ಬಡತನದಿಂದ ಶಾಲೆ ಬಿಟ್ಟವರು ಇಂದು 200 ಮಕ್ಕಳ ಭವಿಷ್ಯವಾಗಿದ್ದಾರೆ..

ಟೀಮ್​ ವೈ.ಎಸ್. ಕನ್ನಡ

0


2006ರಿಂದ ನಡೆಯುತ್ತಿರುವ ಶಾಲೆ...

ದಿಲ್ಲಿಯ ಯಮುನಾ ಬ್ಯಾಂಕ್ ಮೆಟ್ರೋ ಬ್ರಿಡ್ಜ್ ಕೆಳಗೆ ನಡೆಯುವ ಶಾಲೆ...

ಎರಡು ಪಾಳಿಯಲ್ಲಿ ನಡೆಯುವ ಶಾಲೆ...


ಇದೊಂದು ಅದ್ಭುತ ಶಾಲೆ, ಈ ಶಾಲೆಗೆ ಯಾವುದೇ ಹೆಸರಿಲ್ಲ. ಇದಕ್ಕೆ ಯಾವುದೇ ರೀತಿಯ ಕಟ್ಟಡವಿಲ್ಲ. ಆದರೂ ಇಲ್ಲಿ ದಿನ ಇನ್ನೂರು ಮಕ್ಕಳು ಬರ್ತಾರೆ. ಎರಡು ಶಿಫ್ಟ್​​ನಲ್ಲಿ ನಡೆಯುವ ಈ ಶಾಲೆ, ದೆಹಲಿಯ ಯಮುನಾ ಬ್ಯಾಂಕ್ ಮೆಟ್ರೋ ಸ್ಟೇಷನ್ ಕೆಳಗಡೆ ನಡೆಯುತ್ತದೆ. ಇಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ. 2006 ರಿಂದ ಈ ಶಾಲೆ ನಡೆಯುತ್ತಿದೆ. ಈ ಶಾಲೆಯನ್ನು ಕಳೆದ 9 ವರ್ಷದಿಂದ ನಡೆಸಿಕೊಂಡು ಬರುತ್ತಿರುವವರು ರಾಜೇಶ್ ಕುಮಾರ್ ಶರ್ಮಾ. ಶಕರ್ಪುರ ಎಂಬ ಊರಲ್ಲಿ ಸಣ್ಣ ಕಿರಾಣಿ ಅಂಗಡಿ ನಡೆಸುವ ಇವರು ಸಾವಿರಾರು ಮಕ್ಕಳಿಗೆ ಶಿಕ್ಷಣ ಒದಗಿಸುವ ಮೂಲಕ ಅವರ ಭವಿಷ್ಯ ಬರೆದಿದ್ದಾರೆ. ಒಂದು ಮಿಶನ್ ರೀತಿಯಲ್ಲಿ ಈ ಕೆಲಸ ನಡೆಸಿಕೊಂಡು ಬಂದಿರುವ ಇವರು, ಯಾರ ಸಹಾಯ ಪಡೆಯದೆ ತಮ್ಮ ಸ್ವಂತ ಖರ್ಚಿನಿಂದಲೇ ಈ ಶಾಲೆಯನ್ನು ನಡೆಸುತ್ತಿದ್ದಾರೆ.

ಈ ಕಥೆ ಶುರುವಾಗುವುದು ಒಂದು ಮುಸ್ಸಂಜೆ ವಾಯು ವಿಹಾರಕ್ಕೆ ಹೋಗಿದ್ದ ವೇಳೆ. 2006ರಲ್ಲಿ ರಾಜೇಶ್ ಶರ್ಮಾ ಶಾಲೆ ಶುರು ಮಾಡಿದ ಕಾರಣ ಕೂಡ ಅದ್ಭುತವಾಗಿದೆ. ಒಂದು ದಿನ ಯುಮುನಾ ಬ್ಯಾಂಕ್ ಹತ್ತಿರ ಮೆಟ್ರೋ ಕೆಲಸ ಹೇಗೆ ನಡೆಯುತ್ತಿದೆ. ಎಂಬ ಕುತೂಹಲಕ್ಕೆ ಅಲ್ಲಿನ ಮೆಟ್ರೋ ಕಾಮಗಾರಿ ನೋಡಲು ರಾಜೇಶ್ ಶರ್ಮಾ ವಾಯು ವಿಹಾರಕ್ಕೆ ಹೋಗಿದ್ರು. ಆದರೆ ಅಲ್ಲಿ ಅವರು ನೋಡಿದ ದೃಶ್ಯವೇ ವಿಚಿತ್ರವಾಗಿತ್ತು. ಒಂದಿಷ್ಟು ಮಕ್ಕಳು ಮಣ್ಣಿನಲ್ಲಿ ಆಡುತ್ತಾ ಕುಳಿತಿದ್ರು. ಅವರೆಲ್ಲಾ ಅಲ್ಲಿ ಕೆಲಸ ಮಾಡುವ ಕೂಲಿಕಾರರ ಮಕ್ಕಳು. ಮತ್ತೊಂದಿಷ್ಟು ಮಕ್ಕಳ ಪಾಲಕರು ಗುಜರಿ ಸಾಮಾನುಗಳನ್ನು ಮಾರಿ ಜೀವನ ನಡೆಸುತ್ತಿದ್ದವರಾಗಿದ್ರು. ಇದನ್ನು ನೋಡಿ ಪುಳಕಿತರಾದ ರಾಜೇಶ್ ಅವರ ಪಾಲಕರನ್ನು ಬೇಟಿ ಮಾಡಿದ್ರು. ಅವರನ್ನು ಶಾಲೆಗೆ ಯಾಕೆ ಕಲಿಸುತ್ತಿಲ್ಲ, ಅವರ ಭವಿಷ್ಯವನ್ನು ಹಾಳು ಮಾಡಬೇಡಿ ಶಾಲೆಗೆ ಕಳುಹಿಸಿ ಎಂದು ಬುದ್ದಿ ಮಾತು ಕೂಡ ಹೇಳಿದ್ರು. ಆದರೆ ಅವರು ಹೇಳಿದ ಉತ್ತರ ಮಾತ್ರ ವಿಚಿತ್ರವಾಗಿತ್ತು. ಅಲ್ಲಿಂದ ಬಹಳ ದೂರದಲ್ಲಿ ಶಾಲೆಯಿದೆ. ಅಲ್ಲಿಗೆ ಹೋಗಲು ಸರಿಯಾದ ರಸ್ತೆ ಕೂಡ ಇಲ್ಲ. ಹಾಗಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲವೆಂದು ಅಲ್ಲಿನ ಸ್ಲಂ ನಿವಾಸಿ ಹೇಳಿದ್ರು. ಅಷ್ಟು ದೂರ ಹೋಗಿ ಬಿಟ್ಟು ಬರಲು, ಕರೆದುಕೊಂಡು ಬರಲು ತಮ್ಮ ಬಳಿ ಸಮಯವಿಲ್ಲ ಎಂದರು.

ಮಕ್ಕಳ ಪರಿಸ್ಥಿತಿಯನ್ನು ನೋಡಿದ ರಾಜೇಶ್ ಈ ಮಕ್ಕಳಿಗಾಗಿ ಏನಾದ್ರು ಮಾಡಬೇಕು. ಇಲ್ಲವಾದಲ್ಲಿ ಇವರು ಇದೇ ಮಣ್ಣಲ್ಲಿ ಆಡುತ್ತ ಬಿಸಿಲಲ್ಲೇ ತಮ್ಮ ಬಾಲ್ಯವನ್ನು ಕಳೆದು ಬಿಡುತ್ತಾರೆ. ಅವರ ಮೊಗದಲ್ಲಿ ಖುಷಿ ನೀಡುವಂತಹ ಕೆಲಸ ಮಾಡಬೇಕೆಂದು ಯೋಚಿಸಿ, ಅವರಿಗೆ ಪಕ್ಕದ ಅಂಗಡಿಯಿಂದ ಚಾಕಲೇಟ್ ತಂದುಕೊಟ್ರು. ತಕ್ಷಣ ಮಕ್ಕಳು ಕೂಡ ಖುಷಿಯಾದ್ರು. ಆದರೆ ಇದು ತಾತ್ಕಾಲಿಕ ಖುಷಿ, ಅವರಿಗೆ ಇದಕ್ಕಿಂತ ಹೆಚ್ಚಿನದನ್ನು ನಾನು ಏನಾದ್ರು ಮಾಡಬೇಕು. ಅವರ ಭವಿಷ್ಯ ರೂಪಿಸಬೇಕು ಎಂದು ಸಂಕಲ್ಪ ಮಾಡಿದ್ದಾಗ ಶಾಲೆ ತೆಗೆಯುವ ವಿಚಾರ ಬಂತು ಎನ್ನುತ್ತಾರೆ. ‘ ಹೌದು ನಾನು ಶಾಲೆ ತೆಗೆಯುವುದರಿಂದ ಇವರಿಗೆ ಶಿಕ್ಷಣ ನೀಡಬಹುದು, ಬದುಕುವ ದಾರಿ ಕಳಿಸಬಹುದು, ಇವರ ಭವಿಷ್ಯ ರೂಪಿಸಬಹುದು ಎಂಬ ಒಂದೇ ಕಾರಣಕ್ಕೆ ಶಾಲೆ ತೆಗೆಯುವ ವಿಚಾರ ಮಾಡಿದೆ ಅಂತಾರೆ’ ರಾಜೇಶ್.

ಮರು ದಿನವೇ ರಾಜೇಶ್ ಮಕ್ಕಳಿಗೆ ಕಲಿಸಲು ಬಂದುಬಿಟ್ರು. 2006ರಲ್ಲಿ ಅವರ ಈ ಪಯಣ ಆರಂಭವಾಯ್ತು. ಹಿಂದಿನ ದಿನವೇ ಮಕ್ಕಳಿಗೆ ಒಂದು ಗಂಟೆ ಬಂದು ಪ್ರತಿದಿನ ಕಲಿಸುತ್ತೇನೆಂದು ಹೇಳಿದ ರಾಜೇಶ್ ಅದರಂತೆ ಬಂದ್ರು. ಆದರೆ ಮೊದಲ ದಿನ ಅವರ ಶಾಲೆಗೆ ಬಂದಿದ್ದು ಕೇವಲ ಇಬ್ಬರು ವಿದ್ಯಾರ್ಥಿಗಳು ಮಾತ್ರ. ಅವರಿಗೆ ಓದುವ ಛಲವಿತ್ತು. ಆದರೆ ರಾಜೇಶ್ ಮಾತ್ರ ಸುಮ್ಮನಾಗಲಿಲ್ಲ. ಮತ್ತೆ ಹೋಗಿ ಅಕ್ಕಪಕ್ಕದ ಮಕ್ಕಳ ಮನವೋಲಿಸಿ ಅವರನ್ನು ಕರೆತಂದ್ರು. ಮಕ್ಕಳು ಕೂಡ ಬಂದ್ರು, ಅಂದಿನಿಂದ ಅವರ ಮಿಶನ್ ಸರಿಯಾದ ದಿಕ್ಕಿನಲ್ಲಿ ಸಾಗಿದೆ. ಇಂದು ರಾಜೇಶ್ ಅವರ ಹೆಸರಿಡದ ಶಾಲೆಯಲ್ಲಿ 200ಕ್ಕಿಂತ ಹೆಚ್ಚು ಮಕ್ಕಳಿದ್ದಾರೆ. ಅದರಲ್ಲಿ ಹೆಚ್ಚಿನವರು ಬಾಲಕಿಯರು ಎಂಬುವುದು ವಿಶೇಷ.

ದಿಲ್ಲಿಯ ಯಮುನಾ ಬ್ಯಾಂಕ್ ಮೆಟ್ರೋ ಸ್ಟೇಶನ್ ಬಳಿ ಶಾಲೆ ನಡೆಸುವ ಕೆಲಸವನ್ನು ರಾಜೇಶ್ ಒಬ್ಬರೆ ಆರಂಭಿಸಿದ್ರು. ಅದರೆ ಇಂದು ಅನೇಕರು ಅವರ ಕೆಲಸದಲ್ಲಿ ಕೈ ಜೋಡಿಸಿದ್ದಾರೆ. ಸಮಯ ಸಿಕ್ಕ ವೇಳೆಯಲ್ಲಿ ಅನೇಕ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕ-ಶಿಕ್ಷಕಿಯರು, ನಿವೃತ್ತ ಸರ್ಕಾರಿ ಅಧಿಕಾರಿಗಳು ಬಂದು ಉಚಿತವಾಗಿ ಈ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಎಲ್ಲರೂ ತಮ್ಮ ಕೈಲಾದಷ್ಟು ವಿದ್ಯೆಯನ್ನು ಧಾರೆ ಎರೆಯುತ್ತಿದ್ದಾರೆ. ಈ ಶಾಲೆಯಲ್ಲಿ 5 ರಿಂದ 16 ವರ್ಷದ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮೆಟ್ರೋ ಅಧಿಕಾರಿಗಳು ಕೂಡ ಇವರಿಗೆ ಯಾವುದೇ ರೀತಿ ತೊಂದರೆ ನೀಡುತ್ತಿಲ್ಲ. ರಾಜೇಶ್ ಸಮಾಜ ಸೇವೆ ಮಾಡುತ್ತಿದ್ದಾರೆಂದು ತಿಳಿದು ಅವರು ಕೂಡ ಅನಧೀಕೃತವಾಗಿ ಈ ಶಾಲೆ ನಡೆಸಲು ತುಂಬು ಮನಸ್ಸಿನಿಂದ ಹಸಿರು ನಿಶಾನೆ ತೋರಿದ್ದಾರೆ.

ತಮ್ಮ ಶಾಲೆಯಲ್ಲಿ ಕಲಿಯುತ್ತಿರುವ ಹಲವು ಮಕ್ಕಳನ್ನು ರಾಜೇಶ್ ಈಗಾಗಲೇ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಈಗಾಗಲೇ ಸರ್ವಶಿಕ್ಷಣ ಅಭಿಯಾನದಡಿ 17 ಬಾಲಕಿಯರನ್ನು ದೆಹಲಿ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಅವರೂ ಕೂಡ ರಾಜೇಶ್ ಅವರ ಶಾಲೆಗೆ ಬರುತ್ತಾರೆ. ರಾಜೇಶ್​ರ ಶಾಲೆ ದಿನಕ್ಕೆ ಎರಡು ಸಲ ಆರಂಭವಾಗುತ್ತೆ. ಮೊದಲ ಪಾಳಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12-30 ತನಕ ನಡೆಯುತ್ತದೆ. ಎರಡನೇ ಪಾಳಿ ಮಧ್ಯಾಹ್ನ 2 ರಿಂದ ನಾಲ್ಕರ ವರೆಗೆ ನಡೆಯುತ್ತದೆ. ಎರಡನೇ ಪಾಳಿಯಲ್ಲಿ ಬಾಲಕಿಯರು ಬರುತ್ತಾರೆ. ಭಾನುವಾರ ಶಾಲೆಗೆ ರಜೆ ನೀಡಲಾಗುತ್ತೆ. ಇದುವರೆಗೆ ರಾಜೇಶ್ ಅವರ ಸ್ಕೂಲಿನಲ್ಲಿ ವ್ಯಾಸಂಗ ಮಾಡಿದ ಮಕ್ಕಳು ಪಿಯುಸಿ ಮೊದಲ ಮತ್ತು ದ್ವಿತೀ ವರ್ಷಕ್ಕೆ ಬಂದಿದ್ದಾರೆ. 11 ಮತ್ತು 12ನೇ ತರಗತಿಗೆ ಕಾಲಿಟ್ಟಿದ್ದಾರೆ.

ಇವತ್ತು ದಿಲ್ಲಿಯ ಹಲವು ಜನರು ರಾಜೇಶ್ ಅವರನ್ನು ಅವರ ಕೆಲಸದಿಂದ ಗುರುತಿಸುತ್ತಾರೆ. ಇದರಿಂದ ಬಡ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸುವಲ್ಲಿ ರಾಜೇಶ್​ಗೆ ಸುಲಭವಾಗುತ್ತಿದೆ. ಆದರೆ ರಾಜೇಶ್ ಅವರು ಯಾವುದೇ ಕಾರಣಕ್ಕೆ ತಮ್ಮ ಸ್ವಂತಕ್ಕೆಂದು ಸಹಾಯ ತೆಗೆದುಕೊಳ್ಳುವುದಿಲ್ಲ. ಯಾರೇ ದುಡ್ಡು ನೀಡಲು ಬಂದರು ಅದನ್ನು ನಯವಾಗಿ ತಿರಸ್ಕರಿಸುತ್ತಾರೆ. ಏನಾದ್ರು ಸಹಾಯ ಮಾಡಬೇಕು ಎಂಬುದು ನಿಮಗಿದ್ದಾರೆ. ಈ ಮಕ್ಕಳಿಗಾಗಿ ಮಾಡಿ ಎನ್ನುತ್ತಾರೆ. ಇಷ್ಟು ವರ್ಷದ ಅನುಭವದಿಂದ ರಾಜೇಶ್ ಅವರು ಯಾವ ಮಕ್ಕಳು ಹೇಗೆ ವರ್ತಿಸುತ್ತಾರೆ. ಯಾರಿಗೆ ಕಲಿಯಲು ಆಸಕ್ತಿಯಿದೆ. ಯಾರಿಗೆ ಯಾವ ರೀತಿ ಕಲಿಸಬೇಕೆಂಬ ಅನುಭವವಾಗಿದೆ. ಹಾಗಾಗಿ ಅವರು ಎಂತಹ ಮಕ್ಕಳು ಬಂದರು ಅವರಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡುತ್ತಾರೆ. ಅವರ ವಿಶ್ವಾಸ ಗೆಲ್ಲುತ್ತಾರೆ. ’ ರಾಜೇಶ್ ಅವರ ಮಾತನ್ನು ಪಾಲಿಸುವ ಅನೇಕ ಉದಾರಿಗಳು ಮಕ್ಕಳಿಗೆ ಶಾಲಾ ಪಠ್ಯಪುಸ್ತಕ, ಅವಶ್ಯಕ ವಸ್ತುಗಳನ್ನು ಕೊಡಿಸಿದ್ದಾರೆ. ಮತ್ತು ಅವರಿಗೆ ಬೇರೆ ಶಾಲೆಗಳಲ್ಲಿ ದಾಖಲಾತಿ ಕೂಡ ಕೊಡಿಸಿದ್ದಾರೆ. ಜನರು ಮೊದಲಿಗಿಂತ ಹೆಚ್ಚು ಜಾಗೃತರಾಗಿದ್ದಾರೆ. ಹಾಗಾಗಿ ಒಳ್ಳೆ ಕೆಲಸದಲ್ಲಿ ಅವರು ಕೂಡ ಕೈ ಜೋಡಿಸುತ್ತಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಸಹಾಯವಾಗಿದ್ದಾರೆ ಎಂಬುವುದನ್ನು ರಾಜೇಶ್ ಖುಷಿಯಿಂದ ಹೇಳುತ್ತಾರೆ.

ರಾಜೇಶ್ ಉತ್ತರ ಪ್ರದೇಶದ ಅಲಿಗಡ್​ನವರು. ಅಲ್ಲಿಯ ಸರ್ಕಾರಿ ಶಾಲೆಯಲ್ಲಿ ಅವರ ವ್ಯಾಸಾಂಗವಾಗಿದೆ. ಕಲಿಯುವುದರಲ್ಲಿ ತುಂಬಾ ಬುದ್ದಿವಂತರು, ಬಿಎಸ್​ಸಿ ಓದಲು ಕಾಲೇಜಿಗೆ ಸೇರಿಕೊಂಡ್ರು, ಆದರೆ ಹಣದ ಕೊರತೆ, ಕಿತ್ತು ತಿನ್ನುವ ಬಡತನದ ಕಾರಣ ಒಂದೇ ವರ್ಷದಲ್ಲಿ ಕಾಲೇಜನ್ನು ಅರ್ಧದಲ್ಲೇ ಬಿಡಬೇಕಾದ ಪರಿಸ್ಥಿತಿ ಬಂದಿತು. ತಮ್ಮ-ತಂಗಿಯಿದ್ದ ಮನೆಯಲ್ಲಿ ರಾಜೇಶ್ ಹಿರಿಯ ಮಗನಾಗಿದ್ರು. ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಅವರು ದಿಲ್ಲಿಗೆ ಬಂದು ದುಡಿಯಬೇಕಾಯ್ತು. ಅದಕ್ಕಾಗಿ ಅವರು ದಿಲ್ಲಿಯಲ್ಲಿ ಅನೇಕ ಸಣ್ಣ ಪುಟ್ಟ ಕೆಲಸವನ್ನು ಮಾಡಿದ್ರು. ಸಮಯ ಕಳೆದಂತೆ ಅವರ ಕೆಲಸ ಕೂಡ ಬದಲಾದ್ವು. ಇಂದು ಶಕರಪುರದಲ್ಲಿ ರಾಜೇಶ್ ಅವರ ಸ್ವಂತ ಕಿರಾಣಿ ಅಂಗಡಿಯಿದೆ. ಇಷ್ಟಾದ್ರು ರಾಜೇಶ್ ಬಡ ವಿದ್ಯಾರ್ಥಿಗಳ ಶಾಲೆಗೆ ಒಂದು ದಿನವೂ ಗೈರಾಗಿಲ್ಲ. ಅಂಗಡಿ ಜೊತೆ-ಜೊತೆ ಶಾಲೆ ನಡೆಸುವ ರಾಜೇಶ್, ಸಮಯ ಸಿಕ್ಕಾಗ ಸಾಹಿತ್ಯದ ಪುಸ್ತಕಗಳನ್ನು ಓದುತ್ತಾರೆ. ಯಾಕಂದ್ರೆ. ಅವರು ಎಷ್ಟು ಬುದ್ದಿವಂತರಾಗುತ್ತಾರೋ ಅಷ್ಟೇ ವಿದ್ಯೆಯನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯಬಹುದು ಎಂಬುದು ಅವರ ನಂಬಿಕೆಯಾಗಿದೆ.


ಲೇಖಕರು: ಹರೀಶ್ ಬಿಶ್ತ್

ಅನುವಾದಕರು: ಎನ್. ಎಸ್. ರವಿ


Related Stories

Stories by YourStory Kannada