ಸುಲಭವಾಗಿ ಸಾಲ ಪಡೆಯಬೇಕೆ? ಸಾಲಗಾರರ ಸಾಥಿ `ಐ2ಐ ಫಂಡಿಂಗ್'

ಟೀಮ್​ ವೈ.ಎಸ್​. ಕನ್ನಡ

0

`ವೈಯಕ್ತಿಕ ಸಾಲಕ್ಕಾಗಿ ಇಡೀ ದಿನ ವ್ಯರ್ಥ ಮಾಡೋದ್ಯಾಕೆ? ಕೇವಲ ಒಂದೇ ನಿಮಿಷದಲ್ಲಿ ಪರ್ಸನಲ್ ಲೋನ್‍ಗೆ ಅನುಮತಿ ಪಡೆಯಿರಿ' - ಇದು ಪ್ರತಿಷ್ಠಿತ ಬ್ಯಾಂಕ್ ಒಂದರ ಹೋರ್ಡಿಂಗ್‍ನಲ್ಲಿದ್ದ ಸಾಲು. ಸುಲಭ ಸಾಲ ಅನುಮೋದನೆ, ತ್ವರಿತ ವಿತರಣೆ ಮತ್ತು ಉತ್ತಮ ಕ್ರೆಡಿಟ್ ರೇಟಿಂಗ್ ವಿಧಾನಗಳ ಅಗತ್ಯ ಈಗ ಹೆಚ್ಚಿದೆ. ಎನ್‍ಬಿಎಫ್‍ಸಿ ಹೊರತುಪಡಿಸಿ ಇತರ ಸಾಲ ವಿತರಣೆ ವೇದಿಕೆಗಳಾದ `ರುಬಿಕ್', `ಫೆನೋಮಿನಾ', `ಕ್ಯಾಪಿಟಲ್ ಫ್ಲೋಟ್' ಸೇರಿದಂತೆ ಹಲವರ ಸಾಲ ನೀಡಿಕೆ ಕ್ಷೇತ್ರ ಗ್ರಾಹಕರ ಗಮನಸೆಳೆಯುತ್ತಿದೆ. ಹೆಚ್ಹೆಚ್ಚು ಜನರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ವೈಭವ್ ಪಾಂಡೆ ಐ2ಐ ಫಂಡಿಂಗ್ ಆರಂಭಿಸಿದ್ದಾರೆ. ಇದೊಂದು ಆನ್‍ಲೈನ್ ವೇದಿಕೆ, ಅಸುರಕ್ಷಿತ ವೈಯಕ್ತಿಕ ಸಾಲದ ಹುಡುಕಾಟದಲ್ಲಿರುವ ಸಾಲಗಾರರನ್ನು ಸಂಪರ್ಕಿಸುತ್ತದೆ. ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿ ಪರ್ಯಾಯ ಹೂಡಿಕೆಗೆ ಹವಣಿಸುತ್ತಿರುವ ಹೂಡಿಕೆದಾರರಿಗೂ ನೆರವಾಗುತ್ತದೆ.

ತುರ್ತಾಗಿ ಹಣ ಬೇಕು ಅನ್ನೋ ಕಾರಣಕ್ಕೆ ಸ್ನೇಹಿತನೊಬ್ಬ ತಿಂಗಳಿಗೆ ಶೇ.4ರಷ್ಟು ಬಡ್ಡಿ ದರದಲ್ಲಿ ಸಾಲ ಪಡೆದಿದ್ದ. ಯಾಕಂದ್ರೆ ಆತನ ವೈಯಕ್ತಿಕ ಸಾಲದ ಮನವಿಯನ್ನು ಬ್ಯಾಂಕ್ ತಿರಸ್ಕರಿಸಿತ್ತು. ಇದನ್ನು ನೋಡಿದ ವೈಭವ್ ಪಾಂಡೆ ಅವರಿಗೆ ಐ2ಐ ಫಂಡಿಂಗ್ ಆರಂಬಿಸುವ ಐಡಿಯಾ ಬಂದಿತ್ತು.

ಇದನ್ನು ಓದಿ: ಹ್ಯಾಪಿ ಬರ್ತ್‍ಡೇ ಬಿಡಿ, ಕನ್ನಡದಲ್ಲಿ ಹುಟ್ಟುಹಬ್ಬದ ವಿಶ್ ಮಾಡಿ..!

ಫೈನ್‍ಟೆಕ್ ಟಚ್‍ನೊಂದಿಗೆ ಸಾಂಪ್ರದಾಯಿಕ ಪಿ2ಪಿ

ತುರ್ತು ಸಂದರ್ಭಗಳಲ್ಲಿ ಹಣಕಾಸಿನ ಅಗತ್ಯ ಪೂರೈಸಿಕೊಳ್ಳಲು ಜನಸಾಮಾನ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯುವಂತೆ ಮಾಡಬೇಕೆಂದು ವೈಭವ್ ನಿರ್ಧರಿಸಿದ್ರು. ಇಂಡಿಯಾದಲ್ಲಿ ಪಿ2ಪಿ ಸಾಲ ನೀಡುವಿಕೆ ದಶಕಗಳಿಂದ ಆಫ್‍ಲೈನ್ ಮಾದರಿಯಲ್ಲೇ ಇದೆ ಜೊತೆಗೆ ಅನೌಪಚಾರಿಕ ಸೆಟ್ಟಿಂಗ್‍ಗಳಿವೆ. ಸಾಲ ನೀಡುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಸಾಲ ಪಡೆಯುವವರಿಗೆ ದುಬಾರಿ ಎನಿಸುತ್ತಿದೆ.

" ಐ2ಐ ಫಂಡಿಂಗ್ ಮೂಲಕ ನಾವು ಪಿ2ಪಿ ಸಾಲವನ್ನು ಅಧಿಕೃತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಸಾಲಗಾರರ ಹಿನ್ನೆಲೆ ಪರಿಶೀಲನೆ, ಅಪಾಯ ಮೌಲ್ಯಮಾಪನ, ರಿಸ್ಕ್ ಕಡಿಮೆ ಮಾಡುವ ನಿಟ್ಟಿನಲ್ಲಿ ಸಣ್ಣ ಪ್ರಮಾಣದ ಹೂಡಿಕೆ, ಕಾನೂನು ವಿಧಿವಿಧಾನಗಳು, ಸಾಲ ಮರುಪಾವತಿ ಬಗ್ಗೆ ಪರಿಶೀಲನೆ ಹೀಗೆ ವಿವಿಧ ಅನುಕೂಲತೆಗಳನ್ನು ಕಲ್ಪಿಸುವ ಮೂಲಕ ನಮ್ಮ ವೇದಿಕೆಗೆ ಹೆಚ್ಚಿನ ಸಂಖ್ಯೆಯಲ್ಲಿ ಚಿಲ್ಲರೆ ಹೂಡಿಕೆದಾರರನ್ನು ಆಕರ್ಷಿಸುತ್ತಿದ್ದೇವೆ"
                                                                    - ವೈಭವ್

ಈ ಸೇವೆಗಳ ಹೊರತಾಗಿ ಪ್ರತಿ ಸಾಲದ ಪ್ರೊಜೆಕ್ಟ್‍ನಲ್ಲಿರುವ ಹಣಕಾಸು ಅಪಾಯವನ್ನು ಐ2ಐ ಫಂಡಿಂಗ್ ಮೌಲ್ಯಮಾಪನ ಮಾಡುತ್ತದೆ. ಈ ವೇದಿಕೆಯಲ್ಲಿ ಸಮಸ್ಯೆಯ ವಿಭಾಗವನ್ನು ನಿಗದಿಪಡಿಸಲಾಗಿದೆ ಮತ್ತು ಯೋಜನೆಯ ಬಡ್ಡಿ ದರವನ್ನು ಶಿಫಾರಸು ಮಾಡುತ್ತದೆ. ಇದರಿಂದ ಲೋನ್ ಪ್ರಾಜೆಕ್ಟ್‍ನ ಬಡ್ಡಿ ದರದ ಬಗ್ಗೆ ಸಾಲಗಾರರು ಹಾಗೂ ಹೂಡಿಕೆದಾರರು ತಿಳಿದುಕೊಳ್ಳಬಹುದು. ಈ ಪ್ರಕ್ರಿಯೆಯಲ್ಲಿ ಹೂಡಿಕೆದಾರರಿಗೆ ಅಪಾಯ ಹೊಂದಾಣಿಕೆಯ ರಿಟನ್ರ್ಸ್ ಪಡೆಯುವ ಅವಕಾಶವಿರುತ್ತದೆ. ಸಾಲ ಪಡೆಯುವವರಿಗೆ ಮಾರುಕಟ್ಟೆ ಆಧಾರಿತ ಬೇಡಿಕೆಗೆ ಅನುಗುಣವಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಹಣ ದೊರೆಯುತ್ತದೆ.

ಮೌಲ್ಯಮಾಪನ ಪ್ರಕ್ರಿಯೆ

ರಿಜಿಸ್ಟ್ರೇಶನ್ ಬಳಿಕ ಬಳಕೆದಾರರು ಸಾಲಗಾರರು ಅಥವಾ ಸಾಲದಾತರಾಗಲು ಒಂದು ಫಾರ್ಮ್ ಭರ್ತಿ ಮಾಡಬೇಕು. ಸಾಲಗಾರರಾಗಿದ್ದಲ್ಲಿ ಫಾರ್ಮ್ ಭರ್ತಿ ಮಾಡಿದ ಬಳಿಕ ಪೂರಕ ದಾಖಲೆಗಳನ್ನು ಸಲ್ಲಿಸಬೇಕು. ವೇದಿಕೆಯ ಸ್ವಾಮ್ಯದ ಅಪಾಯ ಮೌಲ್ಯಮಾಪನ ಮಾದರಿ ಮೂಲಕ ಸಾಲದ ಅರ್ಜಿ ಪಾಸ್ ಆಗುತ್ತದೆ. ಈ ಮಾದರಿಯು ಸಾಲಗಾರರ ಮರುಪಾವತಿ ಸಾಮಥ್ರ್ಯದಲ್ಲಿರುವ ಅಪಾಯವನ್ನು ಗುರುತಿಸುತ್ತದೆ. ಬಡ್ಡಿದರ ಮತ್ತು ಗರಿಷ್ಠ ಸಾಲದ ಪ್ರಮಾಣವನ್ನು ಬಳಿಕ ನಿರ್ಧರಿಸಲಾಗುತ್ತದೆ. ನೋಂದಣಿ ಮಾಡಿಸಿಕೊಂಡಿರುವ ಹೂಡಿಕೆದಾರರು ಸಾಲಗಾರರ ಮೂಲ ದಾಖಲೆಗಳನ್ನು ಪರಿಶೀಲಿಸಬಹುದು. ಈ ಪ್ರಕ್ರಿಯೆ ಮುಗಿದ ಬಳಿಕ ಸಾಲದ ಒಪ್ಪಂದದ ಮೇಲೆ ಸಾಲಗಾರರ ಸಹಿ ಪಡೆಯಲಾಗುತ್ತದೆ. ಎಲ್ಲ ಸಾಲದಾತರ ಪರವಾಗಿ ದಿನಾಂಕ ರಹಿತ ಚೆಕ್‍ಗಳನ್ನು ಸಂಗ್ರಹಿಸಲಾಗುತ್ತದೆ. ನಂತರ ಸಾಲದಾತ ನೇರವಾಗಿ ಸಾಲಗಾರನ ಅಕೌಂಟ್‍ಗೆ ಹಣ ವರ್ಗಾಯಿಸುತ್ತಾನೆ. ಮುಂದಿನ ತಿಂಗಳಿನಿಂದ ಇಎಂಐ ರೂಪದಲ್ಲಿ ಸಾಲಗಾರ ನೇರವಾಗಿ ಸಾಲದಾತನ ಅಕೌಂಟ್‍ಗೆ ಹಣವನ್ನು ವಾಪಸ್ ಮಾಡಬೇಕು. ಸಾಲ ಮರುಪಾವತಿ ಪೂರ್ತಿಯಾಗುವವರೆಗೆ ವಹಿವಾಟಿನ ಮೇಲೆ ನಿಗಾ ಇಡಲಾಗುತ್ತದೆ.

ಅಡೆತಡೆ...

ಸರಿಯಾದ ಸಂಪನ್ಮೂಲಗಳನ್ನು ಸಂಗ್ರಹಿಸುವುದು ವೈಭವ್ ಅವರಿಗೆ ಬಹುದೊಡ್ಡ ಸವಾಲಾಗಿತ್ತು. ಇದನ್ನು ಹೊರತುಪಡಿಸಿ ಹೊಸ ಪರಿಕಲ್ಪನೆಯ ಬಗ್ಗೆ ಗ್ರಾಹಕರಿಗೆ ಅದರಲ್ಲೂ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡುವುದು ಕೂಡ ಕಷ್ಟದ ಕೆಲಸವಾಗಿತ್ತು. ``ತಾಯಿಯ ಚಿಕಿತ್ಸೆಗೆ ಅರ್ಜೆಂಟಾಗಿ ಹಣ ಬೇಕು ಅನ್ನೋ ಸಮಯದಲ್ಲಿ ಸಾಲಗಾರರಿಗೆ ಎರಡು ದಿನಗಳೊಳಗೆ ಹಣ ಒದಗಿಸುವುದರಲ್ಲಿ ಸಿಗುವ ತೃಪ್ತಿ ಬೇರೆ ಯಾವುದರಲ್ಲೂ ಇಲ್ಲ'' ಎನ್ನುತ್ತಾರೆ ವೈಭವ್. ಕಳೆದ ಅಕ್ಟೋಬರ್‍ನಲ್ಲಿ ಐ2ಐ ಫಂಡಿಂಗ್ ಕಾರ್ಯಾಚರಣೆ ಆರಂಭಿಸಿದೆ. 5 ತಿಂಗಳುಗಳೊಳಗೆ 600ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಸಿದ್ದಾರೆ. ಈಗಾಗ್ಲೇ 30ಕ್ಕೂ ಹೆಚ್ಚು ಸಾಲದ ವಹಿವಾಟು ನಡೆದಿದ್ದು, 170ಕ್ಕೂ ಹೆಚ್ಚು ಹೂಡಿಕೆದಾರರು 70 ಲಕ್ಷ ರೂಪಾಯಿ ಸಾಲ ನೀಡಲು ಬದ್ಧರಾಗಿದ್ದಾರೆ. ಈ ವೇದಿಕೆಯಲ್ಲಿ ಹೂಡಿಕೆದಾರರಿಗೆ ಸುರಕ್ಷತೆಯಿದೆ, ಸಾಲ ಮರುಪಾವತಿ ಬಗ್ಗೆ ಖಾತರಿ ಇರುತ್ತದೆ. ಯಾವುದೇ ಸಮಸ್ಯೆ ಎದುರಾದಲ್ಲಿ ಶೇ.40-60ರಷ್ಟು ಹಣವನ್ನು ಐ2ಐ ಹೂಡಿಕೆದಾರರಿಗೆ ಮರುಪಾವತಿ ಮಾಡುತ್ತದೆ.

ತಂಡ ಮತ್ತು ಹಣ...

ಐ2ಐ ಪಂಡಿಂಗ್ ಅನ್ನು ಕಟ್ಟಿ ಬೆಳೆಸಲು ವೈಭವ್‍ಗೆ ನೇಹಾ ಅಗರ್ವಾಲ್ ಹಾಗೂ ಮನೀಶಾ ಬನ್ಸಲ್ ಕೂಡ ಸಾಥ್ ನೀಡಿದ್ದಾರೆ. ನೇಹಾ ಹಾಗೂ ಮನೀಶಾ ಸಹ ಸಂಸ್ಥಾಪಕರಾಗಿದ್ದಾರೆ. ಭುವನೇಶ್ವರ್‍ನಲ್ಲಿ ಎಂಬಿಎ ಪದವಿ ಪಡೆದಿರುವ ನೇಹಾ ಫೈನಾನ್ಸ್ ಪ್ರಾಡಕ್ಟ್ ಡೆವಲಪ್‍ಮೆಂಟ್ ಹಿನ್ನಲೆ ಉಳ್ಳವರು. ಮನೀಶಾ ಚಾರ್ಟ್‍ರ್ಡ್ ಅಕೌಂಟಂಟ್. ಎನ್‍ಜಿಓಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಮೂವರು ಒಟ್ಟಿಗೆ ಐಐಮ್‍ನಲ್ಲಿ ಶಿಕ್ಷಣ ಪಡೆದಿದ್ದಾರೆ. ಸದ್ಯ ಐ2ಐನಲ್ಲಿ 15 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಐ2ಐ ಫಂಡಿಂಗ್ ತನ್ನ ವಹಿವಾಟನ್ನು ವಿಸ್ತರಿಸುತ್ತಿದ್ದು, ಏಂಜೆಲ್ ಹೂಡಿಕೆದಾರರೊಂದಿಗೂ ಮಾತುಕತೆ ನಡೆಸುತ್ತಿದೆ. ``ದೇಶದ ಎಲ್ಲ ಭಾಗದ ಹೂಡಿಕೆದಾರರು ನಮ್ಮೊಂದಿಗಿದ್ದಾರೆ. ಸಾಲಗಾರರೆಲ್ಲ ಬಹುತೇಕ ದೆಹಲಿ ಮತ್ತು ಬೆಂಗಳೂರಿನವರು. ಇನ್ನೆರಡು ವರ್ಷಗಳಲ್ಲಿ ದೇಶದ ಎಲ್ಲ ನಗರಗಳಲ್ಲೂ ವಹಿವಾಟು ವಿಸ್ತರಿಸುವ ಯೋಜನೆ ರೂಪಿಸಲಾಗಿದೆ'' ಅಂತಾ ವೈಭವ್ ಮಾಹಿತಿ ನೀಡಿದ್ದಾರೆ.

ಪಿ2ಪಿ ಕ್ಷೇತ್ರ...

ಭಾರತ ವಿಶ್ವದಲ್ಲೇ ಅತಿದೊಡ್ಡ ಪಿ2ಪಿ ಮಾರುಕಟ್ಟೆಯನ್ನು ಹೊಂದಿದೆ. ಸ್ನೇಹಿತರು, ಕುಟುಂಬಗಳು, ಸಮುದಾಯಗಳ ಮಧ್ಯೆ ಶೇ.50ರಷ್ಟು ಹಣ ವಿನಿಮಯವಾಗುತ್ತಿದೆ. ಭಾರತದಲ್ಲಿ ಪಿ2ಪಿ ಸಾಲ ಮಾರುಕಟ್ಟೆಯ ಮೌಲ್ಯ ಸುಮಾರು 4 ಮಿಲಿಯನ್ ಡಾಲರ್. ಇತ್ತೀಚಿನ ಕೆಲ ವರ್ಷಗಳಲ್ಲಿ ಕಿವಾ, ರಂಗ್ದೆ, ಮಿಲಾಪ್, ನೋ ಬ್ರೋಕರ್, ಫೇರ್‍ಸೆಂಟ್‍ನಂತಹ ತಂತ್ರಜ್ಞಾನ ಶಕ್ತ ಪಿ2ಪಿ ಸಾಲ ವೇದಿಕೆಗಳು ಹುಟ್ಟಿಕೊಂಡಿವೆ. ಫೇರ್‍ಸೆಂಟ್ ನಗರದ ಮಧ್ಯಮವರ್ಗದ ಜನರಿಗೆ ನೆರವಾಗುತ್ತಿದೆ. ಇಲ್ಲಿ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡಲಾಗುತ್ತಿದ್ದು, ಲಾಭದಾಯಕ ಬಂಡವಾಳ ಆಯ್ಕೆಯೂ ಇದೆ. ಕಳೆದ 8 ತಿಂಗಳುಗಳಲ್ಲಿ ಫೇರ್‍ಸೆಂಟ್ 1500 ಹೂಡಿಕೆದಾರರನ್ನು ಸಂಪಾದಿಸಿದ್ದು, 2 ಮಿಲಿಯನ್ ಡಾಲರ್ ಸಾಲ ನೀಡಲು ಅವರು ಬದ್ಧರಾಗಿದ್ದಾರೆ. ಸುಮಾರು 6500 ಸಾಲಗಾರರಿಗೆ 3 ಮಿಲಿಯನ್ ಡಾಲರ್ ಹಣದ ಅವಶ್ಯಕತೆಯಿದೆ. ಈ ವೇದಿಕೆ ಮೋಹನ್ ದಾಸ್ ಪೈ ಅವರ ಅರೈನ್ ಕ್ಯಾಪಿಟಲ್ ವೆಂಚರ್ಸ್‍ನಿಂದ ಬಂಡವಾಳ ಗಿಟ್ಟಿಸಿಕೊಂಡಿದೆ.

ಲೇಖಕರು: ಸಿಂಧು ಕಶ್ಯಪ್

ಅನುವಾದಕರು: ಭಾರತಿ ಭಟ್  

ಇದನ್ನು ಓದಿ:

1. ಐಎಎಸ್ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ

2. ಪೋಲಿಯೋ ಬಾಧಿತ ಈಗ ಟ್ರಾಫಿಕ್ ವಾರ್ಡನ್..!

3. ಕಾರ್ಪೋರೇಟ್ ಗಿಫ್ಟ್ ಗಳಲ್ಲಿ ಹಸಿರಿನ ಜ್ಞಾನ : ಇದು ಪರಿಸರದ ಬಗ್ಗೆ ‘ಟ್ರಿ ಅಪ್ ’ಗಿರುವ ಪರಿಜ್ಞಾನ..!

Related Stories