ಕೆಲಸ ಹುಡುಕಿ ಬೆಂಗಳೂರಿಗೆ ಬಂದ ನೇಪಾಳಿ ಯುವಕ ಕಂಪನಿ ಕಟ್ಟಿದ..!

ಕೃತಿಕಾ

ಕೆಲಸ ಹುಡುಕಿ ಬೆಂಗಳೂರಿಗೆ ಬಂದ ನೇಪಾಳಿ ಯುವಕ ಕಂಪನಿ ಕಟ್ಟಿದ..!

Thursday January 14, 2016,

2 min Read

image


ಒಂದು ಕಾಲದಲ್ಲಿ ಕೆಲಸ ಹುಡುಕಿಕೊಂಡು ದೇಶ ಬಿಟ್ಟು ದೇಶಕ್ಕೆ ಬಂದ ಯುವಕನೊಬ್ಬ ಇವತ್ತು ದೊಡ್ಡ ಕಂಪನಿಯೊಂದನ್ನು ಕಟ್ಟಿದ್ದಾನೆ. ನೂರಾರು ಜನಕ್ಕೆ ಉದ್ಯೋಗ ಕೊಟ್ಟಿದ್ದಾನೆ. ಆತ ಸ್ಥಾಪಿಸಿರುವ ಕಂಪನಿ ಇವತ್ತು ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ. ಕೆಲಸಕ್ಕಾಗಿ ಅಲೆದಾಡುತ್ತಿದ್ದವನು ಇವತ್ತು ಕೆಲಸಕ್ಕೆ ಹುಡುಕಾಡುವವರಿಗೆ ಕೆಲಸ ಕೊಡುವಂತಾಗಿದ್ದಾನೆ. ಇಷ್ಟೆಲ್ಲ ನಾವು ಹೇಳುತ್ತಿರೋದು ನೇಪಾಳ ಮೂಲದ ಯುವಕ ಭೂಪೇಂದ್ರ ಖನಾಲ್‌ ಬಗ್ಗೆ. ನೇಪಾಳದಲ್ಲಿನ ನಿರುದ್ಯೋಗ ಸಮಸ್ಯೆಯಿಂದಾಗಿ ಬದುಕು ನಡೆಸಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ ಭೂಪೇಂದ್ರ ಹತ್ತು ವರ್ಷಗಳ ಹಿಂದೆ ಭಾರತಕ್ಕೆ ಬಂದರು. ದೇಶದ ಹಲವು ನಗರಗಳಲ್ಲಿ ಕೆಲಸಕ್ಕಾಗಿ ಹುಡುಕಾಡಿ, ಸುತ್ತಾಡಿ ಕೊನೆಗೆ ತಲುಪಿದ್ದು ಬೆಂಗಳೂರಿಗೆ. ಹಾಗೆ ಕೆಲಸಕ್ಕೆಂದು ಬಂದ ಭೂಪೇಂದ್ರ ಇವತ್ತು ಕೇಬಲ ಕೆಲಸಗಾರನಾಗಿ ಉಳಿದಿಲ್ಲ. ನೂರಾರು ಮಂದಿಗೆ ಕೆಲಸ ಕೊಡುವ ಕಂಪನಿಯೊಂದರ ಮಾಲೀಕನಾಗಿದ್ದಾರೆ.

ಭೂಪೇಂದ್ರ ಖುನಾಲ್ ಗೆ ಚಿಕ್ಕ ವಯಸ್ಸಿನಿಂದಲೂ ನಾಯಿಗಳು ಅಂದರೆ ಅತೀವ ಪ್ರೀತಿ. ನಾಯಿ ಸಾಕುವುದೆಂದರೆ ಅವರಿಗೆ ಒಂದು ಪ್ಯಾಶನ್‌. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದರೂ ನಾಯಿ ಸಾಕುವುದನ್ನು ಬಿಡಲಿಲ್ಲ. ತಾವು ಕೆಲಸವಿಲ್ಲದೇ, ಹಣವಿಲ್ಲದೇ ಪರದಾಡುತ್ತಿದ್ದ ದಿನಗಳಲ್ಲಿ ಕೂಡ ಭೂಪೇಂದ್ರ ತಮ್ಮೊಂದಿಹಗೆ ನಾಯಿಯನ್ನು ಸಾಕಿಕೊಂಡಿದ್ದರು. ನಾಯಿಗಳಿಗೆ ಮಾರುಕಟ್ಟೆಯಿಂದ ಆಹಾರ ತಂದು ತಿನ್ನಿಸುವುದು ಅವರ ದಿನಚರಿಯ ಮುಖ್ಯ ಕೆಲಸಗಳಲ್ಲಿ ಒಂದಾಗಿತ್ತು.

image


ನಾನೇ ಕೆಲಸವಿಲ್ಲದೇ ಮನೆಯಲ್ಲಿರುವಾಗ ನಾಯಿಗೆ ಆಹಾರ ಪದಾರ್ಥಗಳನ್ನು ಕೊಳ್ಳಬೇಕಾಗಿತ್ತು. ಆಗ ನಾಯಿ ತಿನ್ನುವ ತಿನಿಸುಗಳನ್ನು ಮನೆಯಲ್ಲೇ ಮಾಡಲು ಮುಂದಾದೆ. ಹಾಗೆ ಶುರುವಾಗಿದ್ದೇ ನಾಯಿಗಳಿಗೆ ತಿನಿಸು ತಯಾರಿಸುವ ಕಂಪನಿ ಕಟ್ಟುವ ಕನಸು. 2009 ರಲ್ಲಿ ಸ್ನೇಹಿತರೊಂದಿಗೆ ಸೇರಿ ನಾಯಿಗಳಿಗೆ ತಿನಿಸುವ ತಿನಿಸುಗಳನ್ನು ತಯಾರಿಸುವ ಕಂಪನಿ ಕುನಾಲ್ ಫುಡ್ಸ್ ಕಂಪನಿಯನ್ನು ಆರಂಭಿಸಿದೆ ಅಂತ ತಮ್ಮ ಕಂಪನಿ ಆರಂಭವಾದ ಬಗೆಯನ್ನು ವಿವರಿಸುತ್ತಾರೆ ಭೂಪೇಂದ್ರ ಖನಾಲ್

ಕಂಪನಿ ಆರಂಭಿಸಿ ನೂರಾರು ಮಂದಿಗೆ ಕೆಲಸ ನೀಡಿರುವ ಭೂಪೇಂದ್ರ ಕುನಾಲ್ ಈಶಾನ್ಯ ಭಾರತ ಹಾಗೂ ಹಿಮಾಲಯದ ತಪ್ಪಲಿನ ರೈತರಿಗೂ ಹೊಸ ಬದುಕು ನೀಡಿದ್ದಾರೆ. ಈಶಾನ್ಯ ಭಾರತ ಮತ್ತು ಹಿಮಾಲಯದ ಯಾಕ್‌ ಮತ್ತು ಹಸುಗಳ ಹಾಲನ್ನು ತರಿಸಿಕೊಂಡು ತಿನಿಸುಗಳನ್ನು ತಯಾರಿಸುವುದು ಈ ಕಂಪೆನಿಯ ವೈಶಿಷ್ಟ್ಯ. ಈ ಮೂಲಕ ಸುಮಾರು 1500ಕ್ಕೂ ಹೆಚ್ಚು ರೈತರಿಗೆ ಆರ್ಥಿಕವಾಗಿ ನೆರವಾಗಿದ್ದಾರೆ. ತಯಾರಿಸಿದ ಸಿದ್ಧ ಆಹಾರವನ್ನು ‘ಡಾಗ್ಸ್‌ಚಿವ್‌’ ಬ್ರಾಂಡ್ ಹೆಸರಿನಲ್ಲಿ ಶಾಪ್‌ಗಳು ಮತ್ತು ಆನ್‌ಲೈನ್‌ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಬಹುತೇಕ ಎಲ್ಲ ಇ ಕಾಮರ್ಸ್ ಸೈಟ್ ಗಳಲ್ಲಿ ‘ಡಾಗ್ಸ್‌ಚಿವ್‌’ ನಾಯಿ ತಿನಿಸುಗಳು ಸಿಗುತ್ತವೆ. dogseechew.com ವೆಬ್ ಸೈಟ್ ನಲ್ಲೂ ಕೂಡ ನಾಯಿಗಳ ತಿನಿಸುಗಳನ್ನು ಇ ಕಾಮರ್ಸ್ ಮೂಲಕ ಕೊಂಡುಕೊಳ್ಳಬಹುದು.

ಒಂದು ಸಣ್ಣ ಪ್ರಯತ್ನವಾಗಿ ಆರಂಭವಾದ ಈ ಕಂಪನಿ ಇವತ್ತು ನಾಯಿಗಳಿಗೆ ಆಹಾರ ತಯಾರಿಸುವ ಕಂಪನಿಗಳ ಸಾಲಿನಲ್ಲಿ ದೊಡ್ಡ ಕಂಪನಿಯಾಗಿ ಬೆಳೆದುನಿಂತಿದೆ.ಇದರಿಂದ ವಾರ್ಷಿಕ ಐವತ್ತು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ನಾಯಿಗಳ ಮೇಲಿನ ಪ್ರೀತಿ ಭೂಪೇಂದ್ರ ಖನಾಲ್‌ಗೆ ಉದ್ಯಮ ಸ್ಥಾಪಿಸುವ ಪ್ರೇರಣೆ ನೀಡಿತು. ಈ ತಿನಿಸುಗಳನ್ನು ವಿದೇಶಗಳಿಗೂ ರಫ್ತು ಮಾಡುವ ಯೋಜನೆ ರೂಪಿಸಲಾಗುತ್ತಿದ್ದು 2016ರ ವೇಳೆಗೆ ಹತ್ತು ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿ ಹೊಂದಿದ್ದಾರೆ ಭೂಪೇಂದ್ರ ಖನಾಲ್.

image


ನಾಯಿಗಳಿಗೆ ಸಿದ್ದ ಆಹಾರ ಮಾಡುವ ಉದ್ಯಮ ನಮ್ಮ ದೇಶದಲ್ಲಿ ವೇಗವಾಗಿ ಬೆಳೆಯುತ್ತಿದೆ. ವರ್ಷಕ್ಕೆ 800 ರಿಂದ 1200 ಕೋಟಿ ರೂಪಾಯಿ ಈ ಉಧ್ಯಮ ನಡೆಸುತ್ತಿದೆ. ವರ್ಷಕ್ಕೆ ಶೇ.30% ರಷ್ಟು ಬೆಳವಣಿಗೆ ಸಾಧಿಸುತ್ತಿದೆ. ಈ ಒಟ್ಟಾರೆ ವಹಿವಾಟಿನಲ್ಲಿ ನಮ್ಮ ಕಂಪನಿಯ ಆಹಾರ ಪದಾರ್ಥಗಳು ಶೇ.15% ರಷ್ಟು ಮಾರುಕಟ್ಟೆ ಇದೆ. ಈ ಮಟ್ಟವನ್ನು 25% ಗೆ ಏರಿಕೆ ಮಾಡುವ ಗುರಿ ನನಗಿದೆ ಅಂತಾರೆ ಭೂಪೇಂದ್ರ ಖನಾಲ್.

ಒಂದು ಕಾಲದಲ್ಲಿ ಕೆಲಸಕ್ಕಾಗಿ ಅಲೆದಾಡುತ್ತಿದ್ದ ಯುವಕ ಇಂದು ದೇಶ ಬಿಟ್ಟು ದೇಶಕ್ಕೆ ಬಂದು ಒಂದು ಕಂಪನಿ ಸ್ಥಾಪಿಸಿ ಸಾಧನೆ ಮೆರೆದಿದ್ದಾನೆ. ಇಂತಹ ಸಾಧನೆ ಈ ದೇಶದ ಹಲವರಿಗೆ ಮಾದರಿಯಾಗಲಿದೆ...