ಕಶಾ ಕಿ ಆಶಾ – ಮಹಿಳೆಯರಿಂದ ಮಹಿಳೆಯರಿಗಾಗಿ

ಟೀಮ್​​​ ವೈ.ಎಸ್​​.

ಕಶಾ ಕಿ ಆಶಾ – ಮಹಿಳೆಯರಿಂದ ಮಹಿಳೆಯರಿಗಾಗಿ

Sunday November 08, 2015,

3 min Read

ಪಾಂಡಿಚೇರಿ, ವಸಾಹತು ಕಾಲದ ಕಟ್ಟಡಗಳು, ಚರ್ಚ್​ಗಳು, ದೇವಸ್ಥಾನಗಳು, ಪ್ರತಿಮೆಗಳಿಗೆ ಹೆಸರುವಾಸಿ. ಫ್ರೆಂಚ್ ಶೈಲಿಯ ರಸ್ತೆಗಳು ಮತ್ತು ವ್ಯವಸ್ಥಿತ ನಗರ ಯೋಜನೆ ಈಗಲೂ ಈ ನಗರಕ್ಕೆ ವಸಾಹತು ವಾತಾವರಣ ಸೃಷ್ಟಿಸಿದೆ. ಈ ಕೇಂದ್ರಾಡಳಿತ ಪ್ರದೇಶವು ಹಲವು ಮಹಿಳಾ ಉದ್ಯಮಿಗಳು ಗರಿಬಿಚ್ಚಿ ಹಾರಾಡಲು ಅವಕಾಶ ನೀಡಿದೆ.

image


ಕಾಶಾ ವಂದೇ, ಫ್ರೆಂಚ್-ಅಮೆರಿಕನ್ ಪ್ರಜೆಯಾಗಿರುವ ಇವರು ನ್ಯೂಯಾರ್ಕ್​ನ ಸಣ್ಣ ಪಟ್ಟಣವೊಂದರಲ್ಲಿ ಜನಿಸಿದರು. ಹಳೆಯ ಇಟ್ಟಿಗೆ ಮನೆಯನ್ನು ನವೀಕರಿಸುವಲ್ಲಿ ಈಕೆ ತನ್ನ ಪೋಷಕರಿಗೆ ನೆರವಾಗಿದ್ದಳು, ಅದೂ ಬಾಲಕಿಯಾಗಿದ್ದಾಗಲೇ. ಅಷ್ಟೇ ಅಲ್ಲ, ಮೇಕೆ ಸಾಕಾಣೆ, ಕುದುರೆ ಸವಾರಿ ಮತ್ತು ವಯಲಿನ್ ಅಭ್ಯಾಸವನ್ನೂ ಮಾಡಿದ್ದಳು.

“ನನಗೆ ಸಮಯ ಸಿಕ್ಕಾಗಲೆಲ್ಲಾ ನಾನು ಸಾಮಾನ್ಯವಾಗಿ ಟ್ರೀ ಹೌಸ್​​ನಲ್ಲಿ ಕಾಲಕಳೆಯುತ್ತಿದ್ದೆ, ಅಥವಾ ಕೈಗೆ ಸಿಕ್ಕ ಪುಸ್ತಕಗಳನ್ನು ಓದುತ್ತಿದ್ದೆ. ಪುಸ್ತಕವಿದ್ದರೆ ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು. ನನಗೆ ಇದು ಬಹಳ ಖುಷಿ ಕೊಡುತ್ತಿತ್ತು. ನಾನು ದೊಡ್ಡವಳಾದಾಗ, ನಾನು ಹತ್ತಿರದ ಈಜುಕೊಳಕ್ಕೆ ಹೋಗಲಾರಂಭಿಸಿದೆ.”

image


ನ್ಯೂ ಆರ್ಲಿಯಾನ್ಸ್​​ನ ತುಲೇನ್ ವಿಶ್ವವಿದ್ಯಾಲಯದಲ್ಲಿ ವಾಸ್ತುಶಿಲ್ಪಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಶಿಲ್ಪಿಯಾಗಿದ್ದ ತನ್ನ ತಂದೆಯ ಹಾದಿಯಲ್ಲೇ ಸಾಗಿದ ಕಾಶಾ, ತನ್ನ ವಿದ್ಯಾಭ್ಯಾಸದ ಅಂಗವಾಗಿ ನಿರ್ಮಾಣ ಕ್ಷೇತ್ರದಲ್ಲಿ ದುಡಿದ ಮೊದಲ ಮಹಿಳೆಯಾಗಿ ಗುರುತಿಸಿಕೊಂಡರು. ವಾಸ್ತುಶಿಲ್ಪಿ ಮತ್ತು ಗುತ್ತಿಗೆದಾರರ ನಡುವಿನ ಸಂಭಾಷಣೆಗಳಿಂದ ಇವರು ಆಕರ್ಷಿತರಾಗಿದ್ದು ಮನೆ ಕಟ್ಟುವ ಕೆಲಸ ಅತ್ಯಂತ ಸುಲಭ ಎಂದುಕೊಂಡರು.

ಉದ್ಯಮದ ಆರಂಭ

1992ರಲ್ಲಿ ಕಾಶಾ ಭಾರತಕ್ಕೆ ಬಂದರು. ಅವರ ಫ್ರೆಂಚ್ ಪತಿಗೆ ಪಾಂಡಿಚೇರಿಯ ಲೈಸೀ ಫ್ರಾಂಕೈಸ್​​ನಲ್ಲಿ ತರಬೇತಿ ನೀಡುವ ಅವಕಾಶ ಸಿಕ್ಕಿತ್ತು. ಹೀಗಾಗಿ ಕಾಶಾ ಭಾರತಕ್ಕೆ ಬರಬೇಕಾಯಿತು. ಈ ಹಿಂದೆಂದೂ ಅವರು ಭಾರತಕ್ಕೆ ಬಂದಿರಲಿಲ್ಲ, ಬರುವ ಯೋಚನೆಯೂ ಅವರಿಗೆ ಇರಲಿಲ್ಲ.

“ನಾನು ಚೆನ್ನೈನಲ್ಲಿ ವಿಮಾನದಿಂದ ಇಳಿದೆ. ಅಷ್ಟೇ, ನನಗೆ ಭಾರತದ ಮೇಲೆ ಪ್ರೀತಿ ಶುರುವಾಯಿತು. ನಾನು ಬೇರೆ ಯಾವ ದೇಶದಲ್ಲೂ ವಾಸಿಸುವ ಬಗ್ಗೆ ಯೋಚಿಸುವುದೂ ಸಾಧ್ಯವಿಲ್ಲ. ಬಣ್ಣ, ಸಂಪ್ರದಾಯ, ಮೌಲ್ಯಗಳು, ಜನರು ಎಲ್ಲವನ್ನೂ ನಾನು ಪ್ರೀತಿಸುತ್ತೇನೆ.”

ಭಾರತೀಯ ಉತ್ಪನ್ನಗಳನ್ನು ಅಮೆರಿಕಾಕ್ಕೆ ರಫ್ತು ಮಾಡುವ ಮೂಲಕ ಕಾಶಾ ತಮ್ಮ ಉದ್ಯಮವನ್ನು ಆರಂಭಿಸಿದರು. ಕಾರಣ, ನ್ಯೂಯಾರ್ಕ್​ನ ಉತ್ತರದ ಪ್ರದೇಶಗಳಲ್ಲಿ ಕರಕುಶಲ ಉತ್ಪನ್ನಗಳು ಮತ್ತು ಜವಳಿ ಬಗ್ಗೆ ಅರಿವಿರಲಿಲ್ಲ.

“ನಾನು ಯಾವತ್ತೂ ಅಂಗಡಿಗಳಲ್ಲಿ ಕೆಲಸ ಮಾಡಿರಲಿಲ್ಲ. ಯಾವ ಉದ್ಯಮವನ್ನೂ ನಡೆಸಿರಲಿಲ್ಲ. ನಾನು ಕಾಶಾ ಕೀ ಆಶಾ ಬಳಿ ಒಂದು ದಿನ ಹಾದು ಹೋಗುತ್ತಿದೆ. ನನಗೆ ಆ ಕಟ್ಟಡ ಗೊತ್ತಿತ್ತು. ಅಲ್ಲಿ ಈ ಹಿಂದೆ ಸಣ್ಣದೊಂದು ಬೊಟಿಕ್ ಇತ್ತು. ಈಗ ಅದು ಬಳಕೆಯಾಗುತ್ತಿಲ್ಲ. ನಾನು ನನ್ನ ಸ್ಕೂಟರನ್ನು ನಿಲ್ಲಿಸಿದೆ. ನಾನು ಇಲ್ಲಿ ಮಳಿಗೆಯೊಂದನ್ನು ಆರಂಭಿಸಲು ನಿರ್ಧರಿಸಿದೆ. ಇದು ತಕ್ಷಣ ತೆಗೆದುಕೊಂಡ ನಿರ್ಧಾರ, ಆದರೆ ನಾನು ಆ ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಆರು ತಿಂಗಳ ಬಳಿಕ ನಾವು ಮಳಿಗೆ ಆರಂಭಿಸಿದೆವು. ನಾನು ಬೇರೆ ಯಾವುದೇ ಜಾಗವನ್ನು ನೋಡಲಿಲ್ಲ. ಒಂದೋ ಇಲ್ಲಿ ಇಲ್ಲದಿದ್ದರೆ ಇಲ್ಲ ಅಷ್ಟೇ.”

image


ಪಾಂಡಿಚೇರಿ ಸುತ್ತಮುತ್ತಲಿನಿಂದ ಹಾಗೂ ಭಾರತದ ಬೇರೆ ಬೇರೆ ಪ್ರದೇಶಗಳಿಂದ ಉತ್ಪನ್ನಗಳನ್ನು ತರಿಸಿಕೊಳ್ಳತೊಡಗಿದರು. ಉತ್ಪನ್ನಗಳನ್ನು ಆರಿಸಿಕೊಳ್ಳುವಾಗ ಮಹಿಳೆಯರಿಂದ ತಯಾರಾದ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ತಮ್ಮ ಉದ್ಯಮದಲ್ಲಿ ವೈವಿಧ್ಯತೆ ಬಯಸುವ ಅವರು, ಚರ್ಮದ ಕೈಚೀಲ, ಜವಳಿ, ಆಭರಣಗಳನ್ನು ತಯಾರಿಸಲು ಆರಂಭಿಸಿದರು. ಇವರ ಜೊತೆಗೆ ಸ್ಥಳೀಯ ಮಹಿಳೆಯರಾದ ವನಜಾ, ಎಲಿಸಾ, ಸುಮತಿ, ಮೆಡಲೈನ್ ಮತ್ತು ಸೋಫಿಯಾ ಅವರು ಕೆಲಸ ಮಾಡುತ್ತಿದ್ದಾರೆ.

ತಮ್ಮ ಕಲಾತ್ಮಕ ಬೊಟಿಕ್​​ಗೆ ಹೊಸ ವೈವಿಧ್ಯತೆ ಕಲ್ಪಿಸಿರುವ ಅವರು, ಗಾರ್ಡನ್ ಕೆಫೆ, ಸಾವಯವ ಕಾಫಿ, ಗೃಹನಿರ್ಮಿತ ಕೇಕ್, ಯೂರೋಪಿಯನ್ ಥಾಲಿ, ಸಾಂಪ್ರದಾಯಿಕ ದೋಸೆ, ತೆಂಗಿನಕಾಯಿ ಚಟ್ನಿ ಎಲ್ಲವನ್ನೂ ಒದಗಿಸುತ್ತಿದ್ದಾರೆ. ಯಾರೇ ಆದರೂ ಒಂದು ಕಡೆ ಕುಳಿತು, ರಿಲ್ಯಾಕ್ಸ್ ಆಗಲು, ಕಾಫಿ ಕುಡಿಯುತ್ತಾ ಪುಸ್ತಕ ಓದಲು ಅವಕಾಶ ಕಲ್ಪಿಸುವಂತೆ ಕಾಶಾ ಎರಡು ವರ್ಷಗಳ ಹಿಂದಷ್ಟೇ ಕಾಶಾ ಕೀ ಆಶಾ ಎಂಬ ಕೆಫೆ ಆರಂಭಿಸಿದರು. ಇದನ್ನು ಪಾಂಡಿಚೇರಿಯ ಅತ್ಯುತ್ತಮ ಜಾಗವನ್ನಾಗಿ ಮಾಡಬೇಕು ಎಂದುಕೊಂಡರು.

ಕಾಶಾ ಕೀ ಆಶಾ ಜೊತೆಗೆ 2013ರಲ್ಲಿ ಪಾಂಡಿಆರ್ಟ್ ಎಂಬ ಮತ್ತೊಂದು ವ್ಯಾಪಾರವನ್ನೂ ಸೇರಿಸಿಕೊಂಡರು. ಈ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಭಾರತ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳ ಬಗ್ಗೆ ಕಲೆಯ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿನ ಜನರ ಸಹಕಾರವನ್ನು ಸ್ಮರಿಸುವ ಅವರು, ನಾನು 1992ರಲ್ಲಿ ಅತ್ಯಂತ ಸರಿಯಾದ ಜಾಗದಲ್ಲಿ ಇಳಿದಿದ್ದೆ ಎನ್ನುತ್ತಾರೆ, ಕಾಶಾ.

ನನ್ನ ಅತಿ ದೊಡ್ಡ ಸವಾಲು ಏನೆಂದರೆ, ಅತ್ಯಂತ ಚಿಕ್ಕದಾದ ಪ್ರವಾಸೋದ್ಯಮ ಅವಧಿ. ಅಲ್ಲದೆ, ಈಗ ಯುರೋಪಿಯನ್ ಪ್ರವಾಸಿಗರ ಬದಲಿಗೆ ಭಾರತೀಯ ಪ್ರವಾಸಿಗರೇ ಹೆಚ್ಚಾಗಿ ಬರುತ್ತಿದ್ದಾರೆ. ಈ ನಗರವು ವರ್ಷದಲ್ಲಿ ನಾಲ್ಕು ತಿಂಗಳು ಮಾತ್ರ ಬ್ಯುಸಿ ಇರುತ್ತದೆ. ಅದು ಬಿಟ್ಟರೆ ವೀಕೆಂಡ್​​ಗಳಲ್ಲಿ ಮಾತ್ರ ವಹಿವಾಟು ನಡೆಯುತ್ತದೆ. ಆದರೂ ನಾವು ಹೊಸ ಹೊಸ ಉತ್ಪನ್ನಗಳನ್ನು ಪ್ರಯೋಗ ಮಾಡುತ್ತಲೇ ಇರಬೇಕಾಗುತ್ತದೆ. ಹೊಸ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗುತ್ತದೆ. ಅದೇನೇ ಅಡ್ಡಿ ಎದುರಾದರು ಕಾಶಾ ಕೀ ಆಶಾವನ್ನು ನಾವು ನಡೆಸುತ್ತೇವೆ ಎನ್ನುತ್ತಾರೆ ಕಾಶಾ.

ಕಾಶಾ ಕೀ ಆಶಾ ಆರಂಭವಾಗಿ ದಶಕವೇ ಆಗಿದೆ. ಗ್ರಾಹಕರು ಪಾಂಡಿಚೇರಿಯಲ್ಲಿ ಉಳಿಯುವ ಪ್ರತಿದಿನವೂ ಇಲ್ಲಿಗೆ ಬಂದೇ ಬರುತ್ತಾರೆ. ವರ್ಷದಿಂದ ವರ್ಷಕ್ಕೆ ಮತ್ತೆ ಆಗಮಿಸುತ್ತಾರೆ.

ನನಗೆ ಅತ್ಯಂತ ಖುಷಿ ಕೊಡುವ ಸಂಗತಿ ಏನೆಂದರೆ ನಮ್ಮ ಉದ್ಯೋಗಿಗಳೆಲ್ಲಾ ಕಾಶಾ ಕೀ ಆಶಾವನ್ನು ತಮ್ಮದೆಂದು ಪ್ರೀತಿಸುತ್ತಾರೆ. ನಮ್ಮ ಅತಿಥಿಗಳ ಜೊತೆಗೂ ಅಷ್ಟೇ ಖುಷಿಯಿಂದ ವ್ಯವಹರಿಸುತ್ತಾರೆ. ಹೀಗಾಗಿ ನಮ್ಮ ಗ್ರಾಹಕರು ಇಲ್ಲಿ ಇರುವಷ್ಟು ದಿನವೂ ಅತ್ಯಂತ ಕಂಫರ್ಟ್ ಆಗಿರುತ್ತಾರೆ. ಇದೊಂದೇ ಕಾರಣದಿಂದ ನಾನು ಇದನ್ನು ಕೈಬಿಡುತ್ತಿಲ್ಲ ಎನ್ನುತ್ತಾರೆ ಕಾಶಾ.