ಕ್ರಿಯೇಟಿವ್​​​​ ಕೋಸ್ಟಲ್​ವುಡ್- ಕಡಿಮೆ ಖರ್ಚು, ಹೆಚ್ಚು ಲಾಭ..!

ಡಿ.ಡಿ.

ಕ್ರಿಯೇಟಿವ್​​​​ ಕೋಸ್ಟಲ್​ವುಡ್- ಕಡಿಮೆ ಖರ್ಚು, ಹೆಚ್ಚು ಲಾಭ..!

Monday November 30, 2015,

3 min Read

ಇರುವುದೊಂದು ಸಮುದ್ರ. ಕೈ ಹಿಡಿದಿರುವುದು ಮೀನು ಮತ್ತು ಆಮದು ರಫ್ತಿನ ವ್ಯವಹಾರ. ಇಷ್ಟರಲ್ಲೇ ಉದ್ಯಮ ಲೋಕದಲ್ಲಿ ಆಗ್ತಾರೆ ಸರದಾರ. ರಂಗಿನ್ ದುನಿಯಾದಲ್ಲೂ ಮಿಂಚುತ್ತಾರೆ ಇಲ್ಲಿನ ಕುವರಿ,ಕುವರರು. ಹೀಗೆ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿಯ ಒಂದು ಭಾಗ, ಚಿಕ್ಕಮಗಳೂರಿನ ಒಂದು ಸೈಡ್, ಕುಂದಾಪುರದವರೆಗಿನ ತುಳು ನಾಡಿನ ಜನರು ಸಾಧಿಸ ಹೊರಟರೇ ಸಾಧಿಸಿಯೇ ತೀರುತ್ತಾರೆ ಅನ್ನೋ ಮಾತಿದೆ.

image


ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವಂತೆ ಕರಾವಳಿಯವರು ಬುದ್ಧಿವಂತರು, ಜಾಣ್ಮೆ ಚಾಣಾಕ್ಷತೆ ಎಲ್ಲವೂ ಇದೆ.ಆದರೆ ಅದಕ್ಕೆ ಅಪವಾದಗಳೂ ಕೂಡ ಇದಾವೆ. ಇಲ್ಲಿ ರೌಡಿಸಂ ಇದೆ, ಭೂಗತ ಲೋಕದ ಬೇರಿದೆ. ಸಾಂಸ್ಕೃತಿಕ ವೈವಿದ್ಯಗಳ ನೆಲೆವೀಡು ಕೂಡ ಹೌದು.

ಇಂತಹ ತುಳುನಾಡಿನಲ್ಲಿ ಈಗ ಹೊಸ ಸಿನಿಮಾ ಜಗತ್ತು ಎತ್ತರೆತ್ತರಕ್ಕೆ ಬೆಳೆಯುತ್ತಿದೆ. ಕಾಲಿವುಡ್, ಟಾಲಿವುಡ್, ಸ್ಯಾಂಡಲ್​​​ವುಡ್,ಬಾಲಿವುಡ್ ಗಳ ನಡುವೆ ಕೋಸ್ಟಲ್ ವುಡ್ ಸೇರಿಕೊಂಡಿದೆ. ವರ್ಷಕ್ಕೆ ಆರು ಏಳರಂತೆ ಸಿನಿಮಾ ಬಿಡುಗಡೆ ಆಗ್ತಾನೆ ಇದ್ದಾವೆ. ಪ್ರೋಡಕ್ಷನ್ ನಂಬರ್ ಗಳು ಹೆಚ್ಚುತ್ತಿವೆ.

ತುಳು ಭಾಷೆ ಪ್ರಾಬಲ್ಯವಿರುವ ಸೀಮಿತ ಪ್ರದೇಶದಲ್ಲಿ ಸಿನಿಮಾ ಹೇಗೆ ಹಿಟ್ ಆಗುತ್ತೆ. ವರ್ಷಕ್ಕೊಂದು ಮಾಡುವ ಅವಾರ್ಡ್ ಫಿಲ್ಮ್ ಆದ್ರೆ ಓಕೆ, ಅದಕ್ಕೆ ಕಮರ್ಷಿಯಲ್ ಟಚ್ ನೀಡಿದ್ರೆ ವರ್ಕ್ ಔಟ್ ಆಗುತ್ತಾ ಅಂತ ಅಂದುಕೊಂಡಿದ್ದವರೆಲ್ಲ ಈಗ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಅಷ್ಟರಮಟ್ಟಿಗೆ ಕೋಸ್ಟಲ್ ವುಡ್ ನಲ್ಲಿ ಚಲನಚಿತ್ರಗಳು ವಿಜೃಂಭಿಸುತ್ತಿವೆ.

1971ರಲ್ಲಿ ಎನ್ನ ತಂಗಡಿ ಅನ್ನೋ ಚಿತ್ರದ ಮೂಲಕ ಆರಂಭವಾದ ಸಿನಿಮಾ ಜರ್ನಿ ವೇಗವಾಗಿ ಸಾಗಲಿಲ್ಲ, ಕುಂಟುತ್ತಾ ಕುಂಟುತ್ತಾ ಸಾಗುತ್ತಿತ್ತು. ಯಾರೂ ಕೂಡ ಲಕ್ಷ ಲಕ್ಷ ಖರ್ಚು ಮಾಡಿ ಸಿನಿಮಾ ಮಾಡಲು ಗೋಜಿಗೆ ಹೋಗಿರಲಿಲ್ಲ. ಪೌರಾಣಿಕ ಕಥಾ ಹಂದರಗಳನ್ನು ಇಟ್ಟುಕೊಂಡು, ಸಾಮಾಜಿಕ ವಿಚಾರಗಳನ್ನು ಇಟ್ಟುಕೊಂಡು ಬಹಳ ಕಡಿಮೆ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣ ಮಾಡಿ ಹೊರತರುತ್ತಿದ್ದರು.

2013ರ ನಂತರ ತುಳು ಸಿನಿಮಾ ಜಗತ್ತಿಗೆ ಪಾದರಸದ ಸಂಚಲನ ಸಿಕ್ಕಿದೆ. ಸ್ಪರ್ಧೆಯೂ ಕೂಡ ಹೆಚ್ಚುತ್ತಿದೆ. ಧನಾತ್ಮಕವಾದ ಸ್ಪರ್ಧೆಗಳಲ್ಲಿ ಗೆಲ್ಲುವುದಕ್ಕೆ ತುಳು ಚಿತ್ರರಂಗದಲ್ಲಿ ಅವಕಾಶಗಳಿದ್ದಾವೆ ಅನ್ನೋದನ್ನು ಸಾಕ್ಷೀಕರಿಸಲಾಗಿದೆ. ಇವೆಲ್ಲದರ ಜೊತೆ ತುಳು ಚಿತ್ರಗಳ ವ್ಯಾಪ್ತಿ ಹೆಚ್ಚಿದೆ.

ಮಂಗಳೂರು,ಉಡುಪಿಯಲ್ಲಿ ಮಾತ್ರ ರಿಲೀಸ್ ಆಗುತ್ತಿದ್ದ ಚಿತ್ರಗಳು ಈಗ ಕುಂದಾಪುರ, ಚಿಕ್ಕಮಗಳೂರು, ಮಡಿಕೇರಿ ಹೀಗೆ ತಮ್ಮ ಸುತ್ತಲಿನ ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ಚಿತ್ರಮಂದಿರಗಳಿಗೆ ದಾಪುಗಾಲಿಡುತ್ತಿವೆ. ಅದರ ಜೊತೆ ಜೊತೆಗೆ ಬೆಂಗಳೂರಿನ ಮಾಲ್ ಗಳಲ್ಲಿ ಕಾಸ್ಟ್ಲಿ ಸಿನಿಮಾವಾಗಿ ಹೊರಬರುತ್ತಿದೆ.

ಇಷ್ಟಕ್ಕೆ ಚಿತ್ರದ ಜರ್ನಿ ಮುಗಿದಿಲ್ಲ. ಸಾಗರದಾಚೆಗೂ ಕೂಡ ತುಳು ಚಿತ್ರ ತನ್ನ ಕಂಪನ್ನು ಪಸರಿಸಿದೆ. ಮುಂಬೈನಲ್ಲಿ ಹಲವು ತುಳು ಚಿತ್ರಗಳು ತಮ್ಮ ಅಬ್ಬರವನ್ನು ತೋರಿಸಿವೆ. ಬಾಲಿವುಡ್ ನ ತವರೂರಿನಲ್ಲೂ ಕೋಸ್ಟರ್ ವುಡ್ ಸೌಂಡ್ ಮಾಡಿದೆ. ಅಲ್ಲದೇ ವಾಣಿಜ್ಯ ನಗರಿಯ ಕೋಟಿ ಕೋಟಿ ಕಾಸುಗಳಲ್ಲಿ ಕೆಲ ಚಿಲ್ಲರೆ ಲಕ್ಷಗಳನ್ನು ತನ್ನ ಜೋಳಿಗೆಗೆ ಇಳಿಸಿಕೊಂಡಿದೆ.

image


ಇದೆಲ್ಲ ಭಾರತದೊಳಗಿನ ಕಥೆಯಾಯ್ತು. ಅದನ್ನೂ ಮೀರಿ ದುಬೈನಲ್ಲಿ ತುಳು ಚಿತ್ರಕ್ಕೆ ಭಾರೀ ಬೇಡಿಕೆಯಿದೆ. ದುಬೈನಲ್ಲಿರುವ ಮಂಗಳೂರಿನವರು ಸಾವಿರ ರೂಪಾಯಿ ಕೊಟ್ಟಾದ್ರೂ ಸರಿ ಚಿತ್ರ ನೋಡಲೇ ಬೇಕು ಅಂತ ನೋಡಿ ಪ್ರೋತ್ಸಾಹಿಸುತ್ತಾರೆ. ಚಿತ್ರ ಮಾಡುವವರಿಗೆ ಇಷ್ಟು ಸಾಕು, ಈ ರೀತಿಯ ಪ್ರೋತ್ಸಾಹ ಸಿಗುತ್ತಿರುವುದರಿಂದಲೇ ಇಂದು ಚಿತ್ರಗಳ ಸಂಖ್ಯೆ ಹೆಚ್ಚುತ್ತಿರುವುದು.

ಜನರಲ್ಲಿತ್ತು ತುಳು ನಾಟಕದ ಕ್ರೇಝ್- ಈಗ ತುಳು ಚಿತ್ರಕ್ಕೂ ಸಿಕ್ತಿದೆ ರೆಸ್ಪಾನ್ಸ್

ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತಲೂ ತುಳು ನಾಟಕ ಅಂದ್ರೆ ಸಾಕು ಜನ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಕುಳಿತು ನೋಡುತ್ತಾರೆ. ಅದರಲ್ಲೂ ಬಲೇ ಚಾ ಪರ್ಕ, ಒರಿಯರ್ ದೊರಿ ಅಸಲ್, ಲಕುಮಿ ಕಲಾವಿದೆರ್ ಹೀಗೆ ಘಟಾನುಘಟಿ ತಂಡಗಳ ದಂಡೇ ಇದೆ. ಈ ಎಲ್ಲಾ ನಾಟಕ ತಂಡಗಳು ಜನರನ್ನು ಮೂರು ಗಂಟೆ ನಕ್ಕು ನಲಿಸಿ ಒಂದು ದೊಡ್ಡ ಸಂದೇಶವನ್ನು ರವಾನಿಸುವ ನಾಟಕ ಮಾಡುವುದರಲ್ಲಿ ಎತ್ತಿದ ಕೈ.

ಈ ತಂಡಗಳ ನಾಟಕಕ್ಕೆ ಜನರ ಕ್ರೇಝ್ ಹೇಗಿರುತ್ತೆ ಅಂದ್ರೆ ನಾಟಕ ನೋಡಿದ್ರೆ ಮಾತ್ರ ಸಾಲದು, ಡೈಲಾಗ್ ಗಳನ್ನು ಸದಾ ಕೇಳುತ್ತಿರಬೇಕು ಅಂತ ಜನ ಮುಗಿಬಿದ್ದು ಆಡಿಯೋ ಸೀಡಿ ಖರೀದಿಸುತ್ತಾರೆ. ಈ ನಾಟಕ ತಂಡಗಳು ತಮ್ಮ ಕಲಾಚತುರತೆಯನ್ನು ಮುಂಬೈನಲ್ಲಿ ಮತ್ತು ದುಬೈನಲ್ಲಿ ಮೆರೆಸಿ ಧನ ಸಂಪಾದಿಸುತ್ತಾರೆ. ಈ ನಾಟಕಗಳೇ ಇಂದು ತುಳು ರಂಗಭೂಮಿ ಮತ್ತು ತುಳು ಚಿತ್ರರಂಗದ ವಿಸ್ತಾರವನ್ನು ಹೆಚ್ಚಿಸಿರುವುದರಲ್ಲಿ ಯಾವುದೇ ಸಂಶಯವಿಲ್ಲ.

ಕಡಿಮೆ ಬಜೆಟ್, ಕಡಿಮೆ ಪ್ರಾಫಿಟ್- ಭರಪೂರ ಮಸ್ತಿ, ನಕ್ಕು ನಲಿಯೋದೇ ಖುಷಿ

ನಾಟಕದ ಹಾದಿಯಲ್ಲೇ ಸಾಗುತ್ತಿರುವ ತುಳು ಚಿತ್ರರಂಗ ಹಾಸ್ಯಭರಿತ ಸಾಮಾಜಿಕ ಚಿತ್ರಗಳನ್ನೇ ಮಾಡಿ ಸೈಅಂದಿದೆ. ಕಡಿಮೆ ಬಜೆಟ್​​​​ ಪ್ರಾಜೆಕ್ಟ್ ನಲ್ಲಿ ನಿರ್ಮಾಣವಾಗುವ ಚಿತ್ರಗಳಿಂದ ಬಹುದೊಡ್ಡ ಪ್ರಾಫಿಟ್ ಸಿಗುತ್ತೆ ಅಂತನೂ ಅಲ್ಲ. ಆದರೆ ಲಾಭವಿಲ್ಲದಿರುವುದಿಲ್ಲ ಅನ್ನೋದು ಕೂಡ ಸತ್ಯ.

ತುಳು ಚಿತ್ರದಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ನೀಡುವುದು ಸರ್ವೆ ಸಾಮಾನ್ಯ. ಇವರ ಜೊತೆ ಹೀರೋ ಹೀರೋಯಿನ್ ಇರ್ತಾರೆ. ಎಷ್ಟೇ ದೊಡ್ಡ ಬಜೆಟ್ ನ ಚಿತ್ರ ಮಾಡಿದರೂ ಅದರಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಕುಸಲ್ದ ಅರಸೆ ನವೀನ್ ಡಿ ಪಡೀಲ್, ಡಿಫರೆಂಟ್ ಕ್ಯಾರೆಕ್ಟರ್ ಬೋಜರಾಜ್ ವಾಮಂಜೂರ್ ಹೀಗೆ ಹಾಸ್ಯ ತ್ರಿಮೂರ್ತಿಗಳು ಇದ್ದೇ ಇರುತ್ತಾರೆ. ಇವರು ಮಾರ್ಕೆಟ್ ನಲ್ಲೂ ಶೈನಿಂಗ್ ಸ್ಟಾರ್ಸ್

ಹಾಗಂತ ಚಿತ್ರ ನಾಟಕದಂತಿರುತ್ತೆ ಅಂತ ಅಲ್ಲ. ಬದಲಾಗಿ ಕನ್ನಡ ಚಿತ್ರದಂತೆ ಲವ್, ನೇಟಿವಿಟಿ, ಫೈಟ್ ಎಲ್ಲವೂ ಕೂಡ ಭರಪೂರವಾಗೇ ಇರುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ತುಳು ನಾಡಿನ ಸಂಸ್ಕೃತಿ, ಅಲ್ಲಿನ ಆಚಾರ ವಿಚಾರಗಳನ್ನು ಕಟ್ಟಿಕೊಡುವ ಪ್ರಯತ್ನದಲ್ಲಿ ಚಿತ್ರ ನಿರ್ಮಾಪಕರು,ನಿರ್ದೇಶಕರು ಸಫಲರಾಗುತ್ತಿದ್ದಾರೆ.

ಹಾರರ್ ಮೂವಿ ಮಾಡುವುದರಲ್ಲೂ ಕೂಡ ತುಳು ಚಿತ್ರರಂಗ ಹಿಂದೆ ಬಿದ್ದಿಲ್ಲ. ಕರ್ನಾಟಕದಲ್ಲೇ ಭಾರೀ ಸುದ್ದಿ ಮಾಡಿದ್ದ ಗುಡ್ಡದ ಭೂತ ಧಾರವಾಹಿ, ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಉಳಿದವರು ಕಂಡಂತೆ, ರಂಗಿತರಂಗ ಮುಂತಾದ ಚಿತ್ರಗಳು ಮಂಗಳೂರಿನ ನೇಟಿವಿಟಿ ಮತ್ತು ಅಲ್ಲಿನ ಲ್ಯಾಂಗ್ವೆಜ್ ಗಳನ್ನು ಯೂಸ್ ಮಾಡ್ಕೊಂಡು ಕೋಟಿ ಸಂಪಾದಿಸಿವೆ.

ಇದೇ ಹಾದಿಯಲ್ಲಿ ತುಳು ಚಿತ್ರಗಳು ಕೂಡ ಸಾಗ್ತಿವೆ. ಇತ್ತೀಚಿಗೆ ಬಿಡುಗಡೆಯಾದ ಚಂಡಿಕೋರಿ, ಐಸ್ ಕ್ರೀಮ್ ಚಿತ್ರಗಳು ವಿಭಿನ್ನ ಕಥಾಹಂದರಗಳನ್ನು ಹೊಂದಿರುವ ಚಿತ್ರಗಳಾಗಿವೆ. ಎರಡೂ ಚಿತ್ರಗಳಿಗೂ ತುಳುನಾಡಿನ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿ ಪ್ರೋತ್ಸಾಹಿಸಿ ಸಲಹುತ್ತಿದ್ದಾರೆ. ತುಳು ನಾಡಿನ ಸಿನಿಮಾ ಉದ್ಯಮ ಸಾಗುತ್ತಿರುವ ಹಾದಿ ನಿಜಕ್ಕೂ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿರುವವರಿಗೆ ಸ್ಪೂರ್ತಿಯಾಗಿದೆ.