ಇವರೇ ಗುಜರಾತ್​ನ ಪ್ರಾಮಾಣಿಕ ಪೊಲೀಸ್...

ಟೀಮ್ ವೈ.ಎಸ್.ಕನ್ನಡ 

0

ಧನ್ಶುಕ್ ಮೆನ್ಸಿಭಾಯ್ ಕಚೋಟ್...ಗುಜರಾತ್​ನ ಅತ್ಯಂತ ಪ್ರಾಮಾಣಿಕ ಸಂಚಾರಿ ಪೊಲೀಸ್. ಗುಜರಾತ್​ ಜಿಲ್ಲೆಯ ರಾಜ್​ಕೋಟ್​ನಲ್ಲಿ ಅಸಿಸ್ಟೆಂಟ್ ಸಬ್ ಇನ್ಸ್​ಪೆಕ್ಟರ್ ಆಗಿ ಕಾರ್ಯನಿರ್ವಹಿಸ್ತಿದ್ದಾರೆ. ಧನ್ಶುಕ್ ಅವರಿಗೆ ಈಗ 57ರ ಹರೆಯ. ತಮ್ಮ ಕಳೆದ 10 ವರ್ಷಗಳ ಸೇವಾ ಅವಧಿಯಲ್ಲಿ ಅವರು ಸಂಚಾರಿ ನಿಯಮ ಉಲ್ಲಂಘಿಸಿದವರಿಂದ ಸಂಗ್ರಹಿಸಿದ ದಂಡದ ಮೊತ್ತ ಎಷ್ಟು ಗೊತ್ತಾ? 2.16 ಕೋಟಿ ರೂಪಾಯಿ, ಅಂದ್ರೆ ಇಲಾಖೆಯ ಒಟ್ಟಾರೆ ಸಂಗ್ರಹದಲ್ಲಿ ಶೇಕಡಾ 10ರಷ್ಟು.

1979ರಲ್ಲಿ ಓರ್ವ ಪೇದೆಯಾಗಿ ಧನ್ಶುಕ್ ಗುಜರಾತ್ ಪೊಲೀಸ್ ಇಲಾಖೆ ಸೇರಿದ್ರು. 2006ರಲ್ಲಿ ಅವರನ್ನು ಟೋವಿಂಗ್ ಇಲಾಖೆಗೆ ವರ್ಗಾವಣೆ ಮಾಡಲಾಯ್ತು. ಅಲ್ಲಿಯೂ ಕೂಡ ತಮ್ಮ ದಕ್ಷತೆ, ಪ್ರಾಮಾಣಿಕತೆಯಿಂದ್ಲೇ ಹೆಸರು ಮಾಡಿದವರು ಧನ್ಶುಕ್ ಕಚೋಟ್. ಧನ್ಶುಕ್ ಅವರೊಬ್ಬರೇ ಏಕಾಂಗಿಯಾಗಿ ಸಂಚಾರಿ ನಿಯಮ ಉಲ್ಲಂಘಿಸಿದ 1.7 ಲಕ್ಷ ಪ್ರಕರಣಗಳನ್ನು ಹಿಡಿದಿದ್ದಾರೆ. ಸಿಗ್ನಲ್ ಜಂಪ್ ಮಾಡೋದು, ಹೆಲ್ಮೆಟ್ ಧರಿಸದೇ ಎಸ್ಕೇಪ್ ಆಗೋದು ಇವನ್ನೆಲ್ಲ ವಾಹನ ಸವಾರರು ಮಾಡಿಯೇ ಮಾಡ್ತಾರೆ. ಹೀಗೆ ಪರಾರಿಯಾದವರನ್ನೆಲ್ಲ ಹಿಡಿಯಲು ತಂತ್ರಜ್ಞಾನ ತಮಗೆ ನೆರವಾಗಿದೆ ಎನ್ನುತ್ತಾರೆ ಧನ್ಶುಕ್. ಇಂತಹ ಕಠಿಣ ಸಂದರ್ಭಗಳಲ್ಲೆಲ್ಲ ತಂತ್ರಜ್ಞಾನದ ಸಹಾಯವನ್ನವರು ಪಡೆದಿದ್ದಾರಂತೆ. ``ನಾನು ಮೊದಲು ನನ್ನ ಮೊಬೈಲ್ನಲ್ಲಿ ನೋ ಪಾರ್ಕಿಂಗ್ನಲ್ಲಿ ನಿಲ್ಲಿಸಿದ ಕಾರಿನ ಫೋಟೋ ತೆಗೆದುಕೊಳ್ಳುತ್ತೇನೆ. ಕಾರಿನ ಚಾಲಕ ಅಥವಾ ಮಾಲೀಕ ದಂಡ ಕಟ್ಟದೇ ಎಸ್ಕೇಪ್ ಆಗಲು ಪ್ರಯತ್ನಿಸಿದ್ರೆ ಆ ಫೋಟೋಗಳನ್ನು ತೋರಿಸುತ್ತೇನೆ. ಆಗ ಅವರು ಬೇಗನೆ ದಂಡ ಕಟ್ಟಲು ಒಪ್ಪಿಕೊಳ್ತಾರೆ'' ಎನ್ನುತ್ತಾರೆ ಧನ್ಶುಕ್.

ಧನ್ಶುಕ್ ಪ್ರತಿದಿನ ಸಂಚಾರ ನಿಯಮ ಉಲ್ಲಂಘಿಸುವ 100ಕ್ಕೂ ಹೆಚ್ಚು ವಾಹನಗಳನ್ನು ಎಳೆದೊಯ್ಯುತ್ತಾರಂತೆ. ಇಲಾಖೆಯ ಅಷ್ಟೂ ಸಿಬ್ಬಂದಿ ಸೇರಿದ್ರು ನೋ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಇಷ್ಟು ವಾಹನಗಳನ್ನು ಎಳೆದೊಯ್ಯುವುದಿಲ್ಲ. ಇಲಾಖೆ ಹೆಚ್ಚೆಂದ್ರೆ ದಿನಕ್ಕೆ 50 ವಾಹನಗಳನ್ನು ಹೊತ್ತೊಯ್ಯುತ್ತದೆ. ``ಭಾರತದಲ್ಲಿ ಏಕಾಂಗಿಯಾಗಿ 2 ಕೋಟಿ ರೂಪಾಯಿಗೂ ಅಧಿಕ ದಂಡ ವಸೂಲಿ ಮಾಡಿದ ಏಕೈಕ ವ್ಯಕ್ತಿ ಅಂದ್ರೆ ಧನ್ಶುಕ್'' ಅನ್ನೋದು ರಾಜ್​ಕೋಟ್​ನ ಸಹಾಯಕ ಪೊಲೀಸ್ ಆಯುಕ್ತ ಕೆ.ಬಿ.ಝಾಲಾ ಅವರ ಅಭಿಪ್ರಾಯ. ಅವರ ಸಮರ್ಪಣಾ ಭಾವ, ಕೆಲಸದ ಮೇಲಿನ ಆಸಕ್ತಿಯನ್ನು ಗುರುತಿಸಿ, ಧನ್ಶುಕ್ ಅವರನ್ನು ಬೇರೆ ಇಲಾಖೆಗೆ ವರ್ಗಾವಣೆ ಕೂಡ ಮಾಡಿಲ್ಲ.

''ನಾನು ಕೇವಲ ನನ್ನ ಕರ್ತವ್ಯ ಮಾಡುತ್ತಿದ್ದೇನೆ ಅಷ್ಟೆ. ಜನರು ಸಂಚಾರಿ ನಿಯಮ ಉಲ್ಲಂಘಿಸಿದ್ದನ್ನು ನೋಡಿದಾಗಲೆಲ್ಲ ನಾನು ಅವರಿಗೆ ದಂಡ ಹಾಕದೇ ಬಿಡುವುದಿಲ್ಲ.  ರಾಜ್​ಕೋಟ್​ನಲ್ಲಿ ಸಂಚಾರ ವ್ಯವಸ್ಥೆ ಸುಧಾರಿಸಬೇಕು, ಅಪಘಾತಗಳ ಸಂಖ್ಯೆ ತಗ್ಗಬೇಕು ಎನ್ನುವುದೇ ನನ್ನ ಉದ್ದೇಶ'' ಎನ್ನುತ್ತಾರೆ ಧನ್ಶುಕ್. ಇವರ ಈ ಪ್ರಯತ್ನಕ್ಕೆ ಫಲ ಸಿಗಲಿ ಅನ್ನೋದೇ ಎಲ್ಲರ ಆಶಯ.

ಇದನ್ನೂ ಓದಿ..

ಪೂಜಾ ಐಟಂಗಳ ಬಗ್ಗೆ ಟೆನ್ಷನ್​ ಬಿಟ್ಟುಬಿಡಿ- ರೆಡಿಪೂಜಾ.ಕಾಂನಲ್ಲಿ ಆರ್ಡರ್​ ಮಾಡಿ..!

ಪ್ಲಾಸ್ಟಿಕ್​ಗೆ ಗುಡ್​ಬೈ ಹೇಳಿದ ಸ್ಯಾನ್​ಫ್ರಾನ್ಸಿಸ್ಕೋ