ನಶಿಸುತ್ತಿರುವ ಜವಳಿ ಕಲೆಗೆ ಮರುಚೈತನ್ಯ

ಟೀಮ್​​ ವೈ.ಎಸ್​​.

0

ಶ್ರೀಮತಿ ಸುರೈಯ್ಯಾ ಹಸನ್?

ಹೌದು ನಾನೇ ಮಾತನಾಡುತ್ತಿದ್ದೇನೆ. ಹೇಳಿ… ಹೀಗೆನ್ನುತ್ತಾ ಮಾತನಾಡಲಾರಂಭಿಸುತ್ತಾರೆ ಭಾರತೀಯ ನೇಕಾರಿಕೆಯ ಅಪರೂಪದ ಮಹಿಳೆ. ಔರಂಗಾಬಾದ್​​ನಲ್ಲಿರುವ ನಾಲ್ಕು ವಿಭಿನ್ನ ಜವಳಿ ಪ್ರಕಾರಗಳ ಪುನಶ್ಚೇತನಕ್ಕಾಗಿ ಇವರು ದುಡಿಯುತ್ತಿದ್ದಾರೆ.

ತನ್ನ ಇಂಟರ್​ಮೀಡಿಯೆಟ್ ಪರೀಕ್ಷೆ ಮುಗಿಯುತ್ತಿದ್ದಂತೆಯೇ, ಅವರು ನೇಕಾರ ವೃತ್ತಿ ಆರಂಭಿಸಿದ್ದರು. ಸರಕಾರಿ ಸಂಸ್ಥೆ ಗುಡಿ ಕೈಗಾರಿಕಾ ಎಂಪೋರಿಯಂ ಸೇರಿದ ಸುರೈಯ್ಯಾ, ಅಲ್ಲಿ ಮಾರಾಟ ಕಲೆ ಮತ್ತು ಜವಳಿ ಉತ್ಪಾದನೆ, ಕರಕುಶಲ ಕಲೆಗಳನ್ನು ಕರಗತ ಮಾಡಿಕೊಂಡಿದ್ದರು. ನಾಲ್ಕುವರ್ಷಗಳ ಕಾಲ ಅಲ್ಲಿ ಸಿಕ್ಕಿದ ಅನುಭವ ತುಂಬಾ ನೆರವಿಗೆ ಬರುತ್ತಿದೆ ಎನ್ನುತ್ತಾರೆ ಸುರೈಯ್ಯಾ.

ಅಲ್ಲಿ ಕೆಲಸ ಮಾಡುತ್ತಿದ್ದಾಗಲೇ ಲಂಡನ್ನಿಂದ ಪ್ರೊಫೆಸರ್ ಒಬ್ಬರು ಎಂಪೋರಿಯಂಗೆ ಭೇಟಿ ನೀಡಿದ್ದರು. ಅವರಿಗೆ ಎಲ್ಲವನ್ನೂ ವಿವರಿಸುವ ಹೊಣೆಯನ್ನು ಸುರೈಯ್ಯಾಗೆ ವಹಿಸಲಾಗಿತ್ತು. ಅವರು ಪ್ರತಿಯೊಂದನ್ನು ಮುಟ್ಟಿ ನೋಡಿ ಅನುಭವಿಸುತ್ತಿದ್ದರು. ನಾನು ಪ್ರತಿ ಜವಳಿ, ಪ್ರತಿ ಉತ್ಪನ್ನದ ಬಗ್ಗೆ ಅವುಗಳ ಪ್ರಾಮುಖ್ಯತೆ, ಉಪಯುಕ್ತತೆ ಬಗ್ಗೆ ಬಿಡಿಸಿ ವಿವರಿಸುತ್ತಿದೆ. ಅದರಿಂದ ಅವರು ತುಂಬಾ ಖುಷಿಯಾಗಿದ್ದರು. ಹೊರಡುವ ವೇಳೆಯಲ್ಲಿ ನೀವು ಇಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದೀರಿ, ಯೋಚಿಸಿ ಎಂದು ಹೇಳಿ ಹೊರಟಿದ್ದರು. ಹೀಗೆ ಸುರೈಯ್ಯಾ ತಮ್ಮ ಉದ್ಯಮದ ಆರಂಭದ ದಿನಗಳನ್ನು ಮೆಲುಕು ಹಾಕುತ್ತಾರೆ.

ಅದೇ ಪ್ರೊಫೆಸರ್ ಅವರು, ಸುರೈಯ್ಯಾರನ್ನು ದೆಹಲಿಯಲ್ಲಿರುವ ಭಾರತೀಯ ಕೈಮಗ್ಗ ಮತ್ತು ಕರಕುಶಲ ಕಾರ್ಪೋರೇಷನ್​​ನ ಪುಪುಲ್ ಜಯ್ಕರ್ ಅವರಿಗೆ ಪರಿಚಯಿಸಿದ್ದರು.

ಈ ಸಂದರ್ಭವನ್ನು ಅವರು ಜೀವನದಲ್ಲಿ ನಿರೀಕ್ಷಿಸಿಯೇ ಇರಲಿಲ್ಲ. ಆದರೆ, ಆ ಘಟನೆ ಅವರು ಬದುಕಿನಲ್ಲಿ ಎಲ್ಲಿ ತಲುಪಬೇಕು ಎಂದುಕೊಂಡಿದ್ದರೋ ಅಲ್ಲಿ ತಲುಪಲು ನೆರವಾಗಿತ್ತು. ನಾನು ಯಾವತ್ತೂ ಇದನ್ನು ಯೋಚಿಸಿರಲಿಲ್ಲ. ಆದರೆ, ಅದೊಂದು ದೊಡ್ಡ ಅವಕಾಶವಾಗಿತ್ತು. ನಾನು ಜೊತೆಗೆ ಹೋಗಲು ನಿರ್ಧರಿಸಿದೆ. ಎನ್ನುತ್ತಾರೆ ಸುರೈಯ್ಯಾ.

ದೆಹಲಿಯಲ್ಲಿ ಸುರೈಯ್ಯಾ ಅಂಕಲ್ ಅಬಿದ್ ಹಸನ್ ಸಫ್ರಾನಿಯವರು ವಾಸಿಸುತ್ತಿದ್ದರು. ಒಂದು ಹಂತದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೆ ಆಪ್ತ ಕಾರ್ಯದರ್ಶಿಯಾಗಿದ್ದರು. ವಿದೇಶಾಂಗ ಸಚಿವಾಲಯದಲ್ಲೂ ಕೆಲಸ ಮಾಡಿದ್ದರು.

ಬೋಸ್ ಕುಟುಂಬದ ಜೊತೆಗಿನ ನಂಟು

ಸುರೈಯ್ಯಾ ಅವರಿಗೆ ಕುಟುಂಬದ ಮೂಲಕವೇ ಬೋಸ್ ಕುಟುಂಬದ ಪರಿಚಯವಾಯಿತು. ಸಾಮಾನ್ಯ ಭೇಟಿಗಳು, ಖಾಸಗಿ ಭೇಟಿಗಳಾಗಿ ಮಾರ್ಪಾಡಾದವು. ಅಲ್ಪಕಾಲದಲ್ಲೇ ಸುರೈಯ್ಯಾ ಬೋಸ್ ಕುಟುಂಬದ ನಿಕಟವರ್ತಿಯಾದರು. ಮುಂದೆ, ನೇತಾಜಿಯವರ ಕುಟುಂಬದ ಅರಬಿಂದೋ ಬೋಸ್ ಅವರನ್ನು ವಿವಾಹವಾದರು.

ಸುರೈಯ್ಯಾರಿಗೆ ನೇತಾಜಿಯವರ ಸೋದರಳಿಯನನ್ನು ಮದ್ವೆಯಾಗುವ ಮಹತ್ವ ಹೆಚ್ಚು ತಿಳಿದಿರಲಿಲ್ಲ. ಅವರಿಗೆ ಗೊತ್ತಿದ್ದದ್ದು ಇಷ್ಟು ಮಾತ್ರ. ಅದೇನೆಂದರೆ, ಅರಬಿಂದೋ ಬೋಸ್ ಅವರು ಬ್ಯುಸಿ ರಾಜಕಾರಣಿ ಎನ್ನುವುದು. ಅವರು ಹಲವು ಸಂಸ್ಥೆಗಳ ಜೊತೆಗೆ ಟ್ರೇಡ್ ಯೂನಿಯನ್ನ ಕಾರ್ಯದರ್ಶಿಯೂ ಆಗಿದ್ದರು, ಎನ್ನುತ್ತಾರೆ ಸುರೈಯ್ಯಾ. ಆದರೂ ಅವರಿಗೆ ಯಾವತ್ತೂ ನೇತಾಜಿ ಸುಭಾಶ್ಚಂದ್ರ ಬೋಸ್​​ರನ್ನು ಭೇಟಿ ಮಾಡುವ ಅವಕಾಶ ಸಿಗಲಿಲ್ಲ.

ದೆಹಲಿಯಿಂದ ಹೈದ್ರಾಬಾದ್​​ಗೆ ವಾಪಸ್

ನಿವೃತ್ತಿಯ ಬಳಿಕ ಅಬಿದ್ ಹಸನ್ ಅವರು ಹೈದರಾಬಾದ್​ಗೆ ತೆರಳಿದರು. ಅಲ್ಲಿ ಸ್ವಲ್ಪ ಜಮೀನು ಖರೀದಿಸಿದರು. ಬಳಿಕ ಸುರೈಯ್ಯಾ ಅವರನ್ನು ನಿಜಾಮರ ನಗರಕ್ಕೆ ಕರೆಸಿಕೊಂಡು, ಅಲ್ಲಿ ಸ್ವತಂತ್ರವಾಗಿ ಕೈಮಗ್ಗದ ಘಟಕ ಆರಂಭಿಸುವಂತೆ ಉತ್ತೇಜಿಸಿದರು.

ನಾನು ಸಮಯ ವ್ಯರ್ಥ ಮಾಡಲಿಲ್ಲ. ಹುಟ್ಟೂರಿಗೆ ತೆರಳಿ, ತಕ್ಷಣವೇ ಘಟಕ ಸ್ಥಾಪಿಸುವ ಕೆಲಸ ಆರಂಭಿಸಿದೆ. ಇದು ಬೆಟ್ಟದಂತಹ ಕೆಲಸವಾಗಿತ್ತು. ಆದರೆ, ಸಾರ್ಥಕ ಪರಿಶ್ರಮವಾಗಿತ್ತು. ಅಲ್ಲೇ ಪರ್ಷಿಯಾದ ನಾಲ್ಕು ಪ್ರಮುಖ ಜವಳಿ ಉದ್ದಿಮೆಗಳಿಗೆ ಪುನಶ್ವೇತನ ನೀಡುವ ಕೆಲಸ ಆರಂಭಿಸಿದರು. ಔರಂಗಾಬಾದ್​​ನ ಈ ನಾಲ್ಕು –ಫೈಥಾನಿ, ಜಮಾವರ್, ಹಿಮ್ರೂ ಮತ್ತು ಮಶ್ರು-ಸಂಸ್ಥೆಗಳಿಗೆ ಪುನರುಜ್ಜೀವನ ಕಲ್ಪಿಸಿದರು. ಹಾಗೆ, ಸುರೈಯ್ಯಾರ ನೇಯ್ಗೆ ಸ್ಟುಡಿಯೋ ಮತ್ತು ಸುರೈಯ್ಯಾಸ್ ನೇಯ್ಗೆ ಘಟಕ ಹೈದ್ರಾಬಾದ್ನಲ್ಲಿ ಕೆಲಸ ಆರಂಭಿಸಿತು.

ಔರಂಗಾಬಾದ್​​ಗೆ ಭೇಟಿ ನೀಡಿದಾಗಲೆಲ್ಲಾ, ಅಲ್ಲಿನ ಕುಶಲಕರ್ಮಿಗಳು ಅವಿಶ್ರಾಂತವಾಗಿ ದುಡಿಯುತ್ತಿದ್ದುದನ್ನು ಗಮನಿಸಿದ್ದೆ. ತಮ್ಮ ತಮ್ಮ ಮನೆಗಳಲ್ಲೇ ಈ ಅಳಿವಿನಂಚಿಲ್ಲಿರುವ ಉದ್ಯಮ ಉಳಿಸಲು ಅವರು ಶ್ರಮಿಸುತ್ತಿದ್ದರು. ಅವರನ್ನೆಲ್ಲಾ ಸಂಘಟಿಸುವ ಮೂಲಕ ಈ ಉದ್ಯಮವನ್ನು ರಕ್ಷಿಸಬಹುದು ಎಂಬ ತೀರ್ಮಾನಕ್ಕೆ ನಾನು ಬಂದುಬಿಟ್ಟಿದ್ದೆ.

ಸುರೈಯ್ಯಾ ಅವರು ತಮ್ಮ ವೃತ್ತಿಯ ಮೇಲೆ ಗಮನ ಹರಿಸಿದರೆ, ಪತಿ ಪುರಸೋತ್ತು ಇದ್ದಾಗ ಹೈದ್ರಾಬಾದ್​ಗೆ ಬಂದು ಹೋಗುತ್ತಿದ್ದರು. ಪತಿ ತೀರಿಕೊಂಡ ಬಳಿಕ ಹೋಗಿ ಬರುವುದು ಕಡಿಮೆಯಾದರೂ, ಈಗಲೂ ಬೋಸ್ ಕುಟುಂಬದ ಜೊತೆ ಸುರೈಯ್ಯಾ ಸಂಪರ್ಕ ಹೊಂದಿದ್ದಾರೆ.

ಸಾಮಾಜಿಕ ಉದ್ದಿಮೆ

ಸುರೈಯ್ಯಾ ಅವರು ತಮ್ಮ ಕಲೆಯನ್ನು ಮುಂದುವರಿಸಲು ಕೆಲವು ಜನರನ್ನು ಆಯ್ದುಕೊಂಡಿದ್ದಾರೆ. ಮಕ್ಕಳಿಲ್ಲ, ಆಶ್ರಯವಿಲ್ಲದ ವಿಧವೆಯರೇ ತಮ್ಮ ಕಲೆಯನ್ನು ಮುಂದೆ ಸಾಗಿಸಬಹುದು ಎನ್ನುವುದು ಅವರ ಯೋಚನೆ. ನಾನು ಅವರ ಜೊತೆ ಗಂಟೆಗಟ್ಟಲೆ ಕುಳಿತುಕೊಂಡ ಈ ಕಲೆಯನ್ನು ಆರಿಸಿಕೊಳ್ಳಲು ಪ್ರೇರೇಪಣೆ ನೀಡುತ್ತಿದ್ದೇನೆ, ಸಾಮಾನ್ಯವಾಗಿ ಒಬ್ಬ ಕುಶಲಕರ್ಮಿಗೆ ತರಬೇತಿ ನೀಡಲು 3-4 ತಿಂಗಳುಗಳು ಬೇಕಾಗುತ್ತದೆ. ಬಳಿಕ ನಾನು ತಜ್ಱರೊಬ್ಬರನ್ನು ಸೇರಿಸಿಕೊಂಡು ತರಬೇತಿ ನೀಡಲಾರಂಭಿಸಿದೆ. ಒಬ್ಬರೇ ಇದನ್ನು ನಿಭಾಯಿಸುವುದು ತುಂಬಾ ಕಷ್ಟದ ಕೆಲಸ, ಎನ್ನುತ್ತಾರೆ ಸುರೈಯ್ಯಾ.

ವಿಧವೆಯರಿಗೂ ದುಡಿಯುವ ಅವಕಾಶ ಕಲ್ಪಿಸಿದ ಸುರೈಯ್ಯಾ ಅವರು ಅದೇ ಆವರಣದಲ್ಲಿ, ಮಕ್ಕಳಿಗಾಗಿ ಶಾಲೆಯನ್ನೂ ಆರಂಭಿಸಿದ್ದಾರೆ. ಸಫ್ರಾನಿ ಸ್ಮಾರಕ ಹೈಸ್ಕೂಲ್ ಎಂಬ ಹೆಸರಿನ ಈ ಸಂಸ್ಥೆಯು ಕುಶಲಕರ್ಮಿಗಳ ಮಕ್ಕಳಿಗೆ ನರ್ಸರಿಯಿಂದ ಹತ್ತನೇ ತರಗತಿಯವರೆಗೆ ಉಚಿತ ಶಿಕ್ಷಣವನ್ನೂ ನೀಡುತ್ತಿದೆ.

ಸುರೈಯ್ಯಾ ಅವರಿಗೆ ಈಗ 85ವರ್ಷ. ವಿಶ್ರಾಂತಿ ಪಡೆಯುತ್ತಿದ್ದು, ಹಳೇ ಸಾಹಸದ ಕಥೆ ಹೇಳುತ್ತಿದ್ದಾರೆ ಎಂದು ಕೊಳ್ಳಬೇಡಿ. ಅವರ ಪ್ರಕಾರ ಅವರು ಮಾಡಬೇಕಾದ ಕೆಲಸ ಇನ್ನೂ ಸಾಕಷ್ಟಿದೆ. ಈಗಲೂ ಅವರು ಕುಶಲಕರ್ಮಿಗಳ ಕೆಲಸದ ಮೇಲ್ವಿಚಾರಣೆ ಮಾಡುತ್ತಾರೆ. ಶಾಲೆಯಲ್ಲಿ ಪಾಠ ಮಾಡುತ್ತಾರೆ. ಇದೇ ಶಾಲೆಯ ಮಕ್ಕಳು ಒಳ್ಳೆಯ ಫಲಿತಾಂಶ ಪಡೆದಿದ್ದಾರೆ. ಕೆಲವರು ವಿದೇಶಕ್ಕೂ ತೆರಳಿದ್ದಾರೆ ಎನ್ನುವುದೇ ಆಕೆಗಿರೋ ದೊಡ್ಡ ಹೆಮ್ಮೆ.

ಶಿಕ್ಷಣದತ್ತ ಒಲವು ಹಾಗೆ ಸುಮ್ಮನೇ ಬಂದದ್ದಲ್ಲ. ಇದನ್ನು ತನ್ನ ತಂದೆಯಿಂದ ಬಳುವಳಿಯಾಗಿ ಪಡೆದವರು ಸುರೈಯ್ಯಾ. ಅಬಿಡ್ಸ್ ರಸ್ತೆಯಲ್ಲಿರುವ ಹೈದ್ರಾಬಾದ್ ಬುಕ್ ಡಿಪೋದ ಮಾಲೀಕರಾಗಿದ್ದರು ಸುರೈಯ್ಯಾ ತಂದೆ. ಈ ಬುಕ್ ಡಿಪೋ, ವಿದೇಶಿ ಪ್ರಕಾಶಕರ ಪುಸ್ತಕವನ್ನು ಮಾರಾಟ ಮಾಡಿದ ಹೈದ್ರಾಬಾದ್​ನ ಪ್ರಥಮ ಮಳಿಗೆ ಎಂಬ ಖ್ಯಾತಿಗೂ ಪಾತ್ರವಾಗಿತ್ತು.

Related Stories