ಆದಾಯದಲ್ಲೂ ಬಿಎಂಟಿಸಿಗೆ ಅಗ್ರಸ್ಥಾನ

ಅಗಸ್ತ್ಯ

0

ಆರೂವರೆ ಸಾವಿರ ಬಸ್‍ಗಳು, ಪ್ರತಿದಿನ 40 ಲಕ್ಷ ಪ್ರಯಾಣಿಕರಿಗೆ ಸೇವೆ, 30 ಸಾವಿರ ಸಿಬ್ಬಂದಿಗಳನ್ನು ಹೊಂದಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅದೆಷ್ಟೋ ಪ್ರಥಮಗಳನ್ನು ಮಾಡಿ ದೇಶದ ನಂಬರ್​1 ಸಾರಿಗೆ ಎಂಬ ಹೆಗ್ಗಳಿಕೆಗಳಿಸಿದೆ. ತನ್ನ ವಿಶಿಷ್ಟ ಸೇವೆಯಿಂದಲೇ ಕೇಂದ್ರ, ಸಾರಿಗೆಗೆ ಸಂಬಂಧಿಸಿದ ಸಂಸ್ಥೆಗಳಿಂದ ನೂರಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇದೀಗ ಬಿಎಂಟಿಸಿ ಸೇವೆ ನೀಡುವುದರಲ್ಲಿ ಮಾತ್ರ ನಂ. 1 ಆಗಿರದ ಆದಾಯ ಗಳಿಕೆಯಲ್ಲು ಉಳಿದೆಲ್ಲಾ ಮಹಾನಗರ ಸಾರಿಗೆಗಿಂತ ಮುಂಚೂಣಿಯಲ್ಲಿದೆ.

ಬಸ್ ಪ್ರಯಾಣ ದರ ಹೆಚ್ಚಳ ಸೇರಿದಂತೆ ಹಲವು ಆರೋಪಗಳನ್ನು ಮತ್ತು ಮೂದಲಿಕೆಗಳನ್ನು ಎದುರಿಸುತ್ತಲೇ ಬಿಎಂಟಿಸಿ ತನ್ನ ಆದಾಯ ಹೆಚ್ಚಿಸಿಕೊಂಡಿದೆ. ಎಸ್‍ಆರ್‍ಟಿಯು ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ದೇಶದ ಉಳಿದ 7 ಮಹಾನಗರ ಸಾರಿಗೆ ಸಂಸ್ಥೆಗಳಿಗಿಂತ ಬಿಎಂಟಿಸಿಯ ಆದಾಯ 2014-15ರಲ್ಲಿ ಸಾಕಷ್ಟು ಹೆಚ್ಚಾಗಿದೆ. ಈ ಕುರಿತಂತೆ ವರದಿ ಬಿಡುಗಡೆ ಮಾಡಿರುವ ಎಸ್‍ಆರ್‍ಟಿಯು 2014-15ರಲ್ಲಿ ಬಿಎಂಟಿಸಿಯ ಆದಾಯ ಬರೋಬ್ಬರಿ 2,256.8 ಕೋಟಿ ರೂ. ಮುಂಬೈ, ದೆಹಲಿ, ಚೆನ್ನೈ, ಕೊಲ್ಕತ್ತಾಗಳಂತಹ ದೊಡ್ಡ ನಗರಗಳ ಸಾರಿಗೆ ಸಂಸ್ಥೆಗಳಿಗೆ ಹೋಲಿಸಿದರೆ ಇದು ಸಾಕಷ್ಟು ಹೆಚ್ಚಿದೆ. ದಿನದ ಬಸ್ ಪಾಸ್, ಮಾಸಿಕ ಪಾಸ್, ವಿದ್ಯಾರ್ಥಿ ಪಾಸ್, ಟಿಕೆಟ್ ಹೀಗೆ ನಾನಾ ಮೂಲಗಳಿಂದ ಬಿಎಂಟಿಸಿ ಆದಾಯ ಬಂದಿದೆ. ಅದರಲ್ಲಿ ಟಿಕೆಟ್‍ನಿಂದ ಬಂದಿರುವ ಆದಾಯವೇ ಹೆಚ್ಚಿದೆ.

ಇದನ್ನು ಓದಿ: ಜನೆರಲ್ ನಾಲ್ಡೆಜ್ ಅಲ್ಲ, ಜನರ ನಾಲೆಡ್ಜ್ ಇಂಪಾರ್ಟೆಂಟ್.! - ಆದರ್ಶ್ ಬಸವರಾಜ್

194 ಕೋಟಿ ಪ್ರಯಾಣಿಕರಿಗೆ ಸೇವೆ:

ಆದಾಯವಷ್ಟೇ ಅಲ್ಲದೆ ಅತಿ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವುದರಲ್ಲೂ ಬಿಎಂಟಿಸಿ ಮುಂಚೂಣಿಯಲ್ಲಿದೆ. ಬಿಎಂಟಿಸಿ ಪ್ರತಿದಿನ ಅಂದಾಅಜು 40 ಲಕ್ಷ ಜನರಿಗೆ ಸಾರಿಗೆ ಸೇವೆಯನ್ನು ನೀಡುತ್ತಿದೆ. ಅದರಂತೆ ಕಳೆದ ಒಂದು ವರ್ಷದಲ್ಲಿ 194 ಕೋಟಿ ಜನರು ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಸಿದ್ದಾರೆ. ಅವರಿಗೆಲ್ಲ ಅವರ ಗಮ್ಯ ಸೇರಿಸಲು ಬಿಎಂಟಿಸಿ ನಿತ್ಯ 6,649 ಬಸ್‍ಗಳನ್ನು ರಸ್ತೆಗಿಳಿಸಿದೆ.

2ನೇ ಸ್ಥಾನ ದೇಶದ ರಾಜಧಾನಿಗೆ:

ಆದಾಯ ಗಳಿಕೆಯಲ್ಲಲ್ಲದಿದ್ದರೂ ಬಸ್‍ಗಳ ಕಾರ್ಯಾಚರಣೆ ಮಾಡುವುದರಲ್ಲಿ ದೇಶದ ರಾಜಧಾನಿ ದೆಹಲಿ 2ನೇ ಸ್ಥಾನದಲ್ಲಿದೆ. ಅದರಂತೆ ದೆಹಲಿ ಪ್ರತಿದಿನ 4,799 ಬಸ್‍ಗಳನ್ನು ಸಂಚರಿಸುವಂತೆ ವಾರ್ಷಿಕ 1113.2 ಕೋಟಿ ರೂ. ಆದಾಯಗಳಿಸಿದೆ. ಆದಾಯದಲ್ಲಿ ಮಾತ್ರ 4ನೇ ಸ್ಥಾನ ದೆಹಲಿಯದ್ದಾಗಿದೆ. ಉಳಿದಂತೆ ಮುಂಬೈ ನಗರಿ 4,247 ಬಸ್‍ಗಳನ್ನು ರಸ್ತೆಗಿಳಿಸಿ 1508.5 ಕೋಟಿ ರೂ. ಆದಾಯ ಪಡೆದಿದೆ. ನೆರೆಯ ರಾಜ್ಯವಾದ ತಮಿಳುನಾಡಿನ ಚೆನ್ನೈ ನಗರ ಸಾರಿಗೆ ಸಂಸ್ಥೆ 3,787 ಬಸ್‍ಗಳಿಂದ 1,376.5 ಕೋಟಿ ರೂ. ಆದಾಯ ಗಳಿಸಿದೆ. ಕೋಲ್ಕತ್ತ ನಗರದಲ್ಲಿ ಸರ್ಕಾರಿ ಸ್ವಾಮ್ಯದ 782 ಬಸ್‍ಗಳಷ್ಟೇ ಸಂಚರಿಸುತ್ತಿದ್ದು, ಆದಾಯ ಕೇವಲ 72.4 ಕೋಟಿ ರೂ. ಆಗಿದೆ.

ಅಹಮದಾಬಾದ್ 130.1 ಕೋಟಿ ರೂ., ಚಂಡೀಗಢ 111.07 ಕೋಟಿ ರೂ., ಹಾಗೂ ಪುಣೆ ನಗರದ ಸಾರಿಗೆ ಬಸ್‍ಗಳಿಂದ 70.73 ಕೋಟಿ ರೂ. ವಾರ್ಷಿಕ ಆದಾಯಗಳಿಸಿವೆ.

ನಷ್ಟದಲ್ಲೂ ಬಿಎಂಟಿಸಿ ಮುಂದು:

ಹೆಚ್ಚು ಬಸ್‍ಗಳನ್ನು ಸಂಚರಿಸುವಂತೆ ಮಾಡಿ ಉಳಿದೆಲ್ಲ ಸಾರಿಗೆಗಳಿಗಿಂತ ಹೆಚ್ಚಿನ ಆದಾಯಗಳಿಸಿರುವ ಬಿಎಂಟಿಸಿ, ನಷ್ಟದಲ್ಲೂ ಬೇರೆ ಸಾರಿಗೆಗಳಿಗಿಂತ ಮುಂಚೂಣಿಯಲ್ಲಿದೆ. ಒಟ್ಟಾರೆ 8 ರಾಜ್ಯ ರಸ್ತೆ ಸಾರಿಗೆ ನಿಗಮಗಳ ಪೈಕಿ ಮುಂಬೈ, ಬೆಂಗಳೂರು, ದೆಹಲಿ, ಚೆನ್ನೈ ಹಾಗೂ ಕೊಲ್ಕತ್ತಾ ಮಹಾನಗರ ಸಾರಿಗೆಗಳು 2014-15ನೇ ಸಾಲಿನಲ್ಲಿ ಸರಾಸರಿ 5,744 ಕೋಟಿ ರೂ.ನಷ್ಟು ನಷ್ಟ ಅನುಭವಿಸಿವೆ. ಈ ಮೊತ್ತವು ಆದಾಯದಲ್ಲಿ ಶೇ. 50ರಷ್ಟು ನಷ್ಟ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಎಲ್ಲಾ ನಗರ ಸಾರಿಗೆಗಳಲ್ಲೂ ವರ್ಷದಿಂದ ವರ್ಷಕ್ಕೆ ನಷ್ಟದ ಪ್ರಮಾಣ ಹೆಚ್ಚುವಂತಾಗಿದೆ. 

ಇದನ್ನು ಓದಿ

1. ಬರುತ್ತಿದೆ ಹೋಳಿ ಹಬ್ಬದ ಸಂಭ್ರಮ : ಆಚರಣೆಗಿರಲಿ ನೈಸರ್ಗಿಕ ಬಣ್ಣಗಳ ರಂಗು...

2. ಸೌಂದರ್ಯ-ಆರೋಗ್ಯ ಕಾಪಾಡಿಕೊಳ್ಳಬೇಕೆ? ನಿಮಗಾಗಿಯೇ ಇದೆ ಫಿಟ್ನೆಸ್ ಗುರು `ಬುಕ್ ಯುವರ್ ಗೇಮ್' ಆ್ಯಪ್

3. 10 ಕೋಟಿ ಸೊಳ್ಳೆ ಕೊಂದ ರಾಸಾಯನಿಕ ಮುಕ್ತ ಮಿಷನ್ : ಇದು ಮಂಗಳೂರಿನ ಆರ್ವಿನ್ ಅಪೂರ್ವ ಸಾಧನೆ ..!