ಅಪಘಾತ ತಪ್ಪಿಸಲು ಸ್ಮಾರ್ಟ್ ಡಿವೈಸ್ ಫಾರ್ ಸ್ಮಾರ್ಟ್ ಬಸ್

ಉಷಾ ಹರೀಶ್​

ಅಪಘಾತ ತಪ್ಪಿಸಲು ಸ್ಮಾರ್ಟ್ ಡಿವೈಸ್ ಫಾರ್ ಸ್ಮಾರ್ಟ್ ಬಸ್

Friday March 04, 2016,

2 min Read

ಕರ್ನಾಟಕದಲ್ಲಿ ಇತ್ತೀಚಿಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ ಸಮೀಕ್ಷೆಯ ಪ್ರಕಾರ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದರೆ ನಂಬಲೇಬೇಕು. ಈ ಅಪಘಾತಗಳನ್ನು ಪತ್ರಿಕೆಗಳಲ್ಲಿ ನ್ಯೂಸ್ ಚಾನೆಲ್​ಗಳಲ್ಲಿ ನೋಡುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಅಪಘಾತಗಳನ್ನು ತಡೆಯಲು ವಿಶಿಷ್ಟ ವಿಧಾನ ಕಂಡುಹಿಡಿದ್ದಾನೆ. ಬಸ್ ಅಪಘಾತದಲ್ಲಿ ಮೊದಲು ಮೂರು ಸ್ಥಾನಗಳು ಕ್ರಮವಾಗಿ ತಮಿಳುನಾಡು, ಉತ್ತರ ಪ್ರದೇಶ ಹಾಗೂ ಕರ್ನಾಟಕಕ್ಕೆ ಇದೆ.

image


ಅಪಘಾತಕ್ಕೆ ಹದಗೆಟ್ಟ ರಸ್ತೆ, ಗುಡ್ಡಗಾಡು ಪ್ರದೇಶ, ಜನರ ಮನೋವೃತ್ತಿ ಅಷ್ಟೇ ಅಲ್ಲ, ಎದುರಿಗೆ ಬರುವ ಚಾಲಕನ ವರ್ತನೆ, ರಾತ್ರಿ ಉಂಟಾಗುವ ಬೆಳಕಿನ ವ್ಯತ್ಯಾಸವೂ ಕಾರಣವಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಅರಿತ ಹುಬ್ಬಳ್ಳಿಯ ಕೆಎಲ್ಇ ಕಾಲೇಜಿನ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಹರೀಶ್​ ಇದಕ್ಕೆಂದೇ ನೂತನ ತಂತ್ರಜ್ಞಾನ ಕಂಡುಹಿಡಿದಿದ್ದಾರೆ.

ಆ ನೂತನ ತಂತ್ರಜ್ಞಾನದ ಹೆಸರೇ ‘ಸ್ಮಾರ್ಟ್ ಡಿವೈಸ್ ಫಾರ್ ಸ್ಮಾರ್ಟ್ ಬಸ್’, ಈ ಪರಿಕಲ್ಪನೆಯೊಂದಿಗೆ ಕೆಲಸ ಆರಂಭಿಸಿದ ಹರೀಶ್ ಮಾಡಿದ ಮೊದಲ ಕೆಲಸ ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾಗುವುದನ್ನು ತಪ್ಪಿಸುವುದು ಹೇಗೆ, ಎದುರಿಗೆ ಬರುವ ವಾಹನದ ಬೆಳಕನ್ನು ಸ್ವಯಂಚಾಲಿತವಾಗಿ ಕಡಿಮೆಗೊಳಿಸುವುದು, ಈ ಎಲ್ಲದಕ್ಕೂ ವೈರ್​ಲೆಸ್ ಚಾರ್ಜ್ ಸಾಧ್ಯವೇ ಎಂಬುದನ್ನು ಅರಿಯಲು ಸಾಕಷ್ಟು ಅಧ್ಯಯನ ನಡೆಸಿದರು.

ಅದರ ಪ್ರಯತ್ನವೇ ‘ಸ್ಮಾರ್ಟ್ ಡಿವೈಸ್ ಫಾರ್ ಸ್ಮಾರ್ಟ್ ಬಸ್’ ತಂತ್ರಜ್ಞಾನ ಇದರಲ್ಲಿ ಸೀಟ್ ಸ್ಲೈಡಿಂಗ್ ಸಿಸ್ಟಂ, ವಾಹನಗಳ ಬೆಳಕು ಸ್ವಯಂಚಾಲಿತವಾಗಿ ಹೊಂದಿಕೊಳ್ಳುವುದು, ವೈರ್​ಲೆಸ್ ಚಾರ್ಜಿಂಗ್ ಆಫ್ ಬ್ಯಾಟರಿ ಎಂಬ ವಿನೂತನ ಆವಿಷ್ಕಾರ ಮಾಡಿದ್ದಾರೆ.

ಕಾರ್ ಏರ್ ಬ್ಯಾಗ್ ಮಾದರಿ

ಸೀಟ್ ಸ್ಲೈಡಿಂಗ್ ಸಿಸ್ಟಂನಲ್ಲಿ ಕಾರಿನಲ್ಲಿನ ಏರ್​ಬ್ಯಾಗ್​ಗೆ ಅಗತ್ಯವಾಗಿರುವ ಸರ್ಕ್ಯೂಟ್ ಅಳವಡಿಸಿದ್ದಾರೆ. ಸ್ಟೀರಿಂಗ್ ಮಧ್ಯೆ ಇರುವ ಬ್ಯಾಗ್ ಮೇಲೆ ಒತ್ತಡ ಬಿದ್ದಾಗ ಹೇಗೆ ಬಲೂನ್ ಊದಿಕೊಳ್ಳುತ್ತದೋ ಅದೇ ತರಹ ಒತ್ತಡದಿಂದ ರ್ಯಾಕ್ಕ್ ಹಿಂದೆ ಸರಿಯುತ್ತದೆ. ವಾಹನ ಇನ್ನೇನು ಅಪ್ಪಳಿಸಲಿದೆ ಎನ್ನುವಷ್ಟರಲ್ಲಿ ಸಂದೇಶ ರವಾನಿಸುತ್ತದೆ. ಗುದ್ದಿದ ತಕ್ಷಣವೇ ಇಡೀ ವಾಹನದ ಎಲ್ಲ ಸೀಟುಗಳು 2 ಮೀಟರ್ ಹಿಂದಕ್ಕೆ ಹೋಗುತ್ತವೆ. ಹೈಬೀಮ್ ಲೈಟ್​​ಗಳನ್ನು ಕಡಿಮೆ ಮಾಡಲು ಸ್ವಯಂ ಚಾಲಿತ ಡಿಮ್ ಆ್ಯಂಡ್ ಡಿಪ್ ಲೈಟ್​ಗಳ ಮಾದರಿಯನ್ನು ಹರೀಶ್ ವಿನ್ಯಾಸಗೊಳಿಸಿದ್ದಾರೆ.

ರಾತ್ರಿ ಬಸ್ ಚಾಲನೆ ವೇಳೆ ಹೆಡ್​ಲೈಟ್ ಅತ್ಯಗತ್ಯ. ಆ ಬೆಳಕು ಸ್ವಲ್ಪ ವ್ಯತ್ಯಾಸವಾದರೂ ಅಪಾಯ ಖಚಿತ. ಅದಕ್ಕಾಗಿ ಅಳೆದು ತೂಗಿ ಡಿಪ್, ಡಿಮ್ ಬಳಸಬೇಕಾಗುತ್ತದೆ. ಆದರೆ ಕೆಲ ಬಾರಿ ಉಂಟಾಗುವ ಮನುಷ್ಯ ಸಹಜ ತಪ್ಪುಗಳಿಂದ ಅವಘಡ ಉಂಟಾಗುತ್ತದೆ. ದ್ವಿಪಥ ರಸ್ತೆಯಲ್ಲಿ ಎದುರಿನಿಂದ ಬರುವ ವಾಹನಗಳಿಗೆ ಸ್ವಯಂಚಾಲಿತವಾಗಿ ಬೆಳಕಿನ ಬಗ್ಗೆ ತಿಳಿಸಿದರೆ ಅನುಕೂಲವಾಗುತ್ತದೆ ಎಂಬುದನ್ನು ಅರಿತ ಹರೀಶ್, ಇದರ ಮಾದರಿ ವಿನ್ಯಾಸಗೊಳಿಸಿದ್ದಾರೆ.

image


ಇದು ಎದುರಿನಿಂದ ಬರುವ ವಾಹನಗಳ ಬೆಳಕನ್ನು ಅರಿತು ಡ್ರೈವರ್​ಗೆ ತಮ್ಮ ಗಾಡಿಯ ಬೆಳಕನ್ನು ಹೆಚ್ಚು, ಕಡಿಮೆ ಮಾಡಿ ಎಂದು ಸಿಗ್ನಲ್ ಹೊರಹಾಕುತ್ತದೆ. ಈ ವಸ್ತುವನ್ನು ಹರೀಶ್ ಅವರು ಸರಳ ತಂತ್ರಜ್ಞಾನ ಬಳಸಿ ಸರ್ಕ್ಯುಟ್​ನ್ನು ಹೊಂದಾಣಿಕೆ ಮಾಡುವ ಮೂಲಕ ರಚಿಸಿದ್ದಾರೆ. ಈ ಡಿವೈಸ್​ನಲ್ಲಿ ಬಳಸಲಾಗಿರುವ ಎಲ್ಡಿಆರ್ ಸೆನ್ಸಾರ್ ಹೈಬೀಮ್ ಉರಿಯುತ್ತಿರುವ ಲೈಟ್​ನಿಂದ ರಿಫ್ಲೆಕ್ಟ್ ಆಗುವ ಸಿಗ್ನಲ್​ನ್ನು ಪಡೆದು ಲೋ ಬೀಮ್ ಸೆನ್ಸಾರ್​ನ್ನು ಆಕ್ಟಿವೇಟ್ ಮಾಡಿ, ಹೈಬೀಮ್ ಅನ್ನು ಡಿಆಕ್ಟಿವೇಟ್ ಮಾಡುತ್ತದೆ.

ಇದಕ್ಕಾಗಿ ಹರೀಶ್ ಎರಡು ಕಾಪರ್ ಕಾಯಿಲ್​ಗಳನ್ನು ಬಳಸಿಕೊಂಡು ಎಲೆಕ್ಟ್ರೋಮ್ಯಾಗ್ನೆಟಿಕ್ ಇಂಡಕ್ಷನ್​ನಡಿ ಸ್ವಯಂ ಬ್ಯಾಟರಿ ಚಾರ್ಜ್ ಆಗುವಂತೆ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ವೈರ್​ಲೆಸ್ ಚಾರ್ಜಿಂಗ್ ಸಿಸ್ಟಂ ಎಂದು ಹೆಸರಿಟ್ಟಿದ್ದಾರೆ ಹರೀಶ್.

ಬಸ್ ಮಾಲೀಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಸ್​ನ ಹೊರ ನೋಟವನ್ನು ಸುಂದರವಾಗಿ ಕಾಣುವಂತೆ ಮಾಡುತ್ತಾರೆ. ಆದರೆ ಅಪಘಾತ ಆದಾಗ ಅನುಸರಿಸಬೇಕಾದ ಸುರಕ್ಷತೆಯನ್ನು ಎಂದಿಗೂ ನೀಡುವುದಿಲ್ಲ. ಅದರಿಂದಾಗಿಯೇ 2013ರಲ್ಲಿ ದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 1,37,000 ಜನ ಸತ್ತಿದ್ದಾರೆ. ಇಷ್ಟೆಲ್ಲಾ ಆದರೂ ಡಿಜಿಟಲ್ ಯುಗದಲ್ಲಿ ನಾವು ಬದುಕುತ್ತಿದ್ದರೂ ಅಪಘಾತ ತಡೆಗೆ ಏನನ್ನು ಮಾಡಲಾಗಿಲ್ಲ ಆದರೆ ಈ ಸಾಧನವನ್ನು ಅಳವಡಿಸಿಕೊಂಡರೆ ಬಸ್​ನ ಮುಖಾಮುಖಿ ಡಿಕ್ಕಿಯಿಂದ ಉಂಟಾಗುವ ಪ್ರಾಣಹಾನಿ ತಪ್ಪಿಸಬಹುದು ಎನ್ನುವ ಉದ್ದೇಶದಿಂದ ಹರೀಶ್ ಇದನ್ನು ವಿನ್ಯಾಸಗೊಳಿಸಿದ್ದಾರೆ.

ಬಾಷ್ ಕಂಪನಿಯಿಂದ ಮೆಚ್ಚುಗೆ

ವಿದ್ಯಾರ್ಥಿಯಾಗಿರುವಗಾಲೇ ಸಾಮಾಜಿಕ ಕಳಕಳಿಯಿಂದ ಇಂತಹದ್ದೊಂದು ಪ್ರಯತ್ನ ಮಾಡಿರುವ ಹರೀಶ್ ಅವರ ಆವಿಷ್ಕಾರಕ್ಕೆ ಬಾಷ್ ಕಂಪೆನಿಯಿಂದ ಮೆಚ್ಚುಗೆ ಪತ್ರ ದೊರೆತಿದೆ. ಈ ಸಾಧನಗಳನ್ನು ಬಸ್ಸುಗಳಿಗೆ ಅಳವಡಿಸಲು 1 ಲಕ್ಷ ವೆಚ್ಚವಾಗುತ್ತದೆ. ಬಸ್ ಮಾಲೀಕರು ಇದನ್ನು ಅಳವಡಿಸಿದರೆ ಅಪಘಾತಗಳಿಂದ ಆಗುವ ಅನಾಹುತ ತಪ್ಪಿಸಿ ಸಾಕಷ್ಟು ಜೀವಗಳನ್ನು ಉಳಿಸಬಹುದು.