ಹಿರಿಯ ಜೀವಗಳ ಆರೈಕೆಗೆ ಗುಡ್‍ಹ್ಯಾಂಡ್ಸ್

ಟೀಮ್​ ವೈ.ಎಸ್​. ಕನ್ನಡ

ಹಿರಿಯ ಜೀವಗಳ ಆರೈಕೆಗೆ ಗುಡ್‍ಹ್ಯಾಂಡ್ಸ್

Thursday December 24, 2015,

4 min Read

ಬೆಂಗಳೂರಿನ ಕಾಲೇಜೊಂದರಲ್ಲಿ ಮ್ಯಾನೇಜ್ಮೆಂಟ್ ಲೆಕ್ಚರರ್ ಆಗಿರುವ 47 ವರ್ಷದ ಮಧು ದಾಸ್ ಪ್ರತಿ ಎರಡು ವಾರಕ್ಕೊಮ್ಮೆ ಐಐಎಮ್ ತಿರುಚಿರಾಪಲ್ಲಿಗೆ ಭೇಟಿ ನೀಡ್ತಾರೆ. ಪ್ರತಿ ಬಾರಿ ಅವರು ಮನೆಯಿಂದ ಹೊರಟಾಗಲೂ ಅವರಿಗೆ ವಯಸ್ಸಾದ ತಾಯಿಯದೇ ದೊಡ್ಡ ಚಿಂತೆ. ಯಾಕಂದ್ರೆ 71 ವರ್ಷದ ಅವರ ತಾಯಿಗೆ ಕಳೆದ 5 ವರ್ಷಗಳಲ್ಲಿ ಎರಡು ಬಾರಿ ಮೆದುಳು ಶಸ್ತ್ರಚಿಕಿತ್ಸೆಯಾಗಿದೆ. ಆರು ತಿಂಗಳ ಹಿಂದಷ್ಟೇ ಒಮ್ಮೆ ಸರ್ಜರಿಯಾಗಿದೆ. ಶಸ್ತ್ರಚಿಕಿತ್ಸೆಯಾದ ಕೆಲವೇ ವಾರಗಳಲ್ಲಿ ಅವರ ತಾಯಿ ವೇಗವಾಗಿ ಆರೋಗ್ಯದಲ್ಲಿ ಚೇತರಿಕೆ ಕಂಡರೂ, ಅವರನ್ನು ನೋಡಿಕೊಳ್ಳಲು ಕೇವಲ ಒಬ್ಬ ನರ್ಸ್‍ಅನ್ನು ಬಿಟ್ಟು ಬರುವುದು ಮಧು ಅವರಿಗೆ ಕಷ್ಟವಾಗುತ್ತಿತ್ತು.

ಯಾಕಂದ್ರೆ ಈ ಹಿಂದೆ ಅವರಿಗೆ ನರ್ಸ್‍ಗಳೊಂದಿಗೆ ಕೆಟ್ಟ ಅನುಭವಗಳಾಗಿದ್ದವು. ‘ಅಯ್ಯೋ ದೇವರೇ, ಈ ಹಿಂದಿನ ಏಜೆನ್ಸಿಯಲ್ಲಿ ಕೇವಲ 3 ತಿಂಗಳಲ್ಲಿ 6 ಮಂದಿ ನರ್ಸ್‍ಗಳು ಬದಲಿಸಬೇಕಾಯ್ತು. ನನ್ನ ತಾಯಿ ಅಂತಹ ಕೆಟ್ಟ ಸ್ಥಿತಿಯಲ್ಲಿರುವಾಗ ಅವರಿಗೆ ಈ ರೀತಿಯ ಅನುಭವವಾಗೋದು ನನಗಿಷ್ಟ ಇರಲಿಲ್ಲ. ಒಬ್ಬ ನರ್ಸ್‍ಗೆ ಹೊಂದಿಕೊಂಡು, ಕೆಲವೇ ದಿನಗಳಲ್ಲಿ ಆಕೆ ಬದಲಾಗಿ ಮತ್ತೊಬ್ಬ ನರ್ಸ್ ಬಂದ್ರೆ, ಆ ಹೊಸ ನರ್ಸ್‍ಗೆ ಹೊಂದಿಕೊಳ್ಳಲು ಮತ್ತೆ ಸಮಯ ಬೇಕಾಗುತ್ತೆ. ಹೀಗಾಗಿಯೇ ನನಗೆ ಈ ಸಮಸ್ಯೆಗೆ ಮತ್ತೊಂದು ಉತ್ತಮ ಪರಿಹಾರ ಬೇಕಿತ್ತು.’ ಅಂತಾರೆ ಮಧು.

image


ಅದೇ ಸಮಯದಲ್ಲಿ ಅವರ ಸಹೋದರನಿಗೆ ಗುಡ್‍ಹ್ಯಾಂಡ್ಸ್ ಎಲ್ಡರ್‍ಕೇರ್ ಕುರಿತು ಮಾಹಿತಿ ದೊರೆಯಿತು. ಬೆಂಗಳೂರು ಮೂಲದ ಈ ಸ್ಟಾರ್ಟಪ್‍ಗೆ ಮನು ರಾಮನ್ ಮತ್ತು ದಿಲೀಪ್ ಅಶೋಕಾ ಬಂಡವಾಳ ಹೂಡಿದ್ದರು. ಹಿರಿಯರ ಆರೈಕೆಗೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳನ್ನೂ ಆನ್‍ಲೈನ್ ಮೂಲಕ ಒಂದೇ ಸೂರಿನಡಿಯಲ್ಲಿ ಗುಡ್‍ಹ್ಯಾಂಡ್ಸ್ ಮೂಲಕ ಒದಗಿಸಲಾಗುತ್ತಿತ್ತು. ವೈದ್ಯಕೀಯ ಮತ್ತು ವೈದ್ಯಕೀಯವಲ್ಲದ ಉತ್ಪನ್ನಗಳು ಹಾಗೂ ಸೇವೆಗಳನ್ನು ಒದಗಿಸುವ ಕಂಪನಿಗಳು ಮತ್ತು ಗ್ರಾಹಕರ ನಡುವೆ ಆನ್‍ಲೈನ್ ಮೂಲಕ ಸಂಪರ್ಕ ಕಲ್ಪಿಸುವುದು ಈ ಗುಡ್‍ಹ್ಯಾಂಡ್ಸ್ ಎಲ್ಡರ್‍ಕೇರ್‍ನ ಕೆಲಸವಾಗಿತ್ತು.

ಗುಡ್‍ಹ್ಯಾಂಡ್ಸ್ ಎಲ್ಡರ್‍ಕೇರ್ ಇತಿಹಾಸವೇನು?

ದಿಲೀಪ್ ಮತ್ತು ಮನು ಇಬ್ಬರೂ ತುಂಬಾ ಹಳೆಯ ಗೆಳೆಯರು. ಸಮಾಜಮುಖಿಯಾಗಿ ಏನಾದ್ರೂ ಮಾಡಬೇಕು ಅಂತ ಈ ಇಬ್ಬರೂ ದೋಸ್ತ್‍ಗಳು ಒಟ್ಟಿಗೇ ನಿರ್ಧರಿಸಿದರು. ‘ನಾವು ನಮ್ಮ ಸುತ್ತಮುತ್ತ ನೋಡಿದಾಗ ಇಂದಿನ ಹಿರಿಯ ಜೀವಗಳಿಗೆ ಗೌರವ ನೀಡುವುದು ಕಡಿಮೆಯಾಗ್ತಿದೆ ಅಂತನ್ನಿಸ್ತು. ಮಕ್ಕಳಿಗೆ ಮತ್ತು ಯುವಪೀಳಿಗೆಗೆ ನೀಡುತ್ತಿರುವಷ್ಟು ಪ್ರಾಮುಖ್ಯತೆ ಹಿರಿಯರಿಗೆ ನೀಡ್ತಿಲ್ಲ ಅನ್ನೋ ಭಾವನೆ ಮೂಡಿತು. ಹೀಗಾಗಿಯೇ ನಾವು ಅದೇ ವಿಷಯವನ್ನು ತೆಗೆದುಕೊಂಡು, ಸಮಾಜದಲ್ಲಿ ಒಂದೊಳ್ಳೆ ಬದಲಾವಣೆ ತರಲು ಮುಂದಾದೆವು’ ಅಂತ ಮಾಹಿತಿ ನೀಡ್ತಾರೆ ಡೇಟಾ ಅನಾಲಿಟಿಕ್ಸ್ ಕಂಪನಿ, ಮು ಸಿಗ್ಮಾ ಸದಸ್ಯ ಮತ್ತು ಸಹ ಸಂಸ್ಥಾಪಕ ಮನು. ದಿಲೀಪ್ ಅವರಿಗಂತೂ ಮಾರ್ಕೆಟಿಂಗ್ ಮತ್ತು ಸಮೂಹ ಮಾಧ್ಯಮಗಳಲ್ಲಿ ಸುಮಾರು 20 ವರ್ಷಗಳ ಕಾಲ ಕೆಲಸ ಮಾಡಿದ ಸುದೀರ್ಘ ಅನುಭವವಿದೆ. ಜೊತೆಗೆ ಕರ್ನಾಟಕದ ರಿಶಿ ವ್ಯಾಲಿ ಸ್ಕೂಲ್‍ನಲ್ಲಿ ಕಲಿಕಾ ತರಬೇತಿ ಕುರಿತು ಪಾಠ ಕೂಡ ಮಾಡುತ್ತಿದ್ದರು.

ಯಾವೆಲ್ಲಾ ಸಮಸ್ಯೆಗಳಿಗೆ ಗುಡ್‍ಹ್ಯಾಂಡ್ಸ್ ಬಳಿ ಪರಹಾರವಿದೆ?

ದಿಲೀಪ್ ಪ್ರಕಾರ ಭಾರತದಲ್ಲಿ ಪ್ರಮುಖವಾಗಿ ಎರಡು ಸಮಸ್ಯೆಗಳಿವೆಯಂತೆ. ಮೊದಲನೇದಾಗಿ ಯುವಪೀಳಿಗೆಯಲ್ಲಿ ಹೆಚ್ಚಿರುವ ಕನಸು ಮತ್ತು ಕರ್ತವ್ಯಗಳ ನಡುವಿನ ಗೊಂದಲ.

‘ಇಂದಿನ ಯುವಜನರಲ್ಲಿ ಕನಸುಗಳಿವೆ ಮತ್ತು ಮಹಾತ್ವಾಕಾಂಕ್ಷೆಗಳಿವೆ. ಜೊತೆಗೆ ವಯಸ್ಸಾಗ್ತಿರೋ ತಮ್ಮ ಪೋಷಕರ ಬಗ್ಗೆ ಒಂದು ಜವಾಬ್ದಾರಿಯೂ ಇದೆ. ಆದ್ರೆ ತಮ್ಮ ಕನಸುಗಳ ಬೆನ್ನತ್ತಿ ಸಾಗುವ ಯುವಜನರೂ ತಮ್ಮ ತಂದೆ- ತಾಯಿಯರ ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು, ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಸಾಧ್ಯವಾಗುತ್ತಾ ಅನ್ನೋ ಪ್ರಶ್ನೆ ಮೂಡುತ್ತೆ. ಅಲ್ಲಿಯೇ ಗುಡ್‍ಹ್ಯಾಂಡ್ಸ್ ಕೆಲಸಕ್ಕೆ ಬರುವುದು’ ಅಂತಾರೆ ದಿಲೀಪ್.

ಅವರ ಪ್ರಕಾರ ಎರಡನೇ ಸಮಸ್ಯೆ ಏನಂದ್ರೆ, ಹಣ ಮತ್ತು ಉದ್ದೇಶ. ಇದರ ಹಿಂದಿನ ಮರ್ಮವೇನು ಅಂದ್ರೆ ಉದ್ಯೋಗಿಗಳು ತಮ್ಮ ಕೆಲಸ ಹಾಗೂ ಅದರಿಂದ ಬರುವ ಆದಾಯದಿಂದ ಮಾನಸಿಕ ನೆಮ್ಮದಿ ಪಡೆದು, ಸಮಾಧಾನಗೊಳ್ಳೋದೇ ಅಪರೂಪ. ಹೀಗಾಗಿಯೇ ಅವರಿಗೆ ಇಂತಹ ಸೇವಾ ವಲಯದಲ್ಲಿ ಉತ್ತಮ ಸಂಬಳ ನೀಡುವ ಅನಿವಾರ್ಯತೆಯಿದೆ. ‘ಕೆಲವರಿಗೆ ತಮ್ಮ ಕೆಲಸದ ಬಗ್ಗೆ ಧನ್ಯತಾಭಾವವಿರುತ್ತದೆ. ಆ ಕೆಲಸದ ಬಗ್ಗೆ ಸಮಾಧಾನವಿರುತ್ತೆ. ಅಂತಹವರಿಗೆ ಈ ಕೆಲಸ ಪಕ್ಕಾ ಸೂಟ್ ಆಗುತ್ತದೆ. ನಾವೂ ಕೂಡ ಈ ವಲಯದಲ್ಲಿ ಹೆಚ್ಚಾಗಿ ಉದ್ಯೋಗ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೇವೆ’ ಅಂತ ಮಾತು ಮುಂದುವರಿಸುತ್ತಾರೆ ದಿಲೀಪ್.

ಅವರ ಬಳಿ ಸಿಗುವ ಸೇವೆಗಳೇನು?

ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿಯೂ ಇಲ್ಲಿ ಹಿರಿಯ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಆ ಮೂಲಕ ಅವರಿಗೆ ಉತ್ತಮ ರೀತಿಯಲ್ಲಿ ಆರೈಕೆ ಮಾಡಲಾಗುತ್ತದೆ. ಮನೆಯಲ್ಲೇ ತಯಾರಿಸಿದ ಅಡುಗೆಯನ್ನು ಪೂರೈಸುವುದು, ಸಾರಿಗೆ ಸೌಲಭ್ಯ, ಸಮಾಲೋಚನೆ ಮತ್ತು ಸಾಮಾಜಿಕ ಹಾಗೂ ಹವ್ಯಾಸೀ ಸಂಪರ್ಕಗಳನ್ನೂ ಅತುರ್ತು ಸೇವೆಗಳ ಅಡಿಯಲ್ಲಿ ಕಲ್ಪಿಸಲಾಗುತ್ತೆ. ಇನ್ನು ತುರ್ತು ಸೇವೆಗಳಲ್ಲಿ ಹೆಲ್ಪ್ ಪ್ಲ್ಯಾನ್ ಮತ್ತು ತುರ್ತು ವಿಳಾಸಗಳ ಲಿಸ್ಟ್ ತಯಾರಿಸಲಾಗಿರುತ್ತೆ. ತುರ್ತು ಸಮಯದಲ್ಲಿ ಯಾವ ಆಸ್ಪತ್ರೆಗೆ ಕರೆದೊಯ್ಯಬೇಕು, ಯಾವ ವೈದ್ಯರನ್ನು ಭೇಟಿ ಮಾಡಿಬೇಕು, ವೈದ್ಯಕೀಯ ದಾಖಲೆಗಳ ಕ್ರೋಢೀಕರಣ, ಎಮರ್ಜೆನ್ಸಿಗೆ ಮನೆಯವರ ದೂರವಾಣಿ ಸಂಖ್ಯೆ ಪಡೆದುಕೊಳ್ಳುವುದೂ ಸೇರಿದಂತೆ ತುರ್ತು ಸಮಯದಲ್ಲಿ ಬೇಕಾದ ಹಲವು ಸೌಲಭ್ಯಗಳನ್ನೂ ಒದಗಿಸಲಾಗುತ್ತೆ.

2 ಯೋಜನೆಗಳ ಅಡಿಯಲ್ಲಿ ಈ ಸೇವೆ ಒದಗಿಸಲಾಗುತ್ತೆ. ಮೊದಲನೆಯದಾಗಿ 3200 ರೂಪಾಯಿಗೆ ಅತುರ್ತು ಸೇವೆಗಳನ್ನು ಒದಗಿಸಲಾಗುತ್ತೆ. ಎರಡನೆಯದಾಗಿ 4950 ರೂಪಾಯಿಗೆ ತುರ್ತು ಸೇವೆಗಳನ್ನು ನೀಡಲಾಗುತ್ತೆ.

ಈಗಿನ ಜನ ನಮ್ಮ ಬಳಿ ಅತ್ಯುತ್ತಮ, ಅತ್ಯಾಧುನಿಕ ಹಾಗೂ ದುಬಾರಿ ಬೆಲೆಯ ಸಂಪರ್ಕ ಸಾಧನಗಳಿವೆ ಅಂತಾರೆ. ಆದ್ರೆ ಹಿರಿಯರು ಯಾವಾಗಲೂ ಮುಖಾಮುಖಿಯಾಗಿ ಮಾತನಾಡಲು ಇಷ್ಟಪಡ್ತಾರೆ. ತಮ್ಮ ಮನೆಯವರ, ಮಕ್ಕಳ, ಸ್ನೇಹಿತರ ಅಥವಾ ಸಂಬಂಧಿಕರೊಂದಿಗೆ ಕೈ ಹಿಡಿದುಕೊಂಡು ಅಥವಾ ಹೆಗಲ ಮೇಲೆ ಕೈ ಹಾಕಿಕೊಂಡು ಮುಟ್ಟಿಯೂ ಮಾತನಾಡಲು ಆಶಿಸುತ್ತಾರೆ. ಹೀಗಾಗಿಯೇ ಅವರಿಗೆ ಮೊಬೈಲ್, ಲ್ಯಾಪ್‍ಟಾಪ್, ಸ್ಕೈಪ್‍ಗಳಿಂದ ಉಪಯೋಗವಿಲ್ಲ.

ಇದುವರೆಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ

‘ನಾನು ಗುಡ್‍ಹ್ಯಾಂಡ್ಸ್ ಸೇರಿದಾಗಿನಿಂದ ಒಳ್ಳೆಯ ಬದಲಾವಣೆ ಕಾಣುತ್ತಿದ್ದೇನೆ. ಜೊತೆಗೆ ಅವರು ತುಂಬಾ ವೃತ್ತಿಪರರೂ ಕೂಡ. ನನಗೆ ಈ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಖುಷಿಯಾಗ್ತಿದೆ. ಇಲ್ಲಿ ಮಕ್ಕಳಿಂದ ದೂರವಿರುವ ಪೋಷಕರನ್ನು ಚೆನ್ನಾಗಿ ಆರೈಕೆ ಮಾಡಲಾಗುತ್ತೆ. ಇದೊಂದು ವಿನೂತನ ಪರಿಕಲ್ಪನೆಯಾಗಿದ್ದು, ಹಿರಿಯರ ಸ್ನೇಹಿಯಾಗಿದೆ. ನಾನು ಈಗಾಗಲೇ ಗುಡ್‍ಹ್ಯಾಂಡ್ಸ್ ಸಂಸ್ಥೆಯವರೊಂದಿಗೆ ಮಾತನಾಡಿದ್ದೇನೆ ಹಾಗೂ ವಾರ್ಷಿಕ ಸದಸ್ಯತ್ವ ಪಡೆಯಲಿದ್ದೇನೆ’ ಅಂತ ಹೇಳ್ತಾರೆ ಮಧು.

ಈಗ್ಗೆ 3 ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಪ್ರಾರಂಭವಾದ ಗುಡ್‍ಹ್ಯಾಂಡ್ಸ್‍ಗೆ 19 – 20 ಮಂದಿ ಬೇರೆ ಬೇರೆ ಉತ್ಪನ್ನಗಳ ಹಾಗೂ ಸೇವೆಗಳ ಪೂರೈಕೆದಾರರಿದ್ದಾರೆ. ಜೊತೆಗೆ ಇದುವರೆಗೆ 150ರಿಂದ 200 ಮಂದಿಗೆ ಗುಣಮಟ್ಟದ ಸೇವೆ ಒದಗಿಸಲಾಗಿದೆ. ಹಾಗೂ 70 ಮಂದಿ ಸಕ್ರಿಯ ಸದಸ್ಯರಿದ್ದು, ಪ್ರತಿ ತಿಂಗಳು 30 ರಿಂದ 50 ಮಂದಿ ಹೊಸ ಸದಸ್ಯರು ಸೇರುವ ನಿರೀಕ್ಷೆ ಕಂಪನಿಯದು.

ಭವಿಷ್ಯದ ಮೇಲೆ ಬೆಳಕು

ಇತ್ತೀಚೆಗಷ್ಟೇ ಬಿಡುಗಡೆಯಾದ ರಿಪೋರ್ಟ್‍ಒಂದರ ಪ್ರಕಾರ ಅಮೆರಿಕಾದ ಹಿರಿಯರ ಆರೈಕೆಯ ಸೇವಾ ವಲಯದ ಮಾರುಕಟ್ಟೆ ಬರೊಬ್ಬರಿ 400 ಬಿಲಿಯನ್ ಡಾಲರ್‍ನಷ್ಟಿದ್ಯಂತೆ. ಹಾಗೂ ಕಳೆದ ಹಲವು ವರ್ಷಗಳಿಂದ ಅತ್ಯುತ್ತಮ ರೀತಿಯಲ್ಲಿ ಸಾಗುತ್ತಿದೆಯಂತೆ. ಆದ್ರೆ ಭಾರತದಲ್ಲಿ ಈ ವಲಯದ ಮಾರುಕಟ್ಟೆ ಮೌಲ್ಯ ಕೇವಲ 3 ಬಿಲಿಯನ್ ಡಾಲರ್. ಜೊತೆಗೆ 20 ಪ್ರತಿಶತಃ ವೇಗದಲ್ಲಿ ಬೆಳೆಯುತ್ತಿರುವುದು ಈ ವಲಯದ ಸಾಮಥ್ರ್ಯಕ್ಕೆ ಸಾಕ್ಷಿಯಾಗಿದೆ. ಹಾಗೇ 2050ರ ಹೊತ್ತಿಗೆ ಭಾರತದಲ್ಲಿ ಹಿರಿಯರ ಸಂಖ್ಯೆ 30 ಕೋಟಿ ದಾಟಲಿದೆಯಂತೆ. ಹಾಗೂ ಈ ರೀತಿಯ ಸೇವೆಗಳು ಆಗ ಜನರಿಗೆ ಅನಿವಾರ್ಯವಾಗೋದ್ರಲ್ಲಿ ಸಂದೇಹವಿಲ್ಲ.

‘ಹಾಗೂ ನಾವು ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಪೂರೈಕೆದಾರರನ್ನು ಹಾಗೂ ಗ್ರಾಹಕರ ಅವಶ್ಯಕತೆಗಳಿಗೆ ತಕ್ಕ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲೂ ಹೆಚ್ಚು ಶ್ರಮ ವಹಿಸುತ್ತಿದ್ದೇವೆ’ ಅಂತಾರೆ ದಿಲೀಪ್. ಇನ್ನು ಈ ವರ್ಷಾಂತ್ಯಕ್ಕೆ ಈ ಸ್ಟಾರ್ಟಪ್ ಬೆಂಗಳೂರಿನಲ್ಲೇ 1 ಸಾವಿರ ಜನ ಗ್ರಾಹಕರನ್ನು ಹೊಂದುವ ನಿರೀಕ್ಷೆಯಲ್ಲಿದೆ. ಹಾಗೂ ಮುಂದಿನ ವರ್ಷ ಅರ್ಥಾತ್ 2016ರಲ್ಲಿ ಬೇರೆ ನಗರಗಳಿಗೂ ತನ್ನ ಕಾರ್ಯಕ್ಷೇತ್ರ ವಿಸ್ತರಿಸುವ ಯೋಜನೆ ಹೊಂದಿದೆ.

ಲೇಖಕರು: ಅಪರ್ಣಾ ಘೋಷ್​

ಅನುವಾದಕರು: ವಿಶಾಂತ್​

    Share on
    close