ಪಂಜಾಬ್​ನಲ್ಲೂ 'ಆಮ್ ಆದ್ಮಿ' ಅಲೆ..! ಮತ್ತೊಂದು ಗೆಲುವಿಗೆ ಮೆಟ್ಟಿಲಾಗುತ್ತಾ 'ಆಪ್ ಐಡಿಯಾ'?

ಆಶುತೋಷ್​ 

ಪಂಜಾಬ್​ನಲ್ಲೂ 'ಆಮ್ ಆದ್ಮಿ' ಅಲೆ..! 
			ಮತ್ತೊಂದು ಗೆಲುವಿಗೆ ಮೆಟ್ಟಿಲಾಗುತ್ತಾ 'ಆಪ್ ಐಡಿಯಾ'?

Tuesday April 05, 2016,

4 min Read

ಎನ್​ಡಿಟಿವಿಯಲ್ಲಿ ಖ್ಯಾತ ಪತ್ರಕರ್ತ ಶೇಖರ್ ಗುಪ್ತಾ ಅವರು ನಡೆಸಿಕೊಡುತ್ತಿದ್ದ ವಾಕ್ ದಿ ಟಾಕ್ ಕಾರ್ಯಕ್ರಮವನ್ನು ನೋಡುತ್ತಿದ್ದೆ. ನಾನು ಈ ಕಾರ್ಯಕ್ರಮದ ಕಟ್ಟಾ ವೀಕ್ಷಕನೇನಲ್ಲ, ಆದ್ರೆ ಕಾಲೇಜು ಮಕ್ಕಳು ಮಾತನಾಡ್ತಿರೋದನ್ನು ನೋಡಿದಾಕ್ಷಣ ನನ್ನ ಕಣ್ಣುಗಳು ಅಲ್ಲೇ ನಿಂತವು. ಆದ್ರೆ ಅವರನ್ನು ಗುರುತು ಹಿಡಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಅವರಿಬ್ಬರೂ ಸ್ನಾಪ್​ಡೀಲ್​ ಸಹ ಸಂಸ್ಥಾಪಕರಾದ ಕುಣಾಲ್ ಬಹ್ಲ್ ಹಾಗೂ ರೋಹಿತ್ ಬನ್ಸಲ್. ಸ್ನಾಪ್​ಡೀಲ್​ ಭಾರತದ ಅತಿ ದೊಡ್ಡ ಆನ್​ಲೈನ್​ ಮಾರುಕಟ್ಟೆಗಳಲ್ಲೊಂದು, ಕೇವಲ 6 ವರ್ಷಗಳ ಇತಿಹಾಸ ಹೊಂದಿರುವ ಸ್ನಾಪ್​ಡೀಲ್​ನಲ್ಲಿ 30 ಮಿಲಿಯನ್ ಉತ್ಪನ್ನಗಳಿದ್ದು 6000 ಪಟ್ಟಣಗಳು ಹಾಗೂ ವಿವಿಧ ನಗರಗಳಲ್ಲಿ ವಹಿವಾಟು ನಡೆಸುತ್ತಿದೆ. 30ರ ಹರೆಯದಲ್ಲೇ ಯಶಸ್ವಿ ಸ್ಟಾರ್ಟ್ಅಪ್ ಒಂದನ್ನು ಮುನ್ನಡೆಸುತ್ತಿರುವ ಹೆಗ್ಗಳಿಕೆ ಅವರದ್ದು.

image


ಸ್ವಂತ ಕಂಪನಿ ಆರಂಭಿಸುವ ಸಂದರ್ಭದಲ್ಲಿ ಅತ್ಯಂತ ಕಠಿಣ ಸ್ಥಿತಿಗಳನ್ನು ಅವರು ಎದುರಿಸಿದ್ದಾರಂತೆ. 2007ರಲ್ಲಿ ಅವರ ಬ್ಯಾಂಕ್ ಅಕೌಂಟ್ನಲ್ಲಿ ಕೇವಲ 50,000 ರೂಪಾಯಿ ಇತ್ತು, ಮರುದಿನ ಅವರು ನೌಕರರಿಗೆ 5 ಲಕ್ಷ ರೂಪಾಯಿ ವೇತನ ನೀಡಬೇಕಿತ್ತು. ಕಂಪನಿಯನ್ನು ಮುಚ್ಚಬೇಕಾದಂತಹ ಪರಿಸ್ಥಿತಿ ಅದು. ಬೇರೆ ಉದ್ಯೋಗ ಅರಸಿ ಹೋಗಬೇಕಿತ್ತು. ಆದ್ರೆ ಕುಣಾಲ್ ಹಾಗೂ ರೋಹಿತ್ ಎದೆಗುಂದಲಿಲ್ಲ. ಸ್ನೇಹಿತರಿಂದ ಹಣ ಪಡೆದು ಕಂಪನಿ ಮುನ್ನಡೆಸಿದ್ರು. 2013ರಲ್ಲೂ ಅವರ ಬಳಿ ಇದ್ದಿದ್ದು ಕೇವಲ 1 ಲಕ್ಷ ಡಾಲರ್ ಹಣ, ಸಂಬಳ ಪಾವತಿಸಬೇಕಿದ್ದುದು 5 ಲಕ್ಷ ಡಾಲರ್. ಅದು ಕೂಡ ಹತಾಶ ಪರಿಸ್ಥಿತಿ. ಆದ್ರೆ ಇದೆಲ್ಲವನ್ನು ಎದುರಿಸಿ ಅವರು ಮುನ್ನಡೆದಿದ್ದಕ್ಕೆ ಕಾರಣ ಆತ್ಮವಿಶ್ವಾಸ ಹಾಗೂ ಉದ್ಯಮದ ಮೇಲಿನ ನಂಬಿಕೆ.

ಇದನ್ನೂ ಓದಿ...

ಹ್ಯಾಪಿ ಬರ್ತ್‍ಡೇ ಬಿಡಿ, ಕನ್ನಡದಲ್ಲಿ ಹುಟ್ಟುಹಬ್ಬದ ವಿಶ್ ಮಾಡಿ..!

ಆ ಕ್ಷಣದಲ್ಲಿ ನನಗೆ ಹಳೆಯ ನೆನಪು ಮರುಕಳಿಸಿತ್ತು. ಆಮ್ ಆದ್ಮಿ ಪಾರ್ಟಿ ಕೂಡ ಇದೇ ಬಗೆಯ ರಾಜಕೀಯ ಸ್ಟಾರ್ಟ್ಅಪ್. ಭ್ರಷ್ಟಾಚಾರದ ವಿರುದ್ಧ ದಂಗೆಯಲ್ಲಿ ಅಣ್ಣಾ ಚಳವಳಿ ಮೂಲಕ ಎಎಪಿ ಗುರುತಿಸಿಕೊಂಡಿದೆ. ಆದ್ರೆ ಅಣ್ಣಾ ಮತ್ತು ಅರವಿಂದ್ ಕೇಜ್ರಿವಾಲ್ ಬೇರೆಯಾದ್ರು. ಅಣ್ಣಾ ಅವರ ಹೆಸರನ್ನು ಬಳಸಿಕೊಳ್ಳದೆ ರಾಜಕೀಯ ಪಕ್ಷವೊಂದನ್ನು ಕಟ್ಟಲು ಕೇಜ್ರಿವಾಲ್ ಮತ್ತವರ ಬೆಂಬಲಿಗರು ನಿರ್ಧರಿಸಿದ್ರು. ಅಣ್ಣಾ ಹಜಾರೆ ಹುಟ್ಟು ಹೋರಾಟಗಾರರು, ಅವರಿಗೆ ಅಪಾರ ಬೆಂಬಲಿಗರಿದ್ದಾರೆ. ಅವರನ್ನು ಮಹಾತ್ಮಾ ಗಾಂಧಿ ಅವರಿಗೆ ಹೋಲಿಸಲಾಗುತ್ತದೆ.

ಅದೆಲ್ಲವೂ ಕೊನೆಗಾಣಬಹುದು ಎಂಬ ಆತಂಕ, ಅಣ್ಣಾ ಅವರ ಹೊರತಾಗಿ ಚಳವಳಿ ಮುನ್ನಡೆಸುವುದು ಅಸಾಧ್ಯ ಎಂಬಂತಹ ವಾತಾವರಣ ಕಂಡುಬಂದಿತ್ತು. ಆದ್ರೆ ಅವರು ಯಾರ ಮಾತನ್ನೂ ಕೇಳಲು ಸಿದ್ಧರಿರಲಿಲ್ಲ. ಅದು ಸಾವು ಬದುಕಿನ ಪ್ರಶ್ನೆಯಾಗಿತ್ತು. ಚಳವಳಿ ಅದರ ಪ್ರಸ್ತುತತೆಯನ್ನು ಕಳೆದುಕೊಂಡ್ತು, ಅರವಿಂದ್ ಕೇಜ್ರಿವಾಲ್ ಮತ್ತವರ ತಂಡದ ಪ್ರಕಾರ ರಾಜಕೀಯವೊಂದೇ ಮಾರ್ಗ ಎಂಬಂತಾಯ್ತು. ಅಣ್ಣಾ ಹಜಾರೆ ಅವರಿಲ್ಲದೆ ಅದು ಸಾಧ್ಯವೇ ಎಂಬುದು ಎಲ್ಲರನ್ನೂ ಕಾಡಿದ ಪ್ರಶ್ನೆ. ಅಣ್ಣಾ ಅವರಿಲ್ಲದೆ ರಾಜಕೀಯ ಪಕ್ಷಕ್ಕೆ ಭವಿಷ್ಯವೇ ಇಲ್ಲ ಎಂದು ಕೆಲವರು ಅಭಿಪ್ರಾಯಪಟ್ರು. ಅದು ನಿರ್ಣಾಯಕ ಘಟ್ಟವಾಗಿತ್ತು, ಅಂತಿಮವಾಗಿ ಅರವಿಂದ್ ಕೇಜ್ರಿವಾಲ್ ಮತ್ತವರ ತಂಡ ಅಣ್ಣಾ ಅವರಿಲ್ಲದೆ ಮುಂದಡಿಯಿಡಲು ನಿರ್ಧರಿಸಿತ್ತು.

ದೆಹಲಿಯನ್ನು ಮೊದಲ ತಾಣವಾಗಿ ಆಯ್ಕೆ ಮಾಡಿಕೊಳ್ಳಲಾಯ್ತು. ಇನ್ನೊಂದು ವರ್ಷದಲ್ಲಿ ಚುನಾವಣೆ ಎದುರಾಗುವುದರಲ್ಲಿತ್ತು. ಪಕ್ಷ ಸಂಘಟನೆಯ ಹೊಣೆ ಹೊತ್ತ ಕೇಜ್ರಿವಾಲ್, ಬಿಜೆಪಿ ಹಾಗೂ ಕಾಂಗ್ರೆಸ್​ಗೆ ಎಎಪಿ ಪರ್ಯಾಯ ಎಂಬುದನ್ನು ದೆಹಲಿ ಜನತೆಗೆ ಮನವರಿಕೆ ಮಾಡಿಕೊಡಲು ಶ್ರಮವಹಿಸಿದ್ರು. ದೆಹಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲ ಸ್ಥಾನ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆಂದೋಲನದ ಪ್ರಮುಖ ನಾಯಕರ ಬಗ್ಗೆ ಅದರಲ್ಲೂ ಅರವಿಂದ್ ಕೇಜ್ರಿವಾಲ್ ಅವರ ಬಗ್ಗೆ ಅರಿವು ಮೂಡಿತ್ತು. ಎಎಪಿ, ಬಿಜೆಪಿ ಹಾಗೂ ಕಾಂಗ್ರೆಸ್ ಅನ್ನು ಮಣಿಸಬಲ್ಲದು ಎಂಬುದನ್ನು ಪ್ರತಿ ಕ್ಷೇತ್ರದ ಜನತೆಗೂ ಮನವರಿಕೆ ಮಾಡಿಕೊಡಬೇಕಾಯ್ತು. ಅಷ್ಟಕ್ಕೂ ನಾವದನ್ನು ಸಾಧಿಸಬಲ್ಲೆವಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿತ್ತು. ಆದ್ರೆ ಆಪ್ ತಂಡದಲ್ಲಿ ಆತ್ಮವಿಶ್ವಾಸವಿತ್ತು, ಅವರು ಸಾಧಿಸಿ ತೋರಿಸಿದ್ರು. ಫಲಿತಾಂಶ ಪ್ರಕಟವಾಗ್ತಿದ್ದಂತೆ ರಾಜಕೀಯ ಪಂಡಿತರಿಗೆಲ್ಲ ಶಾಕ್, ಸಾಂಪ್ರದಾಯಿಕ ಅಭಿಪ್ರಾಯಗಳೆಲ್ಲ ಬದಲಾಗಿ ಹೋಗಿತ್ತು. ಎಎಪಿ ಕೇವಲ ನಾಲ್ಕು ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಅಂತಾ ಭವಿಷ್ಯ ನುಡಿದಿದ್ದ ರಾಜಕೀಯ ಪಂಡಿತರೆಲ್ಲ ಇದೊಂದು ಕ್ರಾಂತಿ ಎಂದು ಬಣ್ಣಿಸಲು ಆರಂಭಿಸಿದ್ರು. ಅಸಾಧ್ಯ ಎಂಬಂತದ್ದು ನಡೆದು ಹೋಗಿತ್ತು, ಅದು ಕೂಡ ಅಣ್ಣಾ ಹಜಾರೆ ಅವರಿಲ್ಲದೆ. ಈ ಚಮತ್ಕಾರ ನಡೆದಿದ್ದು ಹೇಗೆ? ಸ್ವಯಂ ವಿಶ್ವಾಸ ಮತ್ತು ಗುರಿ ತಲುಪುವ ಅದಮ್ಯ ವಿಶ್ವಾಸ.

ದೆಹಲಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ 49 ದಿನಗಳಲ್ಲೇ ಎಎಪಿ ರಾಜೀನಾಮೆ ನೀಡಿತ್ತು. ರಾಜಕೀಯ ಪಂಡಿತರು, ವಿಮರ್ಷಕರು ಮತ್ತೊಮ್ಮೆ ತಮ್ಮ ತೀರ್ಪು ನೀಡಿದ್ರು. ಮತ್ತೆ ಆಪ್ ಮೇಲೇಳಲು ಅಸಾಧ್ಯ ಎಂದೇ ಅಭಿಪ್ರಾಯಪಟ್ರು. ಎಲ್ಲೆಡೆ ಆಗ ಮೋದಿ ಜಪ, ಅವರಲ್ಲೇ ಭಾರತದ ಭವಿಷ್ಯ ಕಂಡಿತ್ತು. ಸಂಸತ್ ಚುನಾವಣೆ ಎಎಪಿ ಮುಂದಿತ್ತು. ದೆಹಲಿಯಲ್ಲಿ ಆಪ್ ತನ್ನೆಲ್ಲಾ ಸ್ಥಾನಗಳನ್ನು ಕಳೆದುಕೊಂಡಿತ್ತು, ಎಎಪಿ ಮತ್ತದರ ನಾಯಕರನ್ನು ಜನಸಾಮಾನ್ಯರು ಕೂಡ ಅಪಹಾಸ್ಯ ಮಾಡಿದರು. ಮೋದಿ ಅವರ ಜನಪ್ರಿಯತೆ ವಾಯುಮಂಡಲದವರೆಗೂ ಹಬ್ಬಿದಂತಿತ್ತು. ಒಂಟಿಯಾಗಿಯೇ ಅವರು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿತ್ತು. ದೆಹಲಿ ಐದನೆಯದು, ಅದು ನಮ್ಮ ಪಾಲಿಗೆ ಸಾವು ಬದುಕಿನ ಪ್ರಶ್ನೆ. ನಾವು ತಗ್ಗಿದ್ದು ನಿಜ, ಆದ್ರೆ ಔಟ್ ಆಗಿರಲಿಲ್ಲ. ಪರಿಸ್ಥಿತಿ ಕೂಡ ನಮಗೆ ಪೂರಕವಾಗಿರಲಿಲ್ಲ, ರಾಜೀನಾಮೆ ನೀಡಿದ್ದರಿಂದ ಜನರು ಕೇಜ್ರಿವಾಲ್ ಅವರ ಮೇಲೆ ಕೋಪಗೊಂಡಿದ್ರು. ನಮ್ಮನ್ನು ನಾವು ಒಗ್ಗೂಡಿಸಿಕೊಂಡು ಮತ್ತೆ ಗೆಲ್ಲಬಲ್ಲೆವು ಎಂಬ ವಿಶ್ವಾಸ ಬೆಳೆಸಿಕೊಳ್ಳಬೇಕಿತ್ತು.

ನಮ್ಮ ಬಗ್ಗೆ ನಮಗೇನು ಅನುಮಾನವಿರಲಿಲ್ಲ. ಜನರು ಕೂಡ ನಮ್ಮಲ್ಲಿ ನಂಬಿಕೆ ಇಟ್ಟಿದ್ದಾರೆಂಬುದು ತಿಳಿದಿತ್ತು. ಯಾವುದೇ ಕಾರಣಕ್ಕೂ ಅಪ್ರಾಮಾಣಿಕರಾಗಬಾರದು, ಭ್ರಷ್ಟಾಚಾರ ಮಾಡಬಾರದು ಅನ್ನೋದೇ ನಮ್ಮ ಉದ್ದೇಶ. ಆಡಳಿತವೇ ಆಗ ಪ್ರಮುಖ ವಿಚಾರ, ಜನರ ಬಳಿ ತಲುಪುವುದೇ ನಮ್ಮ ಗುರಿ. ರಾಜೀನಾಮೆ ಪ್ರಹಸನಕ್ಕಾಗಿ ಕ್ಷಮೆ ಕೋರಿದ ನಾವು ದೆಹಲಿಯಲ್ಲಿ ಯಾವ ರೀತಿ ಆಡಳಿತ ನಡೆಸಬೇಕೆಂಬ ನಮ್ಮ ಅಜೆಂಡಾವನ್ನು ಜನರ ಮುಂದಿಟ್ಟೆವು. ಕಳೆದ 30 ವರ್ಷಗಳಲ್ಲೇ ಮೋಸ್ಟ್ ಪವರ್ಫುಲ್ ಪ್ರಧಾನಿ ಎನಿಸಿಕೊಂಡಿದ್ದ ಮೋದಿ ಅವರೊಂದಿಗೆ ನಾವು ಪೈಪೋಟಿಗಿಳಿದಿದ್ದೆವು. ಅವರ ಬಳಿ ಸಂಪನ್ಮೂಲ ಮತ್ತು ಹಣವಿತ್ತು. ನಮ್ಮ ಬಳಿ ಏನಿತ್ತು? ಹಣ ಮತ್ತು ಸಂಪನ್ಮೂಲಕ್ಕೆ ಸರಿಸಮನಾದದ್ದು ಏನೂ ಇರಲಿಲ್ಲ. ಆದ್ರೆ ಕ್ರಾಂತಿಕಾರಿ ಬದಲಾವಣೆಯ ಹುರುಪಿತ್ತು, ಆ ಕಲ್ಪನೆಯಲ್ಲಿ ನಂಬಿಕೆ ಇಟ್ಟ ಸ್ವಯಂಸೇವಕರ ಸೈನ್ಯವಿತ್ತು.

ದೇಶವನ್ನು ಲೂಟಿ ಮಾಡುತ್ತಿರುವ ರಾಜಕಾರಣಿಗಳು ಮತ್ತು ಸಾಂಪ್ರದಾಯಿಕ ರಾಜಕೀಯವನ್ನು ಬದಲಾಯಿಸಬೇಕು ಅನ್ನೋದೇ ನಮ್ಮ ಉದ್ದೇಶ. ಭಾರತ ಇನ್ನಷ್ಟು ಉತ್ತಮ ಆಡಳಿತ ನಡೆಸಬಲ್ಲಂತಹ ಗಣ್ಯರನ್ನು ಹೊಂದಲು ಅರ್ಹವಾಗಿದೆ ಅನ್ನೋದೇ ನಮ್ಮ ಕಲ್ಪನೆ. ಜನಸಾಮಾನ್ಯರ ಬಲದಿಂದಲೇ ಆಮ್ ಆದ್ಮಿ ಅಧಿಕಾರ ನಡೆಸಬೇಕು. ಪ್ರಾಮಾಣಿಕ ರಾಜಕೀಯ, ಸ್ವಚ್ಛ ರಾಜಕೀಯ ಮತ್ತು ಕೈಗೆಟುಕುವ ರಾಜಕೀಯವೇ ನಮ್ಮ ಗುರಿ. ಎಎಪಿ ಒಂದು ವಾಹನವಾದ್ರೆ, ನಮ್ಮ ಪರಿಕಲ್ಪನೆಯೇ ಅದರ ಚಾಲಕ ಮತ್ತು ವೇಗವರ್ಧಕ. ನಾವು ನಂಬಿಕೆ ಕಳೆದುಕೊಳ್ಳಬಾರದು, ಸಹನೆಯಿಂದಿರಬೇಕು ಅನ್ನೋದೊಂದೇ ನಮ್ಮ ಮನಸ್ಸಿನಲ್ಲಿತ್ತು. ಪರಿಣಾಮ ನಾವೀಗ ದೆಹಲಿ ಗದ್ದುಗೆ ಏರಿದ್ದೇವೆ, 70ರಲ್ಲಿ 67 ಸ್ಥಾನಗಳನ್ನು ಗೆದ್ದು ನಾವೇನು ಅನ್ನೋದನ್ನು ಸಾಧಿಸಿ ತೋರಿಸಿದ್ದೇವೆ.

ಆಡಳಿತದ ವಿಚಾರದಲ್ಲಿ ದೆಹಲಿ ಸರ್ಕಾರ ದೇಶದಲ್ಲಿ ಹೊಸ ಆಯಾಮವನ್ನೇ ಸೃಷ್ಟಿಸಿದೆ. ದೆಹಲಿಯನ್ನು ಗೆದ್ದ ಅದೇ ಪರಿಕಲ್ಪನೆ ಈಗ ಪಂಜಾಬ್ನಲ್ಲೂ ಹೊಸ ಅಲೆ ಸೃಷ್ಟಿಸಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ 2017ರಲ್ಲಿ ಪಂಜಾಬ್ ಮತ್ತು ಇತರೆಡೆ ಕೂಡ ನಾವು ಜಯಭೇರಿ ಬಾರಿಸಲಿದ್ದೇವೆ. ಅದೇ ರೀತಿ ಅಂದು ಕುಣಾಲ್ ಹಾಗೂ ರೋಹಿತ್ ಸೋಲೊಪ್ಪಿಕೊಂಡಿದ್ರೆ ಇಂದು ಶೇಖರ್ ಗುಪ್ತಾ ಅವರಿಬ್ಬರ ಸಂದರ್ಶನ ಮಾಡುತ್ತಿರಲಿಲ್ಲ. ಅರವಿಂದ್ ಕೇಜ್ರಿವಾಲ್ ಮತ್ತವರ ತಂಡ ಆ ಪರಿಕಲ್ಪನೆಯಲ್ಲಿ ನಂಬಿಕೆ ಇಡದೇ ಇದ್ರೆ ನಾನಿವತ್ತು ಈ ಲೇಖನ ಬರೆಯುತ್ತಲೇ ಇರಲಿಲ್ಲ. ಸ್ಟಾರ್ಟ್ಅಪ್ ಕೂಡ ಐಡಿಯಾ, ಸ್ವಯಂ ನಂಬಿಕೆ, ಪ್ರಯತ್ನ ಮತ್ತು ತಾಳ್ಮೆಯನ್ನೇ ಅವಲಂಬಿಸಿದೆ. ಇದನ್ನು ಸಾಧಿಸಿದವರೇ ವಿಜಯಶಾಲಿಗಳು. ರೋಹಿತ್ ಮತ್ತು ಕುಣಾಲ್ ಕೂಡ ನಿಜವಾದ ವಿನ್ನರ್ಸ್.

ಲೇಖಕರು: ಆಶುತೋಶ್, ಎಎಪಿ ನಾಯಕ

ಅನುವಾದಕರು: ಭಾರತಿ ಭಟ್

ಇದನ್ನೂ ಓದಿ...

ಪೋಲಿಯೋ ಬಾಧಿತ ಈಗ ಟ್ರಾಫಿಕ್ ವಾರ್ಡನ್..!