ವೈದ್ಯರು ಕೊಟ್ಟ ಔಷಧಿ ಚೀಟಿ ಕಳೆದು ಹೋದ್ರೂ ಡೋಂಟ್ ವರಿ..` Aguai Solutions 'ಗೆ ಧನ್ಯವಾದ ಹೇಳಿ

ಟೀಮ್​​ ವೈ.ಎಸ್​. ಕನ್ನಡ

0

ಪಕ್ಕಾ ಕ್ರೀಡಾಬಿಮಾನಿಯಾಗಿದ್ದ ಬಿಮ್ಲೇಶ್ ಗುಂಡೂರಾವ್ ಅವರಿಗೆ ಗಾಯಗಳು ಹೊಸದೇನಲ್ಲ. ಒಮ್ಮೆಯಂತೂ ಪಾದ ಉಳುಕಿದ್ರಿಂದ ಅವರು 2 ವಾರಗಳ ಕಾಲ ನೋವು ಅನುಭವಿಸಿದ್ರು. ವೈದ್ಯರನ್ನು ಭೇಟಿಯಾಗಿ ಬಂದ ಬಳಿಕ ಅವರು ಕೊಟ್ಟಿದ್ದ ಔಷಧದ ಚೀಟಿಯೇ ಕಳೆದು ಹೋಗಿತ್ತು. ಟೇಬಲ್ ಮೇಲೆ ಹತ್ತಾರು ಬಗೆಯ ಮಾತ್ರೆಗಳಿದ್ವು. ಅದರಲ್ಲಿ ಊಟಕ್ಕೂ ಮುನ್ನ ತೆಗೆದುಕೊಳ್ಳುವ ಔಷಧ ಯಾವುದು? ನಂತರ ಯಾವುದು? ದಿನಕ್ಕೆ ಯಾವ ಮಾತ್ರೆಯನ್ನು ಎಷ್ಟು ಬಾರಿ ತೆಗದುಕೊಳ್ಳಬೇಕೆಂಬುದು ಗೊತ್ತಿರಲಿಲ್ಲ. ಬಿಮ್ಲೇಶ್ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಆಗಾಗ ಆಸ್ಪತ್ರೆಗೆ ಭೇಟಿ ಮಾಡುವ ಸಲಹೆಗಾರರಾಗಿದ್ರು. ಹಾಗಾಗಿ ಅವರನ್ನು ಮತ್ತೆ ಭೇಟಿಯಾಗಲು ಹರಸಾಹಸಪಡಬೇಕಾಯ್ತು. ಎಲ್ಲಾ ಔಷಧಗಳ ಹೆಸರನ್ನು ಓದಿ ಹೇಳಿ, ಅವರಿಂದ ಸಲಹೆಯನ್ನು ಪಡೆದುಕೊಂಡ್ರು.

ಇನ್ನು ಬಿಮಲೇಶ್ ಅವರ ತಾಯಿ ಥೈರಾಯ್ಡ್ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ರು. ಸರಿಯಾಗಿ ಔಷಧ ತೆಗೆದುಕೊಳ್ಳದೇ ಇದ್ದಿದ್ರಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಅವರ ಔಷಧ ಬಳಕೆ ಮಾದರಿ ಬಗ್ಗೆ ಕುಟುಂಬದವರಿಗೆ ಗೊತ್ತಿರಲಿಲ್ಲ. ವೈದ್ಯರು ಬರೆದುಕೊಟ್ಟಿದ್ದ ಔಷಧಿ ಚೀಟಿ ಕೂಡ ಎಷ್ಟು ಹುಡುಕಾಡಿದ್ರೂ ಸಿಗಲಿಲ್ಲ. ಹಾಗಾಗಿ ಹಳೆಯ ಅಂಕಿ-ಅಂಶಗಳಿಲ್ಲದೆ ಮುಂದಿನ ಚಿಕಿತ್ಸೆ ನೀಡುವುದು ವೈದ್ಯರಿಗೂ ಕಷ್ಟವಾಗಿತ್ತು. ಈ ಸಮಸ್ಯೆಗಳಿಗೆಲ್ಲ ಪರಿಹಾರ ಹುಡುಕಬೇಕೆಂಬ ಆಲೋಚನೆ ಬಿಮ್ಲೇಶ್ ಅವರಿಗೆ ಬಂದಿತ್ತು. ಔಷಧಿ ನೀಡುವುದು ಮತ್ತು ಅದನ್ನು ಮರೆಯೆದೇ ತೆಗೆದುಕೊಳ್ಳಲು ಜ್ಞಾಪಿಸುವಂತೆ ಡಿಜಿಟಲ್ ವ್ಯವಸ್ಥೆ ಮಾಡಬೇಕೆಂದು ಅವರು ನಿರ್ಧಾರ ಮಾಡಿದ್ರು.

ಮಾರುಕಟ್ಟೆಯನ್ನೇ ಭೇದಿಸಿದ ಬಿಮ್ಲೇಶ್...

ಔಷಧ ನೀಡುವಿಕೆಯನ್ನು ಡಿಜಿಟಲೈಸ್ ಮಾಡುವ ಪ್ರಕ್ರಿಯೆಯಲ್ಲಿನ ಸಂಕೀರ್ಣತೆ ಆರೋಗ್ಯ ಉದ್ಯಮದತ್ತ ಬಿಮ್ಲೇಶ್ ಮುಖಮಾಡುವಂತೆ ಮಾಡಿತ್ತು. ಔಷಧಿ ಚೀಟಿಗಳ ನಿರ್ವಹಣೆಯನ್ನು ಸರಳಗೊಳಿಸಲು ಬಿಮ್ಲೇಶ್ `Aguai Solutions' 'ಅನ್ನು ಆರಂಭಿಸಿದ್ರು. ಅದು ಆರೋಗ್ಯ ಕಾಳಜಿ ಮತ್ತು ಆರೋಗ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಬಿಮ್ಲೇಶ್ ಅವರ ಮೊದಲ ಹೆಜ್ಜೆ. ಬಿಲಿಯನ್‍ಗಟ್ಟಲೆ ಜನಸಂಖ್ಯೆ ಹೊಂದಿರುವ ಆರೋಗ್ಯ ಮಾರುಕಟ್ಟೆ ವೇಗವಾಗಿ ಪ್ರಗತಿ ಕಾಣುತ್ತಿದೆ. 2017ರ ವೇಳೆಗೆ ಆರೋಗ್ಯ ಕ್ಷೇತ್ರ 160 ಬಿಲಿಯನ್ ಡಾಲರ್‍ಗೆ ತಲುಪಲಿದೆ. ಎರಡೂವರೆ ವರ್ಷಗಳ ಹಿಂದೆ ಬಿಮ್ಲೇಶ್ `Aguai Solutions' ಅನ್ನು ಆರಂಭಿಸಿದ್ದಾರೆ. ಅಪ್ಲಿಕೇಷನ್, ಉತ್ಪನ್ನಗಳ ಅಭಿವೃದ್ಧಿಪಡಿಸುವಿಕೆ ಹೀಗೆ ಭಾರತ ಮತ್ತು ಅಮೆರಿಕದ ಕಂಪನಿಗಳಿಗೆ ಮಾಹಿತಿ ತಂತ್ರಜ್ಞಾನ ಸೇವೆಗಳನ್ನು ಒದಗಿಸುತ್ತಿದೆ. ಆರೋಗ್ಯ ಉದ್ಯಮಕ್ಕೆ ವೆಬ್, ಕ್ಲೌಡ್, ಮೊಬೈಲ್ ಮೇಲಿನ ಸಾಫ್ಟ್​​​​ವೇರ್ ತಂತ್ರಜ್ಞಾನ ಅಭಿವೃದ್ಧಿ ಸೇವೆಯನ್ನು ಕೂಡ ಬಿಮ್ಲೇಶ್ ನೀಡುತ್ತಿದ್ದಾರೆ.

ವರ್ಷದ ಹಿಂದಷ್ಟೆ ಔಷಧಿ ಮತ್ತು ಪ್ರಿಸ್ಕ್ರಿಪ್ಷನ್‍ಗೆ ಸಂಬಂಧಿಸಿದ ಉತ್ಪನ್ನಗಳನ್ನು ಕೂಡ `Aguai Solutions' ತಯಾರಿಸಲು ಆರಂಭಿಸಿದೆ. ಹೊರರೋಗಿ ಆರೋಗ್ಯ ಕೇಂದ್ರದಲ್ಲಿ ಫಾರ್ಮಸಿ ಒಂದನ್ನು ನಡೆಸುತ್ತಿದೆ. ಭಾರತದ ಆರೋಗ್ಯ ಪರಿಸರಕ್ಕೆ ಅನುಕೂಲವಾಗುವಂಥದ್ದನ್ನೇನಾದ್ರೂ ಮಾಡಬೇಕೆಂಬ ಆಸೆ ಮೊದಲಿನಿಂದ್ಲೂ ಬಿಮ್ಲೇಶ್ ಅವರಿಗಿತ್ತು. ವಿದ್ಯುನ್ಮಾನ ವೈದ್ಯಕೀಯ ದಾಖಲೆ(ಇಎಂಆರ್) ಮತ್ತು ಮಕ್ಕಳು, ಹಿರಿಯ ನಾಗರೀಕರಿಗಾಗಿ ರೋಗಿಗಳ ನಿರ್ವಹಣಾ ವ್ಯವಸ್ಥೆ ಕಲ್ಪಿಸಲು ಅವರು ಮುಂದಾಗಿದ್ರು. ಆದ್ರೆ ಸಂಶೋಧನೆಯ ಬಳಿಕ, ಈ ಮೂಲಕ ಜನರಿಗೆ ಅಂಕಿ-ಅಂಶ ನಿರ್ವಹಣೆಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂಬುದು ಅವರಿಗೆ ಅರ್ಥವಾಗಿತ್ತು. ಅದಕ್ಕಾಗಿ ಇನ್ನಷ್ಟು ಸಮಗ್ರ ವಿಧಾನಗಳ ಅಗತ್ಯವಿತ್ತು.

ತ್ರಿ ಕೆಲಸ ವಿಧಾನ...

ಔಷಧಾಲಯಗಳು, ರೋಗಿಗಳು ಮತ್ತು ಫಾರ್ಮಾ ವಿತರಕರನ್ನು 6 ತಿಂಗಳವರೆಗೂ ಸಂಪರ್ಕಿಸಬಲ್ಲ 3 ಉತ್ಪನ್ನಗಳನ್ನು`Aguai Solutions'ಬಿಡುಗಡೆ ಮಾಡಿದೆ.

1. ಫಾರ್ಮಸಿ ಮತ್ತು ಡಿಸ್ಟ್ರಿಬ್ಯೂಟಸಿ : ಚಿಲ್ಲರೆ ಔಷಧಾಲಯ ಸರಪಳಿಯೊಂದಿಗೆ ಪಾಲುದಾರರಾಗಲು ಈ ತಂತ್ರಜ್ಞಾನ ನೆರವಾಗಲಿದೆ. ಸದ್ಯ ಬೆಂಗಳೂರಿನ 6 ಮಳಿಗೆಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಇನ್ನು 2 ವರ್ಷಗಳಲ್ಲಿ ದಕ್ಷಿಣ ಭಾರತದ 50 ಮಳಿಗೆಗಳಿಗೆ ಈ ಸೇವೆಯನ್ನು ವಿಸ್ತರಿಸುವ ಗುರಿಯನ್ನು `Aguai Solutions' ಹೊಂದಿದೆ.

2. ಮೀಡಿಯಸಿ : ಈ ವೇದಿಕೆ 700ಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಇದುವರೆಗೆ ಸುಮಾರು 100ಕ್ಕೂ ಹೆಚ್ಚು ಆರ್ಡರ್‍ಗಳನ್ನು ಈ ವೇದಿಕೆ ಮೂಲಕವೇ ಕಾರ್ಯರೂಪಕ್ಕೆ ತರಲಾಗಿದೆ.

3. Rxeazy : ವೈದ್ಯರು ಇ-ಪ್ರಿಸ್ಕ್ರಿಪ್ಷನ್‍ಗಳನ್ನು ನೀಡಬಲ್ಲ ವೇದಿಕೆ ಇದು. 2015ರ ಡಿಸೆಂಬರ್‍ನಲ್ಲಿ ಇದನ್ನು ಬಿಡುಗಡೆ ಮಾಡಲಾಗುತ್ತದೆ.

ಆರೋಗ್ಯ ಸಂಪರ್ಕ ವಿಧಾನ ಬಿಮ್ಲೇಶ್ ಅವರ `Aguai Solutions 'ನಲ್ಲಿರುವ ವಿಭಿನ್ನತೆ.

ಎಲ್ಲರನ್ನೂ ಒಟ್ಟು ಸೇರಿಸುವಿಕೆ...

15 ವರ್ಷಗಳ ಅನುಭವ ಹೊಂದಿರುವ ಐಟಿ ಉದ್ಯೋಗಿ ಮಧುರ್ ರಾವ್, 10 ವರ್ಷಗಳ ಅನುಭವವುಳ್ಳ ತಾಂತ್ರಿಕ ವಾಸ್ತುಶಿಲ್ಪಿ ಶ್ರೀರಾಮ್ ಎಂಸಿ ಅವರೊಂದಿಗೆ ಬಿಮ್ಲೇಶ್ ಕೈಜೋಡಿಸಿದ್ದಾರೆ. ಇವರಿಗೆ ಉದ್ಯಮಗಳೊಂದಿಗೆ ಕೆಲಸ ಮಾಡಿದ ಅನುಭವವಿದ್ದು, ತಾಂತ್ರಿಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಕೂಡ ನಿಪುಣರು. ವೈದ್ಯರ ಸಲಹೆಗಾರರಾಗಿ ಡಾ.ನಯಾಝ್, ಸೀನಿಯರ್ ಪ್ರಾಡಕ್ಟ್ ಡೆವಲಪ್‍ಮೆಂಟ್ ಲೀಡರ್ ತರುಣ್ ಭಾರ್ಗವ್, `ಬಯೋಲೈಫ್ ಸೈನ್ಸಸ್'ನ ಉಪಾಧ್ಯಕ್ಷ ಸೌರಭ್.ಕೆ. ಅವರು ಕೂಡ ಪಾರ್ಮಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾರ್ಯನಿರ್ವಹಣೆ ಹೇಗೆ?

ನಿಮ್ಮ ಪ್ರಿಸ್ಕ್ರಿಪ್ಷನ್‍ನ ಫೋಟೋ ತೆಗೆದು ಹತ್ತಿರದ ಔಷಧಾಲಯಕ್ಕೆ ಕಳುಹಿಸಬೇಕು. ಫೋನ್ ಅಥವಾ ವೆಬ್ ಅಪ್ಲಿಕೇಷನ್ ಮೂಲಕ ಫಾರ್ಮಸಿ ಆರ್ಡರ್ ಪಡೆಯುತ್ತದೆ. ಬಳಿಕ ಔಷಧಾಲಯಗಳು ಔಷಧಿಗಳನ್ನು ನಿಮ್ಮ ಮನೆಗೇ ತಲುಪಿಸುತ್ತವೆ. ಔಷಧಿಗಳನ್ನು ಯಾವಾಗ ತೆಗೆದುಕೊಳ್ಳಬೇಕು? ಕೋರ್ಸ್ ಮುಗಿಯುವುದ ಯಾವಾಗ ಅನ್ನೋದನ್ನೆಲ್ಲ ನೆನಪಿಸಲು ಆ್ಯಪ್ ಒಂದನ್ನು ಕೂಡ ನೀವು ಇನ್‍ಸ್ಟಾಲ್ ಮಾಡಿಕೊಳ್ಳಬಹುದು. ಔಷಧಿ ಸೇವನೆ ಮಾದರಿಯನ್ನು ಸೆರೆ ಹಿಡಿದು ವೈದ್ಯರೊಂದಿಗೆ ಶೇರ್ ಮಾಡಿಕೊಳ್ಳಬಹುದು. ಈ ವೇದಿಕೆ ವಿತರಕರೊಂದಿಗೆ ಸಂಪರ್ಕ ಬೆಳೆಸುವುದರಿಂದ ಔಷಧಾಲಯಗಳಿಗೂ ಅನುಕೂಲವಾಗುತ್ತದೆ. ದಾಸ್ತಾನು ಪೂರೈಕೆ ಬಗ್ಗೆ ಕೂಡ ಔಷಧಾಲಯಗಳಿಗೆ ಸೂಚನೆ ದೊರೆಯುತ್ತದೆ.

ವೈದ್ಯರೊಂದಿಗೆ ಸಮಾಲೋಚನಾ ವ್ಯವಸ್ಥೆಯೊಂದನ್ನು ಕೂಡ `Aguai Solutions 'ಶೀಘ್ರದಲ್ಲೇ ಕಲ್ಪಿಸಲಿದೆ. ವೈದ್ಯರು`Aguai ' ಡಿಜಿಟಲ್ ಪೆನ್ ಬಳಸಿ ಪ್ರಿಸ್ಕ್ರಿಪ್ಷನ್ ಬರೆಯಲು ವ್ಯವಸ್ಥೆ ಮಾಡಲಾಗುತ್ತೆ. ಕಾಗದದ ಮೇಲೆ ಬರೆದಿದ್ದನ್ನು ವೈದ್ಯರ ಸ್ಮಾರ್ಟ್‍ಫೋನ್ ಮೂಲಕ ಸೆರೆಹಿಡಿದು, ರೋಗಿಗಳೊಂದಿಗೆ ಹಂಚಿಕೊಳ್ಳಬಹುದು.

`ಯುವರ್‍ಸ್ಟೋರಿ'ಯ ಮಾಹಿತಿ...

2012ರಲ್ಲಿ 61 ಡಾಲರ್‍ನಷ್ಟಿದ್ದ ಆರೋಗ್ಯ ವಲಯದ ತಲಾ ವೆಚ್ಚ 2015ರ ಅಂತ್ಯದ ವೇಳೆಗೆ 89 ಡಾಲರ್‍ಗೆ ತಲುಪುವ ಸಾಧ್ಯತೆ ಇದೆ. ಭಾರತದಲ್ಲಿ ಮಾರುಕಟ್ಟೆಯ ಗಾತ್ರ 2012-13ರ ವೇಳೆಗೆ 75 ಬಿಲಿಯನ್ ಡಾಲರ್‍ನಷ್ಟಿತ್ತು. ಪ್ರತಿಕ್ಷಣವೂ ಆರೋಗ್ಯ ಕ್ಷೇತ್ರ ವೇಗ ಪಡೆದುಕೊಳ್ಳುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಜನರಿಗೆ ಎದುರಾಗುತ್ತಿರುವ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ.

ಲೇಖಕರು: ಸಿಂಧೂ ಕಶ್ಯಪ್​​
ಅನುವಾದಕರು: ಭಾರತಿ ಭಟ್​​​​

Related Stories