ಮುಂಬೈ ಕ್ರಿಕೆಟ್​ನಲ್ಲಿ ಕನ್ನಡಿಗನ ಮೋಡಿ..

ರವಿ ಎನ್​.ಎಸ್​​

0


ಕಾಯಕವೇ ಕೈಲಾಸವೆಂಬ ಮಾತು ಅಪ್ಪಟ ಸತ್ಯ. ನಾವು ಮಾಡುವ ಕೆಲಸವನ್ನು ಶ್ರದ್ದೆಯಿಂದ ಮಾಡಿದ್ರೆ ಯಶಸ್ಸು ಕಟ್ಟಿಟ್ಟ ಬುತ್ತಿ. ನಾವು ಮಾಡುವ ಕೆಲಸದಿಂದ ಒಂದಿಷ್ಟು ಜನರಿಗೆ ಒಳಿತಾಗುತ್ತೆ ಎಂದು ಯಾವುದೆ ಕಾರ್ಯವನ್ನು ಮಾಡಿದ್ರೆ, ಕೊನೆಗೊಂದು ದಿನ ಅದರ ಫಲವನ್ನು ನಾವು ಅನುಭವಿಸುತ್ತೇವೆ. ಇಂತಹದೇ ಒಂದು ಕೆಲಸ ಮಾಡಿ ಮುಂಬೈನಲ್ಲಿ ಕನ್ನಡಿಗರೊಬ್ಬರು ಸೈ ಎನಿಸಿಕೊಂಡಿದ್ದಾರೆ. ತಾವು ಪಟ್ಟ ಶ್ರಮದಿಂದ ಇಂದು ಮುಂಬೈನ ಕ್ರಿಕೆಟ್ ಲೋಕದಲ್ಲಿ ಮನೆಮಾತಾಗಿದ್ದಾರೆ.

ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ ಯಾರಿಗೆ ಗೊತ್ತಿಲ್ಲ ಹೇಳಿ, ಭಾರತದಲ್ಲಿ ಕ್ರಿಕೆಟ್ ಬಗ್ಗೆ ಅರಿವಿರುವ ಪ್ರತಿಯೊಬ್ಬನಿಗೂ ಈ ಕ್ರಿಕೆಟರ್​ಗಳ ಪರಿಚಯವಿದೆ. ಆದರೆ ಈ ಕ್ರಿಕೆಟರ್​ಗಳು ಇಂದು ವಿಶ್ವಶ್ರೇಷ್ಠ ಬ್ಯಾಟ್ಸಮನ್ ಆಗುವುದರ ಹಿಂದೆ ಕನ್ನಡಿಗರೊಬ್ಬರ ಕೈವಾಡವಿದೆ. 18 ವರ್ಷಗಳ ಹಿಂದೆ ಹಾಕಿದ ಮರ ಇಂದು ಹೆಮ್ಮರವಾಗಿ ಬೆಳೆದಿದೆ.  ಪಯ್ಯಡೆ ಸ್ಪೋರ್ಟ್ಸ್ ಕ್ಲಬ್ ಇಂದು ಮುಂಬೈ ಉಪನಗರದಲ್ಲಿ ತನ್ನದೆಯಾದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಡಾ. ಪಿ.ವಿ ಶೆಟ್ಟಿ ಇಂದು ಅನೇಕ ಯುವ ಕ್ರಿಕೆಟಿಗರ ಭವಿಷ್ಯವಾಗಿದ್ದಾರೆ. 18 ವರ್ಷದ ಹಿಂದೆ ಕಾಂಡಿವಿಲಿಯಲ್ಲಿ ಸ್ಥಾಪಿಸಿದ ಕ್ಲಬ್ ಮುಂಬೈನ ಶ್ರೇಷ್ಠ ಕ್ಲಬ್​ಗಳಲ್ಲೊಂದು ಎಂಬ ಹಿರಿಮೆಗೆ ಪಾತ್ರವಾಗಿದೆ.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಡಾ.ಪಿ.ವಿ.ಶೆಟ್ಟಿಯವರು, ಮುಂಬೈ ಕ್ರಿಕೆಟ್‌ ಸಂಸ್ಥೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಏಳು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಐಪಿಎಲ್‌ ಆಡಳಿತ ಮಂಡಳಿಯ ಸದಸ್ಯರು ಕೂಡಾ ಹೌದು. ಮುಂಬೈನ ಪ್ರಭಾವಿ ಕ್ರೀಡಾಡಳಿತಗಾರರಾಗಿರುವ ಇವರು ಅಲ್ಲಿನ ಕರ್ನಾಟಕ ಸ್ಪೋರ್ಟಿಂಗ್‌ ಅಸೋಸಿಯೇಷನ್‌ಗೆ 9 ವರ್ಷಗಳಿಂದ ಅಧ್ಯಕ್ಷರಾಗಿದ್ದಾರೆ. ಪಯ್ಯಡೆ ಸ್ಪೋರ್ಟ್ಸ್ ಕ್ಲಬ್ ಕೂಡ ನಡೆಸುತ್ತಿದ್ದಾರೆ. ಉನ್ನತ ಮಟ್ಟದ ಕೋಚಿಂಗ್ ಹಾಗೂ ಅನೇಕ ಅಂತಾರಾಷ್ಟ್ರೀಯ ಕ್ರಿಕೆಟರ್​ಗಳಿಂದ ಯುವ ಆಟಗಾರರಿಗೆ ತರಬೇತಿ ನೀಡುವ ಮೂಲಕ ಅವರ ಆತ್ಮವಿಶ್ವಾಸ ಮತ್ತು ಕೌಶಲ್ಯವನ್ನು ಹೆಚ್ಚಿಸುವಲ್ಲಿ ಈ ಕ್ಲಬ್ ಯಶಸ್ವಿಯಾಗಿದೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯವರಾದ ಪಿ.ವಿ.ಶೆಟ್ಟರು, ಪಿಯೂಸಿವರೆಗೆ ಮುಂಬೈನಲ್ಲಿಯೇ ವ್ಯಾಸಾಂಗ ಮಾಡಿದ್ರು. ಬೆಂಗಳೂರಿನ ಕಿಮ್ಸ್‌ನಲ್ಲಿ ವೈದ್ಯಕೀಯ ಪದವಿ ಪಡೆದರು. ಬೆಂಗಳೂರಿನಲ್ಲಿದ್ದಾಗ ‘ಎ’ ಡಿವಿಷನ್‌ನಲ್ಲಿದ್ದ ವೈಎಂಸಿಎ ಕ್ರಿಕೆಟ್‌ ತಂಡದ ಪರ ಆಡುತ್ತಿದ್ದರು. ಆನಂತರ ಇವರು ಮುಂಬೈನಲ್ಲಿ ನೆಲಸಿದ್ರು.

ಪಯ್ಯಡೆ ಸ್ಪೋರ್ಟ್ಸ್ ಕ್ಲಬ್‌ಗೆ ಇವರೇ ಅಧ್ಯಕ್ಷ. ಈ ಕ್ಲಬ್‌ನ ಅಡಿಯಲ್ಲಿ 22 ಕ್ರಿಕೆಟ್‌ ಕ್ಲಬ್‌ಗಳಿದ್ದು, ಇವೆಲ್ಲವೂ ಮುಂಬೈ ಕ್ರಿಕೆಟ್‌ ಸಂಸ್ಥೆಯಿಂದ ಮಾನ್ಯತೆ ಪಡೆದಿವೆ. ಭಾರತ ತಂಡದ ಆಟಗಾರರಾದ ರೋಹಿತ್‌ ಶರ್ಮಾ ಮತ್ತು ಅಜಿಂಕ್ಯ ರಹಾನೆ ಅವರು ಪಯ್ಯಡೆ ಅಕಾಡೆಮಿಯಿಂದಲೇ ಅರಳಿದ ಪ್ರತಿಭೆಗಳು. ಇವರ ಕ್ಲಬ್​ನಲ್ಲಿ 600 ಕ್ಕಿಂತ ಹೆಚ್ಚು ಆಟಗಾರರು ಅಭ್ಯಾಸಕ್ಕೆ ಬರ್ತಾರೆ ಒಟ್ಟು 19 ಮಂದಿ ತಜ್ಞ ತರಬೇತುದಾರರು ಕೋಚಿಂಗ್ ಮಾಡ್ತಾರೆ. ಆದರು ಇವರು ಕ್ರಿಕೆಟ್​ಗಿಂತ ಜಾಸ್ತಿ ಇವರ ಕ್ಲಬ್​ನಲ್ಲಿ ಆಡುವ ಆಟಗಾರರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡ್ತಾರೆ. ಹಾಗಾಗಿ ಇವರ ಕ್ಲಬ್​​ನಲ್ಲಿ ಕೋಚಿಂಗ್ ಪಡೆದ 100ಕ್ಕಿಂತ ಹೆಚ್ಚು ಆಟಗಾರರು ಪ್ರತಿಷ್ಠಿತ ಉದ್ಯೋಗದಲ್ಲಿದ್ದಾರೆ. ಒಟ್ಟಿನಲ್ಲಿ ವಿದ್ಯಾರ್ಥಿಗಳು ಭವಿಷ್ಯ ರೂಪಿಸುವುದು ಈ ಕ್ಲಬ್​ನ ಮುಖ್ಯ ಉದ್ದೇಶವಾಗಿದೆ.

ಡಾ. ಪಿ.ವಿ. ಶೆಟ್ಟಿಯವರ ಸಹೋದರ ರಾಮನಾಥ್ ಪಯ್ಯಡೆ ಮಹಾನ್ ಕ್ರೀಡಾ ಪ್ರೇಮಿ. ಮೊದಲಿನಿಂದಲೂ ಕ್ರೀಡಾಪಟುಗಳಿಗೆ ಸಹಾಯ ಮಾಡುವುದರಲ್ಲಿ ಅವರದು ಎತ್ತಿದ ಕೈ. ಆದರೆ ಸಣ್ಣ ವಯಸ್ಸಿನಲ್ಲೇ ಅವರು ಅಕಾಲಿಕ ನಿಧನವಾದ್ರು. ತದನಂತರ ಡಾ.ಪಿ.ವಿ ಶೆಟ್ಟಿ ಅವರ ಹೆಸರಲ್ಲಿ ಪಯ್ಯಡೆ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಿದ್ರು. ಹಲವು ಬಡ ಮಕ್ಕಳಿಗೆ, ಕ್ರಿಕೆಟ್ ಇಷ್ಟಪಡುವವರಿಗೆ ಉತ್ತಮ ಕ್ರಿಕೆಟ್ ತರಬೇತಿ ನೀಡಿದ್ರು.

ಪಯ್ಯಡೆ ಕ್ರಿಕೆಟ್ ತಂಡ ಇದುವರೆಗೂ ಎಂಸಿಎ ನಡೆಸುವ ಎಲ್ಲ ಚಾಂಪಿಯನ್​ಶಿಪ್​ ಗೆದ್ದ ಏಕೈಕ ತಂಡ ಎಂಬ ಹೆಮ್ಮೆಗೂ ಪಾತ್ರವಾಗಿದೆ. ಅಲ್ಲಿನ ಕಂಗಾ ಲೀಗ್​ನಲ್ಲೂ ಈ ತಂಡದ ಪಾರುಪತ್ಯ ಮುಂದುವರೆದಿದೆ. ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ ಇದೆ ಕ್ಲಬ್​ಗೆ ಆಡಿದವರು. ಆದಾದ ನಂತರ ರೋಹಿತ್ ಬೇರೆ ಯಾವ ಕ್ಲಬ್​​ಗೂ ಆಡಲಿಲ್ಲ. ಇಂದಿಗೂ ಕೂಡ ಇವರಿಬ್ಬರು ಪಯ್ಯಡೆ ಸ್ಪೋರ್ಟ್ಸ್ ಕ್ಲಬ್​ಗೆ ಆಗಮಿಸುತ್ತಾರೆ. ಯುವ ಆಟಗಾರರಿಗೆ ಕೆಲ ಅಮೂಲ್ಯವಾದ ಸಲಹೆಗಳನ್ನು ನೀಡುತ್ತಾರೆ.

ಭಾರತದ 19 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಪಡೆದ ಅತುಲ್‌ ಹೆರ್ವಾಡ್ಕರ್‌, ಸರ್ಫರಾಜ್‌ ಖಾನ್‌, ಸೌರವ್‌ ನೆತ್ರಾವಲ್ಕರ್‌, ಹರ್ಮಿತ್‌ ಸಿಂಗ್‌ ಮತ್ತು ಭಾರತ ಎ ತಂಡಕ್ಕೆ ಆಡಿರುವ ಶಾರ್ದೂಲ್‌ ಠಾಕೂರ್‌, ಭಾರತ ಮಹಿಳಾ ಕ್ರಿಕೆಟ್‌ ತಂಡದ ಉಪನಾಯಕಿ ಪೂನಮ್‌ ರಾವತ್‌ ಅವರೂ ಪಯ್ಯಡೆ ಅಕಾಡೆಮಿಯಲ್ಲಿಯೇ ತರಬೇತು ಪಡೆದವರು. ಇಲ್ಲೇ ತರಬೇತು ಪಡೆದ 45 ಮಂದಿ ಆಟಗಾರರು ರಣಜಿಯಲ್ಲಿ ಆಡಿದ್ದಾರೆ. ಸಚಿನ್‌ ತೆಂಡುಲ್ಕರ್‌ ಅವರ ಮಗ ಅರ್ಜುನ್‌ ಕೂಡಾ ಇದೇ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವುದು.

‘ಕೆಎಸ್‌ಎ ಕೇವಲ ಕ್ರೀಡಾಚಟುವಟಿಕೆಗಳನ್ನು ನಡೆಸುವುದಕ್ಕಷ್ಟೇ ಸೀಮಿತಗೊಳ್ಳಬಾರದು ಎಂಬುದು ನನ್ನ ಉದ್ದೇಶ. ಈ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಕ್ರೀಡಾಪಟುಗಳೆಲ್ಲರ ಶಿಕ್ಷಣದ ಪ್ರಗತಿಯ ಬಗ್ಗೆ ಈಗ ಹೆಚ್ಚು ಗಮನ ನೀಡುತ್ತಿದ್ದೇವೆ. ಅಗತ್ಯವಿರುವವರಿಗೆ ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವು ನೀಡುತ್ತಿದ್ದೇವೆ. ಕೆಎಸ್‌ಎ ಕುಟುಂಬದ ಹುಡುಗನೊಬ್ಬ ಒಳ್ಳೆಯ ಕ್ರಿಕೆಟರ್‌ ಆಗದಿದ್ದರೂ ಪರವಾಗಿಲ್ಲ, ಒಳ್ಳೆಯ ಮನುಷ್ಯನಾದರೆ ಸಾಕು, ಇದು ನಮ್ಮ ಗುರಿ’ ಅಂತಾರೆ ಪಿ.ವಿ ಶೆಟ್ರು.

‘ಕರ್ನಾಟಕ ಸ್ಪೋರ್ಟಿಂಗ್‌ ಅಸೋಸಿಯೇಷನ್‌’ ವತಿಯಿಂದ ಮುಂಬೈನಲ್ಲಿಯೇ ಪ್ರಬಲವಾದ ಫುಟ್‌ಬಾಲ್‌ ತಂಡವನ್ನು ಕಟ್ಟಿದ್ದಾರೆ. ಇದರಲ್ಲಿ ಈಗ ಕೆನ್ಯಾದ ನಾಲ್ವರು ಆಟಗಾರರು ಆಡುತ್ತಿದ್ದಾರೆ. ಇದೀಗ ಮಹಾರಾಷ್ಟ್ರ ರಾಜ್ಯ ಫುಟ್‌ಬಾಲ್‌ ತಂಡದ ನಾಯಕರಾಗಿರುವ ವಿಜೇತ್‌ ಶೆಟ್ಟಿ ಅವರು ಕೆಎಸ್‌ಎ ಕಾರ್ಯಕ್ರಮಗಳ ಮೂಲಕವೇ ಅರಳಿದ ಆಟಗಾರ. ‘18 ವರ್ಷಗಳಿಂದ ನಾನು ಮುಂಬೈ ಕನ್ನಡಿಗರಿಗಾಗಿಯೇ ಪಯ್ಯಡೆ ಅಂತರ ಕರ್ನಾಟಕ ಫುಟ್‌ಬಾಲ್‌ ಟೂರ್ನಿಯನ್ನು ನಿರಂತರವಾಗಿ ಸಂಘಟಿಸುತ್ತಾ ಬಂದಿದ್ದೇನೆ. ವಿಜೇತ್‌ ಈ ಟೂರ್ನಿಯ ನೂರಾರು ಪಂದ್ಯಗಳಲ್ಲಿ ಆಡಿದ್ದಾನೆ’ ಹಲವು ಟಾಪ್ ಫುಟ್ಬಾಲ್ ಆಟಗಾರರು ನಮ್ಮಲ್ಲಿ ಆಡಿರುವುದು ನಮ್ಮ ಹೆಮ್ಮ ಅಂತಾರೆ

‘ಕೆಎಸ್‌ಎ ಆರು ಎಕರೆ ಜಾಗವನ್ನು ಹೊಂದಿದೆ. ಇಲ್ಲಿ ಒಂದಿಂಚು ಸ್ಥಳವೂ ವ್ಯರ್ಥವಾಗದಂತೆ ನೋಡಿಕೊಂಡಿದ್ದೇನೆ. ಈ ಸ್ಥಳದಲ್ಲೇ ಅತ್ಯುತ್ತಮವಾದ ಕ್ಲಬ್‌ ಹೌಸ್‌ ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಿದ್ದೇನೆ. ಯಾವುದೇ ವ್ಯಾಪಾರಿ ಚಟುವಟಿಕೆಗೆ ಅಥವಾ ಮದುವೆ ಸಮಾರಂಭಗಳಿಗೆ ಇಲ್ಲಿನ ಸ್ಥಳವನ್ನು ನೀಡಿಲ್ಲ. ಒಂದು ದಿನವೂ ವ್ಯರ್ಥವಾಗದಂತೆ ನಿತ್ಯವೂ ಇಲ್ಲಿ ಕ್ರೀಡಾ ಚಟುವಟಿಕೆ ನಡೆಯುತ್ತಲೇ ಇದೆ’.

ಪಿ.ವಿ ಶೆಟ್ಟಿ ಓದುತ್ತಿದ್ದ ಕಾಲದಲ್ಲಿ ಹೆಚ್ಚಿನ ಸೌಕರ್ಯಗಳು ಇರಲಿಲ್ಲ, ಹೀಗಾಗಿ ಆಸಕ್ತ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಸಿಗಬೇಕೆಂಬ ಉದ್ದೇಶದಿಂದ ಕಾಂದಿವಿಲಿಯಲ್ಲಿ ಪಯ್ಯಡೆ ಸ್ಪೋರ್ಟ್ಸ್‌ ಕ್ಲಬ್‌ ಮೈದಾನ, ಬೊರಿವಿಲಿಯಲ್ಲಿ ನಮನ್‌ ಪಯ್ಯಡೆ ಕ್ರಿಕೆಟ್‌ ಅಕಾಡೆಮಿ ಮೈದಾನ, ಆಜಾದ್‌ ಮೈದಾನದಲ್ಲಿ ಜಾನ್‌ ಬ್ರೈಟ್‌ ಗ್ರೌಂಡ್‌, ಕ್ರಾಸ್‌ ಮೈದಾನದಲ್ಲಿ ಕರ್ನಾಟಕ ಸ್ಪೋರ್ಟಿಂಗ್‌ ಅಕಾಡೆಮಿ ಮೈದಾನಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಯಾವುದೇ ಕೆಲಸವನ್ನು ಶ್ರದ್ದೆಯಿಂದ ಮಾಡಿದ್ರೆ ಯಶಸ್ಸು ಸಾಧ್ಯ ಎಂಬುದು ಈ ಮೂಲಕ ತೋರಿಸಿಕೊಟ್ಟಿದ್ದು, ಹಲವರಿಗೆ ಸ್ಫೂರ್ತಿಯಾಗಿದ್ದಾರೆ.


ಇದನ್ನು ಓದಿ

1. ಆತ್ಮ ವಿಶ್ವಾಸವೇ ಈ ಕುಸುಮಗಳ ಬಂಡವಾಳ..

2. ಕಾಯಕವೇ ಕೈಲಾಸ ಹನುಮಂತನ ಸಾಹಸ

3. ನೀವಿದ್ದಲ್ಲಿಗೆ ಅಮ್ಮನ ಕೈತುತ್ತು, ಇದು ಮೈಸೂರಿನ ಟೆಕ್ಕಿಗಳ ಕರಾಮತ್ತು