ಪರಿಸರ ಉಳಿಸಿ ಬೆಳೆಸಲು ವಿನೂತನ ಪ್ರಯತ್ನ...ವೇಸ್ಟ್ ಪೇಪರ್ ಸಂಗ್ರಹಕ್ಕೆ ಮನೆಗೇ ಬರುತ್ತೆ ವಾಹನ...!

ಟೀಮ್​ ವೈ.ಎಸ್​​​.

ಪರಿಸರ ಉಳಿಸಿ ಬೆಳೆಸಲು ವಿನೂತನ ಪ್ರಯತ್ನ...ವೇಸ್ಟ್ ಪೇಪರ್ ಸಂಗ್ರಹಕ್ಕೆ ಮನೆಗೇ ಬರುತ್ತೆ ವಾಹನ...!

Friday November 06, 2015,

2 min Read

ಹಸಿರೇ ಉಸಿರು ಅನ್ನೋ ಮಾತಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹಸಿರು ಅಪರೂಪವಾಗ್ತಿದೆ. ಪರಿಸರಕ್ಕೆ ಮನುಷ್ಯನೇ ಕೊಡಲಿ ಏಟು ಕೊಡ್ತಿದ್ದಾನೆ. ಅದ್ರಲ್ಲೂ ಪೇಪರ್ ತಯಾರಿಕೆ ಹೆಸರಲ್ಲಿ ಕಾಡು ಬರಿದಾಗಿ ಹೋಗ್ತಿದೆ. ಹಾಗಾಗಿ ಇನ್ನೊಮ್ಮೆ ವೇಸ್ಟ್ ಪೇಪರ್ ಎಸೆಯೋ ಮುನ್ನ ಒಂದು ಕ್ಷಣ ಯೋಚನೆ ಮಾಡಿ. ವೇಸ್ಟ್ ಪೇಪರ್ ಅನ್ನು ಸಮರ್ಪಕವಾಗಿ ಮರುಬಳಕೆ ಮಾಡಿದ್ರೆ ಮರೆಯಾಗುತ್ತಿರುವ ಹಸಿರನ್ನು ಹೇಗೆ ಕಾಪಾಡಿಕೊಳ್ಳಬಹುದು ಅನ್ನೋದನ್ನು ಅರಿಯಬಹುದು. ಅಷ್ಟೇ ಅಲ್ಲ ವೇಸ್ಟ್ ಪೇಪರ್ ಮರುಬಳಕೆ ಸಮರ್ಥನೀಯ ವ್ಯಾಪಾರಕ್ಕೂ ಅವಕಾಶ ಕಲ್ಪಿಸುತ್ತದೆ. ದಿನಪತ್ರಿಕೆಗಳ ಖರೀದಿ ಮತ್ತು ಮಾರಾಟ ಹೊಸ ಪರಿಕಲ್ಪನೆಯೇನಲ್ಲ. ಭಾರತೀಯ ಕಾಗದ ತಯಾರಿಕಾ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ವಾರ್ಷಿಕ ಶೇಕಡಾ 20ರಷ್ಟು ಪತ್ರಿಕೆಗಳನ್ನು ಮಾತ್ರ ಮರು ಸಂಗ್ರಹಿಸಲಾಗುತ್ತಿದೆ. ಆದ್ರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶೇಕಡಾ 65ರಷ್ಟು ಕಾಗದಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಲಾಗುತ್ತಿದೆ.

ಭಾರತದಲ್ಲಿ ದಿನಪತ್ರಿಕೆಗಳ ಮರುಬಳಕೆ ಬಗ್ಗೆ ಜಾಗೃತಿ ಕಾರ್ಯ ಸರಿಯಾಗಿ ಆಗ್ತಿಲ್ಲ. ಕಾಗದಗಳ ಒಟ್ಟು ತ್ಯಾಜ್ಯ ಹಾಗೂ ಮರುಬಳಕೆಯಾಗುತ್ತಿರುವ ಕಾಗದಗಳ ಮಧ್ಯೆ ಸಾಮ್ಯತೆಯಿಲ್ಲ, ಬಹಳ ಅಂತರವಿದೆ ಎನ್ನುತ್ತಾರೆ `ಪೇಪರ್ ವೇಸ್ಟ್' ಸಂಸ್ಥೆಯ ಸಂಸ್ಥಾಪಕರಾದ ಬಿ.ಸುರೇಶ್ ಕುಮಾರ್. ಕಾಗದ ಪೋಲಾಗುತ್ತಿರುವ ಬಗ್ಗೆ ಅರಿವು ಮೂಡಿಸಲು ಅನನ್ಯ ವಿಧಾನವೊಂದನ್ನು ಸುರೇಶ್ ಕುಮಾರ್ ಕೈಗೆತ್ತಿಕೊಂಡಿದ್ದಾರೆ.

image


ಹೈದ್ರಾಬಾದ್ ಮೂಲದ `ಪೇಪರ್ ವೇಸ್ಟ್' ಸಂಸ್ಥೆ ಕಚೇರಿಗಳು, ಆಸ್ಪತ್ರೆಗಳು ಹಾಗೂ ಮನೆಗಳಿಗೆ ಪಿಕ್‍ಅಪ್ ವಾಹನಗಳನ್ನು ಕಳಿಸುತ್ತೆ. ಈ ವಾಹನಗಳು ಅಲ್ಲಿರುವ ಬೇಡವಾದ ಕಾಗದಗಳನ್ನು ಸಂಗ್ರಹಿಸಿ ಮರುಬಳಕೆ ಗಿರಣಿಗಳಿಗೆ ಸಾಗಿಸುತ್ತವೆ. ಸಂಗ್ರಹಿಸಿದ ವೇಸ್ಟ್ ಪೇಪರ್‍ಗಳಿಗೆ ಬದಲಾಗಿ ಹಣ ಅಥವಾ ವಿವಿಧ ವಸ್ತುಗಳನ್ನು ಕೊಡಲಾಗುತ್ತದೆ. ಪೇಪರ್ ವೇಸ್ಟ್ ವೆಬ್‍ಸೈಟ್‍ನಲ್ಲಿ ಪಿಕ್‍ಅಪ್ ರಿಕ್ವೆಸ್ಟ್ ಕಳಿಸಿದ್ರೆ ಅವರೇ ಬಂದು ಬೇಡವಾದ ಕಾಗದಗಳನ್ನು ಕೊಂಡೊಯ್ಯುತ್ತಾರೆ. ಮೊದಲೇ ಅದಕ್ಕೆ ಸಮಯ ನಿಗದಿಗೊಳಿಸಲಾಗುತ್ತದೆ.

ಸುರೇಶ್ ಕುಮಾರ್ ಅವರಿಗೆ ಮೊದಲಿನಿಂದಲೂ ಉದ್ಯಮ ಆರಂಭಿಸುವ ಕನಸಿತ್ತು. ಸಾಮಾನ್ಯ ಉದ್ಯಮದಲ್ಲೇ ಹೊಸದೇನನ್ನಾದ್ರೂ ಮಾಡಬೇಕೆಂಬ ಆಸೆಯಿತ್ತು. ಅದರ ಜೊತೆಜೊತೆಗೆ ಪರಿಸರ ಉಳಿಸಲು ತಮ್ಮ ಕೈಲಾದಷ್ಟು ಕೊಡುಗೆ ನೀಡಬೇಕೆಂಬ ಮಹತ್ವಾಕಾಂಕ್ಷೆಯೂ ಇತ್ತು. ಎಂಎನ್‍ಸಿ ಕಂಪನಿಯೊಂದರಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಸುರೇಶ್ ಕುಮಾರ್ ತಮ್ಮ ಉದ್ಯಮ ಪಯಣದ ಬಗ್ಗೆ ಹೇಳಿಕೊಂಡಿದ್ದಾರೆ.

ಪ್ರತಿಯೊಂದು ನಗರದಲ್ಲೂ ಸಾಕ್ಷರತೆಯ ಪ್ರಮಾಣ ಹೆಚ್ಚುತ್ತಿದೆ. ಹಾಗಾಗಿ ಭಾರತೀಯ ಕಾಗದ ಕೈಗಾರಿಕೆ ಕೂಡ ವರ್ಷದಿಂದ ವರ್ಷಕ್ಕೆ ಶೇಕಡಾ 8ರಷ್ಟು ಅಭಿವೃದ್ಧಿ ಹೊಂದುತ್ತಿದೆ. ಭಾರತದಲ್ಲಿರುವ ಬಹುತೇಕ ಕಾಗದ ಕಾರ್ಖಾನೆಗಳು ಹೊರಗಿನಿಂದ ಚಿಂದಿ ಕಾಗದಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಕೇವಲ ಒಂದು ಟನ್ ಕಾಗದ ತಯಾರಿಕೆಗೆ 17 ಮರಗಳು ಹಾಗೂ 1500 ಲೀಟರ್ ಎಣ್ಣೆಯನ್ನು ಬಳಸಲಾಗ್ತಿದೆ. ಕಾಗದ ತಯಾರಿಕೆಗೆ ಬೇಕಾದ ಪ್ರಮುಖ ಕಚ್ಚಾವಸ್ತುವಾದ ಕಲ್ಲಿದ್ದಲು ದರವೂ ಗಗನಕ್ಕೇರಿರುವುದರಿಂದ ಪೇಪರ್ ತಯಾರಿಕೆ ಇನ್ನಷ್ಟು ಕಠಿಣವಾಗಲಿದೆ. ಪ್ರತಿವರ್ಷ ಕಲ್ಲಿದ್ದಲು ದರ ಶೇಕಡಾ 40ರಷ್ಟು ಹೆಚ್ಚಾಗುತ್ತಿದೆ.

ಗುರ್‍ಗಾಂವ್ ಮೂಲದ ಗ್ರೀನೋಬಿನ್ ಪ್ರೈವೇಟ್ ಲಿಮಿಟೆಡ್ ಕಂಪನಿ ಕೂಡ ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ರಕ್ಷಣೆಯತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಈ ಕಂಪನಿಗಳು ಪೇಪರ್ ಸಂಗ್ರಹದ ಜೊತೆಗೆ ಕಾರ್ಪೊರೇಟ್ ಕಚೇರಿಗಳಲ್ಲಿ ವೇಸ್ಟ್ ಆಡಿಟ್ ಹಾಗೂ ವೇಸ್ಟ್ ಮ್ಯಾನೇಜ್‍ಮೆಂಟ್ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕ ಆಡಿಟ್ ವರದಿಯನ್ನು ಗ್ರಾಹಕರಿಗೆ ಕಳಿಸಿಕೊಡಲಾಗುತ್ತದೆ. ಅವರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು ಇದು ಸಹಕಾರಿ ಎನ್ನುತ್ತಾರೆ ಸುರೇಶ್ ಕುಮಾರ್. ಆಡಿಟ್ ವರದಿಯ ನೆರವಿನಿಂದ ಪ್ರತೀ ತಿಂಗಳು ಎಷ್ಟು ಪ್ರಮಾಣದ ಕಾಗದ ವೇಸ್ಟ್ ಆಗ್ತಿದೆ ಅನ್ನೋದನ್ನು ಅರ್ಥಮಾಡಿಕೊಂಡು ಕಚೇರಿಯ ಆಡಳಿತ ಮಂಡಳಿ, ಅದನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬಹುದು.

image


ಶಾಲೆ-ಕಾಲೇಜು, ಆಸ್ಪತ್ರೆ ಹಾಗೂ ಕಾರ್ಪೊರೇಟ್ ಕಚೇರಿಗಳೊಂದಿಗೆ ಪೇಪರ್ ವೇಸ್ಟ್ ಕಂಪನಿ ಟೈಅಪ್ ಮಾಡಿಕೊಂಡಿದೆ. ಈ ಮೂಲಕ ಕಾಗದ ಮರುಬಳಕೆ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಸುರೇಶ್ ಕುಮಾರ್ ಯೋಜನೆ ರೂಪಿಸಿದ್ದಾರೆ. ಇನ್ನಷ್ಟು ಗ್ರಾಹಕರನ್ನು ಆಕರ್ಷಿಸುವುದರ ಜೊತೆಗೆ ಕಾಗದ ಮರುಬಳಕೆ ಬಗ್ಗೆ ಅರಿವು ಮೂಡಿಸಲು ರೇಡಿಯೋ ಮೂಲಕ ಜಾಹೀರಾತು ನೀಡಲು ಮುಂದಾಗಿದ್ದಾರೆ. ಕಾಗದ ಮರುಬಳಕೆ ಕೈಗಾರಿಕೆ ವರ್ಷದಿಂದ ವರ್ಷಕ್ಕೆ ಶೇಕಡಾ 15-20ರಷ್ಟು ಅಭಿವೃದ್ಧಿ ಹೊಂದುವ ಸಾಧ್ಯತೆ ಇದೆ. ಹಸಿರು ಉಳಿಸಿ ಬೆಳೆಸಲು ಸುರೇಶ್ ಕುಮಾರ್ ಮಾಡ್ತಿರೋ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಪೇಪರ್ ವೇಸ್ಟ್ ಮೂಲಕ ಪರಿಸರ ಕಾಳಜಿ ಮೆರೆಯುತ್ತಿರುವ ಅವರ ಪ್ರಯತ್ನಕ್ಕೆ ಎಲ್ಲರೂ ಸಾಥ್ ಕೊಟ್ರೆ ನಿಸರ್ಗವನ್ನು ಕಾಪಾಡಿಕೊಳ್ಳಬಹುದು.