ನಿರ್ಗತಿಕರ ಬಾಳಿಗೆ ಉಳಿಕೆ ಆಹಾರ ! –ಬದುಕು ‘ಕೋಮಲ’

ಟೀಮ್​​ ವೈ.ಎಸ್​​.ಕನ್ನಡ

ನಿರ್ಗತಿಕರ ಬಾಳಿಗೆ ಉಳಿಕೆ ಆಹಾರ ! –ಬದುಕು ‘ಕೋಮಲ’

Friday November 20, 2015,

2 min Read

ಕೋಮಲ್ ಅಹ್ಮದ್ ಅವರು ಪಾಕಿಸ್ತಾನ ಮೂಲದವರು. ಬಹುತೇಕ ವಲಸಿಗ ಕುಟುಂಬಗಳಂತೆ, ಅಮೆರಿಕಾದಲ್ಲಿ ಆಹಾರ ಸಂಪಾದಿಸುವುದು ಕಷ್ಟದ ಕೆಲಸವಾಗಿತ್ತು. ತುತ್ತುಗಾಗಿ ಕೋಮಲ್ ಪೋಷಕರದ್ದು ನಿತ್ಯದ ಹೋರಾಟವಾಗಿತ್ತು. ಅವರ ಅಪ್ಪ ಯಾವಾಗಲೂ ತಟ್ಟೆಯಲ್ಲಿದ್ದ ಆಹಾರವನ್ನು ಸಂಪೂರ್ಣವಾಗಿ ಖಾಲಿ ಮಾಡುವಂತೆ ಆದೇಶಿಸುತ್ತಿದ್ದರು. ಬೆಳೆಯುತ್ತಿದ್ದ ಹಾಗೆ ಆಹಾರ ವೇಸ್ಟ್ ಮಾಡಬಾರದು, ಅದರ ಪ್ರಾಮುಖ್ಯತೆ ಎಷ್ಟು ಎನ್ನುವುದು ಕೋಮಲ್ ಗಮನಕ್ಕೂ ಬಂದಿತ್ತು. ಪ್ರತಿದಿನ ಅಮೆರಿಕಾದಲ್ಲಿ ಉಳಿಯುತ್ತಿದ್ದ ಆಹಾರ ಒಂದು ಫುಟ್ಬಾಲ್ ಸ್ಟೇಡಿಯಂ ಭರ್ತಿ ಮಾಡುವಷ್ಟಾಗುತ್ತಿತ್ತು ಎನ್ನುವ ಲೆಕ್ಕಾಚಾರ ಆಕೆಯನ್ನು ಬಹುವಾಗಿ ಕಾಡಿತು.

ಆದರೆ, ಈ ಅಂಕಿಅಂಶಗಳಿಗಿಂತ ಹೆಚ್ಚಾಗಿ ವೈಯುಕ್ತಿಕ ಅನುಭವಗಳೇ ಮನುಷ್ಯರಲ್ಲಿ ಹೆಚ್ಚಿನ ಬದಲಾವಣೆಗೆ ಪ್ರೇರಕವಾಗುತ್ತದೆ. ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಗ ಅವರು ಒಮ್ಮೆ, ತಮ್ಮ ಕಾಲೇಜಿನ ಬಳಿ ನಿರಾಶ್ರಿತ ವ್ಯಕ್ತಿಯೊಬ್ಬರನ್ನು ಭೇಟಿ ಮಾಡುತ್ತಾರೆ. ಅವರನ್ನು ಊಟಕ್ಕಾಗಿ ಹೊರಗೆ ಕರೆದೊಯ್ಯುತ್ತಾರೆ. ಇರಾಕ್ ಯುದ್ಧದಲ್ಲಿ ತಾನು ಸೈನಿಕನಾಗಿದ್ದೆ, ಈಗ ಕಷ್ಟಕ್ಕೆ ಸಿಲುಕಿದ್ದೇನೆ ಎಂದು ಆತ ತನ್ನ ಬದುಕಿನ ಕಥೆ ಹೇಳಿಕೊಂಡಿದ್ದ. ಈ ಘಟನೆ ಆಕೆಯ ಮನಸ್ಸಿನಲ್ಲಿ ತಲ್ಲಣ ಸೃಷ್ಟಿಸಿತ್ತು. ಕಾಲೇಜಿಗೆ ವಾಪಸ್ಸಾದ ಬಳಿಕ ತುಂಬಾ ಯೋಚನೆ ಮಾಡಿದರು. ಆಗ ಒಂದು ಐಡಿಯಾ ಹುಟ್ಟಿಕೊಂಡಿತು. ತಮ್ಮ ಕಾಲೇಜಿನ ಊಟದ ಮನೆಯಲ್ಲಿ ಉಳಿಯುವ ಆಹಾರವನ್ನು ನಿರಾಶ್ರಿತರಿಗೆ ನಿರ್ಗತಿಕರಿಗೆ ಹಂಚುವ ಉಪಾಯ ಮಾಡಿದರು.

image


ಇದೇ ಮಾದರಿಯನ್ನು ದೊಡ್ಡ ಮಟ್ಟದಲ್ಲಿ ಅನುಷ್ಟಾನಗೊಳಿಸುವ ಮೂಲಕ ಕೋಮಲ್ ಅವರು, ಫೀಡಿಂಗ್ ಪಾರ್ವರ್ಡ್ ಎನ್ನುವ ಎನ್​​ಜಿಒ ಒಂದನ್ನು ನಡೆಸುತ್ತಿದ್ದಾರೆ. ಅತಿಯಾದ ಆಹಾರ ತ್ಯಾಜ್ಯವು ಈ ಜಗತ್ತಿನ ಅತಿದೊಡ್ಡ ಸಮಸ್ಯೆಯಾಗಿದೆ ಎನ್ನುವುದನ್ನು ಅವರು ಅರ್ಥಪೂರ್ಣವಾಗಿ ವಿವರಿಸುತ್ತಾರೆ. ಈಗ ಅವರು ಆ್ಯಪ್ ಒಂದನ್ನು ಸೃಷ್ಟಿಸಿದ್ದಾರೆ. ಈ ಆ್ಯಪ್ ಮೂಲಕ ಕಂಪನಿಗಳು, ಈವೆಂಟ್ ಪ್ಲಾನರ್​​ಗಳು ತಮ್ಮ ಕಾರ್ಯಕ್ರಮಗಳ ಬಳಿಕ ಉಳಿದ ಆಹಾರವನ್ನು ಸ್ಥಳೀಯವಾಗಿ ನಿರ್ಗತಿಕರಿಗೆ ಹಂಚಿಕೆ ಮಾಡುತ್ತಾರೆ. ಫೀಡಿಂಗ್ ಫಾರ್ವರ್ಡ್ ಡ್ರೈವರ್​​ಗಳು ಈ ಉಳಿಕೆ ಆಹಾರವನ್ನು ಸಂಗ್ರಹಿಸುತ್ತಾರೆ ಮತ್ತು ಎಲ್ಲಿ ಅಗತ್ಯವಿದೆಯೋ ಅಲ್ಲಿಗೆ ತಲುಪಿಸುತ್ತಾರೆ.

ಫೀಡಿಂಗ್ ಫಾರ್ವರ್ಡ್ ಈ ಕಾರ್ಯಕ್ರಮದ ಮೂಲಕ ಹಸಿವನ್ನು ನೀಗಿಸುತ್ತಿದೆ ಜೊತೆಗೆ ನಗರಗಳಲ್ಲಿ ಆಹಾರ ತ್ಯಾಜ್ಯಗಳಿಗೆ ಪರಿಹಾರವನ್ನೂ ಒದಗಿಸಿದೆ. ಸ್ಯಾನ್ ಫ್ರಾನ್ಸಿಸ್ಕೋ ಪ್ರದೇಶದಲ್ಲಿ ಸುಮಾರು 575,000 ನಿರಾಶ್ರಿತ ಜನರಿಗೆ ಈವರೆಗೆ ಆಹಾರ ಒದಗಿಸಿದೆ. ನಾವು ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಇದು ಯಶಸ್ವಿಯಾದರೆ, ಜಗತ್ತಿನ ಎಲ್ಲಾ ಭಾಗಗಳಲ್ಲೂ ಯಶಸ್ವಿಯಾಗಲಿದೆ ಎನ್ನುವುದು ನಮ್ಮ ನಂಬಿಕೆ ಎನ್ನುತ್ತಾರೆ ಕೋಮಲ್ ಅಹ್ಮದ್.