಗಳೂ ನಡೆದಿವೆ. ಆದರೆ ಅಂತ ಘಟನೆಗಳನ್ನು ಮರೆಸುವ, ಏಕತೆ ಸಆರುವ, ಸರ್ವ ಧರ್ಮ ಸಮನ್ವಯತೆಯ ಕುರಿತು ಅರಿವು ಮೂಡಿಸುವ ಹಲವು ಘಟನೆಗಳಿಗೂ ಭಾರತ ಸಾಕ್ಷಿಯಾಗಿದೆ. ಅಂತದ್ದೇ ಒಂದು ಘಟನೆ ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ನಡೆದಿದೆ. ಇವತ್ತು ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಅಂತ ಬೊಬ್ಬೆ ಹೊಡೆಯುವ ಬುದ್ಧಿಜೀವಿಗಳಿಗೆ ಈ ಘಟನೆ ಕಪಾಳಮೋಕ್ಷ ಮಾಡಿದಂತಿದೆ.

image


ಅದು ಮಧ್ಯಪ್ರದೇಶದ ಖಡೇಕಲಾ ಗ್ರಾಮ

ಇದು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಖಡೇಕಲಾ ಗ್ರಾಮ. ಹಿಂದೂಗಳೇ ಹೆಚ್ಚಾಗಿರುವ ಈ ಗ್ರಾಮದಲ್ಲಿ ಸಉಮಾರು 80 ಮುಸ್ಲಿಂ ಕುಟುಂಬಗಳೂ ವಾಸಿಸುತ್ತಿವೆ. ವಿಶೇಷ ಅಂದ್ರೆ ಜಾತಿ ಅಥವಾ ಧರ್ಮಕ್ಕೆ ಸಂಬಂಧಿಸಿದಂತೆ ಈ ಗ್ರಾಮದಲ್ಲಿ ಹಿಂದು ಮತ್ತು ಮುಸ್ಲಿಂರ ನಡುವೆ ಜಗಳ, ಗಲಾಟೆ, ವೈಮನಸ್ಸು ನಡೆದಿಲ್ಲ. ಹಿಂದು – ಮುಸ್ಲಿಂ ಭಾಯಿ ಭಾಯಿ ಎಂಬಂತೆ ಒಂದೇ ಕುಟುಂಬದಂತೆ ವಾಸಿಸುತ್ತಿರುವುದು ಖಡೇಕಲಾ ಗ್ರಾಮದ ವಿಶೇಷತೆ. ಕೆಲ ತಿಂಗಳ ಹಿಂದೆ ಗ್ರಾಮದಲ್ಲಿ ಹಿಂದೂಗಳೆಲ್ಲ ಸೇರಿ ಶ್ರೀರಾಮ ಜಾನಕಿ ಮಂದಿರ ನಿರ್ಮಾಣಕ್ಕೆ ಮುಂದಾದರು. ಈ ಕುರಿತು ಮುಸ್ಲಿಂರೊಂದಿಗೂ ಚರ್ಚೆ ನಡೆಸಿದರು. ಎಲ್ಲಿ ನಿರ್ಮಿಸುವುದು ಎಂಬ ಪ್ರಶ್ನೆ ಮೂಡಿದಾಗ, ಒಂದು ಆಯಕಟ್ಟಿನ ಜಾಗ ಅವರ ಕಣ್ಣಿಗೆ ಬಿತ್ತು. ಗ್ರಾಮಕ್ಕೆ ದೂರವಾಗದ, ಓಡಾಡಲು ಸಮಸ್ಯೆಯಾಗದ, ಸೌಲಭ್ಯಗಳಿರುವ ಒಳ್ಳೆಯ ಜಾಗವದು. ಆದರೆ ಒಂದೇ ಸಮಸ್ಯೆ ಅಂದರೆ ಅದು ಮುಸ್ಲಿಂ ಕುಟುಂಬವೊಂದಕ್ಕೆ ಸೇರಿದ ಜಾಗವಾಗಿತ್ತು.

ಇದನ್ನು ಓದಿ

ಛಾವಣಿ ಮೇಲೆ ಹಾರಿತು ಹತ್ತಿ ತುಣುಕು

ಹೀಗಾಗಿ ಗ್ರಾಮದ ಮುಖ್ಯಸ್ಥರು, ಹಿಂದೂ ಮುಖಂಡರು ಸೇರಿ ಮುಸ್ಲಿಂ ಮುಖಂಡರೊಂದಿಗೆ ಆ ಜಾಗಕ್ಕಾಗಿ ಬೇಡಿಕೆಯಿಟ್ಟರು. ಈ ಸಂದರ್ಭದಲ್ಲಿ ಹೃದಯವೈಶಾಲ್ಯತೆ ಮೆರೆತ ಆ ಮುಸ್ಲಿಂರು ಒಂದೊಳ್ಳೆ ಕಾರಣಕ್ಕೆ, ಅದೂ ದೇವಾಲಯ ನಿರ್ಮಿಸುವಂತಹ ಕಾರ್ಯಕ್ಕೆ ಜಾಗ ನೀಡದಿದ್ದರೆ ಹೇಗೆ ಅಂತ, ಆ ಜಾಗವನ್ನು ದೇವಾಲಯ ಟ್ರಸ್ಟ್‍ಗೆ ಹಸ್ತಾಂತರಿಸಿದರು.

ಹಿಂದು – ಮುಸ್ಲಿಂ ಭಾಯಿ ಭಾಯಿ

‘ನಮ್ಮ ಪೂರ್ವಜರಿಗೆ ಸೇರಿದ ಜಾಗವಿದು. ದಿನಗಳು ಉರುಳಿದಂತೆ ನನ್ನ ಅಜ್ಜ, ಮುತ್ತಾತನ ಕಾಲದಲ್ಲಿ ಕಾರಣಾಂತರಗಳಿಂದ ಈ ಜಾಗವನ್ನು ಮುಸ್ಲಿಂರಿಗೆ ಮಾರಾಟ ಮಾಡಲಾಗಿತ್ತು. ಆದರೆ ಇವತ್ತು ಮುಸ್ಲಿಂ ಸಹೋದರರು ಆ ಜಾಗವನ್ನು ನಮ್ಮ ರಾಮ ಜಾನಕಿ ಮಂದಿರ ನಿರ್ಮಾಣಕ್ಕೆ ನೀಡಿದ್ದಾರೆ. ತುಂಬ ಖುಷಿಯಾಗುತ್ತಿದೆ. ತನು-ಮನ-ಧನದಿಂದ ಮುಸ್ಲಿಂ ಬಾಂಧವರು ನಮಗೆ ಸಹಕಾರ ನೀಡಿದ್ದಾರೆ. ಜೀವನಪೂರ್ತಿ ನಾವು ಸಾಮರಸ್ಯದಿಂದ ಇರುತ್ತೇವೆ’ ಅಂತ ಸಂತಸ ವ್ಯಕ್ತಪಡಿಸುತ್ತಾರೆ ಗ್ರಾಮದ ಮುಖಂಡರಾದ ಸಂತ ಕುಮಾರ ಸಿಂಗ್.

‘ನಮ್ಮ ಗ್ರಾಮದ ಹಿಂದುಗಳೆಲ್ಲ ಸೇರಿ ಮಂದಿರ ನಿರ್ಮಾಣಕ್ಕರ ಜಾಗ ಹುಡುಕುತ್ತಿದ್ದರು. ಆಗ ನಮ್ಮ ಜಾಗವನ್ನು ಕೇಳಿದರು. ಒಂದೊಳ್ಳೆ ಉದ್ದೇಶಕ್ಕೆ ಕೇಳುವುದಾದರೆ ಯಾಕೆ ಕೊಡಬಾರದು ಅಂತ ಈ ಜಾಗ ನೀಡಿದೆವು. ಜತೆಗೆ ಮಂದಿರ ನಿರ್ಮಾಣದ ಎಲ್ಲ ಕೆಲಸಗಳಲ್ಲೂ ನಾವು ಮುಸ್ಲಿಂರು ಹಿಂದುಗಳೊಂದಿಗೆ ಕೈಜೋಡಿಸಿದ್ದೇವೆ. ನಮ್ಮಲ್ಲಿ ಯಾವುದೇ ಭೇದ ಭಾವಗಳಿಲ್ಲ. ಹಿಂದು ಮುಸ್ಲಿಂರೆಲ್ಲರೂ ಒಗ್ಗಟ್ಟಾಗಿದ್ದೇವೆ.’ ಅಂತಾರೆ ಖಡೇಕಲಾ ಗ್ರಾಮದ ಮುಸ್ಲಿಂ ಮುಖಂಡರಾದ ವಜೀರ್ ಅಹ್ಮದ್.

image


ಕ್ರಮೇಣ ದೇವಾಲಯದ ನಿರ್ಮಾಣ ಕಾರ್ಯ ಆರಂಭವಾಯ್ತು. ಹಾಗಂತ ಮುಸ್ಲಿಂರು ಸುಮ್ಮನೆ ಕೂರಲಿಲ್ಲ. 80 ಕುಟುಂಬಗಳೂ ಸೇರಿ ಸಉಮಾರು 50 ಸಾವಿರ ರೂಪಾಯಿಯಷ್ಟು ಹಣ ಒಗ್ಗೂಡಿಸಿ ಶ್ರೀರಾಮ ಜಾನಕಿ ಮಂದಿರ ನಿರ್ಮಾಣಕ್ಕೆ ಧನಸಹಾಯ ಮಾಡಿದರು. ಅಷ್ಟೇ ಯಾಕೆ, ತಾವೇ ಹತ್ತಾರು ಮಂದಿ ಪ್ರತಿದಿನ ಹಿಂದುಗಳೊಂದಿಗೆ ಸೇರಿ ದೇವಸ್ಥಾನ ನಿರ್ಮಾಣಕ್ಕೆ ಶ್ರಮದಾನ ಮಾಡಿದರು. ಈಗ ದೇವಾಲಯ ನಿರ್ಮಾಣವಾಗಿದೆ. ಈಗಲೂ ಹಿಂದು – ಮುಸ್ಲಿಂರೆಲ್ಲರು ಒಟ್ಟಿಗೆ ಸೇರಿ ಒಗ್ಗಟ್ಟಾಗಿಯೇ ದೇವಾಲಯದ ಕಾರ್ಯಗಳಲ್ಲಿ ತೊಡಗುತ್ತಾರೆ.

ಹೀಗೆ ಖಡೇಕಲಾ ಗ್ರಾಮ ಕೇವಲ ಮೊರೆನಾ ಜಿಲ್ಲೆಗೆ ಅಥವಾ ಮಧ್ಯಪ್ರದೇಶ ರಾಜ್ಯಕ್ಕೆ ಅಥವಾ ಭಾರತಕ್ಕೆ ಮಾತ್ರವಲ್ಲ, ಇಡಿ ವಿಶ್ವಕ್ಕೇ ಮಾದರಿ ಅಂದರೂ ತಪ್ಪಾಗಲಾರದು. ಯಾಕೆಂದರೆ ಮಾನವೀಯತೆಗಿಂತ ದೊಡ್ಡ ಧರ್ಮ ಇನ್ಯಾವುದಿದೆ ಅಲ್ಲವೇ?

ಇದನ್ನು ಓದಿ

1. ನೀವಿದ್ದಲ್ಲಿಗೆ ಅಮ್ಮನ ಕೈತುತ್ತು, ಇದು ಮೈಸೂರಿನ ಟೆಕ್ಕಿಗಳ ಕರಾಮತ್ತು

2. ಕಾಯಕವೇ ಕೈಲಾಸ ಹನುಮಂತನ ಸಾಹಸ

3. ಕರ್ನಾಟಕದ ಶಕ್ತಿ ಸೌಧಕ್ಕೆ 61ರ ಹರೆಯ

    Share on
    close