ಕನಸುಗಳನ್ನ ಬೆನ್ನತ್ತಿದರೆ ಮಾತ್ರ ಯಶಸ್ವಿ ಮಹಿಳಾ ಉದ್ಯಮಿಯಾಗಲು ಸಾಧ್ಯ..!

ಟೀಮ್​​ ವೈ.ಎಸ್​​. ಕನ್ನಡ

ಕನಸುಗಳನ್ನ ಬೆನ್ನತ್ತಿದರೆ ಮಾತ್ರ ಯಶಸ್ವಿ ಮಹಿಳಾ ಉದ್ಯಮಿಯಾಗಲು ಸಾಧ್ಯ..!

Wednesday December 16, 2015,

3 min Read

ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವ ಅನುಭವ ನನಗಿದೆ. ಕೆಲವು ವರ್ಷ ಫಿಲಿಫೈನ್ಸ್​ನಲ್ಲಿ ಕೆಲಸ ಮಾಡಿದ್ದರೂ, ಭಾರತದಲ್ಲಿ ಕಳೆದ ಸಮಯ ನನ್ನ ಪಾಲಿಗೆ ಅತ್ಯಂತ ಮಹತ್ವದ್ದು. ಆದ್ರೆ ಕಾರ್ಪೋರೇಟ್ ವರ್ಲ್ಡ್​ಗೆ ಗುಡ್ ಬೈ ಹೇಳಲು ನಿರ್ಧರಿಸಿ ಮೂರು ವರ್ಷಗಳಾಯ್ತು. ಹಾಗಂತ ಸಂಪೂರ್ಣವಾಗಿ ಕಾರ್ಪೋರೇಟ್ ವಲಯವನ್ನ ಬಿಟ್ಟುಬಿಡದೇ ಇದ್ರೂ, ಫ್ರೀ ಲ್ಯಾನ್ಸ್ ಅಸೈನ್ ಮೆಂಟ್​​​ಗಳೊಂದಿಗೆ ಟಚ್ ಇದ್ದೇ ಇದೆ. ನಾನು ನನ್ನ ವೈವಾಹಿಕ ಬದುಕಿಗೂ ಗುಡ್ ಬೈ ಹೇಳಿ ಹೊರಬಂದಿದ್ದೇನೆ. ಇನ್ ಕಂಪ್ಲೀಟ್ ಅನ್ನುವ ಲೇಬಲ್ ನಿಂದ ಹೊರಬರಬೇಕು ಹಾಗೂ ನಾನು ಒಬ್ಬಳು ಉದ್ಯಮಿಯಾಗಿ ಗುರುತಿಸಿಕೊಳ್ಳಲು ಬಯಸಿದ್ರಿಂದ ಕೆಲವು ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳಲೇಬೇಕಾಯ್ತು.

image


ಬಿದ್ದ ಮೊದಲ ಹೊಡೆತ.. ಬದಲಾವಣೆಯ ಹಾದಿ..

ಯಾವುದೇ ಸಭೆ ಸಮಾರಂಭಗಳಲ್ಲಿ ನಾವೆಲ್ಲಾ ಜೊತೆಯಾಗಿ ಕಲೆತಾಗ ಸಾಮಾನ್ಯವಾಗಿ ಎಲ್ಲರೂ ಪ್ರೊಫೆಷನ್​​ನಲ್ಲಿ ಏನು ಮಾಡುತ್ತಿದ್ದೀರಾ ಅಂತ ಮೊದಲ ಪ್ರಶ್ನೆ ಕೇಳುತ್ತಾರೆ. ಮೂಲಭೂತವಾಗಿ ಊಟಕ್ಕೆ ಏನು ದಾರಿ ಕಂಡುಕೊಂಡಿದ್ದೇವೆ ಎಂಬುದನ್ನಷ್ಟೇ ಅವರು ತಿಳಿದುಕೊಳ್ಳಲು ಬಯಸುತ್ತಾರೆ. ಹಾಗೇ ನನಗೂ ಒಮ್ಮೆ ಅದೇ ರೀತಿಯ ಪ್ರಶ್ನೆಯೊಂದು ಬಂದಿತ್ತು. ಆದ್ರೆ ನನಗೆ ನಾನೇನು ಮಾಡುತ್ತಿದ್ದೆ ಅನ್ನುವುದರ ಬಗ್ಗೆ ಅರಿವಿದ್ದರೂ, ಇನ್ನೂ ಹೆಚ್ಚಿನದ್ದೇನಾದ್ರೂ ಮಾಡಬೇಕು ಅಂತ ಆ ಕ್ಷಣ ಅನಿಸಿತ್ತು. ಹೀಗಾಗಿ ಕೆಲವೇ ದಿನಗಳಲ್ಲಿ ನಾನು ದೇಶದ ಸಾಮಾನ್ಯ ಮನುಷ್ಯನೂ ಕಾನೂನನ್ನ ತಿಳಿಯಬಹುದಾದ ಲೀಗಲ್ ಎಜುಕೇಶನ್ ಸ್ಟಾರ್ಟಅಪ್ ಶುರುಮಾಡಿದೆ. ಅಲ್ಲದೆ ಕೆಲವು ಸಂಸ್ಥೆಗಳಲ್ಲಿರುವ ಲಿಂಗ ಭೇದಗಳನ್ನ ಪರಿಹರಿಸುವ ಕೆಲಸವನ್ನೂ ಶುರುಮಾಡಿದೆ. ಇದ್ರಿಂದಾಗಿ ವರ್ಕ್ ಪ್ಲೇಸ್​​ಗಳಲ್ಲಿ ಆ್ಯಂಟಿ ಸೆಕ್ಸುವಲ್ ಹೆರಾಸ್ ಮೆಂಟ್ ಕಾನೂನನ್ನ ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾಧ್ಯವಾಯ್ತು. ಜೊತೆಗೆ ಬಹಳಷ್ಟು ಪರಿಹಾರಗಳನ್ನ ಕೊಡಲೂ ಸಾಧ್ಯವಾಗಿದೆ. ಇನ್ನು ಲಿಂಗ ತಾರತಮ್ಯ ಹೋಗಲಾಡಿಸಲು ಭಾರತದ ಪ್ರಮುಖ ಕಂಪನಿಗಳ ಹತ್ತ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳೊಂದಿಗೆ ಸಂವಾದ ನಡೆಸಿದ್ದೇನೆ.

2015ರಲ್ಲಿ ನಾನು ಕರಾಟೆ ಗ್ರೀನ್ ಬೆಲ್ಟ್ ಪಡೆದಿದ್ದು ಮುಂದಿನ ವರ್ಷ ಬ್ರೌನ್ ಬೆಲ್ಟ್ ಸಂಪಾದಿಸುವ ಗುರಿ ಹೊಂದಿದ್ದೇನೆ. ಜೊತೆಗೆ ಬೆಕ್ಕುಗಳ ರಕ್ಷಣೆಯಲ್ಲೂ ನಾನು ತೊಡಗಿಸಿಕೊಂಡಿದ್ದು, ದತ್ತು ಕಾರ್ಯಕ್ರಮಗಳತ್ತ ಜನರನ್ನ ಸೆಳೆಯಲು ಯತ್ನಿಸುತ್ತಿದ್ದೇನೆ. ಬರವಣಿಗೆ ಮತ್ತು ಗಾಯನ ನನ್ನ ಹವ್ಯಾಸವಾಗಿದ್ದು, ಗೀತೆಗಳಿಗೆ ಸಾಹಿತ್ಯ ಬರೆಯುವ ಹಂಬಲ ನನ್ನದು. ಅಲ್ಲದೆ ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶ ಸಿಕ್ಕರೆ ಅದನ್ನ ನಾನು ಎಂಜಾಯ್ ಮಾಡುತ್ತೇನೆ. ಆದ್ರೆ ಇವೆಲ್ಲವುಗಳ ನಡುವೆ ಬದುಕನ್ನ ಪ್ರೀತಿಸುವ ನಾನು ಡೈವರ್ಸ್ ಕೊಟ್ಟಿದ್ದಾದ್ರೂ ಯಾಕೆ ಅನ್ನುವುದನ್ನ ತಿಳಿದುಕೊಳ್ಳಲು ಸಾಕಷ್ಟು ಜನರು ಪ್ರಯತ್ನಿಸಿದ್ದಾರೆ. ಇದಕ್ಕೆ ಉತ್ತರವೂ ತುಂಬಾ ಸಿಂಪಲ್. ಮದುವೆ ಆದ ಕೆಲವೇ ದಿನಗಳಲ್ಲಿ ನಾನು ಭಿನ್ನ ವ್ಯಕ್ತಿ ಎನ್ನುವ ಭಾವನೆ ಕಾಡಲಾರಂಭಿಸಿತು. ಲೈಫ್ ನಲ್ಲಿ ನನಗೆ ಆ್ಯಂಕರ್ ರೋಲ್ ಸಿಗೋದಿಲ್ಲ ಅಂತ ಕಾಡತೊಡಗಿತು. ಈ ಎಲ್ಲಾ ಅಂಶಗಳಿಂದ ನನ್ನನ್ನು ನಾನು ಬ್ಯುಸಿಯಾಗಿ, ಕ್ರಿಯೇಟಿವ್ ಆಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದೆನಿಸಿತು. ವರ್ಕ್ ಪ್ಲೇಸ್ ಗಳಲ್ಲಿ ಲಿಂಗತಾರತಮ್ಯದ ಬಗ್ಗೆ ಹೋರಾಡುವ ನನಗೇ ವೈವಾಹಿಕ ಬದುಕಿನಲ್ಲಿ ಅದು ಕಾಡತೊಡಗಿತ್ತು. ನಾಯಿ, ಬೆಕ್ಕುಗಳನ್ನ ಸಂರಕ್ಷಿಸಲು ಓಡಾಡುವ ನಾನು ನನ್ನ ಸ್ವಂತ ಮಕ್ಕಳ ಅಗತ್ಯತೆಗಳನ್ನ ಪೂರೈಸುವಲ್ಲಿ ಎಡವುತ್ತೇನೆ ಎನ್ನುವ ಭಾವನೆ ಕಾಡತೊಡಗಿದರಿಂದ ನಾನು ಗಟ್ಟಿ ನಿರ್ಧಾರ ತೆಗೆದುಕೊಳ್ಳಲೇ ಬೇಕಾಯ್ತು. ಆದ್ರೆ ಕೆಲವರಿಗೆ ನಾನು ಡೈವೋರ್ಸ್ ಕೊಟ್ಟಿದ್ದು ಮುಖ್ಯವಾಯ್ತೆ ಹೊರತು, ಯಾಕೆ ಕೊಟ್ಟೆ ಅನ್ನುವುದರ ಬಗ್ಗೆ ಯಾರೂ ಯೋಚಿಸಲೇ ಇಲ್ಲ.

image


ಸಮಾನತೆಗಾಗಿ ಹೋರಾಟ..

ಒಬ್ಬಳು ಮಹಿಳಾ ಉದ್ಯಮಿಯಾಗಿ ಹಾಗೂ ಸಮಾನತೆಗಾಗಿ ಹೋರಾಡುವ ವಕೀಲೆಯಲಾಗಿ ಸಾಕಷ್ಟು ಮಂದಿ ಮಹಿಳಾ ಉದ್ಯಮಿಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಮಹಿಳೆಯರು ಒಮ್ಮೆ ಅಡುಗೆ ಮನೆಯಿಂದ ಹೊರಗೆ ಬಂದರೆ ಅವರ ಪ್ರತಿಭೆಗಳು ಅವರಿಗೇ ತಿಳಿಯುವ ಜೊತೆಗೆ ಒಂದು ಉದ್ಯಮವನ್ನ ಕಟ್ಟಬಹುದು ಅಂತ ನನಗೆ ಹಲವು ಬಾರಿ ಅನಿಸಿದ್ದೂ ಇದೆ. ಆದ್ರೆ ಕುಟುಂಬದ ವಿಚಾರದಲ್ಲಿ ಎಲ್ಲವುದರಿಂದಲೂ ಕಾಂಪ್ರಮೈಸ್ ಆಗುವ ಮಹಿಳೆ ಅವಕಾಶಗಳನ್ನ ಕೈಚೆಲ್ಲಿ ಕುಳಿತಿದ್ದಾಳೆ. ಅಂದ್ರೆ ಗಂಡ ಹಾಗೂ ಮಕ್ಕಳ ವಿಚಾರದಲ್ಲಿ ಸಕ್ಸಸ್ ಆದ್ರೆ ಮಾತ್ರ ಆಕೆ ಒಬ್ಬಳು ಮಹಿಳೆಯಾಗಿ ಗುರುತಿಸಿಕೊಳ್ಳುತ್ತಾಳೆ. ಮನೆ ನಿಭಾಯಿಸುವ ಕಲೆ ಕಲಿತರೆ ಮಾತ್ರ ಆಕೆ ಕೆಲಸಗಾರ್ತಿ ಅಂತ ಕರೆಯಲಾಗುತ್ತೆ. ಇದಿಷ್ಟೇ ಭಾರತೀಯ ನಾರಿಯರಿಗಿರಬೇಕಾದ ಅರ್ಹತೆ ಅನ್ನುವುದು ಅದೆಷ್ಟೋ ಜನರ ಪರಿಕಲ್ಪನೆ. ಆದ್ರೆ ಒಬ್ಬಳು ಯಶಸ್ವಿ ಮಹಿಳೆ ಎಂದೆನಿಸಿಕೊಳ್ಳಬೇಕಾದರೆ ಇವುಗಳನ್ನ ಮೀರಿ ನಿಲ್ಲಲೇ ಬೇಕಿದೆ. ನಾನು ಗಮನಿಸಿದ ಹಾಗೆ ಯಾವ ಪುರುಷ ಉದ್ಯಮಿಯ ಬಳಿ ನಿಮಗೆಷ್ಟು ಮಕ್ಕಳು ಅಂತ ಪ್ರಶ್ನಿಸುವುದೇ ಇಲ್ಲ. ಮನೆಯನ್ನ ಹೇಗೆ ನಿಭಾಯಿಸುತ್ತೀರಿ ಅಂತ ಕೇಳುವುದೇ ಇಲ್ಲ. ಆದ್ರೆ ಒಬ್ಬಳು ಮಹಿಳೆ ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತಾಳೆ ಎಂದಾದ್ರೆ ಆಕೆ ಕುಟುಂಬ ಹಾಗೂ ಉದ್ದಿಮೆ ಎರಡನ್ನೂ ಬ್ಯಾಲೆನ್ಸ್ ಮಾಡಲೇಬೇಕು ಎಂಬ ನಿರೀಕ್ಷೆಗಳು ಹುಟ್ಟುತ್ತವೆ.

ಕೇವಲ ಒಂದೇ ಒಂದು ಮಾನದಂಡದಿಂದ ಯಾಕೆ ಮಹಿಳಾ ಉದ್ಯಮಿಯನ್ನ ಅಳೆಯುತ್ತಾರೆ ಅನ್ನುವುದು ನನಗಿನ್ನೂ ಅರ್ಥವಾಗಿಲ್ಲ. ಆಕೆಯ ಯಶಸ್ಸನ್ನ ಸಹಿಸದೇ ಗೊಂದಲಗಳಲ್ಲಿ ಸಿಲುಕಿಸುವುದು ಯಾವ ರೀತಿಯ ಸಂಸ್ಕೃತಿ ಎಂಬುದು ತಿಳಿಯುತ್ತಿಲ್ಲ. ಆದ್ರೆ ಒಬ್ಬಳು ಮಹಿಳಾ ಉದ್ಯಮಿಯಾಗಬೇಕು ಅಂದ್ರೆ ಕೇವಲ ಆದರ್ಶ ಭಾರತೀಯ ನಾರಿಯಾದರೆ ಮಾತ್ರ ಸಾಲದು ಎಂಬುದು ನನ್ನ ಸ್ವಂತ ಅನುಭವ. ಇಲ್ಲಿನ ಸಂಪ್ರದಾಯದಲ್ಲಿ ಮದುವೆಯಾಗಬೇಕು, ಮಕ್ಕಳನ್ನ ಹೆರಬೇಕು ನಂತ್ರವಷ್ಟೇ ಬೇರೆ ಏನನ್ನಾದ್ರೂ ಮಾಡಬಹುದು. ಆದ್ರೆ ಇದ್ರಿಂದ ಎಷ್ಟು ಯಶಸ್ಸು ಸಾಧ್ಯಎಂಬುದನ್ನ ಯಾರೂ ತಿಳಿಯುವ ಪ್ರಯತ್ನ ನಡೆಸುವುದಿಲ್ಲ. ವೈವಾಹಿಕ ಬದುಕಿನಲ್ಲಿ ಖುಷಿ ಇದ್ದರೆ ಮಾತ್ರ ಅಲ್ಲಿ ಮುಂದುವರಿಯಬಹುದು. ಇಲ್ಲವಾದರೆ ಹೌಸ್ ವೈಫ್ ಅನ್ನೋ ಹಣೆಪಟ್ಟಿಯನ್ನ ಕಿತ್ತು ಹಾಕಿ ನಿಮ್ಮ ನಿಮ್ಮ ಕನಸುಗಳನ್ನ ಬೆನ್ನಟ್ಟುವುದು ಸೂಕ್ತ.

ಲೇಖಕರು – ಪೃಥ್ವಿ ಪಾರಿಕ್

ಅನುವಾದ – ಬಿ ಆರ್ ಪಿ ಉಜಿರೆ