ಚಿತ್ತಾಕರ್ಷಕ ರೇಷ್ಮೆಗೂಡಿನ ಹೂವುಗಳು

ವಿಸ್ಮಯ

ಚಿತ್ತಾಕರ್ಷಕ ರೇಷ್ಮೆಗೂಡಿನ ಹೂವುಗಳು

Wednesday December 09, 2015,

2 min Read

image


ಉಟ್ಟರೆ ರೇಷ್ಮೆ ಸೀರೆ ಉಡಬೇಕಾಪ್ಪ. ಇದು ನೀರೆಯರ ಮನದಾಳದ ಆಸೆಯ ಮಾತು. ಹಲವರಿಗೆ ಕೈಗೆಟಕುವುದಿಲ್ಲ. ಕೆಲವರಿಗೆ ಸಲೀಸು. ಸಮಾರಂಭದಲ್ಲಿ ರೇಷ್ಮೆ ಶಾಲು ಹೊದೆಸಿ ಸ್ಮನಾನಿಸಿದಾಗ ಗೌರವ ಮತ್ತಷ್ಟು ಹೆಚ್ಚುತ್ತೆ. ರೇಷ್ಮೆ ಸೀರೆ, ಶಾಲು ಇದರೊಂದಿಗೆ ಯಾವ್ಯಾವುದೋ ಹಾರ ಹಾಕುವ ಬದಲು ರೇಷ್ಮೆಯದ್ದೇ ಹಾರ ಇದ್ದಿದ್ದರೆ? ಅದರ ಗತ್ತೇ ಬೇರೆ! ಗೌರವ ದುಪ್ಪಟ್ಟು!

image


ಸಮಾರಂಭದಲ್ಲಿ ಇಂದು ಗಂಧದ ಹಾರವೆಂದು ಯಾವುದೋ ಮರದ ತೊಗಟೆಗೆ ಸೆಂಟ್ ಲೇಪಿಸಿ, ಹಾರ ಹಾಕಿ ಸಂತೃಪ್ತಿ ಪಡುತ್ತೇವೆ. ಸಮಾರಂಭದ ಬಳಿಕ ಅವುಗಳ ಪಾಡು ನಿಮಗೆ ಗೊತ್ತು! ಹಾಗಾಗಿ ಗಂಧದ ಹಾರದ ಬದಲು ರೇಷ್ಮೆ ಹಾರ, ಹೂಗುಚ್ಚ, ಅಲಂಕಾರಿಕಾ ವಸ್ತುಗಳು ಇದ್ರೆ ಹೇಗೆ ಇರುತ್ತೆ ಅಲ್ವಾ.

ಸಾಮಾನ್ಯವಾಗಿ ನೀವು ರೇಷ್ಮೆ ಗೂಡುಗಳಿಂದ ಮಾಡಿದ ರೇಷ್ಮೆ ಸೀರೆಗಳನ್ನು ನೋಡಿರ್ತಿರಾ. ಇಂತಹ ರೇಷ್ಮೆ ಸೀರೆಗಳು ನೀರೆಯರ ಅಂದವನ್ನು ಹೆಚ್ಚಿಸ್ತವೆ. ಇನ್ನು ರೇಷ್ಮೆ ಸೀರೆಯನ್ನು ಉಡುವುದೇ ಹೆಗ್ಗಳಿಕೆಯ ಮಾತು. ಆದ್ರೆ ಇದೇ ರೇಷ್ಮೆ ಗೂಡುಗಳು ಮನೆಯ ಚೆಂದವನ್ನೂ ಹೆಚ್ಚಿಸುತ್ತವೆ ಅಂದ್ರೆ ನೀವು ನಂಬ್ತಿರಾ. ಹೌದು ನೀವು ನಂಬಲೇಬೇಕು.

ಕೆಂಪು, ಬಿಳಿ, ಹಳದಿ, ತಿಳಿ ಹಸಿರು, ಹೊಂಬಣ್ಣದ ಈ ಹೂಗಳನ್ನು ನೋಡಿದ್ರೆ, ನಿಜವಾದ ಪುಷ್ಪಗಳಂತೆ ಭಾಸವಾಗುತ್ತೆ ಅಲ್ವ. ಆದ್ರೆ ಅಸಲಿಗೆ ಇವು ನಿಜವಾದ ಹೂಗಳಲ್ಲ. ಬದಲಿಗೆ ರೇಷ್ಮೆ ಗೂಡಿನಿಂದ ತಯಾರಿಸಿರುವ ಕೃತಕ ಅಲಂಕಾರಿಕಾ ಹೂಗಳು. ಅಳಿದುಳಿದ ರೇಷ್ಮೆ ಗೂಡುಗಳಿಂದ ಕಲಾತ್ಮಕವಾಗಿ ಕತ್ತರಿಸಿ, ಅದಕ್ಕೆ ಬಣ್ಣ ಲೇಪಿಸಿ ಹೂಗಳನ್ನು ತಯಾರಿಸಲಾಗುತ್ತೆ. ಕೇವಲ ಹೂಗಳಷ್ಟೇ ಅಲ್ಲದೇ ರೇಷ್ಮೆ ಗೂಡಿನಿಂದ ಹಾರಗಳು, ಬಾಗಿಲ ಪರದೆ, ಬಣ್ಣ ಬಣ್ಣದ ಗೊಂಬೆಗಳನ್ನು ತಯಾರಿಸಲಾಗ್ತುತ್ತಿದೆ. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ರೇಷ್ಮೆ ಗೂಡಿನಿಂದ ಮಾಡಿದ ಆಕರ್ಷಕ ವಸ್ತುಗಳಿಗೆ ಬೇಡಿಕೆ ಹೆಚ್ಚಾಗ್ತಿದೆ.

ರೇಷ್ಮೆ ಗೂಡಿನಿಂದ ಹೀಗೆ ಅಲಂಕಾರಿಕಾ ವಸ್ತುಗಳನ್ನು ತಯಾರಿಸಲು ಯಾವುದೇ ಯಂತ್ರ ಬೇಕಿಲ್ಲ. ಬದಲಿಗೆ ಕೈನಲ್ಲೇ ಸುಂದರ ಚಿತ್ತಾಕರ್ಷಕ ಕಲಾತ್ಮಕ ಹೂಗಳು, ಗೊಂಬೆಗಳನ್ನು ಮಾಡಬಹುದು. ಇದಕ್ಕೆ ಹೆಚ್ಚು ಸಮಯ ಕೂಡ ತಗುಲುವುದಿಲ್ಲ. ಇದ್ರಿಂದಾಗಿ ಬಿಡುವಿನ ವೇಳೆಯಲ್ಲಿ ಮನೆಯಲ್ಲೇ ಇರೋ ಮಹಿಳೆಯರು ಇದನ್ನ ಹವ್ಯಾಸದ ಜೊತೆಗೆ ಸಣ್ಣ ಉದ್ದಿಮೆಯಾಗಿ ರೂಢಿ ಮಾಡಿಕೊಳ್ಳುತ್ತಿದ್ದಾರೆ. ಕ್ಷಣಾರ್ಧದಲ್ಲೇ ಚಿತ್ತಾಕರ್ಷಕ ಗೊಂಬೆ, ಹೂ, ಹಾರಗಳನ್ನು ಮಾಡುವುದರ ಜೊತೆಗೆ ಕೂತ ಜಾಗದಲ್ಲೇ ಲಾಭವನ್ನು ಗಳಿಸಬಹುದು.

image


ಇನ್ನು ಅಳಿದುಳಿದ ರೇಷ್ಮೆ ಗೂಡಿನಿಂದ ಮಾಡುವ ಹೂವುಗಳು, ಗೊಂಬೆಗಳು ಮನೆಯ ಅಲಂಕಾರಕ್ಕೆ ಉಪಯೋಗಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ಮದುವೆ ಶುಭ ಸಮಾರಂಭಗಳಿಗೆ ಇವನ್ನು ಉಡುಗೊರೆಯಾಗಿಯೂ ಕೊಡಬಹುದು. ನಾಲ್ಕು ಹೂಗಳು ಸೇರಿ ಒಂದು ಗುಚ್ಚ. ಹಲವು ಗುಚ್ಚಗಳ ಪೋಣಿಕೆ ಹಾರ. ಹಾರದ ಮಧ್ಯಕ್ಕೆ ದೊಡ್ಡ ಗುಚ್ಚವೊಂದನ್ನು ತೂಗಿಸಿದರೆ, ಅಸಲಿ ಹೂ ನಾಚುತ್ತದೆ. ಬಿದಿರಿನ ಬೆತ್ತದ ಚಿಕ್ಕ ಬುಟ್ಟಿಯೊಳಗೆ ಎರಡ್ಮೂರು ಗುಚ್ಚ ಇಟ್ಟರೆ ಬರೋಬ್ಬರಿ..! ಮಧ್ಯೆಮಧ್ಯೆ ಮುತ್ತನ್ನು ಪೋಣಿಸಿ ಹಾರ ಮಾಡಿ ಸಮಾರಂಭದಲ್ಲಿ ಬಳಸಬಹುದು.

ಇನ್ನು ಇದರ ಬೆಲೆ ಕೂಡ ಎಲ್ಲರ ಕೈಗೆಟುಕುವಂತಿದ್ದು ಎಲ್ಲರೂ ಇದನ್ನು ಕೊಳ್ಳಲು ಮುಂದಾಗ್ತಿದ್ದಾರೆ. ಇದ್ರಿಂದಾಗಿ ಸಣ್ಣ ಉದ್ಯಮಕ್ಕೂ ದಾರಿಯಾಗಿದೆ. ಯಂತ್ರಗಳ ಸಹಾಯ ಬೇಕಿಲ್ಲವಾದ್ರಿಂದ ಕೈಗಳೇ ಯಂತ್ರಗಳು. ಕಡಿಮೆ ಖರ್ಚಿನಲ್ಲಿ ಹೊಸ ದುಡಿಮೆಯನ್ನು ಕಂಡುಕೊಳ್ಳಬಹುದು. ಕಲಾತ್ಮಕವಾಗಿ ತಯಾರಿಸಲು ಸ್ವಲ್ಪ ಶ್ರದ್ಧೆಯನ್ನು ವಹಿಸಿದ್ರೆ ಮಾರುಕಟ್ಟೆಯಲ್ಲಿ ಇದಕ್ಕೆ ಒಳ್ಳೆ ಬೇಡಿಕೆ ಹೆಚ್ಚಲಿದೆ.

ಒಟ್ಟನಲ್ಲಿ ಮೊದಲು ರೇಷ್ಮೆ ಸೀರೆ, ಶಾಲುಗಳಿಗೆ ಮಾತ್ರ ಸೀಮಿತವಾಗಿದ್ದ ರೇಷ್ಮೆ ಗೂಡುಗಳು, ಈಗ ಅಲಂಕಾರಿಕಾ ವಸ್ತುಗಳಿಗೂ ಲಗ್ಗೆಯಿಟ್ಟಿವೆ. ರೇಷ್ಮೆ ಅಂದರೆ ಲಕ್ಸುರಿ ಅಲ್ವಾ! ಅದರ ಹಾರವನ್ನೋ, ಹೂವನ್ನೋ ಹೊಂದುವುದು ಗೌರವದ ವಿಷಯ. ಉಡುಗೂರೆ ಕೊಟ್ಟರೆ ಮೌಲ್ಯ ಹೆಚ್ಚು ಎಂಬ ಭಾವನೆ ಮೂಡಿಸುತ್ತೆ. ಕೆಲ ಮೇಳಗಳಲ್ಲಿ ಇದಕ್ಕೆ ಪ್ರತ್ಯೇಕ ಮಳಿಗೆಯನ್ನು ತೆರೆಯುವಷ್ಟು ಅವಕಾಶ ಸಿಕ್ಕರೆ, ಸಣ್ಣ ಉದ್ಯಮದಿಂದ ದೊಡ್ಡ ಪ್ರಮಾಣದ ಉದ್ದಿಮೆ ಆರಂಭ ಮಾಡಬಹುದು. ಅದೇನೆ ಇರಲಿ ಕಲಾವಿದನ ಜಾಣ್ಮೆಯ ವಿನ್ಯಾಸ, ಕೈನಲ್ಲಿ ಅರಳಿದ ಈ ಕಲೆಗೆ ಶಭಾಷ್ ಹೇಳಲೇಬೇಕು ಅಲ್ವಾ