ನವಜಾತ ಶಿಶುಗಳಿಗೆ ಬೆಚ್ಚಗಿನ ಆರೈಕೆ ಒದಗಿಸಿ ಜೀವ ಉಳಿಸುತ್ತಿದೆ ಎಂಬ್ರೇಸ್ ಆವಿಷ್ಕಾರ

ಟೀಮ್​​ ವೈ.ಎಸ್​​.

ನವಜಾತ ಶಿಶುಗಳಿಗೆ ಬೆಚ್ಚಗಿನ ಆರೈಕೆ ಒದಗಿಸಿ ಜೀವ ಉಳಿಸುತ್ತಿದೆ ಎಂಬ್ರೇಸ್ ಆವಿಷ್ಕಾರ

Monday October 26, 2015,

7 min Read

ನಿಯೋನಟಲ್ ಹೈಪೋಥೇರಿಯಾ ಅಥವಾ ನವಜಾತ ಹೈಪೋಥೇರಿಯಾ ಅವಧಿಗೆ ಮುಂಚೆ ಹುಟ್ಟಿದ ಶಿಶುಗಳ ಸಾವಿಗೆ ಪ್ರಮುಖ ಕಾರಣ. ಜನಿಸಿದ ಮಕ್ಕಳನ್ನು ಸಾಧ್ಯವಾದಷ್ಟು ಬೆಚ್ಚಗಿಡುವುದರಿಂದ ಈ ರೀತಿಯಿಂದಾಗುವ ಸಾವನ್ನು ತಪ್ಪಿಸಬಹುದು. ಇದರಿಂದ ಮಗುವಿನ ತೂಕ ಸಹ ಹೆಚ್ಚಾಗುತ್ತದೆ. (ಅವಧಿಗೆ ಮುಂಚೆ ಹುಟ್ಟಿದ ಮಗುವಿನ ತೂಕ ಹೆಚ್ಚಾಗುವುದು ಅದರ ಉತ್ತಮ ಆರೋಗ್ಯದ ಸೂಚಕ) ನಮ್ಮ ಆಸ್ಪತ್ರೆಗಳಲ್ಲಿರುವ ಸಾಂಪ್ರದಾಯಿಕ ಇನ್ಕ್ಯೂಬೇಟರ್​​ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಅತ್ಯಗತ್ಯ. ಆದರೆ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಅಭಾವದ ಕಾರಣ ಇದೊಂದು ದೊಡ್ಡ ಸಮಸ್ಯೆಯೇ ಸರಿ. ಜೊತೆಗೆ ಗ್ರಾಮೀಣ ಭಾಗದಲ್ಲಿ ಇನ್ಕ್ಯೂಬೇಟರ್​​ಗಳ ಸಮರ್ಪಕ ನಿರ್ವಹಣೆ ಹಾಗೂ ಹಾಳಾದರೆ ಅದನ್ನು ಸರಿಯಾಗಿ ದುರಸ್ತಿ ಮಾಡುವ ಪರಿಣಿತಿ ಯಾರಿಗೂ ಇರುವುದಿಲ್ಲ.

image


ಎಂಬ್ರೇಸ್ ಆವಿಷ್ಕಾರ:

2012ರಲ್ಲಿ ಲಾಂಚ್ ಆದ ಎಂಬ್ರೇಸ್ ನೆಸ್ಟ್ ಸುಲಭವಾಗಿ ಉಪಯೋಗಿಸಬಹುದಾದ ಶಿಶುವನ್ನು ಬೆಚ್ಚಗಿಡಬಹುದಾದ ಅತ್ಯಾಧುನಿಕ ಆವಿಷ್ಕಾರ. ಇದಕ್ಕೆ ನಿರಂತರವಾಗಿ ವಿದ್ಯುತ್ ಪೂರೈಕೆ ಬೇಕು ಅಂತಿಲ್ಲ. ಮಗುವನ್ನು ಬೆಚ್ಚಗಿಡಲು ಸಾಧ್ಯವಿಲ್ಲದ ವ್ಯವಸ್ಥೆ ಇದ್ದಾಗ ನೆರವಾಗುವಂತೆ ಈ ಸಂಶೋಧನೆ ನಡೆಸಲಾಗಿದೆ. ವಿಶೇಷವಾಗಿ ಆಸ್ಪತ್ರೆಗಳಲ್ಲಿ ಹಾಗೂ ಆಂಬುಲೆನ್ಸ್​​​ಗಳಲ್ಲಿ ಇದನ್ನು ಉಪಯೋಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಎಂಬ್ರೇಸ್ ಅನ್ನುವ ಕಂಡುಹಿಡಿದವರು ರಾಹುಲ್ ಪನಿಕ್ಕರ್, ಜೇನ್ ಚೇನ್, ಲಿನೂಸ್ ಲಿಯಾಂಗ್ ಹಾಗೂ ನಾಗಾನಂದ ಮೂರ್ತಿ.

ಲಂಬಾಣಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ ಲಕ್ಷ್ಮಮ್ಮ, ಕೂಲಿ ಕೆಲಸ ಮಾಡುವ ಅವರ ಕುಟುಂಬದ ಮಾಸಿಕ ಆದಾಯ ಕೇವಲ 1000 ರೂಪಾಯಿ. ಲಕ್ಷ್ಮಮ್ಮ ಜನ್ಮಕೊಟ್ಟ ಮಗು ಅವಧಿಗೆ ಮುಂಚೆ ಜನಿಸಿತ್ತು ಹಾಗೂ ಅದರ ತೂಕ ಹುಟ್ಟುವಾಗ ಕೇವಲ 1.6 ಕೆಜಿ(3.5 ಪೌಂಡ್ ಇತ್ತು) ಆ ಮಗುವಿಗೆ ತುರ್ತಾಗಿ ಥರ್ಮಲ್ ಆರೈಕೆಯ ಅಗತ್ಯವಿತ್ತು. ಅವರ ಮನೆಯಿಂದ 24 ಕಿಮೀ ದೂರದಲ್ಲಿರುವ ಆರೋಗ್ಯ ಕೇಂದ್ರದ ಎನ್ಐಸಿಯುನಲ್ಲಿ ಪ್ರತಿ ದಿನ 250 ರೂಪಾಯಿ ಕೊಟ್ಟು ಮಗುವನ್ನು ಆರೈಕೆ ಮಾಡುವ ಸ್ಥಿತಿಯಲ್ಲಿ ಲಕ್ಷ್ಮಮ್ಮ ಇರಲಿಲ್ಲ. ಹಾಗಾಗಿ ವೈದ್ಯರು ಅವರ ಮಗುವನ್ನು ಎಂಬ್ರೇಸ್ ವಾರ್ಮರ್ ನಲ್ಲಿ ದಿನಕ್ಕೆ ಕೇವಲ 75 ರೂ ಬಾಡಿಗೆಯಂತೆ ಇಡುವ ವ್ಯವಸ್ಥೆ ಮಾಡಿದರು. ಲಕ್ಷ್ಮಮ್ಮನವರ ಮಗು ಈಗ ಆರೋಗ್ಯವಾಗಿದೆ.

ತಮಿಳುನಾಡಿನ ಕೃಷ್ಣಗಿರಿಯಲ್ಲಿ ವಾಸವಿರುವ ಮಾರಿಯಮ್ಮಲ್ ಅನ್ನುವ ಮಹಿಳೆಗೆ ಜನಿಸಿದ ಮಗು ವೆಟ್ರಿವೇಲ್ ಸಹ ಅವಧಿಗೆ ಮುಂಚೆ ಹುಟ್ಟಿದ ಮಗುವಾಗಿತ್ತು. ಆ ಮಗುವಿನ ತಂದೆ ಗ್ರಾಮಗಳಲ್ಲಿ ಮನೆಯಿಂದ ಮನೆಗೆ ತೆರಳಿ ಗಿಣಿ ಹಾಗೂ ಕಾರ್ಡ್​ಗಳ ಮೂಲಕ ಜ್ಯೋತಿಷ್ಯ ಹೇಳುವ ವೃತ್ತಿಯಲ್ಲಿದ್ದ. ಆರ್ಥಿಕವಾಗಿ ದುರ್ಬಲವಾಗಿದ್ದ ಆ ಕುಟುಂಬದ ಮಗುವಿನ ಜೀವ ಉಳಿಸಿದ್ದೂ ಎಂಬ್ರೇಸ್. ಹುಟ್ಟುವಾಗ ಕೇವಲ 1.6 ಕೆಜಿಯಿದ್ದ ಮಗು ಕೇವಲ 2 ತಿಂಗಳ ಕಾಲ ಎಂಬ್ರೇಸ್​​ನಲ್ಲಿ ಬೆಚ್ಚಗಿಟ್ಟ ಕಾರಣ 3 ಕೆಜಿ ತೂಕ ಪಡೆಯಿತು.

image


ಆರಂಭದಿಂದ ಗಮನಿಸೋಣ:

2002ರಲ್ಲಿ ಐಐಟಿ ಮದ್ರಾಸ್​​​ನಲ್ಲಿ ಎಲೆಕ್ಟ್ರಿಕ್ ಎಂಜಿನಿಯರಿಂಗ್ ಪದವಿ ಪಡೆದ ಪ್ರತಿಭಾವಂತೆ ರಾಹುಲ್ ಪನಿಕ್ಕರ್. ಬಳಿಕ ಅವರು ಸ್ಟ್ಯಾನ್​ಫೋರ್ಡ್​ನಲ್ಲಿ ತಮ್ಮ ಉನ್ನತ ವ್ಯಾಸಂಗ ಮುಗಿಸಿದರು. ಅವರಿಗೆ ಅಲ್ಲಿಯೇ ಪಿಹೆಚ್​​ಡಿ ಮಾಡಲು ಅವಕಾಶ ಲಭಿಸಿತು. ಸ್ಟ್ಯಾನ್​ಫೋರ್ಡ್​ "ಡಿ ಸ್ಕೂಲ್" ಅನ್ನುವ ಕಲಿಕಾ ತರಬೇತಿ ಕೇಂದ್ರವನ್ನೂ ಹೊಂದಿತ್ತು. ರಾಹುಲ್ ಅಲ್ಲಿದ್ದ ಸಂದರ್ಭದಲ್ಲಿಯೇ ಹುಟ್ಟಿಕೊಂಡ ಶೈಕ್ಷಣಿಕ ಸಂಸ್ಥೆಯಿದು. ಕ್ಯಾಂಪಸ್ ಒಳಗೆ ಪಾರ್ಕ್ ಮಾಡಲಾದ ವ್ಯಾನ್​​ನಿಂದ ಈ ಡಿ-ಸ್ಕೂಲ್ ಅನ್ನು ನಿಭಾಯಿಸಲಾಗುತ್ತಿತ್ತು. ಅಲ್ಲಿ ಒಂದು ಸಣ್ಣ ಲ್ಯಾಬ್​​ನಂತಹ ವಾತಾವರಣವನ್ನು ನಿರ್ಮಿಸಿ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿತ್ತು. ಅಲ್ಲಿ ಸಾಕಷ್ಟು ಪರಿಣಿತರು ಉಪನ್ಯಾಸ ನೀಡುತ್ತಿದ್ದರು. ರಾಹುಲ್ ತಮ್ಮ ಬಿಡುವಿನ ವೇಳೆಯಲ್ಲಿ ಈ ಡಿ-ಸ್ಕೂಲ್​​ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ರಾಹುಲ್ 3 ವರ್ಷಗಳ ಕಾಲ ಸಿಲಿಕಾನ್ ವ್ಯಾಲಿಯಲ್ಲಿದ್ದರು. ಉದ್ಯಮಶೀಲತೆಯ ಬಗ್ಗೆ ಅವರಿಗೆ ಆಸಕ್ತಿ ಹುಟ್ಟಿಕೊಂಡಿದ್ದೇ ಅಲ್ಲಿ. ಅದೇ ವೇಳೆ ಗೂಗಲ್ ತನ್ನ ವಿಸ್ತರಣೆಯನ್ನು ಹೆಚ್ಚಿಸಿಕೊಳ್ಳುತ್ತಿತ್ತು. ಫೇಸ್​​ಬುಕ್ ಜನಮಾನಸದಲ್ಲಿ ಪ್ರಸಿದ್ಧಿಯಾಗುತ್ತಿತ್ತು. ಹಾಗಾಗಿ ವ್ಯವಹಾರ ಹಾಗೂ ತಂತ್ರಜ್ಞಾನ ಎರಡನ್ನೂ ಸಮಾನವಾಗಿ ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವಾಯಿತು.

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಲೋಪಗಳನ್ನು ಪರಿಹರಿಸುವ ಸಾಮರ್ಥ್ಯ ಲಭಿಸುವುದಿಲ್ಲ ಹಾಗಾಗಿ ಈ ನಿಟ್ಟಿನಲ್ಲಿ ಒಂದು ಪರಿಪೂರ್ಣ ಜ್ಞಾನ ಸಂಪಾದಿಸಿಕೊಳ್ಳಲು ಸಾಕಷ್ಟು ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಈ ಸಮಸ್ಯೆಗಳನ್ನು ಸರಿಯಾಗಿ ವ್ಯಾಖ್ಯಾನಿಸಿ ಪರಿಹಾರ ಹುಡುಕುವ ನಿಟ್ಟಿನಲ್ಲಿ ಅಲ್ಲಲ್ಲಿ ಸಂಶೋಧನೆಗಳು ನಡೆಯುತ್ತಿವೆ.

ಆಗ ಹಣೆಯಲಾದ ಯೋಜನೆ:

ಔದ್ಯಮಿಕ ಕ್ಷೇತ್ರವನ್ನು ವಿನ್ಯಾಸಗೊಳಿಸುವುದು ಹೇಗೆ ಅನ್ನುವ ವಿಚಾರವನ್ನು ಸರಳವಾಗಿ ಕಲಿಸುವ ನಿಟ್ಟಿನಲ್ಲಿ ಡಿ-ಸ್ಕೂಲ್ ಆರಂಭಿಸಲಾಗಿತ್ತು. ಅಭಿವೃದ್ಧಿ ಹೊಂದುತ್ತಿರುವ ವಿಶ್ವದ ಅಗತ್ಯತೆಗಳನ್ನು ಅರಿತುಕೊಂಡು ಒದಗಿಸುವುದು ಇದರ ಅತಿ ಮುಖ್ಯ ಉದ್ದೇಶವಾಗಿತ್ತು. ಅದು ರಾಹುಲ್ ಪಾಲಿನ ಮಹತ್ತರ ಘಟ್ಟವಾಗಿತ್ತು. ಅವರ ಕಲಿಕೆಯ ಕೊನೆಯ ಹಂತದಲ್ಲಿದ್ದರು. ಆದರೆ ಡಿ-ಸ್ಕೂಲ್ ಹಾಗೂ ಪಿಹೆಚ್​ಡಿ ಥಿಯರಿ ಎರಡನ್ನೂ ನಿಭಾಯಿಸಲು ಅವರಿಂದ ಸಾಧ್ಯವಿರಲಿಲ್ಲ. ಏಕೆಂದರೆ ಅವರ ಬಳಿ ಆಗ ಅಷ್ಟು ಸಮಯ ಹಾಗೂ ಹಣ ಎರಡೂ ಇರಲಿಲ್ಲ. ಅವರು ತಮ್ಮ ಈ ಗೊಂದಲವನ್ನು ಡಿ-ಸ್ಕೂಲ್​​ನ ಸಂಸ್ಥಾಪಕರಲ್ಲಿ ಒಬ್ಬರಾದ ಬರ್ನೀ ರೂಥ್ ಬಳಿ ತೋಡಿಕೊಂಡರು. ಆಗ ರೂಥ್ ಅವರಿಗೆ ಹೇಳಿದ್ದು ಇದು. “ನೀನು ಡಿ-ಸ್ಕೂಲ್​​ನಿಂದ ದೂರವುಳಿದು ನಿನ್ನ ಪಿಹೆಚ್​ಡಿ ಮುಗಿಸಬಹುದು, ಅಥವಾ ನೀನು ನಿನ್ನ ಪಿಹೆಚ್​ಡಿಯಿಂದ ದೂರವುಳಿದು ಡಿ-ಕ್ಲಾಸ್ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಸೂಪರ್​​ಮ್ನಾನ್​​ನಂತೆ ಎರಡನ್ನೂ ನಿಭಾಯಿಸಬಹುದು.” ರಾಹುಲ್ ಏಕಕಾಲದಲ್ಲಿ ಎರಡನ್ನೂ ನಿಭಾಯಿಸುವ ನಿರ್ಧಾರ ತೆಗೆದುಕೊಂಡಿದ್ದು ಆಗಲೇ.

ಆ ಕಲಿಕೆಯೇ ಬದುಕಿನ ಗಮ್ಯವನ್ನು ಬದಲಾಯಿಸಿತು:

ಮದ್ರಾಸ್​​ನ ಐಐಟಿ ಕಲಿಕೆಯ ಶಾಲೆಯಾಗಿದ್ದರೇ ಸ್ಟ್ಯಾನ್​ಫೋರ್ಡ್​ ಬದುಕಿನ ಗುರಿ ತೋರಿಸಿದ ವಿಶ್ವವಿದ್ಯಾನಿಲಯವಾಗಿತ್ತು. ನನ್ನ ಪಕ್ಕದಲ್ಲಿ ಆಗ ಯಾವ ಬೇರೆ ಬೇರೆ ಭಾಗಗಳಿಂದ ಬಂದಂತಹ ಆರ್ಥಿಕ ತಜ್ಞರಾಗಲೀ, ರಾಜಕೀಯ ವಿದ್ವಾಂಸರಾಗಲೀ, ಕಾನೂನು ವಿದ್ಯಾರ್ಥಿಗಳಾಗಲೀ ಇರಲಿಲ್ಲ. ಆದರೆ ಡಿ-ಸ್ಕೂಲ್ ಈ ಎಲ್ಲಾ ವರ್ಗಗಳ ವಿದ್ಯಾರ್ಥಿಗಳೊಂದಿಗೆ ಸಮಪರ್ಕ ಸಾಧಿಸಲು ನೆರವಾಯಿತು ಅಂತಾರೆ ರಾಹುಲ್.

ಆ ಕೋರ್ಸ್​ನ ಸಹಭಾಗಿ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಮಸ್ಯೆಗಳನ್ನು ಕೂಲಂಕೂಷವಾಗಿ ಅರ್ಥಮಾಡಿಕೊಂಡು ಪರಿಹರಿಸಲು ಸಾಧ್ಯವಾಯಿತು. ನೇಪಾಳ ಮೂಲದ ಎನ್​​ಜಿಒ ಮೆಡಿಸಿನ್ ಮಾಂಡಿಯಲ್ ನವಜಾತ ಶಿಶುಗಳಿಗೆ ಸಂಬಂಧಪಟ್ಟ ಸಂಶೋಧನೆ ನಡೆಸುತ್ತಿತ್ತು.

ಮೆಡಿಸಿನ್ ಮಾಂಡಿಯಲ್‌ನ ತಂಡ ಸಾಂಪ್ರದಾಯಿಕ ಇನ್‌ಕ್ಯುಬೇಟರ್‌ನಲ್ಲಿ ಶಾಖಮೂಡಿಸುವ ಗಾಜಿನ ಪೆಟ್ಟಿಗೆಗಳನ್ನು ಕಡಿಮೆ ವೆಚ್ಚಕ್ಕೆ ತಯಾರಿಸುವ ಬಗ್ಗೆ ಸಂಶೋಧನೆ ನಡೆಸುತ್ತಿತ್ತು. ರಾಹುಲ್, ಜೇನ್ ಹಾಗೂ ಉಳಿದಿಬ್ಬರು ಈ ತಂಡದೊಂದಿಗೆ ಯೋಜನೆಗೆ ಸಹಕಾರ ನೀಡತೊಡಗಿದ್ದರು. ಅವರಿಗೆ ಕಡಿಮೆ ದರದಲ್ಲಿ ಗಾಜಿನ ಇನ್‌ಕ್ಯುಬೇಟರ್ ನಿರ್ಮಾಣ ಮಾಡುವ ಬಗ್ಗೆ ವಿಶ್ವಾಸವಿತ್ತಾದರೂ ಇದರಿಂದ ದೊಡ್ಡ ಬದಲಾವಣೆ ಸಾಧ್ಯವಿರಲಿಲ್ಲ. ಈ ಆವಿಷ್ಕಾರದ ಸಂದರ್ಭದಲ್ಲೇ ರಾಹುಲ್ ಹಾಗೂ ಜೇನ್ ಸಣ್ಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಅವಶ್ಯಕತೆ ಇದ್ದ ಈ ಸೌಕರ್ಯದ ಕುರಿತಾಗಿ ಗಮನ ಹರಿಸಿದರು. ಕಡಿಮೆ ವೆಚ್ಚದ ಇನ್‌ಕ್ಯುಬೇಟರ್ ನಿರ್ಮಾಣ ಮಾತ್ರ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಒಳ್ಳೆಯದನ್ನು ಮಾಡುವ ಆವಿಷ್ಕಾರವಾಗಿರಲಿಲ್ಲ. ಮುಖ್ಯವಾಗಿ ಅವರ ಹೆಲ್ತ್‌ ಕೇರ್ ಯೋಜನೆಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತ ವಿಭಿನ್ನವಾಗಿ ವೈದ್ಯಕೀಯ ಉಪಕರಣಗಳನ್ನು ಆವಿಷ್ಕರಿಸುವ ಯೋಜನೆ ಇತ್ತು. ವೈದ್ಯರು ಮತ್ತು ರೋಗಿಗಳ ಮಧ್ಯೆ ನೇರ ಹಾಗೂ ಸರಳವಾಗಿ ಕಾರ್ಯನಿರ್ವಹಿಸಬಲ್ಲ ಉಪಕರಣ ಸಂಶೋಧಿಸಬೇಕಿತ್ತು. ಜೊತೆಗೆ ವೈದ್ಯಕೀಯ ಸಿಬ್ಬಂದಿಗಳಿಗೆ ಇದರ ತರಬೇತಿ ಸುಲಭವಾಗಿ ಸಾಧ್ಯವಾಗಬೇಕಿತ್ತು.

ರಾಹುಲ್, ಜೇನ್ ಹಾಗೂ ಉಳಿದಿಬ್ಬರ ತಂಡ ಈ ಯೋಜನೆಗೆ ಅತ್ಯುತ್ತಮ ಪರಿಹಾರೋಪಾಯವನ್ನು ಕಂಡುಹಿಡಿದಿದ್ದರು. ಅದೇ ವಿದ್ಯುತ್ ಪೂರೈಕೆ ಅಲಭ್ಯವಾದರೂ ಸರಳವಾಗಿ ನವಜಾತ ಶಿಶುಗಳನ್ನು ಬೆಚ್ಚಗಿಡಬಲ್ಲ ಇನ್‌ಕ್ಯುಬೇಟರ್ ಉಪಕರಣ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರೋಗ್ರಾಮ್‌ಗಳನ್ನು ಅಂತಿಮಗೊಳಿಸಿ ಸೇವೆಗೆ ಒದಗಿಸಿದರು. ಆ ಎನ್‌ಜಿಓ ಮಾತ್ರ ಕಡಿಮೆ ವೆಚ್ಚದ ಗ್ಲಾಸ್ ಪೆಟ್ಟಿಗೆಗಳನ್ನು ನಿರ್ಮಿಸುವ ಯೋಜನೆಯಲ್ಲಿಯೇ ತೊಡಗಿಕೊಂಡಿತ್ತು.

ಪದವಿಗಳು ವರ್ಸಸ್ ಶಿಕ್ಷಣ

ಈ ಸಂದರ್ಭದಲ್ಲಿ ಹೊಸತಾಗಿ ಉದ್ಯಮ ಆರಂಭಿಸುವ ಯಾವುದೇ ಯೋಜನೆ ಇರಲಿಲ್ಲ. ಆದರೆ ನಾವು ಈ ಸಂಬಂಧ ಆಗಾಗ ಯೋಚಿಸುತ್ತಲೇ ಇದ್ದೆವು. ನಮ್ಮ ಸಂಶೋಧನಾ ತಂಡ ಈ ಆವಿಷ್ಕಾರಕ್ಕೆ ಅತ್ಯುತ್ತಮ ವ್ಯಾಪ್ತಿ ಹಾಗೂ ಬೇಡಿಕೆ ಇರುವುದನ್ನು ದೃಢಪಡಿಸಿದರು. ಹಾಗಾಗಿ ನಾವು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಡಲು ತೀರ್ಮಾನಿಸಿದೆವು. ನಾವು ಕಾರ್ಯಗತಗೊಳಿಸದಿದ್ದರೆ ಇದೇ ಆಲೋಚನೆಯನ್ನು ಇನ್ಯಾರಾದರೂ ಜಾರಿಗೊಳಿಸಿಬಿಡುತ್ತಿದ್ದರು ಎಂದು ರಾಹುಲ್ ಹೇಳಿದ್ದಾರೆ.

ಸ್ಟ್ಯಾನ್‌ಫೋರ್ಡ್ ವಿವಿಯ ಡಿ ಸ್ಕೂಲ್‌ನ 8ನೇ ತರಗತಿಯ ವಿದ್ಯಾರ್ಥಿಗಳಾಗಿದ್ದವರು ರಾಹುಲ್ ಹಾಗೂ ಜೇನ್. ರಾಹುಲ್ ಹೇಳುವಂತೆ ಅವರು ಆ ಸಂದರ್ಭದಲ್ಲಿ ಇಂಥದ್ದೊಂದು ಮಹತ್ತರವಾದ ನಿರ್ಧಾರ ಕೈಗೊಳ್ಳಲು ಅನೇಕ ಕಾರಣಗಳಿದ್ದವು. ಅವರ ಬಳಿ ಉತ್ತಮ ಶೈಕ್ಷಣಿಕ ಹಿನ್ನೆಲೆ ಇತ್ತು. ಹಾಗಾಗಿ ಲಾಭದಾಯಕ ಉದ್ಯೋಗ ಅವರಿಗೆ ಲಭ್ಯವಾಗುವುದು ಕಷ್ಟವೇನಿರಲಿಲ್ಲ. ಆದರೂ ಅವರು ತಮ್ಮ ಶಿಕ್ಷಣಕ್ಕಿಂತ ತಮ್ಮ ಡಿಸ್ಕೂಲ್‌ನ ಪದವಿಯ ಸದುಪಯೋಗಪಡಿಸಿಕೊಂಡು ಮುನ್ನಡೆಯಲು ನಿರ್ಧರಿಸಿದ್ದರು. ಹಾಗಾಗಿ ಒಂದರ್ಥದಲ್ಲಿ ರಾಹುಲ್ ಶೈಕ್ಷಣಿಕವಾಗಿ ಅನುತ್ತೀರ್ಣರಾಗಿ ಪದವಿ ಗಳಿಸಿದವರು.

image


ಕಠಿಣ ಪರಿಶ್ರಮ ಹಾಗೂ ಪ್ರೋತ್ಸಾಹ

ಸ್ಟ್ಯಾನ್‌ಫೋರ್ಡ್‌ನಲ್ಲಿ ರಾಹುಲ್ ಹಾಗೂ ಜೇನ್ ವ್ಯಾವಹಾರಿಕ ನೂತನ ಆವಿಷ್ಕಾರಕ್ಕೆ ಸಂಬಂಧಿಸಿದಂತೆ ಪ್ರಶಸ್ತಿಯೊಂದನ್ನು ಪಡೆದುಕೊಂಡಿದ್ದರು. ಅದರ ಮೊತ್ತ 25,000 ಡಾಲರ್. ಆದರೆ ಅವರ ಯೋಜನೆಯನ್ನು ಕೇಳಿದ ತೀರ್ಪುಗಾರರು ಅವರಿಗೆ ಹೆಚ್ಚುವರಿ 10,000 ಡಾಲರ್ ಹಣ ನೀಡಿದರು. ಇದರ ಜೊತೆಗೆ ಅವರಿಗೆ 2 ವರ್ಷ ಅವಧಿಯ ಸುಮಾರು 90,000 ಡಾಲರ್ ಮೊತ್ತದ ಗ್ರೀನ್ ಫೆಲೋಶಿಪ್ ಕೂಡ ಲಭಿಸಿತ್ತು. ಈ ಒಟ್ಟು ಮೊತ್ತ 1,25,000 ಡಾಲರ್ ಹಣವೇ ಅವರ ಉದ್ಯಮದ ಮೂಲ ಬಂಡವಾಳವಾಯಿತು.

ರಾಹುಲ್ ಇದೇ ವೇಳೆ ಸಿಲಿಕಾನ್ ವ್ಯಾಲಿಯಲ್ಲಿ ಹೊಸತಾಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಆದರೂ ತಮ್ಮ ರಾತ್ರಿ ಹಾಗೂ ವಾರಾಂತ್ಯದಲ್ಲಿ ಈ ಯೋಜನೆ ಹಾಗೂ ಸಂಶೋಧನೆಗಳಿಗೆ ಹೆಚ್ಚಿನ ಸಮಯ ವಿನಿಯೋಗಿಸುತ್ತಿದ್ದರು. ತಮ್ಮ ರಜಾದಿನಗಳಲ್ಲಿ ಭಾರತಕ್ಕೆ ಮರಳಿದಾಗಲೂ ಸಂಶೋಧನೆಯತ್ತ ಹೆಚ್ಚಿನ ಗಮನ ಹರಿಸುತ್ತಿದ್ದರು. ದೇಶಾದ್ಯಂತ ಸುಮಾರು 14 ರಾಜ್ಯಗಳಿಗೆ ಪ್ರವಾಸ ಮಾಡಿ ಅಲ್ಲಿನ ಸರ್ಕಾರಿ ಆಸ್ಪತ್ರೆ, ಕೆಲವು ವ್ಯಕ್ತಿಗಳ ಮನೆ, ಖಾಸಗಿ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದರು. 2009ರಲ್ಲಿ ರಾಹುಲ್ ತಮ್ಮ ಕೆಲಸಕ್ಕೆ ಗುಡ್‌ಬೈ ಹೇಳಿದರೆ 2008ರಲ್ಲಿ ಜೇನ್ ತಮ್ಮ ಪದವಿ ಮುಗಿಸಿಕೊಂಡು ಯೋಜನೆ ಕಾರ್ಯಗತಗೊಳಿಸಲು ಮುಂದಾದರು.

ಅವರ ಸಂಸ್ಥೆಯ ಪ್ರಾರಂಭಿಕ ದಿನಗಳಲ್ಲಿ ಒಂದಂಶದ ಹೂಡಿಕೆ ಮಣಿಪಾಲ್‌ನ ರಾಜನ್ ಪೈ ಹಾಗೂ ಕಿರಣ್ ಮಜುಂದಾರ್ ಷಾರಿಂದ ಬಂದಿತು. ಅವರ ಎ ಸಿರೀಸ್‌ನ ಯೋಜನೆಗೆ ಕ್ಯಾಪ್ರಿಕಾರ್ನ್ ಇನ್ವೆಸ್ಟ್‌ ಮೆಂಟ್ ಸಂಸ್ಥೆಯ ವಿನೋದ್ ಕೋಸ್ಲಾ ಹೂಡಿಕೆ ಮಾಡಿದರೆ, ಸೇಲ್ಸ್‌ ಫೋರ್ಸ್.ಕಾಮ್‌ನ ಸಿಇಓ ಮಾರ್ಕ್ ಬೆನಿಆಫ್ ಬಿ ಸಿರೀಸ್‌ಗೆ ಬಂಡವಾಳ ಹೂಡಿದರು.

ಸವಾಲು, ಯಶಸ್ಸು ಹಾಗೂ ಭವಿಷ್ಯದ ಯೋಜನೆ

2012ರಲ್ಲಿ ಅಂದರೆ 3 ವರ್ಷಗಳ ಬಳಿಕ ಅವರ ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಾರಂಭಿಸಿತು. ರಾಹುಲ್ ಮಾಹಿತಿ ನೀಡಿರುವಂತೆ ಆ ವೈದ್ಯಕೀಯ ಉಪಕರಣವನ್ನು ಆವಿಷ್ಕರಿಸಿ ಅಭಿವೃದ್ಧಿಪಡಿಸುವುದು ಅವರಿಗೆ ಸುಲಭವಾಗಿತ್ತು. ಆದರೆ ನಿಜವಾದ ಸವಾಲು ಎದುರಾಗಿದ್ದು ಭಾರತೀಯ ಕಾನೂನಿನ ಪ್ರಕಾರ ಎಲ್ಲಾ ನಿಯಮಾವಳಿಗಳನ್ನು ಪೂರ್ಣಗೊಳಿಸಿ ಅನುಮೋದನೆ ಪಡೆದುಕೊಳ್ಳುವುದು. ವೈದ್ಯಕೀಯ ಉಪಕರಣವಾದ ಕಾರಣ ಸರ್ಕಾರದ ಅನುಮತಿ ಸಿಗುವುದು ಅಷ್ಟೇನೂ ಸುಲಭವಾಗಿರಲಿಲ್ಲ ಹಾಗೂ ಈ ನಿಟ್ಟಿನಲ್ಲಿ ಸರ್ಕಾರದ ನಿರ್ದಿಷ್ಟ ನಿಯಮಗಳ ಪಟ್ಟಿಯೂ ಇರಲಿಲ್ಲ. ಯುರೋಪ್‌ನಲ್ಲಿ ಈ ಆವಿಷ್ಕಾರಕ್ಕೆ ಸಿಇ ಮಾರ್ಕ್ ದೊರೆತಿತ್ತು. ಅವರ ಉತ್ಪನ್ನವನ್ನು ಕೂಲಂಕಷವಾಗಿ ಪರಿಶೀಲಿಸಿ ಇದು ವೈದ್ಯಕೀಯ ಉಪಯೋಗಕ್ಕೆ ಸಮರ್ಪಕವಾಗಿದೆ ಎಂದು ಪರಿಣಿತ ಇಲಾಖೆ ದೃಢಪಡಿಸಿತ್ತು. ಆದರೆ ಭಾರತದಲ್ಲಿ ಈ ಸಂಬಂಧ ಅವರಿಗೆ ತಾಂತ್ರಿಕ ತೊಡಕು ಕಂಡುಬಂತು.

ಬಳಿಕ ಈ ಉಪಕರಣವನ್ನು ಮಾರುವುದೂ ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ನವಜಾತ ಶಿಶುಗಳನ್ನು ಬೆಚ್ಚಗಿಡಬಲ್ಲ ಹೊಸ ಆವಿಷ್ಕಾರದ ಇನ್‌ಕ್ಯುಬೇಟರ್‌ಗಳನ್ನು ಭಾರತದ ಆಸ್ಪತ್ರೆಗಳು ಈವರೆಗೆ ನೋಡಿರಲಿಲ್ಲ. ಸಂಸ್ಥೆಯ ಸಿಇಓ ಆಗಿರುವ ರಘು ಧರ್ಮರಾಜು ಈ ಉತ್ಪನ್ನವನ್ನು ಪ್ರಚಾರ ಮಾಡಿ ಮಾರುಕಟ್ಟೆಗೆ ತರುವಲ್ಲಿ ಪ್ರಧಾನ ಪಾತ್ರವಹಿಸಿದರು. ರಘು ಧರ್ಮರಾಜು ಮದ್ರಾಸ್ ಐಐಟಿಯಲ್ಲಿ ಕಲಿತು ಬಳಿಕ ಕಾರ್ನೆಲ್‌ನಲ್ಲಿ ಎಂಬಿಎ ಮುಗಿಸಿದ್ದರು. ಸಾಮಾಜಿಕ ಉದ್ಯಮಗಳಲ್ಲಿ ಕೆಲಸ ಮಾಡಬೇಕೆಂಬ ಬಯಕೆಯೊಂದಿಗೆ ಅವರು ಭಾರತಕ್ಕೆ ಮರಳಿದ್ದರು.

ರಾಹುಲ್ ಹೇಳುವಂತೆ ಅವರು ಪಡೆದುಕೊಂಡ ಅತ್ಯುತ್ತಮ ಪದವಿಯೇ ಮಾರುಕಟ್ಟೆಯಲ್ಲಿ ಅವರ ಉತ್ಪನ್ನವನ್ನು ಮಾರ್ಕೆಟಿಂಗ್ ಮಾಡಲು ನೆರವಾಯಿತು. ಅವರು ಸಂಪರ್ಕಿಸಿದ 10 ಜನರಲ್ಲಿ ಒಬ್ಬರು ಅವರ ಉತ್ಪನ್ನವನ್ನು ಖರೀದಿಸುವ ಇಚ್ಛೆ ವ್ಯಕ್ತಪಡಿಸುತ್ತಿದ್ದರು. ಅವರು ಸುಮಾರು 300 ಆಸ್ಪತ್ರೆಗಳನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಸರ್ಕಾರ ಅವರ ಉತ್ಪನ್ನದತ್ತ ಗಮನ ಹರಿಸಿತು. ವೈದ್ಯಕೀಯ ಉಪಕರಣಗಳಿಗೆ ಮಾನ್ಯತೆ ನೀಡುವುದು ಸರ್ಕಾರಿ ವ್ಯವಸ್ಥೆಯಲ್ಲಿ ಅಷ್ಟು ಸುಲಭವಿರಲಿಲ್ಲ. ಆದರೆ ಅವರು ಕಂಡುಹಿಡಿದ ಈ ವೈದ್ಯಕೀಯ ಪರಿಕರ ಮುಂಬರುವ ದಿನಗಳಲ್ಲಿ ಉಪಯೋಗಕಾರಿ ಅನ್ನುವ ತೀರ್ಮಾನಕ್ಕೆ ಬಂದ ಅಧಿಕಾರಿಗಳು ಈ ನಿಟ್ಟಿನಲ್ಲಿ ಅವರಿಗೆ ಸಹಾಯ ಮಾಡಲು ಮುಂದಾದರು. ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೀವ್ ಸದಾನಂದನ್ ಸಹ ಬೆನ್ನುಲುಬಾಗಿ ನಿಂತು ಅವರ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದರು. ಹೀಗಾಗಿ ಪ್ರಾರಂಭಿಕ ಹಂತದಲ್ಲಿ ಅವರ ಸಂಸ್ಥೆ ಕೇರಳದ 5 ಯುನಿಟ್, ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ 50 ಯುನಿಟ್ ಹಾಗೂ ಕರ್ನಾಟಕದಲ್ಲಿ 500 ಯುನಿಟ್ ಗಳಲ್ಲಿ ಸೇವೆ ಒದಗಿಸಿತು. ಇಲ್ಲಿಯವರಿಗೆ ಎಂಬ್ರೇಸ್ ಸುಮಾರು 1,50,000 ಶಿಶುಗಳಿಗೆ ಬೆಚ್ಚಗಿನ ಆರೈಕೆ ನೀಡಿದೆ.

ಎಂಬ್ರೇಸ್ ಬಾಡಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ಯೋಜಿಸುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ ಆಶಾ ಕಾರ್ಯಕರ್ತೆಯರ ಸಹಯೋಗದಲ್ಲಿ ಪ್ರಾಯೋಗಿಕ ಪ್ರಯತ್ನ ನಡೆಸಲಾಗಿದೆ. ಭವಿಷ್ಯದಲ್ಲಿ ಎಂಬ್ರೇಸ್ ಗರ್ಭಾವಸ್ಥೆಯಲ್ಲಿಯೇ ಮಗುವಿನ ಆರೋಗ್ಯ ಸ್ಥಿತಿಯನ್ನು ಕಂಡುಹಿಡಿಯುವ ಸಾಮರ್ಥ್ಯದತ್ತ ಚಿಂತನೆ ನಡೆಸಿದೆ. ಮೊಬೈಲ್ ಫೋನ್ ಸಂಪರ್ಕ ಹಾಗೂ ಆಧುನಿಕ ಸೆನ್ಸಾರ್ ಬಳಸಿ ಗರ್ಭದಲ್ಲಿ ಕಾಣಿಸಿಕೊಳ್ಳಬಹುದಾದ ನ್ಯೂಮೋನಿಯಾ ಹಾಗೂ ಸೆಪ್ಸಿಸ್‌ನಂತಹ ರೋಗಗಳನ್ನು ಕಂಡುಹಿಡಿಯುವ ತಂತ್ರಜ್ಞಾನ ಅಭಿವೃದ್ಧಿಗೆ ಯೋಜನೆ ಹೆಣೆಯಲಾಗಿದೆ.

ನಾವು ಕೇವಲ ನಮ್ಮ ಉತ್ಪನ್ನಗಳನ್ನಷ್ಟೇ ಮಾರುತ್ತಿಲ್ಲ. ಬದಲಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಈವರೆಗೆ ಸಾಂಪ್ರದಾಯಿಕ ಅಭ್ಯಾಸಗಳನ್ನು ಬದಲಾಯಿಸಿ, ಅದಕ್ಕೊಂದು ತಂತ್ರಜ್ಞಾನದ ಟಚ್ ಅಪ್ ಕೊಟ್ಟು ಅಭಿವೃದ್ಧಿಪಡಿಸುವ ಮಾರ್ಗದಲ್ಲಿದ್ದೇವೆ. ಜೊತೆಗೆ ಈ ಸಂಬಂಧ ಹೆಲ್ತ್ ಕೇರ್ ಕ್ಷೇತ್ರದಲ್ಲಿರುವ ನಿಯಮಾವಳಿಗಳ ತೊಡಕನ್ನು ನಿವಾರಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ. ಸಾರ್ವಜನಿಕ ಆರೋಗ್ಯವಲಯ ನಿಧಾನಗತಿಯಲ್ಲಿ ಸಾಗುತ್ತಿದೆ. ನಾವು ಸಾಮಾಜಿಕವಾಗಿ ಬದಲಾವಣೆ ತರುವ ಆಶಯ ಹೊಂದಿದ್ದೇವೆ. ಪ್ರತಿಯೊಂದು ಮಗುವೂ ನಿರ್ಭೀತಿಯಿಂದ ತನ್ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕು ಎನ್ನುವುದು ನಮ್ಮ ಮಹತ್ವಾಕಾಂಕ್ಷೆ. ವಿಶ್ವದ ಜ್ವಲಂತ ಸಮಸ್ಯೆಗಳನ್ನು ಅರಿತು ಪರಿಹರಿಸುವ ಸಾಮರ್ಥ್ಯ ಹೊಂದಿರುವ ಪ್ರತಿಭಾವಂತ ಪದವೀಧರ ವಿದ್ಯಾರ್ಥಿಗಳನ್ನು ನೇಮಿಸಿಕೊಂಡು ತರಬೇತಿ ನೀಡುವುದು ನಮ್ಮ 2ನೇ ಅತೀ ಮುಖ್ಯ ಗುರಿ. ನಮಗಿನ್ನೂ ಹೆಚ್ಚಿನ ಯಶೋಗಾಥೆ ಹಾಗೂ ಮಾದರಿಗಳ ಅಗತ್ಯವಿದೆ. ನಾವು ಕೇವಲ ಉದಾಹರಣೆಗಳನ್ನು ಕೊಡುವ ಬದಲು ಅಂತಹ ಒಂದು ಯಶಸ್ವಿ ಉದಾಹರಣೆಯಾಗಬೇಕೆಂಬುದು ನಮ್ಮ ಕನಸು. ಇದಾದರೆ ಜನತೆ ಖಂಡಿತ ನಮ್ಮ ಆಯ್ಕೆಯನ್ನು ಒಪ್ಪಿಕೊಳ್ಳುತ್ತಾರೆ ಎಂದು ರಾಹುಲ್ ಮುಕ್ತವಾಗಿ ತಮ್ಮ ಕನಸನ್ನು ಹಂಚಿಕೊಂಡಿದ್ದಾರೆ.