ಮುಸ್ಲಿಂ ಮಹಿಳೆಯರಿಗಾಗಿ ಹೈಜಪ್.ಕಾಮ್ - ಫ್ಯಾಷನ್ ದುನಿಯಾದಲ್ಲಿ ಡೈಜಂಗ್ ಕಮಾಲ್

0

ಇಂಡೋನೇಷ್ಯಾದಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚು. ಇಂಡೋನೇಷ್ಯಾದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 85ರಷ್ಟು ಮಂದಿ ಮುಸಲ್ಮಾನರಿದ್ದಾರೆ. ಆದ್ರೆ ಮುಸ್ಲಿಂ ಫ್ಯಾಷನ್ ದುನಿಯಾದಲ್ಲಿ ಹೇಳಿಕೊಳ್ಳುವಂತಹ ಬ್ರಾಂಡ್ ನೇಮ್‍ಗಳಿಲ್ಲ. ಈ ಸಮಸ್ಯೆಗೆ ಡೈಜೆಂಗ್ ಲೆಸ್ತಾರಿ ಪರಿಹಾರ ಕಂಡುಹಿಡಿದಿದ್ದಾರೆ. ಹೈಜಪ್ ಡಾಟ್ ಕಾಮ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಹಿಜಬ್ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ವಿನೂತನ ಬ್ರಾಂಡ್ ಸೃಷ್ಟಿ ಮಾಡಿರುವ ಡೈಜೆಂಗ್ ಮಹಿಳಾ ಗ್ರಾಹಕರನ್ನು ಸೆಳೆದಿದ್ದಾರೆ.

ಹೈಜಪ್ ಡಾಟ್ ಕಾಮ್ ಹುಟ್ಟು..

ಡೈಜೆಂಗ್ ಇಂಡೋನೇಷ್ಯಾ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ಪದವಿ ಪಡೆದಿದ್ದಾರೆ. ಉದ್ಯಮ ಕ್ಷೇತ್ರಕ್ಕೆ ಕಾಲಿಡುವ ಮೊದಲು ತಾವು ಅರ್ಥಶಾಸ್ತ್ರ ಓದಬೇಕಿತ್ತು ಎನ್ನುತ್ತಾರೆ ಡೈಜೆಂಗ್. ಬಹುತೇಕ ರಾಷ್ಟ್ರಗಳು ಉತ್ಪಾದನೆಗಿಂತ ಅಧಿಕವಾಗಿ ಖರೀದಿ ಮಾಡುತ್ತವೆ. ಅಂಥ ದೇಶಗಳ ಪೈಕಿ ಇಂಡೋನೇಷ್ಯಾ ಕೂಡ ಒಂದು. ರಾಜ್ಯಶಾಸ್ತ್ರ ವಿದ್ಯಾರ್ಥಿನಿಯಾಗಿದ್ದ ಡೈಜೆಂಗ್ ಒಂದು ದೇಶ ಹೇಗೆ ಮುನ್ನಡೆಯಬೇಕು ಎಂಬುದನ್ನು ಅರಿತಿದ್ರು. ಅದನ್ನೇ ತಮ್ಮ ಕಂಪನಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಪದವಿ ಮುಗಿಸಿದ ಬಳಿಕ ಡೈಜೆಂಗ್ ಮಾರ್ಸ್ ಇಂಡೋನೇಷ್ಯಾದಲ್ಲಿ ಕೆಲಸ ಮಾಡಿದ್ರು. ಯಾವ ಕಂಪನಿಗಳೂ ಇಂಡೋನೇಷ್ಯಾದ ಬಹುಸಂಖ್ಯಾತ ಮುಸ್ಲಿಂ ಸಮುದಾಯವನ್ನು ಗಮನದಲ್ಲಿರಿಸಿಕೊಂಡು ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಂಡ ಡೈಜೆಂಗ್, ತಮ್ಮ ಸ್ನೇಹಿತರ ಜೊತೆ ಚರ್ಚೆ ನಡೆಸಿದ್ರು. ವಿನ್ಯಾಸಗಾರರು ಹಾಗೂ ಅಂಗಡಿಗಳನ್ನಿಟ್ಟುಕೊಂಡಿದ್ದವರನ್ನೆಲ್ಲ ಒಟ್ಟುಗೂಡಿಸಿ ಆನ್‍ಲೈನ್ ಸ್ಟೋರ್ ಆರಂಭಿಸಲು ಮುಂದಾದ್ರು. ಹೀಗೆ ಮೂರು ವರ್ಷಗಳ ಹಿಂದೆ ಡೈಜೆಂಗ್ ಒಡೆತನದ ಹೈಜಪ್ ಡಾಟ್ ಕಾಮ್ ಆರಂಭವಾಯ್ತು.

ಫ್ಯಾಷನ್ ಜಗತ್ತಿನಲ್ಲಿ ಪಯಣ

14 ಮಂದಿ ವ್ಯಾಪಾರಿಗಳೊಂದಿಗೆ ಡೈಜೆಂಗ್ ವೆಬ್‍ಸೈಟ್ ಶುರು ಮಾಡಿದ್ರು. ಆರಂಭದ ದಿನಗಳಲ್ಲಿ ಡಿಸೈನರ್‍ಗಳ ಮನೆಮನೆಗೆ ತೆರಳಿ ಡೈಜೆಂಗ್ ಅವರ ಮನವೊಲಿಸಲು ಯತ್ನಿಸುತ್ತಿದ್ರು. ಹಿಜಾಬರ್ಸ್ ಸಮುದಾಯದ ಮಹಿಳೆಯರೊಂದಿಗೂ ಮಾತುಕತೆ ನಡೆಸ್ತಾ ಇದ್ರು. ಈಗ ಆ ಸಮುದಾಯದ ಮಹಿಳೆಯರೇ ಹೈಜಪ್‍ಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು. ಸದ್ಯ ಪ್ರತಿದಿನ ಸುಮಾರು 8000 ಗ್ರಾಹಕರು ಹೈಜಪ್ ವೆಬ್‍ಸೈಟ್‍ಗೆ ವಿಸಿಟ್ ಮಾಡ್ತಾರೆ. 83 ಮಂದಿ ಮಾರಾಟಗಾರರಿದ್ದು, 17 ಜನರ ತಂಡದೊಂದಿಗೆ ಡೈಜೆಂಗ್ ಕಾರ್ಯನಿರ್ವಹಿಸುತ್ತಿದ್ದಾರೆ.

ಹೈಜಪ್‍ಗೆ ಜೈ ಎಂದ ಗ್ರಾಹಕರು

ಹೈಜಪ್‍ನಲ್ಲಿ ಖರೀದಿ ಮಾಡುವವರ ಪೈಕಿ ಶೇಕಡಾ 40 ರಷ್ಟು ಮಂದಿ ಉದ್ಯೋಗಸ್ಥ ಮಹಿಳೆಯರು. ಕಾಫಿ ಬ್ರೇಕ್‍ನಲ್ಲೋ ಊಟದ ಸಮಯದಲ್ಲೋ ವೆಬ್‍ಸೈಟ್ ಓಪನ್ ಮಾಡಿ ಶಾಪಿಂಗ್ ಮಾಡ್ತಾರೆ. ಆದ್ರೆ ಇಂಡೋನೇಷ್ಯಾದಲ್ಲಿ ಕ್ರೆಡಿಟ್ ಕಾರ್ಡ್ ಹವಾ ಅಷ್ಟಾಗಿಲ್ಲ. ಮುಸ್ಲಿಂ ಮಹಿಳೆಯರಿಗಾಗಿಯೇ ಬಗೆ ಬಗೆಯ ವಿನ್ಯಾಸದ ವೆರೈಟಿ ವೆರೈಟಿ ಧಿರಿಸುಗಳು ಹೈಜಪ್‍ನಲ್ಲಿವೆ. ಕಚೇರಿಯಲ್ಲಿ ಸ್ಟೂಡಿಯೋ ಕೂಡ ಇರೋದ್ರಿಂದ ಅಲ್ಲೇ ಫೋಟೋ ಶೂಟ್ ಕೂಡ ನಡೆಯುತ್ತದೆ. ಹೊಸ ಬಗೆಯ ಧಿರಿಸುಗಳನ್ನು ಗ್ರಾಹಕರಿಗೆ ಪರಿಚಯಿಸಲು ಮಾಡೆಲ್‍ಗಳನ್ನು ಬಳಸಿ ಜಾಹೀರಾತು ಮಾಡಲಾಗತ್ತೆ. ಇವರದ್ದೇ ಯೂಟ್ಯೂಬ್ ಚಾನಲ್ ಕೂಡ ಇದೆ. ಅದನ್ನು ವೀಕ್ಷಿಸುವವರಲ್ಲಿ ಬಹುತೇಕರು ವಿದೇಶೀಯರು. ಹಾಗಾಗಿ ಜಾಗತಿಕ ಮಟ್ಟದಲಿ ಈ ಬ್ರಾಂಡ್ ಜನಪ್ರಿಯವಾಗಿರೋದಂತೂ ಸುಳ್ಳಲ್ಲ. ಸಿಂಗಾಪುರ, ಮಲೇಷಿಯಾ ಹಾಗೂ ಭಾರತದಲ್ಲಿರುವ ಮುಸ್ಲಿಂ ಸಮುದಾಯದ ಗ್ರಾಹಕರನ್ನು ಆಕರ್ಷಿಸಲು ಹೈಜಪ್ ಮುಂದಾಗಿದೆ.

ಉದ್ಯಮಿ ಪತಿಯಿಂದಲೂ ಪ್ರೋತ್ಸಾಹ

ಡೈಜೆಂಗ್ ಅವರ ಕುಟುಂಬಕ್ಕೆ ಉದ್ಯಮ ಕ್ಷೇತ್ರ ಹೇಳಿಮಾಡಿಸಿದಂಥದ್ದು. ಯಾಕಂದ್ರೆ ಡೈಜೆಂಗ್ ಅವರ ಪತಿ ಕೂಡ ಉದ್ಯಮಿಯೇ. ಈ ಕ್ಷೇತ್ರದಲ್ಲಿ ಪರಸ್ಪರ ಅನುಭವಗಳನ್ನು ಹಂಚಿಕೊಂಡು ಡೈಜೆಂಗ್ ದಂಪತಿ ತಮ್ಮ ಯಶಸ್ವಿ ಪಯಣ ಮುಂದುವರಿಸಿದ್ದಾರೆ. ತಾವೊಬ್ಬ ಮಹಿಳೆಯಾಗಿದ್ದರೂ ಇಂಡೋನೇಷ್ಯಾದ ಔದ್ಯಮಿಕ ಕ್ಷೇತ್ರದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಲಿಲ್ಲ ಅನ್ನೋದು ಡೈಜೆಂಗ್‍ರ ಸಂತಸದ ನುಡಿ.

ಕೆಲಸದಲ್ಲೇ ಖುಷಿ ಕಂಡ ಡೈಜೆಂಗ್

ಡಿಸೈನರ್‍ಗಳು ಹಾಗೂ ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಹೈಜಪ್ ಬಾಗಿಲು ಸದಾ ತೆರೆದಿರುತ್ತದೆ. ಅವರ ಬೆಳವಣಿಗೆಗಾಗಿ ಸಂಸ್ಥೆ ಶ್ರಮಿಸುತ್ತಿದೆ. ಅವರದ್ದೇ ಬ್ರಾಂಡ್ ಸ್ಥಾಪಿಸಲು ನೆರವಾಗುತ್ತಿದೆ. ಇದು ಡೈಜೆಂಗ್ ಅವರಿಗೆ ಖುಷಿಯ ಸಂಗತಿ. ಡಿಸೈನರ್‍ಗಳು ಹಾಗೂ ಸಣ್ಣ ವ್ಯಾಪಾರಸ್ಥರು ಜನಪ್ರಿಯ ಬ್ರಾಂಡ್‍ಗಳಾಗಿ ಹೆಸರು ಪಡೆಯಬೇಕೆಂಬುದೇ ಡೈಜೆಂಗ್ ಅವರ ಕನಸು.

Related Stories