ಸುದ್ದಿಮನೆಯಲ್ಲಿ VEOOZ ಸಂಚಲನ

ಟೀಮ್​ ವೈ.ಎಸ್​​.

ಸುದ್ದಿಮನೆಯಲ್ಲಿ VEOOZ ಸಂಚಲನ

Friday October 09, 2015,

2 min Read

ಇದು ಡಿಜಿಟಲ್ ದುನಿಯಾ. ಆಧುನಿಕ ಜಗತ್ತು ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಸುದ್ದಿ ಜಗತ್ತು ಕೂಡ ಬದಲಾಗಿದೆ. VEOOZ ಈ ಬದಲಾವಣೆಯನ್ನು ತಂದಿದೆ. ಅತ್ಯಂತ ಸರಳವಾಗಿ, ವೇಗವಾಗಿ ಸುದ್ದಿಯನ್ನು VEOOZ ಓದುಗರ ಮನೆ ಮನಕ್ಕೆ ತಲುಪಿಸುತ್ತಿದೆ. ಈ ಸುದ್ದಿ ಸಂಸ್ಥೆಯ ಉದಯದ ಹಿಂದೆ ಘಟಾನುಘಟಿ ಉದ್ಯಮಿಗಳಿದ್ದಾರೆ. ಮೈಕ್ರೋಸಾಫ್ಟ್ ಇಂಡಿಯಾದ ಮಾಜಿ ಎಂಡಿ ಶ್ರೀನಿ ಕೊಪ್ಪುಲು , ಐಐಟಿ ಹೈದರಾಬಾದ್‍ನ ಪ್ರೊಫೆಸರ್ ವಸುದೇವ ವರ್ಮಾ, ನ್ಯೂರೋ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್‍ನ ತಜ್ಞ ಡಾ. ಪ್ರಸಾದ್ ಪಿಂಗಳಿ ಒಟ್ಟಾಗಿ VEOOZ ಅನ್ನು ಆರಂಭಿಸಿದ್ದಾರೆ. ವಿಶ್ವದ ಮೂಲೆ ಮೂಲೆಗೂ ವಿವಿಧ ಭಾಷೆಗಳಲ್ಲಿ ಸುದ್ದಿ ತಲುಪಿಸುತ್ತಿದ್ದಾರೆ.

ಶ್ರೀನಿ ಕೊಪ್ಪೊಲು 21 ವರ್ಷಗಳ ಕಾಲ ಮೈಕ್ರೋಸಾಫ್ಟ್​​​ನಲ್ಲಿ ಕೆಲಸ ಮಾಡಿದ್ದಾರೆ. ನಂತರ ಬೇರೆ ಬೇರೆ ಉದ್ಯಮದಲ್ಲೂ ಅವರು ತೊಡಗಿಕೊಂಡಿದ್ದರು. ಪ್ರಸಾದ್ ಹಾಗೂ ವಸುದೇವ ಅವರ ತಂಡ ಸೇರಿದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳನ್ನೆಲ್ಲ ಸಂಗ್ರಹಿಸಿ ಅದನ್ನು ವಿವಿಧ ಭಾಷೆಗಳಲ್ಲಿ ಜನರಿಗೆ ತಲುಪಿಸುವುದೇ ನಮ್ಮ ಉದ್ದೇಶ ಎನ್ನುತ್ತಾರೆ ಶ್ರೀನಿ.

image


ಹೇಗಿರುತ್ತೆ ಸುದ್ದಿ ಮನೆ ತಯಾರಿ..?

ಅಂಕಿ ಸಂಖ್ಯೆಗಳ ಆಧಾರದ ಮೇಲೆ ಸುದ್ದಿಗಳನ್ನು ವಿಂಗಡಿಸಲಾಗುತ್ತದೆ. ಬೇರೆ ಬೇರೆ ಬಗೆಯ ಸುದ್ದಿಗಳನ್ನು ಪ್ರತ್ಯೇಕಿಸಲಾಗುತ್ತದೆ. ಅಂಕಿ ಸಂಖ್ಯೆಗಳ ಮೂಲಕವೇ ವೆಬ್‍ಸೈಟ್‍ನಲ್ಲಿ ಸುದ್ದಿ ಪ್ರಕಟಿಸಲಾಗುತ್ತದೆ. ಆದರೆ ಓದುಗರಿಗೆ ಇದು ಅಕ್ಷರಗಳ ರೂಪದಲ್ಲೇ ಲಭ್ಯವಾಗುವುದು ವಿಶೇಷ. ಇಂತಹ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ನಿಮಗಿಷ್ಟವಾದಂತಹ ಸುದ್ದಿಗಳನ್ನು, ನಿಮ್ಮಿಷ್ಟದಂತೆಯೇ ನೀವು ಓದಬಹುದು. ಬರೀ ಮುಖ್ಯಾಂಶಗಳನ್ನಷ್ಟೇ ಓದಬಹುದು. ಪೂರ್ಣ ಸಾರಾಂಶ ಬೇಕೆಂದಾಗ ಮಾತ್ರ ಇಡೀ ಸುದ್ದಿಯ ಮೇಲೆ ಕಣ್ಣಾಡಿಸಬಹುದು. ಚಿತ್ರ ಹಾಗೂ ದೃಶ್ಯಗಳ ಸಮೇತ ಸುದ್ದಿಗಳನ್ನು ಪ್ರಕಟಿಸಲಾಗುತ್ತದೆ. VEOOZ ನಲ್ಲಿ ಹಲವು ವಿಭಾಗಗಳಿದ್ದು ಬೇಕಾದುದನ್ನು ಮಾತ್ರ ಆಯ್ದುಕೊಂಡು ಓದಬಹುದು.

VEOOZ ಮುಂದಿದ್ದ ಸವಾಲುಗಳು..

ಓದುಗರನ್ನು ತೃಪ್ತಿಪಡಿಸುವಂತಹ ರೀತಿಯಲ್ಲಿ ಸುದ್ದಿಗಳಿಗೆ ವೇದಿಕೆ ಕಲ್ಪಿಸುವುದು ಶ್ರೀನಿ ಅವರಿಗೆ ಬಹುದೊಡ್ಡ ಸವಾಲಾಗಿತ್ತು. ಇದರ ಜೊತೆಗೆ ವಿಭಿನ್ನ ತಂತ್ರಜ್ಞಾನ ಅಳವಡಿಕೆ ಕೂಡ ಸಾಹಸಮಯ ಕೆಲಸವೇ ಸರಿ. ಆರಂಭದಲ್ಲಿ ಸಂಸ್ಥೆಯ ಯಶಸ್ಸಿಗಾಗಿ ಇಡೀ ತಂಡ ಹಗಲಿರುಳು ಶ್ರಮಿಸಿದೆ. ಸುದ್ದಿಮನೆಯನ್ನು ಓದುಗರ ಇಷ್ಟದಂತೆಯೇ ಕಟ್ಟಿ ನಿಲ್ಲಿಸಿದೆ.

ಓದುಗರಿಂದ ಸಖತ್ ರೆಸ್ಪಾನ್ಸ್..!

ಅತ್ಯಂತ ಕಡಿಮೆ ಅವಧಿಯಲ್ಲೇ VEOOZ ಹೆಸರು ಮಾಡಿದೆ. ಜನಪ್ರಿಯತೆ ಗಳಿಸಿದೆ. ಸುದ್ದಿ ಲೋಕದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಹೊಸ ಬಗೆಯ ಸುದ್ದಿ ಪ್ರಕಟಣೆಯ ವಿಧಾನವನ್ನೂ ಓದುಗರು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ CICRA ಮತ್ತು ZITE ವೆಬ್‍ಸೈಟ್‍ಗಳು ಕೂಡ ಇದೇ ವಿಧಾನವನ್ನು ಅಳವಡಿಸಿಕೊಂಡಿವೆ. VEOOZ ಗೆ ಇನ್ನಷ್ಟು ಬಂಡವಾಳ ಹಾಕಿ ಅಭಿವೃದ್ಧಿಪಡಿಸುವ ಆಲೋಚನೆ ತಂಡದ ಮುಂದಿದೆ. ಜಾಹೀರಾತಿನ ಮೂಲಕ ಆದಾಯ ಸಂಗ್ರಹಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.

VEOOZ 40 ರಾಷ್ಟ್ರಗಳಲ್ಲಾಗುವ ಆಗುಹೋಗುಗಳನ್ನು ಜನರ ಮುಂದಿಡುತ್ತಿದೆ. 2000 ನಗರಗಳ ನೈಜ ಚಿತ್ರಣವನ್ನು, ಪ್ರತಿಕ್ಷಣದ ಘಟನೆಗಳನ್ನು ಓದುಗರಿಗೆ ತಲುಪಿಸುತ್ತಿದೆ. 10 ಭಾಷೆಗಳಲ್ಲಿ ಸುದ್ದಿಯನ್ನು ಪ್ರಕಟಿಸುತ್ತಿದೆ. ವಿಶೇಷ ಎಂದರೆ ಸುಮಾರು 1 ಲಕ್ಷ ಟಾಪಿಕ್‍ಗಳ ಮೇಲೆ VEOOZ ನಲ್ಲಿ ಸುದ್ದಿ ಪ್ರಕಟವಾಗುತ್ತಿದೆ. ಒಟ್ಟಾರೆ VEOOZ ಮೂಲಕ ಹೊಸದೊಂದು ಸುದ್ದಿ ಜಗತ್ತು ತೆರೆದುಕೊಂಡಿದೆ.