ಮಣ್ಣಿನ ಒಲೆಯಲ್ಲಿ ಸರ್ಕಸ್ ಮಾಡೋದನ್ನು ಬಿಡಿ...ಗ್ರೀನ್‍ವೇ ಸ್ಟವ್‍ನಿಂದ ಆರಾಮಾಗಿ ಅಡುಗೆ ಮಾಡಿ

ಟೀಮ್​​ ವೈ.ಎಸ್​​. ಕನ್ನಡ

0

ಭಾರತದ ಗ್ರಾಮೀಣ ಪ್ರದೇಶದಲ್ಲಿ ಇಂಧನದ್ದೇ ಒಂದು ಸಮಸ್ಯೆ. ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ. ಇದ್ರೂ ಕರೆಂಟ್ ಕಣ್ಣಾಮುಚ್ಚಾಲೆಯಿಂದ ಜನರು ಈಗಾಗ್ಲೇ ಕಂಗಾಲಾಗಿದ್ದಾರೆ. ಗ್ಯಾಸ್ ಸಿಲಿಂಡರ್ ಖರೀದಿಸುವಷ್ಟು ಸಿರಿವಂತರು ಅವರಲ್ಲ. ಹಾಗಾಗಿ ಮಣ್ಣಿನ ಒಲೆಯನ್ನೇ ಅವಲಂಬಿಸಿ ಬದುಕುತ್ತಿರುವವರೇ ಹೆಚ್ಚು. ಮಣ್ಣಿನ ಒಲೆಯಲ್ಲಿ ಅಡುಗೆ ಮಾಡುವುದು ನಿಜಕ್ಕೂ ಒಂದು ಸಾಹಸವೇ ಸರಿ. ಆದ್ರೆ ಅಂತಹ ಗ್ರಾಮೀಣ ಭಾಗದ ಜನರಿಗಾಗಿಯೇ ನೇಹಾ ಉದ್ಯಮವೊಂದನ್ನು ಆರಂಭಿಸಿದ್ದಾರೆ. ಪರಿಸರ ಸ್ನೇಹಿ ಒಲೆಗಳನ್ನು ತಯಾರಿಸಿ ಪೂರೈಸುತ್ತಿದ್ದಾರೆ.

ಭಾರತದ ಗ್ರಾಮೀಣ ಜನತೆಗಾಗಿ ದಕ್ಷ ಒಲೆಯನ್ನು ತಯಾರಿಸುವುದು ನಿಜಕ್ಕೂ ಸವಾಲಿನ ಕೆಲಸ ಎನ್ನುತ್ತಾರೆ `ಗ್ರೀನ್‍ವೇ ಜರ್ಮನ್ ಇನ್‍ಫ್ರಾ'ದ ಸಹ ಸಂಸ್ಥಾಪಕಿ ನೇಹಾ. ಬಳಕೆಯನ್ನು ಅರ್ಥಮಾಡಿಕೊಂಡು, ಗ್ರಾಹಕರ ಆಕಾಂಕ್ಷೆಗಳಿಗೆ ಅನುಗುಣವಾಗಿ ಒಲೆ ತಯಾರಿಕೆ ನೇಹಾ ಅವರ ತಂಡಕ್ಕೆ ಪರಿಶ್ರಮದ ಕೆಲಸವಾಗಿ ಮಾರ್ಪಟ್ಟಿತ್ತು. ಆರಂಭದಲ್ಲಿ ಗ್ರೀನ್‍ವೇ ತಂಡ ಮಣ್ಣಿನ ಒಲೆಗಳನ್ನು ಬಳಸಿ ವಾರಗಟ್ಟಲೆ ಪ್ರಯೋಗ ಮಾಡಿತ್ತು. ಆ ಸಂದರ್ಭದಲ್ಲಿ ಭಾರತದ ಗ್ರಾಮೀಣ ಭಾಗದ ಜನತೆ ಅನುಭವಿಸ್ತಾ ಇರೋ ಸಮಸ್ಯೆಯ ಅರಿವು ಅವರಿಗಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ವಿನೂತನ ಒಲೆಗಳನ್ನು ಗ್ರೀನ್‍ವೇ ಸಂಶೋಧಿಸಿದೆ. 6 ರಾಜ್ಯಗಳಲ್ಲಿ 250,000 ಒಲೆಗಳು ಮಾರಾಟವಾಗಿವೆ. 2014ನೇ ಸಾಲಿನ `ಆ್ಯಶ್‍ಡೆನ್ ಕ್ಲೀನ್ ಎನರ್ಜಿ ಫಾರ್ ವುಮೆನ್ & ಗಲ್ರ್ಸ್' ಪ್ರಶಸ್ತಿ ಕೂಡ ಗ್ರೀನ್‍ವೇ ಸಂಸ್ಥೆಯ ಪಾಲಾಗಿದೆ. `ಗ್ರೀನ್‍ವೇ ಜರ್ಮನ್ ಇನ್‍ಫ್ರಾ'ದ ಕುಟುಂಬ ಕೂಡ ದೊಡ್ಡದಾಗಿದ್ದು 101 ಸದಸ್ಯರನ್ನು ಹೊಂದಿದೆ. ಭಾರತದಲ್ಲೇ ಅತಿ ದೊಡ್ಡದಾದ ಅಡುಗೆ ಒಲೆ ತಯಾರಿಕಾ ಕಾರ್ಖಾನೆಯನ್ನು ವಡೋದರಾದಲ್ಲಿ ಆರಂಭಿಸಿದೆ.

ವಡೋದರಾದ ಕಾರ್ಖಾನೆಯಲ್ಲಿ ವರ್ಷಕ್ಕೆ 800,000 ಸ್ಟವ್‍ಗಳನ್ನು ತಯಾರಿಸಲಾಗ್ತಿದೆ. ಗ್ರೀನ್‍ವೇ ಕನಸು ಈಗ ದೊಡ್ಡದಾಗಿದೆ. ಆರೋಗ್ಯ ಮತ್ತು ಪರಿಸರಕ್ಕೆ ಮಾರಕವಾದ ಸಾಂಪ್ರದಾಯಿಕ ಮಣ್ಣಿನ ಒಲೆಗಳ ಬಳಕೆಯನ್ನು ಬದಲಾಯಿಸಲು ಗ್ರೀನ್‍ವೇ ಪಣತೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆ ಕೂಡ ನೇಹಾ ಅವರ ಪ್ರಯತ್ನವನ್ನು ಇನ್ನಷ್ಟು ಪ್ರೋತ್ಸಾಹಿಸಿದೆ. ನವೀಕರಿಸಬಹುದಾದ ಇಂಧನ ಮೂಲಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಶೀಘ್ರ ಗುರಿ ತಲುಪಲು ಸಾಧ್ಯವಾಗಬಹುದು ಅನ್ನೋ ಲೆಕ್ಕಾಚಾರ ಅವರದ್ದು. ಸ್ವಂತವಾದ ಒಲೆ ತಯಾರಿಕೆ ಫ್ಯಾಕ್ಟರಿ ಆರಂಭಕ್ಕೆ ಕೂಡ ಮೇಕ್ ಇನ್ ಇಂಡಿಯಾ ಕಾರಣವಾಗಿದೆ.

ಭಾರತ ಸರ್ಕಾರದ ಹೊಸ & ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಗ್ರೀನ್‍ವೇ ಒಲೆಗಳು ಪ್ರಮಾಣಿತವಾಗಿವೆ. ಇದು ಸಂಸ್ಥೆಯ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಹೊಸ ಸಾಮಥ್ರ್ಯದೊಂದಿಗೆ ಹೆಚ್ಚು ಪರಿಣಾಮಕಾರಿ ಉತ್ಪಾದನೆಯ ಜೊತೆಗೆ ಆರ್ಥಿಕ ದರವನ್ನೂ ಕಾಪಾಡಿಕೊಳ್ಳುವ ವಿಶ್ವಾಸ ನೇಹಾ ಅವರಿಗಿದೆ. ಉತ್ಪಾದನಾ ಸಾಮಥ್ರ್ಯ ಹೆಚ್ಚಳದಿಂದ ಖರ್ಚು ಕಡಿಮೆಯಾಗಲಿದ್ದು, ಒಲೆಗಳು ಮತ್ತಷ್ಟು ಗ್ರಾಹಕ ಸ್ನೇಹಿಯಾಗಲಿವೆ. ಗ್ರೀನ್‍ವೇನ ಪ್ರಮುಖ ಉತ್ಪನ್ನ ಅಂದ್ರೆ ಸ್ಮಾರ್ಟ್ ಸ್ಟವ್. ಇದು ಕಟ್ಟಿಗೆ, ಸೆಗಣಿಯಂತಹ ಸಾಂಪ್ರದಾಯಿಕ ಜೈವಿಕ ಇಂಧನ ಮೂಲಗಳಿಂದಲೂ ಉರಿಯಬಲ್ಲದು. ಮಣ್ಣಿನ ಒಲೆಗಳಷ್ಟೇ ಶಾಖವನ್ನು ಉತ್ಪಾದಿಸಬಲ್ಲ ಸಾಮಥ್ರ್ಯವನ್ನು ಹೊಂದಿದೆ. ಶೇಕಡಾ 70ರಷ್ಟು ಕಡಿಮೆ ಹೊಗೆಯನ್ನು ಹೊರಸೂಸುತ್ತದೆ, ಜೊತೆಗೆ ಪ್ರತಿವರ್ಷ 1.5 ಟನ್‍ನಷ್ಟು ಕಡಿಮೆ ಗ್ರೀನ್ ಹೌಸ್ ಅನಿಲವನ್ನು ಹೊರಹಾಕುತ್ತದೆ.

ಭಾರತದ ಗ್ರಾಮೀಣ ಪ್ರದೇಶದ ಪರಿಸರ ಹಾಗೂ ಜನರ ಆರೋಗ್ಯಕ್ಕೆ ಪೂರಕವಾದ ಒಲೆಗಳ ತಯಾರಿಕೆಯಲ್ಲಿ ಹಲವು ಕಂಪನಿಗಳು ತೊಡಗಿಕೊಂಡಿವೆ. ಆದ್ರೆ ಗ್ರೀನ್‍ವೇ ಒಲೆಗಳು ಅವೆಲ್ಲಕ್ಕಿಂತ ಭಿನ್ನ. ಈ ಒಲೆಗಳನ್ನು ಬೇರ್ಪಡಿಸದೇ ಸುಲಭವಾಗಿ ಒಂದು ಸ್ಥಳದಿಂದ ಇನ್ನೊಂದು ಕಡೆಗೆ ತೆಗೆದುಕೊಂಡು ಹೋಗಬಹುದು. ಈಗಾಗ್ಲೇ ಗ್ರೀನ್‍ವೇಗೆ ಹಣಕಾಸಿನ ನೆರವು ನೀಡಿರುವ `ಸಿಐಐಇ' ಇನ್ನಷ್ಟು ಹೂಡಿಕೆ ಮಾಡಲು ಚಿಂತನೆ ನಡೆಸ್ತಾ ಇದೆ. ಯಾಕಂದ್ರೆ ತಮ್ಮದೇ ಉತ್ಪಾದನಾ ವಿಭಾಗವನ್ನಿಟ್ಟುಕೊಂಡು ಗ್ರಾಮೀಣ ಮಾರುಕಟ್ಟೆಗೆ ಉತ್ಪನ್ನ ಒದಗಿಸುವ ಉದ್ಯಮಗಳು ಅಪರೂಪ. ಮಾರಾಟಗಾರರ ಅವಲಂಬನೆ ಕಡಿಮೆಯಾಗಿರೋದ್ರಿಂದ ಗುಣಮಟ್ಟದ ಮೇಲೂ ನಿಯಂತ್ರಣ ಸಾಧಿಸಬಹುದು, ವೆಚ್ಚವನ್ನು ಕೂಡ ಕಡಿಮೆ ಮಾಡಬಹುದು ಅನ್ನೋದು `ಸಿಐಐಇ' ಅಭಿಪ್ರಾಯ.

ಗ್ರೀನ್‍ವೇನ ಒಂದು ಸ್ಟವ್ ಬೆಲೆ 1399 ರೂಪಾಯಿ. ಮಣ್ಣಿನಿಂದ ಒಲೆ ತಯಾರಿಸಲು ಅವಕಾಶ ಇರೋದ್ರಿಂದ ನಿಮ್ಮ ಸ್ಟವ್ ಅನ್ನು ಯಾರೂ ಖರೀದಿಸೋದಿಲ್ಲ ಅಂತೆಲ್ಲಾ ನೇಹಾ ಅವರ ಬಳಿ ಹೇಳಿದವರಿದ್ದಾರೆ. ಆದ್ರೆ ಇದೆಲ್ಲಾ ನಮ್ಮ ಬಗೆಗೆ ಇರುವ ಕಾಳಜಿ ಎನ್ನುತ್ತಾರೆ ನೇಹಾ. ಆದ್ರೆ ನಮಗೆ ಪ್ರಯೋಗ ಮಾಡಲು ಪ್ರೋತ್ಸಾಹ ಬೇಕು ಅನ್ನೋದು ಅವರ ಅಭಿಪ್ರಾಯ. ಸದ್ಯ ಗ್ರೀನ್‍ವೇ ಜರ್ಮನ್ ಇನ್‍ಫ್ರಾ ಉತ್ತಮ ಆದಾಯ ಗಳಿಸುವತ್ತ ದಾಪುಗಾಲಿಟ್ಟಿದೆ. ನೇಹಾ ಅವರಂತೂ ಇನ್ನಷ್ಟು ಯಶಸ್ಸು ಪಡೆಯುವ ಆಶಾವಾದ ಹೊಂದಿದ್ದಾರೆ. ಗ್ರಾಹಕರ ವಾಸ್ತವತೆಯ ಜೊತೆಗೆ ಸಂಪರ್ಕ ಇಟ್ಟುಕೊಂಡ್ರೆ, ಅವರ ನಿತ್ಯದ ಸಮಸ್ಯೆಗಳನ್ನು ಅರ್ಥಮಾಡಿಕೊಂಡ್ರೆ ಯಶಸ್ಸು ಕಷ್ಟವಲ್ಲ ಅನ್ನೋದು ಅವರ ಆತ್ಮವಿಶ್ವಾಸದ ನುಡಿ.

Related Stories

Stories by YourStory Kannada